Roopa Gururaj Column: ವಿಕ್ರಮ ಬೇತಾಳ 15: ರಾಜ ಜೀಮೂತವಾಹನ ಮತ್ತು ಶಂಖಚೂಡನ ತ್ಯಾಗ
ಪಕ್ಷಿರಾಜ ಗರುಡನು ಪ್ರತಿದಿನ ಸರ್ಪಗಳನ್ನು ಹಿಂಸಿಸಿ ತಿನ್ನು ವುದನ್ನು ತಪ್ಪಿಸಲು, ನಾಗರಾಜ ವಾಸುಕಿಯು ಗರುಡನೊಂದಿಗೆ ಒಪ್ಪಂದ ಮಾಡಿಕೊಂಡಿದ್ದನು; ಅದರಂತೆ ಪ್ರತಿನಿತ್ಯ ಒಬ್ಬೊಬ್ಬ ನಾಗನು ಗರುಡನಿಗೆ ಆಹಾರವಾಗಿ ಸ್ವತಃ ಸಮುದ್ರದ ಬಂಡೆಯ ಮೇಲೆ ಬಂದು ಮಲಗಬೇಕಿತ್ತು! ಆ ಚರ್ಮಗಳ ರಾಶಿ ಗರುಡನಿಗೆ ಬಲಿಯಾದ ಅಸಂಖ್ಯಾತ ಸರ್ಪಗಳದ್ದಾಗಿತ್ತು. ಅದೇ ಕ್ಷಣದಲ್ಲಿ ತಾಯಿಯೊಬ್ಬಳ ಕರುಳು ಹಿಂಡುವ ಆಕ್ರಂದನ ಕೇಳಿಸಿತು.
-
ಒಂದೊಳ್ಳೆ ಮಾತು
ವಿದ್ಯಾಧರ ಚಕ್ರವರ್ತಿಯ ಪುತ್ರನಾದ ಜೀಮೂತವಾಹನನು ಹುಟ್ಟಿನಿಂದಲೇ ಕರುಣಾಮಯಿ ಹಾಗೂ ನಿಸ್ವಾರ್ಥ ತ್ಯಾಗಿ. ತಂದೆಯ ಇಚ್ಛೆಯಂತೆ ರಾಜ್ಯಭಾರವನ್ನು ಬದಿಗೊತ್ತಿ, ತಂದೆ-ತಾಯಿ ಯರ ಸೇವೆಯನ್ನು ಮಾಡುತ್ತಾ ಮಲಯ ಪರ್ವತದ ತಪ್ಪಲಿನಲ್ಲಿ ಜೀವಿಸುತ್ತಿದ್ದನು. ಒಂದು ದಿನ ಆತ ಸಮುದ್ರ ತೀರದಲ್ಲಿ ಸಂಚರಿಸುತ್ತಿದ್ದಾಗ, ಬೆಟ್ಟದಂತೆ ರಾಶಿ ಬಿದ್ದಿದ್ದ ಚರ್ಮಗಳ ರಾಶಿಯನ್ನು ಕಂಡು ಬೆಚ್ಚಿ ಬೀಳುತ್ತಾನೆ. ವಿಚಾರಿಸಿದಾಗ ಅವನಿಗೆ ತಿಳಿದ ವಿಷಯ ಆಶ್ಚರ್ಯಗೊಳಿಸಿತು.
ಪಕ್ಷಿರಾಜ ಗರುಡನು ಪ್ರತಿದಿನ ಸರ್ಪಗಳನ್ನು ಹಿಂಸಿಸಿ ತಿನ್ನು ವುದನ್ನು ತಪ್ಪಿಸಲು, ನಾಗರಾಜ ವಾಸುಕಿಯು ಗರುಡನೊಂದಿಗೆ ಒಪ್ಪಂದ ಮಾಡಿಕೊಂಡಿದ್ದನು; ಅದರಂತೆ ಪ್ರತಿನಿತ್ಯ ಒಬ್ಬೊಬ್ಬ ನಾಗನು ಗರುಡನಿಗೆ ಆಹಾರವಾಗಿ ಸ್ವತಃ ಸಮುದ್ರದ ಬಂಡೆಯ ಮೇಲೆ ಬಂದು ಮಲಗಬೇಕಿತ್ತು! ಆ ಚರ್ಮಗಳ ರಾಶಿ ಗರುಡನಿಗೆ ಬಲಿಯಾದ ಅಸಂಖ್ಯಾತ ಸರ್ಪಗಳದ್ದಾಗಿತ್ತು. ಅದೇ ಕ್ಷಣದಲ್ಲಿ ತಾಯಿಯೊಬ್ಬಳ ಕರುಳು ಹಿಂಡುವ ಆಕ್ರಂದನ ಕೇಳಿಸಿತು.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 14: ವಿದ್ವತ್ತಿನ ಅಹಂಕಾರ ಮತ್ತು ಲೌಕಿಕ ವಾಸ್ತವದ ಪ್ರಜ್ಞೆ
ಅಲ್ಲಿ ವೃದ್ಧ ನಾಗಮಾತೆಯೊಬ್ಬಳು ತನ್ನ ಏಕೈಕ ಪುತ್ರ ಶಂಖ ಚೂಡನನ್ನು ತಬ್ಬಿಕೊಂಡು ಗೋಳಾಡು ತ್ತಿದ್ದಳು. ಅಂದು ಗರುಡನಿಗೆ ಆಹಾರವಾಗಿ ಬಲಿಯಾಗುವ ಸರದಿ ಶಂಖಚೂಡ ನದ್ದಾಗಿತ್ತು. ಆ ತಾಯಿಯ ಕಣ್ಣೀರು ಮತ್ತು ಯುವ ನಾಗನ ಅಸಹಾಯಕತೆ ಯನ್ನು ಕಂಡ ಜೀಮೂತವಾಹನನ ಹೃದಯ ಕರಗಿ ನೀರಾಯಿತು. ಆತ ತಕ್ಷಣವೇ, ಅಮ್ಮಾ, ಅಳಬೇಡ. ನಿನ್ನ ಮಗನ ಬದಲು ನಾನೇ ಇಂದು ಗರುಡನ ಬಂಡೆಯ ಮೇಲೆ ಮಲಗಿ ನನ್ನ ದೇಹವನ್ನು ಅರ್ಪಿಸು ತ್ತೇನೆ; ನಿನ್ನ ಮಗನನ್ನು ಉಳಿಸಿಕೋ ಎಂದು ಅಭಯ ನೀಡಿದನು. ಆದರೆ ಶಂಖಚೂಡನು, ಸ್ವಾಮಿ, ನೀವು ಪರರ ಪ್ರಾಣಕ್ಕಾಗಿ ನಿಮ್ಮ ಪ್ರಾಣವನ್ನೇ ಕೊಡಲು ಹೊರಟಿರುವ ಮಹಾಪುರುಷರು.
ನನ್ನಂತಹ ಒಬ್ಬ ಸಾಮಾನ್ಯ ಸರ್ಪಕ್ಕಾಗಿ ನಿಮ್ಮಂತಹ ಶ್ರೇಷ್ಠ ಜೀವ ಬಲಿಯಾಗುವುದು ಅಧರ್ಮ. ನನ್ನ ಸರದಿಯನ್ನು ನಾನೇ ನಿಭಾಯಿಸುತ್ತೇನೆ ಎಂದು ನಿರಾಕರಿಸಿ, ಸಮೀಪದ ಗೋಕರ್ಣ ಮಂದಿರಕ್ಕೆ ಶಿವನ ಅಂತಿಮ ದರ್ಶನ ಪಡೆಯಲು ತೆರಳಿದನು. ಶಂಖಚೂಡನು ಮರಳಿ ಬರುವಷ್ಟ ರಲ್ಲಿ, ಜೀಮೂತವಾಹನನು ಕಾಲಹರಣ ಮಾಡದೆ ನಾಗನ ಸಂಕೇತವಾದ ಕೆಂಪು ರೇಷ್ಮೆ ವಸ್ತ್ರವನ್ನು ಹೊದ್ದು, ರಕ್ತಸಿಕ್ತ ಬಲಿಶಿಲೆಯ ಮೇಲೆ ಮಲಗಿ ಬಿಟ್ಟನು!
ಆಕಾಶದಿಂದ ಆರ್ಭಟಿಸುತ್ತಾ ಇಳಿದ ಗರುಡನು, ಆತನನ್ನು ತನ್ನ ತೀಕ್ಷ್ಣ ಉಗುರು ಳಿಂದ ಕಚ್ಚಿ ಎತ್ತಿಕೊಂಡು ಪರ್ವತ ಶಿಖರಕ್ಕೆ ಕೊಂಡೊಯ್ದು, ಮಾಂಸವನ್ನು ಕಿತ್ತು ತಿನ್ನಲಾರಂಭಿಸಿದನು. ಎಷ್ಟೇ ರಕ್ತ ಸುರಿಯುತ್ತಿದ್ದರೂ, ಜೀಮೂತವಾಹನನ ಮುಖದಲ್ಲಿ ಕಿಂಚಿತ್ತೂ ನೋವಿನ ಛಾಯೆ ಯಿರಲಿಲ್ಲ; ಬದಲಾಗಿ ಪರರ ಪ್ರಾಣ ಉಳಿಸಿದ ಮಂದಹಾಸವಿತ್ತು! ಇದನ್ನು ಕಂಡು ಗರುಡನೇ ಆಶ್ಚರ್ಯಚಕಿತನಾದನು.
ಅಷ್ಟರಲ್ಲಿ ದೇವಸ್ಥಾನದಿಂದ ಓಡೋಡಿ ಬಂದ ಶಂಖಚೂಡನು, ಪಕ್ಷಿರಾಜಾ, ನಿಲ್ಲಿಸು! ನೀನು ತಿನ್ನುತ್ತಿರುವುದು ನಾಗನನ್ನಲ್ಲ; ವಿದ್ಯಾಧರ ರಾಜ ಕುಮಾರನನ್ನು! ನಿನ್ನ ಆಹಾರ ನಾನೇ, ಈ ಪುಣ್ಯಾತ್ಮ ನನ್ನು ಬಿಟ್ಟು ನನ್ನನ್ನು ತಿನ್ನು ಎಂದು ಗರುಡನ ಮುಂದೆ ಎದೆಕೊಟ್ಟು ನಿಂತನು. ಇಬ್ಬರ ಮಹಾತ್ಯಾಗ ವನ್ನು ಕಂಡು ಗರುಡನಿಗೆ ಪಶ್ಚಾತ್ತಾಪ ವಾಗಿ, ಮುಂದೆ ಸರ್ಪಗಳನ್ನು ತಿನ್ನುವುದನ್ನೇ ಶಾಶ್ವತವಾಗಿ ತ್ಯಜಿಸಿದನು.
ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಇನ್ನೊಬ್ಬರಿಗಾಗಿ ಪ್ರಾಣಾರ್ಪಣೆ ಮಾಡಲು ಮುಂದಾದ ಜೀಮೂತವಾಹನ ಮತ್ತು ತನ್ನ ಸರದಿಯ ಸಾವನ್ನು ಸ್ವೀಕರಿಸಲು ತಾನೇ ಎದ್ದು ಬಂದ ಶಂಖಚೂಡ- ಇವರಲ್ಲಿ ಶ್ರೇಷ್ಠ ತ್ಯಾಗಿ ಯಾರು? ವಿಕ್ರಮಾದಿತ್ಯನು ಉತ್ತರಿಸುತ್ತಾನೆ: ಶಂಖ ಚೂಡನ ತ್ಯಾಗವೇ ಎಲ್ಲಕ್ಕಿಂತ ಶ್ರೇಷ್ಠವಾದುದು!
ಜೀಮೂತವಾಹನನು ಜನ್ಮತಃ ಮಹಾ ತಪಸ್ವಿ, ಬೋಧಿಸತ್ವನ ಸದ್ಗುಣಗಳನ್ನು ಮೈಗೂಡಿಸಿ ಕೊಂಡು ಪರಹಿತಕ್ಕಾಗಿ ಸಾಯುವುದನ್ನೇ ಜೀವನದ ಧ್ಯೇಯವಾಗಿಸಿಕೊಂಡಿದ್ದನು. ಆದರೆ ಶಂಖಚೂಡನು ಸಾಧಾರಣ ಸರ್ಪಜಾತಿಯ ಪ್ರಾಣಿ; ಆತನ ಪ್ರಾಣ ಉಳಿದುಹೋಗಿತ್ತು, ತಾನು ಸುಮ್ಮನಿದ್ದರೆ ಸುರಕ್ಷಿತವಾಗಿ ಬದುಕಿಬಿಡಬಹುದಿತ್ತು. ಆದರೂ, ತನಗಾಗಿ ಅಪರಿಚಿತನೊಬ್ಬ ಸಾಯುತ್ತಿದ್ದಾನೆ ಎಂದು ತಿಳಿದಾಗ, ಸಾವು ಕಣ್ಣೆದುರೇ ನಿಂತಿದ್ದರೂ ತಾನೇ ಬಂದು ಗರುಡನ ಬಾಯಿಗೆ ಸಿಲುಕಲು ಸಿದ್ಧನಾದ ಆತನ ಕರ್ತವ್ಯನಿಷ್ಠೆ ಮತ್ತು ಸತ್ಯದ ಬದ್ಧತೆ ಅಸಾಧಾರಣ ವಾದುದು.
ಬದುಕಿನಲ್ಲಿ ಉಪಕಾರ ಮಾಡುವುದು ಎಷ್ಟು ದೊಡ್ಡದೋ, ಇನ್ನೊಬ್ಬರ ತ್ಯಾಗವನ್ನು ದುರು ಪಯೋಗಪಡಿಸಿಕೊಳ್ಳದೆ ತನ್ನ ಪಾಲಿನ ಜವಾಬ್ದಾರಿ ಯನ್ನು ಎದೆ ಕೊಟ್ಟು ಹೊರುವುದು ಅಷ್ಟೇ ದೊಡ್ಡ ಗುಣ. ಹಲವು ಬಾರಿ ನಮ್ಮ ಕಷ್ಟಕ್ಕೆ ಯಾರೋ ನೆರವಾದಾಗ, ಆ ನೆರವನ್ನು ಸ್ವಾರ್ಥಕ್ಕೆ ಬಳಸಿ ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತೇವೆ. ಆದರೆ ನಿಜವಾದ ಪ್ರಾಮಾಣಿಕತೆ ಇರುವುದು ಇನ್ನೊಬ್ಬರ ಹೆಗಲ ಮೇಲೆ ನಮ್ಮ ಹೊರೆಯನ್ನು ಹೊರಿಸದೆ, ನಮ್ಮ ಕರ್ತವ್ಯಕ್ಕೆ ನಾವು ಬದ್ಧರಾಗಿ ನಿಲ್ಲುವುದರಲ್ಲಿ. ಪರೋಪಕಾರದ ಕರುಣೆ ದೈವಿಕವಾದರೆ, ಪರರ ತ್ಯಾಗಕ್ಕೆ ನಮ್ಮ ಜವಾಬ್ದಾರಿಯನ್ನು ನಾವೇ ನಿಭಾಯಿಸುವ ನಿಷ್ಠೆ ಅದಕ್ಕಿಂತಲೂ ಶ್ರೇಷ್ಠವಾದುದು.