ಒಂದೊಳ್ಳೆ ಮಾತು
ವಿದಿಶಾ ನಗರದ ಆಚೆಯ ದಟ್ಟ ಕಾಡಿನಲ್ಲಿ ಅಂಗಾರಕನೆಂಬ ಭೀಕರ ಕಳ್ಳನೊಬ್ಬ ವಾಸವಾಗಿದ್ದನು. ಆತನ ಹೆಸರೆತ್ತಿದರೆ ಸಾಕು, ಹಾದಿಹೋಕರು ಮತ್ತು ವ್ಯಾಪಾರಿಗಳು ನಡುಗುತ್ತಿದ್ದರು. ಕೇವಲ ಹಣ-ಆಭರಣ ಗಳನ್ನು ದೋಚುವುದಷ್ಟೇ ಅಲ್ಲ, ಎದುರುಬಿದ್ದ ಅಮಾಯಕರ ಪ್ರಾಣ ತೆಗೆಯಲೂ ಆತ ಹಿಂಜರಿ ಯುತ್ತಿರಲಿಲ್ಲ. ದರೋಡೆ, ರಕ್ತಪಾತಗಳೇ ಆತನ ದಿನಚರಿಯಾಗಿದ್ದವು.
ಒಂದು ದಿನ ಅದೇ ರಾಜ್ಯದ ರಾಜಕುಮಾರ ಚಂದ್ರಸೇನನು ಬೇಟೆಯಾಡುತ್ತಾ ದಾರಿತಪ್ಪಿ ಆ ಕಾಡಿನ ಒಳಭಾಗಕ್ಕೆ ಬಂದುಬಿಟ್ಟನು. ಆತನ ಮೈಮೇಲಿದ್ದ ಬೆಲೆಬಾಳುವ ವಸಾಭರಣಗಳನ್ನು ಕಂಡ ಅಂಗಾರಕನು ಖಡ್ಗವನ್ನು ಝಳಪಿಸುತ್ತಾ ರಾಜಕುಮಾರನ ಮೇಲೆ ಎರಗಿದನು. ಇಬ್ಬರ ನಡುವೆ ಘೋರ ಕಾದಾಟ ನಡೆಯಿತು.
ಕಳ್ಳನ ಬಲ ಮತ್ತು ಪಟ್ಟುಗಳಿಗೆ ರಾಜಕುಮಾರ ಸೋತು ಕೆಳಗೆ ಬಿದ್ದನು. ಅಂಗಾರಕನು ಆತನ ಎದೆಯ ಮೇಲೆ ಕಾಲಿಟ್ಟು ಕತ್ತಿ ಎತ್ತಿದಾಗ, ರಾಜಕುಮಾರನ ಕಣ್ಣುಗಳಲ್ಲಿ ಭಯದ ಲವಲೇಶವೂ ಇರಲಿಲ್ಲ; ಬದಲಾಗಿ ಕರುಣೆ ಮತ್ತು ಪ್ರಶಾಂತತೆಯಿತ್ತು. ಸಾವಿನ ದವಡೆಯಲ್ಲೂ ರಾಜಕುಮಾರ ನಗುತ್ತಾ, ನನ್ನ ದೇಹವನ್ನು ಕೊಂದು ಈ ಒಡವೆಗಳನ್ನು ತೆಗೆದುಕೋ. ಆದರೆ ನಿನ್ನ ಆತ್ಮವನ್ನು ನೀನು ಎಷ್ಟು ಕಾಲ ಹೀಗೆ ಕೊಲ್ಲುತ್ತಿರುತ್ತೀಯಾ? ಈ ಪಾಪದ ಹೊರೆ ಹೊತ್ತು ನೀನು ಗಳಿಸಿದ್ದೇನು? ಎಂದು ಶಾಂತವಾಗಿ ಕೇಳಿದನು.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 17: ವಿದ್ಯೆಯ ಅಹಂಕಾರ ಮತ್ತು ವಿನಾಶದ ಹಾದಿ
ಆ ಒಂದು ಮಾತು, ಆ ಪ್ರಶಾಂತ ಮುಖ ಮತ್ತು ನಿರ್ಭಯ ನಗು ಅಂಗಾರಕನ ಎದೆಗೆ ಸಿಡಿಲಿನಂತೆ ಬಡಿಯಿತು. ಆತನ ಕೈಯಲ್ಲಿದ್ದ ಕತ್ತಿ ನಡುಗಿ ಕೆಳಗೆ ಬಿತ್ತು. ಇಷ್ಟು ದಿನ ನೂರಾರು ಜನರನ್ನು ಕೊಂದಿದ್ದೇನೆ; ಅವರೆಲ್ಲ ಪ್ರಾಣಭಿಕ್ಷೆ ಬೇಡಿದ್ದರು, ಶಪಿಸಿದ್ದರು. ಆದರೆ ಈ ಯುವಕ ನನ್ನ ಆತ್ಮದ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಕಳ್ಳನಿಗೆ ಆಘಾತವಾಯಿತು. ತಾನು ಗಳಿಸಿದ ಅಪಾರ ಸಂಪತ್ತು, ಹಿಂಸೆಗಳಿಂದ ತನಗೆ ಲಭಿಸಿದ್ದು ಕೇವಲ ಭಯ, ಅಶಾಂತಿ ಮತ್ತು ಜನರ ಶಾಪ ಮಾತ್ರ ಎಂಬ ಕಹಿ ಸತ್ಯ ಆತನಿಗೆ ಮೊದಲ ಬಾರಿಗೆ ಹೊಳೆಯಿತು.
ಕಳ್ಳನ ಕಣ್ಣುಗಳಿಂದ ಪಶ್ಚಾತ್ತಾಪದ ಕಣ್ಣೀರು ಧಾರಾಕಾರವಾಗಿ ಸುರಿಯಿತು. ತಕ್ಷಣವೇ ರಾಜಕುಮಾರನ ಕಾಲಿಗೆ ಬಿದ್ದ ಅಂಗಾರಕನು, ಪ್ರಭು, ನನ್ನ ಕಣ್ಣು ತೆರೆಸಿದೆ. ಇಂದಿನಿಂದ ಈ ರಕ್ತದ ಹಾದಿಗೆ ತಿಲಾಂಜಲಿ ಇಡುತ್ತೇನೆ. ನನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ನನ್ನ ದೇಹವನ್ನು ಸತ್ಕಾರ್ಯಕ್ಕೆ ಮುಡಿಪಾಗಿಡುತ್ತೇನೆ ಎಂದು ಶಪಥ ಮಾಡಿದನು. ತನ್ನಲ್ಲಿದ್ದ ಕದ್ದ ಮಾಲನ್ನೆಲ್ಲ ಬಡಬಗ್ಗರಿಗೆ ಹಂಚಿ, ರಾಜಕುಮಾರನಿಗೆ ಬೆಂಗಾವಲಾಗಿ ನಿಂತು, ನಂತರ ಅರಣ್ಯದ ಆಶ್ರಮ ನಿರ್ಮಿಸಿಕೊಂಡು ದಾರಿತಪ್ಪಿದವರಿಗೆ, ರೋಗಿಗಳಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ನಿಸ್ವಾರ್ಥ ಸೇವೆ ಮಾಡುತ್ತಾ ಸಂತರಂತೆ ಬದುಕತೊಡಗಿದನು.
ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆ ಕಳ್ಳನ ಈ ದಿಢೀರ್ ಬದಲಾವಣೆಗೆ ನಿಜವಾದ ಕಾರಣವೇನು? ರಾಜಕುಮಾರನ ಉಪದೇಶವೋ? ಅಥವಾ ಕಳ್ಳನ ಸ್ವಂತ ಅಂತರಂಗದ ಜಾಗೃತಿಯೋ? ವಿಕ್ರಮಾದಿತ್ಯನು, ರಾಜಕುಮಾರನ ಮಾತು ಕೇವಲ ನೆಪವಷ್ಟೇ. ನಿಜವಾದ ಕಾರಣ ಕಳ್ಳನ ಅಂತರಂಗದಲ್ಲಿದ್ದ ಸುಪ್ತ ಸದ್ಗುಣದ ಜಾಗೃತಿ!
ಎಷ್ಟೇ ಕೊಳೆಯಿದ್ದರೂ ಚಿನ್ನದ ಹೊಳಪು ಮಾಸುವುದಿಲ್ಲ. ಅದೇ ರೀತಿ, ಕಳ್ಳನ ಹೊರಮೈ ಕ್ರೂರವಾಗಿದ್ದರೂ, ಆತನ ಒಳಗೊಂದು ಆತ್ಮಸಾಕ್ಷಿಯ ಕಿಡಿ ಜೀವಂತವಾಗಿತ್ತು. ಸಕಾಲದಲ್ಲಿ ಬಂದ ಒಂದು ಬೆಳಕಿನ ಕಿರಣ ಆತನನ್ನು ಎಚ್ಚರಿಸಿತು. ತನ್ನ ತಪ್ಪನ್ನು ತಾನೇ ಗುರುತಿಸಿ, ಪಶ್ಚಾತ್ತಾಪಪಟ್ಟು ಬದಲಾಗುವ ಆತನ ಆಂತರಿಕ ಸಂಕಲ್ಪವೇ ಆತನ ನಿಜವಾದ ಶ್ರೇಷ್ಠತೆ ಎಂದನು.
ಯಾರೂ ಎಂದೆಂದಿಗೂ ಬದಲಾಗಲಾರದಷ್ಟು ಕೆಟ್ಟವರಾಗಿರುವುದಿಲ್ಲ. ನಿನ್ನೆ ನಾವು ಎಷ್ಟೇ ತಪ್ಪುಗಳನ್ನು ಮಾಡಿರಬಹುದು. ಆದರೆ ಇವತ್ತು ಆ ತಪ್ಪುಗಳ ಅರಿವಾಗಿ ಪಶ್ಚಾತ್ತಾಪಪಟ್ಟರೆ, ಬದುಕನ್ನು ಹೊಸದಾಗಿ ರೂಪಿಸಿಕೊಳ್ಳುವ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಇನ್ನೊಬ್ಬರನ್ನು ದೂಷಿಸಿ ದೂರವಿಡುವ ಬದಲು, ಅವರೊಳಗಿನ ಒಳ್ಳೆಯತನವನ್ನು ಬಡಿದೆಬ್ಬಿಸುವ ಪ್ರೀತಿಯ ಮಾತುಗಳು ಅದ್ಭುತ ಪವಾಡಗಳನ್ನು ಮಾಡಬಲ್ಲವು.
ನಮ್ಮ ಸ್ನೇಹಿತರು, ಮಕ್ಕಳು ಕುಟುಂಬದವರು ಯಾರೇ ಆಗಿರಬಹುದು ಅವರಿಂದ ತಪ್ಪಾಗಿದೆ ಎಂದರೆ ಅದನ್ನು ತಿದ್ದುವ ಸರಿಪಡಿಸಿಕೊಳ್ಳುವ ಪ್ರಯತ್ನ ಮೊದಲು ಮಾಡೋಣ. ಅನೇಕ ಬಾರಿ ಅಲ್ಲಿ ಒಂದು ಸಂವಹನದ ಕೊರತೆ ಇರುತ್ತದೆ. ಒಳಿತು ಮಾತನಾಡಿದಾಗ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ.