ಒಂದೊಳ್ಳೆ ಮಾತು
‘ಕಥಾಸರಿತ್ಸಾಗರ’ದ ಬೇತಾಳ ಪಂಚ ವಿಂಶತಿಯ ಅಂತಿಮ ಪ್ರಸಂಗವು ನಿಸ್ವಾರ್ಥ ಸಾಧನೆ, ಸಜ್ಜನರ ರಕ್ಷಣೆ ಮತ್ತು ಕಪಟತನದ ಸರ್ವನಾಶವನ್ನು ಅತ್ಯಂತ ಭವ್ಯವಾಗಿ ಸಾರುತ್ತದೆ. ಹಿಂದಿನ ಎಲ್ಲಾ ಕಥೆಗಳಿಗೂ ನ್ಯಾಯನಿಷ್ಠ ಉತ್ತರವನ್ನು ನೀಡಿ ಬೇತಾಳನನ್ನು ಮರಳಿ ಹೆಗಲಿಗೆ ಹೊತ್ತು ತರುತ್ತಿದ್ದ ರಾಜ ವಿಕ್ರಮಾದಿತ್ಯನು, ಸಂಬಂಧಗಳ ಗೋಜಲಿನ ಕೊನೆಯ ಕಥೆಗೆ ತರ್ಕವನ್ನು ಮೀರಿ ಮೌನ ತಾಳಿದಾಗ ಬೇತಾಳನ ಶರತ್ತು ಪೂರ್ಣಗೊಂಡಿತು.
ರಾಜನ ಅದ್ಭುತ ಧೈರ್ಯ, ದಣಿವರಿಯದ ಸಂಕಲ್ಪ ಮತ್ತು ಅಪೂರ್ವ ವಿವೇಕಕ್ಕೆ ತಲೆಬಾಗಿದ ಬೇತಾಳನು ಪರಮ ಪ್ರಸನ್ನನಾದನು. ಆ ಶವದೊಳಗಿದ್ದ ಬೇತಾಳನು ವಿಕ್ರಮನಿಗೆ ಪ್ರತ್ಯಕ್ಷನಾಗಿ, ಹೇ ರಾಜಶ್ರೇಷ್ಠ, ನಿನ್ನ ಸತ್ಯನಿಷ್ಠೆಗೆ ನಾನು ಮುಕ್ತನಾದೆ. ಆದರೆ ನಿನ್ನನ್ನು ಸ್ಮಶಾನಕ್ಕೆ ಕಳುಹಿಸಿದ ಆ ಶಾಂತಶೀಲ ಕಪಟ ಸನ್ಯಾಸಿ ಯ ಅಸಲಿ ಸಂಚು ನಿನಗಿನ್ನೂ ಪೂರ್ಣ ತಿಳಿದಿಲ್ಲ ಎಂದು ಎಚ್ಚರಿಸಿದನು. ಆತ ವಿದ್ಯಾಧರ ಚಕ್ರವರ್ತಿಯಾಗಲು ಮಹಾ ಸಿದ್ಧಿಗಾಗಿ ಕ್ಷುದ್ರಯಾಗ ಹೂಡಿದ್ದಾನೆ.
ನನ್ನ ಶವವನ್ನು ತಂದುಕೊಟ್ಟ ನಂತರ, ಆತ ನಿನ್ನನ್ನೇ ಬಲಿಪೀಠದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಲು ಹೇಳುತ್ತಾನೆ. ನೀನು ನೆಲಕ್ಕೆ ಬಾಗಿದ ಕ್ಷಣವೇ ಕತ್ತಿಯಿಂದ ನಿನ್ನ ಶಿರಚ್ಛೇದ ಮಾಡಿ ಬಲಿಕೊಡಲು ಸಂಚು ರೂಪಿಸಿದ್ದಾನೆ. ಆದ್ದರಿಂದ ಆತ ನಮಸ್ಕರಿಸಲು ಹೇಳಿದಾಗ, ‘ನಾನು ಚಕ್ರವರ್ತಿ, ಅರಮನೆಯಲ್ಲಿ ಎಲ್ಲರೂ ನನಗೆ ನಮಸ್ಕರಿಸಿದ್ದಾರೆಯೇ ಹೊರತು ನಾನೆಂದೂ ಯಾರಿಗೂ ಸಾಷ್ಟಾಂಗ ನಮಸ್ಕರಿಸಿದವನಲ್ಲ; ಅದನ್ನು ಹೇಗೆ ಮಾಡಬೇಕೆಂದು ನೀನೇ ಮೊದಲು ಮಾಡಿ ತೋರಿಸು’ ಎಂದು ಹೇಳು.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 22: ಸಂಬಂಧಗಳ ಗೋಜಲು ಮತ್ತು ವಿವೇಕದ ಮೌನ
ಆತ ನಮಸ್ಕರಿಸಲು ನೆಲಕ್ಕೆ ಬಾಗಿದ ಕ್ಷಣವೇ ಆತನ ಕತ್ತಿಯಿಂದಲೇ ಆತನ ರುಂಡವನ್ನು ಕತ್ತರಿಸಿ ಬಿಡು. ಆಗ ಆ ಸಿದ್ಧಿ ನಿನಗೇ ಒಲಿಯುತ್ತದೆ ಎಂದು ಉಪಾಯವನ್ನು ಬೋಧಿಸಿ, ಶಾಪಮುಕ್ತನಾದ ಬೇತಾಳನು ಅಂತರ್ಧಾನನಾದನು. ವಿಕ್ರಮಾದಿತ್ಯನು ಶವದೊಂದಿಗೆ ಶಾಂತಶೀಲ ನಿದ್ದ ಕರಾಳ ಸ್ಮಶಾನದ ಯಾಗಶಾಲೆಯನ್ನು ತಲುಪಿದನು.
ಮಹಾ ಪರಾಕ್ರಮಿಯಾದ ರಾಜನಿಂದ ಶವವನ್ನು ಪಡೆದ ಕಪಟ ತಪಸ್ವಿಯ ಕಣ್ಣುಗಳಲ್ಲಿ ಕ್ರೂರ ಆನಂದ ಮಿಂಚಿತು. ಆತ ಕಾಳಿಯ ಪೂಜೆ ಮುಗಿಸಿ, ರಾಜಾ, ದೇವಿಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ ಪ್ರಸಾದ ಸ್ವೀಕರಿಸು ಎಂದು ಆಜ್ಞಾಪಿಸಿದನು. ಆಗ ವಿಕ್ರಮನು ಅತ್ಯಂತ ಶಾಂತವಾಗಿ, ಗುರುಗಳೇ, ನನಗೆ ಸಾಷ್ಟಾಂಗ ನಮಸ್ಕಾರ ಮಾಡುವ ವಿಧಿ ತಿಳಿದಿಲ್ಲ; ನೀವೇ ಮೊದಲು ನಮಸ್ಕರಿಸಿ ತೋರಿಸಿದರೆ, ನಿಮ್ಮ ಹೆಜ್ಜೆಯನ್ನೇ ನಾನು ಅನುಸರಿಸುತ್ತೇನೆ ಎಂದನು.
ಅಹಂಕಾರ ಮತ್ತು ಸಿದ್ಧಿಯ ಅಮಲಿನಲ್ಲಿದ್ದ ಆ ಕಪಟ ತಪಸ್ವಿಯು ರಾಜನ ಮಾತನ್ನು ನಂಬಿ, ತಾನೇ ನೆಲದ ಮೇಲೆ ಸಾಷ್ಟಾಂಗವಾಗಿ ಬಾಗಿದನು. ಅದೇ ಕ್ಷಣದಲ್ಲಿ ವಿಕ್ರಮಾದಿತ್ಯನು ತನ್ನ ಮಿಂಚಿನ ಖಡ್ಗ ವನ್ನು ಝಳಪಿಸಿ, ಆ ಕಪಟಿಯ ರುಂಡವನ್ನು ಒಂದೇ ಏಟಿಗೆ ಕತ್ತರಿಸಿ ಯಾಗದ ಅಗ್ನಿಗೆ ಆಹುತಿ ನೀಡಿದನು! ಕ್ಷಣಾರ್ಧದಲ್ಲಿ ಆಕಾಶದಿಂದ ದೇವತೆಗಳು ಪುಷ್ಪವೃಷ್ಟಿ ಕರೆದರು. ಪ್ರತ್ಯಕ್ಷಳಾದ ಮಹಾಕಾಳಿಯು, ವಿಕ್ರಮನೇ, ಜಗತ್ತಿಗೆ ಕಂಟಕವಾಗಿದ್ದ ದುಷ್ಟನನ್ನು ಸಂಹರಿಸಿದ ನಿನಗೆ ವಿದ್ಯಾಧರ ಲೋಕದ ಸಾರ್ವಭೌಮತ್ವ ಲಭಿಸಲಿ ಎಂದು ವರವಿತ್ತಳು.
ವಿಕ್ರಮ-ಬೇತಾಳ ಸರಣಿಯ ಈ ಮಹಾ ಸಮಾಪ್ತಿ ಇಂದಿನ ನಮ್ಮ ನಿತ್ಯಜೀವನಕ್ಕೆ ಒಂದೊಳ್ಳೆ ಪಾಠವನ್ನು ಕಲಿಸುತ್ತದೆ. ಬದುಕಿನಲ್ಲಿ ನಾವೆಷ್ಟೇ ಸಜ್ಜನರಾಗಿದ್ದರೂ, ಮುಗ್ಧತೆಯ ಹೆಸರಿನಲ್ಲಿ ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು. ನಮ್ಮ ಸುತ್ತಲಿರುವವರಲ್ಲಿ ಅನೇಕರು ನಮ್ಮ ಈ ದೌರ್ಬಲ್ಯ ವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾರೆ.
ಸದ್ಗುಣದ ಜೊತೆಗೆ ಸಮಯಪ್ರಜ್ಞೆ ಮತ್ತು ಕೆಟ್ಟವರ ಸಂಚನ್ನು ಮುರಿಯುವ ಜಾಣ್ಮೆ ಕೂಡ ನಮ್ಮಲ್ಲಿರಬೇಕು. ಮುಗ್ಧತೆ ಅಥವಾ ಅತಿಯಾದ ಒಳ್ಳೆತನ ನಮ್ಮ ಶಕ್ತಿಯಲ್ಲ. ಒಳ್ಳೆಯತನದ ಜೊತೆಗೆ ಇರುವ ಜೀವನ ಕೌಶಲ್ಯ ಮತ್ತು ಯುಕ್ತಿ ಮಾತ್ರ ನಮಗೆ ಶಕ್ತಿಯಾಗಬಲ್ಲದು. ಎಷ್ಟೇ ಕಠಿಣ ಸವಾಲು ಗಳು ಎದುರಾದರೂ ಛಲಬಿಡದೆ ನಾವು ನಂಬಿದ ದಾರಿಯಲ್ಲಿ ಮುನ್ನಡೆದರೆ, ನಮಗೆ ಸಂಕಷ್ಟ ತಂದೊಡ್ಡಿದ ಸನ್ನಿವೇಶಗಳೇ ಕೊನೆಗೆ ನಮ್ಮ ಯಶಸ್ಸಿನ ದಾರಿಗೆ ಮೆಟ್ಟಿಲಾಗುತ್ತವೆ.
ಅಧರ್ಮ ಎಷ್ಟೇ ಬಲಿಷ್ಠವಾಗಿ ಕಂಡರೂ, ಅಂತಿಮವಾಗಿ ಗೆಲ್ಲುವುದು ಸತ್ಯ ಮತ್ತು ಆತ್ಮಸಾಕ್ಷಿ ಮಾತ್ರ. ಆದ್ದರಿಂದಲೇ ಒಳ್ಳೆಯತನದ ಜೊತೆ ಜೊತೆಗೆ ಬದುಕುವ ಕಲೆಯನ್ನು ರೂಪಿಸಿ ಕೊಳ್ಳೋಣ. ಕೆಟ್ಟತನವನ್ನು ಜಾಣ್ಮೆಯಿಂದ ನಿವಾರಿಸಿ ಆತ್ಮವಿಶ್ವಾಸದಿಂದ ಬದುಕುವ ಕಲೆ ನಮ್ಮದಾಗಲಿ.