ಗಂಟಾಘೋಷ
ಉಡುಪಿ ಜಿಲ್ಲೆ ಕನ್ಯಾಡಿಯ ವಿನಾಯಕ ರಾವ್ ಅವರು ಸ್ವತಃ ಬೆನ್ನುಮೂಳೆ ಮುರಿತದ ದೈಹಿಕ ಸಂಕಷ್ಟಗಳ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಬೇರೆಯವರು ಇಂತಹ ಸಮಸ್ಯೆ ಗಳಿಂದ ತೊದರೆ ಅನುಭವಿಸಬಾರದೆಂದು ತಮ್ಮ ಸೇವಾಧಾಮ ಸಂಸ್ಥೆಯ ಮೂಲಕ ಕೈಲಾದ ಸೇವೆಯನ್ನು ಮಾಡುತ್ತ ಬರುತ್ತಿದ್ದಾರೆ. ವಿನಾಯಕರಾವ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನರ್ವಸತಿ ಕೇಂದ್ರ ಲೋಕಾರ್ಪಣೆ ಯಾಗುತ್ತಿದೆ.
ಭೂಮಿಯ ಮೇಲೆ ಉಳಿದೆಲ್ಲ ಚರಾಚರಗಳಿಗಿಂತ ಮಾನವ ಜೀವಿ ಇವತ್ತಿನ ಅತ್ಯಾಧುನಿಕ ಜೀವನದವರೆಗೆ ಸಾಗಿ ಬರಲು ಪ್ರಮುಖ ಕಾರಣ ಬೆನ್ನುಮೂಳೆ ಎಂದರೆ ನೀವು ನಂಬಲೇಬೇಕು! ಹೌದು, ಕೆಲವು ಅಧ್ಯಯನಗಳ ಪ್ರಕಾರ, ಮಾನವನ ಬೆನ್ನುಮೂಳೆಯ ರಚನೆ ನೆಲಕ್ಕೆ ಲಂಬಕೋನ ಅಥವಾ ನೇರವಾಗಿದ್ದು ಉಳಿದೆಲ್ಲ ಜೀವಿಗಳ ದೇಹರಚನೆಗಿಂತ ಭಿನ್ನವಾಗಿರುವುದೇ ಮಾನವ ಉಳಿದ ಪ್ರಾಣಿಗಳಿಗಿಂತ ವಿಶಿಷ್ಟವಾಗಿ ಬೆಳೆಯುತ್ತ ಬರಲು ಕಾರಣವೆಂತಲೂ ಹೇಳುತ್ತಾರೆ.
ಬಹುತೇಕ ಜೀವಿಗಳ ಬೆನ್ನುಮೂಳೆಯು ಭೂಮಿಗೆ ಸಮನಾಂತರವಾಗಿ ರಚನೆಯಾಗಿದೆ. ಬೆನ್ನು ಮೂಳೆಯ ವಿಷಯ ಬಂದಾಗ, ವಿನಾಯಕ ರಾವ್ ಅವರ ಬದುಕು ಆಶ್ಚರ್ಯ ಮತ್ತು ಪ್ರೇರಣಾ ದಾಯಕವಾದದ್ದು. ತಮಗೆ ಬಂದ ಅಪಾಯವನ್ನು ಮೆಟ್ಟಿ ನಿಂತು, ಬದುಕಿ ತೋರಿಸಿ ಇನ್ನೊಬ್ಬರ ಬದುಕಿಗೆ ಆಧಾರವಾಗುತ್ತಿದ್ದಾರೆ.
ಕಾರ್ಯಕ್ರಮ ನಿಮಿತ್ತ ‘ಸೇವಾಧಾಮ’ ಎಂಬ ಸರಕಾರೇತರ ಸಂಸ್ಥೆಯ ಬೆನ್ನೆಲುಬಾಗಿರುವ ವಿನಾಯಕ ರಾವ್ ಕನ್ಯಾಡಿ ಅವರನ್ನು ಭೇಟಿಯಾಗಬೇಕಾಯಿತು. ನಮ್ಮದು ದಶಕಗಳ ಒಡನಾಟ, ಸರಳ ಸ್ನೇಹಜೀವಿಯಾಗಿರುವ ಇವರನ್ನು ಪರಿಚಯವಾದ ಬಳಿಕ ಯಾರಾದರೂ ಮರೆಯುವುದು ಕಷ್ಟ, ಅಂತಹ ವ್ಯಕ್ತಿತ್ವ. ಆಕಸ್ಮಿಕ ಅಪಘಾತದಿಂದ ತಮ್ಮ ಬೆನ್ನುಮೂಳೆ ಮುರಿದುಕೊಂಡು ಬಹಳ ಪರಿತಪಿಸಿದರು.
ಇದನ್ನೂ ಓದಿ: Gururaj Gantihole Column: ಸಮಾಜದಲ್ಲಿ ಬದಲಾಗುತ್ತಿದೆ ಉಳಿತಾಯದ ಪರಿಭಾಷೆ !
ತಾವು ಅನುಭವಿಸಿದ ಕಷ್ಟ ಮತ್ತೊಬ್ಬರಿಗೆ ಬರಬಾರದು ಎಂಬ ಪರೋಪಕಾರಿ ವಿಚಾರದಿಂದ ತಮ್ಮ ದೈಹಿಕ ವ್ಯತ್ಯಯಗಳ ನಡುವೆಯೂ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇವರ ನೇತೃತ್ವದ ಸೇವಾಧಾಮ ಸಂಸ್ಥೆಯು ತನ್ನ ಏಳು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಬೆನ್ನುಮೂಳೆ ಮುರಿತದ ತೊಂದರೆಗೊಳಗಾದ ಜನರ ಆರೈಕೆ, ಅವರಿಗೆ ಮಾರ್ಗದರ್ಶನ ಇತ್ಯಾದಿ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಬೆನ್ನುಮೂಳೆ ಮುರಿತದಂತಹ ಸಮಸ್ಯೆಗಳು ಹುಟ್ಟಿನಿಂದ ಬರುವುದು ಬಹಳ ಕಡಿಮೆ. ಗೋಡೆ, ಕಟ್ಟಡ, ಬೆಟ್ಟಗುಡ್ಡಗಳಿಂದ ಜಾರಿ ಎತ್ತರದಿಂದ ಬೀಳುವುದು, ಕಾರು, ಬೈಕ್ ಸೇರಿದಂತೆ ಇತರೆ ರಸ್ತೆ ಅಪಘಾತಗಳಿಂದಾಗುವುದು ಮತ್ತು ಸ್ಪೈನ್ ಸೋಂಕು,, ಸ್ಪೈನ್ ಟಿಬಿ, ಟ್ಯೂಮರ್ ತೆಗೆಯುವಾಗ ಸಮಸ್ಯೆಗಳು ಉಂಟಾಗುತ್ತವೆ. ಸ್ವತಃ ಬೆನ್ನುಮೂಳೆ ಮುರಿತದಿಂದ ತೊಂದರೆ ಅನುಭವಿಸಿದ ವಿನಾಯಕರಾವ್ ಕನ್ಯಾಡಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ನೋವನ್ನು ಅವರ ಮಾತಿನ ಕೇಳೋಣ...
30 ವರ್ಷಗಳ ಹಿಂದೆ ಡಿಪ್ಲೊಮಾ ಮಾಡಿ, ಕಾಂಟ್ರಾಕ್ಟರ್ ಆಗಿ ಹತ್ತಾರು ಜನಕ್ಕೆ ಕೆಲಸ ಕೊಟ್ಟು ಸಾಮಾಜಿಕ ಸಂಘಟನೆಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೆ. ಆಗಿನ ಕಾಲದಲ್ಲಿ, ಲೋ ವೊಲ್ಟೇಜ್, ಸಿಂಗಲ್ ಫೇಸ್ ಸಮಯದ ಮಿತಿಯಿಲ್ಲದೆ ಬೇಕಾಬಿಟ್ಟಿಯಾಗಿ ಬಂದು ಹೋಗುತ್ತಿದ್ದ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ನಾವೆಲ್ಲ ಕೆಲಸ ಮಾಡಬೇಕಿತ್ತು.

ಕೆರೆಯ ಮಣ್ಣು ತೆಗೆಯುವ ಸಂದರ್ಭದಲ್ಲಿ, ಕಂಬದ ಮೇಲೇರಿ ಕೆಲಸ ಮಾಡುವಾಗ, Input & line ಮುಟ್ಟಿ, ಮೇಲಿಂದ ಸೊಂಟದ ಭಾಗ ನೆಲಕ್ಕೂರಿ ಬಿದ್ದು, ಬೆನ್ನುಮೂಳೆ ಮುರಿತಕ್ಕೊಳಗಾಯಿತು. ನಿಜವಾದ ಸಮಸ್ಯೆಗಳು ನಮ್ಮ ಸುತ್ತಮುತ್ತ ಆರಂಭವಾಗುವುದೇ ಹೀಗೆ. ಇಂತಹ ತುರ್ತು ಪರಿಸ್ಥಿತಿ ಯಲ್ಲಿ ನಮ್ಮ ಜನರಿಗೆ, ಇಂದಿನ ಯುವಜನತೆಗೆ ಅಪಘಾತಕ್ಕೀಡಾದವರನ್ನು ಹೇಗೆ ನಿರ್ವಹಣೆ ಮಾಡಬೇಕೆಂಬ ಅರಿವು ಇಲ್ಲದಿರುವುದು ನೋವಿನ ಸಂಗತಿ.
ವಿದ್ಯುತ್ ಶಾಕ್ ತಗುಲಿ ಮೇಲಿಂದ ಬಿದ್ದ ನಂತರ, ನನ್ನನ್ನು ಪ್ರಾಣಾಪಾಯದಿಂದ ಉಳಿಸಲು ಅಲ್ಲಿದ್ದ ವ್ಯಕ್ತಿಯೊಬ್ಬ ಮಗುವಿನಂತೆ ಹೊಟ್ಟೆಯ ಭಾಗವನ್ನು ಭುಜದ ಮೇಲೆ ಹಾಕಿಕೊಂಡು ಪಕ್ಕದ ಮನೆಗೆ ಕರೆದು ತಂದು ಕೂರಿಸಿದ. ಹೆಗಲ ಭಾರಕ್ಕೆ ಬೆನ್ನುಮೂಳೆಯ ಭಾಗ ಹೊರಕ್ಕೆ ಬರಲು ಯತ್ನಿಸಿದಂತೆ ಕಾಣುತ್ತಿತ್ತು. ಆನಂತರ, ಅಂಬಾಸಿಡರ್ ಕಾರಿನಲ್ಲಿ ನನ್ನ ಎರಡು ಕಾಲುಗಳನ್ನು ಹೊರಗೆ ಚಾಚಿ, ಮಂಗಳೂರಿನವರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಯಿತು.
ಅವರಿಗೆ ನನ್ನನ್ನು ಉಳಿಸುವುದೇ ಮೊದಲ ಕರ್ತವ್ಯವೆನಿಸಿತ್ತು. ಇಂತಹ ಸನ್ನಿವೇಶಗಳಲ್ಲಿ ಮುಂಜಾ ಗ್ರತೆ, ಅಪಘಾತಕ್ಕೀಡಾದವರನ್ನು ನಿರ್ವಹಿಸುವ ಜಾಗ್ರತೆಯನ್ನು (Awareness) ನಮ್ಮ ಸಮಾಜ ಅರಿತುಕೊಳ್ಳಬೇಕಿದೆ. ಇಲ್ಲದಿದ್ದರೆ, ವಾಸಿಯಾಗುವ ವಿಚಾರಗಳು ಮತ್ತಷ್ಟು ಜಾಸ್ತಿಯಾಗುವ ಸಂಭವವೇ ಹೆಚ್ಚು. ಇದು ವ್ಯಕ್ತಿಯೊಬ್ಬ ಅಪಘಾತಕ್ಕೀಡಾದಾಗ, ಅನುಭವಿಸುವ ಮೊದಲನೇ ಹಂತ.
ಆಸ್ಪತ್ರೆಗೆ ದಾಖಲಾದ ಬಳಿಕ ಇದರ ಮುಂದಿನ ಹಂತವೇ ಶಸ್ತ್ರಚಿಕಿತ್ಸೆ. ಬೆನ್ನುಮೂಳೆಯು ಸದೃಢ ವಾಗಿರಲು, ಸ್ಕ್ರೂ, ಪ್ಲೇಟ್, ರಾಡುಗಳಂತಹ ಉಪಕರಣ ಬಳಸಿ ಸ್ಟೆಬಿಲೈಜೇಷನ್ ಹಂತದ ಚಿಕಿತ್ಸೆ ಮಾಡಿ ಮನೆಗೆ ಕಳಿಸುತ್ತಾರೆ. ವ್ಯಕ್ತಿಯು ಬಿದ್ದು, ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡು ಬಂದ ಮೇಲೆ ಈ ಚಿಕಿತ್ಸೆ ಆಗುವವರೆಗೆ ನಡೆಯುವ ಪ್ರಕ್ರಿಯೆಯನ್ನು ಪ್ರಾಥಮಿಕ ಹಂತ ಎನ್ನಬಹುದು.
ಮನೆಗೆ ಬಂದನಂತರ, Secondary Complications ಆರಂಭವಾಗುತ್ತವೆ. ಪಿಜಿಯೋತೆರಪಿ ಮಾಡು ವುದು ಹೇಗೆ ಎಂದೆಲ್ಲ ಮಾಹಿತಿ ಕೊಟ್ಟು ಕಳುಹಿಸಿರುತ್ತಾರೆ. ಮನೆಯಲ್ಲಿ ಹೆಚ್ಚಿಗೆ ತಿಳಿದವರು ಇರುವುದಿಲ್ಲ. ಸರಿಯಾಗಿ ತೆರಪಿ ನಡೆಯದೆ ಕಾಲುಗಳು ಸ್ಟಿ- ಆಗುತ್ತವೆ. ಕುಳಿತ ಜಾಗದ ಕುಳಿತು, ಒತ್ತಡಗಳುಂಟಾಗಿ ಪ್ರೆಷರ್ ಇಂಜುರಿಗಳು ಉಂಟಾಗುತ್ತವೆ.
ದೈಹಿಕ ಚಟುವಟಿಕೆ ಇತ್ಯಾದಿಗಳನ್ನು ಮಾಡಲು ಆಚೀಚೆ ಹೋಗಲು ಅಸಾಧ್ಯವಾಗುತ್ತದೆ. ಕುಳಿತ ಟಿವಿ, ಮೊಬೈಲ್ ಮೇಲೆ ಅವಲಂಬಿತರಾಗಿ ದೀರ್ಘಕಾಲದ ಮಾನಸಿಕ ಖಿನ್ನತೆಯೂ ಆರಂಭ ಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಮನೆ ಸದಸ್ಯರು ಆತನಿಗೆ ಕಷ್ಟವಾಗದಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಲೇ ಬೇಕಾದ ಆಹಾರೋಪಚಾರಗಳನ್ನು ಮಾಡುವುದರಿಂದ ದೇಹದ ಬೊಜ್ಜು ( Obesity ) ಬರಲು ಕಾರಣವಾಗುತ್ತದೆ.
ಇದರಿಂದ ಬೆಡ್ ಸೋರ್ಸ್ ಹೆಚ್ಚುತ್ತ, ಚರ್ಮದ ಗಾಯಗಳಾಗಲು ಶುರುವಾಗುತ್ತವೆ. ಉದಾಹರಣೆಗೆ ೩ ಗಂಟೆಗೊಮ್ಮೆ ಟ್ಯೂಬ್ ಹಾಕಿ ಮೂತ್ರ ತೆಗೆಯಬೇಕು ಇಲ್ಲವೇ ಬ್ಲಾಡರ್‌ಗೆ ಜೋಡಿಸಿದ ಕೆಥೆಡ್ರಲ್ ಮತ್ತು ಯೂರಿನ್ ಬ್ಯಾಗ್ ಗಮನಿಸುತ್ತ ಆಗಾಗ ಅದನ್ನು ಖಾಲಿ ಮಾಡುತ್ತಿರಬೇಕು ಮತ್ತು ತಿಂಗಳಿ ಗೊಮ್ಮೆ ಈ ಬ್ಯಾಗ್ ಹೊಸದಾಗಿ ಬದಲಾಯಿಸುತ್ತಿರಬೇಕು.
ಈ ಹಂತದಲ್ಲಿ UTI (Urinary Track Infection) ಆಗುವ ಸಾಧ್ಯತೆಗಳು ಅತಿ ಹೆಚ್ಚು. ಇದಾಗದಂತೆ ನೋಡಿಕೊಳ್ಳುವುದು ಅತಿ ಅವಶ್ಯ. ಇದರಂತೆಯೇ, ಮಲವಿಸರ್ಜನೆ ಸಮಸ್ಯೆ. ಎಷ್ಟು ತಿಂದುಂಡರೂ ಮೋಷನ್ ಹೋಗುವುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಮೂರು ನಾಲ್ಕು ದಿನವಾದರೂ ಮೋಷನ್ ಆಗುವುದಿಲ್ಲ. ಬೇರೆ ಬೇರೆ ವಿಧಾನಗಳಿಂದ ಕೃತಕ ಮಲವಿಸರ್ಜನೆ ಮಾಡಿಸುವುದನ್ನು ತಿಳಿದುಕೊಂಡಿರಬೇಕು.
ಇದನ್ನು ಮನೆಯವರೂ ಅರಿತಿರುವುದಿಲ್ಲ. ಇದಕ್ಕೆಂದೇ ಅಗತ್ಯವಿರುವಂಥಾದ್ದು ಪುನಶ್ಚೇತನ ಕೇಂದ್ರಗಳು. ಭಾರತದಲ್ಲಿ Rights of Persons with Disabilities (RPwD) Act- ಪ್ರಕಾರ, ದೈಹಿಕ ನ್ಯೂನತೆಯಲ್ಲಿ ಆರು ನ್ಯೂನತೆಗಳು, ದೃಷ್ಟಿದೋಷ ಸಂಬಂಧಿಯಲ್ಲಿ ಎರಡು, ಶ್ರವಣದೋಷದಲ್ಲಿ ಎರಡು ನ್ಯೂನ್ಯತೆ ಸೇರಿದಂತೆ ಹತ್ತು ವಿಭಾಗಗಳಲ್ಲಿ ಒಟ್ಟು 21 ಅಂಗವೈಕಲ್ಯಗಳನ್ನು ಗುರುತಿಸ ಲಾಗಿದೆ.
ಸಾಮಾನ್ಯದಿಂದ ಹಿಡಿದು, ಗಂಭೀರ ನ್ಯೂನ್ಯತೆಗಳನ್ನು ಈ ಕಾಯಿದೆಯೊಳಗೆ ಪರಿಗಣಿಸಿದ್ದು ಉತ್ತಮವಾಗಿದ್ದರೂ, ಯಾವುದೋ ಕಾರಣದಿಂದ ಬೆನ್ನುಮೂಳೆ ತೊಂದರೆಗೊಳಗಾಗಿ ಹಾಸಿಗೆ ಹಿಡಿದರೆ, ಆತನನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದ ಇಡೀ ಕುಟುಂಬವೇ ಬೀದಿ ಪಾಲಾಗಿ ಬಿಡುತ್ತದೆ.
ಆದಾಯ ನಿಂತು, ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುವುದಲ್ಲದೇ ಅವರು ಬೆಳೆಯುವ ವಯಸ್ಸಿ ನಲ್ಲಿ ಮನಸ್ಸಿಗಾಗುವ ಪರಿಣಾಮಗಳು ಅವರ ಭವಿಷ್ಯಕ್ಕೆ ಮಾರಕವಾಗಬಲ್ಲವು. ಆ ಕುಟುಂಬದಲ್ಲಿ ಇತರೆ ಸದಸ್ಯರೇನಾದರೂ ದೀರ್ಘಾವಧಿ ಕಾಯಿಲೆ ಹೊಂದಿದ್ದರಂತೂ ಬದುಕು ಕಟ್ಟಿಕೊಳ್ಳುವುದೇ ದುಸ್ತರವಾಗಿಬಿಡುತ್ತದೆ.
ಇಂತಹ ಗಂಭೀರತೆ ಹೊಂದಿರುವ Spinal cord ಸಮಸ್ಯೆಯನ್ನು ತಾತ್ಕಾಲಿಕ ಸಮಸ್ಯೆ ಎಂಬಂತೆ Physical Disability ಯಲ್ಲಿ ಬರುವ Locomotor Disability ವಿಭಾಗಕ್ಕೆ ಸೇರಿಸಿ ಪರಿಗಣಿಸುತ್ತಿರು ವುದು ಅತಿದೊಡ್ಡ ತಾರತಮ್ಯವೆಂದೇ ಹೇಳಬಹುದಾಗಿದೆ. ಸರಕಾರಿ ಮತ್ತು ಖಾಸಗಿ ವಲಯದಲ್ಲೂ ಸ್ಪೈನಲ್ ಕಾರ್ಡ್ ವಿಚಾರವಾಗಿ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಮತ್ತು ಜಾಗೃತಿ ಕೈಗೊಳ್ಳುವಂತಹ ಯಾವುದೇ ಯೋಜನೆಗಳಿಲ್ಲದಿರುವುದು ಅತ್ಯಂತ ಶೋಚನೀಯ.
ಏಳು ಕೋಟಿಯಷ್ಟಿರುವ ಕರ್ನಾಟಕದ ಜನಸಂಖ್ಯೆಯಲ್ಲಿ ಒಟ್ಟು ಬೆನ್ನುಮೂಳೆ ಸಮಸ್ಯೆಗಳಿಂದ ನರಳುತ್ತಿರುವ ರೋಗಿಗಳ ಸಂಖ್ಯೆ ಬಗ್ಗೆ ಸ್ಪಷ್ಟ ಹಾಗೂ ನಿಖರ ಮಾಹಿತಿ ಇಲ್ಲವೇ ಇಲ್ಲ. ಕೆಲವೆಡೆ DHO ಬಳಿ, ಅವರಿವರು ಕೊಟ್ಟ ಮಾಹಿತಿ ಪ್ರಕಾರ ಕೆಲ ಜಿಲ್ಲೆಗಳಲ್ಲಿ ಗುರುತಿಸಿರಬಹುದು ಎಂಬು ದನ್ನು ಬಿಟ್ಟರೆ, ಇಡೀ ರಾಜ್ಯದಲ್ಲಿ ನಿಖರ ಅಂಕಿಸಂಖ್ಯೆಗಳಿಲ್ಲ. ಆದಾಗ್ಯೂ, ರಾಜ್ಯಾದ್ಯಂತ 20 ಸಾವಿರ ಸ್ಪೈನಲ್ಕಾರ್ಡ್ ರೋಗಿಗಳಿದ್ದಾರೆಂದು ಖಾಸಗಿಯಾಗಿ ಅಂದಾಜಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ 1400 ರೂ.ಗಳನ್ನು ತಿಂಗಳಿಗೆ ಅಂಗವಿಕಲರು ಎಂಬ ಲೆಕ್ಕದಲ್ಲಿ ಇವರಿಗೆ ಚಿಕಿತ್ಸಾ ವೆಚ್ಚಕ್ಕೆ ಕೊಡಲಾಗುತ್ತಿದೆ. ಕೇವಲ ಯೂರಿನ್ ಬ್ಯಾಗ್ ಇತರೆ ಕಿಟ್ ಖರೀದಿ ಮಾಡುವುದಕ್ಕೇ ಇವರಿಗೆ ತಿಂಗಳಿಗೆ ಐದಾರು ಸಾವಿರ ರು. ಬೇಕಾಗುತ್ತದೆ. ಆಸ್ಪತ್ರೆಗೆ ಭೇಟಿ ಕೊಡಲು ಪ್ರಯಾಣದ ವೆಚ್ಚಕ್ಕೂ ಸಾಲ ಮಾಡಿ ಹೊಂದಿಸಬೇಕಾಗಿರುವುದು ಬೆನ್ನುಮೂಳೆ ಮುರಿತಕ್ಕೊಳ ಗಾದವರ ಸದ್ಯದ ಪರಿಸ್ಥಿತಿ.
ಬೆನ್ನುಮೂಳೆಗೆ ಒಂದು ಪ್ರತ್ಯೇಕ ಚಿಕಿತ್ಸಾ ವಿಭಾಗ, ಉಪಕರಣಗಳ ಖರೀದಿ, ನಿತ್ಯ ನಿರ್ವಹಣೆಗೆ ಆಗುವ ವೆಚ್ಚದ ಕುರಿತು ಮರುಮೌಲ್ಯ ಇತ್ಯಾದಿ ಆರೋಗ್ಯ ಇಲಾಖೆ ಮೂಲಕ ಸೂಕ್ತವಾಗಿ ಮರು ವಿರ್ಮಶೆಗೆ ಒಳಪಡಬೇಕಿದೆ. ರಾಜ್ಯಾದ್ಯಂತ ಬೆನ್ನುಮೂಳೆ ಕುರಿತಂತೆ ಆರೋಗ್ಯ ಇಲಾಖೆ ಮೂಲಕ ಜಾಗೃತಿ ವಿಚಾರ ಸಂಕಿರಣಗಳು ನಡೆಯಬೇಕು.
ಬೆನ್ನುಮೂಳೆ ಮುರಿತಕ್ಕೊಳಗಾದವರನ್ನು ವಿಶೇಷ ವರ್ಗಕ್ಕೆ ಸೇರಿಸಿ, ಅವರಿಗೆ ಕೊಡುತ್ತಿರುವ ಮಾಸಿಕ ಚಿಕಿತ್ಸಾ ವೆಚ್ಚವನ್ನು ತಜ್ಞ ವೈದ್ಯರಿಂದ ಸದ್ಯದ ಕಾಲಕ್ಕೆ ಹೊಂದುವಂತೆ ನಿಗದಿಪಡಿಸಿ, ಸಕಾಲದಲ್ಲಿ ತಲುಪಿಸುವ ವ್ಯವಸ್ಥೆ ಯಾಗಬೇಕು. ಈ ಸಮಸ್ಯೆಯಾದವರು ಮಕ್ಕಳನ್ನು ಹೊಂದಿ ದ್ದರೆ, ಅವರ ವಿದ್ಯಾಭ್ಯಾಸದ ಖರ್ಚುವೆಚ್ಚವನ್ನು ಸರ್ಕಾರವೇ ಭರಿಸುವಂತಾಗಬೇಕು.
ಉದ್ಯೋಗದಲ್ಲಿದ್ದಾಗ, ಇಂತಹ ಅಪಘಾತಕ್ಕೊಳಗಾದರೆ, ಆಯಾ ಸಂಸ್ಥೆಗಳೇ ಇದರ ಸಂಪೂರ್ಣ ಜವಾಬ್ದಾರಿ ಹೊತ್ತು, ಚಿಕಿತ್ಸೆ, ಔಷಧಿ, ಉಪಚಾರ ಕೇಂದ್ರದ ಖರ್ಚುವೆಚ್ಚವನ್ನು ಭರಿಸಬೇಕು. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾದವರ ಕುಟುಂಬ ಸದಸ್ಯರಿಗೆ ಉದ್ಯೋಗ ಖಾತ್ರಿಯನ್ನು ಒದಗಿಸುವಂತಹ ನಿಯಮಗಳನ್ನು ಜಾರಿಗೆ ತರಬೇಕು.
ಮೇಲಿನ ಸಂಕಷ್ಟಗಳನ್ನು ಹೊಂದಿರುವವರಿಗೆ ಕಿಂಚಿತ್ತು ಆಸರೆಯಾದರೂ ಸಾಕೆಂಬ ಉದ್ದೇಶ ದಿಂದ ಸೇವಾಧಾಮ ಎಂಬ ಸರಕಾರೇತರ ಸಂಸ್ಥೆ ಬೆನ್ನುಮೂಳೆ ಸಂಬಂಧಿತ ರೋಗಿಗಳ ವಿಚಾರ ದಲ್ಲಿ ಒಂದು ಮಹತ್ತರ ಸೇವೆಯನ್ನು ಕೈಗೊಂಡಿದೆ. ಸುಮಾರು 800ಕ್ಕೂ ಹೆಚ್ಚು ರೋಗಿಗಳನ್ನು ಗುರುತಿಸಿದ್ದು, ಇದರಲ್ಲಿ ಶೇ.10ರಷ್ಟು ಮಹಿಳೆಯರೂ ಇದ್ದಾರೆ.
ಸೌದೆ ತರಲು ಬೆಟ್ಟಕ್ಕೆ ಹೋದಾಗ, ಕೆಲಸದಲ್ಲಿದ್ದಾಗ, ಮನೆಯ ಬಾತ್‌ರೂಮಿನಲ್ಲಿ ಕಾಲಜಾರಿ ಬಿದ್ದು ಮುರಿತಕ್ಕೊಳಗಾದವರೂ ಇದರಲ್ಲಿ ಸೇರಿದ್ದಾರೆ. ಸೇವಾಧಾಮದಲ್ಲಿ ಶೇ.20ರಷ್ಟು ಬೆಡ್ ಸೋರ್ಸ್ ಪ್ರೆಷರ್ ನಿಂದ ನರಳುತ್ತಿರುವವರಿದ್ದಾರೆ. ಇವರನ್ನು ಸಹ ವಿಶೇಷ ಹಾಸಿಗೆಗಳ ಸೌಕರ್ಯ ವುಳ್ಳ ಸ್ಥಳದಲ್ಲಿ ಆರೈಕೆಯ ಅಗತ್ಯವಿರುವ ಕಾರಣ, ಬೈಂದೂರು ಕ್ಷೇತ್ರದ ಪಡುವರಿ ಬಳಿ ಒಂದು ಆರೈಕೆ ಕೇಂದ್ರವನ್ನು ತೆರೆಯಲಾಗುತ್ತಿದೆ.
ಈ ಮೂಲಕ ಬಡತನದ ಸಂಕಷ್ಟದಲ್ಲಿರುವ, ಆರೈಕೆ ಮಾಡುವವರಿಲ್ಲದೆ ಬೆನ್ನುಮೂಳೆ ಸಂಬಂಧಿತ ರೋಗಿಗಳಿಗೆ ಕೈಲಾದ ಸಹಾಯವನ್ನು, ಸತತ 21 ವರ್ಷಗಳಿಂದ ವಿವಿಧ ಸೇವೆಗಳ ಮೂಲಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತ ಬರುತ್ತಿರುವ ‘ಸೇವಾಭಾರತಿ’ ಸಂಸ್ಥೆಯ ಅಡಿಯಲ್ಲಿ ಕಳೆದ 7 ವರ್ಷಗಳಿಂದ ಸೇವಾಧಾಮ ಎಂಬ ಕಾರ್ಯಯೋಜನೆಯಲ್ಲಿ ಬೆನ್ನುಮೂಳೆ ಸಂಬಂಧಿತ ಚಿಕಿತ್ಸಾ, ಸೇವಾ ಸೌಕರ್ಯಗಳನ್ನು ಮಾಡುತ್ತ ಬರುತ್ತಿದೆ.
ಇದರೊಂದಿಗೆ APD (Association with People of Disability ) ಸಂಸ್ಥೆಯು ಸೇವಾಧಾಮದೊಂದಿಗೆ ಕೈಜೋಸಿದೆ. ಸಾಮರ್ಥ್ಯದಂತಹ ಇತರೆ ಸೇವಾ ಸಂಸ್ಥೆಗಳೂ ನೊಂದವರ ಸೇವೆಗೆ ಬದ್ಧತೆ ತೋರಿ ಸಲು ಸದಾ ಪ್ರಯತ್ನಶೀಲವಾಗಿ ನಿಂತಿವೆ ಎನ್ನಬಹುದು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸುಮಾರು 200-25೦ರಷ್ಟು ಜನರು ಮಾಸಿಕ ಲೆಕ್ಕದಲ್ಲಿ (ಪ್ರತಿದಿನಕ್ಕೆ 8-10 ಜನರು) ಬೆನ್ನುಮೂಳೆ ಸಂಬಂಧಿತ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇದರ ಅಂದಾಜಿನಲ್ಲಿ ವರ್ಷಕ್ಕೆ 3 ಸಾವಿರದಷ್ಟು ಜನರು ಈ ಸಮಸ್ಯೆಗೀಡಾಗುತ್ತಿದ್ದಾರೆ. ಇದಕ್ಕೆ ಚಿಕಿತ್ಸೆ ಮತ್ತು ಆರೈಕೆ ಕೇಂದ್ರಗಳು ರಾಜ್ಯದಲ್ಲಿ ಇರುವುದು ಬೆರಳೆಣಿಕೆಯಷ್ಟು ಮಾತ್ರ ಎಂಬುದು ಬೇಸರದ ಮಾಹಿತಿ.
ಅಷ್ಟೇನೂ ಅನುದಾನ ಸಿಗದಿದ್ದರೂ, ಸೇವಾ ಮನೋಭಾವನೆಯಿಂದ ನಡೆಸುತ್ತಿರುವಂತಹ ಕೆಲವು ಸರ್ಕಾರೇತರ ( NGO) ಸಂಸ್ಥೆಗಳು ಇಂಥವರ ಶುಶ್ರೂಷೆಯಲ್ಲಿ ತೊಡಗಿವೆ. ಇನ್ನಾದರೂ, ಇಂತಹ ಗಂಭೀರ ಸಮಸ್ಯೆಗಳ ಕುರಿತಂತೆ ಸ್ಥಳೀಯ ಆಡಳಿತ, ಸಂಬಂಧಿತ ಇಲಾಖೆಗಳು ಪ್ರತ್ಯೇಕ ವ್ಯವಸ್ಥೆ ಒದಗಿಸಲು ಕ್ರಮಕೈಗೊಂಡಲ್ಲಿ ನೊಂದವರ ಬಾಳಲ್ಲಿ ಹೊಸಬೆಳಕಾದರೂ ಮೂಡೀತು ಎಂದು ವಿನಾಯಕರಾವ್ ತಮ್ಮ ಸಾರ್ವಜನಿಕ ಕಳಕಳಿ ತೋರ್ಪಡಿಸುತ್ತಾರೆ.
ಕನ್ಯಾಡಿಯ ವಿನಾಯಕರಾವ್ ಅವರು ಸ್ವತಃ ಬೆನ್ನುಮೂಳೆ ಮುರಿತದ ದೈಹಿಕ ಸಂಕಷ್ಟಗಳ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಬೇರೆಯವರು ಇಂತಹ ಸಮಸ್ಯೆಗಳಿಂದ ತೊದರೆ ಅನುಭವಿಸ ಬಾರದೆಂದು ತಮ್ಮ ಸೇವಾಧಾಮ ಸಂಸ್ಥೆಯ ಮೂಲಕ ಕೈಲಾದ ಸೇವೆಯನ್ನು ಮಾಡುತ್ತ ಬರುತ್ತಿದ್ದಾರೆ.
ಹಲವು ದಾನಿಗಳ ಸಹಕಾರದಿಂದ, ಸೇವಾಧಾಮದ ನೇತೃತ್ವದ ಮೂಲಕ, ಬೈಂದೂರು ಕ್ಷೇತ್ರದಲ್ಲಿ ಬೆನ್ನುಮೂಳೆ ಮುರಿತ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವ ಒಟ್ಟು 37 ಜನರ ಮುಂದಿನ ಚಿಕಿತ್ಸೆ ಮತ್ತು ಆರೈಕೆಗೆ ಅನುಕೂಲವಾಗಲೆಂದು ಜೊತೆಗೆ ಭವಿಷ್ಯದಲ್ಲಿ ಇಂತಹ ತೊಂದರೆ ಅನುಭವಿಸುವವರು ಸೂಕ್ತ ಆರೈಕೆಯಿಲ್ಲದೆ ಮತ್ತಷ್ಟು ಗಂಭೀರ ಸಮಸ್ಯೆಗಳನ್ನು ತಂದು ಕೊಳ್ಳಬಾರದೆಂಬ ಉದ್ದೇಶದಿಂದ, ಬೆನ್ನುಮೂಳೆ ಸಮಸ್ಯೆಗಳಿಗೆ ಪರಿಹಾರ ಕೊಡುವ ಸಂಕಲ್ಪಕ್ಕೆ ಕೈಹಾಕಿದ ವಿನಾಯಕರಾವ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೊಳ ಗಾದವರ ಪುನರ್ವಸತಿ ಕೇಂದ್ರವನ್ನು ( Rehabilitation Centre) ಆರಂಭಿಸುವ ಮೂಲಕ ನನ್ನ ಬೈಂದೂರು ಕ್ಷೇತ್ರದ ಜನತೆಯ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸ ಬಯಸುತ್ತೇನೆ.