Vinayaka M Bhatta Column: ಅಧಿಕಾರ, ತ್ಯಾಗ ಮತ್ತು ರಾಜಕೀಯ ಅನಿವಾರ್ಯತೆ
ಡಾ.ಮನಮೋಹನ್ ಸಿಂಗ್ ಅವರು ನನಗಿಂತ ಉತ್ತಮ ಪ್ರಧಾನಿಯಾಗುತ್ತಾರೆ ಅನಿಸಿದ್ದರಿಂದ ಅವರನ್ನು ಆ ಹುದ್ದೆಗೆ ಆಯ್ಕೆಮಾಡಲಾಯಿತು" ಎಂದು ಅವರು ಉತ್ತರಿಸಿದ್ದರು. ಈ ವಿಷಯದಲ್ಲಿ ತಾವು ತ್ಯಾಗ ಮಾಡಿದ್ದಾಗಿ ಸೋನಿಯಾರಿಗೇ ಅನಿಸಿಲ್ಲ; ಆದರೆ ಕರ್ನಾಟಕದ ಕಾಂಗ್ರೆಸ್ಸಿಗರೇಕೋ ಸ್ಪರ್ಧೆಗೆ ಬಿದ್ದವ ರಂತೆ 20 ವರ್ಷಗಳ ಹಿಂದಿನ ಈ ಘಟನೆಯನ್ನು ನೆನಪಿಸಿಕೊಂಡು ಈಗ ಮಾತಾಡುತ್ತಿದ್ದಾರೆ.
ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
2004ರ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎಯನ್ನು ಗೆಲುವಿನತ್ತ ಮುನ್ನಡೆಸಿದರೂ ನೀವೇಕೆ ಪ್ರಧಾನಮಂತ್ರಿಯ ಸ್ಥಾನವನ್ನು ಸ್ವೀಕರಿಸಲಿಲ್ಲ? ಎಂದು ಸಂದರ್ಶನವೊಂದರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಕೇಳಿದಾಗ, “ನನಗೆ ನನ್ನ ಮಿತಿಗಳ ಅರಿವಿತ್ತು.
ಡಾ.ಮನಮೋಹನ್ ಸಿಂಗ್ ಅವರು ನನಗಿಂತ ಉತ್ತಮ ಪ್ರಧಾನಿಯಾಗುತ್ತಾರೆ ಅನಿಸಿದ್ದರಿಂದ ಅವರನ್ನು ಆ ಹುದ್ದೆಗೆ ಆಯ್ಕೆಮಾಡಲಾಯಿತು" ಎಂದು ಅವರು ಉತ್ತರಿಸಿದ್ದರು. ಈ ವಿಷಯದಲ್ಲಿ ತಾವು ತ್ಯಾಗ ಮಾಡಿದ್ದಾಗಿ ಸೋನಿಯಾರಿಗೇ ಅನಿಸಿಲ್ಲ; ಆದರೆ ಕರ್ನಾಟಕದ ಕಾಂಗ್ರೆಸ್ಸಿಗರೇಕೋ ಸ್ಪರ್ಧೆಗೆ ಬಿದ್ದವರಂತೆ 20 ವರ್ಷಗಳ ಹಿಂದಿನ ಈ ಘಟನೆಯನ್ನು ನೆನಪಿಸಿಕೊಂಡು ಈಗ ಮಾತಾ ಡುತ್ತಿದ್ದಾರೆ.
ಸ್ವಾತಂತ್ರ್ಯಪೂರ್ವ ಕಾಲದಲ್ಲಿ ದೇಶವನ್ನು ಏಕಸೂತ್ರದಲ್ಲಿ ಸೇರಿಸಿ, ಸ್ವಾತಂತ್ರ್ಯಕ್ಕಾಗಿ ಜನರನ್ನು ಸಂಘಟಿಸಿ, ಶಾಂತಿ ಮತ್ತು ಸತ್ಯಾಗ್ರಹಗಳ ಮೂಲಕವೇ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸು ವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಮಹಾತ್ಮ ಗಾಂಧಿಯವರು. ಒಂದೊಮ್ಮೆ ಅವರು ಪ್ರಧಾನಿ ಯಾಗಿ ದೇಶವನ್ನು ಮುನ್ನಡೆಸುವ ಮಹತ್ವಾಕಾಂಕ್ಷೆಯನ್ನಾಗಲೀ, ರಾಷ್ಟ್ರಪತಿಯಾಗುವ ಇಂಗಿತ ವನ್ನಾಗಲೀ ವ್ಯಕ್ತಪಡಿಸಿದ್ದಿದ್ದರೆ, ಅಂದು ಅವರಿಗೆದುರಾಗಿ ನಿಲ್ಲುವವರು ಯಾರೂ ಇರಲಿಲ್ಲ. ಆದರೆ, ಅಧಿಕಾರದಿಂದ ದೂರವೇ ಉಳಿಯಲು ನಿರ್ಧರಿಸಿದ್ದ ಗಾಂಽಯವರದ್ದು ತ್ಯಾಗ ಎನ್ನಬಹುದು.
ಮುಂದೆ, ಯಾರು ಪ್ರಧಾನಿಯಾಗಬೇಕು ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆದಾಗ, ದಕ್ಷ ಆಡಳಿತ ನೀಡಬಲ್ಲ ಕ್ಷಮತೆಯಿದ್ದ ಮತ್ತು ಪಕ್ಷದ 80 ಪ್ರತಿಶತ ಸದಸ್ಯರ ಬೆಂಬಲವಿದ್ದರೂ ಗಾಂಧೀಜಿಯ ಮಾತಿಗೆ ಗೌರವ ನೀಡಿ, ನೆಹರು ಅವರು ಪ್ರಥಮ ಪ್ರಧಾನಿಯಾಗಲು ಅವಕಾಶ ಮಾಡಿಕೊಟ್ಟ ಸರ್ದಾರ್ ವಲ್ಲಭಭಾಯಿ ಪಟೇಲರದ್ದು ತ್ಯಾಗ ಎನ್ನಬಹುದು.
ಅದನ್ನು ಬಿಟ್ಟು, ಹಿಂದಿನ ಚುನಾವಣೆಯಲ್ಲಿ ತಂದೆಯು ಮಗನಿಗೂ, ಮುಂದಿನ ಚುನಾವಣೆಯಲ್ಲಿ ಮಗನು ತಂದೆಗೂ ಕ್ಷೇತ್ರ ಬಿಟ್ಟುಕೊಟ್ಟರೆಂದು ‘ಬಹುದೊಡ್ಡ ತ್ಯಾಗಮಾಡಿದರು’ ಎಂದು ವ್ಯಾಖ್ಯಾ ನಿಸಿದರೆ ಅದೆಷ್ಟು ಸರಿ? ಬಿಹಾರದ ಲಾಲು ಪ್ರಸಾದ್ ಯಾದವ್ ಹಗರಣಗಳಲ್ಲಿ ಅಪರಾಧಿಯೆಂದು ಸಾಬೀತಾಗಿದ್ದಕ್ಕೆ ತಮ್ಮ ಮಡದಿ ರಾಬ್ಡಿದೇವಿಯವರಿಗೆ ಅಧಿಕಾರ ವಹಿಸಿ, ಹಿಂದಿ ಸೀಟಿನಲ್ಲಿ ತಾವು ಕೂತು ಆಡಳಿತ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ವಿಡಂಬಿಸಿದಾಗ, ‘ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಉದಾರತೆ ಮೆರೆದರು’ ಎಂದರೆ ಹೇಗೆ? ಗಾಂಧೀಜಿ ಮತ್ತು ಪಟೇಲರ ನಿಜವಾದ ತ್ಯಾಗದ ಕುರಿತು ಯಾವತ್ತೂ ಮಾತಾಡದ ಕೆಲವು ಕಾಂಗ್ರೆಸ್ಸಿಗರಿಗೆ, ಸೋನಿಯಾ ಅವರು ಮನಮೋಹನರನ್ನು ಪ್ರಧಾನಿಯಾಗಿಸಿದಾಗ ಮಾತ್ರ ಅದು ಮಹಾತ್ಯಾಗದಂತೆ ತೋರು ವುದು ಹೇಗೋ ತಿಳಿಯದು!
ಸೋನಿಯಾ ತಾವು ಪ್ರಧಾನಿಯಾಗದೇ, ಹಿರಿಯರೂ ಅರ್ಹರೂ ಆಗಿದ್ದ ಪ್ರಣಬ್ ಮುಖರ್ಜಿಯವ ರನ್ನೂ ಆ ಹುದ್ದೆಗೇರಿಸದೇ, ಮನಮೋಹನರನ್ನು ಆಯ್ಕೆಯಾಗುವಂತೆ ಮಾಡಿದ್ದುದು ತ್ಯಾಗವೂ ಆಗಿರಲಿಲ್ಲ, ಆಕಸ್ಮಿಕ ನಿರ್ಧಾರವೂ ಆಗಿರಲಿಲ್ಲ. ಅದು, ಇಡೀ ಪಕ್ಷ ಮತ್ತು ಗಾಂಧಿ ಕುಟುಂಬ, ಅಳೆದು-ತೂಗಿ ತೆಗೆದುಕೊಂಡು ನಿರ್ಧಾರವೇ ಆಗಿತ್ತು.
ಹಾಗೆ ನಿರ್ಧರಿಸುವಂತೆ ಅಂದಿನ ರಾಜಕೀಯ ಪರಿಸ್ಥಿತಿಯು ಅವರನ್ನು ಪ್ರೇರೇಪಿಸಿತ್ತು, ಅಷ್ಟೇ. ಅನಿ ವಾರ್ಯವಾಗಿ ಮಾಡಬೇಕಾಗಿ ಬಂದ ಈ ಕಾರ್ಯವನ್ನು ‘ತ್ಯಾಗ’ ಎಂದು ಬಣ್ಣಿಸುವುದಾದರೂ ಹೇಗೆ? ಹಾಗಾಗಿಯೇ, ನಂತರದ ದಿನಗಳಲ್ಲೂ ಹಿರಿಯ ಕಾಂಗ್ರೆಸ್ಸಿಗರು ‘2004ರಲ್ಲಿ ಮನಮೋಹನರ ಬದಲಿಗೆ ಪ್ರಣಬ್‌ರನ್ನು ಪ್ರಧಾನಿ ಮಾಡಿದ್ದಿದ್ದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತಿತ್ತು’ ಎನ್ನು ತ್ತಿದ್ದರೇ ವಿನಾ, ‘ಸೋನಿಯಾ ಪ್ರಧಾನಿ ಆಗಬೇಕಿತ್ತು’ ಎಂದವರು ಕಡಿಮೆಯೇ ಎನ್ನಬಹುದು.
ಸೋನಿಯಾ ಅವರು, ರಾಜೀವ್ ಗಾಂಧಿಯವರ ಜತೆಗಿನ ತಮ್ಮ ವೈವಾಹಿಕ ಜೀವನದ ಬಹುಭಾಗ ವನ್ನು ಕುಟುಂಬ ನಿರ್ವಹಣೆಯಲ್ಲೇ ಕಳೆದವರು, ರಾಜೀವರು ಪ್ರಧಾನಿಯಾಗಿದ್ದಾಗ ಮತ್ತು ನಂತರ ಲೋಕಸಭೆಯಲ್ಲಿ ತಾವು ಕೆಲಕಾಲ ವಿಪಕ್ಷ ನಾಯಕಿಯಾಗಿದ್ದಾಗ ಸಾರ್ವಜನಿಕವಾಗಿ ಸೀಮಿತವಾಗಿ ಕಾಣಿಸಿಕೊಂಡವರು.
ದೇಶ-ವಿದೇಶಗಳಲ್ಲಿನ ರಾಜೀವರ ಪ್ರವಾಸಗಳಲ್ಲಿ ಹೆಚ್ಚಾಗಿ ಜತೆಗಿರುತ್ತಿದ್ದ ಸೋನಿಯಾ, ರಾಜೀವರ ಕ್ಷೇತ್ರವಾಗಿದ್ದ ಅಮೇಥಿಯ ಮೇಲ್ವಿಚಾರಣೆಯನ್ನು ನೋಡಿಕೊಂಡಿರುತ್ತಿದ್ದರು. 1991ರಲ್ಲಿ ರಾಜೀ ವರ ದಾರುಣ ಹತ್ಯೆಯಾದ ನಂತರ, ನರಸಿಂಹರಾವ್ ಅವರು ಸರಕಾರ ಮತ್ತು ಪಕ್ಷವನ್ನು ಗಾಂಧಿ ಕುಟುಂಬದ ನೆರಳಿನಿಂದಾಚೆ ತಂದು ಮುನ್ನಡೆಸಿದರು. ಆ ಸಂದರ್ಭದಲ್ಲಿ ಸೋನಿಯಾ, “ರಾಜೀವರ ಹತ್ಯೆಯ ಆಘಾತದಿಂದ ಕುಟುಂಬವಿನ್ನೂ ಚೇತರಿಸಿಕೊಂಡಿಲ್ಲ; ಹಾಗಾಗಿ ನಾನು ಮತ್ತು ನನ್ನ ಕುಟುಂಬದವರು ‘ಅಧಿಕಾರ ರಾಜಕೀಯ’ದಿಂದ ದೂರವೇ ಉಳಿಯಲು ನಿರ್ಧರಿಸಿದ್ದೇವೆ" ಎಂದು ಕೂಡ ಹೇಳಿದ್ದರು.
ಅಂದಿನ ಅವರ ನಿರ್ಧಾರ ಸ್ವಾಭಾವಿಕ ಕೂಡ ಆಗಿತ್ತು. ಅದಾಗಲೇ ಎರಡೆರಡು ಜೀವಗಳನ್ನು ಬಲಿ ಕೊಟ್ಟಿದ್ದ ಕುಟುಂಬವದು; ಹೀಗಾಗಿ ಅಧಿಕಾರದ ಕಾರಣಕ್ಕೆ ತಮ್ಮ ಮಕ್ಕಳನ್ನೂ ಬಲಿಕೊಡಲು ಸೋನಿಯಾ ಸಿದ್ಧರಿರಲಿಲ್ಲ. ಆಗಿನ್ನೂ ಎಲ್‌ಟಿಟಿಇ ಪ್ರಸ್ತುತವಾಗಿತ್ತು ಎಂಬುದನ್ನು ಮರೆಯ ಲಾಗದು. ಇದೇ ಕಾರಣಕ್ಕೆ ಸೋನಿಯಾರು ಪ್ರಧಾನಿ ಯಾಗುವುದನ್ನು ರಾಹುಲ್ ಗಾಂಧಿ ತಡೆದರು ಎಂದು ಮಾಜಿ ಕಾಂಗ್ರೆಸ್ಸಿಗ ನಟವರಸಿಂಗ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ.
ಸೋನಿಯಾರ ಮಾಜಿ ಸಹಾಯಕ ಆರ್ .ಡಿ.ಪ್ರಧಾನ್ ಅವರು ತಮ್ಮ ಪುಸ್ತಕವೊಂದರಲ್ಲಿ, “ಸೋನಿ ಯಾ ಅವರು ಪ್ರಧಾನಿಯಾಗದೇ ಇರುವ ಕುರಿತು 1999ರಲ್ಲೇ ಸ್ಪಷ್ಟ ಅಭಿಪ್ರಾಯ ಹೊಂದಿದ್ದರು. ತಮ್ಮ ವಿದೇಶಿ ಮೂಲವು ಈ ಹುದ್ದೆಗೆ ಪ್ರತಿಬಂಧಕವಾಗಲಿದೆ ಎಂಬುದನ್ನು ಅವರು ಅರಿತಿದ್ದರು. ಹಾಗಾಗಿಯೇ, 1999ರಲ್ಲಿ ವಾಜಪೇಯಿಯವರ ಸರಕಾರದ ಪತನದ ನಂತರ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಸರಕಾರ ರಚಿಸಲು ತಮ್ಮನ್ನು ಆಹ್ವಾನಿಸಿದರೂ ಸೋನಿಯಾ ಅದಕ್ಕೆ ಆಸಕ್ತಿ ತೋರಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ಪಕ್ಷದ ಕಾರ್ಯಕರ್ತರ ಮತ್ತು ಗಾಂಧಿಕುಟುಂಬದ ನಿಷ್ಠರ ಗಾಢ ಒತ್ತಾಯಕ್ಕೆ ಮಣಿದ ಸೋನಿಯಾ, 1998ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್ ಅಧಿನಾಯಕಿಯಾಗಿ ಸಾರ್ವಜನಿಕ ಜೀವನಕ್ಕೆ ಅಡಿಯಿಟ್ಟರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆದು, ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸಿತು. ತನ್ಮೂಲಕ, ತಮ್ಮ ನಾಯಕತ್ವವನ್ನು ಜನ ಮೆಚ್ಚಿದ್ದಾರೆ ಎಂಬುದನ್ನು ಸೋನಿಯಾ ಸಾಬೀತುಪಡಿಸಿದ್ದರು.
ಕಾಂಗ್ರೆಸ್ ಪಕ್ಷವು ಮೈತ್ರಿ ಸರಕಾರದ ನೇತೃತ್ವ ವಹಿಸಲು ಇದು ಅನುವು ಮಾಡಿಕೊಟ್ಟಿತು. ಆಗ ಸೋನಿಯಾರನ್ನು ಕಾಂಗ್ರೆಸ್ ಸಂಸತ್ತಿನಲ್ಲಿ ತನ್ನ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದರಿಂದ, ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆಂಬ ನಿರೀಕ್ಷೆ ಎಲ್ಲರ ಲ್ಲಿತ್ತು. ಆದಾಗ್ಯೂ, ಆ ಸ್ಥಾನವನ್ನು ಸ್ವೀಕರಿಸಲು ಅವರು ನಿರಾಕರಿಸಿ, ಸರಕಾರವನ್ನು ಮುನ್ನಡೆಸಲು ಡಾ.ಮನಮೋಹನ್‌ಸಿಂಗ್‌ರನ್ನು ನಾಮನಿರ್ದೇಶನ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ಆದರೆ, ಯುಪಿಎ ಅಧ್ಯಕ್ಷೆಯ ಹುದ್ದೆಯಲ್ಲದೆ, ಸಂಸತ್ತಿನಲ್ಲಿ ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕಿಯಾಗಿಯೂ ಅವರು ಮುಂದುವರಿದರು. ಡಾ.ಸಿಂಗ್ ಪ್ರಧಾನಿಯಾಗಿದ್ದರೂ, ಸರಕಾರದ ಸರ್ವ ನಿರ್ಧಾರಗಳೂ ಸೋನಿಯಾರ ‘10, ಜನಪಥ್ ನಿವಾಸ್’ನಲ್ಲೇ ಆಗುತ್ತಿದ್ದವು. ಹಾಗಾಗಿಯೇ, ‘ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಸೋನಿಯಾ ಒಬ್ಬರು’ ಎಂದು ಆಗ ಅನೇಕ ಪತ್ರಿಕೆಗಳು ಬಣ್ಣಿಸುತ್ತಿದ್ದವು.
ಹಾಗಾದರೆ, ತಮ್ಮದೇ ನಾಯಕತ್ವದಲ್ಲಿ ಎದುರಿಸಿದ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊಮ್ಮಿದ್ದ ಕಾಂಗ್ರೆಸ್‌ನಲ್ಲಿ ನಿರ್ವಿವಾದವಾಗಿ ನಾಯಕಿಯಾಗಿ ಆಯ್ಕೆಯಾಗಿದ್ದ ಸೋನಿಯಾ, ಪ್ರಧಾನಿ ಸ್ಥಾನವನ್ನು ಒಪ್ಪಿಕೊಳ್ಳದಿರುವುದಕ್ಕೆ ಏನಾದರೂ ಕಾರಣಗಳಿರಬೇಕಲ್ಲ!
ಡಾ.ಸುಬ್ರಮಣಿಯನ್ ಸ್ವಾಮಿಯವರು ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರಿಗೆ ಬರೆದ ಪತ್ರವು, 2004ರಲ್ಲಿ ಕೇಂದ್ರ ಸರಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎನ್ನಲಾಗು ತ್ತದೆ. ಈ ಪತ್ರದ ಆಧಾರದ ಮೇಲೆ ಕಲಾಂ ಅವರು ಸೋನಿಯಾರನ್ನು ಸರಕಾರ ರಚಿಸಲು ಆಹ್ವಾನಿ ಸಿರಲಿಲ್ಲ ಎಂಬುದು ಮಾಹಿತಿ ಹಕ್ಕು ಪ್ರಶ್ನೆಯೊಂದರಿಂದ ತಿಳಿದುಬಂದಿದೆ. ಪೌರತ್ವ ಕಾಯ್ದೆಯ ನಿಬಂಧನೆಗಳ ಪ್ರಕಾರ, ಸೋನಿಯಾರನ್ನು ಪ್ರಧಾನಿಯನ್ನಾಗಿ ಮಾಡಲು ಸಾಧ್ಯವಿಲ್ಲವೆಂದು ಯುಪಿಎ ಸರಕಾರ ರಚನೆಯಾಗುವ ಮುನ್ನ ಕಲಾಂರಿಗೆ ತಾವು ಪತ್ರ ಬರೆದಿದ್ದಾಗಿ ಸ್ವಾಮಿ ಸ್ವತಃ ಹೇಳಿ ಕೊಂಡಿದ್ದಾರೆ.
ಅವರನ್ನು ಪ್ರಧಾನಿಯನ್ನಾಗಿ ಮಾಡಿದರೆ, ಆ ನಿರ್ಧಾರವನ್ನು ತಾವು ನ್ಯಾಯಾಲಯದಲ್ಲಿ ಪ್ರಶ್ನಿಸು ವುದಾಗಿಯೂ ಸ್ವಾಮಿ ಆ ಪತ್ರದಲ್ಲಿ ತಿಳಿಸಿದ್ದರಂತೆ. ಭಾರತೀಯ ಮೂಲದ ಯಾವುದೇ ಟಾಲಿಯನ್ ಪ್ರಜೆಯು ಇಟಲಿಯಲ್ಲಿ ಪ್ರಧಾನಿಯಾಗಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಇಟಲಿ ಮೂಲದ ವರೊಬ್ಬರು ಭಾರತದ ಪ್ರಧಾನಿ ಸ್ಥಾನಕ್ಕೇರುವುದು ಸಾಧ್ಯವಿಲ್ಲವೆಂಬುದು ಸ್ವಾಮಿಯವರ ವಾದ ವಾಗಿತ್ತು.
ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೋನಿಯಾರನ್ನು ನಿರ್ಬಂಧಿಸುವಂತೆ ಎನ್‌ಡಿಎ ಮೈತ್ರಿಕೂಟವು ಭಾರತದ ಚುನಾವಣಾ ಆಯೋಗವನ್ನು ಕೇಳಿಕೊಂಡಿತ್ತು. ಆದರೆ, ಯಾವುದೇ ಶಾಸನಬದ್ಧ ಸಂಸ್ಥೆ ಗಾಗಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೋನಿಯಾರನ್ನು ನಿರ್ಬಂಧಿಸಲು ಭಾರತದ ಸಂವಿಧಾನ ದಲ್ಲಿ ಯಾವುದೇ ನಿಯಮಗಳಿಲ್ಲದ ಕಾರಣ, ಈ ಬೇಡಿಕೆಯನ್ನು ಆಯೋಗವು ತಿರಸ್ಕರಿಸಿತ್ತು. ಆದ್ದ ರಿಂದ ಡಾ.ಸ್ವಾಮಿ ಹೇಳಿರುವಂತೆ, ಸೋನಿಯಾ ಅವರು ಪ್ರಧಾನಿ ಹುದ್ದೆಗೇರಲು ಬೇಕಾದ ಅರ್ಹತೆ ಯನ್ನು ನಿರ್ಧರಿಸುವಲ್ಲಿ ಭಾರತದ ರಾಷ್ಟ್ರಪತಿಗಳಿಗೆ ಯಾವುದೇ ಅಧಿಕಾರ ಇರಲಿಲ್ಲ, ಚುನಾವಣಾ ಆಯೋಗವೇ ಅವರನ್ನು ಅರ್ಹರೆಂದು ತೀರ್ಮಾನಿಸಿದ ಮೇಲೆ ರಾಷ್ಟ್ರಪತಿಗಳು ತಡೆಯಲು ಸಾಧ್ಯ ವಿರಲಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.
ಸೋನಿಯಾ ಅವರು ಚುನಾವಣೆಗೆ ಸ್ಪರ್ಧಿಸುವುದನ್ನು ಮತ್ತು ಪ್ರಧಾನಿಯಾಗುವುದನ್ನು ತಡೆಯಲು ಕಾನೂನಾತ್ಮಕ ಸವಾಲನ್ನು ಒಡ್ಡುವಲ್ಲಿ ವಿಫಲವಾದ ಬಿಜೆಪಿ ಆಗ ಭಾವನಾತ್ಮಕ ‘ಬ್ಲ್ಯಾಕ್‌ಮೇಲ್’ ತಂತ್ರಕ್ಕೆ ಮೊರೆಹೋಯಿತು. ಪಕ್ಷದ ಇಬ್ಬರು ಪ್ರಮುಖ ನಾಯಕಿಯರಾಗಿದ್ದ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ಅವರು, “ಸೋನಿಯಾ ಅವರು ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ತಲೆ ಬೋಳಿಸಿಕೊಂಡು ಬಳಿಬಟ್ಟೆ ಧರಿಸಿ ಮತ್ತು ನೆಲದ ಮೇಲೆ ಮಲಗಿ ಹಿಂದೂ ವಿಧವೆಯರಂತೆ ಬದುಕುತ್ತೇವೆ" ಎಂದು ಘೋಷಿಸಿಬಿಟ್ಟರು.
‘ದೇಶವನ್ನು ಮುನ್ನಡೆಸಲು ದೇಶಸ್ಥರು ಯಾರೂ ಸಿಗುವುದಿಲ್ಲ, ಆ ಕೆಲಸಕ್ಕೆ ಕಾಂಗ್ರೆಸ್ಸಿಗರು ವಿದೇಶಿ ಮೂಲದವರನ್ನು ಆಯ್ಕೆಮಾಡುತ್ತಾರೆಂದರೆ, ಅದು ಶತಕೋಟಿ ಭಾರತೀಯರೆಲ್ಲರೂ ಅಸಮರ್ಥರು ಎಂದಂತಾಗುತ್ತದೆ’ ಎಂಬುದು ಅವರ ತರ್ಕವಾಗಿತ್ತು.ಸೋನಿಯಾ ಪ್ರಧಾನಿಯಾಗುವುದಕ್ಕೆ ಪಕ್ಷ ದಲ್ಲೂ ಸಣ್ಣ ಪ್ರಮಾಣದ ವಿರೋಧವಿದ್ದೇ ಇತ್ತು. ಚುನಾವಣಾಪೂರ್ವ ಯುಪಿಎ ಮೈತ್ರಿ ಕೂಟಕ್ಕೆ 222 ಸ್ಥಾನಗಳಷ್ಟೇ ಸಿಕ್ಕಿದ್ದರಿಂದ, ಬಹುಮತಕ್ಕಾಗಿ ಎಡಪಕ್ಷಗಳನ್ನು ಗೋಗರೆಯುವ ಸ್ಥಿತಿ ಕಾಂಗ್ರೆಸ್ ಗೆ ಎದುರಾಗಿತ್ತು.
ಮಿತ್ರಪಕ್ಷಗಳಲ್ಲಿ ಕೆಲವಕ್ಕೆ, ಅದರಲ್ಲೂ ಎಡಪಕ್ಷಗಳಿಗೆ ಸೋನಿಯಾ ಪ್ರಧಾನಿಯಾಗುವುದು ಇಷ್ಟ ವಿರಲಿಲ್ಲ ಎನ್ನುವುದಕ್ಕಿಂತ, ಅಲ್ಪಮತದ ಸರಕಾರವನ್ನು ಮುನ್ನಡೆಸುವ ಅನುಭವ ಅವರಿ ಗಿರದ ಕಾರಣ, ಬೇರೆ ಯಾರಾದರೂ ಅನುಭವಿಗಳು ಅಥವಾ ತಟಸ್ಥ ವ್ಯಕ್ತಿತ್ವದವರು ಪ್ರಧಾನಿಯಾಗಲಿ ಎನ್ನುವ ಮನಸ್ಥಿತಿ ಅವಕ್ಕಿತ್ತು. 189 ಸ್ಥಾನಗಳನ್ನು ಗೆದ್ದಿದ್ದ ಎನ್‌ಡಿಎ ಒಕ್ಕೂಟದ ಜನಪ್ರಿಯತೆ ಕಡಿಮೆಯಾಗಿರಲಿಲ್ಲ ಮತ್ತು ಸೋನಿಯಾರ ವಿದೇಶಿ ಮೂಲದ ವಿರುದ್ಧ ಚುನಾವಣೆಗೆ ಮೊದಲೇ ರಾಷ್ಟ್ರಾದ್ಯಂತ ಜನಾಭಿಪ್ರಾಯ ಮೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಅದೇ ವಿಷಯದಲ್ಲೀಗ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ೨ನೇ ಸುತ್ತಿನ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ವಿದೇಶಿ ಮೂಲದವರು ಪ್ರಧಾನಿಯಾಗಬಹುದಾ ಎನ್ನುವ ವಿಷಯದಲ್ಲಿ ಕಾನೂನಿನ ಸ್ಪಷ್ಟತೆಯಿರದ ಕಾರಣ, ಇಂದಿರಾ ಗಾಂಧಿಯವರ ಕಾಲದಿಂದಲೂ ಗಾಂಧಿ ಕುಟುಂಬ ವನ್ನು ಕಾಡುತ್ತಲೇ ಬಂದಿದ್ದ ಡಾ.ಸುಬ್ರಮಣಿಯನ್ ಸ್ವಾಮಿಯವರ ಕಾನೂನು ಹೋರಾಟದ ಭಯವು ಅಂದು ಸೋನಿಯಾರಿಗೂ ಇತ್ತು.
ತಾಂತ್ರಿಕವಾಗಿ ಅರ್ಹರಾಗಿದ್ದರೂ, ಮೇಲೆ ತಿಳಿಸಿದ ವಿವಿಧ ಕಾರಣಗಳಿಂದಾಗಿ ಪ್ರಧಾನಿ ಸ್ಥಾನವನ್ನು ಒಪ್ಪುವ ಮನಸ್ಸು ಮಾಡಿರಲಿಲ್ಲ ಸೋನಿಯಾ ಅವರು. ಅಧಿಕಾರವಂತೂ ತಮ್ಮಲ್ಲೇ ಇರುವುದು ಖಾತ್ರಿಯಾದ ಮೇಲೆ, ಹುದ್ದೆಯಿಂದ ಏನಾಗಲಿಕ್ಕಿದೆ ಎನ್ನುವ ಲೆಕ್ಕಾಚಾರ ಅವರಲ್ಲಿ ಇದ್ದಿರಲಿಕ್ಕೂ ಸಾಕು! ಹಾಗಾಗಿ, ಸೋನಿಯಾ ಅವರು ಪ್ರಧಾನಿ ಸ್ಥಾನವನ್ನು ತ್ಯಾಗಮಾಡಿದ್ದಾರೆ ಎನ್ನುವುದಕ್ಕಿಂತ, 2004-2014ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರವರು ಆ ಹುದ್ದೆಯ ಅಧಿಕಾರಗಳನ್ನೂ, ಪ್ರಮುಖ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಸ್ವಾತಂತ್ರ್ಯವನ್ನೂ ತ್ಯಾಗ ಮಾಡಿದ್ದರು ಎಂದರೆ ಹೆಚ್ಚು ಸರಿಯಾದೀತು!