Vishweshwar Bhat Column: ನಿಮ್ಮ ಮಕ್ಕಳಿಗೆ ನೀವೇನು ಕೊಡಬೇಕು ಎಂಬುದನ್ನು ಬಲ್ಲಿರಾ ?
ಹಲವು ನೂರು ಕೋಟಿಗಳ ಒಡೆಯ ಆತ. ಹಾಗಂತ ಜಾಕಿ ಚಾನ್‌ಗೆ ಮಕ್ಕಳಿಲ್ಲ ಅಂತಲ್ಲ, ಇದ್ದಾರೆ ಆದರೂ ಆತ ತನ್ನ ಗಳಿಕೆ ಹಾಗೂ ಆಸ್ತಿಯನ್ನೆಲ್ಲ ದಾನ ಮಾಡಲು ನಿರ್ಧರಿಸಿದ್ದಾನೆ. ಅಲ್ಲದೇ ಆತ ತನ್ನ ಮಗನಿಗಾಗಿ ಏನನ್ನೂ ಉಳಿಸಬಾರದೆಂದು ತೀರ್ಮಾನಿಸಿದ್ದಾನೆ. ನಿಜಕ್ಕೂ ದಿಟ್ಟ ನಿರ್ಧಾರ, ಈಗಿನ ಕಾಲದಲ್ಲಿ ಯಾರೂ ಹೀಗೆ ಮಾಡುವುದಿಲ್ಲ
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಖ್ಯಾತ ನಟ, ಕರಾಟೆ, ಕುಂಗ್- ಪಟು ಜಾಕಿ ಚಾನ್‌ನ ಸಂದರ್ಶನವನ್ನು ಓದುತ್ತಿದ್ದೆ. ಆತ ತನ್ನ ನಿಧನದ ನಂತರ ತಾನು ಗಳಿಸಿದ ಹಣ, ಆಸ್ತಿಪಾಸ್ತಿ ಹಾಗೂ ಸರ್ವಸ್ವವನ್ನೂ ಚಾರಿಟಿಗೆ ದಾನ ಮಾಡಲು ನಿರ್ಧಾರ ಮಾಡಿದ್ದಾನೆ. ಅದೇನು ಚಿಕ್ಕದಲ್ಲ.
ಹಲವು ನೂರು ಕೋಟಿಗಳ ಒಡೆಯ ಆತ. ಹಾಗಂತ ಜಾಕಿ ಚಾನ್‌ಗೆ ಮಕ್ಕಳಿಲ್ಲ ಅಂತಲ್ಲ, ಇದ್ದಾರೆ ಆದರೂ ಆತ ತನ್ನ ಗಳಿಕೆ ಹಾಗೂ ಆಸ್ತಿಯನ್ನೆಲ್ಲ ದಾನ ಮಾಡಲು ನಿರ್ಧರಿಸಿದ್ದಾನೆ. ಅಲ್ಲದೇ ಆತ ತನ್ನ ಮಗನಿಗಾಗಿ ಏನನ್ನೂ ಉಳಿಸಬಾರದೆಂದು ತೀರ್ಮಾನಿಸಿದ್ದಾನೆ. ನಿಜಕ್ಕೂ ದಿಟ್ಟ ನಿರ್ಧಾರ, ಈಗಿನ ಕಾಲದಲ್ಲಿ ಯಾರೂ ಹೀಗೆ ಮಾಡುವುದಿಲ್ಲ.
ತಮಗಾಗಿ ಗಳಿಸಿದ್ದು ಸಾಲದು ಎಂಬಂತೆ ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹೀಗೆ ಏಳೇಳು ಜನ್ಮಕ್ಕೆಂದು ಗಳಿಸಿ ಒಬ್ಬಜ್ಜಿ ಮಾಡಿ ಇಡುತ್ತಾರೆ. ಆದರೆ ಜಾಕಿಚಾನ್ ಹಾಗಲ್ಲ. ತನ್ನ ಮಗ ನಿಗೆ ಏನನ್ನೂ ಬಿಟ್ಟು ಹೋಗಬಾರದೆಂದು ತೀರ್ಮಾನಿಸಿದ್ದಾನೆ. ಈ ನಿರ್ಧಾರದ ಹಿಂದಿನ ಸ್ಪೂರ್ತಿ ಅಥವಾ ಕಾರಣವೇನು ಎಂದು ಸಂದರ್ಶಕ ಕೇಳಿದ್ದಕ್ಕೆ ಜಾಕಿ ಚಾನ್ ನೀಡಿದ ಉತ್ತರ ತುಂಬಾ ಮನೋಜ್ಞವಾಗಿದೆ: “ನನ್ನ ಮಗನಿಗೆ ಸಾಮರ್ಥ್ಯವಿದ್ದರೆ, ಆತ ತನ್ನ ಸ್ವಂತ ದುಡಿಮೆಯಿಂದ ಹಣ ಗಳಿಸುತ್ತಾನೆ.
ಇದನ್ನೂ ಓದಿ: Vishweshwar Bhat Column: ಅಮೆರಿಕ ಅಧ್ಯಕ್ಷರ ಹಾಸ್ಯ ದಿನದ ಬಗ್ಗೆ ನಿಮಗೆ ಗೊತ್ತಿದೆಯೇ ?
ಒಂದು ವೇಳೆ ಅವನಿಗೆ ಸಾಮರ್ಥ್ಯವಿಲ್ಲದಿದ್ದರೆ ಆತ ನಾನು ಗಳಿಸಿದ ಹಣ ಆಸ್ತಿಯನ್ನು ಉಳಿಸು ವುದಿಲ್ಲ. ಮಕ್ಕಳಿಗಾಗಿ ಹಣ ಗಳಿಸುವುದೆಂದರೆ, ಅವರಿಗೆ ಉಪಕಾರ ಮಾಡುವುದಲ್ಲ, ಅವರಿಗೆ ಅನ್ಯಾಯ ಮಾಡಿದಂತೆ. ಮಕ್ಕಳಿಗಾಗಿ ಹಣ ಮಾಡಿದರೆ, ಅವರು ನಿಮ್ಮನ್ನಲ್ಲ, ನಿಮ್ಮ ಹಣವನ್ನು ಪ್ರೀತಿಸುತ್ತಾರೆ. ಅದರ ಬದಲು ಅಂದರೆ ಹಣದ ಬದಲು ನಿಮ್ಮ ಪ್ರೀತಿ ಹಾಗೂ ಕ್ವಾಲಿಟಿ ಟೈಮ್ ಕೊಡಿ. ಅವರಿಗೆ ನೀವು ಕೊಡಬಹುದಾದ ದೊಡ್ಡ ಆಸ್ತಿ ಅಂದ್ರೆ ಅದೇ".
ಜಾಕಿ ಚಾನ್‌ನ ಮಾತನ್ನು ಕೇಳಿಸಿಕೊಂಡರೆ ಮಕ್ಕಳು ಉದ್ಧಾರವಾಗುತ್ತಾರೆ ಹಾಗೂ ಸಮಾಜವೂ. ಆದರೆ ಈ ವಿಷಯದಲ್ಲಿ ಆತ ಒಬ್ಬನೇ. ಕಾರಣ ಆತನ ಮಾತುಗಳನ್ನು ಒಪ್ಪುವವರು, ಅವುಗಳನ್ನು ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕಬಹುದು.
ಜಗತ್ತು ಬದಲಿಸುವ ಸಣ್ಣ ಕಾರ್ಯ
ರಸ್ತೆ ಅಪಘಾತದಲ್ಲಿ ಒಂದು ನಾಯಿ ತೀವ್ರ ಗಾಯಗೊಂಡಿತ್ತು. ನಾಯಿ ರಸ್ತೆಯಲ್ಲಿ ಬಿದ್ದು ಜೋರಾಗಿ ಕೂಗುತ್ತಾ, ಒದ್ದಾಡುತ್ತಿತ್ತು. ನೂರಾರು ದಾರಿಹೋಕರು ಆ ದೃಶ್ಯವನ್ನು ನೋಡಿ ಮರುಗುತ್ತಾ ಮುಂದೆ ಸಾಗುತ್ತಿದ್ದರು. ಆದರೆ ಒಬ್ಬ ಮಹಿಳೆ ಮಾತ್ರ ಆ ನಾಯಿಯ ಸಹಾಯಕ್ಕೆ ಮುಂದಾದಳು. ಆ ನಾಯಿಯನ್ನು ಆಟೋದಲ್ಲಿ ಕುಳ್ಳಿರಿಸಿಕೊಂಡು, ಪಶುವೈದ್ಯರ ಬಳಿಗೆ ಕರೆದುಕೊಂಡು ಹೋದಳು. ಅದನ್ನು ನೋಡಿದ ಪಶುವೈದ್ಯರು “ಈ ನಾಯಿ ಯಾರದ್ದು? ಏನಾಯಿತು?" ಎಂದು ಕೇಳಿದರು.
ಅದಕ್ಕೆ ಆ ಮಹಿಳೆ “ಇದು ಬೀದಿ ನಾಯಿ. ನಾನು ಅವಸರದಲ್ಲಿ ಆಫೀಸಿಗೆ ಹೋಗುತ್ತಿದ್ದೆ. ಕಾರು ಸವಾರನೊಬ್ಬ ಇದರ ಕಾಲಮೇಲೆ ಹತ್ತಿಸಿ ಪರಾರಿಯಾದ. ಪ್ರಾಯಶಃ ನಾಯಿಯ ಕಾಲು ಮುರಿದಿ ರಬೇಕು" ಎಂದಳು. ನಾಯಿಯ ರಕ್ತ ಆಕೆಯ ಸೀರೆಗೆ ಅಂಟಿಕೊಂಡಿತ್ತು. ವೈದ್ಯರ ಕಣ್ಣಲ್ಲಿ ಆಕೆ ದೊಡ್ಡವಳಾಗಿ ಕಂಡಳು. ಸಾಕಿದ ನಾಯಿಯನ್ನೂ ಎಲ್ಲರೂ ಹಾಗೇ ಎತ್ತಿಕೊಳ್ಳುವುದಿಲ್ಲ.
ಆದರೆ ಈಕೆ ಬೀದಿನಾಯಿಗೆ ಇಂಥ ಪ್ರೀತಿ, ಕಾಳಜಿ ತೋರಿದ್ದಾಳಲ್ಲ ಎಂದು ವೈದ್ಯರಿಗೆ ಅಭಿಮಾನ ಮೂಡಿತು.“ಯಾವ ಕಾರಣದಿಂದ ಹೀಗೆ ಮಾಡಿದಿರಿ? ನಿಮ್ಮಲ್ಲಿರುವ ಯಾವ ಗುಣ, ಯಾವ ಅಂಶ ಹೀಗೆ ಮಾಡುವಂತೆ ನಿಮ್ಮನ್ನು ಪ್ರೇರೇಪಿಸಿತು?" ಎಂದು ವೈದ್ಯರು ಆ ಮಹಿಳೆಯನ್ನು ಕೇಳಿದರು. ಅದಕ್ಕೆ ಆ ಮಹಿಳೆ ಹೇಳಿದಳು- “ಒಂದು ನಾಯಿಯನ್ನು ಬದುಕಿಸುವುದರಿಂದ ಈ ಜಗತ್ತೇನೂ ಬದಲಾಗುವುದಿಲ್ಲ. ಆದರೆ ಆ ನಾಯಿ ಪಾಲಿಗೆ ಈ ಜಗತ್ತು ಯಾವತ್ತೂ ಬದಲಾಗುತ್ತದೆ. ಅದಕ್ಕಿಂತ ಮಿಗಿಲಾದುದು ಯಾವುದಿದೆ?".
ಈ ಜಗತ್ತು ಇರುವುದೇ ಹೀಗೆ!
ಯೋಗಿ ದುರ್ಲಭಜೀ ಯಾವುದೇ ಗ್ಯಾಜೆಟ್ (ಇಲೆಕ್ಟ್ರಾನಿಕ್ ಉಪಕರಣ)ಗಳನ್ನು ಬಳಸುವುದಿಲ್ಲ. ಇಂದಿಗೂ ಅವರ ದೊಡ್ಡ ಲಕ್ಸುರಿ ಅಂದ್ರೆ ಲ್ಯಾಂಡ್‌ಲೈನ್ ಫೋನು. ಸುಮಾರು ವರ್ಷ ಅದನ್ನೂ ಬಳಸುತ್ತಿರಲಿಲ್ಲ. ಆದರೆ ಅದನ್ನು ಬಳಸುವಂತೆ ಮನವೊಲಿಸುವುದರಲ್ಲಿ ನನ್ನ ಪಾತ್ರವೂ ಇದೆ. ಈಗ ಅದನ್ನು ಬಳಸಲಾರಂಭಿಸಿದ್ದಾರೆ. ಆದರೆ ನಾವು ಫೋನ್ ಮಾಡಿದಾಗ ಅವರು ಕರೆ ಸ್ವೀಕರಿ ಸುವುದಿಲ್ಲ. ಅವರಿಗೆ ಮಾತಾಡಬೇಕೆಂದೆನಿಸಿದಾಗ ಫೋನ್ ಮಾಡುತ್ತಾರೆ. ಕನಿಷ್ಠ ಅಷ್ಟರಮಟ್ಟಿ ಗಾದರೂ ಸಿಗುತ್ತಾರಲ್ಲ ಎಂಬುದಷ್ಟೇ ಸಮಾಧಾನ.
ಕೆಲ ತಿಂಗಳ ಹಿಂದೆ ಅದೇನಾಗಿತ್ತೋ ಏನೋ? ಯೋಗಿ ತುಸು ಖಿನ್ನಮನಸ್ಕರಾಗಿಯೇ ಮಾತಿಗಾ ರಂಭಿಸಿದರು- “ನಮ್ಮನ್ನು, ಪ್ರತಿಯೊಬ್ಬರನ್ನು ಸದಾ ಬೇಸರ, ಹತಾಶೆಯಲ್ಲಿರಿಸುವುದೇ ಪರಮ ಉದ್ದೇಶವೆಂಬಂತೆ ಈ ಜಗತ್ತನ್ನು ರೂಪಿಸಲಾಗಿದೆ". ನನಗೆ ಅವರ ಮಾತಿನ ಒಳದನಿ ಅರ್ಥವಾಗ ಲಿಲ್ಲ ಅಥವಾ ಅವರು ಹೇಳಿದ್ದಕ್ಕೆ ನನ್ನ ಸಹಮತವಿರಲಿಲ್ಲ. “ನಿಮ್ಮ ಮಾತನ್ನು ಒಪ್ಪಿಕೊಳ್ಳು ವುದು ಕಷ್ಟ" ಎಂದೆ.
ಅದಕ್ಕೆ ಯೋಗಿಯವರು ಹೇಳಿದರು- “ಎಲ್ಲರೂ ಸುಖವಾಗಿ, ನೆಮ್ಮದಿಯಾಗಿ, ಸಂತಸದಿಂದ ಇರುವುದು ಯಾವುದೇ ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಈಗ ನಮ್ಮಲ್ಲಿ ಏನಿದೆಯೋ, ಅದಕ್ಕೆ ನಾವು ಸಮಾಧಾನ ಹೊಂದುವಂತಾದರೆ, ನಮಗೆ ಯಾವುದೂ ಬೇಕಾಗುವುದಿಲ್ಲ. ಆಗ ದೇಶದ ಆರ್ಥಿಕತೆ ಬೆಳೆಯುವುದಾದರೂ ಹೇಗೆ? ನೀವು ZಠಿಜಿZಜಛಿಜ್ಞಿಜ ಕ್ರೀಮನ್ನು ಹೇಗೆ ಮಾರಾಟ ಮಾಡುತ್ತೀರಿ? ನಿಮಗೆ ವಯಸ್ಸಾಗುತ್ತಿದೆಯೆಂದು ಹೆದರಿಸಿದರೆ ಈ ಕ್ರೀಮ್ ಅನ್ನು ಮಾರಾಟ ಮಾಡಬಹುದು.
ಜನರು ಯಾವಾಗ ಜೀವವಿಮೆ ಪಾಲಿಸಿಯನ್ನು ಮಾಡಿಸುತ್ತಾರೆ? ಏಕಾಏಕಿ ನೀವು ಸತ್ತುಹೋದರೆ ಏನೆಲ್ಲ ಅವಾಂತರಗಳಿಗೆ ಗುರಿಯಾಗುತ್ತೀರಿ ಎಂದು ಜನರನ್ನು ಹೆದರಿಸಿದಾಗ ವಿಮೆ ಮಾಡಿಸುತ್ತಾರೆ. ಜನರನ್ನು ಪ್ಲಾಸ್ಟಿಕ್ ಸರ್ಜರಿಗೆ ಹೇಗೆ ಪ್ರೇರೇಪಿಸುತ್ತೀರಿ? ನಿಮ್ಮ ಸೌಂದರ್ಯ, ರೂಪದಲ್ಲಿ ಏನೋ ಐಬು ಇದೆ ಎಂದು ಅವರಲ್ಲಿ ಆತಂಕ ಮೂಡಿಸಿದಾಗ. ಜನರನ್ನು ಟಿವಿ ಕಾರ್ಯಕ್ರಮ ವೀಕ್ಷಿಸು ವಂತೆ ಮಾಡುವುದು ಹೇಗೆ? ಟಿವಿ ನೋಡದಿದ್ದರೆ ನೀವು ಜೀವನದಲ್ಲಿ ಮುಖ್ಯವಾದ ಏನನ್ನೋ ಕಳೆದುಕೊಳ್ಳುತ್ತೀರಿ ಎಂಬ ಪಶ್ಚಾತ್ತಾಪವನ್ನು ಅವರಲ್ಲಿ ಉಂಟುಮಾಡಿದಾಗ. ಜನರು ಹೊಸ ಕಾರು, ಸ್ಮಾರ್ಟ್ ಫೋನ್ ನ್ನು ಖರೀದಿಸುವುದು ಯಾವಾಗ? ಅವುಗಳಿಲ್ಲದ ಜೀವನ ನಿರರ್ಥಕ ಎಂಬ ಭಾವನೆಯನ್ನು ಅವರಲ್ಲಿ ಬಿತ್ತಿದಾಗ.
ತಲೆಗೆ ಹಚ್ಚುವ ಬಣ್ಣವನ್ನು ಹೇಗೆ ಮಾರಾಟ ಮಾಡುತ್ತೀರಿ? ಬಿಳಿ ಕೂದಲು ಕಾಣಿಸಿಕೊಂಡರೆ ವಯ ಸ್ಸಾಯ್ತು ಎಂದು ಎಲ್ಲರೂ ತಿರಸ್ಕರಿಸಬಹುದು ಎಂಬ ಭಯ ಮೂಡಿಸಿದಾಗ ಮಾತ್ರ. ಒಂದು ರಾಜ ಕೀಯ ಪಕ್ಷಕ್ಕೆ ನೀವೇಕೆ ವೋಟು ಹಾಕುತ್ತೀರಿ? ಬೇರೆಯವರಿಗೆ ವೋಟು ಹಾಕಿದರೆ ನಿಮ್ಮ ಬದುಕು ಹೈರಾಣಾಗಬಹುದೆಂದು ಗೂಬೆ ಕೂರಿಸಿದಾಗ. ಎಲ್ಲವೂ ಸರಿಯಿದೆ, ಎಲ್ಲರೂ ನೆಮ್ಮದಿಯಿಂದ ಇದ್ದಾರೆಂಬುದು ಯಾವುದೇ ಇಕಾನಮಿಗೂ ಒಳ್ಳೆಯದಲ್ಲ. ಜನರನ್ನು ಹೆದರಿಸಬೇಕು. ಅವರಲ್ಲಿ ಸದಾ ಅತೃಪ್ತಿ ಮೂಡಿಸಬೇಕು. ಇದು ಜಗದ ನಿಯಮ, ಸರಕಾ ರದ ನಿಯಮ. ಎಲ್ಲ ಕಂಪನಿಗಳ ಧ್ಯೇಯ. ಇದೇ ಅಭಿವೃದ್ಧಿ ಮಾನದಂಡ". ನಾನು ಯೋಚಿಸಲಾರಂಭಿಸಿದೆ.
ಸಂಜಯ್ ಮಂಜ್ರೇಕರ್ ಕುರಿತು
ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಆತ್ಮಕತೆ ಓದುವ ತನಕ ಅವರು ಹೀಗೂ ಇದ್ದಿರಬಹುದು ಎಂಬುದು ಗೊತ್ತಿರಲಿಲ್ಲ.
ಅವರು ಇಲ್ಲಿಯತನಕ ಯಾವುದೇ ಕ್ರೀಡಾಪಟುವಿನ ಆತ್ಮಕತೆ ಓದಿಲ್ಲವಂತೆ. ಕ್ರೀಡೆಗೆ ಸಂಬಂಧಿಸಿದ ಪುಸ್ತಕವನ್ನೂ. ಅಂಥ ಪುಸ್ತಕದಲ್ಲಿ ಅವರಿಗೆ ಆಸಕ್ತಿ ಇಲ್ಲವಂತೆ. ಕಾರಣ, ಯಾರೂ ನಿಜ ಬರೆಯು ವುದಿಲ್ಲವಂತೆ. ಸಂಜಯ್ ಮಂಜ್ರೇಕರ್‌ಗೆ ಟೆನ್ನಿಸ್ ಲೋಕದಲ್ಲಿ ಏನಾಗುತ್ತಿದೆ ಎಂಬುದರ ಐಡಿ ಯಾವೇ ಇಲ್ಲವಂತೆ. ಫುಟ್‌ಬಾಲ್ ಆಟಗಾರರ ಬಗ್ಗೆಯೂ ಅವರಿಗೆ ಗೊತ್ತಿಲ್ಲವಂತೆ. ಯಾರಾದರೂ ಟೆನ್ನಿಸ್, ಫುಟ್‌ಬಾಲ್, ಇಂಗ್ಲಿಷ್ ಪ್ರೀಮಿಯರ್ ಲೀಗ್.. ಹೀಗೆ ಯಾವುದಾದರೂ ಆಟದ ಬಗ್ಗೆ ಮಾತಾ ಡಿದರೆ, ಅವರು ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತುಬಿಡುತ್ತಾರಂತೆ.
ಅದೇ ಮಂಜ್ರೇಕರ್ ಜತೆ ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಮೆಹದಿ ಹಸನ್, ನಸ್ರತ್ ಫತೇ ಅಲಿ ಖಾನ್ ಬಗ್ಗೆ ಪ್ರಸ್ತಾಪಿಸಿದರೆ ಗಂಟೆಗಟ್ಟಲೆ ಮಾತಾಡುತ್ತಾರಂತೆ. ಅವರ ಪಾಲಿಗೆ ಸಿನಿಮಾ ಮಂದಿ ಅದರಲ್ಲೂ ಸಿನಿಮಾ ನಿರ್ದೇಶಕರೆಂದರೆ ಮಹಾನ್ ವ್ಯಕ್ತಿಗಳಂತೆ. ಸಿನಿಮಾದಿಂದ ಅವರು ಅನೇಕ ಸಂಗತಿಗಳನ್ನು ಕಲಿತಿದ್ದಾರಂತೆ.
ಐದು ನೂರು ರುಪಾಯಿಗೆ ಒಂದು ಸಿನಿಮಾ ನೋಡುವುದಕ್ಕಿಂತ ಮಿಗಿಲಾದ ಅದ್ಭುತ ಡೀಲ್ ಮತ್ತೊಂದಿಲ್ಲವಂತೆ. ಅವರ ಮಕ್ಕಳೇನಾದರೂ ಒಳ್ಳೆಯ ಸಿನಿಮಾಗಳನ್ನು ಎಷ್ಟು ನೋಡಿದರೂ ಆಕ್ಷೇಪಿಸುವುದಿಲ್ಲವಂತೆ. ನೀವು ಜಗತ್ತಿನ ಯಾವುದೇ ಭಾಷೆಯ ಸಿನಿಮಾಗಳ ಅಭಿಮಾನಿಯಾದರೆ, ಆ ಮೊದಲು ಮಂಜ್ರೇಕರ್ ಪರಿಚಯವಿಲ್ಲದಿದ್ದರೂ, ಅವರ ಸ್ನೇಹಿತರಾಗಬಹುದಂತೆ. ಅದರಲ್ಲೂ ನೀವು ಕಿಶೋರ್ ಕುಮಾರ್ ಅಭಿಮಾನಿಯಾದರೆ, ಮಂಜ್ರೇಕರ್ ಅವರ ಆತ್ಮಸಂಗಾತಿ ಯಾಗಬಹು ದಂತೆ.
ಹೇಗೆ ಅನುವಾದಿಸುವುದು?
ಕೆಲವು ವಾಕ್ಯಗಳನ್ನು ಅನುವಾದಿಸಲಾಗುವುದಿಲ್ಲ. ಅನುವಾದಿಸಲೂಬಾರದು. ಮೂಲದ ಸೊಗಡು ಹೋಗಿ ಬಿಡುತ್ತದೆ. ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಕಳಿಸಿದ ಪುಟ್ಟ ಇಮೇಲ್ ಇದು. ಓದಿ ಜೋರಾಗಿ ನಕ್ಕೆ. ಅದನ್ನು ಹೇಗೆ ಅನುವಾದಿಸುವುದು ಎಂದು ಚಡಪಡಿಸಿದೆ. ಮೂಲದಲ್ಲಿ ಓದಿ ಕೊಂಡರೇ ಒಳ್ಳೆಯದು- I broke my finger last week. On the other hand, I am fine.
ಮುತ್ತಿನಂಥ ಮಾತುಗಳು
ಪೂರ್ವದ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿರುವ ಸುನಿಮ್ ಅವರ ಮಾತು, ಬರಹಗಳ ಬಗ್ಗೆ ವಿಶ್ವ ದೆಲ್ಲೆಡೆಯ ಜನರಿಗೆ ಆಸಕ್ತಿಯಿದೆ. ನಮ್ಮ ಕಣ್ಣ ಮುಂದಿನ, ವರ್ತಮಾನದ ಬದುಕಿನ ಪ್ರಸಂಗಗಳನ್ನೇ ಅವರು ಕಟ್ಟಿಕೊಡುತ್ತಾರೆ. ದೇವರು, ದಿಂಡರು ಎಂದು ಬೋರು ಹೊಡೆಸುವುದಿಲ್ಲ. ತಮ್ಮ ತೀಕ್ಷ್ಣ ಮಾತುಗಳಿಂದ ಬೆರಗು ಮೂಡಿಸುತ್ತಾರೆ. ಸುನಿಮ್ ಅವರ ಕೆಲವು ವಿಚಾರಗಳು ಹೀಗಿವೆ:
ನಾವು ಯಾರನ್ನಾದರೂ ದ್ವೇಷಿಸಲಾರಂಭಿಸಿದರೆ, ಅವರ ಬಗ್ಗೆಯೇ ಹೆಚ್ಚಾಗಿ ಯೋಚಿಸಲಾರಂಭಿ ಸುತ್ತೇವೆ. ಅವರ ಕುರಿತ ಯೋಚನೆಯಿಂದ ನಮಗೆ ದೂರ ಹೋಗಲು ಆಗುವುದಿಲ್ಲ. ಕ್ರಮೇಣ ಅವರಂತೆ ವರ್ತಿಸಲಾರಂಭಿಸುತ್ತೇವೆ. ಅಂಥವರಿಗೆ ನಮ್ಮ ಮನಸ್ಸಿನಲ್ಲಿ ಪುಕ್ಕಟೆ ನೆಲೆಸಲು ಬಿಡಬಾ ರದು. ಅವರನ್ನು ಕ್ಷಮಿಸಿ ಓಡಿಸಿಬಿಡಬೇಕು.
ನೀವು ಯಾರನ್ನು ದ್ವೇಷಿಸುತ್ತೀರೋ ಅಂಥವರು ನಿಮ್ಮ ಹೃದಯ ಅಥವಾ ಮನಸ್ಸಿನಲ್ಲಿ ನೆಲೆಸಲು ಅರ್ಹರಾ? ಯೋಗ್ಯರಾ? ಯಾರು ನಿಮ್ಮನ್ನು ಪ್ರೀತಿಸುತ್ತಾರೋ ಅಂಥವರಿಗೆ ಮಾತ್ರ ನಿಮ್ಮ ಹೃದಯ ಹಾಗೂ ಮನಸ್ಸಿನಲ್ಲಿ ಜಾಗಕೊಡಿ. ನಿಮ್ಮನ್ನು ದ್ವೇಷಿಸುವವರಿಗೆ ನಿಮ್ಮೊಳಗೆ ಜಾಗ ಕೊಟ್ಟರೆ, ಅವರು ನಿಮ್ಮೊಳಗೆ ರಾಡಿಯೆಬ್ಬಿಸುತ್ತಾರೆ. ಅದರಿಂದ ಅವರಿಗೇನೂ ಆಗದು. ನಿಮ್ಮ ಮನಸ್ಸು ಮಲಿನ ವಾಗುತ್ತದೆ.
ನಾನೊಬ್ಬ ಸಂತ, ಧರ್ಮಗುರು ಎಂದು ನನ್ನನ್ನು ನೋಡಿದವರು ಎರಡೂ ಕೈಗಳಿಂದ ನಮಿಸು ತ್ತಾರೆ. ನಾನೂ ತಕ್ಷಣ ನಮಿಸುತ್ತೇನೆ. ಕೆಲವರು ಶಿರಬಾಗುತ್ತಾರೆ. ನಾನೂ ಹಾಗೇ ಮಾಡುತ್ತೇನೆ. ನನ್ನ ಗುರುತು, ಪರಿಚಯವಿಲ್ಲದವರು ನನ್ನನ್ನು ನೋಡಿ ಸುಮ್ಮನೆ ನಗುತ್ತಾರೆ. ನಾನೂ ನಗುತ್ತೇನೆ. ನಾವು ಮನುಷ್ಯರಿದ್ದೇವಲ್ಲ, ಒಂಥರ ಕನ್ನಡಿ ಇದ್ದಂತೆ. ನಾವು ಪರಸ್ಪರ ಪ್ರತಿಬಿಂಬಗಳು.
ನೀವು ಯಾರನ್ನಾದರೂ ಭೇಟಿಯಾದಾಗ ಅವರಲ್ಲಿ ಗುರುತಿಸುವ ದೋಷಗಳಿವೆಯಲ್ಲ, ಅವು ನಿಮ್ಮ ದೋಷಗಳೂ ಹೌದು. ನಿಮ್ಮಲ್ಲಿ ಆ ದೋಷಗಳು ಇಲ್ಲದಿದ್ದರೆ, ಅವರ ದೋಷಗಳನ್ನೂ ಅಷ್ಟು ಶೀಘ್ರವಾಗಿ ಗುರುತಿಸುತ್ತಿರಲಿಲ್ಲ. ನೀವು ಎಂದೋ ನಿಮ್ಮ ಪ್ಯಾಂಟಿನ ಜಿಪ್ ಹಾಕದೇ ಮುಜುಗರ ಅನುಭವಿಸಿರುತ್ತೀರಿ. ಹೀಗಾಗಿ ಬೇರೆಯವರು ಜಿಪ್ ಹಾಕದಿರುವುದು ನಿಮ್ಮ ಗಮನಕ್ಕೆ ಬೇಗನೆ ಬರುತ್ತದೆ.
ಜನರು ತಮಗೆ ಬೇಕಾದ ಅಭಿಪ್ರಾಯಗಳನ್ನು ಹೊಂದಿರಲಿ, ತಪ್ಪೇನಿಲ್ಲ. ಅವರು ಅವರಿಗೆ ಸರಿ ಯೆನಿಸುವ ಅಭಿಪ್ರಾಯ ಹೊಂದಲು ಸ್ವತಂತ್ರರು. ನೀವು ಅವರ ಅಭಿಪ್ರಾಯಗಳನ್ನು ಬದಲಿಸಲು ಹೊರಟಾಗಲೇ ಸಮಸ್ಯೆ ಶುರುವಾಗೋದು. ಬೇರೆಯವರ ಅಭಿಪ್ರಾಯ ಬದಲಿಸುವುದೆಂದರೆ ಅದೊಂದು ನಿರರ್ಥಕ, ವ್ಯರ್ಥ ಹಾಗೂ ಅನಗತ್ಯ ಕ್ರಿಯೆ. ಎಲ್ಲರೂ ನಿಮ್ಮ ಅಭಿಪ್ರಾಯವನ್ನೇ ಹೊಂದಿದರೆ ಈ ಜಗತ್ತು ನೀರಸವಾಗಿಬಿಡುತ್ತಿತ್ತು. ಅವರ ಅಭಿಪ್ರಾಯ ಅವರಿಗಿರಲಿ. ನೀವು ಬದಲಿ ಸಲು ಹೋಗಬೇಡಿ. ಬೇಕಾದರೆ ಅವರೇ ಬದಲಿಸಿಕೊಳ್ಳಲಿ. ಬದಲಿಸಿಕೊಳ್ಳುವ ಸ್ವಾತಂತ್ರ್ಯ ನೀಡಿದಾಗ ಅವರು ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಆತನಿಗೆ ದನಿಯಷ್ಟೇ ಪರಿಚಯ
ಮುಂಬಯಿಯಂಥ ವಿಮಾನ ನಿಲ್ದಾಣಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಕೆಲಸ ಮಾಡುವವರ ಮುಖ ಯಾರಿಗೂ ಪರಿಚಿತವಲ್ಲ. ಪೈಲಟ್‌ಗಳ ಜತೆಯೂ ಆತನ ಭೇಟಿ ಆಗಿರುವು ದಿಲ್ಲ. ಅವರ ಧ್ವನಿ ಯಷ್ಟೇ ಆತನಿಗೆ ಪರಿಚಿತ. ಆದರೆ ಆತ ಕೆಲಸದಲ್ಲಿ ನಿಮಿಷದ ವ್ಯತ್ಯಯ ಎಸಗಿದರೂ ಏನೆಲ್ಲ ಅವ ಘಡಗಳಾಗಿ ಬಿಡುತ್ತವೆ. ಪ್ರತಿದಿನ ಬೆಳಗ್ಗೆ ಬಿಸಿಬಿಸಿ ಚಹಾ ಹೀರುತ್ತೇವೆ.
ಕಮಲಾ ಗುರುಂಗ್ ಎಂಬ ಸಹೋದರಿಯೊಬ್ಬಳು ಅಲ್ಲೆಲ್ಲೋ ಡಾರ್ಜಿಲಿಂಗ್‌ನಲ್ಲಿ ಚಹಾ ಎಲೆ ಕೀಳುವ ಕೆಲಸ ಮಾಡುತ್ತಿರುತ್ತಾಳೆ. 20 ವರ್ಷಗಳಿಂದ ಆಕೆ ಉದ್ಯೋಗದಲ್ಲಿದ್ದರೂ ಇವತ್ತಿಗೂ ಡಾರ್ಜಿಲಿಂಗ್ ಚಹಾದ ರುಚಿ ಹೇಗಿರುತ್ತದೆ ಎಂದು ನೋಡಿಲ್ಲ. ಡ್ರೈವರ್ ಮುಖ ನೋಡಿದ್ದೀರಾ?ನಗರಗಳಲ್ಲಿ, ಹೊರಭಾಗಗಳಲ್ಲಿ ಸಂಚರಿಸುವಾಗಲೆಲ್ಲ ಹೆಚ್ಚಿನ ಬಾರಿ ನಾವು ಟ್ರಾಫಿಕ್ ಜಾಮ್ ಅನ್ನು ಬಯ್ದುಕೊಂಡೇ ಹೋಗುತ್ತೇವೆ.
ಜೀವಕ್ಕೆ ಹಾನಿಯಾಗದಂತೆ ಮೋಟಾರು ಚಲಾಯಿಸುವುದೇ ದೊಡ್ಡ ಸರ್ಕಸ್ಸು ಅಂತಲೂ ಗೊಣ ಗಾಡಿರುತ್ತೇವೆ. ಅವೆಲ್ಲ ಕಿರಿಕಿರಿಗಳ ಮಧ್ಯದಲ್ಲೇ ನಮ್ಮನ್ನು ಒಂದಲ್ಲ, ಎರಡಲ್ಲ ದಿನಂಪ್ರತಿ ಸುರಕ್ಷಿತವಾಗಿ ತಲುಪಿಸುವ ಚಾಲಕನ ಮುಖವನ್ನೇ ನಾವು ನೋಡಿರುವುದಿಲ್ಲ. ಆತನನ್ನು ಉದ್ದೇ ಶಿಸಿ ‘ತುಂಬ ಚೆನ್ನಾಗಿ ಡ್ರೈವ್ ಮಾಡಿದೆಯಪ್ಪಾ’ ಅಂತ ಚಿಕ್ಕದೊಂದು ಪ್ರಶಂಸೆಯನ್ನು ಮಾಡಿ ದವರೇ ಇಲ್ಲವೇನೋ. ನಿಜ, ಅವನಿಗೆ ಅದಕ್ಕೆಂದೇ ಸಂಬಳ ಕೊಡುತ್ತಿರಬಹುದು.
ಆದರೆ ಸವಲತ್ತಿನ ಹೊರತಾದ ಒಂದು ಗುರುತಿಸುವಿಕೆ? ಅದು ನಮ್ಮ ಕೃತಜ್ಞತೆಯ ಪ್ರತೀಕ.ನಾಲ್ಕು ರಸ್ತೆ ಕೂಡುವ ಕಡೆ ದಿನವೂ ನಿಂತು ಹೊಗೆ ಕುಡಿಯುವ ಟ್ರಾಫಿಕ್ ಪೊಲೀಸ್. ಆತನನ್ನು ನಾವು ದಿನವೂ ಹಾಯ್ದುಕೊಂಡು ಬರುತ್ತೇವೆ. ಆದರೂ ಆತ ಅಪರಿಚಿತನಾಗಿ ಉಳಿದಿರುತ್ತಾನೆ. ಅವನಿಗೂ ಕನಸುಗಳಿವೆ. ಗಿಜಿಗುಡುವ ಶಬ್ದ ಪ್ರಪಂಚದಲ್ಲಿ ನಿಂತೂ ಆತನ ತುಟಿಗಳಲ್ಲಿ ‘ಕಹೋನಾ ಪ್ಯಾರ್ ಹೈ’ ಪಲ್ಲವಿ ಜಿನುಗಿಕೊಂಡಿರುತ್ತದೆ. ಕೆಲಸ ಮುಗಿಸಿ ಹೆಂಡತಿಗೆ ಬಿಸಿ ಬಜ್ಜಿ ಕಟ್ಟಿಸಿಕೊಂಡು ಹೋಗೋಣ ಅಂತ ಆತನೂ ಕಾತರದಲ್ಲಿರುತ್ತಾನೆ. ಅವನಿಲ್ಲದಿದ್ದರೆ ಕೆಂಪು-ಹಸಿರು ದೀಪಗಳೆಲ್ಲ ಅರ್ಥ ಕಳೆದುಕೊಂಡು ರಸ್ತೆಯ ಗಜಿಬಿಜಿ ನಮ್ಮ ಮನೋಲೋಕವನ್ನೂ ಆವರಿಸುವ ಆಪಾಯ ವಿದೆ.
ಬಸ್ ಚಾಲಕನಂತೆ ಈತನೂ ನಮ್ಮ ಬದುಕಿನ ಒಂದು ಭಾಗ. ಸಿಗ್ನಲ್‌ನಲ್ಲಿ ನಿಂತಾಗ ಆತನ ಕಣ್ಣು ಗಳಲ್ಲಿ ಸರಿದಾಡುತ್ತಿರುವ ಲಹರಿಗಳತ್ತ ನಮ್ಮದೊಂದು ಆಪ್ತನೋಟ ಜಮೆಯಾಗುವುದೇ ಇಲ್ಲ.