ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ಯುದ್ಧ ಮತ್ತು ಎಲ್‌ ನಿನೋ, ಕೃಷಿ ಹೇಗೋ ಏನೋ ?!

ಜೂನ್ ತಿಂಗಳ ಆರಂಭವು ಕೃಷಿಕರಿಗೆ ಬಿತ್ತನೆಯ ಭರವಸೆಯನ್ನು, ತಮ್ಮ ಕೃಷಿ ಭೂಮಿ ಯಲ್ಲಿ ಈ ವರ್ಷದ ಬೆಳೆಗೆ ಬೇಕಾದ ಕೆಲಸ ಕಾರ್ಯಗಳನ್ನು ಆರಂಭಿಸುವ ಸಮಯ. ಈ ಋತುವಿನ ಮಳೆಗಾಲದ ಕೃಷಿ ಚಟುವಟಿಕೆಗಳು ಜಾಗತಿಕ ಹವಾಮಾನ ವೈಪರೀತ್ಯಗಳು ಹಾಗೂ ಭೌಗೋ ಳಿಕ-ರಾಜಕೀಯ ಬಿಕ್ಕಟ್ಟುಗಳ ನೆರಳಿನಲ್ಲಿ ನಲುಗುತ್ತಿವೆ. ಅನ್ಯಾನ್ಯ ಸಮಸ್ಯೆಗಳಿಂದ ಹೈರಾಣಾ ಗಿರುವ ರೈತಾಪಿ ವರ್ಗಕ್ಕೆ ಈ ಋತುಮಾನ ಸತ್ವ ಪರೀಕ್ಷೆಯ ಕಾಲ!

ನೆಲನೋಟ

ರವೀ ಸಜಂಗದ್ದೆ

ತುಳುನಾಡಿನ ಸಾಂಪ್ರದಾಯಿಕ ‘ಪತ್ತನಾಜೆ’ ಪರ್ವವು ಮುಗಿಯುವುದರೊಂದಿಗೆ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದೆಡೆ ಬೇಸಗೆಯ ಧಗೆಯಿಂದ ಪಾರಾಗುವ ಹಾಗೂ ಮುಂಗಾರು ಮಳೆಯ ಆಗಮನವನ್ನು ಸ್ವಾಗತಿಸುವ, ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ನಿರತವಾಗುವ ಸಿದ್ಧತೆಗಳು ಶುರುವಾಗಿವೆ.

ಜೂನ್ ತಿಂಗಳ ಆರಂಭವು ಕೃಷಿಕರಿಗೆ ಬಿತ್ತನೆಯ ಭರವಸೆಯನ್ನು, ತಮ್ಮ ಕೃಷಿ ಭೂಮಿ ಯಲ್ಲಿ ಈ ವರ್ಷದ ಬೆಳೆಗೆ ಬೇಕಾದ ಕೆಲಸ ಕಾರ್ಯಗಳನ್ನು ಆರಂಭಿಸುವ ಸಮಯ. ಈ ಋತುವಿನ ಮಳೆಗಾಲದ ಕೃಷಿ ಚಟುವಟಿಕೆಗಳು ಜಾಗತಿಕ ಹವಾಮಾನ ವೈಪರೀತ್ಯಗಳು ಹಾಗೂ ಭೌಗೋಳಿಕ-ರಾಜಕೀಯ ಬಿಕ್ಕಟ್ಟುಗಳ ನೆರಳಿನಲ್ಲಿ ನಲುಗುತ್ತಿವೆ. ಅನ್ಯಾನ್ಯ ಸಮಸ್ಯೆಗಳಿಂದ ಹೈರಾಣಾಗಿರುವ ರೈತಾಪಿ ವರ್ಗಕ್ಕೆ ಈ ಋತುಮಾನ ಸತ್ವ ಪರೀಕ್ಷೆಯ ಕಾಲ!

ಹವಾಮಾನ ಇಲಾಖೆಯ ಇತ್ತೀಚಿನ ಕಳವಳಕಾರಿ ಮುನ್ಸೂಚನೆಗಳು, ಪೆಸಿಫಿಕ್ ಸಾಗರದಲ್ಲಿ ಮರುಕಳಿಸುತ್ತಿರುವ ‘ಎಲ್ ನಿನೋ’ ವಿದ್ಯಮಾನದ ನಕಾರಾತ್ಮಕ ಪರಿಣಾಮ, ಮಧ್ಯ ಪ್ರಾಚ್ಯದ ಪ್ರಕ್ಷುಬ್ಧ ವಾತಾವರಣ ಮತ್ತು ಯುದ್ಧದ ಪರಿಣಾಮವಾಗಿ ಸೃಷ್ಟಿಯಾಗಿರುವ ರಸಗೊಬ್ಬರ ಅಭಾವ - ಈ ಪ್ರಮುಖ ಅಂಶಗಳು ದೇಶದ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಕೃಷಿಯು ದೇಶದ ಬಹುಪಾಲು ಜನರ ಆದಾಯದ ಮೂಲ ಮತ್ತು ಈ ತೊಂದರೆಗಳು ಕೃಷಿಕರ ಬಳಗಕ್ಕೆ ಬಲವಾದ ಪೆಟ್ಟು ನೀಡಲಿವೆ. ಈ ಬಾರಿಯ ಮುಂಗಾ ರಿನ ಕುರಿತು ತನ್ನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಇತ್ತೀಚೆಗೆ ಪರಿಷ್ಕರಿಸಿದ್ದು, ರೈತರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ!

2026ರ ಜೂನ್ನಿಂದ ಸೆಪ್ಟೆಂಬರ್ʼವರೆಗಿನ ನೈರುತ್ಯ ಮುಂಗಾರು ಅವಧಿಯಲ್ಲಿ ದೇಶಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ದೇಶದ ದೀರ್ಘಾವಧಿಯ ಸರಾಸರಿ ಮಳೆಯು ವಾಡಿಕೆಗಿಂತ ಕಡಿಮೆಯಾಗಿ, 90% ಮಾತ್ರ ಸುರಿಯಲಿದೆ ಎಂದು ಅಂದಾಜು.

ಇದನ್ನೂ ಓದಿ: Ravi Sajangadde Column: 'ನೀಟ್‌' ಆಗಿ ಪರೀಕ್ಷೆ ನಡೆಸುವುದೂ ಸತ್ವ ಪರೀಕ್ಷೆಯೇ !

ಹಿಂದಿನ ವಿಶ್ಲೇಷಣೆ ಪ್ರಕಾರ ಇದು 92% ಇರಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ವರ್ಷ ದೇಶದ ಕೆಲವು ಭಾಗಗಳಲ್ಲಿ 60%ದಷ್ಟು ‘ಮಳೆ ಕೊರತೆ’ ಆಗುವ ಸಾಧ್ಯತೆಗಳಿದ್ದು, ಬರಗಾಲದ ಭೀತಿಯನ್ನು ಹೆಚ್ಚಿಸಿದೆ. ಈಶಾನ್ಯ ಭಾರತದ ಕೆಲವು ಭಾಗಗಳನ್ನು ಹೊರತು ಪಡಿಸಿದರೆ, ದೇಶದ ಬಹುಪಾಲು ಕೃಷಿ ಆಧಾರಿತ ವಲಯಗಳಲ್ಲಿ ಮಳೆಯ ಪ್ರಮಾಣವು 94%ಕ್ಕಿಂತ ಕಡಿಮೆ ಇರಲಿದೆ.

ಕರ್ನಾಟಕದ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ. ಇದರಿಂದಾಗಿ ಬಿತ್ತನೆ ಕಾರ್ಯಗಳಿಗೆ ಆರಂಭಿಕ ಹಂತ ದಲ್ಲಿಯೇ ಹಿನ್ನಡೆಯಾಗುವ ಅಪಾಯವಿದೆ. ಈ ಋತುವಿನಲ್ಲಿ ಮಳೆಯ ಪ್ರಮಾಣ ಗಣನೀಯ ಕುಸಿತವಾಗಲು ಪ್ರಮುಖ ಕಾರಣ ‘ಎಲ್ ನಿನೋ’ ಹವಾಮಾನ ವಿದ್ಯಮಾನ.

ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ಭಾಗದಲ್ಲಿ (ವಿಶೇಷವಾಗಿ ಸಮಭಾಜಕ ವೃತ್ತದ ಬಳಿ) ಸಮುದ್ರದ ಮೇಲ್ಮೆ ಉಷ್ಣಾಂಶವು ವಾಡಿಕೆಗಿಂತ ಹೆಚ್ಚಾಗುವ ಪ್ರಕ್ರಿಯೆಗೆ ‘ಎಲ್ ನಿನೋ’ ಎನ್ನುತ್ತಾರೆ. ಉಷ್ಣಾಂಶದ ಏರಿಕೆಯು ಜಾಗತಿಕ ವಾಯುಭಾರ ಮತ್ತು ಮಾರುತಗಳ ದಿಕ್ಕನ್ನು ಬದಲಾಯಿಸುತ್ತದೆ.

ವಿವಿಧ ಹವಾಮಾನ ವರದಿಗಳ ಪ್ರಕಾರ, 2026ರ ಮೇ ತಿಂಗಳಿನಿಂದ ಜುಲೈವರೆಗಿನ ಅವಧಿ ಯಲ್ಲಿ ಎಲ್ ನಿನೋ ಮರುಕಳಿಸುವ ಸಾಧ್ಯತೆ 82%ದಷ್ಟಿದೆ. ಇದು ಚಳಿಗಾಲದವರೆಗೂ ಅಂದರೆ 2026ರ ಅಂತ್ಯದವರೆಗೂ ಮುಂದುವರಿಯುವ ಅಂದಾಜಿದೆ.

ಎಲ್ ನಿನೋ ಸಕ್ರಿಯವಾದಾಗ, ಹಿಂದೂ ಮಹಾಸಾಗರದಿಂದ ಭಾರತದ ಉಪಖಂಡದತ್ತ ಬೀಸಬೇಕಾದ ತೇವಾಂಶಭರಿತ ಮಳೆ ಹೊತ್ತು ತರುವ ಮುಂಗಾರ ಮಾರುತಗಳು ದುರ್ಬಲ ಗೊಳ್ಳುತ್ತವೆ ಅಥವಾ ಸಾಗುವ ದಿಕ್ಕು ಬದಲಾಗಿ, ಈ ತೇವಾಂಶವು ಪೆಸಿಫಿಕ್ ಸಾಗರದತ್ತ ಆಕರ್ಷಿತವಾಗುತ್ತದೆ. ಹೀಗಾದಾಗ ಭಾರತದ ಆಗಸದಲ್ಲಿ ಮೋಡ ಉಂಟಾಗುವಿಕೆ, ಒಗ್ಗೂಡು ವಿಕೆ, ಚಲನೆ ಮತ್ತು ಸಾಂದ್ರತೆ ಕಡಿಮೆಯಾಗಿ ಮಳೆ ಕಡಿಮೆಯಾಗಿ ನೀರಿನ ಅಭಾವ ಉಂಟಾಗುತ್ತದೆ.

krishi

ಹೀಗಾದಾಗ ಮಳೆಗಾಲದ ನಡುವೆಯೂ ದೀರ್ಘಾವಧಿಯ ಬಿಸಿಲು ಮತ್ತು ಒಣ ಹವೆ ಉಂಟಾಗಿ, ಜೂನ್ ಮೊದಲೆರಡು ವಾರಗಳಲ್ಲಿ ಬಿತ್ತಿದ/ನೆಟ್ಟ ಬೆಳೆಗಳು ನೀರಿಲ್ಲದೆ ಒಣಗುವ ಜೊತೆಗೆ ಒಣಹವೆಯ ಪರಿಣಾಮದಿಂದಾಗಿ ಕೃಷಿ ಉತ್ಪನ್ನಗಳ ಉತ್ಪಾದನಾ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ. ದೇಶದಾದ್ಯಂತ ಬೆಳೆಸಲ್ಪಟ್ಟ ಆಹಾರ ಪದಾರ್ಥಗಳ ಪ್ರಮಾಣ ಕಡಿಮೆಯಾಗಿ ಕೊರತೆ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಮಳೆ ಕೊರತೆಯ ಆತಂಕದ ಮಧ್ಯೆ ರಸಗೊಬ್ಬರ ಪೂರೈಕೆಯ ಬಿಕ್ಕಟ್ಟು ಅಕ್ಷರಶಃ ಕೃಷಿಕರ ನಿದ್ದೆಗೆಡಿಸಿದೆ! 2026ರ ಫೆಬ್ರವರಿ ಯಿಂದ ಶುರುವಾದ ಅಮೆರಿಕಾ-ಇರಾನ್-ಇರಾಕ್ ಯುದ್ಧವು ಸಮಗ್ರ ಜಾಗತಿಕ ಪೂರೈಕೆ ಸರಪಳಿಯನ್ನು, ಮುಖ್ಯವಾಗಿ ರಸಗೊಬ್ಬರ ಪೂರೈಕೆ-ವಿತರಣೆಯನ್ನು ಅಸ್ತವ್ಯಸ್ತಗೊಳಿಸಿದೆ.

ವಿಶ್ವದ ಮೂರನೇ ಒಂದರಷ್ಟು ರಸಗೊಬ್ಬರ ಮತ್ತು ನೈಸರ್ಗಿಕ ಅನಿಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮತ್ತು ಕ್ಲುಪ್ತ ಸಮಯಕ್ಕೆ ರಸಗೊಬ್ಬರ ಭಾರತಕ್ಕೆ ಬರುತ್ತಿಲ್ಲ. ಭಾರತವು ತನ್ನ ದೇಶೀಯ ಯೂರಿಯಾ ಘಟಕಗಳನ್ನು ನಡೆಸಲು ಮಧ್ಯಪ್ರಾಚ್ಯ, ಅದರಲ್ಲೂ ಮುಖ್ಯವಾಗಿ ಕತಾರ್‌ನಿಂದ ದ್ರವೀಕೃತ ನೈಸರ್ಗಿಕ ಅನಿಲವನ್ನು ಬಹುವಾಗಿ ಅವಲಂಬಿಸಿದೆ.

ಯುದ್ಧದ ಕಾರಣ ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿದ್ದರಿಂದ, 2026ರ ಮಾರ್ಚ್ ತಿಂಗಳಲ್ಲಿ ಭಾರತದ ರಸಗೊಬ್ಬರ ಉತ್ಪಾದನೆಯು 24.6%ದಷ್ಟು ಕುಸಿತ ಕಂಡಿದೆ.

ಇದೆಲ್ಲದರ ಜೊತೆಗೆ, ‘ಗಾಯದ ಮೇಲೆ ಬರೆ ಎಳೆದಂತೆ’ ಜಾಗತಿಕ ಮಾರುಕಟ್ಟೆಯಲ್ಲಿ ಯೂರಿಯಾ ಮತ್ತು ಡಿಎಪಿ ಬೆಲೆಗಳು 30%-40%ದಷ್ಟು ದಿಢೀರ್ ಏರಿಕೆಯಾಗಿವೆ. ಭಾರತ ಸರಕಾರ ವಿವಿಧ ಸಬ್ಸಿಡಿಯನ್ನು 11%ದಷ್ಟು ಹೆಚ್ಚಿಸಿ, ಜಾಗತಿಕ ಟೆಂಡರ್ ಮೂಲಕ 13.5 ಲಕ್ಷ ಟನ್ ಯೂರಿಯಾ ಆಮದಿಗೆ ಮುಂದಾಗಿದೆಯಾದರೂ, ಮುಂಗಾರು ಬಿತ್ತನೆಯ ನಿರ್ಣಾಯಕ ಸಮಯದಲ್ಲಿ (ಜೂನ್-ಜುಲೈ) ಸ್ಥಳೀಯ ಮಟ್ಟದಲ್ಲಿ ರಸಗೊಬ್ಬರದ ಕೊರತೆ ರೈತರನ್ನು ಕಾಡುವ ಆತಂಕವಿದೆ.

ಕೃತಕ ಅಭಾವ ಸೃಷ್ಟಿಯಾಗಿ ಕಳ್ಳ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ಅಪಾಯವೂ ಇದೆ. ಇದು ರೈತನ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ ಮತ್ತು ಕೃಷಿ ಉತ್ಪಾದನಾ ವೆಚ್ಚ ಹೆಚ್ಚಲಿದೆ. ಒಟ್ಟಾರೆ ಕೃಷಿ ಉತ್ಪಾದನೆ, ಆಹಾರ ದರಗಳು ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

ಹವಾಮಾನದ ಪ್ರತಿಕೂಲತೆ ಹಾಗೂ ರಸಗೊಬ್ಬರ ಮುಂತಾದ ಕೃಷಿ ಪರಿಕರಗಳ ಕೊರತೆ ಯು ಭಾರತದ ಮತ್ತು ವಿಶೇಷವಾಗಿ ಕರ್ನಾಟಕದ ಕೃಷಿ ವಲಯವನ್ನು ತೀವ್ರ ಸಂಕಷ್ಟಕ್ಕೆ ನೂಕುವ ಲಕ್ಷಣಗಳಿವೆ!

ಭತ್ತ, ಮೆಕ್ಕೆಜೋಳ, ಹತ್ತಿ, ಸೋಯಾಬೀನ್, ಕಬ್ಬು, ರಾಗಿ ಮತ್ತು ತೊಗರಿಯಂತಹ ಪ್ರಮುಖ ವಾಣಿಜ್ಯ ಹಾಗೂ ಆಹಾರ ಬೆಳೆಗಳಿಗೆ ಆರಂಭಿಕ ಹಂತದಲ್ಲಿಯೇ ನೀರಿನ ಕೊರತೆ ಮತ್ತು ಪೋಷಕಾಂಶಗಳ ಅಭಾವ ಎಲ್ ನಿನೋದಿಂದಾಗಿ ಎದುರಾಗಲಿದೆ. ಸಕಾಲದಲ್ಲಿ ಮಳೆಯಾಗದೆ ಬಿತ್ತನೆ ವಿಳಂಬವಾದರೆ, ಕಟಾವಿನ ಸಮಯದಲ್ಲಿ ಹವಾಮಾನ ವೈಪರೀತ್ಯ ಇನ್ನಷ್ಟು ಆದಾಗ ಇಳುವರಿ ಗಣನೀಯವಾಗಿ ಕುಸಿಯುತ್ತದೆ.

ಸಕಾಲದಲ್ಲಿ ರಸಗೊಬ್ಬರದ ಅಲಭ್ಯತೆಯು ಬೆಳೆಯ ಬೆಳವಣಿಗೆಯನ್ನು ಕುಂಠಿತ ಗೊಳಿಸು ತ್ತದೆ. ಇದರಿಂದ ಒಟ್ಟಾರೆ ಉತ್ಪಾದನಾ ವೆಚ್ಚ ಹೆಚ್ಚಾಗಿ, ರೈತರ ಕೈಗೆ ಬರುವ ನಿವ್ವಳ ಮೊತ್ತ ತೀವ್ರ ಕಡಿಮೆಯಾಗುತ್ತದೆ. ವಾಡಿಕೆಗಿಂತ ಕಡಿಮೆ ಮಳೆಯಾದರೆ ಕೆರೆ-ಕಟ್ಟೆಗಳು ತುಂಬುವುದಿಲ್ಲ ಹಾಗೂ ಅಂತರ್ಜಲ ಮರುಪೂರಣವಾಗುವುದಿಲ್ಲ.

ಇದು ಕೊಳವೆಬಾವಿ ಆಶ್ರಯಿಸಿ ಅಡಿಕೆ, ತೆಂಗು, ಬಾಳೆ ಮುಂತಾದ ಕೃಷಿ ಮಾಡುವ ರೈತರಿಗೂ ಮುಂದಿನ ಬೇಸಿಗೆಯ ಸಂದರ್ಭದಲ್ಲಿ ನೀರಿನ ಕೊರತೆಯನ್ನು ತಂದೊಡ್ಡುತ್ತದೆ. ಮಳೆ ಕಡಿಮೆಯಾಗಿ ಕೃಷಿ ಉತ್ಪನ್ನಗಳ ಬೆಳೆ ಕುಂಠಿತವಾದಾಗ ಜಾನುವಾರುಗಳಿಗೆ ಮೇವಿನ ಕೊರತೆಯೂ ಉಂಟಾಗಲಿದೆ.

ಈ ಉಭಯ ಸಂಕಟವನ್ನು ಎದುರಿಸಲು ಸಾಂಪ್ರದಾಯಿಕ ಹಾಗೂ ಈಗಿನ ಪ್ರಕಾರದ ವ್ಯವಸಾಯ ಪದ್ಧತಿಯನ್ನು ಬದಿಗಿಟ್ಟು, ವೈಜ್ಞಾನಿಕ, ಹವಾಮಾನ ಆಧಾರಿತ ಮತ್ತು ಸಂಪನ್ಮೂಲ-ಮಿತವ್ಯಯದ ಕೃಷಿಯನ್ನು ಅಳವಡಿಸಿಕೊಳ್ಳುವುದು ಕೃಷಿಕರಿಗೆ ಅನಿವಾರ್ಯವಾಗಿದೆ. ಕೃಷಿಕರು ಈ ಕೆಳಗಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವ್ಯವಸಾಯ ಮಾಡಬೇಕಾದುದು ಇಂದಿನ ತುರ್ತು.

1. ಜೂನ್ ಬಂತೆಂದು ಮೊದಲ ಮಳೆ ಅಥವಾ ಮುಂಗಾರು ಪೂರ್ವ ಮಳೆಗೆ ಅವಸರದಲ್ಲಿ ಬಿತ್ತನೆ ಮಾಡುವ ತರಾತುರಿ ಖಂಡಿತಾ ಬೇಡ. ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಹಿಡಿದಿಟ್ಟು ಕೊಳ್ಳುವ ವಾತಾವರಣ ನಿರ್ಮಾಣವಾದ ನಂತರ, ಅಂದರೆ ಮುಂಗಾರು ಮಳೆ ಸ್ಥಿರವಾದ ಮೇಲೆ ಬಿತ್ತನೆ ಕಾರ್ಯ ಆರಂಭಿಸುವುದು ಸೂಕ್ತ.

2. ಭತ್ತ, ಕಬ್ಬು ಮುಂತಾದ ದೀರ್ಘಾವಧಿಯ, ಹೆಚ್ಚು ನೀರು ಬೇಡುವ ಬೆಳೆಗಳ ಬದಲು, ಕಡಿಮೆ ಅವಽಗೆ ಕಟಾವಿಗೆ ಬರುವ, ನೀರು ಮತ್ತು ಗೊಬ್ಬರ ಮಿತವಾಗಿ ಬೇಡುವ ಬೆಳೆ/ತಳಿ ಆಯ್ಕೆ ಮಾಡುವುದು ಸಮಂಜಸ. ನೀರಿನ ಅಭಾವವನ್ನು ಸಮರ್ಥವಾಗಿ ಎದುರಿಸುವ ಸಿರಿಧಾನ್ಯಗಳು (ರಾಗಿ, ಸಜ್ಜೆ, ನವಣೆ), ಜೋಳ, ಅಲಸಂದೆ, ಹೆಸರು ಕಾಳು ಮುಂತಾದ ದ್ವಿದಳ ಧಾನ್ಯಗಳಿಗೆ ಆದ್ಯತೆ ನೀಡಬಹುದು. ಇವುಗಳಿಗೆ ರಸಗೊಬ್ಬರವೂ ಕಡಿಮೆ ಸಾಕು.

3. ರಸಗೊಬ್ಬರದ ಕೊರತೆಯಿದೆ ಎಂದು ಆತಂಕದಿಂದ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಬೇಡ. ಇದು ನಷ್ಟದ ಲಾಗಾಯ್ತು.

4. ರಾಸಾಯನಿಕ ಯೂರಿಯಾಕ್ಕೆ ಪರ್ಯಾಯವಾಗಿ, ದ್ರವರೂಪದ ‘ನ್ಯಾನೋ ಯೂರಿ ಯಾ’, ‘ನ್ಯಾನೋ ಡಿಎಪಿ’ ಮುಂತಾದವುಗಳ ಬಳಕೆ ಸೂಕ್ತ. ಇವುಗಳ ಸಾಗಾಣಿಕೆ ಸುಲಭ ಹಾಗೂ ಬೆಳೆಗಳು ಇವುಗಳನ್ನು ಶೀಘ್ರವಾಗಿ ಹೀರಿಕೊಳ್ಳುತ್ತವೆ.

5. ಮಣ್ಣು ಪರೀಕ್ಷೆ ಮಾಡಿಸಿ, ಜಮೀನಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ರಸಗೊಬ್ಬರವನ್ನು ಮೇಲ್ಮೈಗೆ ಎರಚುವ ಬದಲು, ಗಿಡದ ಬೇರುಗಳಿಗೆ ಸೇರಿಸುವ ಪದ್ಧತಿ ಸೂಕ್ತ.

6. ಸಾವಯವ ಕೃಷಿಗೆ ಒತ್ತು ಕೊಡಬೇಕು. ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಮತ್ತು ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.

7. ಬೆಳೆಗಳ ಸಾಲುಗಳ ನಡುವೆ ಕೃಷಿ ತ್ಯಾಜ್ಯಗಳಿಂದ ಹೊದಿಕೆ (ಮಲ್ಚಿಂಗ್) ನಿರ್ಮಿಸಿದರೆ ಬಿಸಿಲ ಬೇಗೆಯಿಂದ ಮಣ್ಣಿನ ತೇವಾಂಶ ಆವಿಯಾಗುವುದನ್ನು ಗಣನೀಯವಾಗಿ ತಡೆಯು ತ್ತದೆ.

8. ತೆರೆದ ಕಾಲುವೆಗಳ ಮೂಲಕ ನೀರು ಹಾಯಿಸುವುದನ್ನು ನಿಲ್ಲಿಸಿ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಬಳಕೆ ಕಡ್ಡಾಯ ಮಾಡಬೇಕು. ಬೀಳುವ ಪ್ರತಿಯೊಂದು ಹನಿ ಮಳೆ ನೀರನ್ನೂ ಇಂಗಿಸಲು ಕೃಷಿ ಹೊಂಡ, ಬದು ನಿರ್ಮಾಣ ಮತ್ತು ಕಂದಕಗಳ ನಿರ್ಮಾಣ ನೀರು ಹಿಡಿದಿಟ್ಟುಕೊಳ್ಳಲು ಸಹಕಾರಿ.

9. ಮಳೆ ಮತ್ತು ಹವಾಮಾನದ ಅನಿಶ್ಚಿತತೆ ಇರುವುದರಿಂದ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ರಾಜ್ಯ ಸರಕಾರದ ಬೆಳೆ ವಿಮೆ ಯೋಜನೆಗಳಡಿ ನೋಂದಣಿ ಭವಿಷ್ಯದಲ್ಲಿ ಸಹಕಾರಿ. ಬೆಳೆ ವಿಫಲವಾದರೆ ಇದು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

10. ಕೃಷಿ ಪರಿಕರಗಳಿಗಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಖಾಸಗಿ ಸಾಲ ಮಾಡುವುದನ್ನು ಆದಷ್ಟು ತಪ್ಪಿಸುವುದರ ಜೊತೆಗೆ ಸರ್ಕಾರಿ ಅಥವಾ ಸಹಕಾರ ಸಂಘಗಳ ನೆರವು ಪಡೆಯ ಬೇಕು.

2026ರ ಮುಂಗಾರು ದೇಶದ ಕೃಷಿಕರ ಪಾಲಿಗೆ ನಿಜವಾದ ಅಗ್ನಿಪರೀಕ್ಷೆ! ಎಲ್ ನಿನೋ ಸೃಷ್ಟಿಸುತ್ತಿರುವ ಜಲಕ್ಷಾಮ ಹಾಗೂ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳು ತಂದೊಡ್ಡಿರುವ ರಸಗೊಬ್ಬರ ಅಭಾವ - ಈ ಎರಡೂ ಸವಾಲುಗಳು ರೈತರ ಸಂಯಮ ಮತ್ತು ಕೃಷಿ ಅನುಭವವನ್ನು ಒರೆಗೆ ಹಚ್ಚಲಿವೆ. ಪ್ರಕೃತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ!

ನಮ್ಮ ಕೃಷಿ ಪದ್ಧತಿಯಲ್ಲಿ ಈ ಮೇಲಿನ ಬದಲಾವಣೆಗಳನ್ನು ಮಾಡಿಕೊಂಡರೆ ಆಗಲಿರುವ ನಷ್ಟ-ವೆಚ್ಚವನ್ನು ಕನಿಷ್ಠ ಮಟ್ಟಕ್ಕೆ ಇಳಿಸಬಹುದು. ತಂತ್ರಜ್ಞಾನ ಆಧಾರಿತ ಕೃಷಿ, ನೀರು-ಗೊಬ್ಬರದ ಮಿತಬಳಕೆ, ಸರ್ಕಾರದ ಬೆಂಬಲ ವ್ಯವಸ್ಥೆಗಳ ಸಮರ್ಪಕ ಬಳಕೆ ಮಾತ್ರ ಈ ಬಿಕ್ಕಟ್ಟಿನಿಂದ ಕೃಷಿ ವಲಯವನ್ನು ಪಾರು ಮಾಡಬಲ್ಲ ಅಸ್ತ್ರಗಳಾಗಿವೆ. ಎಲ್ಲಾ ಏರಿಳಿತಗಳ ನಡುವೆಯೂ ‘ಕೃಷಿಯಲ್ಲಿ ಖುಷಿ’ ಕಾಣುವ ಕೋಟ್ಯಂತರ ಕೃಷಿಕರ ಬಾಳು ಇನ್ನಷ್ಟು-ಮತ್ತಷ್ಟು ಹಸನಾಗಲಿ. ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂದರೆ ‘ಕೃಷಿಯನ್ನು ನಂಬಿದವರಿಗೆ ಎಂದಿಗೂ ಬರಗಾಲವಿಲ್ಲ’ ಎನ್ನುವ ಮಾತು ನಿಜವಾಗಲಿ.