Ravi Sajangadde Column: 'ನೀಟ್' ಆಗಿ ಪರೀಕ್ಷೆ ನಡೆಸುವುದೂ ಸತ್ವ ಪರೀಕ್ಷೆಯೇ !
ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಒಂದಾದ ‘ನೀಟ್’ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ವ್ಯವಸ್ಥೆಯ ಲೋಪ ಮತ್ತು ಕೆಲವರ ಹಿಡಿತದಲ್ಲಿ ಇಡೀ ವ್ಯವಸ್ಥೆ ಸಿಲುಕಿ ನಲುಗುತ್ತಿರುವುದಕ್ಕೆ ಜ್ವಲಂತ ಸಾಕ್ಷಿ ಮತ್ತು ಉದಾಹರಣೆ. ಒಟ್ಟಾರೆ ಈ ಇಡೀ ಘಟನೆ ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯ ಕರಾಳ ಮತ್ತು ಕಳಪೆ ಮುಖ-ಗುಣಮಟ್ಟವನ್ನು ಬಯಲು ಮಾಡಿದೆ.
-
ಅಗ್ನಿಪರೀಕ್ಷೆ
ರವೀ ಸಜಂಗದ್ದೆ
ಮೊನ್ನೆ ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET UG 2026) ರದ್ದುಗೊಳಿಸಿ ಮತ್ತೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ! ಇದು ನಮ್ಮ ಪರೀಕ್ಷಾ ವ್ಯವಸ್ಥೆಯ ವೈಫಲ್ಯದ ಜೊತೆಗೆ ದೇಶದ ಶೈಕ್ಷಣಿಕ ವ್ಯವಸ್ಥೆಯ ಬುನಾದಿ ಯನ್ನೇ ಅಲುಗಾಡಿಸಿರುವ ಮತ್ತೊಂದು ವಿಷಣ್ಣ ಘಟನೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸು, ನಿರಂತರ ಕಲಿಕೆ, ಓದು ಮತ್ತು ಪೋಷಕರ ಪ್ರಯತ್ನಗಳಿಗೆ ಬೆಲೆ ಇಲ್ಲದಂತಾಗಿರುವುದು ಮತ್ತು ಅವರೆಲ್ಲರೂ ಮತ್ತೆ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ.
ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಒಂದಾದ ‘ನೀಟ್’ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ವ್ಯವಸ್ಥೆಯ ಲೋಪ ಮತ್ತು ಕೆಲವರ ಹಿಡಿತದಲ್ಲಿ ಇಡೀ ವ್ಯವಸ್ಥೆ ಸಿಲುಕಿ ನಲುಗುತ್ತಿರುವುದಕ್ಕೆ ಜ್ವಲಂತ ಸಾಕ್ಷಿ ಮತ್ತು ಉದಾಹರಣೆ. ಒಟ್ಟಾರೆ ಈ ಇಡೀ ಘಟನೆ ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯ ಕರಾಳ ಮತ್ತು ಕಳಪೆ ಮುಖ-ಗುಣಮಟ್ಟವನ್ನು ಬಯಲು ಮಾಡಿದೆ.
ಲಕ್ಷಗಳ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರೆಯುವ ಯಾವುದೇ ಪರೀಕ್ಷೆಯಾದರೂ ಅದನ್ನು ಸುಗಮವಾಗಿ, ಪಾರದರ್ಶಕವಾಗಿ ಮತ್ತು ಯಾವುದೇ ಅಡೆತಡೆ ಇಲ್ಲದೆ ನಡೆಸುವುದು ನಿಜವಾಗಿಯೂ ದೊಡ್ಡ ಸವಾಲು. ಹಾಗೆಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪದೇ ಪದೇ ಈ ವಿಚಾರದಲ್ಲಿ ಎಡವು ತ್ತಿರುವುದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಟ್ಯೂಷನ್ ಮಾಫಿಯಾ, ವ್ಯವಸ್ಥಿತ ಭ್ರಷ್ಟಾಚಾರ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ಇಡೀ ಪರೀಕ್ಷಾ ವ್ಯವಸ್ಥೆ ಇರುವ ಲಕ್ಷಣಗಳಾಗಿ ಕಾಣುತ್ತದೆ.
ಇದನ್ನೂ ಓದಿ: Ravi Sajangadde Column: ಕಾರ್ಮಿಕರ ಬವಣೆ ತೀರಲಿ !
ಕಳೆದ ಕೆಲ ವರ್ಷಗಳಲ್ಲಿ ಪರೀಕ್ಷೆಗಳು ರದ್ದಾಗುತ್ತಿರುವುದು ಇದು ಮೂರನೇ ಬಾರಿ ಎಂದರೆ ಇದರ ಹಿಂದಿನ ‘ಕಿಂಗ್ ಪಿನ್’ಗಳ ಪ್ರಭಾವದ ಅರಿವು ಮತ್ತು ಅವರನ್ನು ಏನೂ ಮಾಡಲಾಗದೇ ಕೈಚೆಲ್ಲಿ ಕುಳಿತಿರುವ ಹತಾಶ (ಅ)ವ್ಯವಸ್ಥೆ ನಮ್ಮದು ಎಂಬುದು ದಿಟ. ಈ ಘಟನೆಯು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ದಕ್ಷತೆ, ಸಾಮರ್ಥ್ಯ ಮತ್ತು ಶಿಸ್ತಿನ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ನಮ್ಮ ನಡುವೆ ಬಿತ್ತಿದೆ.
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದು, ‘ಮಾಡೆಲ್ ಪ್ರಶ್ನೆ ಪತ್ರಿಕೆ’ ಎನ್ನುವ ಹೆಸರಿನಲ್ಲಿ ಸಂಭಾವ್ಯ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳಿಗೆ ಲಭಿಸುವುದು, ಮಾರಾಟವಾಗುವುದು, ಬಿಕರಿ ಯಾಗುವುದು... ಹೀಗೆ ಇದೊಂದು ವ್ಯವಸ್ಥಿತ ‘ವಂಚನಾ ಜಾಲ’.
ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ, ಪರೀಕ್ಷೆ ಪ್ರಶ್ನೆ ಪತ್ರಿಕೆ ಹೆಸರಿನಲ್ಲಿ ದುಡ್ಡು ಮಾಡುವ ‘ಪರೀಕ್ಷಾ ಮಾಫಿಯಾ’ ದೇಶಾದ್ಯಂತ ಹೆಚ್ಚಿನ ಕಡೆಗಳಲ್ಲಿ ಸಕ್ರಿಯವಾಗಿದೆ. ಪ್ರಶ್ನೆ ಪತ್ರಿಕೆ ಮುದ್ರಣವಾಗುವಲ್ಲಿಂದ ತೊಡಗಿ, ಪ್ರಶ್ನೆ ಪತ್ರಿಕೆ ರವಾನೆ ಮತ್ತು ಪರೀಕ್ಷಾ ಕೇಂದ್ರದವರೆಗೆ ಎಲ್ಲಾ ಒಂದು ಕಡೆ ನಿರಂತರ ಸೋರಿಕೆ ನಡೆಯುತ್ತಿದೆ ಎಂದಾದರೆ, ಈ ಇಡೀ ವ್ಯವಸ್ಥೆಯ ಒಳಗಿನವರ ಸಹಭಾಗಿತ್ವ ಮತ್ತು ಕೈವಾಡವಿಲ್ಲದೆ ಇದು ಅಸಾಧ್ಯ.
ತಾಂತ್ರಿಕವಾಗಿ ನಾವು ಎಷ್ಟೇ ಮುಂದುವರಿದಿದ್ದೇವೆ ಎಂದು ಹೇಳಿಕೊಂಡರೂ, ಓಬೀರಾಯನ ಕಾಲದ ‘ಪ್ರಶ್ನೆಪತ್ರಿಕೆ ಸಾಗಣೆ ಮತ್ತು ವಿತರಣಾ ಕ್ರಮ’ಗಳನ್ನೇ ಇನ್ನೂ ಅನುಸರಿಸುವುದು ಈ ಎಲ್ಲಾ ಅಪಸವ್ಯಗಳಿಗೆ ಮೂಲ ಕಾರಣ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ಶಿಸ್ತು ತರುವ ಸದುದ್ದೇಶ ಮತ್ತು ಮಹತ್ವಾ ಕಾಂಕ್ಷೆಯಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇತ್ತೀಚಿನ ಪ್ರಶ್ನೆ ಪತ್ರಿಕೆ ನಿರಂತರ ಸೋರಿಕೆಯಾಗಿರುವ ಘಟನೆಗಳನ್ನು ನೋಡಿದರೆ ಎನ್‌ಟಿಎ ಕೇವಲ ಪರೀಕ್ಷೆ ನಡೆಸುವ ಯಃಕಶ್ಚಿತ್ ‘ಹೊರಗುತ್ತಿಗೆ’ ಸಂಸ್ಥೆಯಾಗಿ ಮಾತ್ರ ಕಾರ್ಯವನ್ನು ನಿರ್ವಹಿಸುತ್ತಿದೆಯೇ ಎನ್ನುವ ಅನುಮಾನ ಕಾಡದಿರದು! ಈ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳ ಆಯ್ಕೆಯ ಸಂದರ್ಭದಲ್ಲಿ ಖಾಸಗಿ ಕಾಲೇಜುಗಳಿಗೆ ಆದ್ಯತೆ ನೀಡುವಲ್ಲಿಂದ ತೊಡಗಿ, ಅಲ್ಲಿನ ಮೇಲ್ವಿಚಾರಣೆಯಲ್ಲೂ ದೊಡ್ಡ ಮಟ್ಟದಲ್ಲಿ ಭದ್ರತಾ ಲೋಪಗಳಿರುವುದು ಇಂಥಾ ಅಕ್ರಮಗಳಿಗೆ, ಮಾದರಿ ಪ್ರಶ್ನೆ ಪತ್ರಿಕೆ ಹೆಸರಿನಲ್ಲಿ ದುಡ್ಡು ಮಾಡುವ ದಂಧೆಗಳಿಗೆ ದಾರಿ ಮಾಡಿಕೊಡುತ್ತಿದೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಯನ್ನು ನಡೆಸಲು ಅಗತ್ಯವಿರುವ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಸಂಸ್ಥೆ ಬಹುತೇಕ ವಿಫಲ ವಾಗಿದೆ.
ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಮೂರನೆಯ ಬಾರಿ ನೀಟ್ ಯುಜಿ ಪರೀಕ್ಷೆ ರದ್ದಾದ ಪರಿಣಾಮವಾಗಿ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಮತ್ತವರ ತಂಡದ ಕಾರ್ಯವೈಖರಿಯ ಬಗ್ಗೆ ಸಹಜವಾಗಿಯೇ ತೀವ್ರ ಟೀಕೆಗಳು ಕೇಳಿ ಬರುತ್ತಿವೆ.
ಯಾವುದೇ ಇಲಾಖೆಯಲ್ಲಿ ಸತತವಾಗಿ ವೈಫಲ್ಯಗಳು ಸಂಭವಿಸಿದಾಗ ಅದರ ಉನ್ನತ ನಾಯಕತ್ವವು ಹೊಣೆಗಾರಿಕೆಯನ್ನು ಹೊರಲೇ ಬೇಕು. ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ವರದಿಗಳಾದ ತಕ್ಷಣವೇ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುವುದು ಅಥವಾ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುವುದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಕುಗ್ಗಿಸುತ್ತದೆ.
ಕೇಂದ್ರ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ತರುತ್ತಿರುವ ಸುಧಾರಣೆಗಳು ಕೇವಲ ಕಡತಗಳಲ್ಲಿ ಮತ್ತು ಕಾಯ್ದೆ ಗಳಲ್ಲಿ ಮಾತ್ರ ಇದೆಯೇ ಹೊರತು ಅನುಷ್ಠಾನದಲ್ಲಿ ಬಹುತೇಕ ಶೂನ್ಯ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ನಡೆಯುವ ರಾಜ್ಯಮಟ್ಟದ ಇಂಥಾ ಪರೀಕ್ಷೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ!
‘ದುಡ್ಡು ಇದ್ದರೆ ಎಲ್ಲವನ್ನೂ ಕೊಂಡುಕೊಳ್ಳಲು ಸಾಧ್ಯ’ ಎನ್ನುವ ಹಂತಕ್ಕೆ ಪರೀಕ್ಷಾ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆ ಬಂದು ನಿಂತಿರುವುದು ದುರಂತ. ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ, ಅದರಲ್ಲೂ ‘ನೀಟ’ ಪರೀಕ್ಷೆ ಎಂದರೆ, ಅದೊಂದು 17-18 ವರ್ಷದ ಎಳೆಯ ವಿದ್ಯಾರ್ಥಿಗಳನ್ನು ಕಬ್ಬಿನಂತೆ ಹಿಂಡುವ ಹಿಂಡುಗಾಣ!
ಅದಕ್ಕಾಗಿ ಇಡೀ ವರ್ಷ ಕೋಚಿಂಗ್ ಕೊಡಿಸಿ ಅಲ್ಲಿ ನಿರಂತರ ಓದು, ಕಲಿಕೆ ಮತ್ತು ಪರೀಕ್ಷೆ ಮಾತ್ರ ಬದುಕು ಎಂಬಂತಾಗಿದೆ. ಈ ಒತ್ತಡವನ್ನು ತಾಳಲಾಗದ ಕಾರಣಕ್ಕೆ ಹಲವಾರು ಮಕ್ಕಳು ಜೀವ ಬಿಡುತ್ತಿರುವ ಸ್ಥಿತಿಯೂ ನಮ್ಮ ನಡುವೆ ನೋಡುತ್ತಿದ್ದೇವೆ. ಇದಲ್ಲದೆ ದೇಶದ ವೈದ್ಯಕೀಯ ಶಿಕ್ಷಣ ವನ್ನು ಖಾಸಗಿಯವರು (ಅಂದರೆ ರಾಜಕಾರಣಿಗಳು!) ಪಾರಮ್ಯ ಮಾಡಿಕೊಂಡ ಪರಿಣಾಮವಾಗಿ ದುಡ್ಡಿರುವವರ-ಶ್ರೀಮಂತರ ಮಕ್ಕಳು ಮಾತ್ರ ವೈದ್ಯಕೀಯ ವೃತ್ತಿಗೆ ಹೋಗಲು ಸಾಧ್ಯ ಎನ್ನುವ ಪರಿಸ್ಥಿತಿ.
ಇದಕ್ಕೆ ಪೂರಕವಾಗಿ ವೈದ್ಯಕೀಯ ಸೀಟುಗಳ ಹೆಚ್ಚಳವಾದಾಗ, ಖಾಸಗಿಯವರ ಸೀಟುಗಳ ಪಾಲು ಹೆಚ್ಚಾಗುತ್ತಿದೆ. ಪರೀಕ್ಷೆಗಳಲ್ಲಿ ಅನವಶ್ಯಕ ವಿಳಂಬ ಮತ್ತಿತರ ತಾಂತ್ರಿಕ ಕೈಚಳಕಗಳ ಹಿಂದೆ ಹಲವಾರು ಗುಪ್ತ ಯೋಜನೆಗಳು ಇದ್ದು, ಬೇರೆ ಸ್ಟ್ರೀಮ್‌ಗಳಿಗೆ ಹೋಗುವವರನ್ನು ಸೋಸಿ ತೆಗೆಯ ಲಾಗುತ್ತಿದೆ ಮತ್ತು ಇದರಿಂದ ಶ್ರೀಮಂತರ ಮಕ್ಕಳಿಗೆ ಉಪಕಾರ ಆಗುವಂತೆ ನೋಡಿಕೊಳ್ಳುವ ವ್ಯವಸ್ಥಿತ ಜಾಲವೂ ಇರುವಂತಿದೆ!
ಕಳೆದ ಕೆಲವು ವರ್ಷಗಳಲ್ಲಿ ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಏರುತ್ತಾ ಬಂದಿದ್ದ ನೀಟ್ ಪರೀಕ್ಷೆಗೆ ಕುಳಿತುಕೊಳ್ಳುವವರ ಪ್ರಮಾಣ, ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿದ ಹೊರತಾಗಿಯೂ ಕಡಿಮೆಯಾಗುತ್ತಿರಲಿಲ್ಲ. ಈ ವರ್ಷ, ಕಳೆದ ಹತ್ತಾರು ವರ್ಷಗಳ ಮೊದಲ ಬಾರಿಗೆ ನೀಟ್ ಪರೀಕ್ಷಾರ್ಥಗಳ ಸಂಖ್ಯೆ ತಗ್ಗಿರುವುದರ ಹಿಂದೆ ಅದರ ಕುರಿತು ಜನರಿಗಿರುವ ನಂಬಿಕೆ ಕಡಿಮೆ ಆದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
ಇಡೀ ವರ್ಷ ದಿನದ ಬಹುತೇಕ ಗಂಟೆಗಳ ಕಾಲ ಕಷ್ಟಪಟ್ಟು ಓದಿ, ಪರೀಕ್ಷೆಯನ್ನು ಚೆನ್ನಾಗಿ ಮಾಡಿದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ರದ್ದಾದ ಸುದ್ದಿ ಕೇಳಿದಾಗ ಆಗುವ ಆಘಾತವನ್ನು ಪದಗಳಲ್ಲಿ ವಿವರಿಸುವುದು ಅಸಾಧ್ಯ. ಇದು ಶ್ರಮ ಮತ್ತು ಸಮಯದ ವ್ಯಯ ಮಾತ್ರವಲ್ಲದೆ ದೇಶದ ಪ್ರತಿಭಾನ್ವಿತ ಯುವಶಕ್ತಿಯ ವಿಶ್ವಾಸವನ್ನು, ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲೆ ಜನರಿಗಿರುವ ಅಲ್ಪಸ್ವಲ್ಪ ನಂಬಿಕೆಯನ್ನು ನಾಶಮಾಡುವ ಪಾಪದ ಕೆಲಸ!
ಪರೀಕ್ಷೆಗಳು ರದ್ದಾದಾಗ ವಿದ್ಯಾರ್ಥಿಗಳಲ್ಲಿ ಮತ್ತು ಹೆತ್ತವರಲ್ಲಿ ಆಕ್ರೋಶ, ಹತಾಶೆ ಮೂಡಿ, ಮುಂದೆ ಒಟ್ಟಾರೆ ಶೈಕ್ಷಣಿಕ ಗುಣಮಟ್ಟದ ಕುಸಿತಕ್ಕೆ ಇದು ಕಾರಣವಾದರೆ ಅಚ್ಚರಿಯಿಲ್ಲ. ಈ ವಿಚಾರದಲ್ಲಿ ಸಿಬಿಐ ತನಿಖೆ ಆಗುವುದರಿಂದ ಸಂಪೂರ್ಣ ಪರಿಹಾರ ಖಂಡಿತಾ ಸಿಗಲಾರದು. ಈಗಿರುವ ಪರೀಕ್ಷಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಬೇಕಿದೆ.
ಉದಾಹರಣೆಗೆ ಪ್ರಶ್ನೆಪತ್ರಿಕೆಗಳನ್ನು ಕಾಗದದ ರೂಪದಲ್ಲಿ ಸಾಗಿಸುವ ಬದಲು, ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಂಡು ಎನ್‌ಕ್ರಿಪ್ಟ್ ಮಾಡಿ, ಪರೀಕ್ಷೆಯ ಕೆಲವೇ ನಿಮಿಷಗಳ ಮೊದಲು ಡಿಜಿಟಲ್ ರೂಪದಲ್ಲಿ ವಿತರಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು.
ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರಿಗೆ ಕಠಿಣ ಜೈಲು ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಾಯ್ದೆ-ಕಾನೂನುಗಳು ಜಾರಿಯಾಗಬೇಕು. ಎನ್ಇಟಿಯ ಕಾರ್ಯ ವೈಖರಿ ಯನ್ನು ಮೇಲ್ವಿಚಾರಣೆ ಮಾಡಲು ತಜ್ಞರ, ಸಭ್ಯರ ಮತ್ತು ಸಮರ್ಥರ ಸ್ವತಂತ್ರ ಸಮಿತಿ ರಚನೆಯಾಗ ಬೇಕು. ಕಾನೂನಿನ ಭಯ ಇಲ್ಲದಿರುವುದು ಮತ್ತು ‘ಒಳಗಿನವರ’ ನಿರಂತರ ಸಹಕಾರ ಮತ್ತು ದುಡ್ಡಿನ ದಾಹ ಈ ಪರಿಸ್ಥಿತಿಗೆ ನೇರ ಕಾರಣ.
ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಸದೆಬಡಿದು ಶಿಕ್ಷಿಸುವ ಕೆಲಸ ಆಗಲೇಬೇಕು ಮತ್ತು ಇದು ಸಕಾಲ. ಒಟ್ಟಾರೆಯಾಗಿ ನೀಟ್‌ನಂತಹ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಹೊಂದಿರುವ ಪರೀಕ್ಷೆಯ ರದ್ದತಿ, ಮರು ಪರೀಕ್ಷೆ, ಅಕ್ರಮದ ಸಿಬಿಐ ತನಿಖೆ ಮುಂತಾದ ವಿಚಾರಗಳು ಕೇಂದ್ರ ಸರ್ಕಾರದ ಘನತೆಗೆ ಧಕ್ಕೆ ತರುವುದರ ಜೊತೆಗೆ ದೇಶದ ‘ಮೆರಿಟ್ ಆಧಾರಿತ ವ್ಯವಸ್ಥೆ’ಯನ್ನೇ ಅಪಹಾಸ್ಯಕ್ಕೆ ತೂರಿಸಿ, ಸಂದೇಹದಿಂದ ಕಾಣುವಂತೆ ಮಾಡುತ್ತಿದೆ.
ಈಗಲಾದರೂ ಕೇಂದ್ರ ಸರ್ಕಾರ/ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು, ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತ ಮತ್ತು ಖಾಸಗಿಯವರ ನಿಯಂತ್ರಣದಿಂದ ಬಿಡುಗಡೆಗೊಳಿಸಲು ಕಠಿಣ, ಪಾರದರ್ಶಕ ಮತ್ತು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಹಾಗಾಗದಿದ್ದರೆ ಇಂಥಾ ಪರೀಕ್ಷೆಗಳು ಕೇವಲ ಹಣವಂತರು ಸೀಟುಗಳನ್ನು ಖರೀದಿಸುವ ಮಾರುಕಟ್ಟೆಯಾಗಿ, ಶಿಕ್ಷಣ ಮತ್ತು ಪದವಿ ಪಡೆಯುವುದು ವ್ಯವಹಾರ ಕುದುರಿಸುವ ಮಾರ್ಗವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿಗಳು ಮತ್ತು ಹೆತ್ತವರ ಸಿಟ್ಟು ಮತ್ತು ಕಣ್ಣೀರಿನ ಶಾಪದ ಆಕ್ರೋಶ ತಟ್ಟುವ ಮೊದಲು ಈ ವ್ಯವಸ್ಥೆ ಸರಿಯಾಗಬೇಕಿದೆ. ಹಾಗಾದೀತೇ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ಯು ಪರೀಕ್ಷೆಗಳನ್ನು ‘ನೀಟ’ ಆಗಿ ನಡೆಸಲಿ ಎನ್ನುವುದಷ್ಟೇ ಸದ್ಯದ ಕನಿಷ್ಠ ಅಪೇಕ್ಷೆ!