ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Leena Joshi Column: ಚೀನಾ ಪ್ರಾಬಲ್ಯದ ಕರೆನ್ಸಿ ನಮಗೆ ಬೇಕಿಲ್ಲ

ಚೀನಾ ಬ್ರಿಕ್ಸ್ ಕರೆನ್ಸಿಯಲ್ಲಿ ಪ್ರಭಾವ ಸಾಧಿಸಬಹುದು ಎಂಬ ಭಾರತದ ಆತಂಕದ ಮೂಲ ಕಾರಣ ಚೀನಾದ ಜಿಡಿಪಿ ದೊಡ್ಡದು ಎನ್ನುವುದಲ್ಲ. ಅದರ ಹಿಂದೆ ಆರ್ಥಿಕ ಶಕ್ತಿ, ಉತ್ಪಾದನಾ ಸಾಮರ್ಥ್ಯ, ವಿದೇಶಿ ವಿನಿಮಯ ಸಂಗ್ರಹ, ಜಾಗತಿಕ ವ್ಯಾಪಾರ ನಿಯಂತ್ರಣ, ಬ್ಯಾಂಕಿಂಗ್ ಪ್ರಭಾವ, ರಾಜಕೀಯ ಪ್ರಭಾವ ಎಲ್ಲವೂ ಸೇರಿವೆ.

ಅಮೃತಕಾಲ

ಲೀನಾ ಜೋಶಿ

ಭಾರತದ ವಿದೇಶಾಂಗ ನೀತಿಯಲ್ಲಿ ಚೀನಾದ ವಿಚಾರ ಬಂದಾಗ ಕಾಣಿಸುವ ಎಚ್ಚರಿಕೆ ಆಕಸ್ಮಿಕವಾಗಿ ಹುಟ್ಟಿದುದಲ್ಲ. ಅದು ಇತಿಹಾಸದ ಗಾಯದಿಂದ ಬಂದದ್ದು. ವಿಶ್ವಾಸಘಾತದ ಅನುಭವದಿಂದ ಬಂದದ್ದು. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬಾರದು ಎಂಬ ಕಠಿಣ ಅರಿವಿನಿಂದ ಬಂದದ್ದು. ಸ್ವಾತಂತ್ರ್ಯದ ನಂತರ ಭಾರತ ತನ್ನ ವಿದೇಶಾಂಗ ನೀತಿಯನ್ನು ಆದರ್ಶವಾದದ ಮೇಲೆ ಕಟ್ಟಿಕೊಂಡಿತ್ತು.

ಏಷ್ಯಾದ ರಾಷ್ಟ್ರಗಳು ಒಟ್ಟಾಗಿ ಬೆಳೆಯಬೇಕು, ಪರಸ್ಪರ ಬೆಂಬಲಿಸಬೇಕು ಎಂಬ ನಂಬಿಕೆ ಪ್ರಥಮ ಪ್ರಧಾನಿ ನೆಹರೂ ಚಿಂತನೆಯಾಗಿತ್ತು. ಚೀನಾವನ್ನು ಎದುರಾಳಿಯಾಗಿ ಅಲ್ಲ, ಸಹಯೋಗಿಯಾಗಿ ನೋಡುವ ರಾಜತಾಂತ್ರಿಕ ದೃಷ್ಟಿ ಅವರದ್ದಾಗಿತ್ತು. ಆ ಮನೋಭಾವದಿಂದಲೇ ಭಾರತ, ಚೀನಾಗೆ ಜಾಗತಿಕ ವೇದಿಕೆಯಲ್ಲಿ ಮಾನ್ಯತೆ ಸಿಗಬೇಕು ಎಂದು ಬಲವಾಗಿ ಬೆಂಬಲಿಸಿತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಶಾಶ್ವತ ಸದಸ್ಯನಾಗಿ ನೆಲೆವೂರಲು, ಭಾರತದ ರಾಜತಾಂತ್ರಿಕ ಬೆಂಬಲ ಪ್ರಮುಖ ಕಾರಣ. ಭಾರತ ಚೀನಾವನ್ನು ಜಾಗತಿಕ ವ್ಯವಸ್ಥೆಯೊಳಗೆ ತರಲು ಕೈಜೋಡಿಸಿತು. ಆದರೆ ಚೀನಾ, ಕೆಲವೇ ವರ್ಷಗಳಲ್ಲಿ ಭಾರತದ ಗಡಿಯಲ್ಲಿ ತನ್ನ ನಿಜ ರೂಪ ತೋರಿಸಿತು.

1962ರ ಚೀನಾ-ಭಾರತ ಯುದ್ಧವು ಕೇವಲ ದೇಶದ ಸೋಲಲ್ಲ, ಸೈನಿಕರ ಸೋಲಲ್ಲ. ಅದು ಭಾರತದ ವಿದೇಶಾಂಗ ನೀತಿಗೆ ತಗುಲಿದ ಭಾರಿ ಹೊಡೆತವಾಗಿತ್ತು. ಹಿಂದಿ ಚೀನಿ ಭಾಯಿ ಭಾಯಿ ಎಂಬ ವಿಶ್ವಾಸ, ಹಿಮಾಲಯದ ಗಡಿಯಲ್ಲಿ ಕುಸಿದು ಬಿದ್ದಿತು. ನೆಹರೂ ವೈಯಕ್ತಿಕವಾಗಿಯೂ ರಾಜಕೀಯವಾಗಿಯೂ ಆ ಆಘಾತದಿಂದ ತೀವ್ರವಾಗಿ ನಲುಗಿದರು.

ಇದನ್ನೂ ಓದಿ: Leena Joshi Column: ಭಾರತ ಫೈಲ್‌ ನೋಡುತ್ತಿರುವಾಗ ಚೀನಾ ಫ್ಲೈಓವರ್‌ ಮುಗಿಸಿತು !

ಅನೇಕ ಇತಿಹಾಸಕಾರರ ಅಭಿಪ್ರಾಯದ ಪ್ರಕಾರ, 1962ರ ಚೀನಾದ ದಾಳಿಯ ಆಘಾತದಿಂದ ಅವರು ಸಂಪೂರ್ಣ ಚೇತರಿಸಿಕೊಳ್ಳಲಿಲ್ಲ. ಆ ಯುದ್ಧವು ಅವರ ರಾಜಕೀಯ ಆತ್ಮವಿಶ್ವಾಸಕ್ಕೂ ಆಳವಾದ ಪೆಟ್ಟು ಕೊಟ್ಟಿತ್ತು. ಭಾರತಕ್ಕೆ ಅದು ಒಂದು ರಾಷ್ಟ್ರೀಯ ಪಾಠವಾಗಿತ್ತು- ಅಂತರ ರಾಷ್ಟ್ರೀಯ ರಾಜಕೀಯದಲ್ಲಿ ಶಾಶ್ವತ ಸ್ನೇಹಿತರಿಲ್ಲ, ಶಾಶ್ವತ ಶತ್ರುಗಳಿಲ್ಲ - ಶಾಶ್ವತ ಹಿತಾಸಕ್ತಿಗಳು ಮಾತ್ರ ಇವೆ.

ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ) ರಾಷ್ಟ್ರಗಳ ನಡುವೆ ಡಾಲರ್‌ಗೆ ಪರ್ಯಾಯ ಹಣಕಾಸು ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕಲ್ಪನೆ ಮೇಲ್ನೋಟಕ್ಕೆ ಆಕರ್ಷಕವಾಗಿದೆ. ಆದರೆ ಭಾರತದ ದೃಷ್ಟಿಯಲ್ಲಿ ಇದು ಕೇವಲ ಆರ್ಥಿಕ ವಿಚಾರವಲ್ಲ; ಇದು ಶಕ್ತಿಯ ಸಮತೋಲನದ ಪ್ರಶ್ನೆ.

ಚೀನಾ ಬ್ರಿಕ್ಸ್ ಕರೆನ್ಸಿಯಲ್ಲಿ ಪ್ರಭಾವ ಸಾಧಿಸಬಹುದು ಎಂಬ ಭಾರತದ ಆತಂಕದ ಮೂಲ ಕಾರಣ ಚೀನಾದ ಜಿಡಿಪಿ ದೊಡ್ಡದು ಎನ್ನುವುದಲ್ಲ. ಅದರ ಹಿಂದೆ ಆರ್ಥಿಕ ಶಕ್ತಿ, ಉತ್ಪಾದನಾ ಸಾಮರ್ಥ್ಯ, ವಿದೇಶಿ ವಿನಿಮಯ ಸಂಗ್ರಹ, ಜಾಗತಿಕ ವ್ಯಾಪಾರ ನಿಯಂತ್ರಣ, ಬ್ಯಾಂಕಿಂಗ್ ಪ್ರಭಾವ, ರಾಜಕೀಯ ಪ್ರಭಾವ ಎಲ್ಲವೂ ಸೇರಿವೆ.

ಮೊದಲನೆಯದಾಗಿ, ಚೀನಾದ ಆರ್ಥಿಕತೆ ಬ್ರಿಕ್ಸ್ ದೇಶಗಳಲ್ಲಿ ಅತ್ಯಂತ ದೊಡ್ಡದು. ಚೀನಾದ ಜಿಡಿಪಿ ಭಾರತದ ಜಿಡಿಪಿಗಿಂತ 4.5 ಪಟ್ಟು ಹೆಚ್ಚು. ಜಾಗತಿಕ ಉತ್ಪಾದನಾ ಕ್ಷೇತ್ರದಲ್ಲಿ ಚೀನಾದ ಪ್ರಭಾವ ಅಪಾರ. ವಿಶ್ವದ ಬಹುತೇಕ ದೇಶಗಳು ಮೇಡ್ ಇನ್ ಚೀನಾ ಉತ್ಪನ್ನಗಳ ಮೇಲೆ ಅವಲಂಬಿತ ವಾಗಿವೆ.

ಹಾಗಾಗಿ ಬ್ರಿಕ್ಸ್ ದೇಶಗಳ ನಡುವೆ ಸಾಮಾನ್ಯ ಕರೆನ್ಸಿ ಬಂದರೆ, ಹೆಚ್ಚು ವ್ಯಾಪಾರ ನಡೆಸುವ ದೇಶಕ್ಕೆ ಸ್ವಾಭಾವಿಕವಾಗಿ ಹೆಚ್ಚು ಪ್ರಭಾವ ಸಿಗುತ್ತದೆ. ಇಂದು ಅಮೆರಿಕನ್ ಡಾಲರ್ ಶಕ್ತಿಶಾಲಿಯಾಗಿರಲು ಅಮೆರಿಕಾದಆರ್ಥಿಕತೆ, ಸೈನಿಕ ಶಕ್ತಿ ಮತ್ತು ಜಾಗತಿಕ ವ್ಯಾಪಾರದ ಕಾರಣ. ಅದೇ ರೀತಿಯಲ್ಲಿ ಬ್ರಿಕ್ಸ್ ಕರೆನ್ಸಿಯಲ್ಲಿ ಚೀನಾ ಪ್ರಮುಖ ಸ್ಥಾನ ಪಡೆಯುವುದು ನಿಸ್ಸಂದೇಹ.

ಎರಡನೆಯದಾಗಿ, ಚೀನಾದ ಬಳಿ ಬಹಳ ದೊಡ್ಡ ವಿದೇಶಿ ವಿನಿಮಯ ಸಂಗ್ರಹ (Foreign Exchange Reserves) ಇದೆ. ಜಾಗತಿಕ ಬ್ಯಾಂಕಿಂಗ್ ಮತ್ತು ಸಾಲ ವ್ಯವಸ್ಥೆಯಲ್ಲಿ ಚೀನಾ ಈಗಾಗಲೇ ಅನೇಕ ದೇಶಗಳಿಗೆ ಸಾಲ ನೀಡುತ್ತಿದೆ. Belt and Road Initiative ಮೂಲಕ ಚೀನಾ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಅನೇಕ ದೇಶಗಳಲ್ಲಿ ಬಂದರು, ರಸ್ತೆ, ರೈಲು ಮತ್ತು ಮೂಲ ಸೌಕರ್ಯಗಳಲ್ಲಿ ಹೂಡಿಕೆ ಮಾಡಿದೆ. ಹಣ ಕೊಡುವ ದೇಶದ ಮಾತಿಗೆ ಹೆಚ್ಚು ತೂಕ ಇರುತ್ತದೆ.

ಮೂರನೆಯದಾಗಿ, ಚೀನಾದ ಉತ್ಪಾದನಾ ಸಾಮರ್ಥ್ಯವೇ ಅದರ ನಿಜವಾದ ಶಕ್ತಿ. ವಿಶ್ವದ ಅನೇಕ ಕಂಪನಿಗಳು ತಮ್ಮ ಉತ್ಪಾದನೆಯನ್ನು ಚೀನಾದಲ್ಲಿ ಮಾಡಿಸುತ್ತವೆ. ಯಾಕೆಂದರೆ ಅಲ್ಲಿ ದೊಡ್ಡ ಪ್ರಮಾಣದ ಕಾರ್ಖಾನೆಗಳಿವೆ, ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಸಾಧ್ಯ, ವೇಗವಾದ ಸರಬರಾಜು ವ್ಯವಸ್ಥೆಯಿದೆ,

ಕಮ್ಯೂನಿಸ್ಟ್ ಸರ್ಕಾರದ ಸಂಪೂರ್ಣ ಬೆಂಬಲವಿದೆ ಬ್ರಿಕ್ಸ್ ದೇಶಗಳ ಆರ್ಥಿಕತೆಗಳು ಪರಸ್ಪರ ಬಹಳ ಭಿನ್ನವಾಗಿವೆ. ಯುರೋಪಿನ ಯೂರೋ ಕರೆನ್ಸಿ ಯಶಸ್ವಿಯಾಗಲು ಹಲವು ದಶಕಗಳ ಸಮನ್ವಯ ಬೇಕಾಯಿತು. ಬ್ರಿಕ್ಸ್ ದೇಶಗಳಲ್ಲಿ, ಭಾರತದ ಆರ್ಥಿಕತೆ ಸೇವಾ ಕ್ಷೇತ್ರದ ಮೇಲೆ ಹೆಚ್ಚು ಅವಲಂಬಿತ ವಾಗಿದೆ.

ರಷ್ಯಾ ತೈಲ ಮತ್ತು ಇಂಧನದ ಮೇಲೆ ಅವಲಂಬಿತವಾಗಿದೆ. ಚೀನಾ ಉತ್ಪಾದನಾ ಮತ್ತು ರಫ್ತು ಆಧಾರಿತ ಆರ್ಥಿಕತೆಯಾಗಿದೆ. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಬೇರೆ ರೀತಿಯ ಆರ್ಥಿಕ ಸಮಸ್ಯೆ ಗಳನ್ನು ಹೊಂದಿವೆ. ಒಂದು ದೇಶ ಉತ್ಪಾದನೆ ಮತ್ತು ರಫ್ತಿನಲ್ಲಿ ಪ್ರಬಲವಾದರೆ, ಅದರ ಕರೆನ್ಸಿಗೂ ಜಾಗತಿಕ ಪ್ರಭಾವ ಬರುತ್ತದೆ. ಅದಕ್ಕಾಗಿಯೇ ಭಾರತ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದೆ. ಭಾರತ ಇನ್ನೂ ಜಾಗತಿಕ ಡಾಲರ್ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದೆ.

ಭಾರತದ ವ್ಯಾಪಾರ, ವಿದೇಶಿ ಹೂಡಿಕೆ, ತಂತ್ರಜ್ಞಾನ ಮತ್ತು ರಫ್ತು ಮಾರುಕಟ್ಟೆಗಳು ಅಮೆರಿಕಾ ಮತ್ತು ಯುರೋಪಿನೊಂದಿಗೆ ಗಟ್ಟಿಯಾಗಿ ಸಂಪರ್ಕ ಹೊಂದಿವೆ.

ಭಾರತ ಡಾಲರ್ ವಿರುದ್ಧ ತೀವ್ರ ನಿಲುವು ತೆಗೆದುಕೊಂಡರೆ:

1. ವಿದೇಶಿ ಹೂಡಿಕೆದಾರರಲ್ಲಿ ಆತಂಕ ಉಂಟಾಗಬಹುದು. 2. ರೂಪಾಯಿ ಮೌಲ್ಯ ಅಸ್ಥಿರ ವಾಗಬಹುದು. 3. ಆರ್ಥಿಕ ಒತ್ತಡ.

ಭಾರತ ಬ್ರಿಕ್ಸ್ ಜೊತೆಗೂ ಕೆಲಸ ಮಾಡುತ್ತದೆ, ಅದೇ ಸಮಯದಲ್ಲಿ ಅಮೆರಿಕಾ, ಯುರೋಪ್, ರಷ್ಯಾ ಮತ್ತು ಮಧ್ಯಪ್ರಾಚ್ಯದ ದೇಶಗಳ ಜೊತೆಯೂ ಉತ್ತಮ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಭಾರತ ಯಾವುದೇ ಒಂದು ಶಕ್ತಿಯ ಬ್ಲಾಕ್‌ಗೆ ಸಂಪೂರ್ಣವಾಗಿ ಸೇರಲು ಇಷ್ಟಪಡುವುದಿಲ್ಲ.

ಅತ್ಯಂತ ಮುಖ್ಯವಾಗಿ, ಭಾರತದ ನಿಜವಾದ ಗುರಿ ಬ್ರಿಕ್ಸ್ ಕರೆನ್ಸಿ ಅಲ್ಲ; ರೂಪಾಯಿಯನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುವುದು. ಭಾರತ ಈಗಾಗಲೇ ಕೆಲವು ದೇಶಗಳೊಂದಿಗೆ ರೂಪಾಯಿಯಲ್ಲಿ ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದೆ. ಅಂದರೆ, ಭಾರತ ತನ್ನದೇ ಕರೆನ್ಸಿಯ ಪ್ರಭಾವವನ್ನು ಹೆಚ್ಚಿಸಲು ಬಯಸುತ್ತದೆ.

ಇನ್ನು ಭಾರತ ಯಾವಾಗ ಚೀನಾದಂತೆ ಆಗಬಹುದು? ಇದಕ್ಕೆ ಉತ್ತರ ಸಮಯ + ನೀತಿ + ಶಿಸ್ತು ಎಂಬ ಮೂರು ಅಂಶಗಳಲ್ಲಿ ಇದೆ. ಚೀನಾ ಕಳೆದ 40 ವರ್ಷಗಳಿಂದ ನಿರಂತರವಾಗಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿತು, ದೊಡ್ಡ ಮಟ್ಟದ ಮೂಲಸೌಕರ್ಯ ನಿರ್ಮಿಸಿತು, ಶಿಕ್ಷಣ ಮತ್ತು ತಂತ್ರಜ್ಞಾನ ದಲ್ಲಿ ಹೂಡಿಕೆ ಮಾಡಿತು, ರಫ್ತಿಗೆ ಒತ್ತು ನೀಡಿತು, ಉತ್ಪಾದನಾ ವಲಯವನ್ನು ಬಲಪಡಿಸಿತು. ಆದರೆ ಭಾರತ ಚೀನಾದ ಮಟ್ಟಕ್ಕೆ ಬರಬೇಕಾದರೆ ಕೆಲವು ಪ್ರಮುಖ ಬದಲಾವಣೆಗಳು ಅಗತ್ಯ. ಇಂದು ಭಾರತ ಸೇವಾ ಕ್ಷೇತ್ರದಲ್ಲಿ ಬಲವಾಗಿದೆ. ಆದರೆ ಉತ್ಪಾದನಾ ಕ್ಷೇತ್ರದಲ್ಲಿ ಚೀನಾಗಿಂತ ಸಾಕಷ್ಟು ಹಿಂದಿದೆ. ಮೇಕ್ ಇನ್ ಇಂಡಿಯಾ ಯಶಸ್ವಿಯಾಗಬೇಕು. ‌

ಮೊಬೈಲ್, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಯಂತ್ರೋಪಕರಣಗಳು ಭಾರತದ ದೊಡ್ಡ ಪ್ರಮಾಣ ದಲ್ಲಿ ಉತ್ಪಾದನೆಯಾಗಬೇಕು. ಇಂದು ಕೆಲವು ದೇಶಗಳೊಂದಿಗೆ ರೂಪಾಯಿಯಲ್ಲಿ ವ್ಯಾಪಾರ ಆರಂಭವಾಗಿದೆ. ಇದು ಮುಂದಿನ ಹಂತದಲ್ಲಿ ಭಾರತಕ್ಕೆ ದೊಡ್ಡ ಆರ್ಥಿಕ ಸ್ವಾತಂತ್ರ್ಯ ಕೊಡಬಹುದು.

ಬ್ರಿಕ್ಸ್ ಒಳಗೆ ಚೀನಾ ಅತಿದೊಡ್ಡ ಆರ್ಥಿಕ ಶಕ್ತಿ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಕರೆನ್ಸಿ ಹುಟ್ಟಿದರೆ, ಅದು ಬ್ರಿಕ್ಸ್ ಕರೆನ್ಸಿ ಎಂಬ ಹೆಸರಿಟ್ಟಿದ್ದರೂ ಅದರ ನೆರಳಿನಲ್ಲಿ ಚೀನಾದ ಪ್ರಭಾವ ಹೆಚ್ಚುವ ಸಾಧ್ಯತೆ ಇದೆ. ಅದು ನಿಧಾನವಾಗಿ ಚೀನಾದ ಹಣಕಾಸು ಪ್ರಾಬಲ್ಯಕ್ಕೆ ದಾರಿ ಮಾಡಿಕೊಡ ಬಹುದು. ಒಮ್ಮೆ ರಾಜತಾಂತ್ರಿಕವಾಗಿ ಚೀನಾಗೆ ಜಾಗತಿಕ ಸ್ಥಾನ ಬಲಪಡಿಸಲು ಸಹಾಯ ಮಾಡಿದ್ದೇವೆ. ನಂತರ ಅದೇ ಚೀನಾ ನಮ್ಮ ಗಡಿಗೆ ಬಂದು ವಶಪಡಿಸಿಕೊಂಡ ಭಾಗಗಳನ್ನು ಇನ್ನೂ ನಮಗೆ ಹಸ್ತಾಂತರಿಸಿಲ್ಲ. ಭಾರತದ ಗಡಿಭಾಗಗಳಲ್ಲಿ ನಿರಂತರವಾಗಿ ಕಪಟ ತಂತ್ರಗಳನ್ನು ಮತ್ತು ಆಕ್ರಮಣಶೀಲತೆಯನ್ನು ಬಳಸುತ್ತಿದೆ.

1962ರ ಯುದ್ಧದಿಂದ ಹಿಡಿದು 2020ರ ಲಡಾಖ್‌ನ ಗಲ್ವಾನ್ ಬಿಕ್ಕಟ್ಟಿನವರೆಗೆ, ಹಾಗೂ ಶಕ್ಸ್‌ಗಮ್ ಕಣಿವೆ ಮತ್ತು ಅರುಣಾಚಲ ಪ್ರದೇಶದ ಮೇಲಿನ ಹಕ್ಕುಗಳವರೆಗಿನ ಚೀನಾದ ಅಕ್ರಮ ಚಟುವಟಿಕೆ ಗಳು ಭಾರತದ ಸಾರ್ವಭೌಮತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಇತ್ತೀಚಿನ ಉಪಗ್ರಹ ಚಿತ್ರಗಳ ಪ್ರಕಾರ, ಚೀನಾವು ಲೋವರ್ ಶಕ್ಸ್‌ಗಮ್ ಕಣಿವೆಯಲ್ಲಿ ರಸ್ತೆ ಜಾಲಗಳು, ಸುರಂಗ ಮಾರ್ಗಗಳು ಮತ್ತು ಸೇನಾ ತರಬೇತಿ ಕೇಂದ್ರಗಳನ್ನು ತೀವ್ರಗತಿಯಲ್ಲಿ ವಿಸ್ತರಿಸುತ್ತಿದೆ. ಅಲ್ ಪಾಸ್ ಮೂಲಕ ರಸ್ತೆಗಳನ್ನು ನಿರ್ಮಿಸುವ ಮೂಲಕ ಚೀನಾ ಸೈನ್ಯವು ಭಾರತದ ನಿಯಂತ್ರಣದಲ್ಲಿರುವ ಸಿಯಾಚಿನ್ ಗ್ಲೇಸಿಯರ್‌ನ ಭಾಗಕ್ಕೆ ತೀರಾ ಹತ್ತಿರದಲ್ಲಿದೆ.

ಚೀನಾ ಒಂದೇ ಬಾರಿಗೆ ದೊಡ್ಡ ಯುದ್ಧ ಘೋಷಿಸದೆ, ಸಣ್ಣ ಸಣ್ಣ ಹಂತಗಳಲ್ಲಿ ಗಡಿಯನ್ನು ಅತಿಕ್ರಮಿಸುವ ಗ್ರೇ-ಝೋನ್ ಯುದ್ಧತಂತ್ರ ಬಳಸುತ್ತಿದೆ. ಶಕ್ಸ್‌ಗಮ್ ಕಣಿವೆ ಮತ್ತು ಅಕ್ಸಾಯ್ ಚಿನ್ ಮೂಲಕ ಲಡಾಖ್ ಅನ್ನು ಸುತ್ತುವರಿಯುವ ಚೀನಾದ ಮೂಲ ಸೌಕರ್ಯಗಳು, ಭವಿಷ್ಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಭಾರತದ ವಿರುದ್ಧ ಯುದ್ಧ ಸಾರುವ ಕಾರ್ಯತಂತ್ರದ ಭಾಗವಾಗಿದೆ.

ಹಾಗಾಗಿ ಈಗ ಆರ್ಥಿಕ ವೇದಿಕೆಯಲ್ಲಿ ಮತ್ತೊಮ್ಮೆ ಚೀನಾದ ಪ್ರಭಾವ ಸಂಸ್ಥಾಪಿತಗೊಳಿಸುವ ತಪ್ಪನ್ನು ಭಾರತ ಮಾಡುವುದಿಲ್ಲ. ಇದು ಇತಿಹಾಸದಿಂದ ಕಲಿತ ಎಚ್ಚರಿಕೆ. ಒಮ್ಮೆ ಆದರ್ಶವಾದ ಭಾರತದ ವಿದೇಶಾಂಗ ನೀತಿಯನ್ನು ಮುನ್ನಡೆಸಿತು. ಇಂದು ವಾಸ್ತವವಾದ ಅದನ್ನು ಮುನ್ನಡೆಸು ತ್ತಿದೆ.

ಒಮ್ಮೆ ಭಾರತ ಏಷ್ಯನ್ ಸಹೋದರತ್ವದಲ್ಲಿ ನಂಬಿಕೆ ಇಟ್ಟಿತ್ತು. ಇಂದು ಭಾರತ ತಂತ್ರಜ್ಞಾನದ ಸ್ವಾಯತ್ತತೆಯಲ್ಲಿ ನಂಬಿಕೆ ಇಟ್ಟಿದೆ. ಭಾರತ ಬ್ರಿಕ್ಸ್‌ನ ಜೊತೆಯಲ್ಲಿದೆ. ಆದರೆ ಚೀನಾದ ನೆರಳಿ ನಲ್ಲಲ್ಲ. ಭಾರತ ಸಹಕಾರ ಬಯಸುತ್ತದೆ. ಆದರೆ ಪ್ರಾಬಲ್ಯ ಒಪ್ಪುವುದಿಲ್ಲ. ಸ್ಮೃತಿಯನ್ನು ಮರೆತು ಬದುಕಲು ಸಾಧ್ಯವಿಲ್ಲ