Prof R G Hegde Column: ವಾಲ್ಮೀಕಿ ರಾಮಾಯಣ ನಿಜಕ್ಕೂ ಹೇಳುವುದು ಏನನ್ನು...?
ಮನುಷ್ಯನು ರಾಗ-ದ್ವೇಷಗಳಿಲ್ಲದೆ ನೈತಿಕ ಕ್ರಿಯೆಯೊಂದರಲ್ಲಿ ತನ್ನನ್ನು ತೊಡಗಿಸಿಕೊಂಡು, ದೇವರು ವಹಿಸಿದ ಕರ್ಮವನ್ನು ನಿಷ್ಕಾಮಕರ್ಮ ಭಾವದಿಂದ ನಿರ್ವಹಿಸಿದಾಗ ಆತ ಧರ್ಮವಂತನಾಗುತ್ತಾನೆ, ಅವನ ಜೀವನ ಸಾರ್ಥಕವಾಗುತ್ತದೆ" ಎಂದು ಹೇಳುವ ಕೃತಿ ಮಹಾಭಾರತ. ಆದರೆ, ರಾಮಾಯಣವು ಒಂದು ಭಾವನಾಪ್ರಧಾನ ಕೃತಿ. ಅದು ದಶರಥನ ದುಃಖದೊಂದಿಗೆ ಆರಂಭಗೊಂಡು, ರಾಮನ ದುಃಖದೊಂದಿಗೆ ಮುಗಿಯುತ್ತದೆ.

-

ಕಥಾಕಾಲಕ್ಷೇಪ
ಪ್ರೊ.ಆರ್.ಜಿ.ಹೆಗಡೆ
ವಾಲ್ಮೀಕಿಯ ಪ್ರಕಾರ, ರಾಮನ ಶ್ರೇಷ್ಠತೆ ಅಡಗಿರುವುದು, ತನ್ನ ಶ್ರೇಷ್ಠ ವೈಯಕ್ತಿಕ ಮೌಲ್ಯ ಗಳನ್ನು ಸಾರ್ವಜನಿಕ ಆಡಳಿತಕ್ಕೆ ತಂದಿಡುವುದರಲ್ಲಿ. ಅಷ್ಟಕ್ಕೂ, ಇಂಥ ಮೌಲ್ಯಗಳು ಸಾರ್ವಜನಿಕ ಜೀವನವನ್ನು ನಿರ್ದೇಶಿಸಿದಾಗಲೇ ‘ರಾಮರಾಜ್ಯ’ ಸೃಷ್ಟಿಯಾಗುವುದು. ‘ರಾಮರಾಜ್ಯ’ ಎಂದರೇನು ಎನ್ನುವುದರ ಕುರಿತಾದ ಒಂದಿಷ್ಟು ಹೊಳಹುಗಳು ರಾಮಾಯಣದಲ್ಲಿ ನಮಗೆ ಅಲ್ಲಲ್ಲಿ ಕಾಣಸಿಗುತ್ತವೆ.
ರಾಮಾಯಣ ಮತ್ತು ಮಹಾಭಾರತ ನಮ್ಮ ಸಂಸ್ಕೃತಿಯ ಎರಡು ಕಣ್ಣುಗಳು. ವೈವಿಧ್ಯಮಯ ಪ್ರಸಂಗಗಳು ಮತ್ತು ಉಪಕಥೆಗಳನ್ನು ಹರವಿಡುವ ಮೂಲಕ ಇವು ಭಾರತೀಯ ಜೀವನ ದೃಷ್ಟಿ ಯನ್ನು ಹಾಗೂ ಮೌಲ್ಯಗಳ ಚೌಕಟ್ಟನ್ನು ಜಿಜ್ಞಾಸುಗಳಿಗೆ ಮನವರಿಕೆ ಮಾಡಿಕೊಟ್ಟವು ಎನ್ನಬೇಕು.
ಕೇಂದ್ರಭಾಗದಲ್ಲಿ ವಿಭಿನ್ನ ಸಂದೇಶಗಳನ್ನು ಇಟ್ಟುಕೊಂಡು ಸುತ್ತಲೂ ಕಥೆಯನ್ನು ಹೆಣೆದು ರಚಿಸಲ್ಪಟ್ಟಂಥ ಅನನ್ಯ ಕೃತಿಗಳಿವು. ಮಹಾಭಾರತವು ಒಂದು ಬೃಹತ್ ಹಾಸಿನ ಕಥೆಯನ್ನು ಮತ್ತು ಒಂದು ನಾಗರಿಕತೆಯನ್ನು ಅಂತ್ಯವಾಗಿಸುವ ಯುದ್ಧವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಬದುಕಿನ ಅರ್ಥವಂತಿಕೆಯನ್ನು (ಭಗವದ್ಗೀತೆಯ ಮೂಲಕ) ವಿವರಿಸಿ ಹೇಳುವ ಮಹಾಕಾವ್ಯ. “ಮಾನವ ಜೀವನ ಅಸಂಗತವಲ್ಲ ಅಥವಾ ಅರ್ಥಹೀನವಾದುದಲ್ಲ.
ಮನುಷ್ಯನು ರಾಗ-ದ್ವೇಷಗಳಿಲ್ಲದೆ ನೈತಿಕ ಕ್ರಿಯೆಯೊಂದರಲ್ಲಿ ತನ್ನನ್ನು ತೊಡಗಿಸಿಕೊಂಡು, ದೇವರು ವಹಿಸಿದ ಕರ್ಮವನ್ನು ನಿಷ್ಕಾಮಕರ್ಮ ಭಾವದಿಂದ ನಿರ್ವಹಿಸಿದಾಗ ಆತ ಧರ್ಮವಂತ ನಾಗುತ್ತಾನೆ, ಅವನ ಜೀವನ ಸಾರ್ಥಕವಾಗುತ್ತದೆ" ಎಂದು ಹೇಳುವ ಕೃತಿ ಮಹಾಭಾರತ. ಆದರೆ, ರಾಮಾಯಣವು ಒಂದು ಭಾವನಾಪ್ರಧಾನ ಕೃತಿ. ಅದು ದಶರಥನ ದುಃಖದೊಂದಿಗೆ ಆರಂಭ ಗೊಂಡು, ರಾಮನ ದುಃಖದೊಂದಿಗೆ ಮುಗಿಯುತ್ತದೆ.
ವಿರಹ, ವಿದಾಯ, ಉತ್ಕಟ ಪ್ರೇಮ, ಪ್ರೀತಿ, ತ್ಯಾಗ ಇಂಥ ಮಹೋನ್ನತ ಭಾವನೆಗಳನ್ನು ಕೆರಳಿಸುತ್ತ, ಕಣ್ಣೀರಿನಲ್ಲಿ ಓದುಗನನ್ನು ಮುಳುಗೇಳಿಸುತ್ತ ಓದಿಸಿಕೊಳ್ಳುವ ಕೃತಿ ರಾಮಾಯಣ. ಆದರೆ ಅದರ ಸಾಮಾಜಿಕ/ರಾಜಕೀಯ ‘ಒಳಪಾಠ’, ಸಂದೇಶ ಬೇರೆಯೇ ಇದೆ. ಮಹಾನ್ ವ್ಯಕ್ತಿತ್ವವಾದ ಪುರುಷೋತ್ತಮ ರಾಮನನ್ನು ಮುನ್ನೆಲೆಯಲ್ಲಿಟ್ಟುಕೊಂಡು ಕಥೆ ಹೇಳುವ ರಾಮಾಯಣವು, ವೈಯಕ್ತಿಕ, ಸಾಮಾಜಿಕ ಹಾಗೂ ರಾಜಕೀಯ ಮೌಲ್ಯಗಳನ್ನು ಘನೀಕರಿಸಿ ಸಮಾಜಕ್ಕೆ ನೀಡುವ ಕೃತಿ (ಮೌಲ್ಯಗಳ ವ್ಯವಸ್ಥೆ ಎಂದರೆ ಅದು ಭಾವನಾತ್ಮಕ ವಿಷಯವೇ! ಹಾಗಾಗಿಯೇ ಭಾವನಾತ್ಮಕ ಕಥೆಯೊಂದನ್ನು ಹೇಳುತ್ತದೆ ರಾಮಾಯಣ).
ಬಹುಶಃ ರಾಮಾಯಣವು ಹುಟ್ಟಿಕೊಳ್ಳುವುದಕ್ಕೂ ಮೊದಲಿದ್ದ ಕಾಲಘಟ್ಟದಲ್ಲಿ ಕುಟುಂಬ, ದೇಶ, ಅರಸೊತ್ತಿಗೆ, ಅದರ ರಾಜಕೀಯ ಮತ್ತು ನೈತಿಕ ಕರ್ತವ್ಯಗಳು ಇತ್ಯಾದಿ ಪರಿಕಲ್ಪನೆಗಳು ಹುಟ್ಟಿ ಕೊಂಡಿರಲಿಲ್ಲ. ರಾಜ್ಯಶಾಸ್ತ್ರಜ್ಞ ಥಾಮಸ್ ಹಾಬ್ಸ್ ಹೇಳುವಂತೆ, ಅದು ಸಮಾಜದಲ್ಲಿ ಅರಾಜಕತೆ, ಕ್ರೌರ್ಯ, ಹಿಂಸೆ ವಿಜೃಂಭಿಸಿದ ಸಮಯ.
ಅದು ದೈಹಿಕ ಶಕ್ತಿ ಇದ್ದವನೇ ಅರಸನಾಗಿದ್ದ, ಆತ ಹೇಳಿದ ಮಾತೇ ಕಾನೂನಾಗಿದ್ದ ಕಾಲ. ವೈಯಕ್ತಿಕ, ಸಾಮಾಜಿಕ ಹಾಗೂ ರಾಜಕೀಯ ಬದುಕೆಂಬುದು ಮೌಲ್ಯಗಳಿಂದ ವಂಚಿತವಾಗಿದ್ದ ಕಾಲವದು. ಇಂಥ ಅರಾಜಕತೆಯಿಂದ ಬೇಸತ್ತ ಜನರು ಕ್ರಮೇಣ ತಾವಾಗಿಯೇ ಮುಂದೆ ಬಂದು ಸ್ವಸ್ಥ ಸಮಾಜ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಸೃಷ್ಟಿಸಿಕೊಂಡರು.
ಈ ಹಿನ್ನೆಲೆಯಲ್ಲೇ ಆದರ್ಶ ವ್ಯಕ್ತಿ/ಕುಟುಂಬ/ದೇಶ ಹೇಗಿರಬೇಕು ಎಂಬ ಚಿಂತನೆಗಳು ಆರಂಭ ವಾದವು. ಹೀಗೆ ಸಾವಿರಾರು ವರ್ಷಗಳ ಹಿಂದೆಯೇ ಆದರ್ಶ ದೇಶವೊಂದರ (ಆಂದರೆ ‘ರಾಮರಾಜ್ಯ’ ದ) ಕುರಿತಾದ ಚೌಕಟ್ಟೊಂದನ್ನು ಹಾಕಿಕೊಟ್ಟ, ಹಾಗೆಯೇ ಮಾನವೀಯವಾದ, ಆದರ್ಶಮಯ ವಾದ ವೈಯಕ್ತಿಕ, ಸಾಮಾಜಿಕ, ರಾಜಕೀಯ ಮೌಲ್ಯಗಳ ವ್ಯವಸ್ಥೆಯೊಂದನ್ನು ಅದರ ಶ್ರೇಷ್ಠ ನೆಲೆಯಲ್ಲಿ ಕಲ್ಪಿಸಿಕೊಂಡ ಕೃತಿಯೇ ರಾಮಾಯಣ.
ಅಂದಿನ ಕಾಲಘಟ್ಟದ ಗಹನವಾದ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ರಾಮಾಯಣ ಪ್ರಯತ್ನಿಸುತ್ತದೆ. ಉದಾಹರಣೆಗೆ, ಆದರ್ಶ ವ್ಯಕ್ತಿಯೊಬ್ಬ ಹೇಗಿರಬೇಕು? ಆತನ ಕುಟುಂಬ, ಸಮಾಜ ಹೇಗಿರಬೇಕು? ಆದರ್ಶ ಸತಿ-ಪತಿ, ಅಣ್ಣ-ತಮ್ಮಂದಿರ ಸಂಬಂಧ ಹೇಗಿರಬೇಕು? ಗೆಳೆತನ ಹೇಗಿರ ಬೇಕು? ಆದರ್ಶ ರಾಜ್ಯವೆಂದರೇನು? ಆದರ್ಶ ರಾಜ ಎಂದರೆ ಎಂಥ ಗುಣಗಳನ್ನು ಹೊಂದಿದವನು?- ಬಹುಶಃ ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ವಾಲ್ಮೀಕಿಯ ಬಯಕೆಯಿಂದಾಗಿ ರಾಮಾಯಣದ ಕಥಾನಕ (ನರೇಟಿವ್) ಹುಟ್ಟಿಕೊಂಡಿದ್ದು.
ಆದರ್ಶ ಜಗತ್ತೊಂದನ್ನು ಪರಿಕಲ್ಪಿಸುವ ಕನಸು ಮತ್ತು ಆ ಕನಸನ್ನು ಸಮಾಜದ ಮುಂದೆ ಒಂದು ಮಾದರಿಯಾಗಿ ಇಡುವ ಬಯಕೆ ವಾಲ್ಮೀಕಿಗೆ ಇತ್ತು ಎನಿಸುತ್ತದೆ. ಇಂಥದೆಲ್ಲ ಸಾಮಾಜಿಕ ಮತ್ತು ಸೃಜನಶೀಲ ಆಗ್ರಹಗಳ ಪರಿಣಾಮವೇ ‘ರಾಮಾಯಣ’.
ರಾಮಾಯಣ ಆರಂಭವಾಗುವುದು ಕೌಟುಂಬಿಕ ಮೌಲ್ಯಗಳ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಕೊಳ್ಳುವುದರ ಮೂಲಕ. ಅದು ಶುರುವಾಗುವುದು ಒಂದು ರಾಜಕುಟುಂಬದೊಳಗಿನ ತಲ್ಲಣದ ಕಥೆಯಾಗಿ. ದಶರಥ ಮಹಾರಾಜ ತನ್ನ ಕಿರಿಯ ಹೆಂಡತಿ ಕೈಕೇಯಿಗೆ ಒಂದು ಮಾತು ಕೊಟ್ಟಿದ್ದಾನೆ.
ಮೂಲತಃ ಅವಳೇನೂ ಕೆಟ್ಟವಳಲ್ಲ, ಆದರೆ ಬೇರೆಯವರ ಕುಚೋದ್ಯದಿಂದ ಪ್ರೇರಿತಳಾಗುವ ಅವಳು, ಸಮಯವನ್ನು ಬಳಸಿಕೊಂಡು ಗಂಡನಿಂದ ವರಗಳನ್ನು ಬೇಡುತ್ತಾಳೆ. ಅದೆಂದರೆ- ‘ರಾಮ ಕಾಡಿಗೆ ಹೋಗಬೇಕು, ಮಗ ಭರತ ರಾಜನಾಗಬೇಕು’. ಹೀಗೆ ಕೌಟುಂಬಿಕ ‘ರಾಜಕೀಯ’ ಆರಂಭ ವಾಗುತ್ತದೆ.
ದಶರಥ ಉಭಯಸಂಕಟದಲ್ಲಿ ಸಿಲುಕುತ್ತಾನೆ. ಆತ ತಾನು ಕೊಟ್ಟ ಮಾತಿಗೆ ವಿರುದ್ಧವಾಗಿ ಹೋಗಲಾರ, ಹಾಗಂತ ರಾಮಚಂದ್ರನನ್ನು ಕಾಡಿಗೆ ಅಟ್ಟಲಾರ. ವಿಷಯ ತಿಳಿದ ರಾಮನು ತಂದೆಯ ಮಾತಿಗೆ ಬದ್ಧನಾಗಿ ನಿಲ್ಲುತ್ತಾನೆ, ಕಾಡಿಗೆ ತೆರಳುತ್ತಾನೆ... ಹೀಗೆ ಒಂದು ಕುಟುಂಬದ ಒಳಗಿನ ತಲ್ಲಣದೊಂದಿಗೆ ಆರಂಭವಾಗುವ ರಾಮಾಯಣವು, ಕುಟುಂಬ ವ್ಯವಸ್ಥೆಯೊಳಗಿನ ಶ್ರೇಷ್ಠ ಮೌಲ್ಯಗಳನ್ನು ಕಲ್ಪಿಸಿಕೊಳ್ಳುತ್ತದೆ.
ಕಥೆಯು ಒಂದು ರಾಜಕುಟುಂಬದ ತಲ್ಲಣದ ಕುರಿತಾಗಿರಬೇಕು ಎಂದು ವಾಲ್ಮೀಕಿ ಯೋಚಿಸಿದ್ದಕ್ಕೆ ಬಹುಶಃ ಕಾರಣಗಳಿವೆ. ಅದೇನೆಂದರೆ- ವೈಯಕ್ತಿಕ/ಕೌಟುಂಬಿಕ ಮತ್ತು ರಾಜಕೀಯ ಮೌಲ್ಯ ಗಳೆಲ್ಲವೂ ನಿಜವಾಗಿಯೂ ಒಂದೇ, ಬೇರೆ ಆಗಿರಕೂಡದು. ವೈಯಕ್ತಿಕ ಮೌಲ್ಯಗಳ ವ್ಯವಸ್ಥೆಯೇ ರಾಜಕೀಯಕ್ಕೂ ಹರಡಿಕೊಂಡು ಸಮಗ್ರವಾಗಬೇಕು, ಅಷ್ಟೇ.
ಹೀಗಾಗಿ ಒಂದು ಕೌಟುಂಬಿಕ ಕಥೆಯಾಗಿ ಆರಂಭಗೊಳ್ಳುವ ರಾಮಾಯಣ, ಕ್ರಮೇಣ ಸಾರ್ವಜನಿಕ ವಾಗುತ್ತದೆ. ನೀತಿಯ, ಪ್ರೀತಿಯ ಕಥೆಯಾಗಿಯೇ ಮುಂದುವರಿಯುತ್ತ, ನಂತರ ಒಬ್ಬ ಆದರ್ಶ ರಾಜನ ಮತ್ತು ಆದರ್ಶ ಪ್ರಭುತ್ವದ (‘ರಾಮರಾಜ್ಯ’ದ) ಪರಿಕಲ್ಪನೆಯನ್ನು ಕಟ್ಟುತ್ತದೆ. ಬಹುಶಃ ಈ ಮೂಲಕ ರಾಮಾಯಣವು ನಮಗೆ ‘ಪುರುಷೋತ್ತಮ’ನಾದ ವ್ಯಕ್ತಿ ಹೇಗಿರಬೇಕು, ಎಂಥ ಮೌಲ್ಯಗಳನ್ನು ಹೊಂದಿರಬೇಕು ಮತ್ತು ಅಂಥ ಪುರುಷೋತ್ತಮನೇ ನಿಜವಾಗಿ ರಾಜನಾಗಬಲ್ಲ/ರಾಜನಾಗಬೇಕಾದ ವ್ಯಕ್ತಿ ಎಂಬುದನ್ನು ಹೇಳುತ್ತದೆ.
‘ಪುರುಷೋತ್ತಮ’ನ ವ್ಯಕ್ತಿತ್ವವನ್ನು ಸಮಗ್ರವಾಗಿ ಕಟ್ಟುವುದು ರಾಮಾಯಣದ ಗುರಿ. ಇಂಥ ವ್ಯಕ್ತಿಯು ಯುದ್ಧವಿದ್ಯೆಯಲ್ಲಷ್ಟೇ ಪ್ರವೀಣನಲ್ಲ, ಅದು ಆತನಿಗೆ ಬಂದೇ ಬರುತ್ತದೆ. ಶ್ರೀರಾಮನಿಗೆ ದಂಡನೆಯೂ ಚೆನ್ನಾಗಿಯೇ ಗೊತ್ತಿದೆ. ಆತನ ಬಾಣದ ಮುಂದೆ ಯಾರಿಗೂ ನಿಲ್ಲಲಾಗುವುದಿಲ್ಲ, ಆತನಿಗೆ ಸಿಟ್ಟು ಬಂದರೆ ಶರಧಿಯೂ ಹಿಂದೆ ಸರಿಯುತ್ತದೆ. ಆದರೆ, ಶ್ರೇಷ್ಠ ನಾಯಕನಾಗಬಲ್ಲವನಿ ಗೆ/ನಾಯಕನಾದವನಿಗೆ ಅಥವಾ ರಾಜನಾದವನಿಗೆ ಇದೇ (ಅಂದರೆ, ಹೆದರಿಸುವ ಅಥವಾ ಕೊಲ್ಲುವ ಶಕ್ತಿಯೇ) ಪ್ರಧಾನವಲ್ಲ.
ಅದು ರಾಜನೊಬ್ಬನ ವ್ಯಕ್ತಿತ್ವದ ಕೊನೆಯ ಅಸ್ತ್ರ. ಆತನಿಗೆ ಈ ಶಕ್ತಿ ಇರುವುದು/ಬೇಕಿರುವುದು- ಅನೀತಿ ಮತ್ತು ಅಧರ್ಮವನ್ನು ದಂಡಿಸಲು ಮಾತ್ರ. ಸೊಕ್ಕಿನಿಂದ ಮೆರೆಯುತ್ತಾ ಅನೀತಿಯಲ್ಲಿ ತೊಡಗಿರುವ ವಾಲಿಯಂಥ ರಾಜನನ್ನು ಅಥವಾ ರಾವಣನಂಥ ರಕ್ಕಸನನ್ನು ಕೊಲ್ಲಲು ಮಾತ್ರ. ರಾಮನಿಗೆ ‘ಕಾಂಟ್ರಾಸ್ಟ್’ ಆಗಿ ಅಂದರೆ ವಿರುದ್ಧವಾಗಿ ವಾಲಿ ಮತ್ತು ರಾವಣರನ್ನು ಚಿತ್ರಿಸುವುದರ ಮೂಲಕ ವಾಲ್ಮೀಕಿ ಈ ಮಾತನ್ನು ನಮ್ಮ ಮುಂದೆ ಸ್ಪಷ್ಟವಾಗಿ ಇಡುತ್ತಾರೆ.
ವಾಲಿಗೂ ರಾವಣನಿಗೂ ಘನತೆಯಿದೆ, ಚಕ್ರವರ್ತಿಯಾಗಬಲ್ಲ ಗುಣಗಳಿವೆ, ಜನರನ್ನು ಹತೋಟಿ ಯಲ್ಲಿರಿಸಬಹುದಾದ ಸಾಮರ್ಥ್ಯವಿದೆ. ಆದರೆ, ಅನೈತಿಕತೆ ಮತ್ತು ದರ್ಪಗಳೇ ಅವರ ವ್ಯಕ್ತಿತ್ವಗಳ ಕೊರತೆ. ಅನೈತಿಕತೆ ಮತ್ತು ದರ್ಪವನ್ನು ಹೊಂದಿದವನು ರಾಜನಾಗಲು ಅರ್ಹನಲ್ಲ. ಬಹುಶಃ ಇದನ್ನು ಹೇಳುವ ಸಲುವಾಗಿಯೇ ವಾಲ್ಮೀಕಿ ಮಹರ್ಷಿಯು ವಾಲಿ ಮತ್ತು ರಾವಣನನ್ನು ರಾಮನಿಂದ ಕೊಲ್ಲಿಸುವುದು.
ರಾಮನ ಗೆಲುವು- ಮೌಲ್ಯದ ಮತ್ತು ಧರ್ಮದ ಗೆಲುವು. ಹೀಗೆ ವಾಲ್ಮೀಕಿಯ ಪ್ರಕಾರ, ರಾಜನೊಬ್ಬ ನಿಗೆ ಇರಬೇಕಾದ ಮೂಲಭೂತ ಅರ್ಹತೆಯು ‘ಶಕ್ತಿ’ಯೊಂದೇ ಅಲ್ಲ; ಅದಕ್ಕಿಂತ ದೊಡ್ಡದು ‘ನೈತಿಕ ಅರ್ಹತೆ’. ಕ್ಷಮಾಗುಣ, ಅನುಕಂಪ, ಕರುಣೆ ಮತ್ತು ವಾತ್ಸಲ್ಯದಂಥ ಗುಣಗಳನ್ನು ಹೊಂದಿರುವ ಮನಸ್ಸು ಹಾಗೂ ಹೃದಯ ಆ ಅರ್ಹತೆಯ ಘಟಕಾಂಶಗಳು. ಈ ಎಲ್ಲ ಅಂಶಗಳ ಆಗರವೇ ಆಗಿದ್ದ ಶ್ರೀರಾಮ, ಚಿಕ್ಕಮ್ಮ ಕೈಕೇಯಿ ತನಗೆ ದ್ರೋಹ ಬಗೆದಳು ಎಂದು ಭಾವಿಸುವುದೇ ಇಲ್ಲ. ಆಕೆಯ ಮೇಲಿದ್ದ ಅವನ ಗೌರವ ಎಳ್ಳಷ್ಟೂ ಕಡಿಮೆಯಾಗುವುದಿಲ್ಲ. ಹಾಗೆಯೇ, ಭರತನನ್ನು ‘ಕುತಂತ್ರಿ’ ಎಂದೂ ರಾಮ ಭಾವಿಸುವುದಿಲ್ಲ. ರಾಮನ ವ್ಯಕ್ತಿತ್ವದ ಈ ಗುಣವೇ ಭರತನನ್ನು ಕರಗಿಸಿಬಿಡುತ್ತದೆ.
‘ಮರ್ಯಾದಾ ಪುರುಷೋತ್ತಮ’ ರಾಮನ ಇನ್ನೊಂದು ಗುಣವೆಂದರೆ ಜಿತೇಂದ್ರಿಯತ್ವ. ಏಕಪತ್ನೀ ವ್ರತಸ್ಥನಾದ ರಾಮನ ಈ ಶ್ರೇಷ್ಠಗುಣವನ್ನು ನಾವು ಅಂದಿನ ಕಾಲಘಟ್ಟದ ಕನ್ನಡಕದ ಮೂಲಕ ಅವಲೋಕಿಸಬೇಕು. ಬಹುಶಃ ರಾಮಾಯಣದ ಕಾಲಘಟ್ಟಕ್ಕೂ ಮುನ್ನ ಇಂಥ ಪರಿಕಲ್ಪನೆ ಇದ್ದಿರಲಿಲ್ಲ. ಆಗ ಬಹುಪತ್ನಿತ್ವವು ದೊಡ್ಡ ವಿಷಯವೇ ಆಗಿರಲಿಲ್ಲ.
ಇಂಥ ವ್ಯವಸ್ಥೆಯಲ್ಲಿ ಮಹಿಳೆಯರ ಗೋಳು ನೋಡಿದ ವಾಲ್ಮೀಕಿ ಅದೇ ಕಾರಣಕ್ಕೆ ‘ಏಕಪತ್ನೀವ್ರತಸ್ಥ’ ಎನ್ನುವುದನ್ನು ಒಂದು ಶ್ರೇಷ್ಠ ಮೌಲ್ಯವನ್ನಾಗಿರಿಸಿರಲು ಸಾಧ್ಯವಿದೆ. ಆ ಕಾಲಘಟ್ಟದ ಹಿನ್ನೆಲೆಯಲ್ಲಿ, ಬಲಿಷ್ಠನಾಗಿದ್ದು ಕೂಡ ಜಿತೇಂದ್ರಿಯನಾಗಿರುವುದು ರಾಜನೊಬ್ಬನ ಶ್ರೇಷ್ಠತೆ ಎಂಬುದನ್ನು ರಾಮಾಯಣದ ಮೂಲಕ ವಾಲ್ಮೀಕಿ ನಮಗೆ ಹೇಳುತ್ತಾರೆ. ರಾಮ ಮತ್ತು ಸೀತೆಯರ ನಡುವಿನ ಸಂಬಂಧವನ್ನು ವಾಲ್ಮೀಕಿಯು ‘ಆದರ್ಶಮಯ’ವಾಗಿಸುವುದು ಕೂಡ ನೈತಿಕ ವ್ಯವಸ್ಥೆಯನ್ನು ಕಟ್ಟಬೇಕೆಂಬ ತಮ್ಮ ಆಸೆಯ ಹಿನ್ನೆಲೆಯಲ್ಲಿಯೇ!
ವಾಲ್ಮೀಕಿಯ ಪ್ರಕಾರ, ಸಾರ್ವಭೌಮನಾಗಿ ರಾಮನ ಶ್ರೇಷ್ಠತೆ ಅಡಗಿರುವುದು, ತನ್ನ ಶ್ರೇಷ್ಠ ವೈಯಕ್ತಿಕ ಮೌಲ್ಯಗಳನ್ನು ಸಾರ್ವಜನಿಕ ಆಡಳಿತಕ್ಕೆ ತಂದಿಡುವುದರಲ್ಲಿ. ಅಷ್ಟಕ್ಕೂ, ಇಂಥ ಮೌಲ್ಯಗಳು ಸಾರ್ವಜನಿಕ ಜೀವನವನ್ನು ನಿರ್ದೇಶಿಸಿದಾಗಲೇ ‘ರಾಮರಾಜ್ಯ’ ಸೃಷ್ಟಿಯಾಗುವುದು. ‘ರಾಮರಾಜ್ಯ’ ಎಂದರೇನು ಎನ್ನುವುದರ ಕುರಿತಾದ ಒಂದಿಷ್ಟು ಹೊಳಹುಗಳು ರಾಮಾಯಣದಲ್ಲಿ ನಮಗೆ ಅಲ್ಲಲ್ಲಿ ಕಾಣಸಿಗುತ್ತವೆ. ರಾಜ ಎನಿಸಿಕೊಂಡವನು ಸೂಕ್ಷ್ಮ ಗುಣದವನಾಗಿದ್ದು ಜನರ ಭಾವನೆಗಳಿಗೆ ಬೆಲೆ ನೀಡುವವನಾಗಿರಬೇಕು, ನ್ಯಾಯವಂತನಾಗಿರಬೇಕು, ಪರಿಶುದ್ಧನಾಗಿರಬೇಕು. ಅಷ್ಟೇ ಅಲ್ಲ, ವೈಯಕ್ತಿಕತೆಯನ್ನು ಮೀರಿನಿಂತವನಾಗಿರಬೇಕು ಕೂಡ.
ರಾಮನು ಸೀತೆಯನ್ನು ಅಗ್ನಿಪ್ರವೇಶಕ್ಕೆ ತೊಡಗಿಸಿದ, ನಂತರ ಅವಳನ್ನು ಕಾಡಿಗಟ್ಟಿದಂಥ ಸನ್ನಿವೇಶಗಳನ್ನು ವಾಲ್ಮೀಕಿ ನಮ್ಮ ಮುಂದಿಡುವುದರ ಹಿಂದಿನ ಕಾರಣ ಬಹುಶಃ ಇದೇ ಇರಬೇಕು. ರಾಮಾಯಣದ ಕೊನೆಯಲ್ಲಿ ಲಕ್ಷ್ಮಣನಿಗೆ ಪ್ರಾಣದಂಡನೆ ವಿಽಸುವ ಸನ್ನಿವೇಶ ಬಂದು ನಿಂತಾಗ ರಾಮನು ಆಯ್ದುಕೊಳ್ಳುವುದು ನೈತಿಕತೆಯನ್ನು. ‘ರಾಮರಾಜ್ಯ’ ಎಂಬುದು ಇಂಥ ಕಠೋರ ನೈತಿಕತೆಯ ಮೇಲೆ ಕಟ್ಟಲ್ಪಟ್ಟಿದ್ದು.
ಹೀಗೆ ವಾಲ್ಮೀಕಿಯ ರಾಮಾಯಣವು ತುಂಬಾ ಭಾವನಾತ್ಮಕವಾಗಿ ಹೆಣೆಯಲ್ಪಟ್ಟ ಕಥೆಯಾದರೂ, ಮೂಲದಲ್ಲಿ ಅದು ಒಂದು ‘ಆದರ್ಶ ಪ್ರಭುತ್ವ’ ಹೇಗಿರಬಹುದು ಎನ್ನುವ ಕುರಿತಾದ ಕಥೆಯನ್ನೂ ಹೇಳುತ್ತದೆ. ಹಾಗೆಯೇ, ರಾಜಕೀಯ ವ್ಯವಸ್ಥೆಯ ಶ್ರೇಷ್ಠತೆಯನ್ನು ವ್ಯಾಖ್ಯಾನಿಸಿದ ಮೊದಲ ಜಾಗತಿಕ ಕೃತಿಯೂ ರಾಮಾಯಣವೇ...
(ಲೇಖಕರು ಶೈಕ್ಷಣಿಕ ಮತ್ತು ಸಂವಹನಾ ಸಲಹೆಗಾರರು)