Srivathsa Joshi Column: ಕೋಮಲ ಕುಸುಮವು ಕಠೋರವೆನಿಸುವ ಕಥಾನಕಗಳು
ಹೂವಿನೊಡನೆ ಹೆಣೆದ ಕವಿಕಲ್ಪನೆಗಳಲ್ಲೆಲ್ಲ ಅತಿ ಕಟು-ಮಧುರವಾದದ್ದು ಇಂದುಮತಿಯ ಮರಣ ಪ್ರಸಂಗ. ಆಕೆ, ಆಕಾಶದಿಂದ ಬಿದ್ದ ಒಂದು ಹೂಮಾಲೆಯ ಪೆಟ್ಟುತಿಂದು ಸಾಯುತ್ತಾಳೆ. ಈ ಪ್ರಸಂಗ ವನ್ನು ಕುರಿತು ಕಾಳಿದಾಸ ಬರೆದ ಪಂಕ್ತಿಯು ವಿಶ್ವಸಾಹಿತ್ಯದ ಅದ್ವಿತೀಯ ರತ್ನವೆಂದು ನನ್ನೆಣಿಕೆ.
-
ತಿಳಿರು ತೋರಣ
ಅಥವಾ ಮೃದು ವಸ್ತು ಹಿಂಸಿತುಂ ಮೃದುನೈವಾರಭತೇ ಪ್ರಜಾಂತಕಃ..." ಮತ್ತು “ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ..." ಈ ಎರಡು ವಾಕ್ಯಗಳನ್ನು ಸಂದರ್ಭ ಸಹಿತ ವಿವರಿಸಿ. ಸಂಸ್ಕೃತ/ಕನ್ನಡ ಸಾಹಿತ್ಯವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ತಲಾ ಐದೋ ಹತ್ತೋ ಅಂಕಗಳ ಸುದೀರ್ಘ ಉತ್ತರವನ್ನು ಬಯಸುವ ಪ್ರಶ್ನೆಯ ರೀತಿಯಲ್ಲಿರುವ ಸವಾಲಿದು.
ನಾನು ಸಾಹಿತ್ಯವಿದ್ಯಾರ್ಥಿಯಲ್ಲ, ಈ ವಾಕ್ಯಗಳಿರುವ ಸಾಹಿತ್ಯಕೃತಿಗಳನ್ನು ಪೂರ್ಣವಾಗಿ ಓದಿರು ವವನಂತೂ ಅಲ್ಲವೇಅಲ್ಲ. ಆದರೂ ಒಂದು ಪ್ರಯತ್ನವೆಂಬಂತೆ ಈ ಎರಡು ವಾಕ್ಯಗಳನ್ನೇ ಇಂದಿನ ಅಂಕಣದ ಹೂರಣಕ್ಕೆ ಕಚ್ಚಾ ಸಾಮಗ್ರಿಯಾಗಿ ಆಯ್ದುಕೊಂಡಿದ್ದೇನೆ. ಇವುಗಳಿಗೆ ಯಥಾಶಕ್ತಿ ನ್ಯಾಯವೊದಗಿಸಬೇಕು ಎಂದುಕೊಂಡಿದ್ದೇನೆ.
ನನಗೆ ಈ ಆಲೋಚನೆ ಏಕೆ ಮತ್ತು ಹೇಗೆ ಬಂತೆಂಬುದನ್ನೂ ತಿಳಿಸುತ್ತೇನೆ. ಲಾಂಗೂಲಾಚಾರ್ಯರ (ಪಾ.ವೆಂ ಆಚಾರ್ಯರ) ಹರಟೆ ಬರಹಗಳ ಸಂಕಲನ ‘ಪ್ರಹಾರ’ ಓದುತ್ತಿದ್ದೆ. ಅದು ಲೋಕಶಿಕ್ಷಣ ಟ್ರಸ್ಟ್‌ನವರ ಪ್ರಕಟಣೆ. 1965ರಲ್ಲಿ, ಅಂದರೆ ನಾನು ಹುಟ್ಟುವುದಕ್ಕಿಂತಲೂ ಮೊದಲೇ, ಪ್ರಕಟ ವಾಗಿರುವ ಪುಸ್ತಕ. ಅದರಲ್ಲಿ ಕೊನೆಯ ಲೇಖನ “ಬ್ರಹ್ಮ ಹೂ ಎಂದ" ಎಂಬ ಶೀರ್ಷಿಕೆಯದು.
“ಜಗತ್ತಿನಲ್ಲಿ ಯಾವ ದೇಶವಾದರೂ ಪುಷ್ಪಪ್ರಜ್ಞೆಯುಳ್ಳದ್ದಿದ್ದರೆ ಅದು ಭಾರತ. ಇಲ್ಲಿ ಕವಿಗಳು ಪುಷ್ಪವನ್ನು ಜೀವಾಳವಾಗಿ ಮಾಡಿಕೊಂಡಿದ್ದಾರಷ್ಟೇ ಅಲ್ಲ, ಇಲ್ಲಿನ ದೇವರಿಗೆ ಕೂಡ ಹೂವಿಲ್ಲದೆ ನಡೆಯುವಂತಿಲ್ಲ..." ಎಂದು ಆರಂಭವಾಗುವ ಆ ಲಲಿತಪ್ರಬಂಧದಲ್ಲಿ ಲಾಂಗೂಲಾಚಾರ್ಯರು ಬೇರೆ ಬೇರೆ ದೇವರುಗಳ ಪುಷ್ಪಪ್ರೇಮ, ಬೇರೆಬೇರೆ ಕವಿಗಳಿಂದ ಪುಷ್ಪೋಲ್ಲೇಖಗಳು, ಹೆಂಗಳೆಯರು ಹೂಮಾಲೆ ಕಟ್ಟುವ ಬೇರೆ ಬೇರೆ ರೀತಿಗಳು, ಹೂವುಗಳಂತೆ ಅವುಗಳ ಹೆಸರುಗಳೂ ಮೃದು ಮಧುರ ವಾಗಿರುವುದು, ಒಂದೊಂದು ಹೂವಿನ ಹೆಸರನ್ನು ನೆನಪಿಸಿಕೊಂಡಾಗಲೂ ಅದರ ಪರಿಮಳ ಮನಸ್ಸಲ್ಲೇ ಮೂಡುವುದು... ಇತ್ಯಾದಿಯನ್ನೆಲ್ಲ ಸೋದಾಹರಣವಾಗಿ ಹೃದಯಂಗಮವಾಗಿ ಬಣ್ಣಿಸಿದ್ದಾರೆ.
ಅದರಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು- ಮೃದುತ್ವಕ್ಕೆ, ಕೋಮಲತೆಗೆ ರೂಪಕವೆನಿಸುವ ಕುಸುಮವೂ ಕೆಲವೊಮ್ಮೆ ಹೇಗೆ ಕಠೋರವೆನಿಸಬಹುದು ಎಂಬುದಕ್ಕೆ ಲಾಂಗೂಲಾಚಾರ್ಯರು ಸಂಕ್ಷಿಪ್ತವಾಗಿ ಪ್ರಸ್ತಾವಿಸಿದ ಕೆಲವು ನಿದರ್ಶನಗಳು. ಅದು ಲೇಖನದ ಕ್ಲೈಮಾಕ್ಸ್. ಅದನ್ನು ಅವರ ವಾಕ್ಯಗಳಲ್ಲೇ ಓದಿದರೆ ಚೆನ್ನ.
“ನೀವು ಜನ್ನನ ಯಶೋಧರಚರಿತ ಓದಿದ್ದೀರಾ? ಅದರಲ್ಲಿ ಒಂದು ಕೌತುಕದ ಪ್ರಸಂಗವಿದೆ. ಆಗಿನ ಕಾಲದಲ್ಲಿ ಅರಸರು ತಾವರೆಯ ದೇಟು ಸಹಿತ ಮೊಗ್ಗೆಯನ್ನು ಕೈಯಲ್ಲಿ ಹಿಡಿದುಕೊಂಡೇ ತಿರುಗು ತ್ತಿದ್ದರೆಂದು ತೋರುತ್ತದೆ. ಈ ಲೀಲಾಕಮಲದಿಂದ ಯಶೋಧರನು ರಾಣಿಗೆ ಮೆತ್ತಗೆ ಹೊಡೆಯು ತ್ತಾನೆ.
ರಾಣಿ ಅಷ್ಟಕ್ಕೇ ಮೂರ್ಛೆ ಹೋಗುತ್ತಾಳೆ. ಕೋಮಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ? ಆದರೆ ಅವಳ ವಿಟ- ಆನೆಮಾವುತ ಹಿಂದಿನರಾತ್ರಿ ಸಿಟ್ಟಿಗೆದ್ದು ಅವಳನ್ನು ಕಟ್ಟಿಗೆಯಿಂದ ಬಡಿದಾಗ ಏನೂ ಆಗಿದ್ದಿಲ್ಲವಂತೆ. ಪ್ರೀತಿಪಾತ್ರನ ಕೊರಡೆಪೆಟ್ಟೂ ಗಂಡನ ಪುಷ್ಪತಾಡನಕ್ಕಿಂತ ಅವಳಿಗೆ ಮೃದುವೆನಿಸಿತ್ತು!
ಹೂವಿನೊಡನೆ ಹೆಣೆದ ಕವಿಕಲ್ಪನೆಗಳಲ್ಲೆಲ್ಲ ಅತಿ ಕಟು-ಮಧುರವಾದದ್ದು ಇಂದುಮತಿಯ ಮರಣಪ್ರಸಂಗ. ಆಕೆ, ಆಕಾಶದಿಂದ ಬಿದ್ದ ಒಂದು ಹೂಮಾಲೆಯ ಪೆಟ್ಟುತಿಂದು ಸಾಯುತ್ತಾಳೆ. ಈ ಪ್ರಸಂಗವನ್ನು ಕುರಿತು ಕಾಳಿದಾಸ ಬರೆದ ಪಂಕ್ತಿಯು ವಿಶ್ವಸಾಹಿತ್ಯದ ಅದ್ವಿತೀಯ ರತ್ನವೆಂದು ನನ್ನೆಣಿಕೆ. ಅವನು ಹೇಳುತ್ತಾನೆ: ‘ಅಥವಾ ಮೃದು ವಸ್ತು ಹಿಂಸಿತುಂ ಮೃದುನೈವಾರಭತೇ ಪ್ರಜಾಂ ತಕಃ’- ಮೃದುವಾದ ವಸ್ತುವನ್ನು ಹಿಂಸಿಸಲು ಯಮ ಮೃದುವಾದ ಆಯುಧವನ್ನೇ ಪ್ರಯೋಗಿಸು ತ್ತಾನೇನೋ!"
ಪಾ.ವೆಂ.ಆಚಾರ್ಯರು ಇವೆರಡೂ ಕಥಾನಕಗಳನ್ನು ತಮ್ಮ ಪುಷ್ಪಪ್ರಬಂಧದಲ್ಲಿ ವೆರಿವೆರಿ ಬ್ರೀ- ಆಗಿ ‘ಟಚ್-ಆಂಡ್-ಗೋ’ ಎಂಬಂತೆ ಉಲ್ಲೇಖಿಸಿದ್ದಾರೆ. ಆದರೆ ಇವುಗಳನ್ನು ಬೆಂಬತ್ತಿದರೆ, ಅಗೆದು-ಬಗೆದು ನೋಡಿದರೆ ಎರಡು ಅದ್ಭುತವಾದ ಪುರಾಣಕಥೆಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ! ಅವುಗಳನ್ನೀಗ ಆಸ್ವಾದಿಸೋಣ.
‘ಯಶೋಧರ ಚರಿತೆ’ ಎಂಬ ಪುಸ್ತಕದ ಪಿಡಿಎಫ್ ನನ್ನ ಸಂಗ್ರಹದಲ್ಲಿದೆ. ಇದು ಮೈಸೂರು ವಿಶ್ವ ವಿದ್ಯಾಲಯವು ಕನ್ನಡ ಗ್ರಂಥಮಾಲೆ ಸರಣಿಯಲ್ಲಿ 1943ರಲ್ಲಿ (ಅಂದರೆ ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ) ಪ್ರಕಟಿಸಿದ ಗ್ರಂಥ. ರಾಜಸೇವಾಸಕ್ತ ಬಿ.ಎಂ. ಶ್ರೀಕಂಠಯ್ಯನವರು ಪ್ರಧಾನ ಸಂಪಾದಕರಾಗಿದ್ದ ಆ ಸರಣಿಯಲ್ಲಿ ಜನ್ನನ ಯಶೋಧರ ಚರಿತೆಯನ್ನು ಕುರಿತ ಈ ಪುಸ್ತಕವನ್ನು ಬರೆದವರು ಕೆ.ವಿ. ರಾಘವಾಚಾರ್.
ಕಥಾಸಾರಾಂಶ, ಪುಸ್ತಕದಿಂದ ಯಥಾವತ್ತಾಗಿ ಎತ್ತಿಕೊಂಡದ್ದು, ಹೀಗಿದೆ (ಇಲ್ಲಿರುವ ಗ್ರಾಂಥಿಕ ಕನ್ನಡಭಾಷೆ/ಶೈಲಿ ಓದಿ ಅರ್ಥೈಸಿಕೊಳ್ಳುವುದು ತುಸು ಕಷ್ಟವಾದರೂ, ಕಥೆಯ ಗಾಢತೆಯು ನಮ್ಮ ಅನುಭವಕ್ಕೆ ಬರಲು ಈ ಭಾಷೆಯಲ್ಲಿ ಓದುವುದೇ ಲೇಸು): “ಯಶೌಘನು ಅವಂತಿದೇಶದ ಉಜ್ಜಯಿ ನೀಪುರದ ಅರಸು.
ಅವನ ಮಡದಿ ಚಂದ್ರಮತಿ. ಅವರ ಮಗ ಯಶೋಧರ. ಅವನ ಮನಃಪ್ರಿಯೆ ಅಮೃತಮತಿ. ಯಶೌಘ ಒಮ್ಮೆ ಕನ್ನಡಿಯಲ್ಲಿ ತಲೆನರೆ ಕಂಡು ನಿರ್ವೇಗಗೊಂಡು ಮಗನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗುತ್ತಾನೆ. ಯಶೋಧರ ಅಮೃತಮತಿಯರು ಖಚರ ದಂಪತಿಗಳಂತೆ ಕಂಗೊಳಿಸಿ ವಿಹರಿಸುತ್ತಿರು ತ್ತಾರೆ.
ಒಮ್ಮೆ ಆ ಹೃದಯಪ್ರಿಯರು ಸೆಜ್ಜೆಮನೆಯ ಮಂಚದ ಮೇಲೆ ಮಲಗಿರುವಾಗ ನಲ್‌ನಿಶೆಯ ನಿಶ್ಶಬ್ದತೆಯಲ್ಲಿ ಅಮೃತಮತಿಗೆ ಇನಿದನಿಯೊಂದು ಕೇಳಿಬರುತ್ತದೆ. ಪಕ್ಕದ ಗಜಶಾಲೆಯ ಮಾವಟಿ ಗನು ತನ್ನ ವಿನೋದಕ್ಕೆ ಹಾಡಿಕೊಳ್ಳುತ್ತಿದ್ದ ಆ ಹಾಡಿನಿಂದ ಅಮೃತಮತಿಯ ನಿದ್ದೆ ತಿಳಿಯುತ್ತದೆ.
ನಿದ್ದೆ ತಿಳಿದು ಆಲಿಸಿ, ಅರಸಿಯು ರಾಗದ ಸವಿಗೆ ಒಳಸೋತು, ಗೀತೆ ಮುಟ್ಟಿದ ಮನವನ್ನೇ ತೊಟ್ಟನೆ ಪಸಾಯದಾನ ಕೊಟ್ಟುಬಿಡುತ್ತಾಳೆ. ಅತಿ ನೂತನ ಗೀತದ ರಾಗಗಳು ಒಂದರಮೇಲೊಂದು ಕಿವಿಗೆ ಸೊದೆಯೆರೆಯುತ್ತಿರಲು, ರಾಣಿಯ ರಾಗ ಕೆರಳಿ ಅವನನ್ನು ನೋಡುವ ಕೂಡುವ ಚಿಂತೆ ಕಡಲು ವರಿಯುತ್ತದೆ. ಬೆಳಗಾಗುವುದೇ ತಡ ತನ್ನ ಮನದ ಕೆಳದಿಗೆ ಮನಬಿಚ್ಚಿ ಹೇಳಿ ಅವಳನ್ನು ಗೀತದ ಕಣಿಯನಲ್ಲಿಗೆ ಕಳಿಸುತ್ತಾಳೆ.
ಅವಳು ಹೋಗಿ ಒಬ್ಬ ಅಷ್ಟವಂಕನನ್ನು ನೋಡಿ ಹೇಸಿ, ವಿಧಿಯನ್ನು ಬೈದಿಡುತ್ತಾಳೆ. ಮಾತಾಡ ದೆಯೆ ಮರಳುತ್ತಾಳೆ. ಕೆಳದಿಯ ದಾರಿಯೇ ಕಣ್ಣಾಗಿ ನಿಂತಿದ್ದ ರಾಣಿಯ ಬಳಿ ಬಂದು ‘ಇಂಥ ಕಾಮದೇವನನ್ನು ಎಲ್ಲಿ ಹುಡುಕಿ ಒಲಿದೆ?’ ಎಂದು ವ್ಯಂಗ್ಯವಾಗಿ ನುಡಿಯುತ್ತಾಳೆ. ಕಾಮದ ಕೆರಳಿ ನಿಂದ ಮರುಳುಮತಿಯಾದ ರಾಣಿ ಆ ವ್ಯಂಗ್ಯ ತಿಳಿಯಲಾರದೆ ನಲಿದು, ನೂತನ ನಲ್ಲನ ಚೆಲು ವನ್ನು ಕೇಳಲು ತವಕಿಸುತ್ತಾಳೆ.
ಅಷ್ಟವಂಕನ ವಿಕಾರ ವರ್ಣನೆಯನ್ನು ಕೇಳಿ ಪುಳಿಂದನ ಕಣೆಗಟ್ಟಿ ನಿಂತ ವನಹರಿಣಿಯಂತೆ ನಿಶ್ಚೇಷ್ಟಳಾಗುತ್ತಾಳೆ. ಆದರೂ, ಕೈಮೀರಿದ ಕಾಮೋದ್ರೇಕದ ಭರದಿಂದ ತಪ್ಪಿಸಿಕೊಳ್ಳಲಾರದವಳಾಗಿ, ಪೊಲ್ಲಮೆಯೇ ಲೇಸು, ನಲ್ಲರ ಮೆಯ್ಯೊಳೆಂದು ಮರುಗಳಿಗೆಯೇ ಸಮಾಧಾನ ತಂದುಕೊಳ್ಳುತ್ತಾಳೆ. ದೂತಿಗೆ ಲಂಚ ಕೊಟ್ಟು ಮಾವಟಿಗನನ್ನು ಹೊಂದಿಸಿಕೊಂಡು ಹಗಲಿರುಳೂ ತನ್ನ ಬಿಡು ಹೊತ್ತನ್ನೆಲ್ಲ ಅವನಲ್ಲಿಯೇ ಕಳೆಯುತ್ತಿರುತ್ತಾಳೆ.
ಬೇವನ್ನು ಮೆಚ್ಚಿದ ಕಾಗೆಗೆ ಮಾವು ಇಳಿದಾಗುವಂತೆ, ಅಮೃತಮತಿಗೆ ಬರುಬರುತ್ತ ಯಶೋಧರನಲ್ಲಿ ಅನುರಾಗ ಬತ್ತುತ್ತದೆ. ಇದರ ಮರ್ಮವನ್ನು ತಿಳಿಯಬೇಕೆಂದು ದೊರೆ ಒಂದಿರುಳು ನಿದ್ದೆ ಬಂದವ ನಂತೆ ಮಲಗಿರಲು, ರಾಣಿ ಮೆಲ್ಲನೆ ತೋಳ ಸೆರೆಬಿಡಿಸಿಕೊಂಡು ಜಾರನಲ್ಲಿಗೆ ನುಸುಳುತ್ತಾಳೆ. ಅವಳು ಅರಿಯದಂತೆ ಅರಸನೂ ಬೆನ್ನ ಹಿಂದೆಯೇ ಕತ್ತಿಹಿರಿದು ಹೋಗುತ್ತಾನೆ.
ಅಮೃತಮತಿ ತಡಮಾಡಿದ್ದಕ್ಕೆ ಅಷ್ಟವಂಕನು ಮುಳಿದು ಕಲಹಂಸಕ್ಕೆ ಗಿಡುಗ ಎರಗುವಂತೆ ಎರಗಿ ಬಡಿಯುತ್ತಾನೆ. ರಾಣಿ ಅವನ ಕಾಲಮೇಲೆ ಬಿದ್ದು ಹೊರಳಿ ‘ಪಾತಕಿ ದೊರೆಯಿಂದ ತಡವಾಯಿತು; ನೀನುಳಿದರೆ ಸಾಯುವವಳು ನಾನು, ಮಿಕ್ಕ ಗಂಡಸರು ಸಮಸೋದರರು ನನಗೆ’ ಎಂದು ತಿಳಿಸಿ ಸಮಾಧಾನ ಮಾಡುತ್ತಾಳೆ.
ದೊರೆಯ ಮನ ಕನಲಿ ಒಡನೆಯೇ ಇಬ್ಬರನ್ನೂ ಸೀಳಿ ಬಿಡಬೇಕೆಂದು ಕೈಯ ಕತ್ತಿ ನಿಮಿರುತ್ತದೆ. ಆದರೆ ಮರುಗಳಿಗೆಯೇ ಧೃತಿಗೊಂಡು ಆ ಹುಳುಕರನ್ನು ಹೊಡೆಯಲು ಹೇಸಿ ಸುಮ್ಮನೆ ಹಿಂದಿರುಗಿ ಬಂದು ಮಲಗಿಕೊಳ್ಳುತ್ತಾನೆ. ರಾಣಿಯೂ ಬಂದು ಮುನ್ನಿನಂತೆ ಪಕ್ಕದಲ್ಲಿ ಮಲಗಿ ಕೊಳ್ಳುತ್ತಾಳೆ. ಬೆಳಗ್ಗೆ ಎದ್ದು ದೊರೆ ಸಂಸಾರಕ್ಕೆ ಬೇಸತ್ತು ತೊರೆದುಹೋಗಲು ತೀರ್ಮಾನಿಸುತ್ತಾನೆ.
ರಾಣಿ ಎದ್ದೊಡನೆ ದೊರೆ ನಗೆನುಡಿಯ ನೆವವನ್ನು ತೆಗೆದು ನೈದಿಲೆ ಹೂವಿಂದ ಅಮೃತಮತಿಯನ್ನು ಇಕ್ಕುತ್ತಾನೆ. ಅಷ್ಟವಂಕನ ಬಾರೇಟು ತಿಂದು ಉಳಿದ ಆ ಸುಕುಮಾರಿ ಇಂದು ಆ ಹೂವೇಟಿಂದ ಮೂರ್ಛೆಹೋಗುತ್ತಾಳೆ. ಅವಳ ಅಣಕಕ್ಕೆ ಅಸಹ್ಯಿಸಿ ‘ಅಯ್ಯೋ! ಅಂದಿನ ಸಾವು ದೈವದಿಂದ ತಪ್ಪಿತು; ಇಂದು ನೈದಿಲೆ ಸಾವಿಗಾಯ್ತು’ ಎಂದು ಅರಸು ಕೊಂಕಿ ನುಡಿಯುತ್ತಾನೆ. ತನ್ನ ಗುಟ್ಟು ಬಯಲಾ ದ್ದನ್ನು ತಿಳಿದು ರಾಣಿ ಮರುಮಾತಾಡದೆ ಬೇಸತ್ತಂತೆ ಇದ್ದುಬಿಡುತ್ತಾಳೆ".
‘ಜನ್ನ ಕವಿಯ ಯಶೋಧರ ಚರಿತೆಯ ಗದ್ಯಾನುವಾದ: ತೆಕ್ಕುಂಜ ಗೋಪಾಲಕೃಷ್ಣಭಟ್ಟ’- ಇದು ಕನ್ನಡ ಸಾಹಿತ್ಯಪರಿಷತ್ತು 1976ರಲ್ಲಿ ಪ್ರಕಟಿಸಿದ, ಕಥೆಯನ್ನು ತಿಳಿದುಕೊಳ್ಳಲಿಕ್ಕೆ ನಾನು ಪರಾಮ ರ್ಶಿಸಿದ ಇನ್ನೊಂದು ಗ್ರಂಥ. ಇದರಲ್ಲಿ ಜನ್ನನ ಕೃತಿಯ ಪ್ರತಿಯೊಂದು ಪದ್ಯದ ಸುಂದರವಾದ ಗದ್ಯಾನುವಾದ ಇದೆ.
ಯಶೋಧರ-ಅಮೃತಮತಿಯರ ದಾಂಪತ್ಯ ಹಾಲುಜೇನಿನಂತಿದ್ದಾಗಿನ ವರ್ಣನೆಯಲ್ಲಂತೂ ಶೃಂಗಾರರಸ ಉಕ್ಕಿಹರಿಯುತ್ತದೆ. ಅಮೃತಮತಿಯ ಮತಿಯನ್ನು ಮಾವುತ ಮತ್ತವನ ಹಾಡು ಪೂರ್ಣವಾಗಿ ಆವರಿಸಿಕೊಂಡಮೇಲಿನ ಭಾಗಗಳೂ ಬಲುರೋಚಕವೇ. ಎರಡನೆಯ ಅವತಾರ (ಅಧ್ಯಾಯ)ದ 69ನೆಯ ಪದ್ಯದಲ್ಲಿ “ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ" ಎಂಬ ಸಾಲು ಬರುತ್ತದೆ. ಯಶೋಧರನು ನೈದಿಲೆಯಿಂದ ಹೊಡೆದಾಗ ಅಮೃತಮತಿ ಸಾಯಲಿಲ್ಲ, ಒಮ್ಮೆ ಮೂರ್ಛೆ ಹೋದಳು ಅಷ್ಟೇ. ಅಥವಾ, ಅದು ಅವಳಾಡಿದ ನಾಟಕವಿರಬಹುದು.
ಆಮೇಲೆ ಯಶೋಧರ ತನ್ನ ತಾಯಿ ಚಂದ್ರಮತಿಯಲ್ಲಿಗೆ ಹೋಗುತ್ತಾನೆ; ಆಕೆ ಸಮಾಧಾನ ಮಾಡಿ ದುಃಸ್ವಪ್ನಪರಿಹಾರಕ್ಕೆ ದೇವಿಗೆ ಪ್ರಾಣಿಬಲಿ ಕೊಡುವಂತೆ ಸಲಹೆ ಕೊಡುತ್ತಾಳೆ; ಜೈನಧರ್ಮದವರು ಅಹಿಂಸಾವಾದಿಗಳಾದ್ದರಿಂದ ಹಿಟ್ಟಿನ ಕೋಳಿಯನ್ನು ಬಲಿ ಕೊಡಲಾಗುತ್ತದೆ; ಅಮೃತಮತಿಯು ಗಂಡನನ್ನೂ ಅತ್ತೆಯನ್ನೂ ಔತಣಕ್ಕೆ ಕರೆದು ಅಡುಗೆಯಲ್ಲಿ ವಿಷ ಬೆರೆಸಿ ಇಬ್ಬರನ್ನೂ ಕೊಂದು ಬಿಡುತ್ತಾಳೆ; ಸತ್ತ ತಾಯಿ-ಮಗ ನಾನಾ ಪಶುಪಕ್ಷಿಗಳಾಗಿ ಏಳೇಳು ಜನ್ಮಗಳನ್ನು ತಳೆಯುತ್ತಾರೆ... ಅಂತೆಲ್ಲ ಕಥೆ ಮತ್ತಷ್ಟು ರೋಚಕವಾಗಿ ಮುಂದುವರಿಯುತ್ತದೆ.
ಪಾ.ವೆಂ ಆಚಾರ್ಯರು ಪ್ರಸ್ತಾವಿಸಿದ ಎರಡನೆಯ ಕಥೆ ಇಂದುಮತಿಯದು. ಕಾಳಿದಾಸನ ರಘುವಂಶಮ್ ಮಹಾಕಾವ್ಯದಲ್ಲಿ ಸವಿವರವಾಗಿ ಬರುತ್ತದೆ. ಇದು ಅಪ್ಸರೆ ಹರಿಣಿಯ ಕಥೆಯೂ ಹೌದು! ಸ್ವರ್ಗದಲ್ಲಿ ಇಂದ್ರನ ಆದೇಶಗಳನ್ನು ಪಾಲಿಸುತ್ತಿದ್ದ ಎಲ್ಲ ಅಪ್ಸರೆಯರಂತೆ ಅಪ್ಸರೆ ಹರಿಣಿಯೂ ಒಬ್ಬ ಮೋಹಕ ಸುಂದರಿ. ಆಕೆಯ ಒನಪು ವೈಯಾರಗಳನ್ನು ಕಂಡರೆ ಎಂಥವರಾ ದರೂ ವಿಚಲಿತರಾಗಬೇಕು.
ಒಮ್ಮೆ ತೃಣಬಿಂದು ಎಂಬ ಋಷಿಯು ತಪಸ್ಸಿನಲ್ಲಿ ನಿರತರಾಗಿದ್ದಾಗ ಅದನ್ನು ಕಂಡ ಇಂದ್ರನಿಗೆ ಆತಂಕವುಂಟಾಗುತ್ತದೆ. ಋಷಿಯ ತಪಸ್ಸಿನ ಪ್ರಭಾವವು ತನಗೂ ಮತ್ತು ದೇವವೃಂದಕ್ಕೂ ಸಂಚಕಾರ ತರಬಹುದೆಂದು ಇಂದ್ರ ಹೆದರಿಕೊಳ್ಳುತ್ತಾನೆ. ತೃಣಬಿಂದು ಋಷಿಯ ತಪೋಭಂಗ ಮಾಡಲೆಂದು ಹರಿಣಿಗೆ ಆದೇಶವೀಯುತ್ತಾನೆ.
ಪ್ರಭುವಿನ ಆದೇಶವನ್ನು ಪರಿಪಾಲಿಸುತ್ತ ಹರಿಣಿಯು ತೃಣಬಿಂದುವಿನ ತಪೋಭಂಗ ಮಾಡಿ ಅವರ ಪರಿಶ್ರಮವನ್ನೆಲ್ಲಾ ವ್ಯರ್ಥವಾಗಿಸುತ್ತಾಳೆ. ತನ್ನ ಚಿತ್ತಚಾಂಚಲ್ಯಕ್ಕೆ ಕಾರಣಳಾದ ಹರಿಣಿಯನ್ನು ಕಂಡ ಋಷಿ ತೃಣಬಿಂದುವು ಅವಳಿಗೆ ಮನುಷ್ಯಳಾಗಿ ಭೂಲೋಕದಲ್ಲಿ ಹುಟ್ಟುವಂತೆ ಶಾಪ ವೆಸಗುತ್ತಾರೆ.
ಹರಿಣಿ ಆ ಮಹರ್ಷಿಯಲ್ಲಿ ಕ್ಷಮೆ ಯಾಚಿಸುತ್ತಾಳೆ. ತಾನು ತಪೋಭಂಗ ಮಾಡಿದ್ದರಲ್ಲಿ ಯಾವುದೇ ರೀತಿಯ ಸ್ವಾರ್ಥವಾಗಲೀ ಆಸಕ್ತಿಯಾಗಲೀ ಇರಲಿಲ್ಲ, ಇಂದ್ರನ ಆಜ್ಞಾಪಾಲನೆಗಾಗಿಯಷ್ಟೇ ಆ ಕೃತ್ಯವನ್ನೆಸಗಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತಾಳೆ. ಶಾಪ ವಿಮೋಚನೆಯ ದಾರಿ ಸೂಚಿಸಬೇಕಾಗಿ ಋಷಿಯಲ್ಲಿ ವಿನಯದಿಂದ ಬೇಡಿಕೊಳ್ಳುತ್ತಾಳೆ.
ಇದನ್ನು ಕೇಳಿದ ತೃಣಬಿಂದುವಿನ ಮನಸು ಶಾಂತವಾಗಿ, “ಆಕಾಶದಿಂದ ಬಿದ್ದ ಹೂವೊಂದು ನಿನ್ನ ಶಾಪವಿಮೋಚನೆಗೆ ಕಾರಣವಾಗಲಿದೆ. ಆಮೇಲೆ ನೀನು ಅಪ್ಸರೆಯಾಗಿ ಸ್ವರ್ಗಕ್ಕೆ ಮರಳಬಹುದು" ಎನ್ನುತ್ತಾರೆ. ತನ್ಮೂಲಕ ಹರಿಣಿಗಿತ್ತ ಶಾಪದ ಕಾಠಿನ್ಯವನ್ನೂ ಅವಧಿಯನ್ನೂ ಸೀಮಿತಗೊಳಿಸು ತ್ತಾರೆ. ಆದರೂ ಶಾಪ ಅಂದಮೇಲೆ ಶಾಪವೇ. ಹಿಂಪಡೆಯುವಂತಿಲ್ಲ.
ಶಾಪದ ಫಲವಾಗಿ ಅಪ್ಸರೆ ಹರಿಣಿಯು ವಿದರ್ಭದ ಅರಸನಾಗಿದ್ದ ಭೋಜನ ಸುಪುತ್ರಿಯಾಗಿ ಜನಿಸುತ್ತಾಳೆ. ಇಂದುಮತಿ ಎಂದು ಅವಳಿಗೆ ನಾಮಕರಣವಾಗುತ್ತದೆ. ಎಷ್ಟೆಂದರೂ ಆಕೆ ಅಪ್ಸರೆ ಹರಿಣಿಯ ಪುನರ್ಜನ್ಮ, ಆದ್ದರಿಂದಲೇ ನೋಡುಗರ ಕಣ್ಮನಗಳನ್ನು ಸೆಳೆಯುವ ಅಪೂರ್ವವಾದ ಸೌಂದರ್ಯ ಮತ್ತು ಲಾವಣ್ಯ ಅವಳಲ್ಲಿ ತುಂಬಿತುಳುಕುತ್ತಿರುತ್ತದೆ.
ಸುಕೋಮಲೆ, ಸುಗುಣೆ ಮತ್ತು ಅತೀವ ಸುಂದರಿಯಾದ ಮಗಳ ವಿವಾಹವನ್ನು ನೆರವೇರಿಸಲು ರಾಜ ಭೋಜನು ಸ್ವಯಂವರವನ್ನು ಏರ್ಪಡಿಸುತ್ತಾನೆ. ಹತ್ತು ಹಲವು ರಾಜ್ಯಗಳ ರಾಜಕುಮಾರರು ಸ್ವಯಂ ವರದಲ್ಲಿ ಪಾಲ್ಗೊಳ್ಳುತ್ತಾರೆ. ಕಾಳಿದಾಸನು ಇಂದುಮತಿಯನ್ನು ‘ದೀಪಶಿಖಾ (ಬೆಳಕಿನ ಪಂಜು) ಎಂದು ಉಪಮಿಸಿದ್ದು ಈ ಸಂದರ್ಭದಲ್ಲೇ. ಸ್ವಯಂವರಕ್ಕೆಂದು ಕುಳಿತಿದ್ದ ರಾಜಕುಮಾರರ ಸಾಲಿನಲ್ಲಿ ಒಬ್ಬೊಬ್ಬರ ಮುಂದೆಯೂ ಇಂದುಮತಿ ನಿಂತಾಗ ಅವರ ಮುಖ ಬೆಳಗುತ್ತಿತ್ತು,
ಆಕೆ ಮಾಲೆಹಾಕದೆ ಮುಂದೆ ಸರಿದಾಗ ಅವರ ಮುಖ ಕಪ್ಪಿಡುತ್ತಿತ್ತು- ರಾತ್ರಿಯಲ್ಲಿ ಪಂಜು ಹಿಡಿದು ಸಾಗುವಾಗ ಒಂದೊಂದೇ ಕಟ್ಟಡವು ತಾತ್ಕಾಲಿಕವಾಗಿ ಬೆಳಗುವಂತೆ. ಇಕ್ಷ್ವಾಕು ವಂಶದ ಅಜನೆಂಬ ರಾಜಕುಮಾರನು ಇಂದುಮತಿಯ ಮನಗೆಲ್ಲುತ್ತಾನೆ. ಅವರೀರ್ವರ ವಿವಾಹ ಸಂಪನ್ನವಾಗುತ್ತದೆ. ಆಮೇಲೆ ಅಜನ ತಂದೆ ರಘುಮಹಾರಾಜನು ಅಜನಿಗೆ ಪಟ್ಟಾಭಿಷೇಕ ಮಾಡಿ ವಾನಪ್ರಸ್ಥಕ್ಕೆ ಹೊರಡುತ್ತಾನೆ. ಇಂದುಮತಿಗೆ ಗಂಡುಮಗು ಹುಟ್ಟುತ್ತದೆ.
ದಶರಥನೆಂದು ನಾಮಕರಣ ಮಾಡುತ್ತಾರೆ. ದಶರಥನ ಜನನಾನಂತರ ಅಜ ಮಹಾರಾಜ ಮತ್ತು ಇಂದುಮತಿ ದಾಂಪತ್ಯಸುಖವನ್ನು ಸವಿಯುತ್ತ ಸಾಕಷ್ಟು ಸಮಯ ಕಳೆಯುತ್ತಾರೆ. ಹಾಗೆ ಒಮ್ಮೆ, ರಾಜಧಾನಿಗೆ ಸನಿಹದಲ್ಲೇ ಇದ್ದ ಉದ್ಯಾನಕ್ಕೆ ರಾಣಿ ಇಂದುಮತಿ ಮತ್ತು ಅಜ ಮಹಾರಾಜನು ವಿಹಾರಕ್ಕೆಂದು ಹೋಗುತ್ತಾರೆ. ಅಲ್ಲಿ ಅವರು ಪರಸ್ಪರ ಸಾಂಗತ್ಯವನ್ನು ಆಸ್ವಾದಿಸುತ್ತ ವಿರಮಿಸತ್ತ ಪ್ರಪಂಚವನ್ನೇ ಮರೆತಿರುತ್ತಾರೆ.
ಆ ಸಮಯಕ್ಕೆ ದಕ್ಷಿಣ ಸಮುದ್ರತೀರದ ಗೋಕರ್ಣದಲ್ಲಿ ನೆಲೆಸಿದ್ದಂಥ ಶಂಕರನನ್ನು ಕಾಣಲು ನಾರದ ಮಹಾಮುನಿಗಳು ಆಕಾಶಮಾರ್ಗವಾಗಿ ಧಾವಿಸುತ್ತಿರುವಾಗ ಅವರು ಧರಿಸಿದ್ದ ಹೂವಿನ ಮಾಲೆ ಕೆಳಗೆ ಬೀಳುತ್ತದೆ. ಅದು ಬಿದ್ದದ್ದೆಲ್ಲಿ? ಉದ್ಯಾನದಲ್ಲಿ ವಿಹರಿಸುತ್ತಿದ್ದ ಇಂದುಮತಿಯ ಮೇಲೆ! ಅತಿಯಾದ ಮಕರಂದ ಮತ್ತು ಸುಗಂಧದಿಂದ ಕೂಡಿದ ದೇವಲೋಕದ ಆ ಹೂಮಾಲೆಯು ಐಹಿಕ ಬಳ್ಳಿಗಳ ಋತುಮಾನದ ಸೊಗಸನ್ನು ಮೀರಿಸಿದ್ದು ಗಾಳಿಯಲ್ಲಿ ತೇಲಿ ಬಂದು ರಾಜನಿಗೆ ಅತ್ಯಂತ ಪ್ರಿಯಕರಳಾದ ಇಂದುಮತಿಯ ಎದೆಯನ್ನು ಆಶ್ರಯಿಸಿತು... ಎಂದು ಕಾಳಿದಾಸನ ವರ್ಣನೆ.
ಹೂಮಾಲೆಯ ಸ್ಪರ್ಶವಾದದ್ದೇ ತಡ, ಇಂದುಮತಿಯ ಉಸಿರು ನಿಂತುಹೋಗುತ್ತದೆ. ಋಷಿ ತೃಣಬಿಂದುವಿನ ಮಾತುಗಳಂತೆಯೇ ಇಂದುಮತಿಯಾಗಿ ಜನ್ಮ ತಾಳಿದ್ದ ಅಪ್ಸರೆ ಹರಿಣಿಯ ಶಾಪ ವಿಮೋಚನೆಯಾಗುತ್ತದೆ. ಅಪ್ಸರೆ ಹರಿಣಿ ಇಹಲೋಕದ ನರಶರೀರವನ್ನು ತ್ಯಜಿಸಿ ಪುನಃ ಸ್ವರ್ಗಕ್ಕೆ ತೆರಳುತ್ತಾಳೆ.
ಇಂದುಮತಿಯನ್ನು ಕಳೆದುಕೊಂಡ ಅಜ ದುಃಖತಪ್ತನಾಗುತ್ತಾನೆ. ತನ್ನ ಅರಸಿಯಿಲ್ಲದೆ ತಾನೂ ಉಳಿಯೆನು ಎಂಬ ವಿರಕ್ತಿಯಿಂದಲೇ ಜೀವನ ಸಾಗಿಸುತ್ತಾನೆ. ಪತ್ನಿಯನ್ನು ಕಳೆದುಕೊಂಡ ಶೋಕ ದಿಂದ ಹೊರಬರಲು ಅವನಿಗೆ ಸಾಧ್ಯವಾಗುವುದೇ ಇಲ್ಲ. ಕೊನೆಗೂ ಗಂಗಾ-ಸರಯೂ ನದಿಗಳ ಸಂಗಮದಲ್ಲಿ ದೇಹತ್ಯಾಗ ಮಾಡುತ್ತಾನೆ. ಸ್ವರ್ಗದಲ್ಲಿ ಇಂದುಮತಿ ಅರ್ಥಾತ್ ಅಪ್ಸರೆ ಹರಿಣಿ ಯನ್ನು ಸೇರಿಕೊಳ್ಳುತ್ತಾನೆ. ಆದರೆ ಭೂಮಿಯ ಮೇಲೆ ಅವರ ಮಗ ದಶರಥನು ಅನಾಥನಾಗುತ್ತಾನೆ.
ಆಮೇಲಿನ ‘ರಾಮಾಯಣ’ ನಮಗೆ ಬಹುತೇಕ ಗೊತ್ತಿರುವಂಥದ್ದೇ. ಅಂದಹಾಗೆ ಪಾ.ವೆಂ ಆಚಾರ್ಯ ರು ಆ ಹರಟೆಸಂಕಲನಕ್ಕೆ ‘ಪ್ರಹಾರ’ ಎಂಬ ಹೆಸರನ್ನೇಕೆ ಇಟ್ಟಿರಬಹುದೆಂಬುದರ ವಿವರಣೆಗಳಿಲ್ಲ. ಆ ಶೀರ್ಷಿಕೆಯದೊಂದು ಹರಟೆ ಅದರಲ್ಲಿದೆಯಾ ನೋಡಿದರೆ ಇಲ್ಲ. ಬಹುಶಃ ಪುಷ್ಪಪ್ರಹಾರದ ಈ ಎರಡು ಕಥಾನಕಗಳ ಇಂಗಿತವನ್ನೇ ಸೂಚ್ಯವಾಗಿ ಆಯ್ದುಕೊಂಡಿದ್ದಿರ ಬಹುದು ಎಂದು ಈಗ ನನಗನಿಸುತ್ತದೆ!