ಅಮೃತಕಾಲ (ಭಾಗ-2)
ಲೀನಾ ಜೋಶಿ
ಬರೋಬ್ಬರಿ 47 ಸಾವಿರ ಕೆಜಿ ಚಿನ್ನ. ಅದರ ಮೌಲ್ಯ ಸಾವಿರಾರು ಕೋಟಿ ರೂಪಾಯಿ. ಅದನ್ನು ದೇಶದ ಗಮನಕ್ಕೆ ಬಾರದಂತೆ ಮುಂಬೈನ ರಿಸರ್ವ್ ಬ್ಯಾಂಕ್ ಭದ್ರಕೋಣೆಯಿಂದ ವಿಮಾನ ನಿಲ್ದಾಣಕ್ಕೆ ಸಾಗಿಸಬೇಕಿತ್ತು. ಕಾರ್ಯಾಚರಣೆಗೆ ಕೆಲವೇ ಕೆಲವು ಕಡಿಮೆ ಅಧಿಕಾರಿಗಳಿಗೆ ಮಾತ್ರ ಮಾಹಿತಿ ನೀಡಲಾಯಿತು. ರಾತ್ರಿ ವೇಳೆಯನ್ನು ಆಯ್ಕೆ ಮಾಡಲಾಯಿತು. ಪೊಲೀಸ್ ಭದ್ರತೆ, ಶಸ್ತ್ರಸಜ್ಜಿತ ಸಿಬ್ಬಂದಿ, ವಿಶೇಷ ವಾಹನಗಳು ಮತ್ತು ಕಟ್ಟುನಿಟ್ಟಿನ ಗೌಪ್ಯತೆ- ಎಲ್ಲವೂ ಸಿದ್ಧವಾಯಿತು.
ಚಿನ್ನದ ಪೆಟ್ಟಿಗೆಗಳನ್ನು ಅತ್ಯಂತ ಎಚ್ಚರಿಕೆಯಿಂದ ವಾಹನಗಳಲ್ಲಿ ತುಂಬಲಾಯಿತು. ಮುಂಬೈನ ನಿದ್ರಿಸುತ್ತಿದ್ದ ರಸ್ತೆಗಳ ಮೇಲೆ ವಾಹನಗಳ ಬೆಂಗಾವಲು ನಿಧಾನವಾಗಿ ವಿಮಾನ ನಿಲ್ದಾಣದತ್ತ ಹೊರಟಿತು. ಅದು ಸಾಮಾನ್ಯ ಬೆಂಗಾವಲು ಅಲ್ಲ. ಅದರೊಳಗೆ ಸಾಗುತ್ತಿದ್ದದ್ದು ಭಾರತದ ಆರ್ಥಿಕ ಭವಿಷ್ಯ. ಡಾ. ಸಿ. ರಂಗರಾಜನ್ ಅವರು ತಮ್ಮ ಆತ್ಮಕಥೆ Forks in the Road: My Days at RBI ನಲ್ಲಿ ಈ ಕಾರ್ಯಾಚರಣೆ ಎಷ್ಟು ರಹಸ್ಯವಾಗಿತ್ತೆಂಬುದನ್ನು ವಿವರಿಸಿದ್ದಾರೆ. ಆ ಸಮಯದಲ್ಲಿ ಚಿನ್ನದ ಸಾಗಣೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ನಂತರ ಹಲವು ಅಧಿಕಾರಿಗಳು ತಮ್ಮ ನೆನಪುಗಳನ್ನು ಹಂಚಿಕೊಂಡಾಗ ಮಾತ್ರ ಈ ಘಟನೆಗಳ ವಿವರಗಳು ಹೊರಬಂದವು.
ಆರ್‌ಬಿಐನಿಂದ ಸಾಲಾಗಿ ಟ್ರಕ್‌ಗಳು ಒಂದರ ಹಿಂದೆ ಒಂದರಂತೆ ವಿಮಾನ ನಿಲ್ದಾಣಕ್ಕೆ ಹೊರಟಿ ದ್ದವು. ಬೆಂಗಾವಲು ಪಡೆಗಳು ಹಿಂಭಾಗದಲ್ಲಿ. ಆ ರಾತ್ರಿ ಮುಂಬೈನ ಕೆಲವರು ಪೊಲೀಸ್ ಬೆಂಗಾವಲಿ ನೊಂದಿಗೆ ಸಾಗುತ್ತಿದ್ದ ವಾಹನಗಳನ್ನು ಆಶ್ಚರ್ಯದಿಂದ ನೋಡಿದರು. ಆದರೆ ಅದರೊಳಗೆ ಭಾರತದ ಆರ್ಥಿಕ ಭವಿಷ್ಯವೇ ಪ್ರಯಾಣಿಸುತ್ತಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ!
ಇದನ್ನೂ ಓದಿ: Leena Joshi Column: ದೇಶದ ಮಾನ ಉಳಿಸಲು ಚಿನ್ನ ಅಡವಿಟ್ಟ ರಾತ್ರಿ
ದಾರಿ ಮಧ್ಯದಲ್ಲಿ ಗಾಡಿಯ ಟೈರ್ ಕೆಟ್ಟಿತು. ಧಡಕ್ಕನೆ ಶಸ್ತ್ರಾಸ್ತ್ರ ಗಳಿಂದ ಸಜ್ಜಿತರಾಗಿದ್ದ ಕಮಾಂಡೋಗಳು ಗಾಡಿಯನ್ನು ಸುತ್ತುವರೆದರು. ಗಾಡಿಯಿಂದ ಒಬ್ಬ ಇಳಿದು ಟೈರ್ ಬದಲಾಯಿಸಿದ. ಜನ ಸುತ್ತುವರೆದು ಏನಾಯ್ತು? ಅಂತ ಪಿಸುಪಿಸು ಮಾತನಾಡಲು ಶುರು ಮಾಡಿದ್ದರು. ಆವಾಗ ಯಾರ ಬಳಿಯೂ ಸ್ಮಾರ್ಟ್ʼಫೋನ್ ಇರಲಿಲ್ಲ. ಇದ್ದಿದ್ದರೆ ಬ್ರೇಕಿಂಗ್ ನ್ಯೂಸ್ ಆಗುತ್ತಿತ್ತು. ಚಿನ್ನವನ್ನು ವಿಶೇಷ ವಿಮಾನದ ಮೂಲಕ ಬ್ಯಾಂಕ್ ಆಫ್ ಇಂಗ್ಲೆಂಡ್‌ಗೆ ಕಳುಹಿಸ ಲಾಯಿತು. ಅದೇ ಸಮಯ ದಲ್ಲಿ ಬ್ಯಾಂಕ್ ಆಫ್ ಜಪಾನ್ ಜೊತೆಯೂ ಹಣಕಾಸು ವ್ಯವಸ್ಥೆಗಳು ಪೂರ್ಣಗೊಂಡವು. ಈ ಚಿನ್ನವನ್ನು ಭದ್ರತೆಯಾಗಿ ಇಟ್ಟು ಭಾರತ ಸುಮಾರು 400 ಮಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ಕರೆನ್ಸಿ ಪಡೆಯಿತು. ಇದು ಶಾಶ್ವತ ಪರಿಹಾರವಲ್ಲ. ಆದರೆ ದೇಶ ದಿವಾಳಿಯಾಗುವುದನ್ನು ತಪ್ಪಿಸಲು ಸಾಕಾಯಿತು. ಭಾರತಕ್ಕೆ ಕೇವಲ ಕೆಲವು ನೂರು ಮಿಲಿಯನ್ ಡಾಲರ್ ಸಾಕಾಗುವುದಿಲ್ಲ ಎಂಬುದು ಸರಕಾರಕ್ಕೆ ಗೊತ್ತಿತ್ತು. ಆದ್ದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಜೊತೆ ವ್ಯಾಪಕ ಮಾತುಕತೆಗಳು ಆರಂಭವಾದವು. ಆದರೆ ಐಎಂಎಫ್ ಒಂದು ಷರತ್ತು ವಿಧಿಸಿತು.
ಹಣಕಾಸಿನ ನೆರವು ಬೇಕಾದರೆ, ಭಾರತ ತನ್ನ ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಗಳನ್ನು ಮಾಡಬೇಕು. ಆ ಸಮಯದವರೆಗೆ ಭಾರತದಲ್ಲಿ ಬಹುತೇಕ ಕೈಗಾರಿಕೆ ಆರಂಭಿಸಲು ಸರಕಾರದ ಅನುಮತಿ ಅಗತ್ಯವಾಗಿತ್ತು. ಇದನ್ನು ಲೈಸೆನ್ಸ್ ರಾಜ ಎಂದು ಕರೆಯಲಾಗುತ್ತಿತ್ತು. ಆಮದುಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವಿತ್ತು. ವಿದೇಶಿ ಹೂಡಿಕೆಗೆ ಹಲವು ನಿರ್ಬಂಧ ಗಳಿದ್ದವು. ಸರಕಾರದ ನಿಯಂತ್ರಣ ಬಹುತೇಕ ಪ್ರತಿಯೊಂದು ಕ್ಷೇತ್ರದಲ್ಲೂ ಕಾಣಿಸುತ್ತಿತ್ತು. ಐಎಂಎಫ್ ಅಭಿಪ್ರಾಯ ಸ್ಪಷ್ಟವಾಗಿತ್ತು. ತಾತ್ಕಾಲಿಕ ಸಾಲದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸಬೇಕು.
ಪಿವಿಎನ್ ಐತಿಹಾಸಿಕ ನಿರ್ಧಾರ
ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್ ಪರಿಸ್ಥಿತಿಯ ಗಂಭೀರತೆಯನ್ನು ಚೆನ್ನಾಗಿ ಅರ್ಥಮಾಡಿ ಕೊಂಡಿದ್ದರು. ಅವರು ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಅನೇಕ ರಾಜಕೀಯ ಅಪಾಯಗಳಿದ್ದರೂ ಅವರು ಸುಧಾರಣೆಗಳ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅದು ಸುಲಭದ ನಿರ್ಧಾರವಾಗಿರಲಿಲ್ಲ. ಆ ಸಮಯದಲ್ಲಿ ಅನೇಕರು ಈ ಕ್ರಮ ಗಳನ್ನು ವಿರೋಧಿಸಿದ್ದರು. ಆದರೆ ಮುಂದಿನ ದಶಕಗಳಲ್ಲಿ ಇದೇ ನಿರ್ಧಾರ ಭಾರತದ ಆರ್ಥಿಕ ಇತಿಹಾಸವನ್ನು ಬದಲಾಯಿಸಿತು. 1991ರ ಜುಲೈನಲ್ಲಿ ಭಾರತ ರೂಪಾಯಿಯ ಮೌಲ್ಯವನ್ನು ಎರಡು ಹಂತಗಳಲ್ಲಿ ಕಡಿಮೆ ಮಾಡಿತು. ಇದು ವಿವಾದಾತ್ಮಕ ನಿರ್ಧಾರವಾಗಿತ್ತು. ಆದರೆ ಇದರ ಉದ್ದೇಶ ಸ್ಪಷ್ಟವಾಗಿತ್ತು.
ಭಾರತೀಯ ವಸ್ತುಗಳು ವಿದೇಶಿ ಮಾರುಕಟ್ಟೆಯಲ್ಲಿ ಅಗ್ಗವಾಗಬೇಕು. ರಫ್ತು ಹೆಚ್ಚಬೇಕು. ದೇಶಕ್ಕೆ ಹೆಚ್ಚು ಡಾಲರ್ ಬರಬೇಕು. ಈ ನಿರ್ಧಾರ ನಂತರ ಭಾರತದ ರಫ್ತಿಗೆ ಹೊಸ ವೇಗ ನೀಡಿತು. 1991ರ ಜುಲೈ 24ರಂದು ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ತಮ್ಮ ಮೊದಲ ಬಜೆಟ್ ಮಂಡಿಸಿದರು.
ಸಂಸತ್ತಿನಲ್ಲಿ ಅವರು ಫ್ರೆಂಚ್ ಸಾಹಿತಿ ವಿಕ್ಟರ್ ಹ್ಯೂಗೋ ಅವರ ಪ್ರಸಿದ್ಧ ಮಾತನ್ನು ಉಲ್ಲೇಖಿಸಿ ದರು. No power on Earth can stop an idea whose time has come. ಈ ಒಂದು ವಾಕ್ಯ ಭಾರತದ ಹೊಸ ಆರ್ಥಿಕ ಯುಗದ ಘೋಷಣೆಯಾಯಿತು. 1991ರ ಜುಲೈ 24 ಭಾರತದ ಆರ್ಥಿಕ ಇತಿಹಾಸದ ಅತ್ಯಂತ ಪ್ರಮುಖವಾದ ದಿನ. ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ನೇತೃತ್ವದ ಸರ್ಕಾರ ದಲ್ಲಿ ಹಣಕಾಸು ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಮಂಡಿಸಿದ ಆ ಬಜೆಟ್, ಭಾರತವನ್ನು ಆರ್ಥಿಕ ದಿವಾಳಿತನದಿಂದ ಪಾರು ಮಾಡಿದ್ದಲ್ಲದೆ ಜಾಗತಿಕ ಮಾರುಕಟ್ಟೆಗೆ ಬಾಗಿಲು ತೆರೆಯುವಂತೆ ಮಾಡಿತು. ಆ ಬಜೆಟ್‌ನಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ನೀತಿಗಳಿಗೆ ಅಧಿಕೃತ ಮುದ್ರೆ ಬಿತ್ತು. ಕೈಗಾರಿಕೆಗಳನ್ನು ಸ್ಥಾಪಿಸಲು ಇದ್ದ ಕಠಿಣ ನಿಯಮಗಳು ಮತ್ತು ಕೆಂಪು ಪಟ್ಟಿಯ ಸಂಕೋಲೆಗಳನ್ನು ಸಡಿಲಗೊಳಿಸಲಾಯಿತು. ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ನೇರ ಹೂಡಿಕೆಗೆ ಮುಕ್ತ ಅವಕಾಶ ನೀಡಲಾಯಿತು. ಜಾಗತಿಕ ವ್ಯಾಪಾರವನ್ನು ಉತ್ತೇಜಿಸಲು ಆಮದು ತೆರಿಗೆಗಳನ್ನು ಭಾರಿ ಪ್ರಮಾಣದಲ್ಲಿ ಇಳಿಸಲಾಯಿತು. 1991ರ ನಂತರ ಭಾರತದಲ್ಲಿ ಕೈಗಾರಿಕೆ ಆರಂಭಿಸಲು ಬೇಕಿದ್ದ ಅನೇಕ ಪರವಾನಗಿ ಗಳನ್ನು ರದ್ದುಪಡಿಸಲಾಯಿತು.
ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶ ನೀಡಲಾಯಿತು. ವಿದೇಶಿ ಕಂಪನಿಗಳಿಗೆ ಹೂಡಿಕೆ ಮಾಡಲು ಅವಕಾಶ ದೊರೆಯಿತು. ದೂರಸಂಪರ್ಕ, ವಾಹನ, ವಿಮಾನ ಯಾನ, ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರಮೇಣ ಸುಧಾರಣೆಗಳು ಆರಂಭವಾದವು. ಇಂದಿನ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ, ವಾಹನ ಉದ್ಯಮ, ಮೊಬೈಲ್ ಕ್ರಾಂತಿ ಮತ್ತು ಸ್ಟಾರ್ಟಪ್ ಪರಿಸರದ ಬೇರು ಗಳನ್ನು 1991ರ ಈ ಸುಧಾರಣೆ ಗಳ ಕಾಣಬಹುದು.
ಚಿನ್ನದ ಬಗ್ಗೆ ಹರಿದ ತಪ್ಪು ಕಲ್ಪನೆ
ಇಂದಿಗೂ ಅನೇಕರು 1991ರಲ್ಲಿ ಭಾರತ ತನ್ನ ಚಿನ್ನವನ್ನು ಮಾರಿ ಬಿಟ್ಟಿತು ಎನ್ನುತ್ತಾರೆ. ಇದು ಸತ್ಯವಲ್ಲ. ಭಾರತ ತನ್ನ ಚಿನ್ನವನ್ನು ಮಾರಲಿಲ್ಲ. ಅದನ್ನು ಅಡ ಇಟ್ಟು ಸಾಲ ಪಡೆಯಲಾಯಿತು. ಸಾಲ ಮರುಪಾವತಿಯಾದ ನಂತರ ಆ ಚಿನ್ನ ಸಂಪೂರ್ಣವಾಗಿ ಭಾರತಕ್ಕೆ ಮರಳಿ ಬಂತು. ಈ ವಿಷಯವನ್ನು ಡಾ.ಸಿ.ರಂಗರಾಜನ್, ಮಾಜಿ ಆರ್‌ಬಿಐ ಗವರ್ನರ್ ಡಾ.ವೈ.ವಿ.ರೆಡ್ಡಿ ಮತ್ತು ಇತರ ಅಧಿಕಾರಿಗಳು ತಮ್ಮ ಬರಹಗಳು ಹಾಗೂ ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
1991ರಲ್ಲಿ ಭಾರತ ವಿದೇಶಿ ಬ್ಯಾಂಕ್‌ಗಳಿಂದ ಕೆಲವು ನೂರು ಮಿಲಿಯನ್ ಡಾಲರ್ ಪಡೆಯಲು ತನ್ನ ಚಿನ್ನವನ್ನು ಅಡವಿಡಬೇಕಾಯಿತು. ಇಂದು ಅದೇ ಭಾರತ ವಿಶ್ವದ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆರ್‌ಬಿಐ ಈಗ ನಿಯಮಿತವಾಗಿ ಚಿನ್ನವನ್ನು ಖರೀದಿಸಿ ತನ್ನ ಸಂಗ್ರಹವನ್ನು ಹೆಚ್ಚಿಸುತ್ತಿದೆ. ಒಮ್ಮೆ ನೆರವು ಕೇಳಿದ ರಾಷ್ಟ್ರ ಇಂದು ಅನೇಕ ದೇಶಗಳಿಗೆ ಹೂಡಿಕೆ ಮಾಡುವ ಮಟ್ಟಕ್ಕೆ ಬೆಳೆದಿದೆ. ಈ ಯಶಸ್ಸಿನ ಆರಂಭ 1991ರ ಆ ನೋವಿನ ನಿರ್ಧಾರದಲ್ಲಿತ್ತು. ಕೆಲವು ಘಟನೆಗಳು ಒಂದು ದೇಶದ ಆರ್ಥಿಕತೆಯನ್ನು ಮಾತ್ರ ಬದಲಾಯಿಸುವು ದಿಲ್ಲ; ಅವು ಆ ದೇಶದ ಮನಸ್ಥಿತಿಯನ್ನೇ ಬದಲಾಯಿಸುತ್ತವೆ. 1991ರ ಬಿಕ್ಕಟ್ಟು ಅಂತಹ ಒಂದು ತಿರುವು. ದೇಶದ ಅತ್ಯಂತ ಕಠಿಣ ದಿನಗಳು ನಿಧಾನವಾಗಿ ಹಿಂದೆ ಸರಿಯುತ್ತಿದ್ದವು. ಚಿನ್ನವನ್ನು ಅಡವಿಟ್ಟ ಕಾರಣ ಭಾರತಕ್ಕೆ ತುರ್ತು ವಿದೇಶಿ ವಿನಿಮಯ ಲಭ್ಯವಾಯಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಒಂದು ಸ್ಪಷ್ಟ ಸಂದೇಶ ಹೋಯಿತು- ಭಾರತ ತನ್ನ ಸಾಲದ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ಇದೇ ವಿಶ್ವದ ಹಣಕಾಸು ಸಂಸ್ಥೆಗಳ ವಿಶ್ವಾಸವನ್ನು ಮರುಸ್ಥಾಪಿಸಲು ಮೊದಲ ಹೆಜ್ಜೆಯಾಯಿತು. ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿಸಿದ ನಂತರ, ಅಡವಿಟ್ಟಿದ್ದ ಚಿನ್ನವನ್ನು ಹಂತ ಹಂತವಾಗಿ ಭಾರತ ಮರಳಿ ಪಡೆದುಕೊಂಡಿತು. ಇದು ಕೇವಲ ಹಣಕಾಸಿನ ವ್ಯವಹಾರವಾಗಿರಲಿಲ್ಲ. ಅದು ಭಾರತದ ವಿಶ್ವಾಸಾರ್ಹತೆಯ ಸಂಕೇತವಾಗಿತ್ತು. ಮಾಜಿ ಆರ್‌ಬಿಐ ಗವರ್ನರ್ ಡಾ.ಸಿ. ರಂಗರಾಜನ್ ತಮ್ಮ ಆತ್ಮಕಥೆಯಲ್ಲಿ ಒಂದು ಪ್ರಮುಖ ವಿಷಯವನ್ನು ಉಲ್ಲೇಖಿಸುತ್ತಾರೆ.
1991ರ ಚಿನ್ನದ ಅಡವನ್ನು ಅವರು ಅನಿವಾರ್ಯ ಆದರೆ ತಾತ್ಕಾಲಿಕ ಕ್ರಮ ಎಂದು ವಿವರಿಸುತ್ತಾರೆ. ಅವರ ಪ್ರಕಾರ, ಭಾರತ ಡೀಫಾಲ್ಟ್ ಆಗಿದ್ದರೆ ಅದರ ಪರಿಣಾಮ ಹಲವು ವರ್ಷಗಳವರೆಗೆ ಆರ್ಥಿಕತೆ ಯ ಮೇಲೆ ಬೀಳುತ್ತಿತ್ತು. ಚಿನ್ನವನ್ನು ಅಡವಿಡುವುದು ನೋವಿನ ನಿರ್ಧಾರವಾಗಿದ್ದರೂ, ಅದು ದೇಶದ ಹಣಕಾಸು ವಿಶ್ವಾಸವನ್ನು ಉಳಿಸಿತು. ಮಾಜಿ ಆರ್‌ಬಿಐ ಗವರ್ನರ್ ಡಾ.ವೈ.ವಿ.ರೆಡ್ಡಿ ಕೂಡ ತಮ್ಮ ಅbqಜ್ಚಿಛಿ Zb ಈಜಿooಛ್ಞಿಠಿ ಪುಸ್ತಕದಲ್ಲಿ 1991ರ ಬಿಕ್ಕಟ್ಟಿನ ಕುರಿತು ಬರೆಯುತ್ತಾರೆ. ಅವರ ಪ್ರಕಾರ, 1991ರ ಘಟನೆ ಭಾರತಕ್ಕೆ ಒಂದು ದೊಡ್ಡ ಪಾಠ ಕಲಿಸಿತು. ವಿದೇಶಿ ವಿನಿಮಯ ಮೀಸಲು ಬಲವಾಗಿರಬೇಕು.
ಅನಗತ್ಯ ವಿದೇಶಿ ಸಾಲದ ಮೇಲೆ ಅವಲಂಬನೆ ಕಡಿಮೆ ಮಾಡಬೇಕು. ಆರ್ಥಿಕ ಶಿಸ್ತು ಎಂದಿಗೂ ಸಡಿಲ ವಾಗಬಾರದು. ಈ ಪಾಠಗಳೇ ಮುಂದಿನ ವರ್ಷಗಳಲ್ಲಿ ಭಾರತದ ಹಣಕಾಸು ನೀತಿಗೆ ಮಾರ್ಗದರ್ಶಿ ಯಾದವು.
ಇಂದು ಭಾರತದ ಪರಿಸ್ಥಿತಿ
1991ರಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಸುಮಾರು 1.2 ಬಿಲಿಯನ್ ಡಾಲರ್ ಮಾತ್ರ. ಇಂದು ಅದು 600 ಬಿಲಿಯನ್ ಡಾಲರ್‌ಗಿಂತ ಹೆಚ್ಚು. 1991ರಲ್ಲಿ ಭಾರತ ಕೆಲ ನೂರು ಮಿಲಿಯ ಡಾಲರ್ ಪಡೆಯಲು ಚಿನ್ನವನ್ನು ಅಡವಿಡಬೇಕಾಯಿತು. ಇಂದು ಭಾರತೀಯ ರಿಸರ್ವ್ ಬ್ಯಾಂಕ್ ವಿಶ್ವದ ಅತಿದೊಡ್ಡ ಚಿನ್ನದ ಖರೀದಿದಾರ ಬ್ಯಾಂಕ್‌ಗಳಲ್ಲಿ ಒಂದಾಗಿದೆ. 1991ರಲ್ಲಿ ದೇಶ ತನ್ನ ಆರ್ಥಿಕ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತು. ಇಂದು ಭಾರತ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆ ಯಾಗಿದೆ. 1991ರ ಆರ್ಥಿಕ ಸುಧಾರಣೆಗಳ ಬಗ್ಗೆ ಮಾತನಾಡುವಾಗ ಹೆಚ್ಚಾಗಿ ಪಿ.ವಿ. ನರಸಿಂಹ ರಾವ್ ಮತ್ತು ಡಾ.ಮನಮೋಹನ್ ಸಿಂಗ್ ಅವರ ಹೆಸರುಗಳು ಕೇಳಿ ಬರುತ್ತವೆ. ಅದು ಸಹಜ. ಆದರೆ ಇತಿಹಾಸದ ಇನ್ನೊಂದು ಮುಖವನ್ನೂ ಮರೆಯಬಾರದು. ಚಿನ್ನವನ್ನು ಅಡವಿಡುವ ಮೊದಲ ಮತ್ತು ಅತ್ಯಂತ ಕಠಿಣ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡವರು ಪ್ರಧಾನಮಂತ್ರಿ ಚಂದ್ರಶೇಖರ್. ಅದು ಜನಪ್ರಿಯ ನಿರ್ಧಾರವಾಗಿರಲಿಲ್ಲ. ಆದರೆ ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿತ್ತು. ಅದೇ ರೀತಿ, ಆ ನಿರ್ಧಾರವನ್ನು ಆಡಳಿತಾತ್ಮಕವಾಗಿ ಕಾರ್ಯ ರೂಪಕ್ಕೆ ತರಲು ಯಶವಂತ್ ಸಿನ್ಹಾ, ನರೇಶ್ ಚಂದ್ರ, ಎಸ್. ವೆಂಕಟರಮಣನ್, ಡಾ.ಸಿ.ರಂಗರಾಜನ್, ಮತ್ತು ಅನೇಕ ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಗಲು-ರಾತ್ರಿ ಶ್ರಮಿಸಿದರು. ಇತಿಹಾಸ ಸಾಮಾನ್ಯವಾಗಿ ಕೆಲವೇ ಹೆಸರುಗಳನ್ನು ನೆನಪಿಡುತ್ತದೆ. ಆದರೆ ರಾಷ್ಟ್ರಗಳನ್ನು ಉಳಿಸುವಲ್ಲಿ ಅನೇಕ ಕಾಣದ ಕೈಗಳ ಪಾತ್ರವೂ ಇರುತ್ತದೆ. 1991 ನಮಗೆ ಕಲಿಸಿದ ಪಾಠಗಳೆಂದರೆ, ಸಾಲ ಪಡೆಯುವುದು ತಪ್ಪಲ್ಲ. ಆದರೆ ಅದನ್ನು ಮರುಪಾವತಿಸುವ ಸಾಮರ್ಥ್ಯ ಇರಬೇಕು. ವಿದೇಶಿ ವಿನಿಮಯ ಮೀಸಲು ಯಾವುದೇ ರಾಷ್ಟ್ರದ ಆರ್ಥಿಕ ಭದ್ರತೆಯ ಕವಚ. ಜನಪ್ರಿಯ ನಿರ್ಧಾರಗಳಿಗಿಂತ ಸರಿಯಾದ ನಿರ್ಧಾರಗಳು ಮುಖ್ಯ. ಬಿಕ್ಕಟ್ಟುಗಳು ಸುಧಾರಣೆಗೆ ಅವಕಾಶವಾಗಬಹುದು.
ಒಬ್ಬ ನಾಯಕನ ನಿಜವಾದ ಪರೀಕ್ಷೆ ಸಂಕಷ್ಟದ ಸಮಯದ ನಡೆಯುತ್ತದೆ. ಮೂರು ದಶಕಗಳ ನಂತರ ಹಿಂದಿರುಗಿ ನೋಡಿದರೆ, ಆ ನಿರ್ಧಾರ ಭಾರತದ ಆರ್ಥಿಕ ಪುನರ್ಜನ್ಮದ ಆರಂಭವಾಗಿತ್ತು. ಕೆಲವೇ ವರ್ಷಗಳಲ್ಲಿ ಅದೇ ರಾಷ್ಟ್ರ ಹೊಸ ಶಕ್ತಿಯೊಂದಿಗೆ ಎದ್ದು ನಿಂತಿತು. ಇಂದು ವಿಶ್ವದ ಪ್ರಮುಖ ಆರ್ಥಿಕತೆಗಳ ಸಾಲಿನಲ್ಲಿ ನಿಂತಿರುವ ಭಾರತದ ಕಥೆಯನ್ನು ಅರ್ಥಮಾಡಿಕೊಳ್ಳ ಬೇಕಾದರೆ, 1991ರ ಮೇ ಮತ್ತು ಜುಲೈ ತಿಂಗಳ ಮಧ್ಯರಾತ್ರಿಯನ್ನು ಮರೆಯಲು ಸಾಧ್ಯವಿಲ್ಲಅ