Leena Joshi Column: ದೇಶದ ಮಾನ ಉಳಿಸಲು ಚಿನ್ನ ಅಡವಿಟ್ಟ ರಾತ್ರಿ
ಇತಿಹಾಸದಲ್ಲಿ ಕೆಲವು ಕ್ಷಣಗಳಿರುತ್ತವೆ. ಆ ಕ್ಷಣಗಳಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ ಇಡೀ ರಾಷ್ಟ್ರದ ಭವಿಷ್ಯವನ್ನು ಬದಲಾಯಿಸುತ್ತದೆ. ಮೇ 1991, ದೆಹಲಿಯಲ್ಲಿ ಬಿರು ಬಿಸಿಲು. ಚುನಾವಣೆಯ ರಣರಂಗ. ಹಣಕಾಸು ಮಂತ್ರಿ ಯಶ್ವಂತ್ ಸಿನ್ಹಾ ತಮ್ಮ ಎದುರಿಗಿದ್ದ ಫೈಲ್ ನೋಡುತ್ತಾ ನೂರಾರು ಯೋಚನೆಗಳಲ್ಲಿ ಮುಳುಗಿ ಹೋಗಿದ್ದರು. ಮತ್ತೊಮ್ಮೆ ಆರ್‌ಬಿಐ ಡೆಪ್ಯುಟಿ ಗವರ್ನರ್ ರಂಗರಾಜನ್‌ಗೆ ಫೋನ್ ಹಾಯಿಸಿದರು.
-
ಅಮೃತ ಕಾಲ
ಲೀನಾ ಜೋಶಿ
ಇತಿಹಾಸದಲ್ಲಿ ಕೆಲವು ಕ್ಷಣಗಳಿರುತ್ತವೆ. ಆ ಕ್ಷಣಗಳಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ ಇಡೀ ರಾಷ್ಟ್ರದ ಭವಿಷ್ಯವನ್ನು ಬದಲಾಯಿಸುತ್ತದೆ. ಮೇ 1991, ದೆಹಲಿಯಲ್ಲಿ ಬಿರು ಬಿಸಿಲು. ಚುನಾವಣೆ ಯ ರಣರಂಗ. ಹಣಕಾಸು ಮಂತ್ರಿ ಯಶ್ವಂತ್ ಸಿನ್ಹಾ ತಮ್ಮ ಎದುರಿಗಿದ್ದ ಫೈಲ್ ನೋಡುತ್ತಾ ನೂರಾರು ಯೋಚನೆಗಳಲ್ಲಿ ಮುಳುಗಿ ಹೋಗಿದ್ದರು. ಮತ್ತೊಮ್ಮೆ ಆರ್‌ಬಿಐ ಡೆಪ್ಯುಟಿ ಗವರ್ನರ್ ರಂಗರಾಜನ್‌ಗೆ ಫೋನ್ ಹಾಯಿಸಿದರು.
‘ಬೇರೆ ಏನೂ ಆಪ್ಷನ್ ಇಲ್ಲವಾ, ಮತ್ತೊಮ್ಮೆ ನೋಡಿ’ ಎಂದರು. ರಂಗರಾಜನ್, ‘ಸರ್, ನಾನು ಹೇಳಿದ್ದು ಎರಡೇ ಆಪ್ಷನ್. ಸಾಲ ತೀರಿಸಲಿಕ್ಕೆ ಆಗಲ್ಲ ಎಂದು ಕೈ ಎತ್ತಿ ಬಿಡೋಣ. ಲ್ಯಾಟಿನ್ ಅಮೆರಿಕಾ ದೇಶಗಳು ಹಾಗೇ ಮಾಡುತ್ತಿದ್ದಾವೆ.’ ಆಗ ಯಶ್ವಂತ್, ‘ಇಲ್ಲ, ಇಲ್ಲ, ಕೊಟ್ಟ ಸಾಲ ತೀರಿಸದೇ ಇದ್ದರೆ ಮಾನ ಉಳಿಯುವುದಿಲ್ಲ. ಇರಲಿ ಬಿಡಿ’ ಎಂದು ರಿಸೀವರ್ ಇಟ್ಟು ಸೀದಾ ಪ್ರಧಾನಿ ಚಂದ್ರಶೇಖರ್ ನಿವಾಸಕ್ಕೆ ತೆರಳಿದರು.
ಪ್ರಧಾನಿ ಚಂದ್ರಶೇಖರ್ ಕ್ಯಾಬಿನೆಟ್ ಸೆಕ್ರೆಟರಿ ನರೇಶ್ ಚಂದ್ರ ಬಳಿ ‘ಈ ದೇಶ ನನ್ನನ್ನು ಯಾವ ರೀತಿ ನೆನಪಿಸಿಕೊಳ್ಳಬಹುದು, ನರೇಶ್?’ ಎಂದು ಕೇಳಿದರು. ‘ದೇಶವನ್ನು ದಿವಾಳಿ ಎಂದು ಘೋಷಿಸುವು ದಕ್ಕಿಂತ, ದೇಶದ ಮಾನ ಕಾಪಾಡಿದ ಪ್ರಧಾನಿ ಎಂದು ಇತಿಹಾಸ ನಿಮ್ಮನ್ನು ನೆನಪಿಸಿಕೊಳ್ಳುತ್ತದೆ’, ಎಂದರು.
ಒಮ್ಮೆ ವಿಚಲಿತರಾದಂತೆ ಕಂಡ ಚಂದ್ರಶೇಖರ್, ಫೈಲ್‌ಗೆ ಸಹಿ ಹಾಕಿದರು.ಇಂದು ಭಾರತ ವಿಶ್ವದ ಅಗ್ರ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ. ನೂರಾರು ಬಿಲಿಯ ಡಾಲರ್‌ಗಳ ವಿದೇಶಿ ವಿನಿಮಯ ರಿಜರ್ವ್ ಹೊಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವಿಶ್ವದ ಅತಿ ಹೆಚ್ಚು ಚಿನ್ನ ಸಂಗ್ರಹ ಹೊಂದಿರುವ ಕೇಂದ್ರ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಇಂದು ಭಾರತ ವಿಶ್ವಕ್ಕೆ ಸಾಲ ನೀಡುವ ಸಾಮರ್ಥ್ಯವನ್ನೂ ಹೊಂದಿದೆ. ಆದರೆ, ಇದೇ ಭಾರತ ಕೇವಲ ಮೂರು ದಶಕಗಳ ಹಿಂದೆ ವಿಶ್ವದ ಮುಂದೆ ಕೈಚಾಚುವ ಪರಿಸ್ಥಿತಿಗೆ ಬಂದಿತ್ತು ಎಂಬುದು ಇಂದಿನ ಯುವ ಪೀಳಿಗೆಗೆ ಆಶ್ಚರ್ಯವಾಗಬಹುದು.
1991ರಲ್ಲಿ ಭಾರತದ ಬಳಿ ಕೇವಲ ಎರಡು ವಾರಗಳ ಆಮದು ಮಾಡಲು ಸಾಕಾಗುವಷ್ಟು ಮಾತ್ರ ವಿದೇಶಿ ವಿನಿಮಯ ಉಳಿದಿತ್ತು. ಪೆಟ್ರೋಲ್ ಖರೀದಿಸಲು ಡಾಲರ್ ಇರಲಿಲ್ಲ. ಔಷಧಿ ಆಮದು ಮಾಡಿಕೊಳ್ಳಲು ಹಣ ಇರಲಿಲ್ಲ. ವಿದೇಶಿ ಸಾಲದ ಬಡ್ಡಿ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಗತ್ತಿನ ಹಣಕಾಸು ಸಂಸ್ಥೆಗಳು ಭಾರತವನ್ನು ಅನುಮಾನದಿಂದ ನೋಡು ತ್ತಿದ್ದವು. ಒಂದೇ ಒಂದು ತಪ್ಪು ನಿರ್ಧಾರ ಭಾರತವನ್ನು ಸಾರ್ವಭೌಮ ದಿವಾಳಿ ರಾಷ್ಟ್ರ ( Sovereign Default) ಎಂದು ಘೋಷಿಸುವ ಸ್ಥಿತಿಗೆ ತಳ್ಳಬಹುದಿತ್ತು.
ಇದನ್ನೂ ಓದಿ: Leena Joshi Column: ಭಾರತದ ರೈಲ್ವೆ ಯುದ್ಧ ಕಾಲದಲ್ಲಿ ಎಷ್ಟು ಸುರಕ್ಷಿತ ?
ಭಾರತ ಆ ಸ್ಥಿತಿಗೆ ಒಂದೇ ದಿನದಲ್ಲಿ ತಲುಪಿರಲಿಲ್ಲ. ಅದರ ಹಿಂದೆ ಸುಮಾರು 10 ವರ್ಷಗಳ ಆರ್ಥಿಕ ಮತ್ತು ರಾಜಕೀಯ ಘಟನೆಗಳ ಸರಪಳಿಯಿತ್ತು. 1980ರ ಆರಂಭದಲ್ಲಿ ಭಾರತದ ಆರ್ಥಿಕತೆ ನಿಧಾನವಾಗಿ ಬೆಳೆಯುತ್ತಿತ್ತು. ದೇಶದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ದೊಡ್ಡ ಪ್ರಮಾಣದ ಹೂಡಿಕೆಯ ಅಗತ್ಯವಿತ್ತು. ರಸ್ತೆಗಳು, ವಿದ್ಯುತ್, ದೂರಸಂಪರ್ಕ, ಸಾರ್ವಜನಿಕ ವಲಯದ ಕೈಗಾರಿಕೆ ಗಳು, ರಸಗೊಬ್ಬರ ಕಾರ್ಖಾನೆಗಳು, ನೀರಾವರಿ ಯೋಜನೆಗಳು- ಇವೆಲ್ಲಕ್ಕೂ ಅಪಾರ ಹಣ ಬೇಕಾಗಿತ್ತು. ಸರಕಾರದ ಆದಾಯದ ಪ್ರಮಾಣ ಅಷ್ಟಿರಲಿಲ್ಲ. ಹೀಗಾಗಿ ಸರಕಾರ ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ವಿದೇಶಿ ವಾಣಿಜ್ಯ ಬ್ಯಾಂಕ್‌ಗಳಿಂದ ನಿರಂತರ ವಾಗಿ ಸಾಲ ಪಡೆಯುತ್ತಿತ್ತು. ಆರಂಭದಲ್ಲಿ ಇದರಿಂದ ದೊಡ್ಡ ಸಮಸ್ಯೆ ಕಾಣಿಸಲಿಲ್ಲ.
ಯಾಕೆಂದರೆ ಆರ್ಥಿಕ ಬೆಳವಣಿಗೆಯ ವೇಗವೂ ಉತ್ತಮವಾಗಿತ್ತು. ಯಾರೂ ಗಮನಿಸದ ಒಂದು ವಿಷಯ ನಿಧಾನವಾಗಿ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿತ್ತು. ಸಾಲದ ಜೊತೆಗೆ ಹೆಚ್ಚಾಗುತ್ತಿದ್ದಿದ್ದು ಸಾಲಕ್ಕಿಂತ ವೇಗವಾಗಿ ವೃದ್ಧಿಯಾಗುತಿದ್ದ ಸಾಲದ ಮೇಲಿನ ಬಡ್ಡಿ. 1980ರ ಆರಂಭದಲ್ಲಿ ಭಾರತದ ಒಟ್ಟು ವಿದೇಶಿ ಸಾಲ ಸುಮಾರು 20 ಬಿಲಿಯ ಅಮೆರಿಕನ್ ಡಾಲರ್ (ಆಗಿನ ಲೆಕ್ಕದಲ್ಲಿ ಸುಮಾರು 16000 ಕೋಟಿ).
1991ರ ವೇಳೆಗೆ ಅದು ಸುಮಾರು 70 ಬಿಲಿಯ ಡಾಲರ್ ತಲುಪಿತ್ತು. ರಾಜೀವ್ ಗಾಂಧಿಯ ಕನಸು 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿ, ಭಾರತದ ಆರ್ಥಿಕತೆಯನ್ನು ಆಧುನೀಕರಿಸಲು ಬಯಸಿ ಕಂಪ್ಯೂಟರ್, ದೂರಸಂಪರ್ಕ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಕೆಲವು ಕೈಗಾರಿಕೆಗಳ ಮೇಲಿನ ನಿಯಂತ್ರಣ ಸಡಿಲಗೊಳಿಸಿದರು. ಅಭಿವೃದ್ಧಿಗೆ ಸರಕಾರದ ವೆಚ್ಚವೂ ಭಾರಿ ಪ್ರಮಾಣದಲ್ಲಿ ಹೆಚ್ಚಾಯಿತು.
ಪರಿಣಾಮವಾಗಿ ಹಣಕಾಸು ಕೊರತೆ ನಿರಂತರವಾಗಿ ಏರತೊಡಗಿತು. 1990-91ರ ವೇಳೆಗೆ ಅದು ಭಾರತದ ಜಿಡಿಪಿಯ ಸುಮಾರು 8.4% ತಲುಪಿತ್ತು. ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೆ ಅಪಾಯದ ಮಟ್ಟವೆಂದು ಅರ್ಥಶಾಸಜ್ಞರು ಎಚ್ಚರಿಸಿದ್ದರು. ಸರಕಾರ ತನ್ನ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿತ್ತು. ಆ ಕೊರತೆಯನ್ನು ಮತ್ತೆ ಸಾಲ ಪಡೆದು ತುಂಬಲಾಗುತ್ತಿತ್ತು. ವಿದೇಶಿ ವಿನಿಮಯ ಯಾಕೆ ಮುಖ್ಯ? ನಮ್ಮ ದೇಶದ ಬಳಿ ಎಷ್ಟು ರೂಪಾಯಿ ಇದ್ದರೂ ಸಾಕಾಗುವುದಿಲ್ಲ. ವಿದೇಶದಿಂದ ತೈಲ, ಯಂತ್ರೋಪಕರಣ, ರಸಗೊಬ್ಬರ, ಔಷಧಿ ಮತ್ತು ತಂತ್ರಜ್ಞಾನ ಖರೀದಿಸಲು ಡಾಲರ್ ಬೇಕು. ಡಾಲರ್ ಸಂಗ್ರಹವನ್ನೇ ವಿದೇಶಿ ವಿನಿಮಯ ಮೀಸಲು ಎಂದು ಕರೆಯುತ್ತಾರೆ. ಮನೆಯಲ್ಲಿರುವ ಹಣ ಮುಗಿದರೆ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತೆ, ವಿದೇಶಿ ವಿನಿಮಯ ಮುಗಿದರೆ ದೇಶವೇ ಸಂಕಷ್ಟಕ್ಕೆ ಸಿಲುಕುತ್ತದೆ. 1980ರ ಕೊನೆಯ ವೇಳೆಗೆ ಭಾರತದ ಡಾಲರ್ ಸಂಗ್ರಹ ವೇಗವಾಗಿ ಕರಗತೊಡಗಿತ್ತು.
ಸಂಕಷ್ಟದ ಮೇಲೆ ಬರೆ
ಆಗ 1990, ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಕುವೈತ್ ಮೇಲೆ ದಾಳಿ ನಡೆಸಿದರು. ಗಲ್ಫ್ ಯುದ್ಧ ಆರಂಭವಾಯಿತು. ಯುದ್ಧ ಆರಂಭವಾದ ಕೆಲವೇ ದಿನಗಳಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿದವು. ಭಾರತ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ಗಲ್ಫ್ ರಾಷ್ಟ್ರ ಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಬೆಲೆ ದುಪ್ಪಟ್ಟಾಯಿತು, ಪ್ರತಿದಿನವೂ ಹೆಚ್ಚು ಡಾಲರ್ ಖರ್ಚಾಗತೊಡಗಿತು. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಭಾರತೀಯರು ಭಾರತಕ್ಕೆ ಓಡಿ ಬಂದರು. ಸರಕಾರ ಲಕ್ಷಾಂತರ ಭಾರತೀಯರನ್ನು ಕುವೈತ್ ಮತ್ತು ಇರಾಕ್ ನಿಂದ ವಿಮಾನದ ಮೂಲಕ ಸ್ವದೇಶಕ್ಕೆ ಕರೆತಂದಿತು. ಇದರಿಂದ ವಿದೇಶದಿಂದ ಬರುತ್ತಿದ್ದ ಹಣದ ಹರಿವೂ ಕಡಿಮೆಯಾಯಿತು. ಮತ್ತೊಂದು ಆಘಾತ- ಸೋವಿಯತ್ ಒಕ್ಕೂಟದ ಪತನ. ಭಾರತದ ವಿಶ್ವ ಸನೀಯ ಪಾಲುದಾರ ಸೋವಿಯತ್ ಒಕ್ಕೂಟ 1991ರಲ್ಲಿ ವಿಭಜನೆಯ ಹಂತಕ್ಕೆ ತಲುಪಿತು. ಭಾರತ ಮತ್ತು ಸೋವಿಯತ್ ಒಕ್ಕೂಟದ ನಡುವೆ ರೂಬಲ್ ಆಧಾರಿತ ವ್ಯಾಪಾರ ನಡೆಯುತ್ತಿತ್ತು. ಆ ವ್ಯವಸ್ಥೆಯೇ ಕುಸಿಯಿತು. ಭಾರತದ ರಫ್ತು ನೆಲ ಕಚ್ಚಿತು. ಆರ್ಥಿಕ ಸಮಸ್ಯೆಗಳ ಜೊತೆಗೆ ರಾಜಕೀಯ ಸ್ಥಿರತೆಯೂ ಇರಲಿಲ್ಲ.
1989ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಕಳೆದುಕೊಂಡಿತು. ವಿ.ಪಿ.ಸಿಂಗ್ ಪ್ರಧಾನಿಯಾದರು. ಮಂಡಲ್ ಆಯೋಗದ ಶಿಫಾರಸು ಜಾರಿಗೆ ಬಂದ ನಂತರ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಸರಕಾರ ಪತನವಾಯಿತು. ನಂತರ ಚಂದ್ರಶೇಖರ್ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾದರು. ಆದರೆ ಅದು ಅಲ್ಪಮತ ಸರಕಾರ. ದೇಶ ಚುನಾವಣೆ ಎದುರಿಸುತ್ತಿತ್ತು. ಅಂತಹ ಸಮಯದ ಭಾರತದ ಆರ್ಥಿಕತೆ ಕುಸಿಯುತ್ತಿತ್ತು.
1991ರ ಆರಂಭಕ್ಕೆ ವಿದೇಶಿ ಬ್ಯಾಂಕುಗಳು ಭಾರತಕ್ಕೆ ಹೊಸ ಸಾಲ ನೀಡಲು ಹಿಂದೇಟು ಹಾಕಿದವು. ಕೆಲವು ಬ್ಯಾಂಕುಗಳು ಭಾರತದ ಅಲ್ಪಾವಧಿ ಸಾಲಗಳನ್ನು ನವೀಕರಿಸಲು ನಿರಾಕರಿಸಿದವು. ವಿದೇಶಿ ಹೂಡಿಕೆದಾರರು ಹಣ ಹಿಂತೆಗೆದುಕೊಳ್ಳಲು ಆರಂಭಿಸಿದರು. ಭಾರತದ ಕ್ರೆಡಿಟ್ ರೇಟಿಂಗ್ ಕುಸಿಯುತ್ತಿತ್ತು. ವಿದೇಶಿ ಮಾಧ್ಯಮಗಳಲ್ಲಿ ಒಂದೇ ಪ್ರಶ್ನೆ ಕೇಳಲಾಗುತ್ತಿತ್ತು- ಭಾರತ ತನ್ನ ಸಾಲ ವನ್ನು ಮರುಪಾವತಿಸಬಹುದೇ? ಮೇ 1991ರ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು ಸುಮಾರು 1.2 ಬಿಲಿಯ ಡಾಲರ್ ಮಾತ್ರ ಉಳಿದಿತ್ತು. ಅದು ದೇಶದ ಎರಡು ವಾರಗಳ ಆಮದಿಗೆ ಸಾಕು.
ದೇಶದ ಮುಂದೆ ಈಗ ಒಂದೇ ಪ್ರಶ್ನೆ. ಭಾರತ ಡೀಫಾಲ್ಟ್ ಆಗಬೇಕೇ ಅಥವಾ ರಾಷ್ಟ್ರದ ಗೌರವದ ಸಂಕೇತವಾದ ಚಿನ್ನವನ್ನು ಅಡವಿಡಬೇಕೆ? ಈ ಪ್ರಶ್ನೆಗೆ ಉತ್ತರ ಹುಡುಕಲು ದೆಹಲಿಯಲ್ಲಿ ಸರಣಿ ರಹಸ್ಯ ಸಭೆಗಳು ಆರಂಭವಾದವು. ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಕ್ಯಾಬಿನೆಟ್ ಕಾರ್ಯದರ್ಶಿ, ಆರ್ಥಿಕ ಸಲಹೆಗಾರರು- ಎಲ್ಲರೂ ನಿರಂತರ ಸಭೆಗಳನ್ನು ನಡೆಸು ತ್ತಿದ್ದರು. ಅಲ್ಲಿಂದ ಆರಂಭವಾಗುತ್ತದೆ ಭಾರತದ ಇತಿಹಾಸದ ಅತ್ಯಂತ ನಾಟಕೀಯ ಅಧ್ಯಾಯ.
1991ರ ಆರಂಭ. ಪ್ರಧಾನಮಂತ್ರಿ ಚಂದ್ರಶೇಖರ್ ಅವರ ಮುಂದೆ ಪ್ರತಿದಿನ ಒಂದೇ ಪ್ರಶ್ನೆ. ನಾಳೆ ಬೆಳಿಗ್ಗೆ ದೇಶದ ಬಳಿ ಡಾಲರ್ ಇರುತ್ತದೆಯೇ? ಸಮಸ್ಯೆ ಈಗ ರಾಷ್ಟ್ರೀಯ ಗೌರವದ ಪ್ರಶ್ನೆಯಾಗಿತ್ತು. ರಾಷ್ಟ್ರ ಡೀಫಾಲ್ಟ್ ಆದರೆ ಏನಾಗುತ್ತದೆ? ಅದರ ಪರಿಣಾಮಗಳು ಭೀಕರ. ವಿದೇಶಿ ಬ್ಯಾಂಕುಗಳು ಹೊಸ ಸಾಲ ನೀಡುವುದಿಲ್ಲ. ಈಗಾಗಲೇ ನೀಡಿರುವ ಸಾಲವನ್ನು ತಕ್ಷಣ ಹಿಂದಿರುಗಿಸುವಂತೆ ಒತ್ತಾಯಿಸಬಹುದು. ದೇಶದ ಕರೆನ್ಸಿಯ ಮೇಲಿನ ವಿಶ್ವಾಸ ಕುಸಿಯುತ್ತದೆ. ಆಮದು ಮಾಡುವ ಪ್ರತಿಯೊಂದು ವಸ್ತುವೂ ದುಬಾರಿಯಾಗುತ್ತದೆ.
ರಿಸರ್ವ್ ಬ್ಯಾಂಕ್‌ನಲ್ಲಿ ಆತಂಕ
ಆಗ ರಿಸರ್ವ್ ಬ್ಯಾಂಕ್ ಗವರ್ನರ್ ಎಸ್. ವೆಂಕಿಟರಮಣನ್. ಜೊತೆಗೆ ಡೆಪ್ಯುಟಿ ಗವರ್ನರ್ ಆಗಿದ್ದ ಡಾ.ಸಿ.ರಂಗರಾಜನ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರತಿದಿನ ಪರಿಸ್ಥಿತಿ ಪರಿಶೀಲಿಸುತ್ತಿದ್ದರು. ರಿಸರ್ವ್ ಬ್ಯಾಂಕ್‌ನಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ವಿದೇಶಿ ವಿನಿಮಯದ ಸ್ಥಿತಿಯನ್ನು ದಿನದಿನಕ್ಕೂ ಪರಿಶೀಲಿಸುವ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಡಾಲರ್ ಅಮೂಲ್ಯವಾಗಿತ್ತು. ಅಧಿಕಾರಿಗಳು ಅನೇಕ ಆಯ್ಕೆಗಳನ್ನು ಪರಿಶೀಲಿಸಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ತುರ್ತು ನೆರವು ಪಡೆಯಬಹುದೇ? ಹೊಸ ವಿದೇಶಿ ಸಾಲ ಸಿಗಬಹುದೇ? ಸರಕಾರದ ಕೆಲವು ವಿದೇಶಿ ಆಸ್ತಿಗಳನ್ನು ಮಾರಬಹುದೇ? ಆಮದು ಸಂಪೂರ್ಣವಾಗಿ ಕಡಿತಗೊಳಿಸಬಹುದೇ? ಆದರೆ ಯಾವುದೇ ಪರಿಹಾರ ತಕ್ಷಣ ಫಲ ನೀಡುವಂತಿರಲಿಲ್ಲ. ಭಾರತದ ಬಳಿ ಸಾವಿರಾರು ವರ್ಷಗಳ ಸಂಸ್ಕೃತಿಯ ಸಂಕೇತವಾದ ಚಿನ್ನ ಇತ್ತು. ಅದನ್ನು ಮುಟ್ಟುವುದು ಎಂದರೆ ದೇಶದ ಭಾವನೆಗಳನ್ನೇ ಮುಟ್ಟಿದಂತಾಗುತ್ತಿತ್ತು. ಚರ್ಚೆಗಳು ಹಲವು ದಿನ ನಡೆದವು. ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ತಾತ್ಕಾಲಿಕವಾಗಿ ಅಡವಿಡಿ ಎಂದರು.
ಯಶವಂತ್ ಸಿನ್ಹಾ ಅವರ ಪಾತ್ರ
ಆ ಸಮಯದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ನಂತರ ತಮ್ಮ ಆತ್ಮಕಥೆ Confessions of a Swadeshi Reformer ನಲ್ಲಿ ಆ ದಿನಗಳ ಆತಂಕವನ್ನು ನೆನಪಿಸಿಕೊಂಡಿದ್ದಾರೆ. ಪ್ರತಿದಿನ ಹಣಕಾಸು ಸಚಿವಾಲಯದ ಮುಂದೆ ಹೊಸ ಪ್ರಶ್ನೆಗಳು ಬರುತ್ತಿದ್ದವು. ಯಾವ ಸಾಲ ಮೊದಲು ಪಾವತಿಸಬೇಕು? ಯಾವ ಆಮದಿಗೆ ಆದ್ಯತೆ ನೀಡಬೇಕು?
ಯಾವ ವೆಚ್ಚ ಮುಂದೂಡಬೇಕು?
ಚಂದ್ರಶೇಖರ್ ಅವರಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿತ್ತು. ಭಾರತೀಯರ ಭಾವನೆಯಲ್ಲಿ ಚಿನ್ನಕ್ಕೆ ಇರುವ ಸ್ಥಾನ. ಭಾರತದಲ್ಲಿ ಮಗಳು ಹುಟ್ಟಿದ ದಿನದಿಂದಲೇ ಚಿನ್ನ ಸಂಗ್ರಹಿಸುವ ಸಂಪ್ರದಾ ಯವಿದೆ. ಸಂಕಷ್ಟದ ಸಮಯದಲ್ಲಿ ಕುಟುಂಬವನ್ನು ಕಾಪಾಡುವುದು ಚಿನ್ನವೇ. ಅಂತಹ ದೇಶದ ಚಿನ್ನವನ್ನು ವಿದೇಶಕ್ಕೆ ಕಳುಹಿಸುವ ನಿರ್ಧಾರ ಜನರಿಗೆ ಹೇಗೆ ಕಾಣಬಹುದು ಎಂಬ ಆತಂಕ ಅವರಿಗಿತ್ತು. ಆದರೆ ಇನ್ನೊಂದು ಕಡೆ ದೇಶದ ಗೌರವವೂ ಇತ್ತು. ಅವರು ಕೊನೆಗೆ ರಾಷ್ಟ್ರದ ಹಿತವನ್ನೇ ಆಯ್ಕೆ ಮಾಡಿಕೊಂಡರು. ನಿರ್ಧಾರವಾದ ನಂತರ ಮೊದಲ ಹೆಜ್ಜೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಟ್ಟಿತು.
ಮೇ 1991ರಲ್ಲಿ, 20 ಸಾವಿರ ಕೆಜಿ ಚಿನ್ನವನ್ನು ಯೂನಿಯನ್ ಬ್ಯಾಂಕ್ ಆಫ್ ಸ್ವಿಜರ್ಲ್ಯಾಂಡ್‌ಗೆ ಮರುಖರೀದಿ ಆಯ್ಕೆಯ (repurchase option) ಷರತ್ತಿನೊಂದಿಗೆ ಮಾರಿ ಸುಮಾರು 200 ಮಿಲಿಯ ಡಾಲರ್ ಸಂಗ್ರಹಿಸಿತು. ಇದರಿಂದ ಭಾರತಕ್ಕೆ ಕೆಲವಾರು ವಾರಗಳ ಉಸಿರಾಟ ಸಿಕ್ಕಿತು. ಆದರೆ ಅದು ತಾತ್ಕಾಲಿಕ ಪರಿಹಾರ ಮಾತ್ರ. ಇದರ ಮಧ್ಯೆ ಲೋಕಸಭೆ ಚುನಾವಣೆ ನಡೆಯುತ್ತಿತ್ತು. ಮೇ 21ರಂದು ರಾಜೀವ್ ಗಾಂಧಿ ಹತ್ಯೆಯಾದರು. ದೇಶ ಮತ್ತೆ ರಾಜಕೀಯ ಅನಿಶ್ಚಿತತೆಗೆ ಸಿಲುಕಿತು. ವಿದೇಶಿ ಹೂಡಿಕೆದಾರರಲ್ಲಿ ಆತಂಕ ಮತ್ತಷ್ಟು ಹೆಚ್ಚಾಯಿತು. ಜೂನ್‌ನಲ್ಲಿ ಪಿ.ವಿ.ನರಸಿಂಹ ರಾವ್ ಪ್ರಧಾನಮಂತ್ರಿಯಾದರು. ಅವರು ಆರ್ಥಿಕತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ನಾಯಕ. ಹಣಕಾಸು ಸಚಿವರಾಗಿ ಮಾಜಿ ಆರ್‌ಬಿಐ ಗವರ್ನರ್ ಹಾಗೂ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ನೇಮಿಸಿದರು. ಆದರೆ ಅವರ ಮುಂದೆ ಇದ್ದ ಸಮಸ್ಯೆ ಒಂದೇ. ದೇಶದ ಖಜಾನೆ ಖಾಲಿಯಾಗಿತ್ತು.
ಮೊದಲ ಹಂತದಲ್ಲಿ ಪಡೆದ ಹಣ ಸಾಕಾಗಲಿಲ್ಲ. ಹೀಗಾಗಿ ಆರ್‌ಬಿಐ ತನ್ನ ಸ್ವಂತ ಚಿನ್ನದ ಸಂಗ್ರಹ ದಿಂದ 47 ಸಾವಿರ ಕೆಜಿ ಚಿನ್ನವನ್ನು ವಿದೇಶಿ ಬ್ಯಾಂಕ್‌ಗಳಿಗೆ ಅಡವಿಡಲು ನಿರ್ಧರಿಸಿತು. ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್ ಭಾರತಕ್ಕೆ ನೆರವಾಗಲು ಒಪ್ಪಿಕೊಂಡವು. ಅವು ಒಂದು ಸ್ಪಷ್ಟ ಷರತ್ತು ವಿಧಿಸಿದವು. ಚಿನ್ನವನ್ನು ಕಾಗದದಲ್ಲಿ ತೋರಿಸಿದರೆ ಸಾಲ ಕೊಡುವು ದಿಲ್ಲ. ನಿಜವಾದ ಚಿನ್ನವನ್ನು ಲಂಡನ್ ಮತ್ತು ಟೊಕಿಯೊಗೆ ಕಳುಹಿಸಬೇಕು. ಇದು ಭಾರತದ ಅಧಿಕಾರಿ ಗಳ ಮುಂದೆ ಹೊಸ ಸವಾಲು ತಂದಿತು. ಚಿನ್ನವನ್ನು ಹೇಗೆ ಸಾಗಿಸಬೇಕು?