ಸಂಪಾದಕರ ಸದ್ಯಶೋಧನೆ
ಕಾಂಗ್ರೆಸ್ ಸಂಸದ ಶಶಿ ತರೂರ್ ಆಗಾಗ ‘Circular Firing Squad’ ಎಂಬ ಪದವನ್ನು ಬಳಸುವುದನ್ನು ಗಮನಿಸಿರಬಹುದು. ಕೆಲವು ರಾಜತಾಂತ್ರಿಕರು ಮತ್ತು ರಾಜಕೀಯ ವಿಶ್ಲೇಷಕರು ಸಹ ಈ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ವೃತ್ತಾಕಾರದ ಫೈರಿಂಗ್ ಸ್ಕ್ವಾಡ್ ಅಥವಾ ವೃತ್ತಾಕಾರದ ಗುಂಡಿನ ದಾಳಿ ನಡೆಸುವವರು ಎಂಬುದು ಒಂದು ರೂಪಕ.
ರಾಜಕೀಯ, ಸಿದ್ಧಾಂತ ಅಥವಾ ಸಂಘಟನೆಗಳಲ್ಲಿ ಇರುವ ಜನರು ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡುವ ಬದಲು, ತಮ್ಮ ಕಿತ್ತಾಡುತ್ತಾ ಒಬ್ಬರನ್ನೊಬ್ಬರು ನಾಶಪಡಿಸಿ ಕೊಳ್ಳುವ ಪರಿಸ್ಥಿತಿಯನ್ನು ಇದು ವಿವರಿಸುತ್ತದೆ. ಸಾಮಾನ್ಯವಾಗಿ ‘ಫೈರಿಂಗ್ ಸ್ಕ್ವಾಡ್’ ಎಂದರೆ ಸೈನಿಕರು ಸಾಲಾಗಿ ನಿಂತು ಒಬ್ಬ ಅಪರಾಧಿಗೆ ಗುಂಡು ಹೊಡೆಯುವುದು. ಆದರೆ ‘ Circular Firing Squad’ನಲ್ಲಿ ಜನರು ವೃತ್ತಾಕಾರದಲ್ಲಿ ನಿಂತಿರುತ್ತಾರೆ.
ಪ್ರತಿಯೊಬ್ಬರೂ ತಮ್ಮ ಪಕ್ಕದವರ ಮೇಲೆ ಅಥವಾ ಎದುರಿಗಿರುವವರ ಮೇಲೆ ಗುರಿ ಇಟ್ಟಿರುತ್ತಾರೆ. ಇಲ್ಲಿ ಗುಂಡು ಹಾರಿಸಿದರೆ, ಅಂತಿಮವಾಗಿ ಗುಂಪಿನ ಪ್ರತಿಯೊಬ್ಬರೂ ಸಾವನ್ನಪ್ಪುತ್ತಾರೆ. ರಾಜಕೀಯದಲ್ಲಿ, ಒಂದು ಪಕ್ಷದ ಸದಸ್ಯರು ತಮ್ಮದೇ ನಾಯಕರನ್ನು ಅಥವಾ ಸಹೋದ್ಯೋಗಿಗಳನ್ನು ಟೀಕಿಸುವ ಮೂಲಕ ಇಡೀ ಪಕ್ಷದ ವಿಶ್ವಾಸಾರ್ಹತೆಯನ್ನು ಹಾಳುಗೆಡಹುವುದನ್ನು ಇದು ಸೂಚಿಸುತ್ತದೆ.
ಇದನ್ನೂ ಓದಿ: Vishweshwar Bhat Column: ಬಿಗ್ ಮ್ಯಾಕ್ ಇಂಡೆಕ್ಸ್ ಎಂದರೇನು?
ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳು ಪ್ರಬಲವಾಗಿರಬೇಕು. ಆದರೆ, ಅನೇಕ ಬಾರಿ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಹೋರಾಡುವ ಬದಲು, ತಮ್ಮೊಳಗೆ ಇರುವ ಸಣ್ಣಪುಟ್ಟ ಭಿನ್ನಾಭಿ ಪ್ರಾಯಗಳಿಗಾಗಿ ಪರಸ್ಪರ ಕಾಲೆಳೆಯುತ್ತವೆ. ಉದಾಹರಣೆಗೆ, ಒಂದೇ ಸಿದ್ಧಾಂತ ಹೊಂದಿ ರುವ ಎರಡು ಪಕ್ಷಗಳು ಚುನಾವಣೆಯಲ್ಲಿ ಪರಸ್ಪರ ಮತಗಳನ್ನು ವಿಭಜಿಸುವುದು ಅಥವಾ ‘ನನ್ನ ಹಾದಿಯೇ ಸರಿ’ ಎಂಬ ಹಠಕ್ಕೆ ಬಿದ್ದು ಒಕ್ಕೂಟದ ಶಕ್ತಿಯನ್ನು ಕುಂದಿಸುವುದು.
ನಾಯಕರಲ್ಲಿರುವ ವೈಯಕ್ತಿಕ ಪ್ರತಿಷ್ಠೆ ಮತ್ತು ಅಧಿಕಾರದ ಹಪಾಹಪಿ ಈ ಪರಿಸ್ಥಿತಿಗೆ ಮುಖ್ಯ ಕಾರಣ. ಒಂದು ಸಂಘಟನೆ ‘ಸರ್ಕ್ಯುಲರ್ ಫೈರಿಂಗ್ ಸ್ಕ್ವಾಡ್’ ಆಗಿ ಬದಲಾದಾಗ ಅದರ ಪರಿಣಾಮಗಳು ಭೀಕರ. ಇದರಿಂದ ಮತದಾರರು ಅಥವಾ ಜನರು ಗೊಂದಲಕ್ಕೊಳ ಗಾಗುತ್ತಾರೆ.
‘ತಮ್ಮ ಒಮ್ಮತವಿಲ್ಲದವರು ದೇಶವನ್ನು ಹೇಗೆ ಆಳುತ್ತಾರೆ?’ ಎಂಬ ಪ್ರಶ್ನೆ ಮೂಡುತ್ತದೆ. ನಿಮ್ಮೊಳಗಿನ ಜಗಳವು ನಿಮ್ಮ ವಿರೋಧಿಗಳಿಗೆ ಕೆಲಸವನ್ನು ಸುಲಭ ಮಾಡಿಕೊಡುತ್ತದೆ. ಅವರು ಯಾವುದೇ ಶ್ರಮವಿಲ್ಲದೆ ಜಯಗಳಿಸುತ್ತಾರೆ. ಶಕ್ತಿ, ಸಮಯ ಮತ್ತು ಹಣವನ್ನು ಹೊರಗಿನ ಸವಾಲುಗಳ ಮೇಲೆ ಬಳಸುವ ಬದಲು ಒಳಗಿನವರನ್ನು ತುಳಿಯಲು ಬಳಸ ಲಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕದ ಡೆಮೋಕ್ರಾಟ್ ಪಕ್ಷದ ಆಂತರಿಕ ಕಲಹಗಳನ್ನು ವಿವರಿಸು ವಾಗ ಬರಾಕ್ ಒಬಾಮಾ ಈ ಪದವನ್ನು ಬಳಸಿದ್ದರು. ಭಾರತದ ಸಂದರ್ಭದಲ್ಲಿ, ಪ್ರತಿಪಕ್ಷ ಗಳ ಒಕ್ಕೂಟಗಳು ಸೀಟು ಹಂಚಿಕೆ ಅಥವಾ ನಾಯಕತ್ವದ ವಿಷಯದಲ್ಲಿ ಕಿತ್ತಾಡು ವಾಗ ಈ ರೂಪಕ ಅಚ್ಚುಕಟ್ಟಾಗಿ ಅನ್ವಯವಾಗುತ್ತದೆ.
ಪಶ್ಚಿಮ ಏಷ್ಯಾದ ಯುದ್ಧದ ಕುರಿತಾದ ಲೇಖನದಲ್ಲೂ ಶಶಿ ತರೂರ್ ಅವರು ಹೇಳುವುದೂ ಇದನ್ನೇ- ‘ರಾಷ್ಟ್ರಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಬದಲು ಒಳಗಿನ ಭಿನ್ನಾಭಿ ಪ್ರಾಯಗಳಿಗೆ ಬಲಿಯಾದರೆ ಅದು ನೈತಿಕ ಗೆಲುವಲ್ಲ, ಬದಲಿಗೆ ಸಾಮೂಹಿಕ ಆತ್ಮಹತ್ಯೆ’. ‘ Circular Firing Squad’ ಎಂಬುದು ಒಗ್ಗಟ್ಟಿನ ಕೊರತೆಯ ಎಚ್ಚರಿಕೆಯ ಗಂಟೆ.
ಯಾವುದೇ ಸಮಾಜ ಅಥವಾ ರಾಜಕೀಯ ಪಕ್ಷವು ಅಭಿವೃದ್ಧಿ ಹೊಂದಬೇಕಾದರೆ ಶಸ್ತ್ರ ಗಳನ್ನು ಹೊರಗಿನ ಸವಾಲುಗಳ ಕಡೆಗೆ ತಿರುಗಿಸಬೇಕೇ ಹೊರತು, ತನ್ನವರ ಕಡೆಗಲ್ಲ. ಈ ಪದಪ್ರಯೋಗವು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಹಳ ಚರ್ಚಿತವಾಗಿ ರುವ ರೂಪಕವಾಗಿದೆ. ಈ ಪದಪ್ರಯೋಗವು 1970 ಮತ್ತು 1980ರ ದಶಕದಲ್ಲಿ ಅಮೆರಿಕದ ರಾಜಕೀಯ ವಲಯದಲ್ಲಿ ಹೆಚ್ಚು ಜನಪ್ರಿಯವಾಯಿತು.
1970ರ ದಶಕದ ಉತ್ತರಾರ್ಧದಲ್ಲಿ ಅಮೆರಿಕದ ಡೆಮೋಕ್ರಾಟಿಕ್ ಪಕ್ಷದ ಆಂತರಿಕ ಕಚ್ಚಾಟ ವನ್ನು ವಿವರಿಸಲು ಇದನ್ನು ವ್ಯಾಪಕವಾಗಿ ಬಳಸಲಾಯಿತು. 1980ರ ದಶಕದಲ್ಲಿ ರಿಪಬ್ಲಿಕನ್ ಪಕ್ಷದ ತಂತ್ರಜ್ಞರು ಡೆಮೋಕ್ರಾಟ್‌ಗಳನ್ನು ಟೀಕಿಸುವಾಗ, ‘ಅವರು ವೃತ್ತಾಕಾರದ ಫೈರಿಂಗ್ ಸ್ಕ್ವಾಡ್‌ನಲ್ಲಿ ನಿಂತಿದ್ದಾರೆ, ಪರಸ್ಪರ ಗುಂಡು ಹಾರಿಸಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದರು.