Vishweshwar Bhat Column: ‘ಗಿಲೋಟಿನ್’ ಎಂದರೇನು ?
‘ಗಿಲೋಟಿನ್’ ಎಂಬ ಪದವು ಮೂಲತಃ ಸಂಸತ್ತಿಗೆ ಸಂಬಂಧಿಸಿದ್ದಲ್ಲ. ಇದು ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಅಪರಾಧಿಗಳ ಶಿರಚ್ಛೇದ ಮಾಡಲು ಬಳಸುತ್ತಿದ್ದ ಒಂದು ಮರಣ ದಂಡನೆ ಯಂತ್ರದ ಹೆಸರು. ಜೋಸೆಫ್ ಇಗ್ನೇಸ್ ಗಿಲೋಟಿನ್ ಎಂಬ ವೈದ್ಯನ ಹೆಸರಿನಿಂದ ಬಂದ ಈ ಯಂತ್ರವು, ಮೇಲಿನಿಂದ ಕೆಳಕ್ಕೆ ಬೀಳುವ ಚೂಪಾದ ಬ್ಲೇಡ್ ಮೂಲಕ ಕ್ಷಣಾರ್ಧದಲ್ಲಿ ವ್ಯಕ್ತಿಯ ತಲೆಯನ್ನು ದೇಹದಿಂದ ಬೇರ್ಪಡಿಸುತ್ತಿತ್ತು.
-
ಸಂಪಾದಕರ ಸದ್ಯಶೋಧನೆ
ಲೋಕಸಭೆ ಅಥವಾ ಸಂಸತ್ತಿನ ಕಲಾಪಗಳನ್ನು ಗಮನಿಸುವಾಗ ಅನೇಕ ಪದಗಳು ಕಿವಿಗೆ ಬೀಳುತ್ತವೆ. ಆದರೆ, ಸಾರ್ವಜನಿಕರಿಗೆ ಅಷ್ಟಾಗಿ ಪರಿಚಯವಿಲ್ಲದ, ಆದರೂ ಅತ್ಯಂತ ಶಕ್ತಿಯುತವಾದ ಮತ್ತು ವಿಚಿತ್ರವಾಗಿ ಕೇಳಿಸುವ ಒಂದು ಪದವೆಂದರೆ ‘ಗಿಲೋಟಿನ್’ (Guillotine). ಇದು ಚರ್ಚೆಯಿಲ್ಲದೆಯೇ ನಡೆಯುವ ಒಂದು ‘ಸರ್ಜಿಕಲ್ ಸ್ರೈಕ್’ ಇದ್ದಂತೆ!
ಲೋಕಸಭೆಯಲ್ಲಿ ನಡೆಯುವ ಕಲಾಪಗಳು ಅತ್ಯಂತ ಸಂಕೀರ್ಣವಾದ ನಿಯಮಾವಳಿಗಳಿಂದ ಕೂಡಿರುತ್ತವೆ. ಅಲ್ಲಿ ಬಳಸುವ ಪ್ರತಿಯೊಂದು ಪದಕ್ಕೂ ತನ್ನದೇ ಆದ ಸಾಂವಿಧಾನಿಕ ತೂಕ ವಿರುತ್ತದೆ. ಅಂಥ ಪದಗಳಲ್ಲಿ ‘ಗಿಲೋಟಿನ್’ ಕೂಡ ಒಂದು.
‘ಗಿಲೋಟಿನ್’ ಎಂಬ ಪದವು ಮೂಲತಃ ಸಂಸತ್ತಿಗೆ ಸಂಬಂಧಿಸಿದ್ದಲ್ಲ. ಇದು ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಅಪರಾಧಿಗಳ ಶಿರಚ್ಛೇದ ಮಾಡಲು ಬಳಸುತ್ತಿದ್ದ ಒಂದು ಮರಣದಂಡನೆ ಯಂತ್ರದ ಹೆಸರು. ಜೋಸೆಫ್ ಇಗ್ನೇಸ್ ಗಿಲೋಟಿನ್ ಎಂಬ ವೈದ್ಯನ ಹೆಸರಿನಿಂದ ಬಂದ ಈ ಯಂತ್ರವು, ಮೇಲಿನಿಂದ ಕೆಳಕ್ಕೆ ಬೀಳುವ ಚೂಪಾದ ಬ್ಲೇಡ್ ಮೂಲಕ ಕ್ಷಣಾರ್ಧದಲ್ಲಿ ವ್ಯಕ್ತಿಯ ತಲೆಯನ್ನು ದೇಹದಿಂದ ಬೇರ್ಪಡಿಸುತ್ತಿತ್ತು.
ಇದನ್ನೂ ಓದಿ: Vishweshwar Bhat Column: ಇರಾನಿನಲ್ಲಿ ಸಂಸ್ಕೃತ
ಸಂಸತ್ತಿನಲ್ಲಿಯೂ ಸಹ, ಸುದೀರ್ಘವಾಗಿ ನಡೆಯಬೇಕಾದ ಚರ್ಚೆಯನ್ನು ಒಂದು ನಿಗದಿತ ಸಮಯ ದಲ್ಲಿ ಇದ್ದಕ್ಕಿದ್ದಂತೆ ‘ಕತ್ತರಿಸಿ’, ನೇರವಾಗಿ ಮತದಾನಕ್ಕೆ ಹಾಕುವ ಪ್ರಕ್ರಿಯೆಗೆ ಈ ಹೆಸರನ್ನು ಸಾಂಕೇತಿಕವಾಗಿ ಬಳಸಲಾಗುತ್ತದೆ. ಸಂಸತ್ತಿನಲ್ಲಿ ಇದರ ಅವಶ್ಯಕತೆ ಏನು? ಭಾರತದ ಸಂಸತ್ತಿನಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಬಜೆಟ್ ಮಂಡನೆಯಾಗುತ್ತದೆ.
ಬಜೆಟ್ ಮಂಡನೆಯಾದ ನಂತರ ವಿವಿಧ ಸಚಿವಾಲಯಗಳ (ಉದಾಹರಣೆಗೆ, ರಕ್ಷಣೆ, ಶಿಕ್ಷಣ, ಕೃಷಿ ಇತ್ಯಾದಿ) ಹಣಕಾಸಿನ ಬೇಡಿಕೆಗಳ ಬಗ್ಗೆ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಬೇಕು. ಪ್ರತಿ ಯೊಂದು ಸಚಿವಾಲಯಕ್ಕೆ ಎಷ್ಟು ಹಣ ನೀಡಬೇಕು ಎಂಬುದನ್ನು ಸಂಸದರು ಚರ್ಚಿಸಿ ನಿರ್ಧರಿಸ ಬೇಕು. ಆದರೆ, ಭಾರತದಲ್ಲಿ ಸುಮಾರು ಇವತ್ತಕ್ಕೂ ಹೆಚ್ಚು ಸಚಿವಾಲಯಗಳಿವೆ.
ಇವೆಲ್ಲವುಗಳ ಬಗ್ಗೆ ಚರ್ಚಿಸಲು ಸಂಸತ್ತಿಗೆ ಕಾಲಾವಕಾಶ ಇರುವುದಿಲ್ಲ. ಸಾಮಾನ್ಯವಾಗಿ 4-5 ಮುಖ್ಯ ಇಲಾಖೆಗಳ ಬಗ್ಗೆ ಚರ್ಚೆ ನಡೆದ ನಂತರ, ಬಜೆಟ್ ಅಧಿವೇಶನ ಮುಕ್ತಾಯವಾಗುವ ಹಂತಕ್ಕೆ ಬರುತ್ತದೆ. ಆಗ ಉಳಿದ ಎಲ್ಲ ಸಚಿವಾಲಯಗಳ ಅನುದಾನದ ಬೇಡಿಕೆಗಳನ್ನು ಚರ್ಚೆಯಿಲ್ಲದೆಯೇ ಅಂಗೀಕರಿಸಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ಆಗ ಸ್ಪೀಕರ್ ‘ಗಿಲೋಟಿನ್’ ಎಂಬ ಅಸ್ತ್ರ ವನ್ನು ಬಳಸುತ್ತಾರೆ.
ಪ್ರಕ್ರಿಯೆ ಹೇಗೆ ನಡೆಯುತ್ತದೆ? ಬಜೆಟ್ ಅಧಿವೇಶನದ ಅಂತಿಮ ದಿನದಂದು, ಸಂಜೆ ಸುಮಾರು 5 ಅಥವಾ 6 ಗಂಟೆಗೆ ಸ್ಪೀಕರ್ ಕಲಾಪವನ್ನು ನಿಲ್ಲಿಸಿ, ಇನ್ನುಳಿದ ಎಲ್ಲ ಹಣಕಾಸಿನ ಬೇಡಿಕೆಗಳನ್ನು ಒಂದೇ ಬಾರಿಗೆ ಸದನದ ಮುಂದೆ ಮತದಾನಕ್ಕೆ ಇಡುತ್ತಾರೆ. ಇಲ್ಲಿ ಯಾರೂ ಯಾವುದೇ ಪ್ರಶ್ನೆ ಕೇಳುವಂತಿಲ್ಲ. ಯಾವುದೇ ಟೀಕೆ ಅಥವಾ ವಿಶ್ಲೇಷಣೆಗೆ ಅವಕಾಶವಿರುವುದಿಲ್ಲ.
ಪ್ರತಿಪಕ್ಷದವರು ಮಂಡಿಸಿದ ‘ಕಟ್ ಮೋಷನ್’ ಅಥವಾ ಕಡಿತ ನಿರ್ಣಯಗಳೂ ಸಹ ಇಲ್ಲಿ ಗಿಲೋ ಟಿನ್ ಅಡಿಯಲ್ಲಿ ಚರ್ಚೆಯಿಲ್ಲದೇ ವಜಾಗೊಳ್ಳುತ್ತವೆ. ಕೇವಲ ‘ಹೌದು’ ಅಥವಾ ‘ಇಲ್ಲ’ ಎಂಬ ಮತದಾನದ ಮೂಲಕ ಲಕ್ಷಾಂತರ ಕೋಟಿ ರುಪಾಯಿಗಳ ಹಣಕಾಸಿನ ಬೇಡಿಕೆಗಳು ಕ್ಷಣಾರ್ಧದಲ್ಲಿ ಅಂಗೀಕಾರಗೊಳ್ಳುತ್ತವೆ.
ಇಲ್ಲಿ ಗಮನಿಸಬಹುದಾದ ಅಂಶವೆಂದರೆ, ‘ಗಿಲೋಟಿನ್’ ಒಂದು ದ್ವಿಮುಖ ಕತ್ತಿ. ಇದು ಸರಕಾರದ ಆಡಳಿತ ಯಂತ್ರ ಸ್ಥಗಿತಗೊಳ್ಳದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ಹಣಕಾಸಿನ ಬೇಡಿಕೆಗಳು ಅಂಗೀಕಾರವಾಗದಿದ್ದರೆ ಸರಕಾರಕ್ಕೆ ಹಣ ಖರ್ಚು ಮಾಡಲು ಅಧಿಕಾರ ಇರುವುದಿಲ್ಲ. ಹಾಗಾಗಿ ಸಾಂವಿಧಾನಿಕ ಬಿಕ್ಕಟ್ಟನ್ನು ತಪ್ಪಿಸಲು ಇದು ಅವಶ್ಯಕ.
ಇದನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಹಲವು ಬಾರಿ ಕರೆಯಲಾಗುತ್ತದೆ. ಏಕೆಂದರೆ, ಜನರ ತೆರಿಗೆಯ ಹಣವನ್ನು ಯಾವ ಸಚಿವಾಲಯ ಹೇಗೆ ಖರ್ಚು ಮಾಡುತ್ತದೆ ಎಂದು ಪ್ರಶ್ನಿಸುವ ಸಂಸದರ ಹಕ್ಕನ್ನು ಇದು ಕಸಿದುಕೊಳ್ಳುತ್ತದೆ. ಅನೇಕ ಬಾರಿ ಸರಕಾರಗಳು ಪ್ರತಿಪಕ್ಷದ ಗದ್ದಲದ ನೆಪವೊಡ್ಡಿ ಇಡೀ ಬಜೆಟ್‌ಅನ್ನು ಗಿಲೋಟಿನ್ ಮೂಲಕವೇ ಅಂಗೀಕರಿಸಿದ ಉದಾಹರಣೆಗಳಿವೆ.
‘ಬಜೆಟ್ ಗಿಲೋಟಿನ್ ಆಯಿತು’ ಎಂದರೆ ಸಂಸತ್ತಿನಲ್ಲಿ ಚರ್ಚೆಗಿಂತ ಗದ್ದಲವೇ ಹೆಚ್ಚಾಗಿತ್ತು ಮತ್ತು ಸರಕಾರವು ಸಂಸದೀಯ ಹೊಣೆಗಾರಿಕೆಯಿಂದ ನುಣುಚಿಕೊಂಡಿತು ಎಂಬ ಅರ್ಥವನ್ನು ಅದು ನೀಡುತ್ತದೆ. ಈ ಪ್ರಕ್ರಿಯೆಯಲ್ಲಿ ಲೋಕಸಭಾ ಸ್ಪೀಕರ್ ಅವರ ಪಾತ್ರ ಬಹಳ ದೊಡ್ಡದು. ಅವರು ಸರಕಾರದೊಂದಿಗೆ ಚರ್ಚಿಸಿ, ಯಾವ ದಿನ ಮತ್ತು ಯಾವ ಸಮಯದಲ್ಲಿ ಗಿಲೋಟಿನ್ ಅನ್ವಯಿಸ ಬೇಕು ಎಂಬುದನ್ನು ನಿರ್ಧರಿಸುತ್ತಾರೆ.
ಇದು ಸದನದ ಕಾರ್ಯದಕ್ಷತೆಯನ್ನು ಅಳೆಯುವ ಮಾನದಂಡವೂ ಹೌದು. ಹೆಚ್ಚು ಇಲಾಖೆಗಳು ಚರ್ಚೆಯಾಗಿ, ಕಡಿಮೆ ಇಲಾಖೆಗಳು ಗಿಲೋಟಿನ್ ಆದರೆ ಅದು ಯಶಸ್ವಿ ಅಧಿವೇಶನ ಎನಿಸಿ ಕೊಳ್ಳುತ್ತದೆ.