ಸಂಪಾದಕರ ಸದ್ಯಶೋಧನೆ
ಇತ್ತೀಚೆಗೆ ನಮ್ಮ ಪತ್ರಿಕೆಯಲ್ಲಿ ಓದುಗರೊಬ್ಬರು ಬರೆದ ಪತ್ರದಲ್ಲಿ ಹೀಗೊಂದು ಸಾಲು ಕಾಣಿಸಿತು- ಚುನಾವಣೆಯ ಮುನ್ನ ಹಳ್ಳಿ ಹಳ್ಳಿಗೆ ಬಂದು ಭರವಸೆಗಳ ಮಹಾಪೂರ ಹರಿಸಿದ ರಾಜಕಾರಣಿಗಳು, ಗೆದ್ದ ನಂತರ ಜನರಿಗೆ ಸಿಗದೆ ‘ಅಗಸ್ತ್ಯ ನೆರಳಿನಂತೆ’ ಮಾಯವಾಗಿಬಿಟ್ಟರು. ಹಾಗಾದರೆ ‘ಅಗಸ್ತ್ಯ ನೆರಳು’ ಅಂದರೆ ಏನು? ಅಗಸ್ತ್ಯರಿಗೂ ನೆರಳಿಗೂ ಏನು ಸಂಬಂಧ? ಅಷ್ಟಕ್ಕೂ ‘ಅಗಸ್ತ್ಯ ನೆರಳು’ ಎಂಬ ನುಡಿಗಟ್ಟಿನ ಸ್ಥೂಲ ಅರ್ಥ- ‘ಯಾರಾದರೂ ಇದ್ದಕ್ಕಿದ್ದಂತೆ ಕಣ್ಣೆದುರಿನಿಂದ ಮಾಯವಾಗು ವುದು, ಯಾವುದೇ ಸುಳಿವೇ ಇಲ್ಲದೆ ನಾಪತ್ತೆಯಾಗುವುದು ಅಥವಾ ಕೊಟ್ಟ ಮಾತನ್ನು ತಪ್ಪಿಸಿ ಮರಳಿ ಬಾರದಂತೆ ಹೊರಟು ಹೋಗುವುದು.’ ಇಲ್ಲಿ ‘ಅಗಸ್ತ್ಯ’ ಎಂಬುದು ಮಹಾ ತಪಸ್ವಿಗಳಾದ ಅಗಸ್ತ್ಯ ಮುನಿಗಳನ್ನು ಸೂಚಿಸಿದರೆ, ‘ನೆರಳು’ ಎಂಬುದು ಅವರ ಇರುವಿಕೆ ಅಥವಾ ಭ್ರಮೆಯನ್ನು ಸೂಚಿಸುತ್ತದೆ.
ಒಬ್ಬ ವ್ಯಕ್ತಿ ತನ್ನ ನೆರಳನ್ನು ಹಿಡಿಯಲು ಹೋದರೆ ಅದು ಹೇಗೆ ಕೈಗೆ ಸಿಗದೆ ಓಡಿಹೋಗುತ್ತದೆಯೋ ಅಥವಾ ಕತ್ತಲಾಗುತ್ತಿದ್ದಂತೆ ನೆರಳು ಹೇಗೆ ಮಾಯವಾಗುತ್ತದೆಯೋ, ಹಾಗೆಯೇ ಒಬ್ಬ ವ್ಯಕ್ತಿ ಅಥವಾ ವಸ್ತು ನಿರೀಕ್ಷೆಯಿಲ್ಲದೇ ಮಾಯವಾಗುವುದನ್ನು ಈ ಪದಪುಂಜ ಧ್ವನಿಸುತ್ತದೆ. ಈ ವಿಶಿಷ್ಟ ನುಡಿಗಟ್ಟಿನ ಹುಟ್ಟಿನ ಹಿಂದೆ ಭಾರತೀಯ ಪುರಾಣದ ಪ್ರಸಿದ್ಧವಾದ ಕಥೆಯೊಂದಿದೆ. ಆ ಕಥೆ ಮಹರ್ಷಿ ಅಗಸ್ತ್ಯ ಮತ್ತು ವಿಂಧ್ಯ ಪರ್ವತಕ್ಕೆ ಸಂಬಂಧಿಸಿದ್ದು. ಒಂದು ಕಾಲದಲ್ಲಿ ದಕ್ಷಿಣ- ಉತ್ತರ ಭಾರತದ ಮಧ್ಯೆ ಇರುವ ವಿಂಧ್ಯ ಪರ್ವತಕ್ಕೆ ತನ್ನ ಭವ್ಯತೆಯ ಬಗ್ಗೆ ಅತಿ ಗರ್ವ ಉಂಟಾಯಿತು. ಅದು ದಿನದಿಂದ ದಿನಕ್ಕೆ ಆಕಾಶದತ್ತ ಬೆಳೆಯತೊಡಗಿತು.
ಇದನ್ನೂ ಓದಿ: Vishweshwar Bhat Column: ಟಾಟಾ ಪೆನ್ ಕಳೆದುಕೊಂಡ ಪ್ರಸಂಗ!
ಎಷ್ಟು ಎತ್ತರಕ್ಕೆ ಬೆಳೆಯಿತೆಂದರೆ, ಆಕಾಶದಲ್ಲಿ ಸಂಚರಿಸುವ ಸೂರ್ಯ- ಚಂದ್ರರ ದಾರಿಗೆ ಅದು ಅಡ್ಡಲಾಗಿ ನಿಂತಿತು. ಇದರಿಂದ ಜಗತ್ತಿನ ಒಂದು ಭಾಗದಲ್ಲಿ ಸದಾ ಕತ್ತಲೆಯೂ, ಇನ್ನೊಂದು ಭಾಗದಲ್ಲಿ ಸದಾ ಬೆಳಕೂ ಇರುವಂತಾಯಿತು. ಸೃಷ್ಟಿಯ ನಿಯಮವೇ ಏರುಪೇರಾಗಿ, ಇಡೀ ಪ್ರಕೃತಿಯ ಸಮತೋಲನ ತಪ್ಪಿತು.
ದೇವತೆಗಳು ಮತ್ತು ಋಷಿಮುನಿಗಳು ಈ ಸಮಸ್ಯೆಯಿಂದ ಕಂಗಾಲಾಗಿ, ಪರಿಹಾರಕ್ಕಾಗಿ ಪರಮ ತೇಜಸ್ವಿಗಳೂ, ಕಟು ನಿರ್ಧಾರಗಳಿಗೆ ಹೆಸರಾದವರೂ ಆದ ಅಗಸ್ತ್ಯ ಮಹರ್ಷಿಗಳನ್ನು ಪ್ರಾರ್ಥಿಸಿ ದರು. ಆ ಸಮಯದಲ್ಲಿ ಅಗಸ್ತ್ಯರು ಉತ್ತರ ಭಾರತದಲ್ಲಿದ್ದರು. ಅವರು ದೇವತೆಗಳ ಕೋರಿಕೆಯನ್ನು ಮನ್ನಿಸಿ, ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸಿದರು. ಅಗಸ್ತ್ಯರು ನಡೆದು ಬರುತ್ತಿರುವುದನ್ನು ವಿಂಧ್ಯ ಕಂಡಿತು. ಪರ್ವತಕ್ಕೆ ಅವರ ತಪೋಶಕ್ತಿಯ ಅರಿವಿತ್ತು. ಮುನಿಗಳ ಶಾಪಕ್ಕೆ ಹೆದರಿ, ಗೌರವ ಸೂಚಿಸಲು ಅದು ಸಾಷ್ಟಾಂಗ ನಮಸ್ಕಾರ ಮಾಡು ವಂತೆ ಕೆಳಕ್ಕೆಬಗ್ಗಿತು.
ಆಗ ಅಗಸ್ತ್ಯರು ಅತ್ಯಂತ ಚತುರತೆಯಿಂದ ಒಂದು ಉಪಾಯ ಮಾಡಿದರು. ಅವರು ಪರ್ವತಕ್ಕೆ ಹೇಳಿದರು- ‘ವಿಂಧ್ಯನೇ, ನಾನು ತುರ್ತು ಕೆಲಸದ ನಿಮಿತ್ತ ದಕ್ಷಿಣ ದೇಶದ ಯಾತ್ರೆಗೆ ಹೊರಟಿದ್ದೇನೆ. ನಾನು ಮರಳಿ ಉತ್ತ ರಕ್ಕೆ ಬರುವವರೆಗೂ ನೀನು ಇದೇ ಸ್ಥಿತಿಯಲ್ಲಿ (ಬಗ್ಗಿಯೇ) ಇರು. ನಾನು ಬಂದ ಮೇಲೆ ನೀನು ಎಂದಿನಂತೆ ಏಳಬಹುದು.’ ಅಗಸ್ತ್ಯರ ಮಾತಿಗೆ ಒಪ್ಪಿದ ವಿಂಧ್ಯ ಪರ್ವತವು ‘ಆಗಲಿ ಮಹಾಸ್ವಾಮಿ’ ಎಂದು ಹಾಗೆಯೇ ಬಗ್ಗಿ ಕುಳಿತುಕೊಂಡಿತು. ಆದರೆ, ಅಗಸ್ತ್ಯ ಮುನಿಗಳು ದಕ್ಷಿಣಕ್ಕೆ ಹೋದವರು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಉತ್ತರಕ್ಕೆ ಮರಳಿ ಬರಲೇ ಇಲ್ಲ!
ವಿಂಧ್ಯ ಪರ್ವತವು ಮುನಿಗಳು ಮರಳಿ ಬರುತ್ತಾರೆ, ಅವರ ನೆರಳು ಕಾಣ ಸಿಗುತ್ತದೆ ಎಂದು ಇಂದಿಗೂ ದಾರಿ ಕಾಯುತ್ತಾ ಹಾಗೇ ಬಗ್ಗಿ ನಿಂತಿದೆ ಎಂಬುದು ಪೌರಾಣಿಕ ನಂಬಿಕೆ. ಅಗಸ್ತ್ಯರು ಹೋದ ಮೇಲೆ ಅವರ ನೆರಳು ಕೂಡ ವಿಂಧ್ಯನಿಗೆ ಕಾಣಿಸಲಿಲ್ಲ. ಈ ಕಥೆಯಿಂದಾಗಿಯೇ ‘ಬಂದ ದಾರಿಗೆ ಸುಂಕ ವಿಲ್ಲದೇ ನಾಪತ್ತೆಯಾಗುವುದು’ ಅಥವಾ ಮರಳಿ ಬಾರದಂತೆ ಮಾಯವಾಗುವುದು’ ಎಂಬ ಅರ್ಥ ದಲ್ಲಿ ‘ಅಗಸ್ತ್ಯ ನೆರಳು’ ಎಂಬ ನುಡಿಗಟ್ಟು ಜನಪ್ರಿಯವಾಯಿತು.
ಅಗಸ್ತ್ಯರು ವಿಂಧ್ಯ ಪರ್ವತವನ್ನು ಹಿಂಸೆ ಅಥವಾ ಶಾಪದ ಮೂಲಕ ಮಟ್ಟಹಾಕಲಿಲ್ಲ. ಬದಲಿಗೆ ತಮ್ಮ ಬುದ್ಧಿವಂತಿಕೆ ಮತ್ತು ಮಾತಿನ ಚಾತುರ್ಯದಿಂದ ಜಗತ್ತಿನ ಕಲ್ಯಾಣಕ್ಕಾಗಿ ಪರ್ವತದ ಗರ್ವ ಭಂಗ ಮಾಡಿದರು. ಇದು ನಮಗೆ ‘ಬಲಪ್ರಯೋಗಕ್ಕಿಂತ ಬುದ್ಧಿಪ್ರಯೋಗ ಲೇಸು’ ಎಂಬುದನ್ನು ಕಲಿಸುತ್ತದೆ.
‘ಅಗಸ್ತ್ಯ ನೆರಳು’ ಎನ್ನುವುದು ಕೇವಲ ಕಣ್ಮರೆಯಾಗುವ ಕ್ರಿಯೆಯಲ್ಲ. ಅದು ಬುದ್ಧಿವಂತಿಕೆ, ಸಮಯಪ್ರಜ್ಞೆ, ಭ್ರಮೆ ಮತ್ತು ಕಾಯುವಿಕೆಯ ಸಂಕೇತ. ಇಂದಿನ ಇಂಟರ್ನೆಟ್ ಮತ್ತು ಸೋಶಿ ಯಲ್ ಮೀಡಿಯಾ ಯುಗದಲ್ಲೂ ಈ ‘ಅಗಸ್ತ್ಯ ನೆರಳು’ ಎಂಬ ಪರಿಕಲ್ಪನೆ ಬೇರೆ ರೂಪದಲ್ಲಿ ಚಾಲ್ತಿಯಲ್ಲಿದೆ. ಇಂಗ್ಲಿಷಿನಲ್ಲಿ ಇಂದು ’Ghosting’ ಎಂಬ ಹೊಸ ಪದವೊಂದನ್ನು ಬಳಸು ತ್ತಾರೆ. ಪ್ರೇಮ ಸಂಬಂಧಗಳಲ್ಲಿ ಒಬ್ಬ ವ್ಯಕ್ತಿ ಯಾವುದೇ ಮುನ್ಸೂಚನೆ ನೀಡದೇ, ಸಂದೇಶಗಳಿಗೆ ಉತ್ತರಿಸದೇ ಇದ್ದಕ್ಕಿದ್ದಂತೆ ಸಂಪರ್ಕ ಕಡಿದುಕೊಂಡು ಮಾಯವಾಗುವುದಕ್ಕೆ ‘ಘೋಸ್ಟಿಂಗ್’ ಎನ್ನಲಾಗುತ್ತದೆ.