ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಟಾಟಾ ಪೆನ್ ಕಳೆದುಕೊಂಡ ಪ್ರಸಂಗ!

‘ನೋಡಿ, ನನ್ನ ಬಾಲ್ ಪೆನ್ ಕಳೆದುಹೋಗಿದೆ. ಅದು ಎಲ್ಲಿ ಹೋಯಿತು ಅಂತಲೇ ಗೊತ್ತಾಗುತ್ತಿಲ್ಲ. ಎಲ್ಲ ಕಡೆ ಹುಡುಕಿದೆ... ಆದರೆ ಸಿಗುತ್ತಿಲ್ಲ’ ಎಂದು ತೀವ್ರ ಬೇಸರದಿಂದ ಹೇಳಿದರು. ಅಂದು ಅವರೊಂದಿಗೆ ಟಾಟಾ ಸ್ಟೀಲ್‌ನ ನಿರ್ದೇಶಕರಬ್ಬರಾದ ಡಾ. ಜಮ್ಶೆಡ್ (ಜೆ.ಜೆ.) ಇರಾನಿ ಕೂಡ ಒಬ್ಬರಾಗಿದ್ದರು. ಜೆಆರ್‌ಡಿ ಟಾಟಾ ಅವರ ಬೇಸರವನ್ನು ಇರಾನಿ ಗಮನಿಸಿದರು.

Vishweshwar Bhat Column: ಟಾಟಾ ಪೆನ್ ಕಳೆದುಕೊಂಡ ಪ್ರಸಂಗ!

-

ಸಂಪಾದಕರ ಸದ್ಯಶೋಧನೆ

ಇತ್ತೀಚೆಗೆ ಉದ್ಯಮಿ ಹರ್ಷ್ ಗೋಯೆಂಕಾ ಅವರು ಒಂದು ಟ್ವೀಟ್ ಮಾಡಿದ್ದರು. ಅದು ಉದ್ಯಮಿ ಜೆಆರ್‌ಡಿ ಟಾಟಾ ಅವರ ಬದುಕಿನ ಒಂದು ಪ್ರಸಂಗವನ್ನು ಕುರಿತದ್ದು. ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ‘ಲಾಭ’ ಮತ್ತು ‘ಅಧಿಕಾರ’ವೇ ಪರಮೋಚ್ಚ ಮೌಲ್ಯಗಳಾಗಿರುವಾಗ, ಜೆಆರ್‌ಡಿ ಈ ನಡೆವಳಿಕೆ ನಮಗೆ ಬದುಕಿನ ಅತಿ ದೊಡ್ಡ ಪಾಠವನ್ನು ಕಲಿಸುತ್ತದೆ.

ಜೆಆರ್‌ಡಿ ಟಾಟಾ ಅವರು ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಡೆದ ಘಟನೆ. ಅವರು ಮತ್ತು ಟಾಟಾ ಸಂಸ್ಥೆಯ ಹಿರಿಯ ನಿರ್ದೇಶಕರು ಪ್ರತಿದಿನ ಟಾಟಾ ಸಮೂಹದ ಪ್ರಧಾನ ಕಚೇರಿಯಾದ ‘ಬಾಂಬೆ ಹೌಸ್’ನಲ್ಲಿ ಒಟ್ಟಿಗೆ ಮಧ್ಯಾಹ್ನದ ಭೋಜನಕ್ಕೆ ಸೇರುತ್ತಿದ್ದರು. ಒಂದು ದಿನ ಜೆಆರ್‌ಡಿ ಅವರು ತಮಗೆ ಅತ್ಯಂತ ಪ್ರಿಯವಾದ ಪೆನ್ ಕಳೆದುಹೋಗಿದೆ ಎಂಬ ಬೇಸರದ ಊಟಕ್ಕೆ ಬಂದರು. ಅವರು ಯಾವಾಗಲೂ ಒಂದು ಪಾರ್ಕರ್ ಪೆನ್ ಸೆಟ್ ಅನ್ನು ತಮ್ಮೊಂದಿಗೆ ಇಟ್ಟು ಕೊಳ್ಳುತ್ತಿದ್ದರು- ಅದರಲ್ಲಿ ಒಂದು ಫೌಂಟನ್ ಪೆನ್ ಮತ್ತು ಮತ್ತೊಂದು ಬಾಲ್ ಪೆನ್ ಇರುತ್ತಿತ್ತು.

ಇದನ್ನೂ ಓದಿ: Vishweshwar Bhat Column: ನಾಯಿಗಳಿಗೆ ಟೈಮ್‌ ತಿಳಿಯುತ್ತದಾ ?

‘ನೋಡಿ, ನನ್ನ ಬಾಲ್ ಪೆನ್ ಕಳೆದುಹೋಗಿದೆ. ಅದು ಎಲ್ಲಿ ಹೋಯಿತು ಅಂತಲೇ ಗೊತ್ತಾಗುತ್ತಿಲ್ಲ. ಎಲ್ಲ ಕಡೆ ಹುಡುಕಿದೆ... ಆದರೆ ಸಿಗುತ್ತಿಲ್ಲ’ ಎಂದು ತೀವ್ರ ಬೇಸರದಿಂದ ಹೇಳಿದರು. ಅಂದು ಅವರೊಂದಿಗೆ ಟಾಟಾ ಸ್ಟೀಲ್‌ನ ನಿರ್ದೇಶಕರಬ್ಬರಾದ ಡಾ. ಜಮ್ಶೆಡ್ (ಜೆ.ಜೆ.) ಇರಾನಿ ಕೂಡ ಒಬ್ಬರಾಗಿದ್ದರು. ಜೆಆರ್‌ಡಿ ಟಾಟಾ ಅವರ ಬೇಸರವನ್ನು ಇರಾನಿ ಗಮನಿಸಿದರು. ಕೆಲವು ವಾರಗಳ ನಂತರ, ಇರಾನಿ ಅವರು ಲಂಡನ್‌ಗೆ ಭೇಟಿ ನೀಡಿದ್ದಾಗ, ಸೆಲ್ರಿಡ್ಜಸ್ ಎಂಬ ಮಾಲ್ ಹತ್ತಿರವಿದ್ದ ಪೆನ್ನುಗಳಿಗೇ ವಿಶೇಷವಾದ ಒಂದು ಸಣ್ಣ ಅಂಗಡಿಗೆ ಹೋದರು. ಅಲ್ಲಿ ಜೆಆರ್‌ಡಿ ಕಳೆದುಕೊಂಡಿದ್ದ ಪೆನ್ನಿನಂತಥದ್ದೇ ಕರಾರುವಾಕ್ಕಾದ ಮತ್ತೊಂದು ಬಾಲ್ ಪೆನ್ ಅವರಿಗೆ ಸಿಕ್ಕಿತು. ಅವರು ತಕ್ಷಣ ಅದನ್ನು ಖರೀದಿಸಿದರು. ಮುಂದಿನ ಬಾರಿ ಜೆಆರ್‌ಡಿ ಟಾಟಾ ಅವರನ್ನು ಭೇಟಿಯಾದಾಗ, ಆ ಪೆನ್ನನ್ನು ಅವರಿಗೆ ಉಡುಗೊರೆಯಾಗಿ ನೀಡಿದರು. ಜೆಆರ್‌ಡಿ ಅವರಿಗೆ ತುಂಬಾ ಸಂತೋಷ ವಾಯಿತು.

‘ಹೌದು ಜಮ್ಶೆಡ್, ಇದು ನಾನು ಕಳೆದುಕೊಂಡ ಪೆನ್ನಿನಂತೆಯೇ ಇದೆ’ ಎಂದರು. ಮೊದಲ ಒಂದೆರಡು ನಿಮಿಷಗಳು ಅವರು ಆ ಪೆನ್ನಿನಿಂದ ಬರೆದು, ಪರೀಕ್ಷಿಸಿ ನೋಡಿದರು. ಆದರೆ, ಅಷ್ಟರ ಡಾ. ಇರಾನಿ ಅವರಿಗೆ ಜೆಆರ್‌ಡಿ ಅವರ ಮುಖಭಾವ ನಿಧಾನವಾಗಿ ಬದಲಾಗುತ್ತಿರುವುದು ಗೋಚರಿಸಿತು. ಎರಡು ನಿಮಿಷಗಳ ನಂತರ, ಅವರು ಆ ಬಾಲ್ ಪೆನ್ನನ್ನು ಮರಳಿ ಡಾ. ಇರಾನಿ ಅವರಿಗೆ ನೀಡುತ್ತಾ ಹೇಳಿದರು- ‘ನಿಮ್ಮ ಈ ಪ್ರೀತಿಯ ಯೋಚನೆಗೆ ಧನ್ಯವಾದಗಳು. ನನಗೆ ಬೇಕಾ ಗಿದ್ದುದು ಇದೇ. ಆದರೆ ಇದನ್ನು ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ.’ ‘ಏಕೆ ಸರ್?’ ಎಂದು ಡಾ. ಇರಾನಿ ಆಶ್ಚರ್ಯದಿಂದ ಕೇಳಿದರು.

‘ನೀವು ಇದನ್ನೇ ಹುಡುಕುತ್ತಿದ್ದೀರಿ ಎಂದು ನಾನು ಭಾವಿಸಿದ್ದೆ.’ ಅದಕ್ಕೆ ಜೆಆರ್‌ಡಿ ಉತ್ತರಿಸಿದರು- ‘ಹೌದು ಜಮ್ಶೆಡ್. ಆದರೆ ಕೆಲಸದ ಜಾಗದಲ್ಲಿ ನನ್ನ ಸಹೋದ್ಯೋಗಿಗಳಿಂದ ಯಾವುದೇ ಉಡುಗೊರೆ ಗಳನ್ನು ಸ್ವೀಕರಿಸಬಾರದು ಎಂಬುದು ನನ್ನದೊಂದು ತತ್ವ. ನಾನೇನಾದರೂ ಇದನ್ನು ಸ್ವೀಕರಿಸಿ ದರೆ, ಆಗ ನನ್ನ ಸಹೋದ್ಯೋಗಿಗಳು ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ನನಗೆ ಅತ್ಯಂತ ದುಬಾರಿ ಉಡುಗೊರೆಗಳನ್ನು ನೀಡಲು ಸ್ಪರ್ಧಿಸುತ್ತಾರೆ ಎಂದು ನನಗೆ ತಿಳಿದಿದೆ.’ ಡಾ.ಇರಾನಿ ಅವರನ್ನು ಒಪ್ಪಿಸಲು ಪ್ರಯತ್ನಿಸಿದರು. ‘ಆದರೆ ಸರ್, ಈ ಪೆನ್ನನ್ನು ನಿಮಗೆ ನಾನೇ ಕೊಟ್ಟಿದ್ದು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಇದು ನಿಮ್ಮ ಕೋಣೆಯ ಸಿಕ್ಕಿತು ಎಂದು ನೀವು ಹೇಳಬಹುದು.

ನಾನಂತೂ ಜೆಆರ್‌ಡಿ ಅವರಿಗೆ ಅಂಥದ್ದೇ ಪೆನ್ ಕೊಟ್ಟಿದ್ದೇನೆ ಎಂದು ಎಲ್ಲೂ ಹೇಳಿಕೊಂಡು ತಿರುಗುವುದಿಲ್ಲ.’ ಅದಕ್ಕೆ ಜೆಆರ್‌ಡಿ ಪ್ರತಿಕ್ರಿಯಿಸಿದರು- ‘ಜಮ್ಶೆಡ್, ನೀವು ಆ ರೀತಿಯಾಗಿ ಮಾಡುವು ದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು. ಆದರೆ ಅದು ನನಗೆ ಗೊತ್ತಿರುತ್ತದಲ್ಲವೇ? ನನ್ನ ತತ್ವಗಳಿಗೆ ವಿರುದ್ಧವಾಗಿ ನಾನು ಈ ಉಡುಗೊರೆಯನ್ನು ಸ್ವೀಕರಿಸಿದ್ದೇನೆ ಎಂಬುದು ನನ್ನ ಆತ್ಮಸಾಕ್ಷಿಗೆ ತಿಳಿದಿರುತ್ತದೆ. ದಯವಿಟ್ಟು ಕ್ಷಮಿಸಿ, ಇದನ್ನು ನನ್ನಿಂದ ಸ್ವೀಕರಿಸಲು ಸಾಧ್ಯವಿಲ್ಲ.’ ನಮ್ಮ ಬದುಕ ನ್ನು ಯಾವ ತತ್ವಗಳ ಆಧಾರದ ಮೇಲೆ ಮುನ್ನಡೆಸಬೇಕು ಎಂಬುದನ್ನು ನಮ್ಮಲ್ಲಿ ಪ್ರತಿಯೊಬ್ಬರೂ ತಾವೇ ನಿರ್ಧರಿಸಿಕೊಳ್ಳುತ್ತಾರೆ. ಯಾರೂ ನಮ್ಮನ್ನು ಗಮನಿಸದಿದ್ಧಾಗ ಅಥವಾ ನಮ್ಮ ಬಗ್ಗೆ ಮಾತನಾಡದಿದ್ದಾಗಲೂ ನಾವು ಗಟ್ಟಿಯಾಗಿ ನಿಲ್ಲುವ ತತ್ವಗಳೇ ನಮ್ಮ ನಿಜವಾದ ವ್ಯಕ್ತಿತ್ವ ಏನೆಂಬುದನ್ನು ವ್ಯಾಖ್ಯಾನಿಸುತ್ತವೆ. ಜೆಆರ್‌ಡಿ ಟಾಟಾ ಅವರ ಕಳೆದುಹೋದ ಈ ಬಾಲ್ ಪೆನ್ನಿನ ಕಥೆಯು ನಮ್ಮ ಬದುಕಿನ ತತ್ವಗಳು ಎಂಥzಗಿರಬೇಕು ಎಂದು ನಾವೇ ಆತ್ಮಾವಲೋಕನ ಮಾಡಿ ಕೊಳ್ಳಲು ನೆರವಾಗುತ್ತದೆ.