ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಇರಾನಿನಲ್ಲಿ ಏನಾಗುತ್ತಿದೆ ? ಏಕಾಗುತ್ತಿದೆ ?

ಒಂದು ವರ್ಷದಲ್ಲಿ ಹಣದುಬ್ಬರವು ಇರಾನಿನ ಜನತೆಯನ್ನು ಹೈರಾಣು ಮಾಡಿಬಿಟ್ಟಿದೆ. ಡೈರಿ ಪದಾರ್ಥಗಳು ಒಂದು ರುಪಾಯಿ ಇದ್ದದ್ದು ಎಂಟು ರುಪಾಯಿಯಾಗಿದೆ. ಇತರೆ ಪದಾರ್ಥಗಳು ಒಂದು ರುಪಾಯಿ ಇದ್ದದ್ದು ಹತ್ತು ರುಪಾಯಿಯಾಗಿದೆ. ಸಾಮಾನ್ಯ ಜನತೆ ಕುಸಿಯುತ್ತಿರುವ ತಮ್ಮ ಹಣದ ಮೌಲ್ಯವನ್ನು ತಡೆದುಕೊಳ್ಳಲು ಆಗದೆ ಬೀದಿಗೆ ಇಳಿದಿ ದ್ದಾರೆ.

ವಿಶ್ವರಂಗ

ಇರಾನಿನಲ್ಲಿ ಶುರುವಾಗಿರುವ ಈ ಆಂತರಿಕ ಗಲಭೆಗೆ ಒಂದಲ್ಲ ಹತ್ತಾರು ಕಾರಣ ಗಳಿವೆ. ಇವೆಲ್ಲವೂ ಒಂದು ದಿನದಲ್ಲಿ ಸೃಷ್ಟಿಯಾದದ್ದಲ್ಲ. ಹಲವಾರು ವರ್ಷಗಳಿಂದ ನಿಧಾನವಾಗಿ ಆ ಸಮಾಜವನ್ನು ಈ ಕಾರಣಗಳು ಗೆದ್ದಲಿನಂತೆ ಒಳಗೇ ತಿನ್ನುತ್ತ ಬಂದಿವೆ. ಇವತ್ತಿಗೆ ಅದು ಸ್ಫೋಟಗೊಂಡು ಜಗಜ್ಜಾಹೀರಾಗಿದೆ.

ಇರಾನ್ ಹೊತ್ತಿ ಉರಿಯುತ್ತಿದೆ. ಈ ಸಾಲುಗಳನ್ನು ಬರೆಯುವಾಗ 44 ಜನ ಅಲ್ಲಿನ ಗಲಭೆ ಯಲ್ಲಿ ಸತ್ತಿದ್ದಾರೆ ಎನ್ನಲಾಗಿದೆ. ಈ ಸಂಖ್ಯೆ ಶುದ್ಧ ಸುಳ್ಳು ಎನ್ನುವುದು ನಮಗೆ ಗೊತ್ತು. ಈ ರೀತಿಯ ಗಲಭೆಗಳು ನಡೆದಾಗ ನಿಖರವಾಗಿ ಎಷ್ಟು ಜನ ಸತ್ತರು ಎನ್ನುವುದು ಜಗತ್ತಿಗೆ ಗೊತ್ತಾಗಲು ಹಲವಾರು ವರ್ಷಗಳು ಬೇಕಾಗುತ್ತವೆ.

ಇರಾನ್ ಶಾಂತವಾಗೇ ಇತ್ತಲ್ಲ? ಅದೇನಾಯ್ತು? ಏಕೆ ಈ ರೀತಿಯ ಗಲಭೆ ಶುರುವಾಗಿದೆ? ಒಟ್ಟಾರೆ ಇರಾನಿನಲ್ಲಿ ಅದೇನೋ ಗಲಾಟೆ ಆಗುತ್ತಿದೆ ಎನ್ನುವುದು ಚೂರುಪಾರು ಕಿವಿಗೆ ಬಿದ್ದಿರುತ್ತದೆ. ನಿಜವಾಗಿ ಏನಾಗುತ್ತಿದೆ ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. ಬನ್ನಿ ಇರಾನಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ಸ್ವಲ್ಪ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡೋಣ.

ನಿಮಗೆ ಗೊತ್ತಿರಲಿ, ಇರಾನಿನಲ್ಲೋ, ಮತ್ತೆ ಗಲಾಟೆಯಾದರೆ ನಮಗೇನು? ಎನ್ನುವ ಕಾಲ ಘಟ್ಟದಲ್ಲಿ ನಾವಿಲ್ಲ. ನಾವೆಷ್ಟೇ ಕಚ್ಚಾಡಿಕೊಂಡರೂ ಜಗತ್ತು ಇಂದು ಹಿಂದೆಂದಿಗಿಂತ ಹೆಚ್ಚು ಅವಲಂಬಿತವಾಗಿದೆ. ರಷ್ಯಾದ ಜತೆಜತೆಗೆ ನಾವು ಇರಾನಿನಿಂದ ಕೂಡ ಸಾಕಷ್ಟು ತೈಲವನ್ನು ಖರೀದಿಸುತ್ತಿದ್ದೇವೆ.

ಹೀಗಾಗಿ ಇರಾನಿನಲ್ಲಿ ಆಗುತ್ತಿರುವ ಗಲಭೆಯ ಪರಿಣಾಮವು ಭಾರತಕ್ಕೂ ಒಂದಷ್ಟು ತಟ್ಟುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇರಾನಿನಲ್ಲಿ ಶುರುವಾಗಿರುವ ಈ ಆಂತರಿಕ ಗಲಭೆಗೆ ಒಂದಲ್ಲ ಹತ್ತಾರು ಕಾರಣಗಳಿವೆ. ಇವೆಲ್ಲವೂ ಒಂದು ದಿನದಲ್ಲಿ ಸೃಷ್ಟಿ ಯಾದದ್ದಲ್ಲ. ಹಲವಾರು ವರ್ಷಗಳಿಂದ ನಿಧಾನವಾಗಿ ಆ ಸಮಾಜವನ್ನು ಈ ಕಾರಣಗಳು ಗೆದ್ದಲಿನಂತೆ ಒಳಗೇ ತಿನ್ನುತ್ತ ಬಂದಿವೆ.

ಇದನ್ನೂ ಓದಿ:Rangaswamy Mookanahalli Column: ಕಳೆದುಕೊಳ್ಳುವ ಮುನ್ನ, ಉಳಿಸಿಕೊಳ್ಳಲು ಯತ್ನಿಸೋಣವೇ ?

ಇವತ್ತಿಗೆ ಅದು ಸ್ಫೋಗೊಂಡು ಜಗಜ್ಜಾಹೀರಾಗಿದೆ. ಈ ರೀತಿಯ ಸ್ಫೋಕ್ಕೆ ತುರ್ತು ಕಾರಣವೇನು ಗೊತ್ತೇ? ಅದು ಆರ್ಥಿಕ ಕುಸಿತ. ಜಗತ್ತಿನ ಯಾವುದೇ ದೇಶವಿರಲಿ ಆರ್ಥಿಕತೆ ಕುಸಿತವಾದರೆ ಅಲ್ಲಿನ ಸಮಾಜ ಬೀದಿಗೆ ಇಳಿಯುವುದು ಅನಿವಾರ್ಯವಾಗುತ್ತದೆ. ಬೇರೆ ಅಂಶಗಳನ್ನು ಹೇಗೋ ಸಹಿಸಿಕೊಳ್ಳುವ ಜನರು, ಆರ್ಥಿಕ ಕುಸಿತವನ್ನು ತಡೆದುಕೊಳ್ಳ ಲಾರರು.

ಒಂದು ವರ್ಷದಲ್ಲಿ ಹಣದುಬ್ಬರವು ಇರಾನಿನ ಜನತೆಯನ್ನು ಹೈರಾಣು ಮಾಡಿಬಿಟ್ಟಿದೆ. ಡೈರಿ ಪದಾರ್ಥಗಳು ಒಂದು ರುಪಾಯಿ ಇದ್ದದ್ದು ಎಂಟು ರುಪಾಯಿಯಾಗಿದೆ. ಇತರೆ ಪದಾರ್ಥಗಳು ಒಂದು ರುಪಾಯಿ ಇದ್ದದ್ದು ಹತ್ತು ರುಪಾಯಿಯಾಗಿದೆ. ಸಾಮಾನ್ಯ ಜನತೆ ಕುಸಿಯುತ್ತಿರುವ ತಮ್ಮ ಹಣದ ಮೌಲ್ಯವನ್ನು ತಡೆದುಕೊಳ್ಳಲು ಆಗದೆ ಬೀದಿಗೆ ಇಳಿದಿ ದ್ದಾರೆ.

ಡಾಲರ್ ಮತ್ತು ರಿಯಾಲ್ ವಿನಿಮಯ ದರ ಮೇಲ್ನೋಟಕ್ಕೆ ಹೆಚ್ಚಿನ ಏರುಪೇರಾಗಿದ್ದಂತೆ ಕಾಣುವುದಿಲ್ಲ, ಅಂದರೆ ಸರಕಾರದ ವಿನಿಮಯ ದರಪಟ್ಟಿಯಲ್ಲಿ ಒಂದು ಅಮೆರಿಕನ್ ಡಾಲರಿಗೆ 42 ಸಾವಿರ ರಿಯಾಲ್ ಎನ್ನುವುದನ್ನು ನಾವು ಕಾಣಬಹುದು. ಆದರೆ ಫ್ರೀ ಮಾರ್ಕೆಟ್‌ನಲ್ಲಿ ಅಂದರೆ ಅನಽಕೃತ ಮಾರುಕಟ್ಟೆಯಲ್ಲಿ ಒಂದು ಡಾಲರಿಗೆ ಒಂದು ಲಕ್ಷ ನಲವತ್ತು ಸಾವಿರ ರಿಯಾಲ್ ಎನ್ನುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ.

ಗಮನಿಸಿ, ಯಾವಾಗ ಒಂದು ದೇಶದ ಜನ ತಮ್ಮ ಕರೆನ್ಸಿಯಲ್ಲಿ ನಂಬಿಕೆಯನ್ನು ಕಳೆದು ಕೊಳ್ಳುತ್ತಾರೋ, ಆಗ ಅವರು ಜಾಗತಿಕ ಕರೆನ್ಸಿಯಾಗಿ ಕೆಲಸ ಮಾಡುತ್ತಿರುವ ಡಾಲರ್‌ನ ಸಂಗ್ರಹಣೆಗೆ ಮುಗಿ ಬೀಳುತ್ತಾರೆ. ಡಾಲರಿನ ಬೇಡಿಕೆ ಹೆಚ್ಚಾಗುತ್ತಾ ಹೋದಂತೆ ಅದನ್ನು ಕೊಳ್ಳುವ ತವಕ ಜನರಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ.

Screenshot_2 R

ತಮ್ಮ ಹಣ ಟಾಯ್ಲೆಟ್ ಪೇಪರಿಗೆ ಸಮವಾಗಿಬಿಡುತ್ತದೆ ಎನ್ನುವ ಭಯ ಈ ರೀತಿಯ ಡಾಲರ್ ಬೇಡಿಕೆಯನ್ನು ಹೆಚ್ಚಿಸುತ್ತದೆ. ನಮ್ಮ ಕಣ್ಣ ಮುಂದೆ ವೆನಿಜುವೆಲಾ, ಜಿಂಬಾಂಬ್ವೆ, ಅರ್ಜೆಂಟೀನಾ ದೇಶಗಳನ್ನು ಇದಕ್ಕೆ ಉದಾಹರಣೆಯಾಗಿ ಕಾಣಬಹುದು.

ಯಾವುದೇ ದೇಶದ ಕರೆನ್ಸಿಯು, ಇಂದಿಗೂ ಜಾಗತಿಕ ಕರೆನ್ಸಿಯಾಗಿರುವ ಡಾಲರ್ ಮುಂದೆ ಏರಿಳಿತ ಕಾಣುವುದು ಸಹಜ. ಇದು ಗಳಿಗೆ ಗಳಿಗೆಗೂ ಆಗುತ್ತಿರುತ್ತದೆ. ಒಮ್ಮೊಮ್ಮೆ ಡಾಲರಿನ ಮುಂದೆ ಹೆಚ್ಚು ಕುಸಿತವನ್ನು ಕಾಣುತ್ತದೆ. ಭಾರತದ ರುಪಾಯಿ ಕೂಡ ಡಾಲರಿನ ಮುಂದೆ ಆರೇಳು ಪ್ರತಿಶತ ಕುಸಿತ ಕಂಡದ್ದನ್ನು ನಾವೀಗ ನೋಡುತ್ತಿದ್ದೇವೆ.

ಇರಾನಿನಲ್ಲಿ ಅದು ಕಳೆದ ಆರು ತಿಂಗಳಲ್ಲಿ 56 ಪ್ರತಿಶತಕ್ಕಿಂತ ಹೆಚ್ಚಿನ ಮೌಲ್ಯವನ್ನು ಕಳೆದುಕೊಂಡಿದೆ. ಇದನ್ನು ಸರಳವಾಗಿ ಹೇಳಬೇಕೆಂದರೆ ಸ್ಥಳೀಯ ಹಣವು ತನ್ನ ಖರೀದಿ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಅಂದರೆ ಗಮನಿಸಿ, ವರ್ಷದ ಹಿಂದೆ ಒಂದು ಕಾಫಿ ಹತ್ತು ರಿಯಾಲ್‌ಗೆ ಸಿಗುತ್ತಿದ್ದದ್ದು, ಇಂದು ಅದಕ್ಕೆ ನೂರು ರಿಯಾಲ್ ನೀಡಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನು ಬೇರೆ ಪದಾರ್ಥಗಳಿಗೂ ಅನ್ವಯಿಸಿಕೊಂಡು ನೋಡಿದಾಗ ಇದೆಷ್ಟು ದೊಡ್ಡ ಸಮಸ್ಯೆ ಎನ್ನುವುದರ ಅರಿವಾಗುತ್ತದೆ. ಜನರ ಆದಾಯ ಮಾತ್ರ ಅಷ್ಟೇ ಇರುತ್ತದೆ. ವರ್ಷದ ಹಿಂದೆ ತಿಂಗಳಿಗೆ ಹತ್ತು ಸಾವಿರ ರಿಯಾಲ್ ದುಡಿಯುತ್ತಿದ್ದ ವ್ಯಕ್ತಿಯ ಆದಾಯ ಈ ವರ್ಷ ತಿಂಗಳಿಗೆ ಒಂದು ಲಕ್ಷ ರಿಯಾಲ್ ಆಗಿಲ್ಲ. ಆತನ ಆದಾಯ ಹತ್ತು ಸಾವಿರದ ಕುಳಿತಿದೆ.

ಆದರೆ ಖರ್ಚು ಮಾತ್ರ ಒಂದು ಲಕ್ಷ ಬೇಕು! ಹೀಗಾಗಲು ಸಾಧ್ಯವೇ? ಒಂದು ವರ್ಷದಲ್ಲಿ ಹೀಗೇಕೆ ಆಗುತ್ತದೆ? ಎನ್ನುವ ಸಂಶಯ ಓದುಗರಲ್ಲಿ ಬಂದಿರುತ್ತದೆ. ಈ ರೀತಿ ಆದ ದೇಶ ಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅಲ್ಲಿನ ವ್ಯವಸ್ಥೆ ಕುಸಿದದ್ದನ್ನು ನೋಡಿದ್ದಕ್ಕೆ ಸಾಕ್ಷಿಯಾಗಿ ಈ ಮಾತುಗಳನ್ನು ಬರೆಯುತ್ತಿದ್ದೇನೆ.

ಇಂಥ ದೇಶಗಳು ಜಾಗತಿಕವಾಗಿ ಸ್ಯಾಂಕ್ಷನ್ ಅಂದರೆ ಬಹಿಷ್ಕಾರಕ್ಕೆ ಒಳಗಾಗಿರುತ್ತವೆ. ನಿಮಗೆ ಗೊತ್ತಿರಲಿ ರಷ್ಯಾದ ನಂತರ ಅತಿ ಹೆಚ್ಚು ಈ ರೀತಿಯ ನಿಷೇಧಕ್ಕೆ ಒಳಗಾಗಿರುವ ದೇಶ ಇರಾನ್. ಮೂರನೇ ಸ್ಥಾನದಲ್ಲಿ ನಾರ್ತ್ ಕೊರಿಯಾ, ನಾಲ್ಕನೇ ಸ್ಥಾನದಲ್ಲಿ ಸಿರಿಯಾ ಮತ್ತು ಐದನೇ ಸ್ಥಾನದಲ್ಲಿ ವೆನಿಜುವೆಲಾ ದೇಶಗಳಿವೆ.

ಈ ರೀತಿಯ ಜಾಗತಿಕ ಬಹಿಷ್ಕಾರಕ್ಕೆ ಒಳಗಾದಾಗ ಇಂಥ ದೇಶಗಳಿಗೆ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮ ದೇಶದ ಪದಾರ್ಥಗಳನ್ನು ಇತರ ದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ವಿಧಿಯಿಲ್ಲದೇ ತಮ್ಮ ದೇಶಕ್ಕೆ ಅವಶ್ಯಕವಾದ ವಸ್ತುಗಳನ್ನು ಅವು ತರಿಸಿಕೊಳ್ಳಬೇಕಾಗುತ್ತದೆ. ಅಂದರೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗುವುದಿಲ್ಲ.

ಯಾವಾಗ ಒಂದು ದೇಶದ ಆಮದು ತನ್ನ ರಫ್ತಿಗಿಂತ ಹೆಚ್ಚಾಗುತ್ತದೆ, ಆಗ ನಿಧಾನವಾಗಿ ಆ ದೇಶದ ವಿದೇಶಿ ವಿನಿಮಯ ಕರಗುತ್ತಾ ಹೋಗುತ್ತದೆ. ವಿದೇಶಿ ವಿನಿಮಯ ಕರಗಿದಂತೆ ಆ ದೇಶ ಬೇರೆ ದೇಶಗಳ ಜತೆಗೆ ವ್ಯಾಪಾರದಲ್ಲಿ ಚೌಕಾಸಿ ಮಾಡುವ ಕ್ಷಮತೆಯನ್ನು ಕಳೆದು ಕೊಳ್ಳುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇರೆ ದೇಶಗಳು ಹೇಳುವ ಬೆಲೆಯನ್ನು ಕೊಟ್ಟು ಕೊಳ್ಳಬೇಕಾಗುತ್ತದೆ.

ಇದು ಪದಾರ್ಥದ ಬೆಲೆಯನ್ನು ಹೆಚ್ಚಿಸುತ್ತದೆ. ಆಮದು ಹೆಚ್ಚಾದ ಕಾರಣ ಮತ್ತು ವಿದೇಶಿ ವಿನಿಮಯ ಸಾಕಷ್ಟು ಇಲ್ಲದ ಕಾರಣ ತನ್ನ ಹಣದ ಮೌಲ್ಯವನ್ನು ಕೂಡ ಕಳೆದು ಕೊಳ್ಳುತ್ತಾ ಹೋಗುತ್ತದೆ. ಹೀಗಾಗಿ ಸಮಾಜದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಇಂಥ ಆರ್ಥಿಕ ಸೂಕ್ಷ್ಮಗಳನ್ನು ಅರಿತುಕೊಂಡವರು ಆಡಳಿತ ನಡೆಸುತ್ತಿದ್ದರೆ ಇರಾನಿಗೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ.

ಅಲ್ಲಿರುವುದು ಮೂಲಭೂತವಾದವನ್ನು ಹೆಚ್ಚು ನಂಬುವ ಸರಕಾರ. 1979ರಿಂದ ಇಸ್ಲಾಮಿಕ್ ಮೂಲಭೂತವಾದದಲ್ಲಿ ನಂಬಿಕೆಯಿಡುವ ಸರಕಾರ ಅಲ್ಲಿದೆ. ಆರ್ಥಿಕ ಕುಸಿತ ಇದೀಗ ಕೇವಲ ಆರ್ಥಿಕ ಕುಸಿತವಾಗಿ ಉಳಿಯದೆ, ಅಲ್ಲಿನ ಸರಕಾರವನ್ನು ಬದಲಿಸಲು ಜನತೆ ದಂಗೆ ಎದ್ದಿದ್ದಾರೆ.

ಇರಾನಿನಲ್ಲಿ ಈ ರೀತಿಯ ದಂಗೆ ಇದು ಮೊದಲನೆಯದೇನೂ ಅಲ್ಲ. ಐದು ವರ್ಷದ ಹಿಂದಿ ನ ಇತಿಹಾಸ ಕೆದಕಿದರೂ ಸಾಕು, ಇಸ್ರೇಲ್ ದೇಶದ ಜತೆಗಿನ ಹೊಡೆದಾಟದಲ್ಲಿ ಇರಾನಿ ಯರು 15-20 ದಿನಗಳ ಕಾಲ ನೀರಿಗಾಗಿ ಬೀದಿಗೆ ಇಳಿದದ್ದನ್ನು ಕಾಣುತ್ತೇವೆ. ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ಯದ ವಿಚಾರದಲ್ಲಿ ಕೂಡ ಇರಾನಿ ಸಮಾಜ ಬೀದಿಗಿಳಿ ದದ್ದು ಮತ್ತು ಅಲ್ಲಿನ ಸರಕಾರ ಯಾವುದೇ ಕರುಣೆ ತೋರಿಸದೆ ನೂರಾರು ಜನರನ್ನು ಕೊಂದು ಆ ಹೋರಾಟವನ್ನು ಹತ್ತಿಕ್ಕಿದ್ದು ಕಾಣಸಿಗುತ್ತದೆ. ಈ ಎರಡು ಪ್ರಬಲ ಹೋರಾಟ ಕ್ಕಿಂತ ಈ ಬಾರಿಯ ಹೋರಾಟ ಹೆಚ್ಚು ಮನ್ನಣೆ ಪಡೆದುಕೊಂಡಿರುವುದಕ್ಕೆ ಕಾರಣ ಅದಕ್ಕಿರುವ ಕಾಮನ್ ಬೇಸ್!

ಹೌದು ಮೊದಲೆರಡು ವಿಚಾರದಲ್ಲಿ ಎಲ್ಲರೂ ಸಂಕಷ್ಟಕ್ಕೆ ಈಡಾಗಿರಲಿಲ್ಲ. ಯಾರಿಗೆ ಇಷ್ಟವಾಗಿರಲಿಲ್ಲ ಅವರು ಮಾತ್ರ ಬೀದಿಗೆ ಇಳಿದಿದ್ದರು. ಆದರೆ ಹಣ ಎನ್ನುವುದು ಎಲ್ಲಾ ವರ್ಗವನ್ನೂ, ಲಿಂಗವನ್ನೂ, ಧರ್ಮವನ್ನೂ ತಟ್ಟುವ ಏಕೈಕ ಸಾಧನ. ತುತ್ತು ಕೂಳಿಗೆ ತತ್ವಾರ ಬಂದರೆ ಆಗ ಎಲ್ಲರೂ ಬೀದಿಗೆ ಇಳಿಯುತ್ತಾರೆ ಎನ್ನುವುದಕ್ಕೆ ಇರಾನ್ ಸಾಕ್ಷಿಯಾಗಿ ನಿಂತಿದೆ.

ಒಂಬತ್ತು ಕೋಟಿಗಿಂತ ಹೆಚ್ಚಿರುವ ಜನಸಂಖ್ಯೆಯಲ್ಲಿ ಬಹುಸಂಖ್ಯಾತರು 150 ರಿಂದ 250 ಅಮೆರಿಕನ್ ಡಾಲರ್ ಮಾಸಿಕ ವೇತನವನ್ನು ಗಳಿಸಿಕೊಳ್ಳುತ್ತಿದ್ದಾರೆ. ಇದು ಜಗತ್ತಿನ ಬಹುತೇಕ ದೇಶದ ಅವರೇಜ್. ಆದರೆ ಹಣದುಬ್ಬರ ಎನ್ನುವುದು ಈ ಹಣಕ್ಕೆ ಬೆಲೆ ಇಲ್ಲ ದಂತೆ ಮಾಡಿದೆ. ಹೀಗಾಗಿ ಈ ಬಾರಿ ಮೆಜಾರಿಟಿ ಜನ ಬೀದಿಗೆ ಇಳಿದಿದ್ದಾರೆ.

ಕೂಲಿ ಕೆಲಸ ಮಾಡುವ ವ್ಯಕ್ತಿಯಿಂದ ಮೊದಲ್ಗೊಂಡು, ಕಚೇರಿಯಲ್ಲಿ ಕೆಲಸ ಮಾಡು ವವರು, ವ್ಯಾಪಾರಿಗಳು ಹೀಗೆ ಬಹುತೇಕರ ಆಕ್ರೋಶವು ‘ಸರಕಾರ ಹಣದುಬ್ಬರವನ್ನು ನಿಯಂತ್ರಿಸುತ್ತಿಲ್ಲ’ ಎನ್ನುವುದೇ ಆಗಿದೆ. ಮೊದಲೇ ಹೇಳಿದಂತೆ ಸಮಾಜ ಬೇರೆ ಸಮಸ್ಯೆ ಗಳನ್ನು ಹೇಗೋ ಹಲ್ಲುಕಚ್ಚಿ ಸಹಿಸಿಕೊಳ್ಳುತ್ತದೆ, ಆದರೆ ನಿತ್ಯಜೀವನ ನಡೆಸಲು ಕೂಡ ಆಗದ ಸನ್ನಿವೇಶ ಸೃಷ್ಟಿಯಾದರೆ ಆಗ ಜನರು ಬೀದಿಗೆ ಇಳಿದೇ ಇಳಿಯುತ್ತಾರೆ.

ಇರಾನಿನ ರಸ್ತೆಯಲ್ಲಿ ಹಸಿವು ತಾಂಡವವಾಡುತ್ತಿದೆ. ಹಸಿವು ಎನ್ನುವ ಅಗ್ನಿಗೆ ಸರಕಾರ ವನ್ನು ಕೆಡಹುವ ಶಕ್ತಿಯಿದೆ. ಇರಾನಿ ಸರಕಾರದ ವಿರುದ್ಧ ದಿನದಿಂದ ದಿನಕ್ಕೆ ಜನರಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ‘ನಮಗೆ ಮೌಲ್ವಿಗಳ ಆಡಳಿತ ಬೇಡ’ ಎನ್ನುವ ಕೂಗು ಹೆಚ್ಚಾಗು ತ್ತಿದೆ. ಜಾಗತಿಕ ರಾಜಕೀಯದಾಟದಲ್ಲಿ ಇರಾನಿನ ರಿಯಾಲ್ ಕಸವಾಗಿ ಮಾರ್ಪಾ ಟಾಗುತ್ತಿದೆ. ಈ ಆಟಗಳ ನಡುವೆ ನಿಜವಾಗಿ ಹಸಿವಿನಿಂದ ಸಾಯುವ ಒಂದು ಬಹುದೊಡ್ಡ ವರ್ಗಕ್ಕೆ ಮೌಲ್ವಿ ಅಥವಾ ಪ್ರಜಾಪ್ರಭುತ್ವ ಯಾವುದಾದರೇನು? ಬೇಕಿರುವುದು ಹೊಟ್ಟೆಗೆ ಅನ್ನ ಮಾತ್ರ.

ಅದು ಸಿಗುವವರೆಗೂ ಈ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಇದು ಇನ್ನೊಂದಷ್ಟು ದೊಡ್ಡ ರೂಪವನ್ನು ಪಡೆದುಕೊಳ್ಳುತ್ತದೆ. ಈ ರೀತಿಯ ಜಾಗತಿಕ ರಾಜಕೀಯಕ್ಕೆ ಮತ್ತು ಸ್ಥಳೀಯ ಸರಕಾರದ ಅಸಡ್ಡೆಗೆ ಕಾರಣ ವೆನಿಜುವೆಲಾ ಎನ್ನುವ ದೇಶ ಭೂಮಿಯ ಮೇಲಿನ ನರಕವಾಗಿ ಮಾರ್ಪಾಟಾಗಿದೆ. ಆ ದೇಶವು ಹಸಿವಿನ ಕಾರಣ ಸರಾಸರಿ ಹನ್ನೊಂದು ಕೆಜಿ ತೂಕವನ್ನು ಕಳೆದುಕೊಂಡಿದೆ.

ಹನ್ನೆರಡು, ಹದಿನಾಲ್ಕು ವರ್ಷದ ಮಕ್ಕಳು ಐದಾರು ವರ್ಷದ ಮಕ್ಕಳಂತೆ ಕಾಣುತ್ತಿದ್ದಾರೆ. ಇರಾನ್ ಒಂದೇ ಅಂತಲ್ಲ, ಜಗತ್ತಿನ ಎಲ್ಲಾ ದೇಶಗಳಲ್ಲೂ ಹಣದುಬ್ಬರ ಎನ್ನುವುದು ಅತಿ ದೊಡ್ಡ ಸಮಸ್ಯೆಯಾಗಿದೆ. ಯುರೋಪ್, ಇಂಗ್ಲೆಂಡಿನಲ್ಲಿ ಕೂಡ ಜನ ಹಣದುಬ್ಬರದಿಂದ ತತ್ತರಿಸಿ ಹೋಗಿದ್ದಾರೆ. ಈ ಹಣ ಎನ್ನುವುದನ್ನು ನಾವು ಸೃಷ್ಟಿಸಿಕೊಂಡಿರುವ ಕಾರಣ ಎಲ್ಲವೂ ಕಣ್ಣೆದುರೇ ಇದ್ದು ಕೂಡ ನಾವು ಅದನ್ನು ಖರೀದಿಮಾಡಲು ಆಗುವುದಿಲ್ಲ.

ಆಹಾರ ಬೇಕಾದಷ್ಟು ಇದ್ದು ಕೂಡ ಸಮಾಜದಲ್ಲಿ ಜನ ಹಸಿವಿನಿಂದ ಪ್ರಾಣಬಿಡುತ್ತಾರೆ. ಅವರ ಕೈಲಿರುವ ಹಣವು ಆಹಾರವನ್ನು ಖರೀದಿಸುವ ಶಕ್ತಿಯನ್ನು ಕಳೆದುಕೊಂಡು ಬಿಟ್ಟಿರುತ್ತದೆ ಎನ್ನುವುದು ನಾವೇ ಸೃಷ್ಟಿಸಿಕೊಂಡ ಈ ಸಮಾಜದ ಅತಿದೊಡ್ಡ ವಿಪರ್ಯಾಸ.

ಇರಾನಿನಲ್ಲಿ ಜನಸಾಮಾನ್ಯ ತನ್ನ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾನೆ. ಹೆಚ್ಚಿನ ಸವಲತ್ತು ಬೇಡಿಕೊಂಡು ತಿರುಗಿ ಬಿದ್ದಿಲ್ಲ, ಹಸಿವಿನ ವಿರುದ್ಧ, ಕಷ್ಟಪಟ್ಟು ಕೆಲಸ ಮಾಡಿ ಗಳಿಸಿದ ಹಣದಿಂದ ಬೇಸಿಕ್ ಬದುಕನ್ನೂ ಕಟ್ಟಿಕೊಳ್ಳಲಾಗದ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾನೆ.

ತನ್ನದಲ್ಲದ ತಪ್ಪಿಗೆ ಬೀಳುತ್ತಿರುವ ಪೆಟ್ಟಿನ ವಿರುದ್ಧ ನಿಂತಿದ್ದಾನೆ. ಇವಕ್ಕೆ ಉತ್ತರ ಸಿಕ್ಕುವ ವೇಳೆಗೆ ಸಾವಿರಾರು ಜನ ತಮ್ಮದಲ್ಲದ ತಪ್ಪಿಗೆ ಜೀವ ತೆತ್ತಿರುತ್ತಾರೆ ಎನ್ನುವುದು ಮಾತ್ರ ಅರಗಿಸಿಕೊಳ್ಳಲಾಗದ ಸತ್ಯ. ನಾವೇ ಕಟ್ಟಿಕೊಂಡಿರುವ ಹಣಕಾಸು ವ್ಯವಸ್ಥೆ ನಿಧಾನಕ್ಕೆ ಬಹಳಷ್ಟು ದೇಶಗಳ ಕೊರಳಿಗೆ ನೇಣುದಾರವಾಗಲಿದೆ.

ರಂಗಸ್ವಾಮಿ ಎಂ

View all posts by this author