ವಿಶ್ವರಂಗ
ನಮ್ಮ ಸಮಾಜದಲ್ಲಿ ಹಣದ ಬಗ್ಗೆ ಜನರಿಗಿರುವ ಭಾವನೆಗಳನ್ನು ಕಂಡಾಗ ನಗುವುದೋ ಅಳುವುದೋ ತಿಳಿಯುವುದಿಲ್ಲ. ಅದರಲ್ಲೂ ಸ್ವಲ್ಪ ಪ್ರಸಿದ್ಧರಾಗಿದ್ದು ಹಣವನ್ನು ಕಳೆದು ಕೊಂಡವರು ಅಥವಾ ಹಣ ಮಾಡಲಾಗದವರು ಅವರ ಮೂಗಿನ ನೇರಕ್ಕೆ ಹೇಳುವ ತತ್ತ್ವ-ಸಿದ್ಧಾಂತಗಳಿವೆಯಲ್ಲ ಅವುಗಳನ್ನು ಕೇಳಿದಾಗ ಇನ್ನಷ್ಟು ಇರಿಸುಮುರಿಸು ಉಂಟಾಗುತ್ತದೆ.
ಹಣದ ಕುರಿತು ಲೇವಡಿ ಮಾತಾಡುವವರು ಒಂದು ಕಡೆ, ಹಣದ ಬಗ್ಗೆ ಕೇವಲವಾಗಿ ಮಾತಾಡು ವವರು ಇನ್ನೊಂದು ಕಡೆ. ಒಟ್ಟಾರೆ ಹಣವನ್ನು ಗಳಿಸಲಾಗದ, ಉಳಿಸಿಕೊಳ್ಳಲಾಗದವರ ಪ್ರಲಾಪ ಗಳು ಒಂದೆರಡಲ್ಲ. ನೀವು ಹಣವಂತರನ್ನು, ಯಶಸ್ವಿ ವ್ಯಕ್ತಿಗಳನ್ನು, ಗೆದ್ದವರನ್ನು ನೋಡಿ ಅವರು ಹಣ ಎಂದಲ್ಲ, ಯಾವುದರ ಬಗ್ಗೆಯೂ ಕೇವಲವಾಗಿ ಮಾತಾಡುವುದಿಲ್ಲ.
ಎಲ್ಲದರ ಬಗ್ಗೆಯೂ ಮರ್ಯಾದೆ ಇರುತ್ತದೆ. ಹೀಗೆ ಹಣದ ಬಗ್ಗೆ ಕೀಳಾಗಿ ಅಥವಾ ‘ಅದೇನೂ ಅಲ್ಲ, ಅದಕ್ಕಿಂತ ಬದುಕು ಮುಖ್ಯ, ಇನ್ನೇನೋ ಮುಖ್ಯ’ ಎಂದು ಬಡಬಡಿಸುವವರು ಮೇಲ್ನೋಟಕ್ಕೆ ಹೀಗೆ ಹೇಳುತ್ತಿರುತ್ತಾರೆ. ಆದರೆ ಮನಸ್ಸಿನ ಆಳದಲ್ಲಿ ಅವರಿಗೆ ಹಣ ಬೇಕಿರುತ್ತದೆ. ಸಿಗದ ಕಾರಣ ಅವರು ತತ್ತ್ವಜ್ಞಾನಿಗಳಂತೆ ಮಾತನಾಡಲು ಶುರುಮಾಡಿರುತ್ತಾರೆ.
ಹಣ ಮುಖ್ಯವಲ್ಲ ಎನ್ನುವ ಅವರು ಸದಾಕಾಲ ಹಣಕ್ಕಾಗಿ ದುಡಿಯುತ್ತಿರುತ್ತಾರೆ. ಅವರು ಮಾಡುವ ಕೆಲಸಗಳೆಲ್ಲವೂ ಹಣದ ಗಳಿಕೆಗಾಗಿಯೇ ಆಗಿರುತ್ತದೆ. ಮೊನ್ನೆ ಹೀಗೇ ವಿಡಿಯೋ ತುಣುಕೊಂದು ಕಣ್ಣಿಗೆ ಬಿತ್ತು. ಅದರಲ್ಲಿ ಅತಿಥಿಯಾಗಿ ಬಂದ ವ್ಯಕ್ತಿ ಕೇಳುತ್ತಾರೆ- “ನಿಮಗೆ ಹಣ ಮುಖ್ಯವಾ, ಇಲ್ಲ ಮರ್ಯಾದೆ ಮುಖ್ಯವಾ? ನಿಮಗೆ ಹಣ ಮುಖ್ಯವಾ ಅಥವಾ ಸ್ನೇಹ ಮುಖ್ಯವಾ? ನಿಮಗೆ ಹಣ ಮುಖ್ಯವಾ, ಇಲ್ಲ ವಿಶ್ವಾಸ ಮುಖ್ಯವಾ? ನಿಮಗೆ ಹಣ ಮುಖ್ಯವಾ, ಇಲ್ಲ ಕಲೆ ಮುಖ್ಯವಾ? ಹಣವೋ ಇಲ್ಲ ಪ್ರೀತಿಯೋ?" ಸಮಾಜದ ಕಟ್ಟುಕಟ್ಟಳೆಗೆ ಹೆದರಿ ಎಲ್ಲದಕ್ಕೂ ಸಿಗುವ ಉತ್ತರ ನಿಮಗೆ ಗೊತ್ತೇ ಇರುತ್ತದೆ- ‘ಪ್ರೀತಿ, ಮರ್ಯಾದೆ, ಸ್ನೇಹ, ವಿಶ್ವಾಸ, ಕಲೆ ಮುಖ್ಯ’ ಎಂದೇ ಎಲ್ಲರೂ ಹೇಳುತ್ತಾರೆ.
ಇದನ್ನೂ ಓದಿ: Rangaswamy Mookanahalli Column: ಉತ್ತಮ ಬದುಕಿಗೆ ಬೇಕಿದೆ ಸಂಬಂಧಗಳ ಆಸರೆ !
ಅಸಲಿಗೆ ಇಂಥ ಪ್ರಶ್ನೆಯೇ ಅಪ್ರಸ್ತುತ. ಹಣವಿದ್ದವರು ಪ್ರೀತಿ, ವಿಶ್ವಾಸ, ಮರ್ಯಾದೆ, ಸ್ನೇಹ ಮತ್ತು ಕಲೆಯನ್ನು ಬೇಡ ಎಂದಿzರೆಯೇ? ಬದುಕಿಗೆ ಇವೆಲ್ಲವೂ ಮುಖ್ಯ ಎಂದ ತಕ್ಷಣ ಹಣ ಅದೇಕೆ ಅಮುಖ್ಯವಾಗಬೇಕು ಎನ್ನುವುದು ಇಂದಿಗೂ ನನಗೆ ಅರ್ಥವಾಗದ ವಿಷಯ. ಹಣವಂತರಲ್ಲಿ ಪ್ರೀತಿ, ವಿಶ್ವಾಸ, ಮರ್ಯಾದೆ, ಸ್ನೇಹ ಮತ್ತು ಕಲೆಗೆ ಬೆಲೆಯಿಲ್ಲ ಎಂದರ್ಥವೇ? ಯಾವಾಗ ವ್ಯಕ್ತಿ ಬಯಸಿದ್ದು ಪಡೆಯಲು ವಿಫಲನಾಗುತ್ತಾನೋ, ಆಗೆ ಇಂಥ ಬುಡುಬುಡಿಕೆ ಮಾತುಗಳು ಶುರು ವಾಗುತ್ತವೆ.
ಗೆದ್ದವರ ಬಾಯಲ್ಲಿ ಇಂಥ ಮಾತುಗಳು, ಅಸಂಬಂದ್ಧ ಹೋಲಿಕೆಗಳು ಉತ್ಪನ್ನವಾಗುವುದಿಲ್ಲ. ಸೋತವರು ಈ ರೀತಿಯ ಮಾತುಗಳನ್ನು ಆಡುತ್ತಿರುತ್ತಾರೆ. ಅವರಿಗೆ ಒಂದಂಶ ಗೊತ್ತಿಲ್ಲ- ನಾವು ಬಾಯಿಮಾತಿಗೆ ಆಡುವ ಮಾತುಗಳನ್ನು ನಮ್ಮ ಆತ್ಮ, ಮನಸ್ಸು ಸೀರಿಯಸ್ಸಾಗಿ ತೆಗೆದುಕೊಂಡು ಬಿಡುತ್ತವೆ.
ಅದಕ್ಕೇ ನಮ್ಮ ಹಿರಿಯರು ‘ಬಾಯಲ್ಲಿ ಆಡಿದ್ದು ಬೆನ್ನಿಗೆ ಮೂಲ’ ಎಂದಿದ್ದಾರೆ. ಬೂಟಾಟಿಕೆಗೆ ಆಡಿದ ಮಾತುಗಳು ನಿಜವಾಗುತ್ತವೆ. ಜೀವನಪೂರ್ತಿ ಯಾವ ಹಣದ ಬಗ್ಗೆ ಕೇವಲವಾಗಿ, ಅದೇನೂ ಅಲ್ಲ ಎನ್ನುವ ಮಾತನಾಡಿದ್ದರೋ ಅದೇ ಹಣಕ್ಕೆ ದುಡಿಯುವ ಪರಿಸ್ಥಿತಿಯಲ್ಲಿ ಕಳೆಯುವಂತಾಗುತ್ತದೆ. ಹೀಗಾಗಿ ಹಣ ಒಂದೇ ಅಂತಲ್ಲ, ಯಾವುದೇ ವಿಷಯದ ಬಗ್ಗೆ ಋಣಾತ್ಮಕ ಮಾತುಗಳನ್ನು ಆಡುವ ಮೊದಲು ಗಮನವಿರಲಿ.
ನಾವು ಆಡಿದ ಮಾತುಗಳನ್ನು, ತಪ್ಪುಗಳನ್ನು ಭಗವಂತ ಕೂಡ ಕ್ಷಮಿಸಿ ಬಿಡುತ್ತಾನೆ. ಏಕೆಂದರೆ ಆತ ಭಗವಂತ, ದಯಾಮಯಿ. ಆದರೆ ನಮ್ಮ ನರಮಂಡಲಗಳು ಮಾತ್ರ ಎಂದಿಗೂ ಕ್ಷಮಿಸುವುದಿಲ್ಲ. ನೀವಾಡಿದ ಪ್ರತಿ ಮಾತನ್ನೂ ಅವು ನೆನಪಿನಲ್ಲಿಟ್ಟು ಕೊಳ್ಳುತ್ತವೆ. ಅದನ್ನು ಆಜ್ಞೆ, ಆದೇಶ ಎನ್ನುವಂತೆ ಪಾಲಿಸುತ್ತವೆ, ಎಚ್ಚರ!
ಸೋಷಿಯಲ್ ಮೀಡಿಯಾ ತುಂಬೆ ಇಂಥ ಅನೇಕ ಪ್ರಭೃತಿಗಳನ್ನು ನಾವು ಕಾಣಬಹುದು. ಅಚ್ಚರಿಯ ವಿಷಯವೆಂದರೆ ತಾವು ಮಾಡುತ್ತಿರುವುದು ತಪ್ಪು ಎನ್ನುವ ಲವಲೇಶ eನ ಕೂಡ ಅವರಿಗಿಲ್ಲದೆ ಇರುವುದು. ಈ ಜಗತ್ತನ್ನು ನಿಜಕ್ಕೂ ನಡೆಸುತ್ತಿರುವುದು ಬಡವರು, ಈ ಜಗತ್ತನ್ನು ಬದಲಾಯಿಸುವ ಶಕ್ತಿಯಿರುವುದು ಬಡವರಿಗೆ ಎನ್ನುವವರಿಗೆ ತಿಳಿಹೇಳುವುದು ಹೇಗೆ? ಜಗತ್ತಿನಲ್ಲಿ ಒಟ್ಟು ನೂರು ರುಪಾಯಿ ಸಂಪತ್ತು ಇದೆ ಎಂದುಕೊಂಡರೆ ಅದರ 40 ರುಪಾಯಿ ಜಗತ್ತಿನ ಜನಸಂಖ್ಯೆಯ ೧ ಪ್ರತಿಶತ ಜನರ ಬಳಿಯಿದೆ.
ಹಾಗೆ ಜಗತ್ತಿನ ಪ್ರಥಮ ೧೦ ಪ್ರತಿಶತ ಜನರ ನಡುವೆ ೭೬ ಪ್ರತಿಶತ ಸಂಪತ್ತು ಸೇರಿಕೊಂಡಿದೆ. ಜಗತ್ತಿನ ೫೦ ಪ್ರತಿಶತ ಜನರ ಬಳಿ ಇರುವುದು ಜಾಗತಿಕ ಸಂಪತ್ತಿನ ೨ ಪ್ರತಿಶತ ಮಾತ್ರ ಎನ್ನುವ ಅಂಕಿ-ಅಂಶಗಳು ಇವರಿಗೆ ಗೊತ್ತಿರುವುದಿಲ್ಲ. ಈ ಮಾತುಗಳನ್ನು ಬದುಕಿನ ಆ ಬದಿಯನ್ನು ಸಹ ಕಂಡವ ನಾಗಿ ಬರೆಯುತ್ತಿದ್ದೇನೆಯೇ ವಿನಾ, ಅನ್ಯ ಕಾರಣಕ್ಕಾಗಿ ಅಲ್ಲವೇ ಅಲ್ಲ.
ಅದೇನೆಂದರೆ ಬಡತನದಲ್ಲಿ ಭಾವನೆ ಹೆಚ್ಚು, ಅಲ್ಲಿ ಲಾಜಿಕ್ ಕೆಲಸ ಮಾಡುವುದಿಲ್ಲ. ಹೀಗಾಗಿ ಭಾವನೆ ಹೆಚ್ಚು ಮಾತಾಡಿಸುತ್ತದೆ, ಮಾತಾಡುವ ಮುನ್ನ ಆಲೋಚಿಸುವುದನ್ನು ಮರೆಸುತ್ತದೆ. ಈ ಜಗತ್ತನ್ನು ನಡೆಸುತ್ತಿರುವವರು ಹಣವಂತರು. ಈ ಜಗತ್ತನ್ನು ತಮ್ಮಿಚ್ಛೆಗೆ ತಕ್ಕಂತೆ ಬದಲಿಸುವವರು ಕೂಡ ಹಣವಂತರೇ. ಇದು ಸತ್ಯ. ಆದರೆ ಬಡವನಿಗೆ ಜಗತ್ತನ್ನು ತಾನು ನಡೆಸುತ್ತಿದ್ದೇನೆ ಎನ್ನುವ ಭಾವನೆ ತುಂಬಿಕೊಂಡಿರುತ್ತದೆ.
ಬಡತನದ ಕಬಂಧ ಬಾಹುಗಳಿಂದ ಹೊರಬಂದಾಗ ಮಾತ್ರ ಈ ವಿಷಯದ ಅರಿವಾಗಲು ಸಾಧ್ಯ. ಭಾವನೆಯಿಂದ ಹೊರಬರದೆ ಇದ್ದರೆ ಲಾಜಿಕಲ್ ವಿಶ್ಲೇಷಣೆ, ಚಿಂತನೆ ಸಾಧ್ಯವಿಲ್ಲವಾಗುತ್ತದೆ. ಚೀನಾ ಮತ್ತು ಭಾರತದ ಬಗ್ಗೆ ಒಂದು ತಮಾಷೆ ಮಾತಿದೆ. ಚೀನಾದಲ್ಲಿ ‘ಎಲ್ಲಾ ಸಿನಿಮಾ ಹಾಲ್‌ಗಳಲ್ಲಿ ಇರುವುದು ಒಂದೇ ಸಿನಿಮಾ, ಎಲ್ಲರೂ ಅದನ್ನೇ ನೋಡಬೇಕು’ ಎನ್ನುವ ಆಜ್ಞೆಯನ್ನು ಮಾಡಲಾಗುತ್ತದೆ.
ಹೀಗಾಗಿ ಅಲ್ಲಿನ ಜನ ‘ನಮ್ಮ ಭಾವನೆಗೆ ಬೆಲೆಯಿಲ್ಲ, ಸರಕಾರ ಹೇಳಿದ್ದು ಮಾಡಬೇಕು’ ಎಂದು ಬೇಸರಗೊಳ್ಳುತ್ತಾರೆ. ಭಾರತದಲ್ಲಿ ‘ಯಾರು ಯಾವ ಸಿನಿಮಾ ಬೇಕಾದರೂ ನೋಡಿ’ ನ್ನಲಾಗುತ್ತದೆ. ಎಲ್ಲಾ ಥಿಯೇಟರ್‌ಗಳಲ್ಲಿ ಬೇರೆ ಬೇರೆ ಸಿನಿಮಾ ಇದೆ ಎಂದು ಹೇಳಲಾಗುತ್ತದೆ. ಜನ ಬಹಳ ಖುಷಿಯಿಂದ ತಮ್ಮಿಷ್ಟದ ಸಿನಿಮಾ ನೋಡಿದೆವು ಎಂದುಕೊಳ್ಳುತ್ತಾರೆ. ಅಸಲಿಗೆ ಇಲ್ಲಿ ಕೂಡ ಎಲ್ಲಾ ಥಿಯೇಟರ್‌ಗಳಲ್ಲಿ ಹಾಕಿದ್ದು ಒಂದೇ ಸಿನಿಮಾವೇ ಆಗಿರುತ್ತದೆ!
ಬಡವರಿಗೆ ಇರುವ ಭಾವನೆ ಈ ಲೆಕ್ಕಾಚಾರದ್ದು! ಅವರಿಗೆ ಸದಾ ತಮ್ಮಿಷ್ಟದ ಸಿನಿಮಾ ನೋಡಿದೆವು, ಕೆಲಸ ಮಾಡಿದೆವು ಎನ್ನಿಸುತ್ತದೆ. ಆದರೆ ಅಸಲಿಗೆ ಅವರು ಸಿರಿವಂತರು ಬಯಸಿದ್ದು ಮಾಡುತ್ತಿರು ತ್ತಾರೆ. ಕಾರನ್ನು ನಾವು ಕೊಂಡೆವು, ನಮ್ಮಿಚ್ಛೆಯ ಕಾರು ಎಂದುಕೊಳ್ಳುತ್ತಾರೆ. ನಿಜವಾಗಿ ನೋಡಿದರೆ ಆ ಕಾರನ್ನು ಕೊಳ್ಳುವಂತೆ ನಿಮ್ಮ ಮನಸ್ಸನ್ನು ನಂಬಿಸಿದ್ದು ಯಾರು? ಸ್ವಲ್ಪ ಬ್ಯಾಕ್‌ವರ್ಕ್ ಮಾಡಿದರೆ ಉತ್ತರ ಸಿಗುತ್ತದೆ. ಅದನ್ನು ನಾನು ಇಲ್ಲಿ ವಿವರಿಸುವ ಅಗತ್ಯವಿಲ್ಲ.
ಹಣ ಯಾರಿಗೆ ಬೇಡ ಹೇಳಿ? ಬುದ್ಧಿ ತಿಳಿಯುವುದಿಲ್ಲ ಎಂದು ನಾವು ಹೇಳುವ ಪುಟಾಣಿಗಳಿಂದ ಹಿಡಿದು, ಇಂದೋ, ನಾಳೆಯೋ ಕಾಲನ ಕರೆಗೆ ಓಗೊಡಬೇಕಾಗಿರುವ ಹಿರಿಯರವರೆಗೆ, ವಯಸ್ಸು, ಜಾತಿ, ಧರ್ಮ, ಭಾಷೆ, ದೇಶ, ಪ್ರದೇಶ ಹೀಗೆ ಎಲ್ಲವನ್ನೂ ಮೀರಿ ಎಲ್ಲರಿಗೂ ಹಣ ಬೇಕೇ ಬೇಕು. ಹಣವೆನ್ನುವುದು ವಿನಿಮಯ ಮಾಧ್ಯಮ. ನಮಗೇನು ಬೇಕು ಅದನ್ನ ಕೊಳ್ಳುವುದು ಹೇಗೆ? ಬದಲಿಗೆ ನಾವೇ ನಾದರೂ ಕೊಡಬೇಕಲ್ಲ? ಪ್ರತಿ ಬಾರಿಯೂ ನಾವು ಚಿನ್ನವನ್ನೂ ಮತ್ತಿನೇನ್ನನೋ ಒಯ್ಯಲು ಸಾಧ್ಯವಿಲ್ಲ.
ಹೀಗಾಗಿ ಹಣ ಎನ್ನುವುದನ್ನು ಸುಲಭವಾಗಿ ಕೈ ಬದಲಾಯಿಸಲು ಸಾಧ್ಯವಾಗುವ ಸಾಧನವಾಗಿ ಮನುಷ್ಯ ಸೃಷ್ಟಿ ಮಾಡಿಕೊಂಡ. ಅದು ಇಂದು ಅನಿವಾರ್ಯವಾಗಿದೆ. ಎರಡು ಅಥವಾ ಮೂರು ವರ್ಷದ ಮಕ್ಕಳ ಕೈಗೆ ಹಣ ನೀಡಿ ಪುನಃ ಅದನ್ನ ಮರಳಿ ಪಡೆಯಲು ಪ್ರಯತ್ನಿಸಿ ನೋಡಿ! ಹಣದ ಶಕ್ತಿ, ಮಹಿಮೆ, ಅದರ ಸೋಂಕಿನ ಗುಣ ಎಷ್ಟೆಂದು ನಿಮಗೆ ಅರಿವಾಗುತ್ತದೆ.
ಇನ್ನು ಹಿರಿಯರು ಇಲ್ಲಿನ ಆರ್ಥಿಕತೆಯ ಆಟದಲ್ಲಿ ನಿವೃತ್ತಿ ಹೊಂದಿದ್ದರೂ ಮನೆಯ ಸಾಸಿವೆ ಡಬ್ಬಿಯಲ್ಲಿ, ಪ್ಯಾಂಟಿನ ಸೀಕ್ರೆಟ್ ಜೇಬಿನಲ್ಲಿ ಒಂದಷ್ಟು ಹಣವನ್ನ ಅವಿಸಿಟ್ಟಿರುತ್ತಾರೆ. ಹಣದ ಮಹಿಮೆ ಅಂಥದ್ದು. ಒಟ್ಟಿನಲ್ಲಿ ಹಣ ಯಾವಾಗ, ಯಾರಿಗೆ, ಹೇಗೆ ಮತ್ತು ಏಕೆ ಬೇಕಾಗುತ್ತದೆ ಎಂದು ಹೇಳಲು ಬಾರದು.
ಹೀಗಾಗಿ ಹಣವನ್ನ ನಾವು ನಾಳೆಗೆ, ಕಾಣದ ಸನ್ನಿವೇಶಕ್ಕೆ ಎಂದು ತೆಗೆದಿರಿಸಲು, ಸಂಗ್ರಹಿಸಲು ಕೂಡ ಶುರುಮಾಡಿದೆವು. ಒಟ್ಟಿನಲ್ಲಿ ಹಣ ಎನ್ನುವುದು ಎಲ್ಲರಿಗೂ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿ ಪರಿವರ್ತನೆ ಆಗಿಹೋಯ್ತು. ನಾವು ಮಾಡುವ ಕೆಲಸವನ್ನ ಶ್ರದ್ಧೆಯಿಂದ, ಉತ್ಸಾಹ ದಿಂದ ಮಾಡುತ್ತಾ ಹೋಗಬೇಕು. ಮಾಡುವ ಕಾರ್ಯದಿಂದ ನನಗೆಷ್ಟು ಹಣ ಬಂದೀತು? ಎನ್ನುವ ಲೆಕ್ಕಾಚಾರಕ್ಕಿಂತ ಮಾಡುವ ಕೆಲಸ, ನೀಡುವ ಸೇವೆಯ ಮೇಲೆ ಅತೀವ ಗಮನವಿದ್ದಲ್ಲಿ ಹಣವೆನ್ನುವುದು ತಾನಾಗೇ ನಮ್ಮ ಹಿಂದೆ ಬಂದೇ ಬರುತ್ತದೆ.
ಇದು ಸತ್ಯ. ಇದಕ್ಕೆ ಕೂಡ ಹೆಚ್ಚಿನ ಶ್ರಮ ಬೇಕಿಲ್ಲ. ನಾವು ಮಾಡುವ ಕೆಲಸದ ಮೇಲೆ, ನಮ್ಮ ಮೇಲೆ ನಮಗೆ ಅತೀವವಾದ ನಂಬಿಕೆ ಬೇಕು. ಇದರರ್ಥ ಕೂಡ ಸರಳ, ನಾವು ಮಾಡುವ ಕೆಲಸ ಅಥವಾ ನೀಡುವ ಸೇವೆ ಮೇನ್ ಪ್ರಾಡಕ್ಟ್ ಆಗಿರಬೇಕು. ಹಣವನ್ನು ಬೈ-ಪ್ರಾಡಕ್ಟ್ ಆಗಿಸಿಕೊಳ್ಳಬೇಕು. ಹಣ ಮಾಡುವುದನ್ನು ನಮ್ಮ ಮೂಲ ಉದ್ದೇಶವಾಗಿಸಿಕೊಂಡರೆ ಅದರಲ್ಲಿ ನಾವು ಸೋಲುವ ಸಂಭಾವ್ಯತೆ ಇದ್ದೇ ಇರುತ್ತದೆ.
ನಮ್ಮ ಕೆಲಸ ಅಥವಾ ಸೇವೆಯನ್ನ ಮುಖ್ಯವಾಗಿಸಿಕೊಂಡಲ್ಲಿ ಸೋಲಿನ ಭಯ ಇಲ್ಲವಾಗುತ್ತದೆ. ನೀವೇ ಯೋಚಿಸಿ ನೋಡಿ, ನಮ್ಮ ಕೈಲಿ ಏನಿದೆ ಅದರ ಮೇಲೆ ಮಾತ್ರವೇ ನಮ್ಮ ನಿಯಂತ್ರಣ ವಿರುತ್ತದೆ. ಉಳಿದವುಗಳ ಮೇಲೆ ನಮ್ಮ ನಿಯಂತ್ರಣವಿಲ್ಲ. ಹಣ ಮಾಡುವುದು, ಜನಮನ್ನಣೆ ಗಳಿಸುವುದು, ಜಗತ್ವಿಖ್ಯಾತಿ ಪಡೆಯುವುದು ಹೀಗೆ ಪಟ್ಟಿ ಬೆಳೆಸಬಹುದು.
ಇದ್ಯಾವುದೂ ನಮ್ಮ ಕೈಲಿಲ್ಲ. ಹಾಗಾದರೆ ನಮ್ಮ ಕೈಲಿರುವುದು ಏನು? ನಾವು ಕಲಿತ ವಿದ್ಯೆ, ನಾವು ಮಾಡುವ ಕೆಲಸ, ನೀಡುವ ಸೇವೆ, ಇವಿಷ್ಟರ ಮೇಲೆ ಮಾತ್ರ ನಮ್ಮ ನಿಯಂತ್ರಣವಿದೆ. ಹೀಗಾಗಿ ನಮ್ಮ ಕೈಲಿರುವುದನ್ನ ನಾವು ಸರಿಯಾಗಿ ಮಾಡುತ್ತಾ ಹೋದರೆ, ಸಮಾಜ, ಜಗತ್ತು ನಮ್ಮ ಕೆಲಸವನ್ನ, ಸೇವೆಯನ್ನ ಮೆಚ್ಚುತ್ತಾ ಹೋಗುತ್ತದೆ. ಹಣ ತಾನಾಗೇ ಹಿಂದೆ ಬರುತ್ತದೆ. ಹಣಕ್ಕೆ ಬೇರೆ ದಾರಿಯಿಲ್ಲ, ಯಾರೆ ತಮ್ಮ ಕರ್ತವ್ಯಗಳನ್ನ ಸರಿಯಾಗಿ ಮಾಡುತ್ತಾರೆ ಅದು ಅವರ ಹಿಂದೆ ಹೋಗದೆ ಬೇರೆ ದಾರಿಯಿಲ್ಲ.
ನಿಮ್ಮಲ್ಲೀಗ ಇನ್ನೊಂದು ಪ್ರಶ್ನೆ ಉದ್ಭವಾಗಿರುತ್ತದೆ! ‘ಸುತ್ತಮುತ್ತ ಕಷ್ಟಪಟ್ಟು ದುಡಿಯುತ್ತಿರುವ ಅನೇಕರನ್ನ ನೋಡಿ, ಅವರು ಕೂಡ ತಮ್ಮ ಕೆಲಸವನ್ನ ಮಾಡುತ್ತಿದ್ದಾರೆ, ಆದರೂ ಅವರ ಹಿಂದೆ ಏಕೆ ಹಣ ಹೋಗುತ್ತಿಲ್ಲ?’ ಅಂತ. ನೀವು ಅವರನ್ನ ಗಮನಿಸಿ ನೋಡಿ, ಹಣದ ಬಗ್ಗೆ ಅವರಲ್ಲಿ ಉಡಾಫೆ ಮನೋಭಾವವಿರುತ್ತದೆ,
ಅವರು ಹತ್ತಾರು ವ್ಯಸನಗಳ ದಾಸರಾಗಿರುತ್ತರೆ. ಹೀಗಾಗಿ ಅವರು ತಮ್ಮ ಸ್ಥಿತಿಯಿಂದ ಮೇಲೇರ ಲಾಗುವುದಿಲ್ಲ. ಹಾಗೆಯೇ ಬರೀ ಕೈಯಲ್ಲಿ ಬಂದ ಅಸಂಖ್ಯರು ಇಂದು ಸ್ಥಿತಿವಂತ ರಾಗಿದ್ದಾರೆ. ಪ್ರಯತ್ನದಿಂದ ಪರಮಾತ್ಮನನ್ನೂ ಪಡೆಯಬಹುದು, ಇನ್ನು ಹಣ ಗಳಿಸುವುದು ಅದ್ಯಾವ ದೊಡ್ಡ ಲೆಕ್ಕ? ಹಣಗಳಿಸುವುದು ಬಹಳ ಮುಖ್ಯ, ಏಕೆಂದರೆ ನಾವೆಷ್ಟೇ ಒಳ್ಳೆಯವರಾಗಿದ್ದರೂ, ಎಷ್ಟೇ ಒಳ್ಳೆಯ ಕಾರ್ಯವನ್ನ ಮಾಡಲು ಬಯಸಿದರೂ ಹಣದ ಸಹಾಯವಿಲ್ಲದೆ, ಬೆಂಬಲವಿಲ್ಲದೆ ಅದನ್ನ ನಾವು ಸಾಧಿಸಲಾರೆವು. ಈ ಸತ್ಯವನ್ನು ಅರಿತುಕೊಂಡು ಹಣವೊಂದೇ ಅಲ್ಲದೆ ಬೇರೆ ಯಾವುದರ ಬಗ್ಗೆಯೂ ಋಣಾತ್ಮಕ ಮಾತುಗಳನ್ನು ಆಡದೆ ನಮ್ಮ ವೇಗದಲ್ಲಿ ನಮ್ಮ ದಾರಿಯಲ್ಲಿ ಸಾಗುವುದು ಮಾತ್ರ ಸಾಧನೆಯ ಅತ್ಯುತ್ತಮ ಮಾರ್ಗ.