ಚಕ್ರವ್ಯೂಹ
ಮಿರ್ಲೆ ಚಂದ್ರಶೇಖರ
ಮೈತ್ರಿಕೂಟವನ್ನು ನಿಭಾಯಿಸುವಲ್ಲಿ ರಾಜಕೀಯ ಹಾಗೂ ಆಡಳಿತದಲ್ಲಿ ಅಪಾರ ಅನುಭವವುಳ್ಳ ದಿಗ್ಗಜರಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ನವರಂತಹವರೇ ಸೋತಿದ್ದಾರೆ ಎನ್ನುವುದಕ್ಕಿಂತ ತಿಣುಕಾಡಿದ್ದಾರೆ. ಇನ್ನು ರಾಜಕೀಯ ಅನುಭವ ಇಲ್ಲದ ನಟ ಹೀರೋ ವಿಜಯ್ ಕುತಂತ್ರಿಗಳಿಗೆ ಯಾವ ಲೆಕ್ಕ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಡಿಎಂಕೆ ಮತ್ತು ಎಐಡಿಂಕೆ ಪಕ್ಷಗಳು ಹಿಂದೆ ನಡೆದುಕೊಂಡ ರೀತಿ ರಿವಾಜುಗಳನ್ನು ಬಲ್ಲವರೆಲ್ಲರೂ ಇದನ್ನು ಒಪ್ಪುತ್ತಾರೆ.
ಸ್ವಾಮಿ ವಿವೇಕಾನಂದರು 1895ರಲ್ಲಿ ರಾಜಕೀಯದ ಬಗ್ಗೆ ಹೇಳಿರುವ ಮಾತು ನೆನಸಿ ಕೊಳ್ಳುವ ಸಮಯದಲ್ಲಿ ಇದ್ದೇವೆ, ನಾನು ಹೇಡಿಗಳೊಂದಿಗಾಗಲಿ ಅಥವಾ ರಾಜಕೀಯ ಅಸಂಬದ್ಧತೆಗಳೊಂದಿಗಾಗಲಿ ಸಂಬಂಧ ಹೊಂದಿಲ್ಲ, ನಾನು ಯಾವುದೇ ರಾಜಕೀಯ ವನ್ನು ನಂಬುವುದಿಲ್ಲ, ದೇವರು ಮತ್ತು ಸತ್ಯ ಮಾತ್ರ ಜಗತ್ತಿನ ರಾಜಕೀಯ, ಉಳಿದೆಲ್ಲವೂ ಕಸ. ಮತ್ತೇಮತ್ತೆ ಓದಿದಾಗಲೇ ಒಂದು ಲೆವೆಲ್‌ಗೆ ಅರ್ಥವಾಗಲಿಕ್ಕೆ ಸಾಧ್ಯ. ರಾಜಕೀಯದಲ್ಲಿ ಚುನಾವಣೆಗಳ ಸೋಲು-ಗೆಲವಿನಲ್ಲಿ ಒಮ್ಮೆ ಹೇಡಿ ಒಬ್ಬ ರಣಹೇಡಿ ಆಗುತ್ತಾನೆ, ಮತ್ತೊಮ್ಮೆ ರಣಶೂರನಾಗುತ್ತಾನೆ.
ಗೆದ್ದು ಶೂರನಾದವನು ಅಧಿಕಾರದ ಗದ್ದುಗೆ ಹಿಡಿಯುವಷ್ಟರಲ್ಲಿ ಏನೆಲ್ಲಾ ಕಸರತ್ತು ಮಾಡಬೇಕೆನ್ನುವುದು ತಮಿಳುನಾಡಿನ ರಾಜಕೀಯವನ್ನು ನೋಡಿದರೆ ಗೊತ್ತಾಗುವುದು. ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಅವಸ್ಥೆಯು ಜಯಭೇರಿ ಬಾರಿಸಿಯೂ ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಸಂಖ್ಯಾಬಲದ ಕೊರತೆಯಿಂದ ಪರಿತಪಿಸುತ್ತಿದೆ.
ಪ್ರಮಾಣವಚನ ನಾಳೆ ನಾಳೆ ಎನ್ನುತ್ತಲೇ ಇದ್ದಾರೆ ಕೊರತೆಯನ್ನು ತುಂಬಿಸಿಕೊಳ್ಳಲು ನಟ ವಿಜಯ್ ರವರು ಹೆಣಗಾಡುತ್ತಿದ್ದಾರೆ. ಹೀರೋಯಿಸಂ ಬದಿಗಿಟ್ಟು ತಂತ್ರಗಾರಿಕೆಯನ್ನು ಪ್ರಯೋಗಿಸಿದ್ದಿದ್ದರೆ ಬಹುಶಃ ಇಷ್ಟೊತ್ತಿಗೆ ಯಶಸ್ವೀ ಆಗುತ್ತಿದ್ದರು.
ರಾಜಕೀಯದ ಹೀರೋಗೂ ಸಿನಿಮಾದ ಹೀರೋಗೂ ವ್ಯತ್ಯಾಸವಿದೆ, ಸಿನಿಮಾದಲ್ಲಿ ಅಭಿ ನಯ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ಬೇರೆಯವರು ಕಟ್ಟಿಕೊಡುತ್ತಾರೆ. ರಾಜಕೀಯ ದಲ್ಲಿ ಅಭಿನಯದ ಜತೆಗೆ ಸಂಭಾಷಣೆ, ಸಾಹಿತ್ಯ, ನಿರ್ದೇಶನ, ಸಂಗೀತ, ನಿರ್ಮಾಣ ಎಲ್ಲವೂ ಒಬ್ಬರದ್ದೇ, ಸಮಯಾಸಂದರ್ಭಕ್ಕೆ ಬೇರೆಯವರು ಲಾಭಾಂಶ ಇದ್ದರೆ ಮಾತ್ರ ಸಹಕರಿಸು ತ್ತಾರೆ ಮತ್ತು ಬೆನ್ನಿಗೆ ನಿಲ್ಲುತ್ತಾರೆ.
ಇದನ್ನೂ ಓದಿ: Mirley Chandrashekher Column: ಮಂಗಳಮುಖಿಯರ ಬದುಕು ಹಸನಾಗುವುದೆಂತು ?
ಕಿಚಡಿ ಪಕ್ಷಗಳನ್ನು ನಂಬಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಮೊದಲ ಪ್ರಯತ್ನದಲ್ಲೇ 107 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷವು ಅಧಿಕಾರ ನಡೆಸುವುದು ಸುಲಭವಲ್ಲ. ಪ್ರಮಾಣ ವಚನ ಸ್ವೀಕರಿಸಲು ಸಂಖ್ಯಾಬಲ 118 ಬೇಕಿರುವುದರಿಂದ ಒಂದಂಕ್ಕಿ ಸ್ಥಾನವನ್ನು ಗಳಿಸಿರುವ ಸಣ್ಣಪುಟ್ಟ ಪಕ್ಷಗಳ ಸಹಾಯ ವನ್ನು ಬೇಡುತ್ತಿದೆ. ಆಂತರಿಕವಾಗಿ ಏನು ನಡೆಯುತ್ತಿದೆ ಎಂಬುದು ಪ್ರಶ್ನೆಯಾಗಿದೆ.
ಕೊರತೆ ಇರುವ 11 ಶಾಸಕರಿಗಾಗಿ ಟಿವಿಕೆ ಪಕ್ಷವು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಇಲ್ಲಿಯ ವರೆಗೂ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವೆ ಹಂಚಿ ಹೋಗಿದ್ದ ಆಡಳಿತ, ಟಿವಿಕೆ ಮೂಲಕ ಹೊಸ ದಿಕ್ಕನ್ನು ಕಾಣುತ್ತಿದೆ. ದೀರ್ಘಕಾಲ ತಿಂದುಂಡವರು ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಆಗುವುದೇ. ಇವರಿಬ್ಬರ ಒಳ ಏಟಿನಿಂದ ವಿಜಯ್‌ರವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ವಿಳಂಬವಾಗುತ್ತಿದೆ.
ಅಂದುಕೊಂಡಂತೆ ಕಿಚಡಿ ಪಕ್ಷಗಳನ್ನು ಸೇರಿಸಿಕೊಂಡು ಟಿವಿಕೆ ಅಧಿಕಾರಕ್ಕೆ ಬಂದರೆ ರುಚಿಕಂಡ ಬೆಕ್ಕುಗಳು ಸುಮ್ಮನಿರುತ್ತವೆಯೇ? ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆದರೂ ಟಿವಿಕೆ ಇರುವವರೆಗೂ ಉರಿಯುವ ಬೆಂಕಿಯಲ್ಲೇ ಆಡಳಿತ ನಡೆಸಬೇಕಾಗುತ್ತದೆ. ಏಕೆಂದರೆ ಅನುಭವ ಇರುವ ಹಾಗೂ ಅಧಿಕಾರ ಅನುಭವಿಸಿರುವ ಎರಡೂ ಪಕ್ಷಗಳು ಸರಕಾರವನ್ನು ಬೀಳಿಸುವುದಕ್ಕೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತವೆ.
ತಮಿಳರು ಟಿವಿಕೆ ಪಕ್ಷಕ್ಕೆ 107 ಕೊಟ್ಟವರು 118 ಕೊಡುವುದಕ್ಕೆ ಮನಸ್ಸು ಮಾಡಿದ್ದಿದ್ದರೆ ಮುಂದಿನ ಐದು ವರ್ಷಗಳು ತಮಿಳುನಾಡು ರಾಜ್ಯವು ನಿರುಮ್ಮಳವಾಗಿ ಉಸಿರಾಡುತ್ತಿತ್ತು. ಎರಡು ಕಾಲುಗಳ ಪಕ್ಕ ಕೆಳಗೆ ಕುಳಿತಿರುವ ಪಕ್ಷಗಳು ಯಾವ ಕ್ಷಣದಲ್ಲಿಯಾದರೂ ಕೆಳಗೆ ಬೀಳುವಂತೆ ಕಾಲುಗಳನ್ನು ಎಳೆಯಬಹುದು.
ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿ ಜನತಾದಳ ಪಕ್ಷದಿಂದ ಎಚ್.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿ 2018-19ರಲ್ಲಿ ಆಡಳಿತಕ್ಕೆ ಬಂದ ಅಲ್ಪ ಅವಧಿಯಲ್ಲಿ ಸರಕಾರವು ಬಿದ್ದುಹೋಯಿತು. ಇಲ್ಲಿ ಮಾರ್ಗದರ್ಶನಕ್ಕೆ ಸುತ್ತಲೂ ಅನುಭವಿಗಳು ಇದ್ದಾಗ್ಯೂ ಆಡಳಿತ ನಡೆಸಲಾಗಲಿಲ್ಲ ಅಷ್ಟೊಂದು ತೀವ್ರತೆಯು ಚಾಣಕ್ಯನಂತವರು ಕೊಟ್ಟ ಒಳ ಏಟಿನಲ್ಲಿ ಇತ್ತು, ರಾಜಕೀಯದಲ್ಲಿ ಯಾವಾಗಲೂ ಕುತಂತ್ರಗಳೇ ಗೆಲ್ಲುವುದು. ತಮಿಳುನಾಡಿನ ನಟ ವಿಜಯ್ ಪರಿಸ್ಥಿತಿ ಮುಂದೆ ಹೇಗಾಗಬಹುದು, ಅಯ್ಯೋ ರಾಜಕೀಯವೇ ಬೇಡ ಎನ್ನುವ ತೀರ್ಮಾನಕ್ಕೂ ಬರಬಹುದು, ಇವರಿಗೆ ಕ್ಷೇತ್ರ ಹೊಸದು, ಹಳಬರ ಜತೆ ಹೆಣಗಾಡುವುದು ಕಷ್ಟ, ಗೆದ್ದದ್ದು ಎರಡು ಸ್ಥಾನವಾದರೂ ಒಂದು ಉಪ ಮುಖ್ಯಮಂತ್ರಿ ಮತ್ತೊಂದು ಮಂತ್ರಿ ಸ್ಥಾನ ಕೊಡಿ ಎಂದು ಜನಬೆಂಬಲ ಇಲ್ಲದೆ ಅರ್ಹತೆ ಯನ್ನು ಕಳೆದುಕೊಂಡಿರುವ ಸಣ್ಣ ಪಕ್ಷವೊಂದು ಈಗಲೇ ಕೇಳುತ್ತಿರುವಾಗ ಇಂಥಹವರ ಜತೆ ಸುಭದ್ರ ಸರಕಾರ ನಡೆಸಲು ಸಾಧ್ಯವಿದೆಯೇ? ಸರಕಾರದಲ್ಲಿ ಸುತ್ತಲೂ ಪದೇಪದೆ ಕಿರುಕುಳ ಕೊಡುವ ಪಕ್ಷಗಳನ್ನು ಬೆಂಬಲಿಗರಾಗಿ ಇಟ್ಟುಕೊಂಡು ಸ್ವಚ್ಛ ಹಾಗೂ ಸುಭದ್ರ ವಾದ ಸರಕಾರವನ್ನು ತಮಿಳುನಾಡಿನ ಪ್ರಜೆಗಳು ಕಾಣಲಿಕ್ಕೆ ಆಗುತ್ತದೆಯೇ? ಟಿವಿಕೆ ಪಕ್ಷವು ಉತ್ಸಾಹದಲ್ಲಿ ಗೆಲ್ಲುವುದಕ್ಕಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಸವಲತ್ತುಗಳನ್ನು ಹೀಡೇರಿಸುತ್ತಾರೆ ಎಂದು ನಂಬುವ ಬದಲು ಟಿವಿಕೆ ಗುರುತು ವಿಶಲ್ ಹಿಡಿದು ಸೀಟಿ ಹೊಡೆಯುತ್ತಾ ತಮ್ಮ ಪಾಡಿನ ಕೆಲಸ ಮಾಡಿಕೊಂಡು ಇರುವುದು ಒಳಿತು.
ಅತಂತ್ರ ವಿಧಾನಸಭೆ ಎಂದಿಗೂ ಶಾಶ್ವತವಲ್ಲ, ಆಯಸ್ಸು ಕಡಿಮೆ ಎಂದು ಸಾಯುವುದೋ ಅದು ಕೂಡ ತಿಳಿಯದು. ನಿತ್ಯವೂ ಸತ್ತೇ ಬದುಕುವ ಪರಿಸ್ಥಿತಿ ಅತಂತ್ರ ವಿಧಾನಸಭೆಯಲ್ಲಿ. ನಮ್ಮ ಕರ್ನಾಟಕ ಇದರಲ್ಲಿ ತಮಿಳುನಾಡಿಗಿಂತ ಸೀನಿಯರ್.
ದ್ರಾವಿಡ ರಾಜಕಾರಣಕ್ಕೆ ಪರ್ಯಾಯವಾಗಿ ಯುವ ಮತದಾರರು ಬದಲಾವಣೆ ಬಯಸಿ ಜೋಸೆಫ್ ವಿಜಯ್ ರವರನ್ನು ಗೆಲ್ಲಿಸಿದ್ದಾರೆ. ಚಿತ್ರರಂಗದ ವರ್ಚಸ್ಸು ಮತ್ತು ಅವರು ಇಟ್ಟುಕೊಂಡಿದ್ದ ತಳಮಟ್ಟದ ಜನಸಂಪರ್ಕ ಮತಗಳಾದವು, ಈ ಟ್ರೆಂಡ್ ನಿರಂತರವಾಗಿ ಇರುತ್ತದೆ ಎನ್ನಲಾಗದು.
ಸಿನಿಮಾದಲ್ಲಿ ಯಶಸ್ಸು ಗಳಿಸಿದಂತೆ ಇಲ್ಲೂ ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ ಯಶಸ್ಸು ಸಿಗಲಿ, ಅತಂತ್ರ ಸ್ಥಿತಿಯ ರಾಜಕೀಯದಲ್ಲಿ ಮೈಯೆಲ್ಲಾ ಕಣ್ಣಾಗಿದ್ದರೆ ಮಾತ್ರ ಸಾಧ್ಯ. ಮೈತ್ರಿಕೂಟವನ್ನು ನಿಭಾಯಿಸುವಲ್ಲಿ ರಾಜಕೀಯ ಹಾಗೂ ಆಡಳಿತದಲ್ಲಿ ಅಪಾರ ಅನುಭವವುಳ್ಳ ದಿಗ್ಗಜರಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ನವರಂತಹವರೇ ಸೋತಿದ್ದಾರೆ ಎನ್ನುವುದಕ್ಕಿಂತ ತಿಣುಕಾಡಿದ್ದಾರೆ ಎನ್ನಬಹುದು.
ಇನ್ನು ರಾಜಕೀಯ ಅನುಭವ ಇಲ್ಲದ ನಟ ಹೀರೋ ವಿಜಯ್ ಕುತಂತ್ರಿಗಳಿಗೆ ಯಾವ ಲೆಕ್ಕ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಡಿಎಂಕೆ ಮತ್ತು ಎಐಡಿಂಕೆ ಪಕ್ಷಗಳು ಹಿಂದೆ ನಡೆದು ಕೊಂಡ ರೀತಿ ರಿವಾಜುಗಳನ್ನು ಬಲ್ಲವರೆಲ್ಲರೂ ಇದನ್ನು ಒಪ್ಪುತ್ತಾರೆ. ರಾಜಕೀಯಕ್ಕೆ ಬೇಕಿರುವುದು ತಂತ್ರಕುತಂತ್ರಗಳೇ ಹೊರತು ಹೀರೋಯಿಸಂ ಅಲ್ಲ! ನಮ್ಮ ಇತಿಹಾಸ ಇದನ್ನು ಸ್ಪಷ್ಟವಾಗಿ ತಿಳಿಸಿದೆ. ಮತ್ತೊಮ್ಮೆ ವಿವೇಕಾನಂದರ ಮಾತುಗಳು; ದೇವರು ಮತ್ತು ಸತ್ಯ ಮಾತ್ರ ಜಗತ್ತಿನ ರಾಜಕೀಯ, ಉಳಿದೆಲ್ಲವೂ ಕಸ!