Mirley Chandrashekher Column: ಮಂಗಳಮುಖಿಯರ ಬದುಕು ಹಸನಾಗುವುದೆಂತು ?
ಮಂಗಳಮುಖಿಯರು ಹಣ ಗಳಿಕೆಗೆ ಇತ್ತೀಚಿಗೆ ಕಂಡುಕೊಂಡಿರುವ ವಸೂಲಿ ಅಥವಾ ದಂಧೆ ಎನ್ನಲು ಬಹುದು. ಇದೊಂದು ರೀತಿಯ ಹೆಚ್ಚು ಲಾಭ ತರುವ ವೃತ್ತಿಯಾಗಿದೆ, ಇದಕ್ಕೆ ಬಂಡವಾಳ ಹೂಡಿಕೆಯ ಅಗತ್ಯವಿಲ್ಲ. ರಾಜ್ಯದಲ್ಲಿ 10500 ಸಂಖ್ಯೆಗಿಂತ ಹೆಚ್ಚು ತೃತೀಯ ಲಿಂಗಿಗಳು ಇದ್ದಾರೆ. ಮೈಸೂರು ಜಿಲ್ಲೆ ಯಲ್ಲಿ ಸುಮಾರು 400 ರಿಂದ 450 ಸಂಖ್ಯೆ ಮಂಗಳಮುಖಿಯರು ಇದ್ದಾರೆ. ಸರಕಾರವು ಇವರಿಗೆ ಹಲವು ಸೌಲಭ್ಯಗಳನ್ನು ನೀಡಿದ್ದರೂ ನಗರದ ಪಾರ್ಕುಗಳಲ್ಲಿ, ರೈಲು ಗಾಡಿ ಯಲ್ಲಿ, ಸಿಗ್ನಲ್ ವೃತ್ತಗಳಲ್ಲಿ, ಮದುವೆ ಮನೆಗಳಲ್ಲಿ, ಗೃಹಪ್ರವೇಶ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ ಸಾರ್ವಜನಿಕರನ್ನು ಹಣಕ್ಕಾಗಿ ಸತಾಯಿಸುತ್ತಾರೆ.
-
ಸಾಮಾಜಿಕ ಕಳಕಳಿ
ಮಿರ್ಲೆ ಚಂದ್ರಶೇಖರ
ದೈಹಿಕವಾಗಿ ಬಲಿಷ್ಠರಾಗಿದ್ದರೂ ಸಾಮಾಜಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸು ತ್ತಿದ್ದಾರೆ. ಕುಟುಂಬ ಮತ್ತು ಸಮಾಜ ನಿಕೃಷ್ಟವಾಗಿ ಕಾಣುತ್ತದೆ, ಇವರಿಗೆ ಎಲ್ಲ ಅರ್ಹತೆ ಇದ್ದರೂ ನೌಕರಿ ಕೊಡಲು ಸಂಸ್ಥೆಗಳು ಒಪ್ಪುವುದಿಲ್ಲ, ಇದರಿಂದಾಗಿ ಭಿಕ್ಷಾಟನೆ ಇಲ್ಲವೇ ಲೈಂಗಿಕ ವೃತ್ತಿ ನಡೆಸಿಯೇ ಹೊಟ್ಟೆ ಹೊರೆಯಬೇಕಾಗಿದೆ.
ಸಂಬಂಧಿಕರ ವಾಣಿಜ್ಯ ಕಟ್ಟಡದ ಗೃಹಪ್ರವೇಶ ಕಾರ್ಯಕ್ರಮಕ್ಕೆ ರಾತ್ರಿ ನಡೆಯುವ ಹೋಮ ಪೂಜೆಗೆ ಹೋಗಿದ್ದೆ. ಅದು ಐದು ಹಂತಸ್ತಿನ ದೊಡ್ಡಕಟ್ಟಡ. ಪೂಜೆ ಹಾಗೂ ಮಂತ್ರ ಪಠಿಸುವುದಕ್ಕೆ ಪುರೋಹಿತರ ಗುಂಪೇ ಆಗಮಿಸಿತ್ತು, ಸಮಯಕ್ಕೆ ಸರಿಯಾಗಿ ಸಂಜೆ ಪೂಜೆ ಪ್ರಾರಂಭವಾಯಿತು. ಬಲು ಅಚ್ಚುಕಟ್ಟಾಗಿ ಸಾಂಗೋಪಾಂಗವಾಗಿ ನಡೆಯುತ್ತಿತ್ತು.
ಐದು ನಿಮಿಷವೂ ಆಗಿರಲಿಲ್ಲ ನಾಲ್ಕು ಮಂದಿ ಮಂಗಳಮುಖಿಯರು ಪೂಜೆಗೆ ಕುಳಿತಿದ್ದ ಕಟ್ಟಡದ ಮಾಲೀಕನನ್ನು ಅವರದೇ ಶೈಲಿಯ ಚಪ್ಪಾಳೆ ತಟ್ಟುತ್ತಾ ನಿಮಗೆ ಆಶೀರ್ವಾದ ಮಾಡುತ್ತೇವೆ ದುಡ್ಡು ಕೊಡಿ ಮಾಮ ಎಂದು ಹಣ ಕೇಳುತ್ತಿದ್ದರು. ಕಾಲಾವಕಾಶವನ್ನು ಕೊಡದೆ ಹಣ ಕೊಡುವಂತೆ ಪೀಡಿಸತೊಡಗಿದರು.
ಪೂಜೆಗೆ ಕುಳಿತವರಿಗೆ ಇರಿಸುಮುರಿಸು ಆಗುತ್ತಿತ್ತು, ನೆಮ್ಮದಿಯಿಂದ ಏಕಾಗ್ರತೆಯಲ್ಲಿ ಪೂಜೆ ಮಾಡದಂತಾಗಿತ್ತು. ದಬಾಯಿಸಿ ಬಯ್ಯುವಂತಿಲ್ಲ, ಶಾಪ ಹಾಕಿಬಿಟ್ಟರೆ. ಇವರ ಕಿರಿಕಿರಿ ತಾಳ ಲಾರದೆ, ಪೂಜೆ ನಿಲ್ಲಿಸಿ ಎದ್ದು ಎರಡು ಸಾವಿರ ರುಪಾಯಿಗಳನ್ನು ಕೊಡುತ್ತಾರೆ, ಅಷ್ಟಕ್ಕೆ ಅವರು ತೃಪ್ತಿ ಪಡಲಿಲ್ಲ, ಇನ್ನೂ ಕೊಡಬೇಕೆಂದು ಹಠ ಮಾಡುತ್ತಿದ್ದರು, ಮತ್ತೊಂದು ಸಾವಿರ ಕೊಟ್ಟರೂ ಒಪ್ಪುತ್ತಿಲ್ಲ, ಕೋಟಿ ಖರ್ಚು ಮಾಡಿ ಕಟ್ಟಿಸಿದ್ದೀರಿ ನಮಗೆ ಖುಷಿ ಆಗುವಷ್ಟು ಹಣ ಕೊಡಲು ನಿಮಗೇನು ಕಷ್ಟ, ಕೊಡದಿದ್ದರೆ ಶಾಪ ಹಾಕುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
ಸಹಿಸಿಕೊಳ್ಳಲಾಗದೆ ಮತ್ತಷ್ಟು ಹಣ ಕೊಟ್ಟರು, ಅದಕ್ಕೂ ತೃಪ್ತಿ ಇಲ್ಲ, ಸುಮಾರು ಐದು ಸಾವಿರ ಆಗಿರಬಹುದು, ಅದಕ್ಕೂ ಖುಷಿ ಇಲ್ಲದೆ ಗೊಣಗುಟ್ಟುತ್ತಾ ಹೋಗುವಾಗ ಪಕ್ಕದಲ್ಲೇ ಇದ್ದ ಅವರ ಭಾವ ಕೂಡ ಒಂದಷ್ಟು ಹಣ ಕೊಟ್ಟರು.
ಇದನ್ನೂ ಓದಿ: Mirley Chandrashekher Column: ಹಬ್ಬಗಳ ಸಡಗರದ ನಡುವೆ ಆಗದಿರಲಿ ಪರಿಸರ ಮಾಲಿನ್ಯ
ಮಂಗಳಮುಖಿಯರು ಹಣ ಗಳಿಕೆಗೆ ಇತ್ತೀಚಿಗೆ ಕಂಡುಕೊಂಡಿರುವ ವಸೂಲಿ ಅಥವಾ ದಂಧೆ ಎನ್ನಲುಬಹುದು. ಇದೊಂದು ರೀತಿಯ ಹೆಚ್ಚು ಲಾಭ ತರುವ ವೃತ್ತಿಯಾಗಿದೆ, ಇದಕ್ಕೆ ಬಂಡವಾಳ ಹೂಡಿಕೆಯ ಅಗತ್ಯವಿಲ್ಲ. ರಾಜ್ಯದಲ್ಲಿ 10500 ಸಂಖ್ಯೆಗಿಂತ ಹೆಚ್ಚು ತೃತೀಯ ಲಿಂಗಿಗಳು ಇದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಸುಮಾರು 400 ರಿಂದ 450 ಸಂಖ್ಯೆ ಮಂಗಳಮುಖಿಯರು ಇದ್ದಾರೆ. ಸರಕಾರವು ಇವರಿಗೆ ಹಲವು ಸೌಲಭ್ಯಗಳನ್ನು ನೀಡಿದ್ದರೂ ನಗರದ ಪಾರ್ಕುಗಳಲ್ಲಿ, ರೈಲು ಗಾಡಿ ಯಲ್ಲಿ, ಸಿಗ್ನಲ್ ವೃತ್ತಗಳಲ್ಲಿ, ಮದುವೆ ಮನೆಗಳಲ್ಲಿ, ಗೃಹಪ್ರವೇಶ ಹಾಗೂ ಇತರೆ ಶುಭ ಸಮಾರಂಭ ಗಳಲ್ಲಿ ಸಾರ್ವಜನಿಕರನ್ನು ಹಣಕ್ಕಾಗಿ ಸತಾಯಿಸುತ್ತಾರೆ.
ಸಮಾರಂಭಗಳಲ್ಲಿ ಪ್ರೀತಿಯಿಂದ ಕೊಟ್ಟಷ್ಟು ಪಡೆಯುವುದಿಲ್ಲ, ಹೆಚ್ಚಿನ ಹಣ ಕೊಡಲೇಬೇಕು. ಮೈಸೂರಿನಂತಹ ನಗರಗಳಲ್ಲಿ ದಿನವೂ ನೂರಾರು ಮನೆಗಳ ಗೃಹಪ್ರವೇಶ, ಮದುವೆಮುಂಜಿಗಳು ನಡೆಯುತ್ತವೆ. ಪ್ರತಿ ಸಮಾರಂಭದಲ್ಲಿ ಮೂರು ಸಾವಿರದಿಂದ ಹದಿನೈದು ಸಾವಿರದವರೆಗೆ ಕೀಳದೆ ಬಿಡುವುದಿಲ್ಲ.
ಜನರಲ್ಲಿ ಭಯ! ಕೊಡಲಿಲ್ಲವೆಂದರೆ ಶಾಪ ಹಾಕುತ್ತಾರೆ ಎಂಬುದು. ಸದ್ಯ ಇವರ ಸಂಪಾದನೆ ಯಾವುದೇ ಸಾಪ್ಟ್‌ವೇರ್ ಉದ್ಯೋಗಿಗಿಂತ ಕಡಿಮೆ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಮೂಲಿ ಭಿಕ್ಷುಕರ ಹಾವಾಳಿ ತೀರಾ ಕಡಿಮೆ. ಆದರೆ, ಇವರ ಸಂಖ್ಯೆ ಹೆಚ್ಚಾಗುತ್ತಿದೆ. ಆಶ್ಚರ್ಯ ಸಂಗತಿ ಎಂದರೆ ಶ್ರಮವಿಲ್ಲದ ಕೈತುಂಬಾ ಸಂಪಾದನೆ ಇರುವುದರಿಂದ ಇತರೆ ಲಿಂಗಿಗಳ ಕೆಲವರು ಮಂಗಳಮುಖಿಯರ ವೇಷ ತೊಟ್ಟು ಕಸುಬಿಗೆ ಇಳಿದಿದ್ದಾರೆ ಎನ್ನುವುದನ್ನು ಚಿಂತಿಸಬೇಕಾಗಿದೆ. ಕೆಲವು ದಿನಗಳನ್ನು ಹೊರತು ಪಡಿಸಿ ನಿತ್ಯವೂ ಸಮಾರಂಭಗಳು ಇರುವುದರಿಂದ ಸಂಪಾದನೆ ಎಷ್ಟು ಆಗಬಹುದೆಂಬ ಲೆಕ್ಕಾಚಾರವನ್ನು ನಿಮಗೇ ಬಿಟ್ಟಿದ್ದೇನೆ.
ಮಂಗಳಮುಖಿ, ಹಿಜಡಾ, ಕಿನ್ನರ, ಜೋಗಪ್ಪ, ಜೋಗುತಿ ಎಂಬ ಹೆಸರುಗಳಿಂದ ಕರೆಸಿಕೊಳ್ಳುವ ವರ್ಗ, ಚಕ್ಕಾ, ಫಿಫ್ಟಿ-ಫಿಫ್ಟಿ, ಚನ್ನಪಟ್ನ ಎಂಬುದಾಗಿಯೂ ಕರೆಯುವುದುಂಟು. ಸಮಾಜದಲ್ಲಿ ಇವರೂ ಕೂಡ ಒಂದು ಭಾಗವಾಗಿ ಬದುಕು ನಡೆಸುತ್ತಿದ್ದಾರೆ. ಜನ್ಮತಃ ದೈವದತ್ತವಾಗಿ ಭಿನ್ನವಾದ ಲಿಂಗದ ಚಿಹ್ನೆಯನ್ನು ಹೊಂದಿರುವವರನ್ನು ವಿಶೇಷ ಲಿಂಗಿಗಳು ಅಥವಾ ತೃತೀಯ ಲಿಂಗಿಗಳೆಂದು ಕರೆಯಲ್ಪಡುತ್ತಾರೆ.
ಇವರ ಭಾವನೆಗಳು ವಿಚಿತ್ರ ಎನಿಸುತ್ತದೆ. ಇವರೂ ಕೂಡ ಮನುಷ್ಯರೇ ಆದರೂ ಗಂಡಾಗಿ ಹುಟ್ಟಿದ ವರು ಹೆಣ್ಣಿನ ಗುಣಲಕ್ಷಣಗಳನ್ನು ಅಥವಾ ಹೆಣ್ಣಾಗಿ ಹುಟ್ಟಿ ಗಂಡಿನ ಗುಣಲಕ್ಷಣಗಳನ್ನು ಹೊಂದಿರುವವರು ಈ ವರ್ಗಕ್ಕೆ ಸೇರುತ್ತಾರೆ.
ಭಾರತೀಯ ಪುರಾಣಗಳಲ್ಲಿ ಇವರ ಉಲ್ಲೇಖವಿದೆ, ಮಹಾಭಾರತದ ಶಿಕಂಡಿ ಹಾಗೂ ಬೃಹನ್ನಳೆ ನೆನಪಿಗೆ ಬರುತ್ತಾರೆ. ಶುಭ ಕಾರ್ಯಗಳಲ್ಲಿ ಇವರ ಆಶೀರ್ವಾದಕ್ಕೆ ವಿಶೇಷ ಮಹತ್ವ ನೀಡುವ ಭಾರತೀಯ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.
ಲಾಭ ಕಂಡ ಕೆಲವರ ನಡವಳಿಕೆಯನ್ನು ನೋಡಿದರೆ ಬಹುಶಃ ಅವರು ಮಂಗಳಮುಖಿಯರಂತೆ ಮುಖವಾಡ ಹಾಕಿರುವ ಸಾಧ್ಯತೆ ಇದೆ. ಹಗಲು ದರೋಡೆಯ ಇವರ ನಡವಳಿಕೆಯು ಸಾರ್ವಜನಿಕ ರಲ್ಲಿ ಬೇಸರ ತರಿಸಿದೆ. ಪುರುಷರು ಧೈರ್ಯದಿಂದ ಓಡಾಡಲು ಆಗದ ಪರಿಸ್ಥಿತಿಯನ್ನು ಕೆಲವು ಮಂಗಳಮುಖಿಯರು ಸೃಷ್ಟಿಸಿದ್ದಾರೆ.
ಸಮಾರಂಭಗಳಿಗೆ ಬಂದರೆಂದರೆ ನಡೆದುಕೊಳ್ಳುವ ರೀತಿಯಿಂದ ನೆರದಿದ್ದವರಿಗೆ ಕೋಪ ತರಿಸುತ್ತದೆ. ಸಾರಸಗಟಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು, ಅವರಲ್ಲೂ ಹೆಚ್ಚಿನವರು ಒಳ್ಳೆಯವರೂ ಇದ್ದಾರೆ.
ದೈಹಿಕವಾಗಿ ಬಲಿಷ್ಠರಾಗಿದ್ದರೂ ಸಾಮಾಜಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕುಟುಂಬ ಮತ್ತು ಸಮಾಜ ನಿಕೃಷ್ಟವಾಗಿ ಕಾಣುತ್ತದೆ, ಇವರಿಗೆ ಎಲ್ಲ ಅರ್ಹತೆ ಇದ್ದರೂ ನೌಕರಿ ಕೊಡಲು ಸಂಸ್ಥೆಗಳು ಒಪ್ಪುವುದಿಲ್ಲ, ಇದರಿಂದಾಗಿ ಭಿಕ್ಷಾಟನೆ ಇಲ್ಲವೇ ಲೈಂಗಿಕ ವೃತ್ತಿ ನಡೆಸಿಯೇ ಹೊಟ್ಟೆ ಹೊರೆಯಬೇಕಾಗಿದೆ. ಓದುವಾಗ ಶಾಲಾ-ಕಾಲೇಜುಗಳಲ್ಲಿ ಅವಮಾನಕ್ಕೆ ಒಳಪಟ್ಟು ಮನಸ್ಸಿಲ್ಲದಿದ್ದರೂ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿರುತ್ತಾರೆ.
ಇವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಇವರನ್ನು ಮೂರನೇ ಲಿಂಗ ಎಂದು ಅಽಕೃತವಾಗಿ ವರ್ಗೀಕರಿಸಿ ಗುರುತಿಸಿದೆ. ಹೃದಯದ ನುಡಿಗಳು ಒಂದೇ ಆದರೂ ಜನ್ಮದ ಗುರುತಾಗಿ ಮೂರೆಂದರು ಅವರನ್ನು ತಟ್ಟಿದರೆ ಕೈಚಪ್ಪಾಳೆ ಶಬ್ದ ಮಾತ್ರವಲ್ಲ, ಹೃದಯದ ಪ್ರಾರ್ಥನೆ, ಬದುಕಿನ ಬೆಳಕು ಸುಗಮ ಹಾದಿಗೆ ಆಶೀರ್ವಾದದ ಸ್ಪರ್ಶ, ಕೊಡು ಮಾಮ.. ಕೊಡು ಮಾಮ.. ನಿಲ್ಲಬೇಕು, ಮೂರನೇ ಲಿಂಗವೆನ್ನದೆ, ಅವರನ್ನು ಮಾನವರೆನ್ನಿ!.
ಇವರೂ ಮನುಷ್ಯರೇ ಆಗಿರುವುದರಿಂದ ಮಂಗಳಮುಖಿಯರಲ್ಲೂ ಸಾಧಕರಿದ್ದಾರೆ. ಉದಾಹರಣೆಗೆ ಜಾನಪದ ಕ್ಷೇತ್ರದ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗುತಿ ಮಂಜಮ್ಮ, ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ, ಭಾರತದ ಮೊದಲ ಮಂಗಳಮುಖಿ ಸಬ್ ಇನ್ಸ್ ಪೆಕ್ಟರ್ ಪೃಥಿಕಾ ಯಶಿನಿ, ಮೀಸಲಾತಿಯನ್ನು ಬಳಕೆ ಮಾಡಿಕೊಂಡು ಅಶ್ವಥಮ, ಪೂಜಾ ಮತ್ತು ನೀರಮಾನ್ವಿ ಎಂಬುವವರು ಶಿಕ್ಷಕಿಯರಾಗಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿ ಮಂಗಳಮುಖಿ ರೇಣುಕ ಪೂಜಾರಿಯವರು ಸೇವೆ ಸಲ್ಲಿಸುತ್ತಿದ್ದಾರೆ. ಕವಯತ್ರಿ ಚಾಂದಿನಿಯವರು ಬರೆದ ಪದ್ಯವಿಶ್ವವಿದ್ಯಾಲಯದ ಪಠ್ಯಕ್ಕೆ ಸೇರಿದೆ. ಯಶಸ್ವಿ ಉದ್ಯಮಿ ಆಗಿರುವ ನೀತು ವನಜಾಕ್ಷಿಯವರು ಕನ್ನಡದ ಬಿಗ್ ಬಾಸ್ ಮನೆ ಪ್ರವೇಶ ಪಡೆದಿದ್ದು, ಹೀಗೆ ಸಾಧನೆ ಮಾಡಿದವರ ಪಟ್ಟಿಯೂ ದೊಡ್ಡದಿದೆ.
ಹಿಂದೂ ಧರ್ಮದಲ್ಲಿ ಮಂಗಳಮುಖಿಯರು ಶುಭಕಾರ್ಯಗಳಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ. ಮಂಗಳಮುಖಿಯರು ತಲೆಯ ಮೇಲೆ ಕೈ ಇಟ್ಟು ಆಶೀರ್ವದಿಸಿದರೆ ಜೀವನದಲ್ಲಿ ಬದಲಾವಣೆಯಾಗಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಬೇಜಾರೆಂದರೆ ಅವರುಗಳೇ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಅವಮಾನಗಳನ್ನು ಸಹಿಸಿ ಜೀವಿಸುತ್ತಿದ್ದಾರೆ.
ಸಮಾಜದಲ್ಲಿ ಅವರ ಮೇಲೆ ಕೆಲವೊಂದು ನಂಬಿಕೆಗಳು ಬೇರೂರಿವೆ, ಆಧ್ಯಾತ್ಮಿಕ ಶಕ್ತಿಯುಳ್ಳವರು, ಮದುವೆ, ಮಕ್ಕಳ ಜನನ ಮುಂತಾದ ಸಂದರ್ಭಗಳಲ್ಲಿ ಅವರ ಆಶೀರ್ವಾದ ಶುಭವೆಂದು ನಂಬಿದೆ. ಮತ್ತೊಂದು ಮೂಢನಂಬಿಕೆ ಎಂದರೆ ಅವರು ತಮ್ಮ ಬದುಕಿನ ಅಂತ್ಯ ಅರ್ಥಾತ್ ಸಾವಿನ ಸಮಯ ಉಹಿಸಬಲ್ಲರು ಎಂಬುದು.
ಆದರೆ, ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಮಂಗಳಮುಖಿಯರ ಸಮುದಾಯದಲ್ಲಿ ಗುಂಪಾಗಿ ಸೇರಿ ಒಬ್ಬರಿಗೊಬ್ಬರು ಪ್ರಾರ್ಥಿಸುವುದು ಸಾಮಾನ್ಯ. ಇದು ಸಾಮೂಹಿಕ ಬೆಂಬಲ ಮತ್ತು ಒಗ್ಗಟ್ಟನ್ನು ತೋರಿಸುತ್ತದೆ. ಮಂಗಳಮುಖಿಯರ ಪ್ರಾರ್ಥನೆ ಮತ್ತು ಆಶೀರ್ವಾದ ಶಕ್ತಿಶಾಲಿ ಎಂಬುದು ಅವರವರ ನಂಬಿಕೆಯೇ ಹೊರತು ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ತಳಹದಿ ಇರುವುದಿಲ್ಲ.
ತೃತೀಯ ಲಿಂಗಿಗಳ ಜೀವನ ಹೇಗೇ ಇರಲಿ, ಅವರೂ ಸಹ ಮನುಷ್ಯರೇ, ಮೂರನೇ ವರ್ಗಕ್ಕೆ ಸೇರಿಸಿದ್ದರೂ ಹೆಣ್ಣುಗಂಡು ವರ್ಗವಿರುವ ಸಾಮಾನ್ಯ ಕುಟುಂಬದಿಂದಲೇ ಹುಟ್ಟಿ ಬಂದವರು. ಆ ವರ್ಗವನ್ನು ಗೌರವದಿಂದ, ಮಾನವೀಯತೆಯಿಂದ ಮತ್ತು ಸಮಾನತೆಯ ದೃಷ್ಟಿಯಿಂದ ನೋಡುವುದು ಸಹಜ ಮಾನವರಲ್ಲಿ ಇರಬೇಕು. ಅವರನ್ನೂ ವಿದ್ಯಾಭ್ಯಾಸ ಮಾಡುವುದಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಟ್ಟರೆ, ನೌಕರಿಯಲ್ಲಿ ಮೀಸಲಾತಿ ಇಟ್ಟು ದುಡಿಯಲು ಕೆಲಸ ನೀಡಿದರೆ, ಹೆತ್ತವರು ತಮ್ಮ ಮನೆಗಳಲ್ಲೇ ಇರಿಸಿಕೊಂಡರೆ (ಹೊಂದಾಣಿಕೆ ಇರದ ಕಾರಣ ಹುಟ್ಟಿದ ಮನೆಯಲ್ಲಿ ಇರಲಾರರು), ಸಮಾನತೆಯಿಂದ ಕಂಡರೆ ಹಗಲು ದರೋಡೆಯಿಂದ ದೂರ ಉಳಿಯಬಹುದು, ವೃತ್ತಗಳಲ್ಲಿ, ರೈಲುಗಾಡಿಗಳಲ್ಲಿ, ಸಮಾರಂಭಗಳಲ್ಲಿ ಹಣಕ್ಕಾಗಿ ಕಾಣಿಸಿಕೊಳ್ಳದೆ, ನಮ್ಮ ನಿಮ್ಮಂತೆ ಅವರೂ ಕೂಡ ಅತಿಥಿಯಾಗಿ ಆಶೀರ್ವದಿಸಲು ಬರುತ್ತಾರೆ. ಸಮಾಜದಲ್ಲಿ ಈ ಬದಲಾವಣೆಯನ್ನು ಕಾಣಲಾಗುತ್ತದೆಯೇ?