ಸಂಪಾದಕರ ಸದ್ಯಶೋಧನೆ
ನೀವು ಫೇಸ್ ಬುಕ್‌ನಲ್ಲಿ ಒಂದು ಪೋಸ್ಟ್ ಮಾಡುತ್ತೀರಿ. ಆದರೆ ನಿಮಗೆ ನಿರೀಕ್ಷಿತ ಮಟ್ಟದಲ್ಲಿ ಲೈಕ್ಸ್, ಕಾಮೆಂಟ್ಸ್ ಬರುವುದಿಲ್ಲ. ಯಾರೂ ಅದನ್ನು ಶೇರ್ ಮಾಡುವುದಿಲ್ಲ. ಕಾರಣ ಏನಿರಬಹುದು. ಹಾಗಾದರೆ ನೀವು ಶ್ಯಾಡೋಬ್ಯಾನಿಂಗ್ (Shadowbanning ) ಬಗ್ಗೆ ತಿಳಿದುಕೊಳ್ಳಲೇಬೇಕು. ಇದು ಇಂದಿನ ಡಿಜಿಟಲ್ ಯುಗದ ಮತ್ತು ಸಾಮಾಜಿಕ ಮಾಧ್ಯಮಗಳ ( Social Media) ಅತ್ಯಂತ ಚರ್ಚಿತ ಹಾಗೂ ಅಷ್ಟೇ ನಿಗೂಢವಾದ ವಿಷಯ. ಇದನ್ನು ಸರಳವಾಗಿ ಹೇಳಬೇಕೆಂದರೆ, ಒಬ್ಬ ಬಳಕೆದಾರ ನನ್ನು ಅವನಿಗೆ ತಿಳಿಯದಂತೆ ‘ಅದೃಶ್ಯ’ವಾಗಿಸುವ ಪ್ರಕ್ರಿಯೆ.
ಅಷ್ಟಕ್ಕೂ ಶ್ಯಾಡೋಬ್ಯಾನಿಂಗ್ ಎಂದರೇನು? ಸಾಮಾನ್ಯವಾಗಿ ಫೇಸ್ಬುಕ್, ಇನ್ಸ್ಟಾಗ್ರಾಮ, ಎಕ್ಸ್ (ಟ್ವಿಟ್ಟರ್) ಅಥವಾ ಯೂಟ್ಯೂಬ್‌ನಂಥ ವೇದಿಕೆಗಳು ತಮ್ಮ ನಿಯಮಗಳನ್ನು ಉಲ್ಲಂಘಿಸುವ ಬಳಕೆದಾರರ ಖಾತೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತವೆ. ಆದರೆ ಶ್ಯಾಡೋಬ್ಯಾನಿಂಗ್‌ನಲ್ಲಿ ನಿಮ್ಮ ಖಾತೆ ಚಾಲನೆಯಲ್ಲಿರುತ್ತದೆ, ನೀವು ಪೋಸ್ಟ್‌ಗಳನ್ನು ಹಾಕಬಹುದು, ಕಾಮೆಂಟ್ ಮಾಡ ಬಹುದು. ಆದರೆ, ನಿಮ್ಮ ಪೋಸ್ಟ್‌ಗಳು ಇತರರಿಗೆ, ವಿಶೇಷವಾಗಿ ನಿಮ್ಮನ್ನು ಫಾಲೋ ಮಾಡದವರಿಗೆ ಕಾಣಿಸುವುದೇ ಇಲ್ಲ.
ಇದು ‘ನೆರಳಿನ ನಿಷೇಧಿಸುವುದು’ ಎಂದರ್ಥ. ಬಳಕೆದಾರನಿಗೆ ತಾನು ನಿಷೇಧಕ್ಕೊಳಗಾಗಿದ್ದೇನೆ ಎಂದು ತಿಳಿಯುವುದೇ ಇಲ್ಲ, ಆದರೆ ಅವನ ಕಂಟೆಂಟ್‌ನ ತಲುಪುವಿಕೆ ( Reach) ಹಠಾತ್ತಾಗಿ ಕುಸಿದು ಹೋಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ? ಸಾಮಾಜಿಕ ಮಾಧ್ಯಮಗಳ ಅಲ್ಗಾರಿದಮ್ʼಗಳು ಕೆಲವು ನಿರ್ದಿಷ್ಟ ಹ್ಯಾಶ್‌ಟ್ಯಾಗ್‌ಗಳನ್ನು ಅಥವಾ ಖಾತೆಗಳನ್ನು ಗುರುತಿಸಿ ಅವುಗಳನ್ನು ‘ಸೈಡ್ ಲೈನ್’ ಮಾಡುತ್ತವೆ.
ಇದನ್ನೂ ಓದಿ: Vishweshwar Bhat Column: ಒಂದು ಗಾದೆಯ ಕುರಿತು
ನಿಮ್ಮ ಹೆಸರನ್ನು ಸರ್ಚ್ ಮಾಡಿದರೂ ನಿಮ್ಮ ಪ್ರೊಫೈಲ್ ಕಾಣಿಸದೇ ಇರಬಹುದು. ನೀವು ಬಳಸಿದ ಹ್ಯಾಶ್‌ಟ್ಯಾಗ್‌ಗಳ ಪಟ್ಟಿಯಲ್ಲಿ ನಿಮ್ಮ ಪೋ ಕಾಣಿಸುವುದಿಲ್ಲ. ನಿಮ್ಮ ಫಾಲೋವರ್‌ಗಳ ಟೈಮ್ ಲೈನ್‌ನಲ್ಲಿ ನಿಮ್ಮ ಪೋಸ್ಟ್‌ಗಳು ಬರುವುದು ನಿಂತುಹೋಗುತ್ತದೆ ಅಥವಾ ತೀರ ಕಡಿಮೆ ಆಗುತ್ತದೆ. ಶ್ಯಾಡೋಬ್ಯಾನಿಂಗ್ ಮಾಡಲು ಕಾರಣಗಳೇನು? ಸೋಷಿಯಲ್ ಮೀಡಿಯಾ ಸಂಸ್ಥೆಗಳು ಕೆಲವು ನಿರ್ದಿಷ್ಟ ಕಾರಣಗಳಿಗೆ ಇಂಥ ಕ್ರಮಗಳನ್ನು ಕೈಗೊಳ್ಳುತ್ತವೆ.
ವೇದಿಕೆಯ ಸಮುದಾಯ ಮಾರ್ಗಸೂಚಿಗಳನ್ನು (Community Guidelines) ಅಲ್ಪಮಟ್ಟಿಗೆ ಉಲ್ಲಂಘಿಸಿದಾಗ, ಅತಿಯಾಗಿ ಲೈಕ್ ಮಾಡುವುದು, ಸತತವಾಗಿ ಒಂದೇ ರೀತಿಯ ಕಾಮೆಂಟ್ ಮಾಡು ವುದು ಅಥವಾ ಒಂದೇ ಬಾರಿಗೆ ನೂರಾರು ಜನರನ್ನು ಫಾಲೋ ಮಾಡಿದಾಗ, ಕೆಲವು ವಿವಾದಾತ್ಮಕ ಅಥವಾ ಅಶ್ಲೀಲ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದಾಗ ಆ ಇಡೀ ಪೋ ಅನ್ನು ಅಲ್ಗಾರಿದಮ್ ಮರೆ ಮಾಡುತ್ತದೆ.
ಲೈಕ್ ಅಥವಾ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಯಾವುದೇ ತೃತೀಯ ತಂತ್ರಾಂಶಗಳನ್ನು ( Third party apps) ಬಳಸಿದಾಗಲೂ ಶ್ಯಾಡೋಬ್ಯಾನಿಂಗ್ ಮಾಡಬಹುದು. ನೀವು ಶ್ಯಾಡೋಬ್ಯಾನಿಂಗ್ ಆಗಿದ್ದೀರಿ ಎಂದು ತಿಳಿಯುವುದು ಹೇಗೆ? ಇದನ್ನು ಪತ್ತೆ ಹಚ್ಚುವುದು ಕಷ್ಟ, ಆದರೆ ಕೆಲವು ಲಕ್ಷಣ ಗಳ ಮೂಲಕ ಅಂದಾಜಿಸಬಹುದು.
ಉದಾಹರಣೆಗೆ, ಇದ್ದಕ್ಕಿದ್ದಂತೆ ನಿಮ್ಮ ಪೋಸ್ಟ್‌ಗಳಿಗೆ ಬರುವ ಲೈಕ್ ಮತ್ತು ಕಾಮೆಂಟ್‌ಗಳ ಸಂಖ್ಯೆ ಶೇ. 70-80ರಷ್ಟು ಕಡಿಮೆಯಾದರೆ, ನಿಮ್ಮ ಪೋಸ್ಟ್‌ನಲ್ಲಿ ಬಳಸಿದ ಒಂದು ಅಪರೂಪದ ಹ್ಯಾಶ್ ಟ್ಯಾಗ್ ಅನ್ನು ನಿಮ್ಮ ಫಾಲೋವರ್ ಅಲ್ಲದ ಬೇರೊಬ್ಬರ ಮೊಬೈಲ್‌ನಿಂದ ಸರ್ಚ್ ಮಾಡಿ ನೋಡಿದಾಗ ಅಲ್ಲಿ ನಿಮ್ಮ ಪೋಸ್ಟ್ ಕಾಣಿಸದಿದ್ದರೆ ನೀವು ಶ್ಯಾಡೋಬ್ಯಾನ್ ಆಗಿದ್ದೀರಿ ಎಂದರ್ಥ.
ಇದರಿಂದ ಹೊರಬರುವುದು ಹೇಗೆ? ಒಮ್ಮೆ ಶ್ಯಾಡೋಬ್ಯಾನ್ ಆದರೆ ಗಾಬರಿಯಾಗುವ ಅಗತ್ಯವಿಲ್ಲ. ಇದನ್ನು ಸರಿಪಡಿಸಲು ಕೆಲವು ದಾರಿಗಳಿವೆ. ಸುಮಾರು 48 ರಿಂದ 72 ಗಂಟೆಗಳ ಕಾಲ ನಿಮ್ಮ ಖಾತೆಯಲ್ಲಿ ಯಾವುದೇ ಚಟುವಟಿಕೆ ಮಾಡಬೇಡಿ. ಲೈಕ್, ಕಾಮೆಂಟ್ ಅಥವಾ ಪೋಸ್ಟ್ ಮಾಡುವು ದನ್ನು ನಿಲ್ಲಿಸಿ. ಇದು ಅಲ್ಗಾರಿದಮ್‌ಗೆ ನೀವು ‘ಸ್ಪ್ಯಾಮ್ ಬಾಟಮ್’ ಅಲ್ಲ ಎಂದು ಮನವರಿಕೆ ಮಾಡಿಕೊಡಲು ಸಹಾಯ ಮಾಡುತ್ತದೆ.
ನಿಮ್ಮ ಖಾತೆಗೆ ಲಿಂಕ್ ಮಾಡಲಾದ ಅನಗತ್ಯ ಆಪ್‌ಗಳನ್ನು ಡಿಲೀಟ್ ಮಾಡಿ. ನಿಯಮ ಮೀರಿರ ಬಹುದಾದ ಹಳೆಯ ಪೋಸ್ಟ್‌ಗಳನ್ನು ಅಳಿಸಿ ಹಾಕಿ. ಸೆಟ್ಟಿಂಗ್ಸ್‌ನಲ್ಲಿ ’Report a Problem’ ಮೂಲಕ ನಿಮ್ಮ ಸಮಸ್ಯೆಯನ್ನು ವಿವರಿಸಿ. ಆದರೆ ‘ನಾನು ಶ್ಯಾಡೋಬ್ಯಾನ್ ಆಗಿದ್ದೇನೆ’ ಎಂದು ಹೇಳುವ ಬದಲು ‘ನನ್ನ ಪೋಸ್ಟ್‌ಗಳು ಫಾಲೋವರ್‌ಗಳಿಗೆ ಕಾಣಿಸುತ್ತಿಲ್ಲ’ ಎಂದು ತಾಂತ್ರಿಕ ಭಾಷೆಯಲ್ಲಿ ತಿಳಿಸಿ. ಶ್ಯಾಡೋಬ್ಯಾನಿಂಗ್ ಎನ್ನುವುದು ಡಿಜಿಟಲ್ ವೇದಿಕೆಗಳು ಸಮಾಜದಲ್ಲಿ ಶಾಂತಿ ಮತ್ತು ನೈತಿಕತೆಯನ್ನು ಕಾಪಾಡಲು ಬಳಸುವ ಒಂದು ‘ಮೃದು ಆಯುಧ’.