Vishweshwar Bhat Column: ಏನಿದು ಡನ್ನಿಂಗ್-ಕ್ರೂಗರ್ ಎಫೆಕ್ಟ್ ?
ಹಾಗಾದರೆ ‘ಡನ್ನಿಂಗ್-ಕ್ರೂಗರ್ ಎಫೆಕ್ಟ್’ ಅಂದ್ರೆ ಏನು? ಇದು ಒಂದು ರೀತಿಯ ಮಾನಸಿಕ ಭ್ರಮೆ ಅಥವಾ ‘ಕಾಗ್ನಿಟಿವ್ ಬಯಾಸ್’ (Cognitive Bias). 1999ರಲ್ಲಿ ಕಾರ್ನೆಲ್ ವಿಶ್ವ ವಿದ್ಯಾಲಯದ ಸಾಮಾಜಿಕ ಮನಶ್ಶಾಸ್ತ್ರಜ್ಞರಾದ ಡೇವಿಡ್ ಡನ್ನಿಂಗ್ ಮತ್ತು ಜಸ್ಟಿನ್ ಕ್ರೂಗರ್ ಈ ವಿದ್ಯಮಾನ ವನ್ನು ಜಗತ್ತಿಗೆ ಪರಿಚಯಿಸಿದರು.
-
ಸಂಪಾದಕೀಯ ಸದ್ಯಶೋಧನೆ
ಇತ್ತೀಚೆಗೆ ಲೋಕಸಭೆಯಲ್ಲಿ ಆ ಸದನದ ಸದಸ್ಯರಾದ ಶಶಿ ತರೂರ್ ಮಾತಾಡುವಾಗ, ‘ಡನ್ನಿಂಗ್-ಕ್ರೂಗರ್ ಎಫೆಕ್ಸ್’ ಎಂಬ ಪದಬಳಕೆಯನ್ನು ಮಾಡಿದರು. ಆದರೆ ಅವರು ಇದಕ್ಕೆ ಯಾವ ವಿಶ್ಲೇಷಣೆ ನೀಡಲಿಲ್ಲ. ಸಾಮಾಜಿಕ ಜಾಲತಾಣಗಳ ಇಂದಿನ ಕಾಲದಲ್ಲಿ, ಯಾರು ನಿಜವಾದ ತಜ್ಞರು ಮತ್ತು ಯಾರು ಕೇವಲ ‘ಅಲ್ಪವಿದ್ಯೆ ಮಹಾಗರ್ವಿ’ಗಳು ಎಂದು ತಿಳಿಯು ವುದು ಕಷ್ಟವಾಗಿದೆ ಎಂದು ಹೇಳುತ್ತಾ, ‘ಡನ್ನಿಂಗ್-ಕ್ರೂಗರ್ ಎಫೆಕ್ಟ್’ ಪದಪ್ರಯೋಗ ಮಾಡಿದರು.
ಹಾಗಾದರೆ ‘ಡನ್ನಿಂಗ್-ಕ್ರೂಗರ್ ಎಫೆಕ್ಟ್’ ಅಂದ್ರೆ ಏನು? ಇದು ಒಂದು ರೀತಿಯ ಮಾನಸಿಕ ಭ್ರಮೆ ಅಥವಾ ‘ಕಾಗ್ನಿಟಿವ್ ಬಯಾಸ್’ (Cognitive Bias). 1999ರಲ್ಲಿ ಕಾರ್ನೆಲ್ ವಿಶ್ವ ವಿದ್ಯಾಲಯದ ಸಾಮಾಜಿಕ ಮನಶ್ಶಾಸ್ತ್ರಜ್ಞರಾದ ಡೇವಿಡ್ ಡನ್ನಿಂಗ್ ಮತ್ತು ಜಸ್ಟಿನ್ ಕ್ರೂಗರ್ ಈ ವಿದ್ಯಮಾನವನ್ನು ಜಗತ್ತಿಗೆ ಪರಿಚಯಿಸಿದರು.
ಇದರ ಸಾರಾಂಶ ಸರಳ. ಒಂದು ವಿಷಯದ ಬಗ್ಗೆ ಅತ್ಯಂತ ಕಡಿಮೆ ಜ್ಞಾನವಿರುವವರು, ತಮ್ಮ ಸಾಮರ್ಥ್ಯವನ್ನು ಅತಿಯಾಗಿ ಅಂದಾಜಿಸಿಕೊಳ್ಳುತ್ತಾರೆ. ಅಂದರೆ, ತಮಗೆ ತಿಳಿಯದ ವಿಷಯದ ಬಗ್ಗೆಯೂ ತಮಗೆಲ್ಲ ತಿಳಿದಿದೆ ಎಂಬ ಭ್ರಮೆಯಲ್ಲಿ ಅವರು ಬದುಕುತ್ತಾರೆ.
ಇದನ್ನೂ ಓದಿ: Vishweshwar Bhat Column: ಡೆಡ್ ಹಾರ್ಸ್ ಥಿಯರಿ ಅಂದರೇನು ?
ಮನಶ್ಶಾಸ್ತ್ರಜ್ಞರು ಇದನ್ನು ಒಂದು ಗ್ರಾಫ್ ಮೂಲಕ ವಿವರಿಸುತ್ತಾರೆ. ಆ ಕಲಿಕೆಯ ಹಾದಿ ಯಲ್ಲಿ ಮೂರು ಮುಖ್ಯ ಘಟ್ಟಗಳಿವೆ. ಮೊದಲನೆಯದು, ಮೌಂಟ್ ಸ್ಟುಪಿಡ್ ( Mount Stupid). ವಿಷಯದ ಬಗ್ಗೆ ಸ್ವಲ್ಪವೇ ತಿಳಿದ ತಕ್ಷಣ, ವ್ಯಕ್ತಿಯ ಆತ್ಮವಿಶ್ವಾಸ ಆಕಾಶ ಮುಟ್ಟು ತ್ತದೆ.
‘ಇಷ್ಟೇ ಅಲ್ವಾ ವಿಷಯ, ನನಗೆಲ್ಲ ಗೊತ್ತು’ ಎಂದು ವಾದಕ್ಕಿಳಿಯುವ ಹಂತವಿದು. ಎರಡನೆ ಯದು, ನಿರಾಸೆಯ ಕಣಿವೆ (Valley of Despair). ವಿಷಯವನ್ನು ಆಳವಾಗಿ ಅಭ್ಯಾಸ ಮಾಡುತ್ತಾ ಹೋದಂತೆ, ಆ ವಿಷಯ ಎಷ್ಟು ವಿಸ್ತಾರವಾಗಿದೆ ಎಂದು ಅರಿವಾಗ ತೊಡಗು ತ್ತದೆ. ಆಗ ಅವರ ಆತ್ಮವಿಶ್ವಾಸ ಕುಸಿಯುತ್ತದೆ.
‘ನನಗೆ ಏನೂ ತಿಳಿಯುತ್ತಿಲ್ಲವಲ್ಲ’ ಎಂಬ ವಿನಮ್ರತೆ ಇಲ್ಲಿ ಶುರುವಾಗುತ್ತದೆ. ಮೂರನೆ ಯದು, ಜ್ಞಾನೋದಯದ ಹಾದಿ (Slope of Enlightenment). ನಿರಂತರ ಕಲಿಕೆಯಿಂದ ಜ್ಞಾನ ಹೆಚ್ಚಾದಂತೆ, ಆತ್ಮವಿಶ್ವಾಸವೂ ಮರಳಿ ಬರುತ್ತದೆ. ಆದರೆ ಈ ಬಾರಿ ಅದು ಅಹಂಕಾರದಿಂದ ಕೂಡಿರದೇ, ವಾಸ್ತವದ ಅರಿವಿನಿಂದ ಕೂಡಿರುತ್ತದೆ.
ಇಂದಿನ ಸೋಷಿಯಲ್ ಮೀಡಿಯಾ ‘ಮೌಂಟ್ ಸ್ಟುಪಿಡ್’ ಮೇಲೆ ನಿಂತಿರುವವರಿಂದ ತುಂಬಿ ಹೋಗಿದೆ. ಗೂಗಲ್ ಅಥವಾ ವಾಟ್ಸಾಪ್‌ನಲ್ಲಿ ಓದಿದ ಎರಡು ಸಾಲುಗಳನ್ನೇ ಅಂತಿಮ ಸತ್ಯ ಎಂದು ನಂಬುವುದು. ತಮ್ಮಲ್ಲಿರುವ ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯ ವೇ ಅವರಿಗೆ ಇರುವುದಿಲ್ಲ.
ಏಕೆಂದರೆ, ತಮ್ಮ ತಪ್ಪುಗಳನ್ನು ಗುರುತಿಸಲು ಬೇಕಾದ ಕನಿಷ್ಠ ಜ್ಞಾನವೂ ಅವರಲ್ಲಿ ಇರುವುದಿಲ್ಲ. ನಿಜವಾದ ಪಂಡಿತರು ವಿಷಯದ ಜಟಿಲತೆಯನ್ನು ಬಲ್ಲವರು. ಹೀಗಾಗಿ ಅವರು ‘ಇದು ಹೀಗೆಯೇ’ ಎಂದು ಖಡಾಖಂಡಿತವಾಗಿ ಹೇಳಲು ಹಿಂಜರಿಯುತ್ತಾರೆ. ಇದನ್ನು ಸಾಮಾನ್ಯ ಜನರು ‘ಇವರಿಗೆ ವಿಷಯ ಗೊತ್ತಿಲ್ಲ’ ಎಂದು ತಪ್ಪಾಗಿ ಭಾವಿಸುತ್ತಾರೆ. ಸಾಕ್ರೆಟಿಸ್ ಒಮ್ಮೆ ಹೇಳಿದ್ದ- ‘ನನಗೆ ಏನೂ ತಿಳಿದಿಲ್ಲ ಎಂಬುದು ತಿಳಿದಿರುವುದೇ ನನ್ನ eನ’. ಒಬ್ಬ ವ್ಯಕ್ತಿ ಎಷ್ಟು ಹೆಚ್ಚು ಕಲಿಯುತ್ತಾನೋ, ಅಷ್ಟು ಹೆಚ್ಚು ಅವನಿಗೆ ತನ್ನ ಮಿತಿಗಳ ಅರಿವಾಗುತ್ತದೆ.
ಜ್ಞಾನ ಎಂಬುದು ಸಮುದ್ರವಿದ್ದಂತೆ. ದಂಡೆಯ ಮೇಲೆ ನಿಂತವನಿಗೆ ಅದು ಸಣ್ಣದಾಗಿ ಕಾಣಬಹುದು. ಆದರೆ ಈಜಲು ಇಳಿದವನಿಗೆ ಅದರ ಆಳ ಮತ್ತು ವಿಸ್ತಾರ ಅರ್ಥವಾಗುತ್ತದೆ. ‘ಡನ್ನಿಂಗ್-ಕ್ರೂಗರ್ ಎಫೆಕ್ಟ್’ ಕೇವಲ ಇತರರಿಗೆ ಮಾತ್ರವಲ್ಲ, ನಮಗೂ ಅನ್ವಯಿಸಬಹುದು. ನಾವು ಯಾವುದಾದರೂ ವಿಷಯದ ಬಗ್ಗೆ ಅತಿಯಾದ ಆತ್ಮವಿಶ್ವಾಸದಿಂದ ವಾದ ಮಾಡು ತ್ತಿದ್ದರೆ, ಒಮ್ಮೆ ನಿಂತು ‘ನನಗೆ ನಿಜಕ್ಕೂ ಈ ಬಗ್ಗೆ ಪೂರ್ಣ ಜ್ಞಾನವಿದೆಯೇ?’ ಎಂದು ಪ್ರಶ್ನಿಸಿ ಕೊಳ್ಳುವುದು ಉತ್ತಮ.
1995ರಲ್ಲಿ ಮೆಕ್ ಆರ್ಥರ್ ವೀಲರ್ ಎಂಬಾತ ತನ್ನ ಮುಖಕ್ಕೆ ನಿಂಬೆಹಣ್ಣಿನ ರಸ ಹಚ್ಚಿ ಕೊಂಡು ಬ್ಯಾಂಕ್ ದೋಚಲು ಹೋದ! ನಿಂಬೆ ರಸವು ಅದೃಶ್ಯ ಶಾಯಿ (Invisible ink) ಆಗಿ ಕೆಲಸ ಮಾಡುವುದರಿಂದ, ಕೆಮರಾಗಳಿಗೆ ತನ್ನ ಮುಖ ಕಾಣಿಸುವುದಿಲ್ಲ ಎಂಬ ಅತೀವ ನಂಬಿಕೆ ಅವನಿಗಿತ್ತು. ಈ ಘಟನೆಯೇ ಡನ್ನಿಂಗ್ ಮತ್ತು ಕ್ರೂಗರ್ ಅವರು ಈ ಸಂಶೋಧನೆ ಮಾಡಲು ಪ್ರೇರಣೆಯಾಯಿತು.