ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌Vishweshwar Bhat Column: ಐಕಿಯಾ ಎಫೆಕ್ಟ್ ಎಂದರೇನು ?

ನಮ್ಮಂಥ ಲಕ್ಷಾಂತರ ಜನರು ಈಗಾಗಲೇ ಜೋಡಿಸಿದಂತೆಯೇ ನಾವೂ ಕೇವಲ ನಾಲ್ಕಾರು ತಿರುಪುಗಳನ್ನು ಬಿಗಿದಿರುತ್ತೇವಷ್ಟೇ. ಆದರೂ, ಆ ಸಿದ್ಧವಾದ ವಸ್ತುವನ್ನು ನೋಡುವಾಗ ಕಣ್ಣು ಗಳಲ್ಲಿ ಹೊಳೆಯುವ ಹೆಮ್ಮೆಯು ದುಬಾರಿ ಸಿದ್ಧವಸ್ತುಗಳಿಗಿಂತಲೂ ಮಿಗಿಲಾಗಿರುತ್ತದೆ. ಮನುಷ್ಯನ ಈ ವಿಶಿಷ್ಟ ಮನಸ್ಥಿತಿಯನ್ನೇ ಮನಃಶಾಸ್ತ್ರಜ್ಞರು ಮತ್ತು ವರ್ತನಾ ಅರ್ಥಶಾಸ್ತ್ರಜ್ಞರು ‘ಐಕಿಯಾ ಎಫೆಕ್ಟ್’ ಎಂದು ಕರೆಯುತ್ತಾರೆ. ‌

ಸಂಪಾದಕರ ಸದ್ಯಶೋಧನೆ

ನಾವು ಮಾರುಕಟ್ಟೆಯಿಂದ ತಂದ ಯಾವುದೋ ಒಂದು ಪೀಠೋಪಕರಣದ ಪೆಟ್ಟಿಗೆಯನ್ನು ಬಿಡಿಸಿ, ಅದರಲ್ಲಿದ್ದ ಸ್ಕ್ರೂ, ನಟ್ಟು ಮತ್ತು ಹಲಗೆಗಳನ್ನು ಜೋಡಿಸಿ ಮುಗಿಸಿದಾಗ ಮನಸ್ಸಿನಲ್ಲಿ ಮೂಡುವ ಹೆಮ್ಮೆ ಅಸಾಧಾರಣವಾದದ್ದು. ಕೈಯಲ್ಲಿ ಹಿಡಿದ ಸಣ್ಣ ತಿರುಪುಳಿ ಮತ್ತು ಕಣ್ಣೆದುರಿನ ಸೂಚನಾ ಪತ್ರವನ್ನು ಹಿಂಬಾಲಿಸಿ, ಕೊನೆಗೂ ಆವಾರ್ಡ್ ರೋಬ್ ಅಥವಾ ಮೇಜನ್ನು ಗಟ್ಟಿಯಾಗಿ ನಿಲ್ಲಿಸಿದ ಆ ಕ್ಷಣದಲ್ಲಿ ನಾವು ನಮ್ಮನ್ನೇ ಒಬ್ಬ ನುರಿತ ಬಡಗಿ ಎಂದು ಭಾವಿಸಿಕೊಳ್ಳುತ್ತೇವೆ.

ವಾಸ್ತವದಲ್ಲಿ ನಾವೇನೂ ಹೊಸದಾಗಿ ಮರ ಕೊರೆದು, ನಯಗೊಳಿಸಿ ಆ ವಸ್ತುವನ್ನು ನಿರ್ಮಿಸಿರುವು ದಿಲ್ಲ. ನಮ್ಮಂಥ ಲಕ್ಷಾಂತರ ಜನರು ಈಗಾಗಲೇ ಜೋಡಿಸಿದಂತೆಯೇ ನಾವೂ ಕೇವಲ ನಾಲ್ಕಾರು ತಿರುಪುಗಳನ್ನು ಬಿಗಿದಿರುತ್ತೇವಷ್ಟೇ. ಆದರೂ, ಆ ಸಿದ್ಧವಾದ ವಸ್ತುವನ್ನು ನೋಡುವಾಗ ಕಣ್ಣು ಗಳಲ್ಲಿ ಹೊಳೆಯುವ ಹೆಮ್ಮೆಯು ದುಬಾರಿ ಸಿದ್ಧವಸ್ತುಗಳಿಗಿಂತಲೂ ಮಿಗಿಲಾಗಿರುತ್ತದೆ. ಮನುಷ್ಯನ ಈ ವಿಶಿಷ್ಟ ಮನಸ್ಥಿತಿಯನ್ನೇ ಮನಃಶಾಸ್ತ್ರಜ್ಞರು ಮತ್ತು ವರ್ತನಾ ಅರ್ಥಶಾಸ್ತ್ರಜ್ಞರು ‘ಐಕಿಯಾ ಎಫೆಕ್ಟ್’ ಎಂದು ಕರೆಯುತ್ತಾರೆ. ‌

ಇದನ್ನೂ ಓದಿ: Vishweshwar Bhat Column: ಶಾವು ಎಂಬ ಆನೆ ನೆನಪು

ಸರಳವಾಗಿ ಹೇಳುವುದಾದರೆ, ಯಾವುದೇ ಒಂದು ವಸ್ತುವಿನ ನಿರ್ಮಾಣದಲ್ಲಿ ಅಥವಾ ಜೋಡಣೆ ಯಲ್ಲಿ ನಮ್ಮದೇ ಆದ ಸ್ವಂತ ಪರಿಶ್ರಮ ಬೆರೆತಿದ್ದರೆ, ನಾವು ಆ ವಸ್ತುವಿಗೆ ವಾಸ್ತವಕ್ಕಿಂತ ಹೆಚ್ಚಿನ ಮೌಲ್ಯವನ್ನು ಮತ್ತು ಪ್ರೀತಿಯನ್ನು ಕಲ್ಪಿಸುತ್ತೇವೆ. ಮಾರುಕಟ್ಟೆಯಿಂದ ಸಂಪೂರ್ಣವಾಗಿ ತಯಾರಾಗಿ ಬಂದ ಸಿದ್ಧ ವಸ್ತುಗಳಿಗಿಂತ, ನಾವೇ ಕಷ್ಟಪಟ್ಟು ಅಲ್ಪಸ್ವಲ್ಪ ಶ್ರಮ ಹಾಕಿ ಸಿದ್ಧಪಡಿಸಿದ ವಸ್ತುಗಳು ನಮಗೆ ಹೆಚ್ಚು ಆಪ್ತವಾಗುತ್ತವೆ. ಇದು ಕೇವಲ ಪೀಠೋಪಕರಣಗಳಿಗೆ ಮಾತ್ರ ಸೀಮಿತವಾಗಿರದೇ, ಅಡುಗೆ, ಕಲೆ, ಕರ ಕುಶಲತೆ ಮತ್ತು ದೈನಂದಿನ ಜೀವನದ ಪ್ರತಿಯೊಂದು ಕೆಲಸದಲ್ಲೂ ನಮಗೆ ಅರಿವಿಲ್ಲದಂತೆಯೇ ಪ್ರಭಾವ ಬೀರುವ ಆಳವಾದ ಮಾನಸಿಕ ಪ್ರಕ್ರಿ ಯೆಯಾಗಿದೆ.

ಈ ಕುತೂಹಲಕಾರಿ ನಡೆವಳಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ ಪ್ರೊಫೆಸರ್ ಮೈಕೆಲ್ ನಾರ್ಟನ್, ಡೇನಿಯಲ್ ಮೋಚನ್ ಮತ್ತು ಡಾನ್ ಅರಿಯೆಲಿ ಮಹತ್ವದ ಪ್ರಯೋಗಗಳನ್ನು ನಡೆಸಿದರು. ತಮ್ಮ ಸಂಶೋಧನೆಯಲ್ಲಿ ಭಾಗವಹಿಸಿದ ಜನರನ್ನು ಅವರು ಎರಡು ಗುಂಪುಗಳಾಗಿ ವಿಂಗಡಿಸಿದರು. ಒಂದು ಗುಂಪಿಗೆ ಮೊದಲೇ ಸಂಪೂರ್ಣವಾಗಿ ಜೋಡಿಸಲಾದ ಐಕಿಯಾ ಪೆಟ್ಟಿಗೆಗಳು ಅಥವಾ ಒರಿಗಾಮಿ ಕಾಗದದ ಕಲಾಕೃತಿಗಳನ್ನು ನೀಡಲಾಯಿತು, ಮತ್ತೊಂದು ಗುಂಪಿಗೆ ಅವುಗಳನ್ನು ಸ್ವತಃ ಜೋಡಿಸುವಂತೆ ಸೂಚಿಸಲಾಯಿತು.

ನಂತರ ಎರಡೂ ಗುಂಪುಗಳಿಗೂ ಆ ವಸ್ತುಗಳಿಗೆ ಸೂಕ್ತವಾದ ಬೆಲೆಯನ್ನು ನಿಗದಿಪಡಿಸಲು ತಿಳಿಸಲಾಯಿತು. ಆಶ್ಚರ್ಯಕರ ಸಂಗತಿಯೆಂದರೆ, ಸ್ವತಃ ಕಷ್ಟಪಟ್ಟು ಜೋಡಿಸಿದ ವ್ಯಕ್ತಿಗಳು ಆ ವಸ್ತುಗಳಿಗೆ ಇತರರಿಗಿಂತ ಬಹುಪಾಲು ಹೆಚ್ಚಿನ ಮೌಲ್ಯವನ್ನು ನಿಗದಿ ಮಾಡಿದ್ದರು. ನುರಿತ ತಜ್ಞರು ತಯಾರಿಸಿದ ಕಲಾಕೃತಿಯಷ್ಟೇ ಶ್ರೇಷ್ಠವಾಗಿ ತಮ್ಮ ಅಪೂರ್ಣ ಕೃತಿಯೂ ಇದೆ ಎಂದು ಅವರು ಬಲವಾಗಿ ನಂಬಿದ್ದರು. ಆದರೆ ಈ ಐಕಿಯಾ ಪರಿಣಾಮಕ್ಕೆ ಒಂದು ಪ್ರಮುಖ ಷರತ್ತಿದೆ ಎಂಬುದನ್ನು ನಾರ್ಟನ್ ಮತ್ತು ಅವರ ತಂಡ ಸ್ಪಷ್ಟಪಡಿಸಿದೆ.

ಈ ಪ್ರೀತಿ ಅಥವಾ ಮೌಲ್ಯ ವರ್ಧನೆಯು ಕೆಲಸವು ಯಶಸ್ವಿಯಾಗಿ ಪೂರ್ಣಗೊಂಡಾಗ ಮಾತ್ರ ಸಂಭವಿಸುತ್ತದೆ. ಒಂದು ವೇಳೆ ಸೂಚನೆಗಳು ಗೊಂದಲಮಯವಾಗಿದ್ದು, ಹಲಗೆಗಳು ಸರಿಹೊಂದದೇ, ಆ ಪೀಠೋಪಕರಣವನ್ನು ಸರಿಯಾಗಿ ಜೋಡಿಸಲು ಸಾಧ್ಯವಾಗದೇ ಹೋದರೆ ಅಲ್ಲಿ ಹೆಮ್ಮೆಯ ಬದಲು ತೀವ್ರ ಹತಾಶೆ ಮತ್ತು ಅಸಹನೆ ಹುಟ್ಟಿಕೊಳ್ಳುತ್ತದೆ. ಅರೆಬರೆಯಾಗಿ ನಿಂತ ಅಥವಾ ಅರ್ಧದ ಕೈಚೆಲ್ಲಿದ ಕೆಲಸಗಳು ವ್ಯಕ್ತಿಯಲ್ಲಿ ನಕಾರಾತ್ಮಕ ಭಾವನೆಯನ್ನು ಮೂಡಿಸುತ್ತವೆ. ಪರಿಶ್ರಮವು ಸಫಲವಾದಾಗ, ಆ ಯಶಸ್ಸಿನ ಸಿಹಿಯು ವಸ್ತುವಿನ ಮೇಲೆ ಪ್ರತಿಫಲಿಸುತ್ತದೆ.

ಶ್ರಮವು ವ್ಯರ್ಥವಾದಾಗ ಅದೇ ವಸ್ತುವು ನಮ್ಮ ಅಸಾಮರ್ಥ್ಯದ ಸಂಕೇತವಾಗಿ ಕಂಡು ಅಸಮಾ ಧಾನಕ್ಕೆ ಕಾರಣವಾಗುತ್ತದೆ. ಐಕಿಯಾ ಸಂಸ್ಥೆಯ ಕ್ರಿಯೇಟಿವ್ ಡೈರೆಕ್ಟರ್ ಆಗಿರುವ ಮಾರ್ಕಸ್ ಎಂಗ್ಮನ್ ಹಂಚಿಕೊಂಡ ಒಂದು ನೈಜ ಅನುಭವವು ಈ ಪರಿಕಲ್ಪನೆಗೆ ಅತ್ಯಂತ ಸುಂದರವಾದ ನಿದರ್ಶನವನ್ನು ಒದಗಿಸುತ್ತದೆ. ಗ್ರಾಹಕರು ತಮ್ಮ ಉತ್ಪನ್ನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತಿಳಿಯಲು ಅವರು ಆಗಾಗ ಜನರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಒಮ್ಮೆ ಅವರು ನ್ಯೂಯಾರ್ಕ್ ನಲ್ಲಿ ತನ್ನ ಹೊಸ ಅಪಾರ್ಟ್ಮೆಂಟ್ ಅನ್ನು ಸಜ್ಜುಗೊಳಿಸುತ್ತಿದ್ದ ಯುವತಿಯೊಬ್ಬಳ ಮನೆಗೆ ಹೋದರು. ಅಲ್ಲಿ ಆಕೆಯು ಕೇವಲ ಕಾಲುಗಳನ್ನು ತಿರುಗಿಸಿ ಬಿಗಿಯಬೇಕಾದ ಒಂದು ಸರಳವಾದ ಐಕಿಯಾ ಟೀಪಾಯನ್ನು ಇರಿಸಿದ್ದಳು.

ಆ ಟೀಪಾಯನ್ನು ಮಾರ್ಕಸ್‌ಗೆ ಹೆಮ್ಮೆಯಿಂದ ತೋರಿಸುತ್ತಾ ಆಕೆ, ‘ನೋಡಿ, ಇದನ್ನು ನಾನೇ ಮಾಡಿದ್ದು’ ಎಂದು ಮುಖ ತುಂಬ ನಗೆಯೊಂದಿಗೆ ಹೇಳಿದಳು. ಹೊರಗಿನಿಂದ ನೋಡುವವರಿಗೆ ಕೇವಲ ನಾಲ್ಕು ತಿರುಪು ಬಿಗಿದು ‘ನಾನೇ ಮಾಡಿದ್ದು’ ಎನ್ನುವುದು ಹಾಸ್ಯಾಸ್ಪದವಾಗಿ ಕಂಡರೂ, ಆಕೆಯ ಪಾಲಿಗೆ ಅದು ಕೇವಲ ವಸ್ತುವಾಗಿರದೇ ಆಕೆಯ ಸ್ವಂತ ಶ್ರಮದ ಫಲವಾಗಿತ್ತು.

ವಿಶ್ವೇಶ್ವರ ಭಟ್‌

View all posts by this author