ಅಶ್ವತ್ಥಕಟ್ಟೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ವ್ಯವಸ್ಥೆ ಶ್ರೇಷ್ಠ. ಅದರಲ್ಲಿಯೂ ಶಾಸನವನ್ನು ರಚಿಸಲು ನಡೆಯುವ ಕಲಾಪಗಳಿಗೆ ಅದರದ್ದೇ ಆದ ‘ಪಾವಿತ್ರ್ಯ’ವಿದೆ. ಈ ರೀತಿಯ ಶಾಸನಗಳು ರಚನೆ ಯಾಗುವ ಸದನಗಳಲ್ಲಿನ ಒಂದೊಂದು ಮಾತೂ ‘ದಾಖಲೆ’ಯೇ. ಅದಕ್ಕಾಗಿಯೇ, ಸದನದೊಳಗೆ ಸಣ್ಣ ತಪ್ಪು ಮಾತಾಡಿದರೂ ಅದನ್ನು ‘ಕಡತದಿಂದ ತೆಗೆಸುವ’ ಸಂಪ್ರದಾಯವಿದೆ.
ಏಕೆಂದರೆ, ಮುಂದಿನ ಪೀಳಿಗೆಯು, ಸದನದೊಳಗೆ ಅಂದು ಆಗಿರುವ ತಪ್ಪನ್ನೇ ಮಾದರಿಯಾಗಿ ಇರಿಸಿಕೊಂಡು ಮುನ್ನಡೆಯಬಾರದು ಎನ್ನುವ ಕಾರಣಕ್ಕೆ. ಇದಿಷ್ಟೇ ಅಲ್ಲದೇ, ಸದನದಲ್ಲಿ ಯಾವು ದಾದರೂ ಭರವಸೆ ನೀಡಿದರೆ ಅದನ್ನು ಈಡೇರಿಸುವುದು ಆಯಾ ಸರಕಾರಗಳ ಕರ್ತವ್ಯವಾಗಿರು ತ್ತದೆ. ಆದರೆ ಕಳೆದೊಂದು ದಶಕದಿಂದ ಬೆಳಗಾವಿಯಲ್ಲಿ ನಡೆಸಿಕೊಂಡು ಬರುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಮೇಲಿನ ಚರ್ಚೆಯ ವಿಷಯವನ್ನು ಗಮನಿಸಿ ದರೆ ನಿಜಕ್ಕೂ ಆಗಿರುವುದೇನು ಎನ್ನುವ ಸಂದೇಹ ಮೂಡುವುದು ಕಟ್ಟಿಟ್ಟ ಬುತ್ತಿ.
ಇತ್ತೀಚೆಗಷ್ಟೇ ಮುಗಿದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮೊದಲ ಬಾರಿಗೆ ಎರಡನೇ ದಿನದಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲಿನ ಚರ್ಚೆಗೆ ಅವಕಾಶ ನೀಡಲಾಯಿತು. ವಿಧಾನಸಭೆಯಲ್ಲಿ 39 ಶಾಸಕರು ಸುಮಾರು 17 ಗಂಟೆ 02 ನಿಮಿಷಗಳ ಕಾಲ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ಮೂರು ತಾಸು ಉತ್ತರ ನೀಡಿದ್ದಾರೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಹೆಚ್ಚು ಅವಧಿಯವರೆಗೆ ಚರ್ಚೆಯಾಗಿರುವುದರಲ್ಲಿ ಅನುಮಾನವಿಲ್ಲ. ಆದರೆ ಈ ಚರ್ಚೆಯಿಂದ ಬಂದಿರುವ ‘ಫಲಿತಾಂಶ’ವೇನು ಎನ್ನುವ ಪ್ರಶ್ನೆಗೆ ಅನೇಕರ ಶಾಸಕರ ಬಳಿ ಉತ್ತರವಿಲ್ಲ. ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ, ಉತ್ತರ ಕರ್ನಾಟಕ ಹಿಂದುಳಿದಿದೆ ಎನ್ನುವ ಉದ್ದೇಶದಿಂದ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ‘ಬೆಳಕು ಚೆಲ್ಲಲು’ ಈ ವಿಶೇಷ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಆದರೆ ಈ ಅವಕಾಶವನ್ನು ಉತ್ತರ ಕರ್ನಾಟಕ ಭಾಗದ ಶಾಸಕರು ಎಷ್ಟು ಬಳಸಿಕೊಂಡಿದ್ದಾರೆ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆ.
Ranjith H Ashwath Column: ಕುರ್ಚಿ ಗೊಂದಲ; ಸಮಯ ದೂಡಲು ಕಾರಣ ?
ಬೆಳಗಾವಿ ಅಧಿವೇಶನವನ್ನು ನಾಲ್ಕೈದು ವರ್ಷದಿಂದ ವರದಿಗಾರಿಕೆ ಮಾಡಿರುವ ಯಾವುದೇ ವರದಿ ಗಾರನಿಗೆ ಉತ್ತರ ಕರ್ನಾಟಕದ ಚರ್ಚೆಯನ್ನು ವರದಿ ಮಾಡಿದ್ದರೆ. ಈ ವರ್ಷದ ಚರ್ಚೆ ‘ಬೋರ್’ ಎನಿಸದೇ ಇರುವುದಿಲ್ಲ. ಏಕೆಂದರೆ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರತಿಬಾರಿಯೂ ಉತ್ತರ ಕರ್ನಾಟಕದ ಸಮಸ್ಯೆಯನ್ನು ಚರ್ಚೆಗೆ ಎತ್ತಿಕೊಂಡಾಗ ಪ್ರಸ್ತಾಪಿಸುವ ವಿಷಯವನ್ನೇ ಈ ಬಾರಿಯೂ ಮಂಡಿಸಿದ್ದಾರೆ.
ಸರಕಾರಗಳು ಬದಲಾದಾಗ, ಶಾಸಕರು ಆಡಳಿತ ಪಕ್ಷ, ಪ್ರತಿಪಕ್ಷದಲ್ಲಿದ್ದಾಗ ಅವರು ಆಡುವ ಶಬ್ದ ದಲ್ಲಿ ಬದಲಾಗಬಹುದು. ಆದರೆ ಒಟ್ಟಾರೆ ಚರ್ಚೆಯ ಹೂರಣದಲ್ಲಿ ಹೊಸದೇನಿಲ್ಲ. ಆಡಳಿತ ಪಕ್ಷದಲ್ಲಿ ಕೂತಿರುವ ಬಸವರಾಜ ರಾಯರಡ್ಡಿ, ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ, ಲಕ್ಷ್ಮಣ ಸವದಿ ಅವರು ಕಳೆದ ಎರಡು ವರ್ಷ ಮಾತನಾಡಿರುವ ವಿಷಯವನ್ನೇ ಮತ್ತೊಮ್ಮೆ ಮಾತನಾಡಿದ್ದಾರೆಯೇ ಹೊರತು, ಅದು ಹೊಸತು ಎನ್ನುವಂತಿಲ್ಲ.
ಕಬ್ಬು ಬೆಳೆಗಾರರ ಸಮಸ್ಯೆ, ಶಿಕ್ಷಣ, ಆರೋಗ್ಯ, ಅನುದಾನ ಅಸಮಾನತೆ, ಖಾಲಿ ಹುದ್ದೆ, ಏಮ್ಸ್ ಹೊರತಾದ ಸಮಸ್ಯೆಗಳನ್ನು ಈವರೆಗೆ ಈ ಶಾಸಕರು ಮುನ್ನೆಲೆಗೆ ತಂದಿರುವಂತೆ ಕಾಣುತ್ತಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿರುವುದಕ್ಕೆ ಕೇಂದ್ರ ಸರಕಾರ ಅನುದಾನ ನೀಡಿಲ್ಲ. ಅದಕ್ಕೆ ಉತ್ತರ ಕರ್ನಾಟಕದ ಅಭಿವೃದ್ಧಿಯಾಗುತ್ತಿಲ್ಲ.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿದ್ದು ಯುಪಿಎ ಸರಕಾರ ಎನ್ನುವ ಕೆಲವೊಂದ ಷ್ಟು ಹೇಳಿಕೆಗಳನ್ನು ಮೀರಿದ ಅಂಶಗಳಿಲ್ಲ. ಇನ್ನು ಬಿಜೆಪಿಯಿಂದ ಅರವಿಂದ ಬೆಲ್ಲದ್, ಶಶಿಕಲಾ ಜೊಲ್ಲೆ, ಶರಣು ಸಲಗಾರ್ ಸೇರಿದಂತೆ ಯಾವುದೇ ಶಾಸಕರ ಭಾಷಣವನ್ನು ಕೇಳಿ (ಲೋಕಸಭಾ ಚುನಾವಣೆಗೂ ಮೊದಲು ಗೋವಿಂದ ಕಾರಜೋಳ ಅವರು ‘ಕೃಷ್ಣೆ ಕಣ್ಣೀರು’ ಎನ್ನುವ ಬಗ್ಗೆ ಮಾತನಾಡುತ್ತಿದ್ದರು) ಕಳೆದ ವರ್ಷದ ರಿಪೀಟ್ ಟೆಲಿಕಾಸ್ಟ್. ಇನ್ನುಳಿದಂತೆ ಕೆಲ ಶಾಸಕರು, ಇಡೀ ಜಿಲ್ಲೆಯ ‘ಸಾಹುಕಾರ್’ ಎನಿಸಿಕೊಂಡಿದ್ದಾರೆ.
ಆದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಮಯದಲ್ಲಿ ‘ಅತಿಥಿ ಶಾಸಕರ’ ರೀತಿ ಬರುತ್ತಾರೆ, ಬಂದು ಸ್ಪೀಕರ್ ಕುರ್ಚಿಗೆ ಕೈಮುಗಿದು ಹೊರ ಹೋದರೆ ಬರುವುದು ಮರುದಿನವೇ! ದಿನಕ್ಕೊಮ್ಮೆ ಬಂದು ಸಹಿ ಹಾಕಿದರೆ ನಮ್ಮ ಕೆಲಸವಾಯಿತು ಎನ್ನುವ ರೀತಿಯಲ್ಲಿ ಅನೇಕರಿದ್ದಾರೆ.
ಹಾಗೆ ನೋಡಿದರೆ, ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚರ್ಚೆಯಾಗಿರುವ ವಿಷಯ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣ, ಭದ್ರಾ ಮೇಲ್ದಂಡೆ, ಕಲ್ಯಾಣ ಕರ್ನಾಟಕದ ಸಾಕ್ಷರತಾ ಸಮಸ್ಯೆ, ಖಾಲಿ ಹುದ್ದೆಗಳ ಭರ್ತಿ, ಕಳಸಾ-ಬಂಡೂರಿ ನಾಲಾ ಯೋಜನೆ, ಅನುದಾನ ಬಳಕೆಯಲ್ಲಿನ ಸವಾಲು, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನ, ಕಬ್ಬು ಬೆಳೆಗಾರರ ಸಮಸ್ಯೆ, ಆರೋಗ್ಯ ಕೇಂದ್ರಗಳ ಸಮಸ್ಯೆ, ವೈದ್ಯರ ಸಮಸ್ಯೆ..
ಹೀಗೆ 15ರಿಂದ 20 ವಿಷಯ ಮೀರಿ ಹೊಸ ವಿಷಯಗಳು ಇರುವುದಿಲ್ಲ. ಉಭಯ ಸದನಗಳನ್ನು ಸೇರಿಸಿದರೆ ಪ್ರತಿವರ್ಷ 30 ರಿಂದ 35 ಗಂಟೆಗಳ ಉತ್ತರ ಕರ್ನಾಟಕದ ಕುರಿತಾದ ಚರ್ಚೆಯಾಗುತ್ತದೆ. ಮುಖ್ಯಮಂತ್ರಿಗಳಿಂದ ಉಭಯ ಸದನ ಸೇರಿಸಿ ನಾಲ್ಕೈದು ತಾಸು ಸುದೀರ್ಘ ಉತ್ತರ, ಈ ಉತ್ತರ ಸಮರ್ಪಕವಾಗಿಲ್ಲವೆಂದು ಪ್ರತಿಪಕ್ಷಗಳ ಸಭಾತ್ಯಾಗದಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನ ಮುಕ್ತಾಯವಾಗುತ್ತದೆ.
ಇನ್ನು ದಶಕದಿಂದ ಇರುವ ಹಲವು ಸಮಸ್ಯೆಗಳು ಈಗಲೂ ಸಮಸ್ಯೆಗಳಾಗಿಯೇ ಉಳಿಯಲು ಕಾರಣ ಈ ಭಾಗದಲ್ಲಿರುವ ರಾಜಕೀಯ ವ್ಯವಸ್ಥೆ. ಉತ್ತರ ಕರ್ನಾಟಕ ಭಾಗದಲ್ಲಿ ಕಾಣಿಸಿಕೊಳ್ಳುವ ಬೆಳಗಾವಿ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಗದಗ, ಬಳ್ಳಾರಿ ಜಿಲ್ಲೆಗಳ ರಾಜಕೀಯ ವ್ಯವಸ್ಥೆಯನ್ನು ಗಮನಿಸಿದರೆ, ದಶಕಗಳಿಂದ ಒಬ್ಬರೇ ಅಥವಾ ಒಂದೇ ಕುಟುಂಬದವರು ಇಲ್ಲವೇ ಒಂದೆರಡು ಕುಟುಂಬಗಳ ಕೈಯಲ್ಲಿ ಈ ಜಿಲ್ಲೆಗಳ ರಾಜಕೀಯ ನಿಂತಿದೆ.
ಅವರು ಗೆಲ್ಲಬೇಕು ಇಲ್ಲವೇ ಅವರಿಗೆ ಬೇಕಾದವರನ್ನು ಗೆಲ್ಲಿಸಿಕೊಂಡು ಹೋಗಬೇಕು. ಹಾಗೆ ನೋಡಿದರೆ, ಈ ಎಲ್ಲ ಜಿಲ್ಲೆಗಳಲ್ಲಿರುವ ರಾಜಕಾರಣಿಗಳು ಬೇರೆ ಬೇರೆ ಪಕ್ಷದಲ್ಲಿದ್ದರೂ, ಹೊಂದಾ ಣಿಕೆ ಸಾಗುತ್ತಿರುವುದು ಸ್ಪಷ್ಟ. ಇನ್ನು ಮತದಾರರು ಸಹ ಬದಲಾವಣೆಗಿಂತ ‘ಸಾಹುಕಾರ್’ ಸಂಪ್ರದಾಯವನ್ನು ಈಗಲೂ ಮುಂದುವರಿಸಿಕೊಂಡು ಹೋಗಿದ್ದಾರೆ.
ಅಭಿವೃದ್ಧಿ ಮೀರಿ ವ್ಯಕ್ತಿಯನ್ನು ಆರಾಧಿಸುವ ಕಾರಣಕ್ಕೆ, ಶಾಸಕನಿಗೆ ಮತ್ತೊಂದು ಚುನಾವಣೆ ಯಲ್ಲಿ ಗೆಲ್ಲುವುದಕ್ಕೆ ‘ಟಾರ್ಗೆಟ್’ ಇರುವುದಿಲ್ಲ. ಈಗಲೂ ಈ ಭಾಗದಲ್ಲಿ ಚುನಾವಣೆ ವೇಳೆ ಮತ ಕೇಳಲು ಹೋಗುವ ಶಾಸಕರು, ಮತ್ತೊಮ್ಮೆ ಆ ಹಳ್ಳಿಗಳಿಗೆ ಹೋಗುವುದು ಮುಂದಿನ ಚುನಾವಣೆ ಸಮಯದಲ್ಲಿಯೇ ಎನ್ನುವ ಮಾತಿದೆ. ಇನ್ನು ಕೆಲ ಹಳ್ಳಿಗಳಿಗೆ ಶಾಸಕರೇ ಹೋಗದೆ, ತಮ್ಮ ಹಿಂಬಾ ಲಕರ ಮೂಲಕವೇ ಚುನಾವಣೆಗಳನ್ನು ನಡೆಸುವುದಿದೆ.
ಉತ್ತರ ಕರ್ನಾಟಕದ ಇಂದಿನ ಪರಿಸ್ಥಿತಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜತೆಗೆ ರಾಜಕೀಯ ನಾಯಕರು ಸ್ಥಾಪಿಸಿಕೊಂಡಿರುವ ‘ಕೋಟೆ’ಯಿಂದ ಮತದಾರರು ಹೊರಬಾರದಿರುವುದು ಕೂಡ ಮತ್ತೊಂದು ಕಾರಣ ಎಂದರೆ ತಪ್ಪಾಗುವುದಿಲ್ಲ.
ಪ್ರತಿವರ್ಷ ಬೆಳಗಾವಿಯಲ್ಲಿ ಸರಕಾರ ನಡೆಸುವ ಚಳಿಗಾಲದ ಅಧಿವೇಶನದಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದಕ್ಕೂ ಆಗುವುದಿಲ್ಲ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿ ಯಲ್ಲಿ ಬೆಳಗಾವಿಯಲ್ಲಿ ಆರಂಭವಾದ ಚಳಿಗಾಲದ ಅಧಿವೇಶನದ ಬಳಿಕ ಬೆಳಗಾವಿಯಲ್ಲಿ ಸರ್ವೇ ಸಾಮಾನ್ಯ ಎನ್ನುವಂತಿದ್ದ ‘ಕನ್ನಡ-ಮರಾಠಿ’ ಗಲಾಟೆ, ಎಂಇಎಸ್ ಪುಂಡಾಟಿಕೆ ಸಮಸ್ಯೆ ಬಹುತೇಕ ತಗ್ಗಿದೆ. ಮರಾಠಿಗರು ಈಗಲೂ ಬೆಳಗಾವಿ ಜಿಲ್ಲೆಯಲ್ಲಿ ‘ಪ್ರಮುಖ’ ಪಾತ್ರ ವಹಿಸಿದರೂ, ಕಿಡಿ ಹೊತ್ತಿಸುವ ಪ್ರಮಾಣ ಕಡಿಮೆಯಾಗಿದೆ.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಾದ, ಎಂಇಎಸ್ ನಡೆಸುತ್ತಿದ್ದ ಮಹಾ ಮೇಳಾವ್‌ನ ತೀವ್ರತೆ ತಗ್ಗಿದೆ. ಸಂಪೂರ್ಣ ಮರಾಠಿಮಯವಾಗಿದ್ದ ಬೆಳಗಾವಿಯಲ್ಲಿ ಇಂದು ಕನ್ನಡ ಆಡಳಿತ ಭಾಷೆಯಾಗಿದೆ. ಇದರೊಂದಿಗೆ ಪ್ರತಿವರ್ಷ ಚಳಿಗಾಲದ ಅಧಿವೇಶನ ನಡೆಯುತ್ತದೆ ಎನ್ನುವ ಕಾರಣಕ್ಕೆ, ಬೆಳಗಾವಿ ಸುತ್ತಮುತ್ತಲಿನ ಸಮಸ್ಯೆಗಳನ್ನು ಜಿಲ್ಲಾಡಳಿತ ಪರಿಹರಿಸಿಕೊಂಡು ಬರುತ್ತಿದೆ.
ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಈ ವಿಷಯ ವನ್ನು ಚರ್ಚಿಸುವುದಕ್ಕಾದರೂ ಇಂತಿಷ್ಟು ಸಮಯವನ್ನು ಮೀಸಲಿಡಲಾಗುತ್ತಿದೆ. ಅಧಿವೇಶನ ಕ್ಕೆಂದು ಬರುವ ಸಚಿವರು, ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಊರುಗಳಿಗೆ, ತಾಲೂಕುಗಳಿಗೆ ಹೋಗುವುದರಿಂದ ಸ್ಥಳೀಯ ಮಟ್ಟದಲ್ಲಿರುವ ಸಣ್ಣ-ಪುಟ್ಟ ಸಮಸ್ಯೆಗಳಿಗಾದರೂ ಸರಕಾರ ಕಿವಿಯಾಗುವ ಪ್ರಯತ್ನದಲ್ಲಿದೆ.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ಕಾನೂನಾತ್ಮಕವಾಗಿ ನೋಡುವು ದಾದರೆ, ಬೆಂಗಳೂರಿನಲ್ಲಿ ನಡೆಯುವ ಅಽವೇಶನದ ರೀತಿಯಲ್ಲಿಯೇ ಕಾಣುತ್ತದೆ. ಆದರೆ ಅದರ ಹಿಂದೆ ಅಧಿಕಾರಿ ವರ್ಗದ ಶ್ರಮ ಅಷ್ಟಿಷ್ಟಲ್ಲ. ಸಚಿವರು, ಶಾಸಕರು ಅಧಿವೇಶನದ ಬೆಳಗ್ಗೆ ಬಂದು, ಕಲಾಪದಲ್ಲಿ ಕೂತು ತಮಗೆ ಬೇಕಾಗಿರುವುದನ್ನು ಮಾತಾಡಿ ಹೋಗುತ್ತಾರೆ.
ಆದರೆ ಬೆಂಗಳೂರಿನಲ್ಲಿರುವ ಇಡೀ ಆಡಳಿತ ಯಂತ್ರವನ್ನು ಬೆಳಗಾವಿಗೆ ಶಿಫ್ಟ್ ಮಾಡುವುದು ಸುಲಭವಲ್ಲ. ಇದರೊಂದಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಬೇಕೆಂದರೆ, ಬೆಂಗಳೂರಿನಿಂದ ಬೆಳಗಾವಿಗೆ ತೆರಳುವ ಕಾರ್ಯಾಂಗ, ಶಾಸಕಾಂಗ, ಪತ್ರಕರ್ತರು, ಆರು ಸಾವಿರಕ್ಕೂ ಹೆಚ್ಚು ಪೊಲೀಸರು, ಸದನದೊಳಗಿರುವ ಮಾರ್ಷಲ್‌ಗಳು ಸೇರಿದಂತೆ 10 ರಿಂದ 12 ಸಾವಿರ ಜನರಿಗೆ ವಸತಿ, ಆಹಾರ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.
ಅರ್ಥಾತ್ ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ 10 ರಿಂದ 12 ಸಾವಿರ ಜನರಿಗೆ ‘ಎರಡನೇ ಮನೆ’ಯನ್ನು 15 ದಿನದ ಮಟ್ಟಿಗೆ ಒದಗಿಸಬೇಕಾಗುತ್ತದೆ. ಇದಕ್ಕೆ ಪ್ರತಿವರ್ಷ ನೂರಾರು ಕೋಟಿ ರುಪಾಯಿ ಖರ್ಚಾಗುತ್ತದೆ. ಇಷ್ಟೆಲ್ಲ ಒತ್ತಡದ ನಡುವೆಯೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲೇಬೇಕೆಂಬ ಹಠಕ್ಕೆ ಬೀಳುವುದರಿಂದ ಹಿಂದಿರುವ ಉದ್ದೇಶ, ಆ ಭಾಗದ ಅಭಿವೃದ್ಧಿಯಾಗಲಿ, ಜನರಿಗೆ ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು. ಆದರೆ ಕಳೆದ 12 ಅಧಿವೇಶನದಲ್ಲಿ ಇದು ಸಾಧ್ಯವಾಗಿದೆಯೇ ಎಂದರೆ ಗಟ್ಟಿಧ್ವನಿಯಲ್ಲಿ ‘ಹೌದು’ ಎನ್ನುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಎಲ್‌ಇ ಸಭಾಂಗಣದಲ್ಲಿ ನಡೆದ ಅಧಿವೇಶನದಲ್ಲಿ ಚರ್ಚೆಯಾಗಿದ್ದ ಉತ್ತರ ಕರ್ನಾಟಕದ ವಿಷಯಗಳೇ ಈಗಲೂ ಸಮಸ್ಯೆಗಳಾಗಿಯೇ ಉಳಿದಿವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಟೆಗಟ್ಟಲೇ ಮಾತನಾಡಿರುವ ಬಹುತೇಕ ಶಾಸಕರು, ಪರಿಹಾರದ ವಿಷಯ ಬಂದಾಗ ‘ಮೌನ’ಕ್ಕೆ ಶರಣಾಗುತ್ತಿದ್ದಾರೆ.
ಏಕೆಂದರೆ, ಉತ್ತರ ಕರ್ನಾಟಕದ ಅಭಿವೃದ್ಧಿಯಾಗುವುದಕ್ಕೆ ಅನುದಾನ ನೀಡಿದರೆ ಸಾಲದು, ಆ ಭಾಗದ ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರಗಳನ್ನು ಮಾದರಿ ಕ್ಷೇತ್ರಗಳನ್ನಾಗಿ ಮಾಡುವ ಗುರಿಯಿರ ಬೇಕು. ಹಳೇ ಮೈಸೂರು ಭಾಗದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಮೈಸೂರು ಒಡೆಯರಿಗಿದ್ದ ದೂರ ದೃಷ್ಟಿ ಇರುವ ನಾಯಕತ್ವ ಉತ್ತರ ಕರ್ನಾಟಕ ಭಾಗಕ್ಕೆ ಸಿಗದ ಹೊರತು, ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ‘ಭಾಷಣ’ ಪ್ರತಿಗಳಲ್ಲಿ ಮಾತ್ರ ಸೀಮಿತವಾಗಲಿದೆ ಎಂದರೆ ತಪ್ಪಾಗುವುದಿಲ್ಲ.