ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಕುರ್ಚಿ ಗೊಂದಲ; ಸಮಯ ದೂಡಲು ಕಾರಣ ?

ಕಳೆದ ಎರಡು ತಿಂಗಳಿನಿಂದ, ಕಾಂಗ್ರೆಸ್‌ನಲ್ಲಿರುವ ನಾಯಕತ್ವ ಗೊಂದಲಕ್ಕೆ ಕೊನೆಯಿಲ್ಲವಾಗಿದೆ. ಎರಡೂ ಕಡೆಯವರು ಸ್ಪಷ್ಟತೆಯ ಹುಡುಕಾಟದಲ್ಲಿದ್ದರೆ, ಪಕ್ಷದ ಹೈಕಮಾಂಡ್ ನಾಯಕರು ಯಾವ ರೀತಿಯಲ್ಲಿ ಸ್ಪಷ್ಟನೆ ನೀಡಬೇಕೆಂಬ ಗೊಂದಲದಲ್ಲಿದ್ದಾರೆ. ಈ ಗೊಂದಲಕ್ಕೆ ಶಾಶ್ವತ ಪರಿಹಾರದ ಬದಲಿಗೆ ಸಮಯ ದೂಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡುವುದಕ್ಕೆ ಇಡೀ ಪ್ರಹಸನವನ್ನು ಸೀಮಿತಗೊಳಿಸಲಾಗುತ್ತಿದೆಯೇ ಎನ್ನುವ ಅನುಮಾನ ಶುರುವಾಗಿದೆ.

Ranjith H Ashwath Column: ಕುರ್ಚಿ ಗೊಂದಲ; ಸಮಯ ದೂಡಲು ಕಾರಣ ?

-

ಅಶ್ವತ್ಥಕಟ್ಟೆ

ಸರಕಾರವು ಸುಭದ್ರವಾಗಿರುವುದಕ್ಕೆ, ಸುಲಲಿತವಾಗಿ ನಡೆಯುವುದಕ್ಕೆ ಕೇವಲ ಸ್ಪಷ್ಟ ಬಹುಮತ ವಿದ್ದರೆ ಸಾಲದು ಎನ್ನುವುದಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಸ್ಪಷ್ಟ ಉದಾಹರಣೆ. ಸ್ಪಷ್ಟ ಬಹುಮತ ಮತ್ತು ವರ್ಚಸ್ಸನ್ನು ಕಳೆದುಕೊಂಡಿದೆ ಪ್ರತಿಪಕ್ಷ ಬಿಜೆಪಿ. ಈ ಎರಡೂ ಇದ್ದಾಗ ಯಾವುದೇ ಒಂದು ಆಡಳಿತ ಪಕ್ಷ ಸರಾಗವಾಗಿ ಸರಕಾರ ನಡೆಸುವುದಷ್ಟೇ ಅಲ್ಲದೇ ಮುಂದಿನ ಚುನಾವಣೆಗೂ ಬುನಾದಿ ಹಾಕಿಕೊಳ್ಳುವುದು ದೊಡ್ಡ ವಿಷಯವೇನಲ್ಲ.

ಆದರೆ ಅಧಿಕಾರಕ್ಕೆ ಬಂದಾಗಿನಿಂದ ಪಕ್ಷದಲ್ಲಿ ಪದೇಪದೆ ಕಾಣಿಸಿಕೊಳ್ಳುತ್ತಿರುವ ನಾಯಕತ್ವ ಬದಲಾವಣೆಯ ಗೊಂದಲಕ್ಕೆ ಹೈಕಮಾಂಡ್ ಮಟ್ಟದಲ್ಲಿ ರೂಪಿಸಿರುವ ಸೂತ್ರದ ಸ್ಪಷ್ಟನೆ ನೀಡದೇ ‘ಮುಂದೆ ನೋಡೋಣ’ ಎನ್ನುತ್ತ ಬಂದಿದ್ದು, ಇಂದಿನ ಈ ಗೋಜಲಿನ ಸ್ಥಿತಿಗೆ ಕಾರಣ.

ಕಳೆದ ಎರಡು ತಿಂಗಳಿನಿಂದ, ಕಾಂಗ್ರೆಸ್‌ನಲ್ಲಿರುವ ನಾಯಕತ್ವ ಗೊಂದಲಕ್ಕೆ ಕೊನೆಯಿಲ್ಲವಾಗಿದೆ. ಎರಡೂ ಕಡೆಯವರು ಸ್ಪಷ್ಟತೆಯ ಹುಡುಕಾಟದಲ್ಲಿದ್ದರೆ, ಪಕ್ಷದ ಹೈಕಮಾಂಡ್ ನಾಯಕರು ಯಾವ ರೀತಿಯಲ್ಲಿ ಸ್ಪಷ್ಟನೆ ನೀಡಬೇಕೆಂಬ ಗೊಂದಲದಲ್ಲಿದ್ದಾರೆ. ಈ ಗೊಂದಲಕ್ಕೆ ಶಾಶ್ವತ ಪರಿಹಾರದ ಬದಲಿಗೆ ಸಮಯ ದೂಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡುವುದಕ್ಕೆ ಇಡೀ ಪ್ರಹಸನವನ್ನು ಸೀಮಿತಗೊಳಿಸಲಾಗುತ್ತಿದೆಯೇ ಎನ್ನುವ ಅನುಮಾನ ಶುರುವಾಗಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಈ ಹಗ್ಗಜಗ್ಗಾಟದ ಅರಿವು ಪಕ್ಷದ ಹೈಕಮಾಂಡ್‌ಗೆ ಇಲ್ಲ ಎಂದೇನಲ್ಲ. ಆದರೆ ಇಬ್ಬರಿಗೂ ಬೇಸರವಾಗದಂತೆ, ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕು ಎನ್ನುವ ಮನಸ್ಥಿತಿಯಲ್ಲಿ ಹೈಕಮಾಂಡ್ ಇರುವುದರಿಂದ ಈ ಹಗ್ಗಜಗ್ಗಾಟಕ್ಕೆ ಪರಿಹಾರ ನೀಡುವಲ್ಲಿ ಅದು ವಿಫಲವಾಗುತ್ತಿದೆ ಎನ್ನುವುದು ಸ್ಪಷ್ಟ, 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದ ದಿನದಿಂದಲೂ ಹೈಕಮಾಂಡ್‌ಗೆ ಈ ಗೊಂದಲವಿತ್ತು. ಆರಂಭದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸೂತ್ರವೊಂದನ್ನು ರಚಿಸಿ ಸರಕಾರ ರಚನೆಗೆ ಅವಕಾಶವಾಗುವಂತೆ ನೋಡಿಕೊಂಡರು. ಆದರೀಗ ಅಹಿಂದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಂದ ಬಲವಂತ ವಾಗಿ ರಾಜೀನಾಮೆ ಪಡೆದರೆ ಆಗಬಹುದಾದ ಅನಾಹುತದ ಅರಿವು ಪಕ್ಷದ ಹೈಕಮಾಂಡ್‌ಗೆ ಇದೆ.

ಇದನ್ನೂ ಓದಿ: Ranjith H Ashwath Column: ಗೊಂದಲ ಮೀರಿ ಸದನದಲ್ಲಿ ಒಗ್ಗಟ್ಟು ಸಾಧ್ಯವೇ ?

ಆದ್ದರಿಂದ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬೇಕೆಂದರೂ, ಸಿದ್ದರಾಮಯ್ಯ ಅವರ ಸಹಮತದೊಂದಿಗೆ ಮಾಡಬೇಕು. ಒಂದು ವೇಳೆ ಅದಾಗದಿದ್ದರೆ, ಸರಕಾರದ ಸ್ಥಿರತೆಯೊಂದಿಗೆ, 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆಯಾಗುತ್ತದೆ ಎನ್ನುವ ಆತಂಕವಿದೆ. ಹೈಕಮಾಂಡ್ ಈ ವಿಷಯದಲ್ಲಿ ಡಿಕೆಶಿಯವರಿಗೆ ಸಿಗಬೇಕಾದ ನ್ಯಾಯಕ್ಕಿಂತ ಹೆಚ್ಚಾಗಿ ಪಕ್ಷದ ಭವಿಷ್ಯದ ಬಗ್ಗೆಯೂ ಆಲೋಚಿಸುತ್ತಿದೆ.

ಹಾಗೆಂದು, ಡಿ.ಕೆ.ಶಿವಕುಮಾರ್ ಅವರನ್ನು ಹಾಗೂ ಅವರ ಆಕಾಂಕ್ಷೆಯನ್ನು ಪರಿಪೂರ್ಣವಾಗಿ ಬದಿಗಿಟ್ಟು ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ದೆಹಲಿ ನಾಯಕರಿಲ್ಲ. ಆದ್ದರಿಂದ ಅಧಿಕಾರ ಹಸ್ತಾಂತರವಾಗಬೇಕು ಎನ್ನುವುದು ಎಷ್ಟು ನಿಜವೋ, ಈ ಅಧಿಕಾರ ವರ್ಗಾವಣೆ ಪ್ರಕ್ರಿಯೆಯನ್ನು ಅಷ್ಟೇ ಸುಲಲಿತವಾಗಿ ಮುಗಿಸಬೇಕು ಎನ್ನುವುದು ಕೂಡ ಹೈಕಮಾಂಡ್‌ನ ಆಲೋಚನೆಯಾಗಿದೆ.

ಈ ಇಕ್ಕಟ್ಟಿನಲ್ಲಿ ಹೈಕಮಾಂಡ್ ಸಿಲುಕಿರುವ ಸ್ಪಷ್ಟ ಅರಿವಿರುವ ಕಾರಣಕ್ಕೆ ಸಿದ್ದರಾಮಯ್ಯ ಅವರು ಸಮಯದೂಡುವ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ‘ನಾನೇ ಐದು ವರ್ಷ ಮುಖ್ಯಮಂತ್ರಿ’ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು, ಇತ್ತೀಚಿನ ದಿನದಲ್ಲಿ ‘ಹೈಕಮಾಂಡ್ ಮಾತಿಗೆ ಬದ್ಧ’ ಎನ್ನುವ ಮಾತನ್ನು ಆಡುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರು ಕೇಳಿದ ‘ಡಿಕೆ ಸಿಎಂ ಯಾವಾಗ?’ ಎನ್ನುವ ಪ್ರಶ್ನೆಗೆ ‘ಹೈಕಮಾಂಡ್ ಹೇಳಿದಾಗ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ’ ಎನ್ನುವ ಮೂಲಕ ಪೂರ್ಣಾವಧಿ ಸಿಎಂ ಹೇಳಿಕೆಯಿಂದ ಒಂದು ಹೆಜ್ಜೆ ಹಿಂದೆ ಸರಿದರು. ಈ ನಡುವೆ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯದಲ್ಲಿ ಮತ್ತೆ ಗೊಂದಲಕ್ಕೆ ಕಾರಣವಾಗಿದೆ.

ರಾಜ್ಯ ರಾಜಕೀಯದಲ್ಲಿ ಶುರುವಾಗಿರುವ ನಾಯಕತ್ವದ ವಿಷಯದ ಈ ಗೊಂದಲ ಜೀವಂತ ವಾಗಿರಬೇಕು ಎನ್ನುವುದು ಸಿದ್ದರಾಮಯ್ಯ ಆಪ್ತರ ಲೆಕ್ಕಾಚಾರವಾಗಿದೆ. ಈಗ ನಾಯಕತ್ವ ಬದಲಾ ವಣೆ ವಿಷಯದಲ್ಲಿ ಪರ-ವಿರೋಧ ಚರ್ಚೆಗಳಾಗಿ ಗೊಂದಲ-ಗೋಜಲು ಹೆಚ್ಚಾದರೆ, ಇಡೀ ಪ್ರಕ್ರಿಯೆಗೆ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ಹಾಕಲಿದೆ.

ಸದ್ಯ ಇದರಿಂದ ಬಚಾವಾದರೆ ತಮ್ಮ ಕುರ್ಚಿ ಸದ್ಯಕ್ಕೆ ಭದ್ರ ಎನ್ನುವುದು ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿದೆ. ಒಂದು ವೇಳೆ 2026ರ ಜನವರಿ ಎರಡನೇ ವಾರದವರೆಗೆ ನಾಯಕತ್ವ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಮಟ್ಟದಲ್ಲಿ ಯಾವುದೇ ಸಭೆ ನಡೆಯದಿದ್ದರೆ ಬಜೆಟ್‌ವರೆಗೆ ಬದಲಾವಣೆ ಯಾಗುವುದಿಲ್ಲ. ಬಜೆಟ್ ಬಳಿಕ ಕೇರಳ ವಿಧಾನಸಭಾ ಚುನಾವಣೆ ಬರುವುದರಿಂದ ಮುಂದಿನ ಜೂನ್‌ವರೆಗೆ ಇಡೀ ಪ್ರಕ್ರಿಯೆಗೆ ತಡೆ ತರಬಹುದು ಎನ್ನುವುದು ಸಿದ್ದರಾಮಯ್ಯ ಹಾಗೂ ಆಪ್ತರ ಲೆಕ್ಕಾಚಾರವಾಗಿದೆ.

ಇದಕ್ಕೆ ಪೂರಕ ಎನ್ನುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಹುಲ್ ಗಾಂಧಿ ಅವರ ಅತ್ಯಾಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಕೆ.ಸಿ. ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಕೇರಳ ಚುನಾವಣೆ ಮುಗಿಯುವ ತನಕ ಏನೂ ಆಗಲು ಬಿಡುವುದಿಲ್ಲ. ನಾನಿದ್ದೇನೆ’ ಎನ್ನುವ ಭರವಸೆಯನ್ನು ನೀಡಿದ್ದಾರೆ.

ಹಾಗೆ ನೋಡಿದರೆ, ಸರಕಾರವು ಎರಡೂವರೆ ವರ್ಷದ ಪೂರೈಸಿದ ಕೂಡಲೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬದಲಾವಣೆಯ ಕೂಗಿಗೆ ನಿರೀಕ್ಷೆ ಮೀರಿದ ವೇಗ ನೀಡಿದರು. ಬಿಹಾರ ಚುನಾವಣೆಯ ಹೀನಾಯ ಸೋಲು, ರಾಷ್ಟ್ರ ರಾಜಕಾರಣದಲ್ಲಿ ಹಿಂದುಳಿದ ವರ್ಗದ ನಾಯಕನ ಪರವಾಗಿ ರಾಜಕೀಯ ಗಾಳಿಯಿದೆ ಎನ್ನುವ ಸ್ಪಷ್ಟತೆ ಇದ್ದರೂ ತಮ್ಮ ಆಪ್ತರನ್ನು ದೆಹಲಿಯಲ್ಲಿ ಪರೇಡ್ ಮಾಡಿಸುವ ಮೂಲಕ ವಿನೂತನ ಅಸ ಪ್ರಯೋಗಿಸಿದ್ದರು.

ಚುನಾವಣೆಯ ಸೋಲಿನ ಸಮಯದಲ್ಲಿ ಕರ್ನಾಟಕದಂಥ ಪ್ರಮುಖ ರಾಜ್ಯದ ಮುಖ್ಯಮಂತ್ರಿ ಯನ್ನು, ಅದರಲ್ಲಿಯೂ ಅಹಿಂದ ನಾಯಕನನ್ನು ಬದಲಾವಣೆ ಮಾಡುವಷ್ಟು ರಿಸ್ಕ್ ಅನ್ನು ಹೈಕಮಾಂಡ್ ತೆಗೆದುಕೊಳ್ಳುವುದಿಲ್ಲ ಎನ್ನುವ ಸ್ಪಷ್ಟತೆ ಇದ್ದರೂ ಆ ಪ್ರಯೋಗ ಮಾಡಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಸಮಯ ಕೂಡಿಬರುವ ತನಕ ಕಾದರೆ, ತಮಗೇ ಡ್ಯಾಮೇಜ್ ಎನ್ನುವುದನ್ನು ಅರಿತುಕೊಂಡೇ ಡಿ.ಕೆ.ಶಿವಕುಮಾರ್ ಅವಸರದ ಹೆಜ್ಜೆಯಿಟ್ಟಿದ್ದಾರೆ.

ಏಕೆಂದರೆ, ಎರಡೂವರೆ ವರ್ಷ ಪೂರೈಸಿದ ಸಮಯದಲ್ಲಿ ಚುಕ್ಕಾಣಿ ಹಿಡಿಯದೇ, ಮೂರು, ಮೂರುವರೆ ವರ್ಷದ ಬಳಿಕ ಮುಖ್ಯಮಂತ್ರಿಯಾದರೆ, ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗುವುದು ಕಷ್ಟ. ಅದರಲ್ಲಿಯೂ 2026-27ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಂಡಿಸಿದರೆ ‘ಡಿಕೆ’ ಪಾಲಿಗೆ ಪೂರ್ಣ ಪ್ರಮಾಣದಲ್ಲಿ ಮಂಡಿಸಲು ಸಿಗುವುದು ಒಂದೇ ಬಜೆಟ್.

ಚುನಾವಣೆ ಮುನ್ನ ಮಂಡಿಸುವ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಘೋಷಣೆ ಸಾಧ್ಯವಿಲ್ಲ. ಇದರೊಂದಿಗೆ ಚುನಾವಣೆಗೆ ಆರು ತಿಂಗಳು ಇರುವಾಗಲೇ ಇಡೀ ಆಡಳಿತ ವ್ಯವಸ್ಥೆಯು ರಾಜಕಾರಣಿ ಗಳು ನಿರೀಕ್ಷೆ ಮಾಡಿದಷ್ಟು ಪೂರಕವಾಗಿ ಕೆಲಸ ಮಾಡುವುದಿಲ್ಲ.

ಅಧಿಕಾರಿಗಳು ಮಾತು ಕೇಳುವುದಿಲ್ಲ. ಈ ಎಲ್ಲ ಲೆಕ್ಕಾಚಾರದಲ್ಲಿ ಎರಡು ವರ್ಷಕ್ಕೆ ಮುಖ್ಯಮಂತ್ರಿ ಯಾಗಲು ಅವಕಾಶ ಸಿಕ್ಕರೂ, ಅದರಲ್ಲಿ ಒಂದೂವರೆ ವರ್ಷ ಮಾತ್ರ ಅಧಿಕಾರ ಅನುಭವಿಸಲು ಸಾಧ್ಯವಾಗುತ್ತದೆ. ಇದಿಷ್ಟೇ ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸರಕಾರದ ವಿರುದ್ಧ ಸಹಜ ವಾಗಿಯೇ ಏಳುವ ಆಡಳಿತ ವಿರೋಧಿ ಅಲೆಗೆ ಡಿ.ಕೆ.ಶಿವಕುಮಾರ್ ತಲೆ ಕೊಡಬೇಕಾಗುತ್ತದೆ.

ಈ ಎಲ್ಲಕ್ಕಿಂತ ಮಿಗಿಲಾಗಿ, ಸರಕಾರಕ್ಕೆ ಎರಡೂವರೆ ವರ್ಷ ತುಂಬುವ ಹೊಸ್ತಿಲಿನಲ್ಲಿ ಸಿದ್ದರಾಮ ಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎನ್ನುವ ಹೇಳಿಕೆಗಳು ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಗೊಂದಲ ಸೃಷ್ಟಿಸಿತ್ತು. ಆದ್ದರಿಂದಲೇ ಅವಸರದಲ್ಲಿಯೇ ತಮ್ಮ ಕಾರ್ಡ್ ಅನ್ನು ಪ್ಲೇ ಮಾಡಿದರು.

ಈ ಗೊಂದಲಗಳ ನಡುವೆ ಪಕ್ಷದ ಹೈಕಮಾಂಡ್ ಕರ್ನಾಟಕದ ಪರಿಸ್ಥಿತಿಯಲ್ಲಿ ಕಡ್ಡಿ ಮುರಿದಂತೆ ಕ್ರಮವಹಿಸುವ ಮನಸ್ಥಿತಿಯಲ್ಲಿಲ್ಲ. ಏಕೆಂದರೆ, ಕಾಂಗ್ರೆಸ್ ಪಾಲಿಗೆ ಉಳಿದಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕದಲ್ಲಿಯೂ ಕಿರಿಕಿರಿಯಾಗಿ ಪಕ್ಷಕ್ಕೆ ಡ್ಯಾಮೇಜ್ ಆದರೆ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಪುಟಿದೇಳುವುದು ತೀರಾ ಕಷ್ಟವಾಗುತ್ತದೆ.

ಆದ್ದರಿಂದ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಅಹಿಂದ ಮತಬ್ಯಾಂಕ್ ಉಳಿಸಿಕೊಳ್ಳುವು ದರೊಂದಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಲವನ್ನು ಬಳಸಿಕೊಂಡು ಮುಂದಿನ ಚುನಾವಣೆ ಎದುರಿಸಬೇಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರಲ್ಲಿ ಯಾರಿಗೇ ಸಂತೈಸುವ ಪ್ರಯತ್ನ ಮಾಡಿದರೂ ಪಕ್ಷಕ್ಕೆ ಬಹು ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಹೊಡೆತವನ್ನು ತಪ್ಪಿಸಿಕೊಳ್ಳಲು ಇರಬಹುದಾದ ಸೂತ್ರವನ್ನು ಸಿದ್ಧಪಡಿಸಿಕೊಳ್ಳಲು ಸಮಯ ದೂಡುವುದೊಂದೇ ದೆಹಲಿ ನಾಯಕರ ಬಳಿಯಿರುವ ಪರಿಹಾರವಾಗಿದೆ. ಆ ಕಾರಣಕ್ಕಾಗಿಯೇ ನಾಯಕತ್ವವು, ವಿಷಯ ಚರ್ಚಿಸಲು ಬಯಸುವ ಯಾರಿಗೂ ಸಮಯ ನೀಡುತ್ತಿಲ್ಲ.

ಅದರಲ್ಲಿಯೂ ಸ್ಪಷ್ಟನೆ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿಯವರ ಪ್ರತ್ಯೇಕ ಸಮಾಲೋಚನೆಗೆ ಸಮಯ ಸಿಗುತ್ತಿಲ್ಲ. ಭಾನುವಾರ ಪ್ರತ್ಯೇಕ ವಾಗಿ ಭೇಟಿಯಾದರೂ ಅದು ಒಂದೂವರೆ ನಿಮಿಷಕ್ಕೆ ಭೇಟಿಯಾದ ಚುಟುಕು ಸಭೆಯಾಗಿದೆ. ಈ ಭೇಟಿಯ ವೇಳೆಯೂ ‘ವಿಲ್ ಸಾರ್ಟ್ ಇಟ್ ಔಟ್ ಶಾರ್ಟ್ಲಿ’ ಎನ್ನುವ ಭರವಸೆಯನ್ನು ನೀಡಿzರೆಯೇ ಹೊರತು, ಯಾವಾಗ? ಯಾವ ರೀತಿಯಲ್ಲಿ? ಎನ್ನುವುದಕ್ಕೆ ಸ್ಪಷ್ಟನೆ ನೀಡಿಲ್ಲ.

ಈ ಎಲ್ಲದರ ನಡುವೆ ರಾಹುಲ್ ಗಾಂಧಿ ಅವರು ಡಿಸೆಂಬರ್ 17ಕ್ಕೆ ಜರ್ಮನಿ ಹಾಗೂ ಇಟಲಿಗೆ ಪ್ರಯಾಣಿಸುತ್ತಿದ್ದಾರೆ. ಈ ವಿದೇಶ ಪ್ರವಾಸ 21ಕ್ಕೆ ಮುಗಿದರೂ, ಪುನಃ 27ಕ್ಕೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. 21ರಿಂದ 27ರ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಲು ಉತ್ಸುಕರಾಗಿದ್ದರೂ, ಕೆ.ಸಿ.ವೇಣುಗೋಪಾಲ್ ಸದನ ಸಮಿತಿಯ ನೆಪದಲ್ಲಿ ನಾಲ್ಕು ದಿನಗಳ ಕಾಲ ತಮಿಳುನಾಡು ಪ್ರವಾಸವನ್ನು ಹಾಕಿಕೊಂಡಿ ದ್ದಾರೆ.

ವೇಣುಗೋಪಾಲ್ ಅವರು ದೆಹಲಿಯಲ್ಲಿ ಇಲ್ಲದಿರುವ ಸಮಯದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿ ದಂತೆ ‘ಪ್ರಮುಖ’ ನಿರ್ಣಯ ಕೈಗೊಳ್ಳಲು ಸಭೆ ಕರೆಯುವುದು ತೀರಾ ಅನುಮಾನ. ಆದ್ದರಿಂದ ರಾಜ್ಯ ನಾಯಕರಿಗೆ ಇನ್ನು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ‘ರಾಗಾ’ ಸಿಗುವುದೇ ಹೊಸ ವರ್ಷಕ್ಕೆ ಎನ್ನುವುದು ವಾಸ್ತಾವ. ಆದರೆ ಗೊಂದಲಕ್ಕೆ ತಾರ್ಕಿಕ ಅಂತ್ಯ ನೀಡದೇ, ಸಮಯ ದೂಡುವ ಪ್ರಯತ್ನ ಮಾಡಿದಷ್ಟೂ ರಾಜ್ಯ ಕಾಂಗ್ರೆಸ್‌ನಲ್ಲಿ ಸ್ಪಷ್ಟನೆ ಸಿಗದೇ, ಈಗಿರುವ ಗೊಂದಲ ಕಾರಿ ಹೇಳಿಕೆಗಳು ಇನ್ನಷ್ಟು ಹೆಚ್ಚಾಗುವುದು ಖಚಿತ.

ಈ ಗೊಂದಲದಿಂದಾಗುವ ಡ್ಯಾಮೇಜ್‌ಗಳನ್ನು ಹೈಕಮಾಂಡ್ ಯಾವ ರೀತಿ ಸರಿಪಡಿಸಲಿದೆ ಎನ್ನುವುದೇ ಮುಂದಿರುವ ಬಹುದೊಡ್ಡ ಪ್ರಶ್ನೆ...