ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghava Sharma Nidle Column: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧದ ಹಿಂದಿನ ಗುಟ್ಟೇನು ?

ಅಕ್ರಮ ವಲಸಿಗರು ಭಾರತೀಯ ಮತದಾರರಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಅಪಾಯ ಕಾರಿ. ಈ ಹಿನ್ನೆಲೆಯಲ್ಲಿ ಬಂಗಾಳದಂಥ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎಂದೋ ನಡೆಯಬೇಕಿತ್ತು. ಆದರೆ, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಂದಾಯಿತು. ಮತಪಟ್ಟಿ ಪರಿಷ್ಕರಣೆ ಎನ್ನುವುದು ಬಹಳ ಅಗಾಧವಾದ, ವಿಸ್ತೃತ ವಾದ ಪ್ರಕ್ರಿಯೆ.

ಜನಪಥ

ಸುಪ್ರೀಂಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಅವರ ವಾದ ಮಂಡನೆಯಿಂದ ಕೇಸಿನಲ್ಲಿ ಭಾರಿ ಬದಲಾವಣೆಯಾಗಿ ಬಿಡುತ್ತದೆ ಎಂದೇನಲ್ಲ. ಚುನಾವಣೆ ಹೊಸ್ತಿಲಲ್ಲಿರುವ ಬಂಗಾಳ ದಲ್ಲಿ ಮತದಾರರ ಗಮನ ಸೆಳೆಯಲು ಅವರಿಗೆ ಅವಕಾಶವೊಂದು ಬೇಕಿತ್ತು ಮತ್ತು ವೈಫಲ್ಯ ಗಳನ್ನು ಮರೆಮಾಚಿ, ‘ತಾವು ಜನಪರ’ ಎಂಬ ಪ್ರಬಲ ರಾಜಕೀಯ ನರೇಟಿವ್ ಅನ್ನು ರೂಪಿಸಬೇಕಿತ್ತು.

2005ರ ಆಗಸ್ಟ್ 4. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ವರ್ಷ ಕಳೆದು ಲೋಕಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭವದು.

“ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ವಲಸೆ ಹೆಚ್ಚುತ್ತಿರುವ ಬಗ್ಗೆ ಸದನದಲ್ಲಿ ಚರ್ಚೆಯಾಗ ಬೇಕು" ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಲೋಕಸಭಾ ಸದಸ್ಯೆ ಮಮತಾ ಬ್ಯಾನರ್ಜಿ ಅವರು ಭಾರಿ ಪ್ರತಿಭಟನೆ ನಡೆಸುತ್ತಿದ್ದರು. ಬಾಂಗ್ಲಾದೇಶೀಯರ ಒಳನುಸುಳು ವಿಕೆ ಬಂಗಾಳಕ್ಕೆ ಬಹುದೊಡ್ಡ ವಿಪತ್ತಾಗಿ ಪರಿಣಮಿಸಿದೆ ಎಂದಿದ್ದ ಮಮತಾ, ಬಂಗಾಳದ ಮತದಾರರ ಪಟ್ಟಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನೂ ಸೇರಿಸಲಾಗಿದೆ, ಇದಕ್ಕೆ ತಮ್ಮ ಬಳಿ ಪುರಾವೆಗಳಿವೆ ಎಂದು ಹೇಳಿಕೊಂಡಿದ್ದರು. ಆದರೆ, ಈ ಕುರಿತ ಚರ್ಚೆಯ ಬೇಡಿಕೆಯನ್ನು ಉಪ ಸಭಾಪತಿ ಚರಣ್‌ಜಿತ್ ಸಿಂಗ್ ಅಟ್ವಾಲ್ ಅವರು ತಿರಸ್ಕರಿಸಿದ್ದರು. ಇದರಿಂದ ಕೆಂಡಾಮಂಡಲಗೊಂಡಿದ್ದ ಮಮತಾ, ಸದನದ ಬಾವಿಗಿಳಿದು, ಸಭಾಧ್ಯಕ್ಷರ ಮೇಲೆ ಕಾಗದಪತ್ರಗಳ ಕಂತೆಗಳನ್ನು ಎಸೆದಿದ್ದರು.

“ನಮ್ಮ ಸಮಸ್ಯೆಗಳಿಗೆ ಸದನ ಸ್ಪಂದಿಸುತ್ತಿಲ್ಲ ಮತ್ತು ಜನರ ತೊಂದರೆಗಳನ್ನು ಪ್ರಸ್ತಾಪಿಸಲು ಸಾಧ್ಯ ವಿಲ್ಲದಿದ್ದರೆ ಸಂಸತ್ ಸದಸ್ಯರಾಗಿ ಇರುವುದರಲ್ಲಿ ಅರ್ಥವಿಲ್ಲ" ಎಂದು ಸಿಟ್ಟಾದ ಮಮತಾ, ಸದನಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಆದರೆ, ರಾಜೀನಾಮೆ ಸರಿಯಾದ ಸ್ವರೂಪದಲ್ಲಿಲ್ಲ ಎಂದು ಲೋಕಸಭೆ ಸ್ಪೀಕರ್ ಸೋಮನಾಥ್ ಚಟರ್ಜಿ ಅದನ್ನು ತಿರಸ್ಕರಿಸಿದ್ದರು.

ಇದೇ ಮಮತಾ ಬ್ಯಾನರ್ಜಿ ಅಸ್ಸಾಂನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಪ್ರವೇಶಕ್ಕೆ ತಡೆಯೊಡ್ಡುವ ಸಲುವಾಗಿ ಕೇಂದ್ರ ಸರಕಾರ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡಲು ಮುಂದಾದಾಗ ತಮ್ಮ 2005ರ ನಿಲುವನ್ನು ಬದಲಿಸಿ, “ಪಶ್ಚಿಮ ಬಂಗಾಳದಲ್ಲಿ ಕೂಡ ಇದು ಅಂತರ್ಯುದ್ಧ ಮತ್ತು ರಕ್ತಪಾತಕ್ಕೆ ಕಾರಣವಾಗಲಿದೆ" ಎಂದು ಕೇಂದ್ರ ಸರಕಾರಕ್ಕೆ ಬೆದರಿಕೆ ಹಾಕಿದ್ದರು.

ನಂತರ, 2014ರ ಪೂರ್ವದಲ್ಲಿ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳಿಗೆ ಭಾರತದ ಪೌರತ್ವ ನೀಡುವ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನೂ (ಸಿಎಎ) ಮಮತಾ ಬ್ಯಾನರ್ಜಿ ವಿರೋಧಿಸಿದರು. ಇದೀಗ, ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆಯನ್ನೂ (ಎಸ್‌ಐಆರ್) ವಿರೋಧಿಸುತ್ತಾ ಭುಸುಗುಡುತ್ತಿದ್ದಾರೆ.

ಇದನ್ನೂ ಓದಿ: Raghava Sharma Nidle Column: ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

ಎಂದಿನಂತೆ, ತಮ್ಮ ನಾಟಕೀಯ ಶೈಲಿಯಲ್ಲಿ ಕೇಂದ್ರ ಸರಕಾರ ಪ್ರೇರಿತ ಭಾರಿ ದೊಡ್ಡ ಅನಾಹುತ ವೊಂದು ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂಬಂತೆ ಬೊಬ್ಬಿಡುತ್ತಿದ್ದಾರೆ. ಒಟ್ಟಿನಲ್ಲಿ, ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಹೈಡ್ರಾಮಾವನ್ನು ನಾವು ನೋಡುವಂತಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಎಲ್ಲಿ ತಮ್ಮ ಬೆಂಬಲಿಗ (ವಲಸಿಗ) ಮತವರ್ಗ ಕಳೆದು ಹೋಗುತ್ತದೋ ಎಂಬ ಭಯದಿಂದ, ಹೇಗಾದರೂ ಸರಿ, ಮತದಾರರ ಪಟ್ಟಿ ಪರಿಷ್ಕರಣೆಯನ್ನು ತಡೆಯಲೇಬೇಕು ಎಂದು ಮಮತಾ ಪಣತೊಟ್ಟಂತಿದೆ. ಆದರೆ, ಸುಪ್ರೀಂಕೋರ್ಟ್ ಸಿಜೆಐ ಸೂರ್ಯಕಾಂತ್ ಅವರು ಬಂಗಾಳ ಸರಕಾರದ ವಿರೋಧಕ್ಕೆ ಸೊಪ್ಪು ಹಾಕದಿರುವುದು ಗಮನಾರ್ಹ ಬೆಳವಣಿಗೆ.

ಬಂಗಾಳದಲ್ಲಿ ಬಾಂಗ್ಲಾ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿರುವುದು ಮತ್ತು ಅವರು ಆಧಾರ್ ಕಾರ್ಡ್, ಮತಚೀಟಿಗಳನ್ನು ಹೊಂದಿರುವುದು ಹೊಸ ವಿಷಯವೇನಲ್ಲ. ಬಂಗಾಳದಲ್ಲಿ ಬಾಂಗ್ಲಾ ದೊಂದಿಗೆ ಗಡಿಬೇಲಿ ಹೊಂದಿರುವ ರಾಜ್ಯದ ಗಡಿ ಜಿಲ್ಲೆಗಳ ಮೂಲಕ ಭಾರತ ಪ್ರವೇಶಿಸುವ ಬಾಂಗ್ಲಾ ನಿವಾಸಿಗರು, ಈಗ ಭಾರತದಾದ್ಯಂತ ತಮ್ಮ ನೆಲೆಗಳನ್ನು ವಿಸ್ತರಿಸಿಕೊಂಡಿದ್ದಾರೆ.

ಪಂಚಾಯತ್‌ನಿಂದ ಹಿಡಿದು ಲೋಕಸಭೆ ಚುನಾವಣೆ ತನಕ ಎಲ್ಲಾ ಚುನಾವಣೆಗಳಲ್ಲೂ ಈ ಅಕ್ರಮ ವಲಸಿಗರು ಮತದಾನ ಮಾಡುತ್ತಾ ಬಂದಿದ್ದಾರೆ ಮತ್ತು ಇದನ್ನು ಬಂಗಾಳದ ಜನರೂ ಒಪ್ಪಿಕೊಳ್ಳುತ್ತಾರೆ. ಗಡಿ ಭಾಗದ ಜಿಲ್ಲೆಗಳಿಗೆ ಭೇಟಿ ನೀಡಿದರೆ, ಬಾಂಗ್ಲಾ ಮಂದಿ ಭಾರತಕ್ಕೆ ಒಳ ನುಸುಳುವ ಬಗೆ ಹೇಗೆ ಎಂಬುದರ ನೈಜ ಚಿತ್ರಣ ಸಿಗುತ್ತದೆ.

Mamata Banerjee

ಇತ್ತೀಚಿನ ವರ್ಷಗಳಲ್ಲಿ ಇಂಡೋ-ಬಾಂಗ್ಲಾ ಗಡಿಗಳ ಹಳ್ಳಿಗಳಲ್ಲಿ ಫೆನ್ಸಿಂಗ್ (ಕಬ್ಬಿಣದ ಬೇಲಿ) ಬಿಗಿಯಾದ ಹಿನ್ನೆಲೆಯಲ್ಲಿ ಒಳನುಸುಳುವುದು ಸುಲಭ ಸಾಧ್ಯವಾಗುತ್ತಿಲ್ಲ. ಅಕ್ರಮ ವಲಸೆ, ಕಳ್ಳಸಾಗಣೆ ತಡೆಯಲು ಬಾಂಗ್ಲಾದೇಶದೊಂದಿಗಿನ ತನ್ನ 4,096.7 ಕಿ.ಮೀ. ಗಡಿಯಲ್ಲಿ ಭಾರತವು ಬೇಲಿಗಳನ್ನು ಹಾಕಿದ್ದು, ಸುಮಾರು 3200 ಕಿ.ಮೀ. (ಇದು ಶೇ.79ಕ್ಕಿಂತ ಹೆಚ್ಚು) ಪೂರ್ಣಗೊಂಡಿದೆ.

ದಟ್ಟಾರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳುಳ್ಳ ಸುಮಾರು 850-900 ಕಿ.ಮೀ. ಬೇಲಿಯಿಲ್ಲದೆ ಉಳಿದಿದೆ. ಈ ನಡುವೆಯೂ, ನದಿ ಮೂಲಕ ಅಥವಾ ಅನ್ಯ ಮಾರ್ಗಗಳ ಮುಖೇನ ಅಕ್ರಮವಾಗಿ ಭಾರತವನ್ನು ಅಕ್ರಮ ವಲಸಿಗರು ಪ್ರವೇಶಿಸುವುದು ಮುಂದುವರಿಯುತ್ತಿದೆ.

ಅಕ್ರಮ ವಲಸಿಗರು ಭಾರತೀಯ ಮತದಾರರಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಅಪಾಯ ಕಾರಿ. ಈ ಹಿನ್ನೆಲೆಯಲ್ಲಿ ಬಂಗಾಳದಂಥ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎಂದೋ ನಡೆಯಬೇಕಿತ್ತು. ಆದರೆ, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಂದಾಯಿತು. ಮತಪಟ್ಟಿ ಪರಿಷ್ಕರಣೆ ಎನ್ನುವುದು ಬಹಳ ಅಗಾಧವಾದ, ವಿಸ್ತೃತ ವಾದ ಪ್ರಕ್ರಿಯೆ.

ಇದು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳುವುದಿಲ್ಲ. ಕನಿಷ್ಠ ಒಂದು ವರ್ಷವಾದರೂ ಬೇಕು ಎಂದು ತಜ್ಞರೇ ಹೇಳುತ್ತಾರೆ. ಹೀಗಿದ್ದಾಗ, ಮಾರ್ಚ್-ಏಪ್ರಿಲ್ ತಿಂಗಳ ಬಂಗಾಳ ವಿಧಾನಸಭೆ ಚುನಾವಣೆ ಆರಂಭಕ್ಕೆ ಮುನ್ನ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾದ ದೈತ್ಯ ಸವಾಲು ಚುನಾವಣಾ ಆಯೋಗದ ಮುಂದಿದೆ ಮತ್ತು 2 ದಿನಗಳ ಹಿಂದಿನ ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗಕ್ಕೆ ನೀಡಲಾಗಿದ್ದ ಗಡುವನ್ನು ವಿಸ್ತರಿಸಲಾಗಿದೆ.

2011ರಿಂದ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾಗೆ ಈ ಬಾರಿ ಬಿಜೆಪಿ ಪ್ರಬಲ ಸವಾಲೊಡ್ಡಿದೆ. ಬಿಹಾರ ಚುನಾವಣೆ ಫಲಿತಾಂಶವು ಸಹಜವಾಗಿಯೇ ಮಮತಾರ ನಿದ್ದೆಗೆಡಿಸಿದೆ. ಏತನ್ಮಧ್ಯೆ, ಮತದಾರರ ಪಟ್ಟಿ ಪರಿಷ್ಕರಣೆ ಪರಿಣಾಮ 1 ಕೋಟಿಗಿಂತಲೂ ಹೆಚ್ಚು ಮತದಾರರ (ನಕಲಿ?) ಹೆಸರು ಪಟ್ಟಿಯಿಂದ ಅಳಿಸಿಹೋಗುವ ಸಾಧ್ಯತೆ ಇರುವುದರಿಂದ ಸಹಜವಾಗಿಯೇ ಟಿಎಂಸಿ ಮತ್ತು ಮಮತಾರ ಆತಂಕ ಹೆಚ್ಚಾಗಿದೆ.

ಇದೇ ಕಾರಣಕ್ಕಾಗಿ, ಭಾರತೀಯ ರಾಜಕಾರಣದಲ್ಲಿ ಪ್ರಪ್ರಥಮ ಬಾರಿಗೆ ಎಂಬಂತೆ ಫೆ.4ರಂದು ಖುದ್ದಾಗಿ ರಾಜ್ಯದ ಮುಖ್ಯಮಂತ್ರಿಯೊಬ್ಬರು (ಮಮತಾ) ಸುಪ್ರೀಂಕೋರ್ಟ್‌ಗೆ ಬಂದು ವಾದ ಮಂಡಿಸುವ ದೃಶ್ಯಕ್ಕೆ ದೇಶ ಸಾಕ್ಷಿಯಾಯಿತು.

ವಿವಾಹವಾದ ನಂತರ ಹೆಸರು, ವಿಳಾಸಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಾದರೂ ಅಂಥವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗುತ್ತಿದೆ ಎಂದು ಆತಂಕ ಹೊರ ಹಾಕಿದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ 1.36 ಕೋಟಿ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿzರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿದ ಆಯೋಗ, “ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳಿಂದಲೇ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗು ತ್ತಿದೆ. ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸಲು ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದೆ" ಎಂದು ಆರೋಪಿಸಿತು.

ಫೆ.9ರ ವಿಚಾರಣೆ ವೇಳೆ ಮಮತಾ ಬ್ಯಾನರ್ಜಿಯವರಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಯಾವುದೇ ಅಡೆತಡೆಯನ್ನು ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. ಯಾವುದೇ ಆದೇಶ ಅಥವಾ ಸ್ಪಷ್ಟೀಕರಣದ ಅಗತ್ಯವಿದ್ದರೂ, ನಾವು ತಿಳಿಸುತ್ತೇವೆ. ಆದರೆ ‘ಎಸ್‌ಐಆರ್’ಗೆ ಯಾವುದೇ ಅಡೆತಡೆ ಇರಬಾರದು. ಇದನ್ನು ಎಲ್ಲಾ ರಾಜ್ಯಗಳು ಅರ್ಥಮಾಡಿಕೊಳ್ಳಬೇಕು ಎಂದು ಸಿಜೆಐ ಸೂರ್ಯಕಾಂತ್ ಹೇಳಿರುವು ದರಿಂದ ಬಂಗಾಳದಲ್ಲಿ ‘ಎಸ್ಐಆರ್’ ಪ್ರಕ್ರಿಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದು ಮಮತಾರಿಗೆ ಅನಿವಾರ್ಯವಾಗಲಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಎಚ್ಚರಿಕೆ ನೀಡಿರುವ ಸುಪ್ರೀಂಕೋರ್ಟ್, ‘ಎಸ್‌ಐಆರ್’ ಹೆಸರಲ್ಲಿ ಆಗುತ್ತಿರುವ ಹಿಂಸಾಚಾರವನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ರಾಜ್ಯದ ಕಾನೂನು-ಸುವ್ಯವಸ್ಥೆ ಕುಸಿಯಲು ರಾಜ್ಯ ಸರಕಾರದ ಆಡಳಿತ ಯಂತ್ರ ಕಾರಣವಾದರೂ, ಈ ವೈಫಲ್ಯಕ್ಕೆ ಮಮತಾ ಬ್ಯಾನರ್ಜಿಯವರು ಕೇಂದ್ರದೆಡೆಗೆ ಬೊಟ್ಟು ಮಾಡುತ್ತಿದ್ದಾರೆ!

ಸುಪ್ರೀಂಕೋರ್ಟ್‌ನಲ್ಲಿನ ಮಮತಾ ಬ್ಯಾನರ್ಜಿ ಅವರ ವಾದ ಮಂಡನೆಯಿಂದ ಕೇಸಿನಲ್ಲಿ ಭಾರಿ ಬದಲಾವಣೆಯಾಗಿ ಬಿಡುತ್ತದೆ ಎಂದೇನಲ್ಲ. ಚುನಾವಣೆ ಹೊಸ್ತಿಲಲ್ಲಿರುವ ಬಂಗಾಳದಲ್ಲಿ ಜನರ ಗಮನ ಸೆಳೆಯಲು ಮಮತಾಗೆ ಅವಕಾಶವೊಂದು ಬೇಕಿತ್ತು ಮತ್ತು ಸರಕಾರದ ಆಡಳಿತ ವೈಫಲ್ಯ ಗಳನ್ನು ಮರೆಮಾಚಿ, ‘ತಾವು ಜನಪರ’ ಎಂಬ ಪ್ರಬಲ ರಾಜಕೀಯ ನರೇಟಿವ್ ಅನ್ನು ರೂಪಿಸಲು ಮತ್ತು ಪಕ್ಷದ ಇಮೇಜ್ ವೃದ್ಧಿಸಲು ಅವರು ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ಕಾಣಿಸಿ ಕೊಳ್ಳುವುದನ್ನೇ ಅಸ್ತ್ರವಾಗಿ ಬಳಸಿಕೊಂಡರು.

“ಬಂಗಾಳಕ್ಕೆ ಇಂದು ಐತಿಹಾಸಿಕ ದಿನ. ಬಂಗಾಳದ ಮುಖ್ಯಮಂತ್ರಿ ಜನರ ಹಕ್ಕುಗಳಿಗಾಗಿ ಹೇಗೆ ಹೋರಾಡಿದರು ಎಂಬುದನ್ನು ನೋಡಿ. ಅವರು ಸಾಮಾನ್ಯ ಜನರಿಗಾಗಿ ನಿರಂತರವಾಗಿ ಹೋರಾ ಡುವ ಏಕೈಕ ನಾಯಕಿ" ಎಂದು ಟಿಎಂಸಿ ನಾಯಕರೆಲ್ಲರೂ ಹಾಡಿ ಹೊಗಳಿದರು. ಹಾಗಂತ, ಇಂಥಾ ನಾಟಕಗಳು ಟಿಎಂಸಿಗೆ ಮಾತ್ರ ಸೀಮಿತವೇನಲ್ಲ. ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ಇಂಥಾ ರಾಜಕೀಯ ‘ನಾಟಕ’ಗಳನ್ನು ಆಗಾಗ್ಗೆ ಮಾಡುತ್ತಲೇ ಇರುತ್ತವೆ..!

ಕೇಂದ್ರ ಚುನಾವಣಾ ಆಯೋಗ ನಿರ್ದಿಷ್ಟ ವರ್ಗದ ಮತದಾರರ ಹೆಸರನ್ನು ಅಳಿಸಿಹಾಕುತ್ತಿದೆ ಎಂಬ ಮಮತಾ ಬ್ಯಾನರ್ಜಿಯವರ ಆರೋಪಕ್ಕೆ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ದನಿಗೂಡಿಸಿದ್ದಾರೆ. ಮುಖ್ಯವಾಗಿ, ಮುಸ್ಲಿಂ ಧರ್ಮೀಯರ ಮತವರ್ಗ ವನ್ನು ಗುರಿಮಾಡಲಾಗುತ್ತಿದೆ ಎನ್ನುವುದು ಅವರ ಆರೋಪದ ಸಾರ.

ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎನ್ನುವುದು ಗುಟ್ಟಿನ ವಿಷಯವೇನಲ್ಲ. ಹೀಗಾಗಿ, ಬಿಜೆಪಿ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳ ಅಲ್ಪಸಂಖ್ಯಾತ ಮತದಾರರು ಹರಕೆಯ ಕುರಿಗಳಾಗುತ್ತಿದ್ದಾರೆ ಎಂದು ಟಿಎಂಸಿ ಹೇಳುತ್ತಿದೆ.

ಹಾಗಂತ, ಈ ಆರೋಪಗಳಿಗೆ ಸಾಕ್ಷ್ಯಾಧಾರಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗಿಲ್ಲ. ಬಂಗಾಳ ದಲ್ಲಿ 2021ರ ಫಲಿತಾಂಶ ಗಮನಿಸುವುದಾದರೆ, 294 ಸ್ಥಾನಗಳಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 77 ಸ್ಥಾನಗಳೊಂದಿಗೆ ಪ್ರಮುಖ ವಿಪಕ್ಷವಾಗಿ ಹೊರಹೊಮ್ಮಿತ್ತು. 35 ಕ್ಷೇತ್ರಗಳಲ್ಲಿನ ಫಲಿತಾಂಶವು 5000ಕ್ಕಿಂತ ಕಡಿಮೆ ಮತಗಳ ಅಂತರದಿಂದ ನಿರ್ಧರಿಸಲ್ಪಟ್ಟಿತ್ತು.

ಈ 35 ಸ್ಥಾನಗಳಲ್ಲಿ, ಬಿಜೆಪಿ 22 ಮತ್ತು ಟಿಎಂಸಿ 12 ಸ್ಥಾನಗಳನ್ನು ಗೆದ್ದಿದ್ದವು. ಕಲಿಂಪಾಂಗ್ ಕ್ಷೇತ್ರ ದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಬಿಜೆಪಿಯನ್ನು 3870 ಮತಗಳಿಂದ ಸೋಲಿಸಿದ್ದರು. ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ 1956 ಮತಗಳಿಂದ ಸೋತರು.

2024ರ ಲೋಕಸಭೆ ಚುನಾವಣೆಯಲ್ಲಿ ಈ 35 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಟಿಎಂಸಿ ಕೇವಲ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಸಿಪಿಐ-ಎಂ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಂದಾಗಿ ಮತ ವಿಭಜನೆ ಹೆಚ್ಚಾಗಿ ಟಿಎಂಸಿ ನಷ್ಟ ಅನುಭವಿಸಿತ್ತು. ಹೀಗಾಗಿ, 2026ರ ಮತದಾರರರ ಪಟ್ಟಿ ಪರಿಷ್ಕರಣೆ ನಂತರ ಇಂಥ ಕಡಿಮೆ ಅಂತರದಲ್ಲಿ ಫಲಿತಾಂಶ ಹೊರಬರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬಹುದು ಎನ್ನುವುದು ಟಿಎಂಸಿ ಆತಂಕ. ಅದೇ ಕಾರಣಕ್ಕಾಗಿ, ‘ಎಸ್ಐಆರ್’ಗೆ ಟಿಎಂಸಿಯಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ.

ಚುನಾವಣಾ ಆಯೋಗಕ್ಕೆ ಕಾಲಕಾಲಕ್ಕೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಸುವ ಶಾಸನಬದ್ಧ ಹಕ್ಕಿದೆ. ನಕಲಿ ಮತದಾರರನ್ನು ಪಟ್ಟಿಯಿಂದ ಕಿತ್ತುಹಾಕುವ ಪ್ರಕ್ರಿಯೆ ಆಗಾಗ ನಡೆಯುತ್ತಿರಲೇಬೇಕು. ಆದರೆ ವಿಧಾನಸಭೆ ಚುನಾವಣೆಗೆ ಕೇವಲ ಒಂದೆರಡು ತಿಂಗಳುಗಳ ಮೊದಲು ಏಕೆ ನಡೆಸಬೇಕು? ಅದಕ್ಕಿಂತ ಮೊದಲೇ ಇಂಥದ್ದೊಂದು ಪ್ರಕ್ರಿಯೆ ಕೈಗೊಳ್ಳಬಹು ದಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

2003 ಮತ್ತು 2024ರ ನಡುವೆ, ಲೋಕಸಭೆಗೆ ಐದು ಚುನಾವಣೆಗಳು ಮತ್ತು ರಾಜ್ಯಗಳಲ್ಲಿ ಹಲವು ವಿಧಾನಸಭೆ ಚುನಾವಣೆಗಳು ನಡೆದಿವೆ. ಆದರೆ ಈ ಅವಧಿಯಲ್ಲಿ ಆಯೋಗ ‘ಎಸ್‌ಐಆರ್’ ಅನ್ನು ನಡೆಸಲಿಲ್ಲ. ಹೀಗಾಗಿ, ಬಿಹಾರ ಚುನಾವಣೆಗಳಿಗೆ ಸ್ವಲ್ಪ ಮೊದಲು ಮತ್ತು ಈಗ ಕೇರಳ, ತಮಿಳು ನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಕೆಲವು ತಿಂಗಳುಗಳಿಗೆ ಮೊದಲು ಪಟ್ಟಿ ಪರಿಷ್ಕರಣೆ ಮಾಡುತ್ತಿರುವುದರಿಂದ ಸಹಜವಾಗಿಯೇ ಚುನಾವಣಾ ಆಯೋಗ ಮತ್ತೊಮ್ಮೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಆದರೆ, ಈ ಪ್ರಕ್ರಿಯೆಗೆ ಈಗ ಸುಪ್ರೀಂಕೋರ್ಟ್ ಅನುಮೋದನೆಯೂ ಸಿಕ್ಕಿರುವುದರಿಂದ ಬರುವ ಬಂಗಾಳ ಚುನಾವಣಾ ಕದನದ ರೋಚಕತೆ ಮತ್ತು ಆಕ್ರಮಣಶೀಲತೆ ಮತ್ತಷ್ಟು ಹೆಚ್ಚಲಿದೆ.

(ಲೇಖಕರು ಹಿರಿಯ ಪತ್ರಕರ್ತರು)

ಕೆ. ರಾಘವ ಶರ್ಮ ನಿಡ್ಲೆ

View all posts by this author