ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghava Sharma Nidle Column: ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಹಲವು ದಶಕಗಳ ಹೋರಾಟದ ನಂತರ ಸುಪ್ರೀಂ ಕೋರ್ಟ್‌ನಿಂದ ಸಮಾಧಾನಕರ ತೀರ್ಪು ಪಡೆದುಕೊಂಡ ಕರ್ನಾಟಕಕ್ಕೆ ಉದ್ದೇಶಿತ ಮೇಕೆದಾಟು ಜಲಾಶಯ ನಿರ್ಮಾಣ, ಕೃಷ್ಣಾ ಕಣಿವೆಯಲ್ಲಿ ಆಲಮಟ್ಟಿ ಜಲಾಶಯ ಎತ್ತರ ಏರಿಸುವಿಕೆ, ಮಹದಾಯಿ ನದಿಯಿಂದ ಕಳಸಾ ಮತ್ತು ಬಂಡೂರಿ ನಾಲೆ ಮೂಲಕ ಮಲ ಪ್ರಭಾ ನದಿಯ ನೀರು ಹೆಚ್ಚಿಸುವ ಯೋಜನೆಗಳನ್ನು ಮಾತ್ರ ಇನ್ನೂ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ.

ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

-

ಜನಪಥ

ಸಾಮಾನ್ಯವಾಗಿ, ಜಲವ್ಯಾಜ್ಯಗಳಲ್ಲಿ ಕೇಂದ್ರ ಸರಕಾರ ನೀಡುವ ಅಭಿಪ್ರಾಯಗಳು ನಿರ್ಣಾ ಯಕ ಪಾತ್ರವಹಿಸುವುದರಿಂದ ಕೇಂದ್ರದ ಮೇಲೆ ಪ್ರಭಾವ ಬೀರಲು ಯತ್ನಿಸ ಬೇಕಿತ್ತು. ಹಿಂದೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಈ ಕೆಲಸಗಳನ್ನು ಮಾಡುತ್ತಾ, ಕೇಂದ್ರ ಮತ್ತು ರಾಜ್ಯಕ್ಕೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು.

ಕಾವೇರಿ, ಕೃಷ್ಣಾ ಮತ್ತು ಮಹದಾಯಿ ನದಿನೀರು ಹಂಚಿಕೆಗೆ ಸಂಬಂಧಿಸಿ ಜಲವ್ಯಾಜ್ಯ ನ್ಯಾಯಾಧಿಕರಣಗಳಲ್ಲಿ ಕಾನೂನು ಹೋರಾಟ ಮಾಡಿದ್ದ ಕರ್ನಾಟಕ ಈಗ ತಮಿಳುನಾಡು ಜತೆಗಿನ ಪೆನ್ನಾರ್ ನದಿ (ದಕ್ಷಿಣ ಪಿನಾಕಿನಿ) ನೀರು ವಿವಾದಕ್ಕೆ ಸಂಬಂಧಿಸಿ ಮತ್ತೆ ನ್ಯಾಯಾಧಿಕರಣದ ಮೆಟ್ಟಿಲೇರುವುದು ಅನಿವಾರ್ಯವಾಗಿದೆ.

ಜಲವ್ಯಾಜ್ಯಗಳಲ್ಲಿ ವಿರೋಧಿ ರಾಜ್ಯಗಳೊಂದಿಗೆ ನಿತ್ಯವೂ ಹೋರಾಡಿ, ತನ್ನ ಪಾಲಿನ ನೀರಿಗಾಗಿ ನ್ಯಾಯದ ಮೊರೆ ಹೋಗುತ್ತಿದ್ದ ಕರ್ನಾಟಕಕ್ಕೆ ಪೆನ್ನಾರ್ ವಿಷಯದಲ್ಲಿ ನ್ಯಾಯಾಧಿಕರಣದ ಮುಂದೆ ನಿಲ್ಲಬೇಕಾಗಿ ಬಂದಿದೆ. ಪ್ರಕರಣವು ನ್ಯಾಯಾಧಿಕರಣಕ್ಕೆ ಹೋಗುವುದನ್ನು ಕರ್ನಾಟಕ ಬಯಸದಿದ್ದ ಕಾರಣ ಇದೊಂದು ಶಾಪವೇ ಸರಿ.

ದಕ್ಷಿಣ ಪೆನ್ನಾರ್, ಪೊನ್ನೈಯಾರ್ ಹಾಗೂ ತಮಿಳಿನಲ್ಲಿ ತೆನ್ ಪೆನ್ನೈ ಎಂದೂ ಕರೆಯಲ್ಪಡುವ ದಕ್ಷಿಣ ಪಿನಾಕಿನಿ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಹುಟ್ಟುತ್ತದೆ. ಕರ್ನಾಟಕ ಹಾಗೂ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಕಾವೇರಿ, ಕೃಷ್ಣಾ ನದಿ ವ್ಯಾಜ್ಯಗಳಷ್ಟು ಅಗಾಧತೆ ಈ ಪ್ರಕರಣದಲ್ಲಿಲ್ಲ. ಅಂದಾಜು 1 ಟಿಎಂಸಿ ನೀರಿಗೆ ಸಂಬಂಧಿಸಿದ ಕೇಸು ಇದಾಗಿರುವುದರಿಂದ ಉಭಯ ರಾಜ್ಯಗಳು ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವುದು ರಾಜ್ಯದ ವಾದ ವಾಗಿತ್ತು. ಆದರೆ, ತಮಿಳುನಾಡಿನ ಹಠಮಾರಿ ಧೋರಣೆ ಮತ್ತು ‘ಸಂಧಾನ ಸಾಧ್ಯವೇ ಇಲ್ಲ’ ಎಂದು ಅದು ಹೇಳಿದ ಕಾರಣ, ಕೇಂದ್ರ ಸರಕಾರವು ನ್ಯಾಯಾಧೀಕರಣ ರಚನೆ ಮಾಡುವುದು ಅನಿವಾರ್ಯ ಎಂದು ಸುಪ್ರೀಂಕೋರ್ಟ್‌ಗೆ ಅಭಿಪ್ರಾಯ ನೀಡಿತು.

ಇದನ್ನೂ ಓದಿ: Raghava Sharma Nidle Column: ರಾಜ್ಯಪಾಲ ಹುದ್ದೆಯನ್ನು ಶಾಶ್ವತವಾಗಿ ರದ್ದುಗೊಳಿಸಬಾರದೇಕೆ ?

ಸುಪ್ರೀಂಕೋರ್ಟ್ ಕೂಡ ಆ ನಿಲುವನ್ನು ಒಪ್ಪಿಕೊಂಡು ನ್ಯಾಯಾಧಿಕರಣ ರಚನೆ ಮಾಡು ವುದು ಸೂಕ್ತ ಎಂದು ಫೆಬ್ರವರಿ 2ರಂದು ತೀರ್ಪು ನೀಡಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಹಲವು ದಶಕಗಳ ಹೋರಾಟದ ನಂತರ ಸುಪ್ರೀಂ ಕೋರ್ಟ್‌ನಿಂದ ಸಮಾಧಾನಕರ ತೀರ್ಪು ಪಡೆದುಕೊಂಡ ಕರ್ನಾಟಕಕ್ಕೆ ಉದ್ದೇಶಿತ ಮೇಕೆದಾಟು ಜಲಾಶಯ ನಿರ್ಮಾಣ, ಕೃಷ್ಣಾ ಕಣಿವೆಯಲ್ಲಿ ಆಲಮಟ್ಟಿ ಜಲಾಶಯ ಎತ್ತರ ಏರಿಸುವಿಕೆ, ಮಹದಾಯಿ ನದಿಯಿಂದ ಕಳಸಾ ಮತ್ತು ಬಂಡೂರಿ ನಾಲೆ ಮೂಲಕ ಮಲ ಪ್ರಭಾ ನದಿಯ ನೀರು ಹೆಚ್ಚಿಸುವ ಯೋಜನೆಗಳನ್ನು ಮಾತ್ರ ಇನ್ನೂ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ.

ಮೇಕೆದಾಟು ಕೇಸಿನಲ್ಲಿ ಹೊಸ ಡಿಪಿಆರ್ ಅನ್ನು (ಸಮಗ್ರ ಯೋಜನಾ ವರದಿ) ಕೇಂದ್ರ ಸರಕಾರಕ್ಕೆ ಸಲ್ಲಿಸಲು 2 ತಿಂಗಳ ಹಿಂದೆ, ನಿವೃತ್ತ ಮುಖ್ಯ ನ್ಯಾಯ ಮೂರ್ತಿ ಬಿ.ಆರ್.ಗವಾಯಿ ಅವರು ಅವಕಾಶ ನೀಡಿದ ತೀರ್ಪನ್ನು ಪ್ರಕಟಿಸಿದ್ದರು. ಅದು ಕೂಡ 2018ರಲ್ಲಿ ತಮಿಳು ನಾಡು ಮೂಲಕ ಸಲ್ಲಿಕೆಯಾಗಿದ್ದ ಅರ್ಜಿಯಾಗಿತ್ತು.

ದಕ್ಷಿಣ ಪಿನಾಕಿನಿ ಕಣಿವೆಯಲ್ಲಿ ಕರ್ನಾಟಕ ಕೈಗೆತ್ತಿಕೊಂಡ ಯೋಜನೆಗಳನ್ನೂ ಪ್ರಶ್ನಿಸಿ ತಮಿಳುನಾಡು 2018ರ ಸುಪ್ರೀಂಕೋಟ್ʼಗೆ ಅರ್ಜಿ ಸಲ್ಲಿಸಿತ್ತು. ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ವಿವಿಧ ಹಂತಗಳಲ್ಲಿ ಕೇಂದ್ರ ಸರಕಾರ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಸಲಹೆಗಳನ್ನು ನೀಡಿದ್ದರು ಮತ್ತು 2020ರಲ್ಲಿ ಕೇಂದ್ರ ಸರಕಾರದ ಸಂಧಾನ ಸಮಿತಿಯು 2 ಸಭೆಗಳನ್ನು ನಡೆಸಲು ಯತ್ನಿಸಿ ದರೂ, ತಮಿಳುನಾಡಿನ ಅಸಮ್ಮತಿಯಿಂದಾಗಿ ಸಭೆ ಫಲಕೊಡಲಿಲ್ಲ.

ಇದನ್ನೂ ಓದಿ: Raghava Sharma Nidle Column: ನಿತಿನ್‌ ನಬಿನ್‌ ಆಯ್ಕೆಯು ಹಿರಿಯರಿಗೆ ಕೊಟ್ಟ ಸಂದೇಶವೇನು ?

ನಂತರವೂ, ಸಭೆಗಳನ್ನು ನಡೆಸಿ ಎಂದು ಕೋರ್ಟ್ ಸಲಹೆ ನೀಡಿ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಸಭೆಗಳನ್ನು ನಿಗದಿ ಮಾಡಿದರೂ, ತಮಿಳುನಾಡು ಸಭೆಗಳನ್ನು ಬಹಿಷ್ಕರಿಸಿತು. ಹೀಗಾಗಿ, ನ್ಯಾಯಾಧಿಕರಣ ರಚನೆ ಮಾಡುವುದೇ ಸೂಕ್ತ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ವರದಿ ನೀಡಿತು.

ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿ ಕರ್ನಾಟಕದ ಪ್ರಸ್ತಾವನೆ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ದೆಹಲಿಯಲ್ಲಿ ಸಭೆಗಳನ್ನು ನಡೆಸಲು ಉದ್ದೇಶಿಸಿದ್ದ ವೇಳೆಯೂ ತಮಿಳುನಾಡು ಮತ್ತು ಕೇರಳದ ಹಠಮಾರಿ ನಿಲುವುಗಳಿಂದಾಗಿ ಈ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗಲೇ ಇಲ್ಲ.

ಪ್ರಾಧಿಕಾರವು ಸಭೆಗಳಿಗೆ ಮೇಕೆದಾಟು ಕುರಿತ ಕಾರ್ಯಸೂಚಿಯನ್ನು ದಾಖಲು ಮಾಡಿದರೂ, ಚರ್ಚೆಗೆ ತಮಿಳುನಾಡು ಒಪ್ಪಿರಲೇ ಇಲ್ಲ. ಅಂತಿಮವಾಗಿ, ಸುಪ್ರೀಂಕೋರ್ಟ್ ಪರಿಷ್ಕೃತ ಡಿಪಿಆರ್ ಸಲ್ಲಿಸುವುದಕ್ಕೆ ಸೀಮಿತವಾಗಿ ತೀರ್ಪು ನೀಡಿತು. ಹಾಗಂತ, ಮೇಕೆದಾಟು ವಿಷಯ ದಲ್ಲಿ ಸಂಭ್ರಮ ಪಡುವಂಥ ಬೆಳವಣಿಗೆ ಏನೂ ಆಗಿಲ್ಲ. ದಕ್ಷಿಣ ಪಿನಾಕಿನಿ ಜಲವ್ಯಾಜ್ಯದಲ್ಲೂ ಸದ್ಯಕ್ಕೆ ಕರ್ನಾಟಕದ ನಿರೀಕ್ಷೆಗಳು ಸುಳ್ಳಾಗಿವೆ.

pennar water dis

ನದಿ ತೀರದ ರಾಜ್ಯಗಳು ಪಕ್ಕದ ನದಿ ಕಣಿವೆ ರಾಜ್ಯದ ಹಿತಾಸಕ್ತಿ, ಹಕ್ಕಿಗೆ ತೊಂದರೆಯಾಗದಂತೆ ಅಂತಾರಾಜ್ಯ ನದಿ ನೀರನ್ನು ಬಳಸಿಕೊಳ್ಳಲು ಮುಕ್ತವಾಗಿವೆ. ಪೆನ್ನಾರ್ ವಿಷಯದಲ್ಲಿ, “ತಮಿಳುನಾಡಿಗೆ ಕರ್ನಾಟಕದ ಯೋಜನೆಗಳಿಂದ ನೀರಿನ ಕೊರತೆ ಆಗುವುದು ಹೇಗೆ ಎಂಬುದನ್ನು ಸಾಕ್ಷ್ಯ ಸಮೇತ ತಮಿಳುನಾಡು ವಿವರಿಸಿಲ್ಲ. ಬದಲಿಗೆ ಆರೋಪಗಳನ್ನಷ್ಟೇ ಮಾಡುತ್ತಿದೆ. ಇದನ್ನು ಸಂಧಾನದ ಮೂಲಕ ಬಗೆಹರಿಸಬೇಕು" ಎಂದು ಕರ್ನಾಟಕ ಹಲವು ಸಂದರ್ಭಗಳಲ್ಲಿ ಹೇಳಿದೆ.

ತನ್ನ ಹಕ್ಕುಗಳಿಗೆ ಹಾನಿಯಾಗುತ್ತಿದೆ ಎನ್ನುವುದನ್ನು ಕಾನೂನಾತ್ಮಕವಾಗಿ ಸಮರ್ಥಿಸದ ಹೊರತು ಕರ್ನಾಟಕದ ಯೋಜನೆಗಳನ್ನು ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ. ಇದೇ ಕಾರಣಕ್ಕೆ ನ್ಯಾಯಾಧಿಕರಣ ರಚನೆ ಮಾಡುವುದನ್ನು ಕರ್ನಾಟಕ ವಿರೋಧಿಸುತ್ತಲೇ ಬಂದಿತ್ತು. ಆದರೆ, ಕೇಂದ್ರ ಸರಕಾರದ ಮುಂದೆ ಸಾಕ್ಷ್ಯಗಳನ್ನು ಮುಂದಿಟ್ಟು, ವಾದ ಮಂಡನೆಗೆ ಒಲವು ತೋರದ ತಮಿಳುನಾಡು, ತನ್ನ 2018ರ ಮೂಲ ಅರ್ಜಿಯಲ್ಲಿದ್ದ ಬೇಡಿಕೆಯನ್ನೇ, ನಿಲುವನ್ನೇ ಬಿಗಿಯಾಗಿಟ್ಟುಕೊಂಡಿತ್ತು. ಈಗ ತಮಿಳುನಾಡಿನ ಆಶಯದಂತೆ ನ್ಯಾಯಾಧಿ ಕರಣ ರಚನೆಯಾಗಲಿದೆ.

ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶದ ಕರ್ನಾಟಕಕ್ಕೆ ಸೇರಿದ ಕಣಿವೆಯಲ್ಲಿ ವಾರ್ಷಿಕವಾಗಿ ಸುಮಾರು 11 ಟಿಎಂಸಿ ನೀರು ಲಭ್ಯವಿರುತ್ತದೆ. 10 ಟಿಎಂಸಿ ನೀರಿನ ಬಳಕೆಗಾಗಿ ಇರುವ ಯೋಜನೆಗಳು ಕುಡಿಯುವ ನೀರು ಮತ್ತು ನೀರಾವರಿಯ ಅವಶ್ಯಕತೆಗಳನ್ನು ಪೂರೈಸುತ್ತವೆ. ಈ ನೀರು ಕಾವೇರಿ ನದಿನೀರು ವ್ಯಾಜ್ಯದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾದ ನೀರಿನ ಭಾಗವೇ ಆಗಿದೆ. ಕರ್ನಾಟಕ ತನ್ನ ರಾಜಧಾನಿ ಬೆಂಗಳೂರಿನ ಕುಡಿಯುವ ನೀರು ಪೂರೈಕೆಗಾಗಿ ಸುಮಾರು 12 ಟಿಎಂಸಿ ಕಾವೇರಿ ನೀರನ್ನು ದಕ್ಷಿಣ ಪೆನ್ನಾರ್ ಜಲಾನಯನ ಪ್ರದೇಶಕ್ಕೆ ತಿರುಗಿಸಿದೆ.

ಈ ಹರಿವಿನಿಂದ ಸೃಷ್ಟಿಯಾಗುವ ಸುಮಾರು 8.4 ಟಿಎಂಸಿ ನೀರು ರಾಜ್ಯಕ್ಕೆ ಪ್ರತ್ಯೇಕವಾಗಿ ಸೇರಿದೆ. ಆದ್ದರಿಂದ, ಈ ನೀರಿನ ಯಾವುದೇ ಭಾಗದಲ್ಲಿ ತಮಿಳುನಾಡು ಹಕ್ಕು ಪ್ರತಿಪಾದನೆ ಮಾಡುವಂತಿಲ್ಲ. ಕರ್ನಾಟಕ ಯೋಜಿಸಿರುವ ಐದು ಯೋಜನೆಗಳಿಗೆ ಸೀಮಿತವಾಗಿ ಈ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ, ನಮ್ಮಿಂದ ಅನ್ಯಾಯವಾಗುತ್ತಿದೆ ಎಂಬ ವಾದ ಗಳು ಆಧಾರರಹಿತ ಎನ್ನುವುದು ಕರ್ನಾಟಕದ ನಿಲುವು.

ತಮಿಳುನಾಡಿನ ವಿರೋಧ ಯಾವ್ಯಾವುದಕ್ಕೆ?

ರಾಜ್ಯದ ಪೆನ್ನಾರ್ ನದಿ ಕಣಿವೆಯಲ್ಲಿ ಕರ್ನಾಟಕ ಕೆಲ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಇದರಿಂದ ತಮ್ಮ ರಾಜ್ಯಕ್ಕೆ ಹರಿವ ನೀರಿನ ಪ್ರಮಾಣ ತಗ್ಗಲಿದೆ ಎನ್ನುವುದು ತಮಿಳುನಾಡು ವಾದ. ಕೆಳಗೆ ತಿಳಿಸಲಾದ ವಿಷಯಗಳಿಗೆ ತಮಿಳುನಾಡಿನ ವಿರೋಧವಿದೆ.

  1. ಕುಡಿಯುವ ನೀರಿನ ಉದ್ದೇಶಕ್ಕಾಗಿ ಉಪನದಿಯಾಗಿರುವ ಮಾರ್ಕಂಡೇಯ ನದಿಗೆ ಅಡ್ಡ ಲಾಗಿ 1000 ಮಿಲಿಯನ್ ಕ್ಯೂಬಿಕ್ ಫೀಟ್ (0.5 ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಾಣ
  2. ವರ್ತೂರು ಕೆರೆಯ (ಟ್ಯಾಂಕ್) ಹೆಚ್ಚುವರಿ ನೀರನ್ನು ನರಸಾಪುರ ಟ್ಯಾಂಕ್‌ಗೆ ತಿರುಗಿಸು ವುದು
  3. ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆವರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆ
  4. ಬ್ಯಾಲಹಳ್ಳಿ ಗ್ರಾಮದಲ್ಲಿ ಪೆನ್ನಾರ್ ನದಿಯಿಂದ ನೀರನ್ನು ಪಂಪ್ ಮಾಡುವುದು
  5. ಪೆನ್ನಾರ್ ನದಿ ನೀರನ್ನು ತಟ್ಟನೂರು ಗ್ರಾಮದಿಂದ ಪಂಪ್ ಮಾಡುವ ಯೋಜನೆ ರಾಜ್ಯದ ವೈಫಲ್ಯ ಅಲ್ಲವೇ?

ಜಲವ್ಯಾಜ್ಯಗಳ ಬಗ್ಗೆ ನ್ಯಾಯಾಧಿಕರಣ ವಿಚಾರಣೆ ಮಾಡಿ ತೀರ್ಪು ನೀಡಿದರೂ, ಅದು ಅಂತಿಮ ಎನಿಸಿಕೊಳ್ಳುವುದಿಲ್ಲ. ಏಕೆಂದರೆ, ಆ ತೀರ್ಪುಗಳನ್ನು ಪ್ರಶ್ನಿಸಿ ರಾಜ್ಯಗಳು ಸುಪ್ರೀಂ ಕೋಟ್ʼಗೆ ಸಿವಿಲ್ ಅಪೀಲ್‌ಗಳನ್ನು ಸಲ್ಲಿಸಿದ ಉದಾಹರಣೆಗಳನ್ನು ನಾವು ಎಲ್ಲಾ ಜಲವ್ಯಾಜ್ಯ ಗಳಲ್ಲಿ ನೋಡಿದ್ದೇವೆ. ಹೀಗಾಗಿ, ದಕ್ಷಿಣ ಪಿನಾಕಿನಿ ಕೇಸಿಗೆ ಅಂತಿಮ ತೀರ್ಪು ಬರುವುದು ಸುಪ್ರೀಂಕೋರ್ಟ್ʼನಿಂದಲೇ. ಹೀಗಿದ್ದಾಗ, ಬರೀ ಒಂದೆರಡು ಟಿಎಂಸಿ ನೀರಿಗೆ ಸಂಬಂಧಿಸಿ ಕೇಸನ್ನು ನ್ಯಾಯಾಧಿಕರಣಕ್ಕೆ ಶಿಫಾರಸು ಮಾಡುವ ಬದಲು ಜಲತಜ್ಞರನ್ನೊಳಗೊಂಡ ಅಧ್ಯಯನ ಸಮಿತಿಯೊಂದನ್ನು ರಚನೆ ಮಾಡಿ, ಅದಕ್ಕೆ ಸಮಯದ ಗಡುವು ನೀಡಿ ವರದಿ ಯನ್ನು ಪಡೆಯುವ ಬಗ್ಗೆ ಸುಪ್ರೀಂಕೋರ್ಟ್ ಆಲೋಚಿಸಬಹುದಿತ್ತೇನೋ. ಈ ವಿಷಯದಲ್ಲಿ ಕರ್ನಾಟಕ ಸರಕಾರ ಮತ್ತು ರಾಜ್ಯದ ಸಂಸದರು ಪಕ್ಷಾತೀತವಾಗಿ ಕೇಂದ್ರ ಸರಕಾರದ ಮನ ವೊಲಿಸಿ, ಇಂಥದ್ದೊಂದು ಅನಿಸಿಕೆಯನ್ನು ನೀವು ಸುಪ್ರೀಂಕೋರ್ಟ್‌ಗೆ ನೀಡಬೇಕು ಎಂದು ಒತ್ತಡ ಹೇರುವ ಪ್ರಯತ್ನವನ್ನು ಮಾಡಬಹುದಿತ್ತು.

ಸಾಮಾನ್ಯವಾಗಿ, ಜಲವ್ಯಾಜ್ಯಗಳಲ್ಲಿ ಕೇಂದ್ರ ಸರಕಾರ ನೀಡುವ ಅಭಿಪ್ರಾಯಗಳು ನಿರ್ಣಾ ಯಕ ಪಾತ್ರ ವಹಿಸುವುದರಿಂದ ಕೇಂದ್ರದ ಮೇಲೆ ಪ್ರಭಾವ ಬೀರಲು ಯತ್ನಿಸಬೇಕಿತ್ತು. ಹಿಂದೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಈ ಕೆಲಸಗಳನ್ನು ಮಾಡುತ್ತಾ, ಕೇಂದ್ರ ಮತ್ತು ರಾಜ್ಯಕ್ಕೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು.

ಆದರೆ, ರಾಜ್ಯ ಸರಕಾರ ಅಥವಾ ಸಂಸದರು ಈ ಯತ್ನ ಮಾಡುತ್ತಿಲ್ಲ ಮತ್ತು ಪೆನ್ನಾರ್ ವಿಷಯದಲ್ಲಿ ಆಸಕ್ತಿ ತೋರಲಿಲ್ಲ. ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಪೆನ್ನಾರ್ ವ್ಯಾಪ್ತಿಯಿಂದಾಚೆ ಇರುವ ಸಂಸದರು ತಲೆಕೆಡಿಸಿಕೊಳ್ಳಲೂ ಇಲ್ಲ. ಹಾಗೆ ನೋಡಿದರೆ, ಕರ್ನಾಟಕದ ಸಂಸದರು ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಜ್ವಲಂತ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ/ಗಂಭೀರವಾಗಿ ಮಾತನಾಡಿದ ಉದಾಹರಣೆ ಕಡಿಮೆ.

ರಾಜ್ಯದ ವಿಷಯಗಳಿಗೆ ಸಂಬಂಧಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲಹೆ ನೀಡಲು ಅಥವಾ ಒತ್ತಡ ಹೇರಲು ಬಿಜೆಪಿ ಸಂಸದರಿಗೆ ಧೈರ್ಯ ಇದೆಯೇ ಇಲ್ಲವೇ ಎಂಬು ದನ್ನು ಜನರೇ ನಿರ್ಧರಿಸಬಹುದು. ಕೇಂದ್ರ ಸರಕಾರ ಕೂಡ ಇಂದಿನ ಬದಲಾದ ಕಾಲಘಟ್ಟ ದಲ್ಲಿ ಒಂದೆರಡು ಟಿಎಂಸಿಗೆ ಸಂಬಂಧಿಸಿ ನ್ಯಾಯಾಧಿಕರಣ ರಚನೆ ಮಾಡುವ ಬದಲು ಪರ್ಯಾಯ ಕಾರ್ಯವಿಧಾನಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿತ್ತು. ಆದರೆ, ಹಾಗೆ ಆಗಿಲ್ಲ.

ಜಲವ್ಯಾಜ್ಯ ಈಗ ನ್ಯಾಯಾಧಿಕರಣಕ್ಕೆ ವರ್ಗಾವಣೆಗೊಂಡರೂ, ಅಲ್ಲಿ ಕಾಲಹರಣವೇ ಹೆಚ್ಚು ಎಂಬ ವಾಸ್ತವ ತಿಳಿದಿರುವಾಗ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳುವ ಕಾರ್ಯವಿಧಾನ ಗಳನ್ನು ಕಂಡುಕೊಳ್ಳಬೇಕೆ ವಿನಾ ಕೇಂದ್ರ ಮತ್ತು ರಾಜ್ಯಗಳ ಬೊಕ್ಕಸ ಬರಿದು ಮಾಡುವ ನ್ಯಾಯಾಧಿಕರಣಗಳನ್ನು ರಚನೆ ಮಾಡುತ್ತಾ ಕೂರುವುದು ಈ ಕಾಲಕ್ಕೆ ಪ್ರಸ್ತುತ ಎನಿಸುವು ದಿಲ್ಲ.

ಇಂಥ ವಿಷಯಗಳಲ್ಲಿ ನ್ಯಾಯಾಲಯಗಳು ಕೂಡ ಪರ್ಯಾಯ ಸಾಧ್ಯತೆಗಳ ಬಗ್ಗೆ ಆಲೋಚಿ ಸಲು ಇದು ಸಕಾಲ. ಇಲ್ಲದಿದ್ದರೆ, ಕೇಂದ್ರ ಸರಕಾರವು ನ್ಯಾಯಾಧಿಕರಣದ ಮೇಲೆ ಮತ್ತು ರಾಜ್ಯಗಳು ಕಾನೂನು ಹೋರಾಟದ ಮೇಲೆ ಹಣ ಸುರಿಯುತ್ತಲೇ ಇರಬೇಕು.

“ದಕ್ಷಿಣ ಪಿನಾಕಿನಿ ನದಿಯ ಮೇಲ್ಭಾಗದ ರಾಜ್ಯ ಕರ್ನಾಟಕವಾಗಿರುವುದರಿಂದ (upper riparian state) ಸಣ್ಣ ಪ್ರಮಾಣದ ನೀರು ಹಂಚಿಕೆಗೆ ತಮಿಳುನಾಡಿನೊಂದಿಗೆ ರಾಜಿ ಮಾಡಿ ಕೊಳ್ಳುವ ಬಗ್ಗೆ ನಾವು ಆಲೋಚಿಸಬೇಕು. ಏಕೆಂದರೆ, ನ್ಯಾಯಾಧೀಕರಣಕ್ಕೆ ಕೇಸು ಹೋದರೆ ನಮ್ಮ ಉದ್ದೇಶಿತ ಯೋಜನೆಗಳನ್ನು ಮತ್ತಷ್ಟು ವರ್ಷಗಳ ಕಾಲ ತಡೆಹಿಡಿಯಬೇಕಾಗ ಬಹುದು" ಎಂದು ಕೆಲ ಜಲತಜ್ಞರು ಕರ್ನಾಟಕ ಸರಕಾರಕ್ಕೆ ಸಲಹೆ ನೀಡಿದ್ದರು.

ಆದರೆ, ರಾಜಕೀಯ ಕಾರಣಗಳಿಗಾಗಿ ಕರ್ನಾಟಕ ಸರಕಾರ ಆ ಸಾಧ್ಯತೆಯನ್ನು ಕೈಚೆಲ್ಲಿತೇ ಅಥವಾ ತಮಿಳುನಾಡಿನ ಹಠಮಾರಿತನವೊಂದೇ ಇದಕ್ಕೆ ಕಾರಣವಾಯಿತೇ ಎಂಬ ಅನುಮಾನಗಳಿಗೆ ರಾಜ್ಯದ ಸಚಿವರು, ಡಿಸಿಎಂ, ಸಿಎಂ ಉತ್ತರ ನೀಡಬೇಕು.

(ಲೇಖಕರು ಹಿರಿಯ ಪತ್ರಕರ್ತರು)