ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranjith H Ashwath Column: ಪ್ರಾದೇಶಿಕ ಪಕ್ಷಗಳ ಬವಣೆಯಾದರೂ ಏನು ?

ದಶಕಗಳ ಕಾಲ ಡಿಎಂಕೆ-ಎಐಎಡಿಎಂಕೆಯ ಹೊರತಾಗಿ ಮೂರನೇ ಶಕ್ತಿಯೇ ತಮಿಳುನಾಡಿನಲ್ಲಿ ಎಂದು ಹೇಳಲಾಗಿತ್ತು. ಈಗಲೂ ತಮಿಳುನಾಡಿನಲ್ಲಿ ಬಿಜೆಪಿ, ಕಾಂಗ್ರೆಸ್‌ನ ಪರಿಸ್ಥಿತಿ ಭಿನ್ನವಾಗಿಯೇನು ಇಲ್ಲ. ನಟ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚೆಂದರೆ 15 ಸ್ಥಾನ ಬರಬಹುದು ಎಂದು ಬಹುತೇಕ ಸಮೀಕ್ಷೆಗಳು ಷರ ಬರೆದಿದ್ದವು.

ಅಶ್ವತ್ಥಕಟ್ಟೆ

ಕಳೆದ ಒಂದು ದಶಕದ ದೇಶದ ರಾಜಕೀಯ ಟೈಮ್‌ಲೈನ್ ಗಮನಿಸಿದರೆ, ಈ ರೀತಿ ಏಕಾಏಕಿ ಬಂಡಾಯದ ಗಾಳಿಬೀಸಿಯೋ ಅಥವಾ ಪ್ರಾದೇಶಿಕ ಪಕ್ಷಗಳ ಪ್ರಮುಖ ನಾಯಕರೇ ಪಕ್ಷ ದಿಂದ ಹೊರನಡೆದು ಆ ಪಕ್ಷಗಳೇ ಅವನತಿ ಹೊಂದಿವೆ. ಒಂದು ಕಾಲದಲ್ಲಿ ಮುಂದಿನ ಪ್ರಧಾನಿ ಕ್ಯಾಂಡಿ ಡೇಟು ಎಂದು ಬಿಂಬಿತವಾಗಿದ್ದ ಮಾಯಾವತಿ ನೇತೃತ್ವದ ಬಿಎಸ್‌ಪಿ ಕಥೆ ಉತ್ತರ ಪ್ರದೇಶದಲ್ಲಿ ಏನಾಗಿದೆ? ಹಿಂದುತ್ವವನ್ನೇ ಹೊದ್ದು ದಶಕಗಳ ಕಾಲ ಮಹಾರಾಷ್ಟ್ರ ದಲ್ಲಿ ‘ಕಿಂಗ್ ಮೇಕರ್’ ಆಗಿದ್ದ ಶಿವಸೇನೆಯ ಕಥೆ ಏನಾಗಿದೆ?

ಭಾರತದಂತಹ ರಾಜಕೀಯ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಪಕ್ಷಗಳು ‘ಬಲಿಷ್ಠ’ತೆಗೆ ಸೆಡ್ಡು ಹೊಡೆಯು ವಂತೆ ಪ್ರಾದೇಶಿಕ ಪಕ್ಷಗಳು ಹೋರಾಡಿಕೊಂಡು ಬಂದಿವೆ. ಪ್ರಾದೇಶಿಕ ಪಕ್ಷಗಳು ಯಾವುದೋ ಒಂದೆರೆಡು ರಾಜ್ಯಕ್ಕೆ ಸೀಮಿತವಾಗಿದ್ದರೂ, ಅವುಗಳ ‘ಇಂಪ್ಯಾಕ್ಟ್’ ಇಡೀ ದೇಶದ ಮೇಲೆ ಬೀರು ವಷ್ಟು, ಕೇಂದ್ರ ಸರಕಾರಗಳ ರಚನೆಯ ಸಮಯದಲ್ಲಿ ‘ಬಹುಮತ’ಕ್ಕಾಗಿ ರಾಷ್ಟ್ರೀಯ ಪಕ್ಷಗಳು ಸಣ್ಣ-ಸಣ್ಣ ಪ್ರಾದೇಶಿಕ ಪಕ್ಷಗಳ ಮೇಲೆ ಅಲವಂಬನೆಯಾಗುವುದನ್ನೂ, ಇದೇ ಕಾರಣಕ್ಕೆ ಆ ಪಕ್ಷಗಳು ಹೇಳಿದಂತೆ ಕೇಳಿರುವ ಅನೇಕ ಸನ್ನಿವೇಶಗಳನ್ನು ಈ ದೇಶ ನೋಡಿದೆ. ಆದರೆ, ಇತ್ತೀಚಿನ ವರ್ಷದಲ್ಲಿ ಪ್ರಾದೇಶಿಕ ಪಕ್ಷಗಳ ಹಾದಿ ಎತ್ತ ಸಾಗಿದೆ ಎನ್ನುವ ಬಗ್ಗೆ ಚಿಂತಿಸುವುದುಕ್ಕೆ ಇದಕ್ಕಿಂತ ಉತ್ತಮ ಕಾಲ ಮತ್ತೊಂದಿಲ್ಲ.

ಹೌದು, ಕೆಲ ವಾರಗಳ ಹಿಂದೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಯಲ್ಲಿ ತಮಿಳುನಾಡಿ ನಲ್ಲಿ ಯಾರೂ ನಿರೀಕ್ಷೆ ಮಾಡದ ಟಿವಿಕೆ ಪಕ್ಷ ಉದಯವಾಗಿದ್ದರೆ, ಇನ್ನೊಂದೆಡೆ ಇದೇ ಚುನಾವಣೆ ಯ ಬಳಿಕ ಸಿದ್ಧಾಂತವಾಗಿ ಗಟ್ಟಿಯಾಗಿದ್ದೇವೆ ಎನ್ನುವ ಭ್ರಮೆಯಲ್ಲಿ 2029 ಲೋಕಸಭಾ ಚುನಾವಣೆಯಲ್ಲಿ ಇಂಡಿ ಒಕ್ಕೂಟದ ಮುಖ್ಯಸ್ಥೆಯಾಗುವ ಆಲೋಚನೆಯಲ್ಲಿದ್ದ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಇನ್ನೊಂದೆಡೆ.

ದಶಕಗಳ ಕಾಲ ಡಿಎಂಕೆ-ಎಐಎಡಿಎಂಕೆಯ ಹೊರತಾಗಿ ಮೂರನೇ ಶಕ್ತಿಯೇ ತಮಿಳುನಾಡಿನಲ್ಲಿ ಎಂದು ಹೇಳಲಾಗಿತ್ತು. ಈಗಲೂ ತಮಿಳುನಾಡಿನಲ್ಲಿ ಬಿಜೆಪಿ, ಕಾಂಗ್ರೆಸ್‌ನ ಪರಿಸ್ಥಿತಿ ಭಿನ್ನವಾಗಿ ಯೇನು ಇಲ್ಲ. ನಟ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚೆಂದರೆ 15 ಸ್ಥಾನ ಬರಬಹುದು ಎಂದು ಬಹುತೇಕ ಸಮೀಕ್ಷೆಗಳು ಷರ ಬರೆದಿದ್ದವು.

ಆದರೆ, ಈ ಎಲ್ಲ ನಿರೀಕ್ಷೆ ಮೀರಿ ತಮಿಳುನಾಡಿನಲ್ಲಿ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ದಾಖಲೆ ಬರೆದಿದೆ. ಇನ್ನೊಂದೆಡೆ ಬಿಜೆಪಿಯ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ತವರು ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯ ದಾಖಲೆಯ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಿತು.

ಇದನ್ನೂ ಓದಿ: Ranjith H Ashwath Column: ಒಕ್ಕಲಿಗರ ಅಸ್ಮಿತೆ ಕದಲಿಸಲು ಕೈ ಪ್ರಯತ್ನ ?

ಯಾವುದೇ ಚುನಾವಣೆಯಲ್ಲಿ ಸೋಲು-ಗೆಲವು ಇಡೀ ರಾಜಕೀಯ ಪಕ್ಷದ ಸಿದ್ಧಾಂತವನ್ನು ಪ್ರಶ್ನಿ ಸಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಅದೆಷ್ಟೋ ವರ್ಷಗಳ ಕಾಲ ಒಮ್ಮೆ ಡಿಎಂಕೆ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಎಐಎಡಿಎಂಕೆ ಚುಕ್ಕಾಣಿ ಹಿಡಿದಿರುವ ಉದಾಹರಣೆಗಳಿವೆ. ಕರ್ನಾಟಕ ದಲ್ಲಿಯೂ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಸತತ ಎರಡನೇ ಚುನಾವಣೆಯಲ್ಲಿ ಚುಕ್ಕಾಣಿ ಹಿಡಿದ ಉದಾಹರಣೆ ಹೋಗಿ ಅದೆಷ್ಟೋ ವರ್ಷಗಳಾಗಿವೆ.

ಅಂದ ಮಾತ್ರಕ್ಕೆ ಅಧಿಕಾರದಿಂದ ಕೆಳಗೆ ಇಳಿದ ಪಕ್ಷದ ಅವನತಿ ಶುರುವಾಗಿಲ್ಲ. ಆದರೆ, ಕಳೆದ ಎರಡು ವಾರದಿಂದ ಪಶ್ಚಿಮ ಬಂಗಾಳದ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನಲ್ಲಿ ನಡೆಯು‌ ತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಚುನಾವಣೆಯಲ್ಲಿನ ಸೋಲಿಗೆ ಆಡಳಿತ ವಿರೋಧಿ ಅಲೆ ಮೀರಿದ ಸಮಸ್ಯೆ ಟಿಎಂಸಿ ಹಲವು ದಿನಗಳಿದ್ದ ಇದ್ದರೂ, ಈಗ ಅದು ಸ್ಫೋಟವಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

ಈ ಚುನಾವಣೆಗೂ ಮೊದಲು ದೇಶದೆಡೆ ಕಾಂಗ್ರೆಸ್ ಶಕ್ತಿ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಇಂಡಿ ಒಕ್ಕೂಟದ ನಾಯಕತ್ವವನ್ನು ರಾಹುಲ್ ಗಾಂಧಿ ಬದಲಿಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೀಡಬೇಕು.

ಎನ್‌ಡಿಎ ಒಕ್ಕೂಟವನ್ನು ಎದುರಿಸುವ ಶಕ್ತಿ ದೀದಿಗಿದೆ ಎನ್ನುವ ಮಾತನ್ನು ಸಭೆಗಳಲ್ಲಿಯೇ ಚರ್ಚಿಸಲಾಗಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ಸೋಲಾಗುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಹಲವರಿಗೆ ಅಚ್ಚರಿ ಉಂಟು ಮಾಡಿರೋದು ಸುಳ್ಳಲ್ಲ.

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಟಿಎಂಸಿ ನಾಯಕರ ವಿರುದ್ಧ ಕೇಸು, ದಾಳಿಗಳೆಲ್ಲ ರಾಜಕೀಯ ಪ್ರೇರಿತ ಎನ್ನಬಹುದು. ಆದರೆ, ಮಮತಾ ಬ್ಯಾನರ್ಜಿ ವಿರುದ್ಧ ಟಿಎಂಸಿ ಪಕ್ಷದೊಳಗಿದ್ದ ಅಸಹಿಷ್ಣತೆ ಎಷ್ಟು ಎನ್ನುವುದು ಈಗ ಬಹಿರಂಗವಾಗುತ್ತಿದೆ. ಆರಂಭದಲ್ಲಿ ಐದು-ಹತ್ತು ಶಾಸಕರಿಂದ ಶುರುವಾದ ಬಂಡಾಯದ ಕಹಳೆ ಇದೀಗ ಐದಾರು ಪಟ್ಟಾಗಿ ಬೆಳೆದಿದೆ.

622 ok

ಇನ್ನೊಂದೆಡೆ 20ಕ್ಕೂ ಹೆಚ್ಚು ಟಿಎಂಸಿ ಸಂಸದರು, ತಮ್ಮ ಬಣವನ್ನು ಅಧಿಕೃತ ಟಿಎಂಸಿ ಎಂದು ಘೋಷಿಸಬೇಕು, ಪಕ್ಷದ ಚಿಹ್ನೆಯನ್ನು ತಮಗೆ ನೀಡಬೇಕು ಎನ್ನುವ ಮನವಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬಳಿ ಇಟ್ಟಿದ್ದಾರೆ. ಟಿಎಂಸಿ ಲೋಕಸಭಾ ಸದಸ್ಯರ ಸಂಖ್ಯಾಬಲದ ಮುಕ್ಕಾಲು ಮಂದಿ ಈ ಮನವಿಗೆ ಸಹಿ ಹಾಕಿರುವುದರಿಂದ ಕಾನೂನಾತ್ಮಕವಾಗಿ ಚಿಹ್ನೆ ಮಾತ್ರವಲ್ಲದೇ ಇಡೀ ಪಕ್ಷ ಈ ಬಂಡಾಯ ನಾಯಕರ ಕೈಸೇರಲಿದೆ. ಇದಾಗುತ್ತಿದ್ದಂತೆ ಮಮತಾ ಬ್ಯಾನರ್ಜಿ ಅವರಿಗೂ ಟಿಎಂಸಿಗೂ ಸಂಬಂಧವಿಲ್ಲ ಎನ್ನುವಂತಾಗುತ್ತದೆ.

ಈ ಬಂಡಾಯದ ಗಾಳಿಗೆ ಬಿಜೆಪಿಯ ಬೆಂಬಲವಿದೆ ಎನ್ನುವ ಆರೋಪಗಳನ್ನು ಈಗಾಗಲೇ ಮಮತಾ ಬ್ಯಾನರ್ಜಿ ಸೇರಿದಂತೆ ಇಂಡಿ ಒಕ್ಕೂಟದ ಹಲವು ಮಾಡಿದ್ದಾರೆ. ಪಶ್ಚಿಮ ಬಂಗಾಳವನ್ನು ಭದ್ರ ಕೋಟೆ ಮಾಡಿಕೊಳ್ಳಬೇಕೆಂಬ ಹೋರಾಟದಲ್ಲಿದ್ದ ಬಿಜೆಪಿ ನಾಯಕರು ಸಹಜವಾಗಿಯೇ, ಭವಿಷ್ಯ ದಲ್ಲಿ ಮಮತಾ ಬ್ಯಾನರ್ಜಿ ಮೇಲೆ ಏಳಲು ಸಾಧ್ಯವಾಗದೇ ಇರುವುದಕ್ಕೆ ಏನೆಲ್ಲ ಮಾಡಬೇಕೋ ಅದನ್ನು ಮಾಡಿಯೇ ತೀರುತ್ತಾರೆ.

ರಾಜಕೀಯವಾಗಿ ಇದು ಬಹು ಸಹಜವೂ ಹೌದು. ಆದರೆ, ಟಿಎಂಸಿಯ ಇಂದಿನ ಪರಿಸ್ಥಿತಿಗೆ ಬಿಜೆಪಿಗಿಂತ ಹೆಚ್ಚಾಗಿ ಪಕ್ಷದೊಳಗಿದ್ದ ಆಂತರಿಕ ಭಿನ್ನದ ಜ್ವಾಲಾಮುಖಿ, ಅಧಿಕಾರ ಅಧಿಕಾರ ಹೋಗುತ್ತಿದ್ದಂತೆ ಸ್ಪೋಟವಾಗಿದೆ. ಕಳೆದ ಒಂದು ದಶಕದ ದೇಶದ ರಾಜಕೀಯ ಟೈಮ್‌ಲೈನ್ ಗಮನಿಸಿದರೆ, ಈ ರೀತಿ ಏಕಾಏಕಿ ಬಂಡಾಯದ ಗಾಳಿಬೀಸಿಯೋ ಅಥವಾ ಪ್ರಾದೇಶಿಕ ಪಕ್ಷಗಳ ಪ್ರಮುಖ ನಾಯಕರೇ ಪಕ್ಷದಿಂದ ಹೊರನಡೆದು ಆ ಪಕ್ಷಗಳೇ ಅವನತಿ ಹೊಂದಿವೆ.

ಒಂದು ಕಾಲದಲ್ಲಿ ಮುಂದಿನ ಪ್ರಧಾನಿ ಕ್ಯಾಂಡಿಡೇಟು ಎಂದು ಬಿಂಬಿತವಾಗಿದ್ದ ಮಾಯಾವತಿ ನೇತೃತ್ವದ ಬಿಎಸ್‌ಪಿ ಕಥೆ ಉತ್ತರ ಪ್ರದೇಶದಲ್ಲಿ ಏನಾಗಿದೆ? ಹಿಂದುತ್ವವನ್ನೇ ಹೊದ್ದು ದಶಕಗಳ ಕಾಲ ಮಹಾರಾಷ್ಟ್ರದಲ್ಲಿ ‘ಕಿಂಗ್ ಮೇಕರ್’ ಆಗಿದ್ದ ಶಿನಸೇನೆಯ ಕಥೆ ಏನಾಗಿದೆ? ದೆಹಲಿಯಲ್ಲಿ ದಾಖಲೆಯ ಗೆಲವು ದಾಖಲಿಸಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಜೈಲಿಗೆ ಹೋಗುತ್ತಿದ್ದಂತೆ ಆ ಪಕ್ಷವೇನಾಗಿದೆ ಎನ್ನುವುದು ಗಮನಿಸಿದರೆ ಅಧಿಕಾರ ಹೋಗುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳಲ್ಲಿ ಆಂತರಿಕ ಭಿನ್ನಮತ ಸ್ಪೋಟವಾಗುವುದೇಕೆ? ಇದಕ್ಕೆ ರಾಷ್ಟ್ರೀಯ ಪಕ್ಷಗಳು ಪರೋಕ್ಷ ಕಾರಣವೇ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಮಾಯಾವತಿಯ ಬಿಎಸ್‌ಪಿಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಮೊದಲು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಉತ್ತುಂಗದಲ್ಲಿತ್ತು. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೂ ಸೆಡ್ಡು ಹೊಡೆಯುವಂತೆ ಉತ್ತರ ಪ್ರದೇಶವನ್ನು ಬಿಎಸ್‌ಪಿ ಹಾಗೂ ಎಸ್‌ಪಿ ಪಕ್ಷಗಳು ಹಿಡಿತದಲ್ಲಿಟ್ಟುಕೊಂಡಿದ್ದವು.

ದಲಿತ ಪ್ಲೇಕಾರ್ಡ್‌ನಲ್ಲಿಯೇ ಬಿಎಸ್‌ಪಿ ಕಟ್ಟಿದ ಮಾಯಾವತಿ ಅವರು 1995ರಿಂದ 2007ರ ಅವಧಿ ಯಲ್ಲಿ ನಾಲ್ಕು ಬಾರಿ ಉತ್ತರ ಪ್ರದೇಶದ ಚುಕ್ಕಾಣಿಯನ್ನು ಹಿಡಿದರು. 2007ರಲ್ಲಿ 206 ವಿಧಾನಸಭಾ ಸೀಟುಗಳೊಂದಿಗೆ ಉತ್ತರ ಪ್ರದೇಶದಲ್ಲಿ ಸರಕಾರವನ್ನು ರಚಿಸಿದ್ದ, 2009 ಲೋಕಸಭಾ ಚುನಾವಣೆ ಯಲ್ಲಿ 21 ಲೋಕಸಭಾ ಕ್ಷೇತ್ರವನ್ನು ಗೆದ್ದಿದ್ದ ಬಿಎಸ್‌ಪಿ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೇ ಉತ್ತರ ಪ್ರದೇಶದ ಅಕ್ಕ-ಪಕ್ಕದ ರಾಜ್ಯಗಳಿಗೂ ತನ್ನ ಬಾಹುಳ್ಯವನ್ನು ವಿಸ್ತರಿಸಿಕೊಂಡಿತ್ತು. ಆದರೆ, ಎರಡು ದಶಕದ ಅವಧಿಯಲ್ಲಿ 206ರ ವಿಧಾನಸಭಾ ಕ್ಷೇತ್ರ ಹೋಗಿ, ಒಂದು ಕ್ಷೇತ್ರಕ್ಕೆ ಕುಸಿದಿದೆ.

ಇನ್ನು ಲೋಕಸಭೆಯಲ್ಲಿ ಶೂನ್ಯ ಸಾಧನೆಯ ಮೂಲಕ ಅಸ್ತಿತ್ವದ ಹುಡುಕಾಟದಲ್ಲಿದೆ. ಈ ಪರಿಸ್ಥಿತಿ ಕೇವಲ ಬಿಎಸ್‌ಪಿಗೆ ಸೀಮಿತವಾಗಿಲ್ಲ. ಮಹಾರಾಷ್ಟ್ರದ ಬಾಲಠಾಕ್ರೆ ನಿಧನದ ಬಳಿಕ ಶಿನಸೇನೆ ಉದ್ದವ್ ಠಾಕ್ರೆ ಅವರು ಮುನ್ನಡೆಸುತ್ತಿದ್ದರು. ಕಾಂಗ್ರೆಸ್‌ನೊಂದಿಗೆ ಹೋಗಿ ತಮ್ಮ ಸಿದ್ಧಾಂತವನ್ನು ಬದಿಗಿಟ್ಟಿದ್ದಲ್ಲದೇ ಕೆಲವೇ ವರ್ಷದ ಅವಧಿಯಲ್ಲಿ ಪಕ್ಷದ ಆಂತರಿಕ ಧಂಗೆಯ ಕಾರಣಕ್ಕೆ ಶಿವಸೇನೆಯ ಚಿಹ್ನೆಯನ್ನೇ ಕಳೆದುಕೊಂದು ಪಕ್ಷವೇ ಛಿದ್ರವಾಗುವ ಹಂತಕ್ಕೆ ಬಂದಿದೆ.

ಇನ್ನು ತೆಲಂಗಾಣದ ಬಿಆರ್‌ಎಸ್, ಬಿಹಾರದ ಬಿಜೆಡಿ, ಪಂಜಾಬಿನ ಶಿರೋಮಣಿ ಅಖಾಲಿ ದಳಗಳ ಒಂದು ಸೋಲು ಪಕ್ಷದ ಭವಿಷ್ಯದ ಮೇಲೆಯೇ ಕಾರ್ಮೋಡ ಉಂಟು ಮಾಡಿದೆ. ಆಯಾ ರಾಜ್ಯ ಗಳಲ್ಲಿ ಒಂದು ಕಾಲದಲ್ಲಿ ಬಲಿಷ್ಠವಾಗಿ ಕಾಣಿಸಿಕೊಳ್ಳುವ ಈ ಪ್ರಾದೇಶಿಕ ಪಕ್ಷಗಳು ಕೆಲ ದಶಕದ ಬಳಿಕ ತೆರೆಮರೆಗೆ ಸರಿಯಲು ಕಾರಣಗಳು ರಾಷ್ಟ್ರೀಯ ಪಕ್ಷಗಳ ತಂತ್ರಗಾರಿಕೆ ಒಂದೆಡೆಯಾದರೆ, ಸ್ವಪಕ್ಷದಲ್ಲಿಯೇ ಇರುವ ಆಂತರಿಕ ಕಿತ್ತಾಟಗಳು ಮತ್ತೊಂದೆಡೆ. ದೇಶ ಬಹು ಭಾಗದಲ್ಲಿರುವ ಪ್ರಾದೇಶಿಕ ಪಕ್ಷಗಳು ಶುರುವಾಗಿರುವುದು ಒಬ್ಬ ವ್ಯಕ್ತಿಯಿಂದ. ನಂತರ ಆ ವ್ಯಕ್ತಿಯ ಕುಟುಂಬಸ್ತರು ಅಥವಾ ಆಪ್ತರು ಇಡೀ ಪಕ್ಷದ ಚುಕ್ಕಾಣಿ ಹಿಡಿಯಲು ಶುರು ಮಾಡುತ್ತಾರೆ. ಆ ವ್ಯಕ್ತಿ ಅಧಿಕಾರದಲ್ಲಿ ರುವ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ಅಥವಾ ಮೂರನೇ ಹಂತದ ನಾಯಕರು ಈ ಎಲ್ಲವನ್ನು ಸಹಿಸಿಕೊಂಡಿರುತ್ತಾರೆ. ಯಾವಾಗ ಪರ್ಯಾಯ ಶಕ್ತಿ ಸಿಗುತ್ತದೆಯೋ ಆಗ ಅಲ್ಲಿಗೆ ಶಿಫ್ಟ್ ಆಗುವ ಅಥವಾ ಆ ಶಕ್ತಿಯ ಬಲದೊಂದಿಗೆ ಪಕ್ಷವನ್ನೇ ಒಡೆದು ಹಾಕಲು ಮುಂದಾಗುತ್ತಾರೆ.

ಈ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿದು ಮತ್ತೊಂದು ಪಕ್ಷ, ಅದರಲ್ಲಿಯೂ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳು ತಣ್ಣಗೆ ಮಲಗು ತ್ತವೆ. ಹಾಗೇ ನೋಡಿದರೆ, ದೇಶ ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ ದೇಶದಲ್ಲಿ ಆರು ರಾಷ್ಟ್ರೀಯ ಪಕ್ಷಗಳು, 60ರಿಂದ 62 ಪ್ರಾದೇಶಿಕ ಪಕ್ಷಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿವೆ. ಆದರೆ, ಇವುಗಳಲ್ಲಿ ಏಳೆಂಟು ರಾಜ್ಯಗಳು ಮಾತ್ರ ಪ್ರಾದೇಶಿಕ ಪಕ್ಷಗಳ ಚುಕ್ಕಾಣಿ ಹಿಡಿದಿದೆ. ಅದರಲ್ಲಿ ಈಶಾನ್ಯ ರಾಜಗಳಾಗಿರುವ ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್, ಸಿಕ್ಕಿಂ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ವಿದೆ.

ಇನ್ನುಳಿದಂತೆ ಆಂಧ್ರಪ್ರದೇಶದಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಅಧಿಕಾರದಲ್ಲಿದ್ದರೂ, ಅದಕ್ಕೆ ಬಿಜೆಪಿಯ ಪೂರ್ಣ ಬೆಂಬಲವಿರುವುದು ಸ್ಪಷ್ಟ. ಇನ್ನು ಜಮ್ಮು ಕಾಶ್ಮೀರದಲ್ಲಿ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನರೆ ಹಾಗೂ ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಧಿಕಾರದಲ್ಲಿದೆ.

ಕುಟುಂಬ ಅಥವಾ ವ್ಯಕ್ತಿ ಆಧಾರ ಮೀರಿ ರಾಜಕೀಯ ಪಕ್ಷವಾಗಿ ಆಮ್ ಆದ್ಮಿ ಪಕ್ಷ ಕಾಣಿಸಿ ಕೊಂಡಿತ್ತು. ಅರವಿಂದ ಕೇಜ್ರಿವಾಲ್ ಪಕ್ಷದ ಮುಖ್ಯಸ್ಥರಾಗಿದ್ದರೂ, ಅಣ್ಣಾ ಹಜಾರೆ ಹೋರಾಟದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದು ಆಪ್. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆ ಯಲ್ಲಿ 28 ಸೀಟುಗಳನ್ನು ಗೆಲ್ಲುವ ಮೂಲಕ ದೆಹಲಿ ರಾಜಕಾರಣದಲ್ಲಿ ಹೊಸ ಅಲೆಯಲ್ಲಿ ಸೃಷ್ಟಿಸಿತ್ತು. ಆದರೆ, ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದೇ ಕಾಂಗ್ರೆಸ್ ಹಾಗೂ ಇತರರೊಂದಿಗೆ ಸಮ್ಮಿಶ್ರ ಸರಕಾರ ರಚಿಸಿದ ಅರವಿಂದ ಕೇಜ್ರಿವಾಲ್ ಅವರು, 2015 ಹಾಗೂ 2020ರಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದಷ್ಟೇ ಅಲ್ಲದೇ, ಪಂಜಾಬ್ ರಾಜ್ಯದಲ್ಲಿಯೂ ಚುಕ್ಕಾಣಿ ಹಿಡಿಯುವಲ್ಲಿ ಯಶ ಕಂಡಿತ್ತು. ಆದರೆ, ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಜೈಲು ಸೇರಿದ ಬಳಿಕ ಇಡೀ ಪಕ್ಷದ ಭವಿಷ್ಯ ಡೋಲಾಯಮಾನವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಒಂದರ್ಥದಲ್ಲಿ ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ-ಕಾಂಗ್ರೆಸ್ ಎರಡಕ್ಕೂ ಈ ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ಅಥವಾ ಉಳಿವು ಬೇಕಾಗಿಲ್ಲ. ಅನಿರ್ವಾಯ ಕಾರಣಗಳಿಗಾಗಿ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಈ ಪಕ್ಷಗಳು, ಸಮಯ ಬಂದರೆ ಆ ಪಕ್ಷಗಳು ಮೇಲೇಳದಂತೆ ಮಾಡುವುದು ಹೇಗೆ ಎನ್ನುವ ಆಲೋಚನೆಯಲ್ಲಿಯೇ ಇರುತ್ತವೆ.

ಏಕೆಂದರೆ, ಪ್ರಾದೇಶಿಕ ಪಕ್ಷಗಳು ತಗ್ಗಿದಷ್ಟು ಚುನಾವಣೆಯ ಸಮಯದಲ್ಲಿ ಮತವಿಭಜನೆಯ ಆತಂಕ ಕಡಿಮೆಯಿರುತ್ತದೆ. ಅದರಲ್ಲಿಯೂ ಅಧಿಕಾರದ ಉತ್ತುಂಗದಲ್ಲಿರುವ ಪಕ್ಷಗಳಿಗೆ (ಇಂದಿನ ಬಿಜೆಪಿ-ದಶಕಗಳ ಹಿಂದಿನ ಕಾಂಗ್ರೆಸ್) ಪ್ರಾದೇಶಿಕ ಪಕ್ಷಗಳು ಒಂದರ್ಥದಲ್ಲಿ ನಾಯಕರನ್ನು ಸೃಷ್ಟಿಸಿಕೊಡುವ ಯಂತ್ರಗಳೆಂದರೆ ತಪ್ಪಾಗುವುದಿಲ್ಲ. ಉದಾಹರಣೆಗೆ ಕರ್ನಾಟಕ ಕಾಂಗ್ರೆಸ್‌ ನಲ್ಲಿರುವ ಈಗಿರುವ ಮೊದಲ ಹಂತದ ನಾಯಕರು ಜೆಡಿಎಸ್‌ನಿಂದ ವಲಸೆ ಬಂದಿರುವವರೇ ಆಗಿದ್ದಾರೆ.

ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಜೆಡಿಎಸ್ ದಶಕಗಳ ಕಾಲ ಕಿಂಗ್ ಮೇಕರ್ ಆಗಿತ್ತು. ಆದರೆ ದೇವೇಗೌಡರ ವಯೋಸಹಜ ಸಮಸ್ಯೆ, ಹಲವು ನಾಯಕರುಗಳ ಪಕ್ಷಾಂತರ, ನಾಯಕತ್ವದ ಕಾರಣದಿಂದ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ತಗ್ಗಿಸಿಕೊಂಡು ಬರುತ್ತಿದೆ. ಈಗಲೂ ಜೆಡಿಎಸ್ ರಾಜ್ಯಾದ್ಯಂತ ಸಾಂಪ್ರದಾಯಿಕ ಮತಗಳಿಗೇನು ಕಡಿಮೆಯಿಲ್ಲವಾದರೂ, ಅದನ್ನು ಸೆಳೆಯಲು ಬೇಕಿರುವ ನಾಯಕತ್ವವೇ ಬಹುದೊಡ್ಡ ಪ್ರಶ್ನೆಯಾಗಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್, ಸ್ಥಾನ ಗಳಿಗೆಯಲ್ಲಿ ತಗ್ಗಿದ್ದರೂ ಕೇಂದ್ರ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಕುಮಾರಸ್ವಾಮಿ ಅವರಿಗೆ ದೆಹಲಿ ಬಿಜೆಪಿ ಮಟ್ಟದಲ್ಲಿ ಉತ್ತಮ ಒಡನಾಟವಿದ್ದರೂ, ಕರ್ನಾಟಕ ಬಿಜೆಪಿಗರೂ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಜೆಡಿಎಸ್ʼನಲ್ಲಿಯೂ ಈಗಲೂ ದೇವೇಗೌಡ, ಕುಮಾರಸ್ವಾಮಿ ನಂತರದ ನಾಯಕರನ್ನು ಹುಡುಕಿ ದರೂ ಐದತ್ತು ಹೆಸರುಗಳು ಸಿಗುವ ಸ್ಥಿತಿಯಲ್ಲಿಲ್ಲ. ಸದ್ಯ ಕೇಂದ್ರ ಬಿಜೆಪಿಯೊಂದಿಗೆ ಸಖ್ಯ ಚೆನ್ನಾಗಿ ರುವುದರಿಂದ ‘ಸ್ಥಾನ-ಮಾನ’ಕ್ಕೆ ಸಮಸ್ಯೆಇಲ್ಲ. ಆದರೆ, ಬಿಜೆಪಿಯೊಂದಿಗಿನ ಮೈತ್ರಿಯಿಂದ ಹೊರ ಬಂದರೆ ಮುಂದೇನು ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಕೊನೆಯದಾಗಿ ಹೇಳುವುದಾದರೆ, ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಇರುವ ಬದ್ಧತೆ ಹಾಗೂ ಅನಿವಾರ್ಯತೆ ರಾಷ್ಟ್ರೀಯ ಪಕ್ಷಗಳಿಗೆ ಇರುವುದಿಲ್ಲ ಎನ್ನುವುದಂತೂ ಸತ್ಯ!

ರಂಜಿತ್​ ಎಚ್​ ಅಶ್ವತ್ಥ್

View all posts by this author