ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಒಕ್ಕಲಿಗರ ಅಸ್ಮಿತೆ ಕದಲಿಸಲು ಕೈ ಪ್ರಯತ್ನ ?

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಉಪಮುಖ್ಯಮಂತ್ರಿಯಾದ ಬಳಿಕ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸಿ, ಡಿ.ಕೆ.ಶಿವಕುಮಾರ್ ಇದರಲ್ಲಿ ಪೂರ್ಣ ಯಶಸ್ಸು ಪಡೆಯದಿದ್ದರೂ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಕೆಲ ಭದ್ರಕೋಟೆಗಳನ್ನು ಬೇಧಿಸು ವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಇದು ಕಾಂಗ್ರೆಸ್ ಯಶಸ್ಸು ಎನಿಸಿದರೂ, ಬಿಜೆಪಿ-ಜೆಡಿಎಸ್ ಮೈತ್ರಿಯೊಳಗಿದ್ದ ಒಳ ರಾಜಕೀಯದಿಂದ ಮತಗಳು ಚದುರಿ ಕಾಂಗ್ರೆಸ್‌ಗೆ ಲಾಭವಾಯಿತು ಎನ್ನುವ ದನ್ನು ಅರಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ.

ಒಕ್ಕಲಿಗರ ಅಸ್ಮಿತೆ ಕದಲಿಸಲು ಕೈ ಪ್ರಯತ್ನ ?

-

ಅಶ್ವತ್ಥಕಟ್ಟೆ

ಭಾರತದ ರಾಜಕೀಯ ಇತಿಹಾಸದಲ್ಲಿ ಜಾತಿ-ಧರ್ಮಗಳು ಮಹತ್ವದ ಪಾತ್ರ ವಹಿಸುತ್ತವೆ ಎನ್ನು ವುದು ಎಷ್ಟು ಸತ್ಯವೋ, ದಕ್ಷಿಣ ಭಾರತದಲ್ಲಿ ಜಾತಿ-ಧರ್ಮ ಮೀರಿದ ಲೆಕ್ಕಾಚಾರಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ. ಆದರೆ ದಕ್ಷಿಣ ಭಾರತದ ರಾಜಕೀಯ ‘ಪ್ಯಾರ್ಟನ್’ಗೆ ಕರ್ನಾಟಕ ರಾಜಕೀಯ ಕೊಂಚ ಭಿನ್ನವಾಗಿರುವುದು ಸುಳ್ಳಲ್ಲ.

ಕರ್ನಾಟಕದಲ್ಲಿ ಅಹಿಂದ ಸಮುದಾಯದ ಮತಗಳೇ ನಿರ್ಣಾಯಕ ಎನಿಸಿದ್ದರೂ, ಈ ಸಮುದಾಯ ದೊಂದಿಗೆ ಒಕ್ಕಲಿಗ ಹಾಗೂ ಲಿಂಗಾಯತರು ಯಾರೊಂದಿಗೆ ನಿಲ್ಲುತ್ತಾರೆ ಎನ್ನುವುದರ ಮೇಲೆ ಚುನಾವಣಾ ಭವಿಷ್ಯ ನಿರ್ಣಯವಾಗುತ್ತದೆ.

ಅದರಲ್ಲಿಯೂ ಹಳೇ ಮೈಸೂರು ಭಾಗದ ಬಹುಪಾಲು ಕ್ಷೇತ್ರಗಳ ಫಲಿತಾಂಶವನ್ನು ನಿರ್ಣಯಿಸಿ ರುವ ಒಕ್ಕಲಿಗ ಸಮುದಾಯದ ಹಲವು ನಾಯಕರು ಬಂದು ಹೋದರೂ, ಸಮುದಾಯದ ನಾಯಕ ನಾಗಿ ಉಳಿದುಕೊಂಡಿರುವುದು ಮಾತ್ರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ. ದೇವೇಗೌಡರ ಕಾರಣಕ್ಕೆ ಜನತಾ ಪರಿವಾರದೊಂದಿಗಿದ್ದ ಒಕ್ಕಲಿಗರು, ಬಳಿಕ ಜೆಡಿಎಸ್'ನೊಂದಿಗೆ ನಿಂತರು. ಈ ಒಕ್ಕಲಿಗ ಮತಗಳನ್ನು ಚದುರಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಹತ್ತು ಹಲವು ರೀತಿಯ ಪ್ರಯತ್ನ ಮಾಡಿ ದ್ದರೂ, ಈಗಲೂ ಬಹುಪಾಲು ಸಮುದಾಯ ದೇವೇಗೌಡರ ಹೆಸರಿಗೆ ನಿಷ್ಠವಾಗಿದೆ ಎನ್ನುವುದು ಸ್ಪಷ್ಟ.

ಈ ನಿಷ್ಠೆಯನ್ನು ಕದಡಲು, ಒಕ್ಕಲಿಗ ಸಮುದಾಯದ ನಾಯಕನಾಗಲು ಹಲವು ದಶಕಗಳಿಂದ ಹೋರಾಡುತ್ತಿರುವುದು ಡಿ.ಕೆ.ಶಿವಕುಮಾರ್. ಹಾಗೆ ನೋಡಿದರೆ, ದೇವೇಗೌಡರ ವಿರುದ್ಧ ಸ್ಪರ್ಧಿಸಿಯೇ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದ ಡಿ.ಕೆ.ಶಿವಕುಮಾರ್, ಅಲ್ಲಿಂದಲೂ ದೇವೇಗೌಡರ ಕುಟುಂಬದ ವಿರುದ್ಧ ನಿರಂತರವಾಗಿ ಹೋರಾಡಿಕೊಂಡೇ ಬಂದಿದ್ದಾರೆ. ಈ ಹೋರಾಟ ಕೇವಲ ರಾಜಕೀಯಕ್ಕೆ ಸೀಮಿತವಾಗದೇ, ವೈಯಕ್ತಿಕ ಪೈಪೋಟಿಗೂ ಇಳಿದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಇದನ್ನೂ ಓದಿ: Ranjith H Ashwath Column: ಹೋರಾಟದ ಹಾದಿಯಲ್ಲೇ ಬಂದ ಡಿಕೆ ಮುಂದಿದೆ ಸವಾಲು

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಉಪಮುಖ್ಯಮಂತ್ರಿಯಾದ ಬಳಿಕ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸಿ, ಡಿ.ಕೆ.ಶಿವಕುಮಾರ್ ಇದರಲ್ಲಿ ಪೂರ್ಣ ಯಶಸ್ಸು ಪಡೆಯ ದಿದ್ದರೂ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಕೆಲ ಭದ್ರಕೋಟೆಗಳನ್ನು ಬೇಧಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಇದು ಕಾಂಗ್ರೆಸ್ ಯಶಸ್ಸು ಎನಿಸಿದರೂ, ಬಿಜೆಪಿ-ಜೆಡಿಎಸ್ ಮೈತ್ರಿಯೊಳಗಿದ್ದ ಒಳ ರಾಜಕೀಯದಿಂದ ಮತಗಳು ಚದುರಿ ಕಾಂಗ್ರೆಸ್‌ಗೆ ಲಾಭವಾಯಿತು ಎನ್ನುವದನ್ನು ಅರಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ.

ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಹೋದರೆ, ಬಹುಪಾಲು ಕ್ಷೇತ್ರ ಗಳಲ್ಲಿ ಚದುರಿದ್ದ ಮತಗಳನ್ನು ಒಗ್ಗೂಡಿಸಿಕೊಂಡು ಚುನಾವಣೆಗೆ ಹೋದರೆ ಕಾಂಗ್ರೆಸ್‌ಗೆ ಲಾಭ ವಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಇದೀಗ ಒಕ್ಕಲಿಗ ಮತಗಳನ್ನು ಒಡೆಯಲು ಹಾಗೂ ಬಿಜೆಪಿ-ಜೆಡಿಎಸ್ʼನಲ್ಲಿರುವ ‘ಮೈತ್ರಿ’ಯಲ್ಲಿ ಬಿರುಕಿನ ಹುಳ ಬಿಡಲು ಕಾಂಗ್ರೆಸಿಗರು ಹುಡುಕಿದ ದಾರಿಯೇ, ದೇವೇಗೌಡರಿಗೆ ದಕ್ಕದ ರಾಜ್ಯಸಭಾ ಟಿಕೆಟ್.

94ರ ಆಸುಪಾಸಿನಲ್ಲಿರುವ ದೇವೇಗೌಡರು ಈ ಬಾರಿ ರಾಜ್ಯಸಭೆಗೆ ಸ್ಪರ್ಧಿಸುವುದು ಬಹುತೇಕ ಅನುಮಾನ ಎನ್ನುವ ಮಾತುಗಳು ಜೆಡಿಎಸ್ ವಲಯದಲ್ಲಿಯೇ ಕೇಳಿಬಂದಿತ್ತು. ಇದಕ್ಕೆ ಪೂರಕ ಎನ್ನುವಂತೆ ದೇವೇಗೌಡರು ಸ್ವತಃ ರಾಜ್ಯಸಭೆಯಲ್ಲಿ ಮಾತನಾಡುವಾಗ ಪರೋಕ್ಷವಾಗಿ ಈ ಮಾತುಗಳನ್ನು ಆಡಿದ್ದರು. ಆದರೂ, ದೇವೇಗೌಡರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಶುರುವಾಗಿತ್ತು. ಆದರೆ ಬಿಜೆಪಿ-ಜೆಡಿಎಸ್ ಕೇವಲ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶವಿದ್ದುದರಿಂದ ದೇವೇಗೌಡರನ್ನು ಕಳುಹಿಸುವ ಬಗ್ಗೆ ಮೋದಿ-ಶಾ ತೀರ್ಮಾನಿಸಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಅಂತಿಮವಾಗಿ ದೇವೇಗೌಡರ ಟಿಕೆಟ್ ಕೈತಪ್ಪಿತ್ತು.

deve

ಹಾಗೇ ನೋಡಿದರೆ, ದೇವೇಗೌಡರ ಸದ್ಯದ ವಯೋಸಹಜ ಸಮಸ್ಯೆಗಳನ್ನು ಗಮನಿಸಿದಾಗ ಮರು ಆಯ್ಕೆ ಕಷ್ಟವೆನ್ನುವ ಮಾತನ್ನು ಜೆಡಿಎಸ್‌ನ ನಾಯಕರೇ ಹೇಳುತ್ತಿದ್ದರು. ಕಾಂಗ್ರೆಸ್ʼನ ಹಲವು ನಾಯಕರು ದೇವೇಗೌಡರು ಸಕ್ರಿಯ ರಾಜಕೀಯದಿಂದ ದೂರವಿದ್ದರೆ, ನಮಗೆ ಒಕ್ಕಲಿಗ ಮತ ಬ್ಯಾಂಕ್ʼನಲ್ಲಿ ಸಣ್ಣ ಬಿರುಕನ್ನಾದರೂ ತರಲು ಸಾಧ್ಯ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ದೇವೇಗೌಡರ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ಘೋಷಿಸುತ್ತಿದ್ದಂತೆ ಜೆಡಿಎಸ್ ನಾಯಕರಿಗಿಂತ ಹೆಚ್ಚು ‘ನೋವ’ನ್ನು ಕಾಂಗ್ರೆಸಿಗರು ಹೊರಹಾಕಿದ್ದಾರೆ. ಈ ನೋವಿಗೆ ‘ಬಿಜೆಪಿಯಿಂದ ಒಕ್ಕಲಿಗರನ್ನು ದಮನ ಮಾಡುವ ತಂತ್ರ’ ಎನ್ನುವ ಮಾತನ್ನು ಹೇಳುತ್ತಿದ್ದಾರೆ.

ದೇವೇಗೌಡರಿಗೆ ಟಿಕೆಟ್ ನೀಡದಿರುವುದು ತಿಳಿಯುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಒಕ್ಕಲಿಗನಾಯಕರು ಬಿಜೆಪಿ ಹೈಕಮಾಂಡ್ ವಿರುದ್ಧ ಕಿಡಿಕಾರಲು ಶುರು ಮಾಡಿದರು. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒಂದು ಹೆಜ್ಜೆ ಮುಂದೆ ಹೋಗಿ, ‘ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಎಚ್‌ಡಿಕೆ ರಾಜಕೀಯ ಶರಣಾಗತಿ’ ಎಂದು ಟೀಕಿಸಿದರು.

ಕರ್ನಾಟಕದ ಮಾಜಿ ಪ್ರಧಾನಮಂತ್ರಿಯ ಸ್ಥಾನಮಾನಕ್ಕೆ ಗೌರವ ನೀಡಿ ಕಾಂಗ್ರೆಸ್ ಪಕ್ಷ ಹಾಗೂ ಸೋನಿಯಾ ಗಾಂಧಿ ಈ ಹಿಂದೆ ದೇವೇಗೌಡ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಬೆಂಬಲ ನೀಡಿದ್ದರು. ಈ ಎಲ್ಲವನ್ನು ಮರೆತು ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು,ಮೋದಿ ಸರಕಾರ ದಲ್ಲಿ ಎಚ್‌ಡಿಕೆ ಸಚಿವರಾದರು. ಈಗ 2026ರ ಜೂನ್ 7ರಂದು, ಬಿಜೆಪಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರಿಗೆ ರಾಜ್ಯಸಭಾ ನಾಮನಿರ್ದೇಶನ ನೀಡುವುದನ್ನು ನಿರಾಕರಿಸಿ, ತನ್ನ ಪಕ್ಷದ ಪದಾಧಿಕಾರಿಯನ್ನೇ ಆಯ್ಕೆ ಮಾಡಿದೆ. ಆ ಮೂಲಕ ಅಧಿಕಾರಕ್ಕಾಗಿ ತಾವು ಎಲ್ಲದಕ್ಕೂ ಸಿದ್ಧ ಎನ್ನುವುದನ್ನು ಕುಮಾರಸ್ವಾಮಿ ತೋರಿಸಿಕೊಟ್ಟಿದ್ದಾರೆ ಎಂದು ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ಆದರೆ ದೇವೇಗೌಡರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡದಿರಲು ಪ್ರಮುಖವಾಗಿ ಅವರ ಆರೋಗ್ಯ ಮತ್ತು ವಯಸ್ಸೇ ಕಾರಣ ಎನ್ನುವುದು ಬಿಜೆಪಿ-ಜೆಡಿಎಸ್‌ಗೆ ಸ್ಪಷ್ಟವಾಗಿದೆ. ಸಕ್ರಿಯರಾಗಿ ರಾಜ್ಯಸಭೆಯಲ್ಲಿ ಪಾಲ್ಗೊಳ್ಳುವುದು, ದೆಹಲಿ ಓಡಾಟ ಕಷ್ಟ ಸಾಧ್ಯವಾಗಲಿದೆ. ಕರ್ನಾಟಕದಿಂದ ಅಲ್ಲದಿದ್ದರೂ, ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಿಂದ ದೇವೇಗೌಡರಿಗೆ ರಾಜ್ಯಸಭೆ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಸ್ವತಃ ದೇವೇಗೌಡರೇ ಅದಕ್ಕೆ ಒ ಅಂದಿzರೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಪೂರಕ ಎನ್ನುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ‘ದೇವೇಗೌಡರು ರಾಜ್ಯಸಭೆ ಸದಸ್ಯ ಆಗಬೇಕು ಎಂದು ಕೇಳಿರಲಿಲ್ಲ. ಸಾರ್ವಜನಿಕರಿಂದ ಒತ್ತಾಯ ಇತ್ತು. ಅವರನ್ನು ಆಯ್ಕೆ ಮಾಡಿದರೆ ರಾಜ್ಯದ ಸಮಸ್ಯೆ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಿ ಬಗೆಹರಿಯು ತ್ತದೆ ಎಂಬ ಭಾವನೆ ಇತ್ತು. ಅವರು ಯಾವತ್ತೂ ರಾಜ್ಯಸಭೆ ಸ್ಥಾನ ಬೇಕು ಅಂತಹೇಳಿಲ್ಲ. ಅವರು ಅರ್ಜಿ ಹಾಕಿರಲಿಲ್ಲ’ ಎನ್ನುವ ಮೂಲಕ ಕಾಂಗ್ರೆಸ್‌ನ ಎಲ್ಲ ಆರೋಪಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಹಾಗಾದರೆ, ಕಾಂಗ್ರೆಸ್ ದೇವೇಗೌಡರ ವಿಷಯದಲ್ಲಿ ಕಣ್ಣೀರು ಸುರಿಸಿದ್ದು ಏಕೆ ಎನ್ನುವುದಕ್ಕೆ ಉತ್ತರ ಒಕ್ಕಲಿಗ ಸಾಮ್ರಾಜ್ಯ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ಮೊದಲೇ ಹೇಳಿದಂತೆ, ಈಗಲೂ ಕರ್ನಾಟಕದಲ್ಲಿ ಒಕ್ಕಲಿಗರು ದೇವೇಗೌಡರ ಹಿಂದಿದ್ದಾರೆ. ಈಗ ದೇವೇಗೌಡರಿಗೆ ಟಿಕೆಟ್ ನೀಡದೇ ಬಿಜೆಪಿ ಮೋಸ ಮಾಡಿದೆ ಎನ್ನುವಂತೆ ಬಿಂಬಿಸಿದರೆ, ಭವಿಷ್ಯದ ಚುನಾವಣೆಯಲ್ಲಿ ಬಿಜೆಪಿಯನ್ನು ಒಕ್ಕಲಿಗ ವಿರೋಧಿ ಎನ್ನುವಂತೆ ಬಿಂಬಿಸಬಹುದು ಎನ್ನುವ ದೂರಾಲೋಚನೆ ಕಾಂಗ್ರೆಸ್‌ಗಿದೆ.

ಈ ಹಿಂದೆ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯ ವಿರುದ್ಧ ಲಿಂಗಾಯತರು ತಿರುಗಿ ಬಿದ್ದು, ಇಡೀ ಸಮುದಾಯ ಬಿಜೆಪಿಯೊಂದಿಗೆ ಹೋದಂತೆ, ಭವಿಷ್ಯದಲ್ಲಿ ಒಕ್ಕಲಿಗರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರೆ ಭವಿಷ್ಯದಲ್ಲಿ ಪಕ್ಷಕ್ಕೆ ಬಹು ದೊಡ್ಡ ಲಾಭವಾಗುತ್ತದೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿರುವ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಖಾತೆ ಕ್ಯಾತೆ, ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನದ ಹೊರತಾಗಿಯೂ, ಅಧಿಕಾರ ಸ್ವೀಕರಿಸಿದ ವಾರ ಕಳೆಯುವುದರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಹಲವು ಭಾಗಗಳಿಗೆ ‘ಸಮರ್ಪಣಾ ಸಮಾವೇಶ’ದ ನೆಪದಲ್ಲಿ ಭಾನುವಾರ ಇಡೀ ದಿನ ಸುತ್ತಾಡಿದ್ದಾರೆ. ಈ ರ‍್ಯಾಲಿಯಲ್ಲಿ ಮಾತನಾಡುವ ವೇಳೆ, ಅವರಾಡಿದ ಮಾತುಗಳು ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುವುದಕ್ಕಿಂತ ಹೆಚ್ಚಾಗಿ, ಭವಿಷ್ಯದ ರಾಜಕೀಯ ಲೆಕ್ಕಾಚಾರಗಳಿದ್ದವು ಎನ್ನುವುದು ಸ್ಪಷ್ಟ.

ಅದರಲ್ಲಿಯೂ, ‘ನಮ್ಮ ಬದುಕು ಶಾಶ್ವತವಲ್ಲ. ನಾವು ಬಿಟ್ಟು ಹೋಗುವ ಸಾಕ್ಷಿ ಗುಡ್ಡೆಗಳೇ ಶಾಶ್ವತ. ನಾನು ಕೇವಲ ಎರಡು ವರ್ಷ ಮಾತ್ರ ಸಿಎಂ ಆಗಿರಬೇಕೇ..? ನಿಮ್ಮ ಆಶೀರ್ವಾದದಿಂದ 2028ರಲ್ಲಿ ಮತ್ತೆ ಗೆಲ್ಲಬೇಕು. ಅದಕ್ಕೆ ನೀವು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಒಳ್ಳೆ ರೀತಿಯಲ್ಲಿ ಅಧಿಕಾರ ನಡೆಸಿ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗೋಣ. ಜನತಾದಳದ ಕಾರ್ಯಕರ್ತರಿಗೂ ಈ ಡಿ.ಕೆ. ಶಿವಕುಮಾರ್ ಇದ್ದಾನೆ.

ನನ್ನ ಮನೆ ಬಾಗಿಲು ನಿಮಗೂ ತೆರೆದಿದೆ. ನೀವು ನನ್ನನ್ನು ಬಳಸಿಕೊಂಡು, ಸಹಾಯ ಪಡೆಯ ಬಹುದು’ ಎನ್ನುವ ಮೂಲಕ ತಮ್ಮ ಭವಿಷ್ಯದ ಆಲೋಚನೆಯನ್ನು ನೇರವಾಗಿಯೇ ಹೇಳಿದ್ದಾರೆ. ಈ ಮೂಲಕ ಒಕ್ಕಲಿಗ ಮತಗಳನ್ನು ಭದ್ರಪಡಿಸಿಕೊಂಡು, ಹಳೇ ಮೈಸೂರು ಭಾಗದಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಗಳಿಸುವ ಜತೆಜತೆಗೆಈಗಿರುವ ಕ್ಷೇತ್ರಗಳನ್ನು ಉಳಿಸುವ ಲೆಕ್ಕಾಚಾರದಲ್ಲಿದ್ದಾರೆ.

ಹಾಗೆ ನೋಡಿದರೆ, ಮುಖ್ಯಮಂತ್ರಿಯಾಗಿ ಕೂರುವುದು ಖಚಿತವಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ 2028ರ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಆದರೆ ನಾಯಕತ್ವ ಬದಲಾವಣೆಯ ಈ ಸಂಧಿಕಾಲ ವನ್ನು ಬಳಸಿಕೊಳ್ಳಬೇಕಿದ್ದ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ‘ಪೋಸ್ಟ್’ ಮಾಡುವುದರಲ್ಲಿಯೇ ತಮ್ಮ ಪ್ರತಿಪಕ್ಷದ ಕೆಲಸವನ್ನು ನಿಭಾಯಿಸುತ್ತಿದೆ.

ಸಂಪುಟ ಸರ್ಕಸ್, ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ, ಕೃಷ್ಣಬೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯಿಂದ ವಿಮುಖವಾಗಿರುವ ವಿಷಯವನ್ನು ಮುಂದಿಟ್ಟು ಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾಗಿದ್ದ ಅವಕಾಶವನ್ನು ಒಂದು ಹಂತಕ್ಕೆ ಕೈಚೆಲ್ಲಿತ್ತು ಎಂದರೆ ತಪ್ಪಾಗುವುದಿಲ್ಲ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವ ವೇಳೆ ಯಾವುದೇ ಡ್ಯಾಮೇಜ್ ಆಗದಂತೆ ಎಚ್ಚರ ವಹಿಸಿದ್ದಾರೆ ಎನ್ನುವುದು ಸತ್ಯವಾದರೂ, ಪ್ರತಿಪಕ್ಷವಾಗಿ ಈ ಕಾಲವನ್ನು ಬಳಸಿಕೊಂಡು ‘ಹಿಂದ’(ಹಿಂದುಳಿದ, ದಲಿತ) ಸಮುದಾಯವನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಬಹುದು ಎಂದು ಅಂದಾಜಿಸಲಾಗಿತ್ತು. ಇದಕ್ಕೆ ಪೂರಕವಾಗಿ ವಿಧಾನಪರಿಷತ್, ರಾಜ್ಯ ಸಭೆಗಳಿಗೆ ಈ ಹಿಂದೆ ಮಾಡುತ್ತಿದ್ದ ‘ಅಚ್ಚರಿಯ ಆಯ್ಕೆ’ಯ ತಂತ್ರಗಾರಿಕೆಯನ್ನು ಬಿಟ್ಟು, ಜಾತಿ ಸಮೀಕರಣಕ್ಕೆ ಒತ್ತು ನೀಡಿದೆ.

ದೇವೇಗೌಡರಿಂದ ತೆರವಾಗಿದ್ದ ರಾಜ್ಯಸಭೆಗೆ ಕುರುಬ ಸಮುದಾಯದ ಮ.ನಾಗರಾಜ್ ಅವರಿಗೆ ಮಣೆ ಹಾಕಿದ್ದರೆ, ಹಿಂದುಳಿದ ಸಮುದಾಯದ ರಘು ಕೌಟಿಲ್ಯ ಹಾಗೂ ಲಿಂಗಾಯತ ಸಮುದಾಯದ ಲಿಂಗರಾಜ್ ಪಾಟೀಲ್ ಅವರನ್ನು ವಿಧಾನಪರಿಷತ್‌ಗೆ ಕಳುಹಿಸಲು ಮುಂದಾಗಿದೆ. ಜಾತಿ ಸಮೀಕರಣದಲ್ಲಿ ಈ ಬಾರಿ ಬಿಜೆಪಿ ಉತ್ತಮ ನಡೆ ಎನಿಸಿದ್ದರೂ, ಪ್ರತಿಪಕ್ಷವಾಗಿ ಕಾಂಗ್ರೆಸ್‌ನಲ್ಲಿ ಎದ್ದಿರುವ ಗೊಂದಲದ ಲಾಭ ಪಡೆಯುವಲ್ಲಿ ಈಗಲೂ ಪೂರ್ಣ ಪ್ರಮಾಣದಲ್ಲಿ ಎಚ್ಚೆತ್ತಿಲ್ಲ ಎನ್ನುವುದು ಸ್ಪಷ್ಟ. ಅದರಲ್ಲಿಯೂ ಮುಂದಿನ ಮೂರು ತಿಂಗಳಲ್ಲಿ ಎದುರಾಗಲಿರುವ ಜಿಬಿಎ ಚುನಾವಣೆಯ ಸಮಯದಲ್ಲಿ, ಬೆಂಗಳೂರು ನಗರಾಭಿವೃದ್ಧಿ ಖಾತೆಯ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಭಾರಿ ಪ್ರಮಾಣದ ಹೈಡ್ರಾಮ ಸೃಷ್ಟಿಯಾಗಿದೆ.

ಹಿರಿಯ ಕಾಂಗ್ರೆಸಿಗ ರಾಮಲಿಂಗಾರೆಡ್ಡಿ ರಾಜೀನಾಮೆ ಕೊಟ್ಟು, ಬಳಿಕ ಹಿಂಪಡೆದಿದ್ದಾರೆ. ಈಗಲೂ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಅಧಿಕಾರ ಸ್ವೀಕರಿಸಲು ಕೃಷ್ಣಬೈರೇಗೌಡ ಹಿಂದೇಟು ಹಾಕುತ್ತಿದ್ದಾರೆ. ಈ ಅಂಶಗಳನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಇದ್ದ ಅವಕಾಶವನ್ನು ಕಳೆದುಕೊಂಡಿದೆಯೇ ಎನ್ನುವ ಅನುಮಾನ ಮೂಡುತ್ತಿವೆ.

ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ವರ್ಷ ಬಾಕಿಯಿರುವುದರಿಂದ ಈಗಾಗಲೇ ರಾಜಕಾರಣಿ ಗಳು ಸ್ಥಳೀಯ ಮಟ್ಟದಲ್ಲಿ ತಮ್ಮ ಕಾರ್ಯಗಳನ್ನು ಆರಂಭಿಸಿದ್ದಾರೆ. ಕಾಂಗ್ರೆಸ್ನಲ್ಲಿ ಹತ್ತು ಹಲವು ಗೊಂದಲಗಳಿದ್ದರೂ, ಎಲ್ಲವನ್ನು ಬದಿಗಿಟ್ಟು ಮುಂದಿನ ಚುನಾವಣೆಗೆ ತಯಾರಿ ಆರಂಭಿಸಿದೆ. ಇದಕ್ಕೆ ಪೂರಕವಾಗಿ ದೇವೇಗೌಡರಿಗೆ ಸಿಗದ ರಾಜ್ಯಸಭಾ ಅವಕಾಶವನ್ನು ಮುಂದಿಟ್ಟುಕೊಂಡು ಒಕ್ಕಲಿಗರ ಅಸ್ಮಿತೆಯನ್ನು ಕೆಣಕಲು ಪ್ರಯತ್ನಿಸುತ್ತಿದೆ. ಆದರೆ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳಿಗೆ ಬಿಜೆಪಿ ಈ ಹಂತದಲ್ಲಿಯೇ ಉತ್ತರ ಕಂಡುಕೊಳ್ಳಬೇಕಿದೆ. ಇಲ್ಲದೇ ಹೋದರೆ, ಮುಂದಿನ ದಿನದಲ್ಲಿ ಎದುರಾಗಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ಬೀಳುವ ಸಾಧ್ಯತೆಯಿದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ, ಏಕೆಂದರೆ ರಾಜಕೀಯದಲ್ಲಿ ರೈಲಿಗೆ ತಾಸಿನ ಮೊದಲೇ ಟಿಕೆಟ್ ಪಡೆಯಬೇಕು. ರೈಲು ಸ್ಟೇಷನ್‌ನಲ್ಲಿ ನಿಂತಾಗ ಟಿಕೆಟ್ ಪಡೆದರೂ, ಸೀಟು ಸಿಗೋ ಸಾಧ್ಯತೆ ತೀರಾ ಕಡಿಮೆ!