ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

S G Hegde Column: ಹವ್ಯಕ ಭಾಷಾ ಅಕಾಡೆಮಿಯು ಸಾಧಿಸಬೇಕಾದದ್ದೇನು ?

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯತ್ನಿಸಿದ ಸರ್ವರಿಗೆ, ವಿಶೇಷವಾಗಿ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳು ಸಲ್ಲಬೇಕು. ಹವ್ಯಕ ಸಮಾಜವು ಶೀಘ್ರವಾಗಿ ಕ್ಷೀಣಿಸುತ್ತಿರುವ ಸಮುದಾಯಗಳಂದು. ಕೆಲ ದಶಕಗಳ ಹಿಂದೆ ಹವ್ಯಕ ಸಮಾಜವು ಸುಮಾರು 20 ಲಕ್ಷ ಸಂಖ್ಯೆಯನ್ನು ಹೊಂದಿದ್ದ ಕುರಿತು ಕೆಲವು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸ ಲಾಗಿತ್ತು; ಆದರೆ ಈಗ ಸಮಾಜವು ಸುಮಾರು ನಾಲ್ಕೈದು ಲಕ್ಷಕ್ಕೆ ಇಳಿದಿರುವುದಾಗಿ ಅಂದಾಜಿಸ ಲಾಗಿದೆ.

ಪಥ ನಿರ್ಮಾಪಕ

ಎಸ್.ಜಿ.ಹೆಗಡೆ

ಕರ್ನಾಟಕ ಸರಕಾರದ 2026-27ನೇ ಅವಧಿಯ ಬಜೆಟ್ ಮಂಡನೆಯಲ್ಲಿ ಹವ್ಯಕ ಭಾಷೆಯ ಬೆಳವಣಿಗೆಗೆ ‘ಹವ್ಯಕ ಭಾಷಾ ಅಕಾಡಮಿ’ಯ ಸ್ಥಾಪನೆಯನ್ನು ಘೋಷಿಸಿರು ವುದು ಸಂತಸ ತಂದಿದೆ. ಬೆಂಗಳೂರಿನಲ್ಲಿ ಜರುಗಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನವು ಇಂಥ ಅವಶ್ಯ ಕತೆಯ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೆ ಸಮಾಜದ ಅನೇಕ ಪ್ರಮುಖ ವ್ಯಕ್ತಿ ಗಳು, ಅಕಾಡೆಮಿಯ ಅಗತ್ಯತೆಯ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿದಿದೆ.

‘ವಿಶ್ವವಾಣಿ’ಯ ಸಂಪಾದಕ ವಿಶ್ವೇಶ್ವರ ಭಟ್ಟರೂ ತಮ್ಮ ಮಹತ್ವದ ಸಂಪರ್ಕ ಬಳಸಿರುವು ದಾಗಿ ಹೇಳಲಾಗಿದೆ. ಕಳೆದ ವರ್ಷದ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯವಾಗಿ ಆಚರಿಸಿದ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ನಾಡಿನಾದ್ಯಂತ ಜಾಗೃತಿ ಮೂಡಿಸಿ ರುವುದನ್ನು ಇಲ್ಲಿ ಸ್ಮರಿಸಬಹುದು.

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯತ್ನಿಸಿದ ಸರ್ವ ರಿಗೆ, ವಿಶೇಷವಾಗಿ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳು ಸಲ್ಲಬೇಕು. ಹವ್ಯಕ ಸಮಾಜವು ಶೀಘ್ರವಾಗಿ ಕ್ಷೀಣಿಸುತ್ತಿರುವ ಸಮುದಾಯಗಳಂದು. ಕೆಲ ದಶಕಗಳ ಹಿಂದೆ ಹವ್ಯಕ ಸಮಾಜವು ಸುಮಾರು 20 ಲಕ್ಷ ಸಂಖ್ಯೆಯನ್ನು ಹೊಂದಿದ್ದ ಕುರಿತು ಕೆಲವು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಲಾಗಿತ್ತು; ಆದರೆ ಈಗ ಸಮಾಜವು ಸುಮಾರು ನಾಲ್ಕೈದು ಲಕ್ಷಕ್ಕೆ ಇಳಿದಿರುವುದಾಗಿ ಅಂದಾಜಿಸಲಾಗಿದೆ.

20 ಲಕ್ಷದ ಸಂಖ್ಯೆಯು ಸ್ವಾತಂತ್ರ್ಯ ಸಿಕ್ಕ ಕಾಲದ ಅಸುಪಾಸಿನದ್ದಿರಬೇಕು. 1960-70ರ
ಕಾಲ ಘಟ್ಟದಲ್ಲಿ ಹವ್ಯಕ ಮನೆಗಳು ಜನನಿಬಿಡವಾಗಿದ್ದವು. ಹೆಚ್ಚಿನ ಮಟ್ಟಿಗೆ ಅವಿಭಕ್ತ ಕುಟುಂಬಗಳ ಕಾಲವದು. ಪ್ರತಿಯೊಂದು ಮನೆಯಲ್ಲಿ ಸರಾಸರಿ 8-10 ಮಕ್ಕಳಿದ್ದರು. 25-30 ಜನರಿದ್ದ ಮನೆಗಳೂ ಸಾಕಷ್ಟಿದ್ದವು.

ಇದನ್ನೂ ಓದಿ: S G Hegde Column: ಹವ್ಯಕ ಸಮಾಜದ ಮುಂದಿರುವ ಸವಾಲುಗಳು

ಒಂದೂವರೆ ವಯಸ್ಸಿನ ಅಂತರದಲ್ಲಿದ್ದ ಸಾಲು ವಯಸ್ಕರನ್ನು ಪ್ರತಿ ಮನೆಯಿಂದ ಶಾಲೆಗೆ ಹೋಗುವವರಲ್ಲಿ ಕಾಣಬಹುದಿತ್ತು. ಅಂದಿನ ದಿನಗಳಲ್ಲಿನ ಶಾಲಾ ಸಹಪಾಠಿಗಳನ್ನು ನೆನಪಿಸಿಕೊಳ್ಳುವಾಗ ಹಲವು ಕುಟುಂಬದ ವಿದ್ಯಾರ್ಥಿಗಳನ್ನು ಸಮಾನ ವಯಸ್ಸಿನ ಅಂತರದಿಂದ ನೆನಪಿಸಿಕೊಳ್ಳಬಹುದು.

1970ರ ಅವಧಿಯಲ್ಲಿ ಕುಟುಂಬ ಕಲ್ಯಾಣ ಯೋಜನೆಯ ತಿಳಿವಳಿಕೆ ಸಿಕ್ಕಿದ ನಂತರ ಬುದ್ಧಿವಂತ, ಸುಶಿಕ್ಷಿತ ಹವ್ಯಕ ಸಮಾಜದ ಕುಟುಂಬದ ಸಂಖ್ಯೆಯು ತ್ವರಿತ ಗತಿಯಲ್ಲಿ ಕಡಿತಗೊಳ್ಳಲು ಶುರುವಾಯಿತೆನ್ನಬೇಕು.

ಅಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಕೃಷಿ ಕೆಲಸವನ್ನು ಕೇರಿಯ ಹವ್ಯಕ ಕುಟುಂಬದ ಮನೆಗಳ ಸದಸ್ಯರೇ ಸೇರಿ ‘ಮುರಿಯಾಳು ತಂಡ’ವನ್ನು ನಿರ್ಮಿಸಿಕೊಂಡು ನಿಭಾಯಿಸಿ ಕೊಂಡಿದ್ದರು. 70-80ರ ದಶಕದಲ್ಲಿಯೂ ಹಳ್ಳಿಯಿಂದ ಪೇಟೆಗೆ ಹೋಗುವ ಬಸ್ಸುಗಳು ಇನ್ನು ಜಾಗವಿಲ್ಲದಷ್ಟು ತುಂಬಿ ಸಾಗಿದ್ದವು.

ಹಬ್ಬ ಹರಿದಿನಗಲ್ಲಿ ಮನೆಗಳು, ಪರಿಚಿತರು- ಸಂಬಂಧಿಗಳಿಂದ ತುಂಬಿದ್ದ ವಿಶೇಷ ವಿಜೃಂಭಣೆಯಿತ್ತು. ಜನಸಂಖ್ಯೆ ಕ್ಷೀಣಿಸಿದ ಇತ್ತೀಚಿನ ದಿನಗಳಲ್ಲಿ ಜನಸಂಖ್ಯಾ ಅನುಪಾತಕ್ಕೆ ತಕ್ಕಂತೆ ಸಾಮಾಜಿಕ ಚಟುವಟಿಕೆಗಳು ಸೀಮಿತವಾಗಿರುವುದನ್ನು ಕಾಣಬಹುದಾಗಿದೆ.

ಹವ್ಯಕತನವು ಸಾವಿರಾರು ವರ್ಷದ ಘನ ಇತಿಹಾಸವುಳ್ಳದ್ದು. ಕದಂಬರ ರಾಜ ಮಯೂರ
ವರ್ಮ ಉತ್ತರ ಭಾರತದಲ್ಲಿ ನೆಲೆಸಿದ್ದ, ದೇವಕಾರ್ಯದಲ್ಲಿ ತಜ್ಞರಾದ ಸುಸಂಸ್ಕೃತ ಬ್ರಾಹ್ಮಣ ಗುಂಪನ್ನು ಕರ್ನಾಟಕದ ಬನವಾಸಿ ಭಾಗಕ್ಕೆ ಕರೆತಂದು ಲೋಕ ಕಲ್ಯಾಣದ ಕಾರ್ಯದಲ್ಲಿ ತೊಡಗಿಸಿಕೊಂಡ ನಂತರ, ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ಪಸರಿಸಿಕೊಂಡು ಪೂಜೆ -ಪುನಸ್ಕಾರಗಳಲ್ಲಿ ವ್ಯಸ್ತವಾಯಿತು ಹವ್ಯಕ ಸಮಾಜ.

ಸಮಾಜವು ಹವ್ಯ (ಹವನ ) ಮತ್ತು ಗವ್ಯ (ಹೋಮ) ದಲ್ಲಿ ತೊಡಗಿಕೊಂಡಿದ್ದುದರಿಂದ ಎರಡೂ ಪ್ರಕ್ರಿಯೆಯ ಶಬ್ದ ಜೋಡಿಸಿ ಸಮಾಜಕ್ಕೆ ‘ಹವ್ಯಗ’ ನಂತರ ‘ಹವ್ಯಕ’, ‘ಹವೀಕ’ ಹೀಗೆಲ್ಲ ಹೆಸರಾಯಿತು. ಇನ್ನೊಂದು ಹೇಳಿಕೆಯಂತೆ ಅಹಿಚ್ಚತ್ರ ಮೂಲದಿಂದ ಬಂದ ಬ್ರಾಹ್ಮಣ ಗುಂಪನ್ನು ಅಹಿಕ, ಕ್ರಮೇಣ ಹವೀಕ, ಹವ್ಯಕ ಎಂದು ಕರೆಯಲಾಯಿ ತೆನ್ನಲಾಗಿದೆ.

ಈ ಸಮಾಜವು ಇಂದಿಗೂ ಅತಿ ಹೆಚ್ಚು ಅರ್ಚಕರನ್ನು ಹೊಂದಿರುವ ಸಮಾಜ ವೆನಿಸಿ ಕೊಂಡಿರುವುದು ಹೆಮ್ಮೆಯ ಸಂಗತಿ. ಇಲ್ಲಿ ಹೇಳಬೇಕಾದ ಅಂಶವೆಂದರೆ ಹವ್ಯಕ ಭಾಷೆಯ ಹುಟ್ಟು ಮತ್ತು ಬೆಳವಣಿಗೆಯ ಮಹತ್ವದ ಹಿನ್ನೆಲೆ ಏನೆಂಬುದು. ಯಾವುದೇ ಭಾಷೆಯ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಪ್ರಾದೇಶಿಕ ಅಂಶಗಳೊಂದಿಗೆ ಆಯಾ ಸಮೂಹದ ವೃತ್ತಿ ಮತ್ತು ಪ್ರವೃತ್ತಿಯು ಮಹತ್ವದ ಪ್ರಭಾವ ಬೀರಿರುತ್ತದೆ. ಭಾಷೆ ಅಥವಾ ಉಪಭಾಷೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಅರಿಯುವಾಗ ಸಾಮೂಹಿಕ ಬದುಕಿನ ಹಿನ್ನೆಲೆಯ ಅಧ್ಯಯನವು ಮಹತ್ವವಾಗುತ್ತದೆ.

ಭಾಷೆಯೊಂದು ಭೂಮಿಯಲ್ಲಿ ಮೊಟ್ಟ ಮೊದಲು ಉಗಮ ವಾದುದಕ್ಕೆ ಮತ್ತು ಶಬ್ದರೂಪಿ ಸಂವಹನಕ್ಕೆ ಲಕ್ಷಾಂತರ ವರ್ಷಗಳ ಹಿನ್ನೆಲೆ ಮತ್ತು ಹಲವಾರು ಸಿದ್ಧಾಂತಗಳಿವೆ. ಅದು ವೈಜ್ಞಾನಿಕ ಮತ್ತು ಸಾಮಾಜಿಕ ವಿಚಾರಗಳನ್ನೊಳಗೊಂಡಿದ್ದು. ಮೂಲ ಭಾಷೆಯೊಂದು ಸ್ಥಾನೀಯವಾಗಿ ಹುಟ್ಟಿಕೊಂಡು ಅಭಿವೃದ್ಧಿಯಾದ ನಂತರ ಸಹಸ್ರಾರು ಉಪಭಾಷೆಗಳು ಅಭಿವೃದ್ಧಿಗೊಂಡು ಬಳಕೆಗೆ ಬಂದಿವೆ.

ಭಾಷೆ ಮತ್ತು ಉಪಭಾಷೆಗಳ ಹುಟ್ಟು ಮತ್ತು ಬೆಳವಣಿಗೆಯು ಕ್ಲಿಷ್ಟ, ಕುತೂಹಲಕಾರಿ ವಿಚಾರವಾಗಿದೆ. ಜಗತ್ತಿನ ಎಲ್ಲ ಪ್ರಮುಖವಾದ ಭಾಷೆಗಳಿಗೆ ಹೊಂದಿಕೊಂಡು ಉಪಭಾಷೆ ಗಳು ಹುಟ್ಟಿ ಬೆಳೆದುಕೊಂಡಿವೆ. ಸರ್ವೇಸಾಮಾನ್ಯವಾಗಿ ತಿಳಿಯುವ ಸಂಗತಿಯೆಂದರೆ ಒಂದು ವಿಶಿಷ್ಟವಾದ ಸಂಸ್ಕೃತಿ, ವೃತ್ತಿ ಮತ್ತು ಪ್ರವೃತ್ತಿಯನ್ನು ಹೊಂದಿರುವ ಜನ ಸಮೂಹವೊಂದು ಉಳಿದ ಜನ ಸಮೂಹದಿಂದ ವಿವಿಕ್ತವಾಗಿ ಉಳಿದುಕೊಂಡಾಗ ಅಥವಾ ಸ್ಥಳಾಂತರವಾಗಿ ಉಳಿದುಕೊಂಡಾಗ, ತಮ್ಮ ಸಮೂಹದೊಳಗೇ ಸಂವಹನದಲ್ಲಿ ನಿರತ ವಾಗಿರುವಾಗ ಕಾಲಾಂತರದಲ್ಲಿ ತನ್ನದೇ ಅದ ವಿಶಿಷ್ಟ ಸಂವಹನ ಪದ್ಧತಿಯನ್ನು ಪಡೆದುಕೊಳ್ಳುತ್ತದೆ.

ತಮ್ಮದೇ ಮಾತಿನ ಶಬ್ದ ಸಮೂಹಗಳು, ಧಾಟಿ, ವ್ಯಾಕರಣ ಮತ್ತು ರೂಪುರೇಷೆಗಳನ್ನು ಆ ಸಮುದಾಯದವರು ಪಡೆದುಕೊಳ್ಳುತ್ತಾರೆ. ಅಮೆರಿಕದ ಮಧ್ಯ ಅಪ್ಪಾಲಾಚಿಯಾ ಭಾಗವು
ದಕ್ಷಿಣ ಭಾಗದ ವ್ಯಾಕರಣ ರೂಪಿನಿಂದ it ain't not right ಅನ್ನುವ ರೀತಿಯಲ್ಲಿ ಡಬಲ್ ನೆಗೆಟಿವ್ ಬಳಸಿ ಮಾತನಾಡುವುದಿದೆ.

ಆಫ್ರಿಕನ್ ತಂಡವು ಗುಲಾಮಗಿರಿಯಿಂದ ಹೊರ ಬಂದು ಉತ್ತರ ಭಾಗಕ್ಕೆ ಸಾಗಿದಾಗ ಅಂಥ ಅನೇಕ ಅಂಶಗಳೊಂದಿಗೆ ಮಾತನ್ನಾಡುತ್ತಿದೆ. ಇಂಗ್ಲಿಷ್ ಮಾತನಾಡುವವರಲ್ಲಿ ಸೆಲ್ಟಿಕ್ ಪ್ರಭಾವದಿಂದ ಭಾಷೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಸ್ಕಾಟಿಷ್, ಹೈಬೇರಿನೊ, ವೆಲ್ಶ, ಯಾರ್ಕ್ ಶೈರ್ ಮತ್ತು ಲಂಡನ್‌ನಲ್ಲಿ ಆಡುವ ಇಂಗ್ಲಿಷ್ ಭಾಷೆಯಲ್ಲಿ ಸಾಕಷ್ಟು ವ್ಯತ್ಯಾಸ ವಿದೆ.

ಸಾಮಾಜಿಕ ಬದಲಾವಣೆಯ ಕಾರಣದಿಂದ ಪೂರ್ವ ಮತ್ತು ಪಶ್ಚಿಮ ರಷ್ಯಾದ ಭಾಗಗಳಲ್ಲಿ ಉಳಿದಿರುವ ಜನರ ರಷ್ಯನ್ ಆಡುಭಾಷೆಯಲ್ಲಿ ಸಾಕಷ್ಟು ವ್ಯತ್ಯಾಸವಿರುವುದಾಗಿ ಹೇಳಲಾಗಿದೆ. ಆಡುಭಾಷೆಯು ಬೆಳೆದುಕೊಂಡಾಗ ವ್ಯಾಕರಣದ ಜತೆಗೆ ಹಲವಾರು ಶಬ್ದ ಬಳಕೆಯಲ್ಲಿಯೂ ವ್ಯತ್ಯಾಸವಾಗಿವೆ. Garter snake ಅನ್ನುವ ಪದವು ಕ್ರಮೇಣ Garden snake ಎಂದು ಮಾರ್ಪಾಡಾಗಿರುವುದು ಒಂದು ಉದಾಹರಣೆಯಷ್ಟೆ!

ನಿಕರಾಗುವಾದಲ್ಲಿ ಕಿವುಡ ಮಕ್ಕಳ ಗುಂಪೊಂದು ತಮ್ಮದೇ ಉಪಭಾಷೆ ನಿರ್ಮಿಸಿಕೊಂಡ ಕುತೂಹಲಕಾರಿ ಸಂಗತಿಯಿದೆ. ನಾಲ್ಕು ನೂರಕ್ಕೂ ಹೆಚ್ಚು ಕಿವುಡ ಹುಡುಗರು ಪ್ರತ್ಯೇಕ ವಾದ ಶಾಲೆ ಸೇರಿ ಉಳಿಕೆ ಸಾಮಾಜಿಕ ಒಡನಾಟದಿಂದ ದೂರವಾದಾಗ ತಮ್ಮದೇ ಹೊಸ ಸಂe, ಧ್ವನಿ ಮತ್ತು ಶಬ್ದಗಳನ್ನು ಸೃಷ್ಟಿಮಾಡಿಕೊಂಡರು!

ಅವರದೇ ಒಂದು ಭಾಷೆ ಸೃಷ್ಟಿಯಾಯಿತು. ಇದೇ ತಾತ್ವಿಕ ವಿಧಾನದಲ್ಲಿ ಜಗತ್ತಿನಾದ್ಯಂತ ಸಾವಿರಾರು ಆಡುಮಾತಿನ ಭಾಷೆಗಳು ಹುಟ್ಟಿ, ಬೆಳೆದುಕೊಂಡಿದ್ದು! ಹವ್ಯಕರ ಹಿನ್ನೆಲೆ ಯನ್ನು ಪರಿಗ್ರಹಿಸಿದಾಗ ಹವ್ಯಕ ಭಾಷೆಯು ಹೇಗೆ ಶೀಮಂತ ಮತ್ತು ವೈವಿಧ್ಯದಿಂದ ಕೂಡಿದ ಭಾಷೆಯಾಗಿ ಹೊರಹೊಮ್ಮಿತೆಂದು ತಿಳಿಯಬಹುದಾಗಿದೆ.

ಕದಂಬರ ಅರಸ ಕರೆಸಿಕೊಂಡ ಬ್ರಾಹ್ಮಣರ ಗುಂಪು ಅದಾಗಲೇ ಅಶ್ವಮೇಧ ಯಜ್ಞವೂ ಸೇರಿದಂತೆ ಯಜ್ಞ ಯಾಗಾದಿಗಳನ್ನು ನಿರ್ವಹಿಸುವಲ್ಲಿ ಪ್ರಾವೀಣ್ಯ ಪಡೆದಿತ್ತೆಂದು ತಿಳಿದಿದೆ. ಇದೊಂದು ಸುಸಂಸ್ಕೃತ ಸಮುದಾಯವಾಗಿದ್ದು ವೇದ, ಪುರಾಣ, ಉಪನಿಷತ್ತು ಮುಂತಾದ ಶ್ರೇಷ್ಠ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಸಮುದಾಯವಾಗಿತ್ತು ಎಂಬು ದರಲ್ಲಿ ಸಂಶಯವಿಲ್ಲ.

ಜ್ಞಾನ ಸಂಪನ್ನ ಹಿನ್ನೆಲೆಯಿಂದ ಬಂದು ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಕಾಸರಗೋಡು ಭಾಗದಲ್ಲಿ ಸಮಾಜವು ಕ್ರಮೇಣ ಪಸರಿಸಿಕೊಂಡಿತು. ಸಾಂಸ್ಕೃತಿಕ, ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಈ ಜ್ಞಾನ ಸಂಪನ್ನ ಸಮಾಜವು ತನ್ನದೇ ಗುಂಪಿನೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸಿದಾಗ ಮತ್ತು ಸಂವಹಿಸಿದಾಗ ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಕರೆಯಲ್ಪಡುವ ವಿಶಿಷ್ಟ ಹವ್ಯಕ ಭಾಷೆಯು ಕನ್ನಡದ ಉಪಭಾಷೆಯಾಗಿ ರೂಪುಗೊಂಡಿರಬೇಕು.

ಹವ್ಯಕರು ದೇವಕಾರ್ಯದ ಜತೆಗೆ ಇನ್ನೂ ಅನೇಕ ಜೀವನೋಪಾಯದ ಕ್ಷೇತ್ರಕ್ಕೆ ಪಸರಿಸಿ ಕೊಂಡು ಸಾಮಾಜಿಕ ಔನ್ನತ್ಯಕ್ಕೆ ಕೊಡುಗೆ ನೀಡಿದ್ದು ಗಮನಾರ್ಹ. ಕರಾವಳಿ,
ಮಲೆನಾಡಿನ ಮಡಿಲಲ್ಲಿ ಅಡಕೆ, ತೆಂಗಿನ ತೋಟದ ಕೃಷಿಯಲ್ಲಿ ತೊಡಗಿಕೊಂಡ ಸಮಾಜವು ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತನ್ನ ಪ್ರಾವೀಣ್ಯ ವನ್ನು ಪಸರಿಸಿಕೊಂಡಿತು.

ಯಕ್ಷಗಾನದ ದಿಗ್ಗಜ ಕಲಾವಿದರಲ್ಲಿ ಹೆಸರಾಂತ ಹವ್ಯಕರಿದ್ದಾರೆ. ಹವ್ಯಕ ಸಮಾಜದ ಮನೆ-ಮನೆಗಳಲ್ಲಿ ಸಾಧಕರಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಹವ್ಯಕರ ಮಹತ್ತರ ಕೊಡುಗೆ ಯನ್ನು ಗಮನಿಸಬಹುದಾಗಿದೆ. ಇವೆಲ್ಲ ಸಾಂಸ್ಕೃತಿಕ ಹಿನ್ನೆಲೆಯೂ ಭಾಷೆಯ ವೈವಿಧ್ಯಕ್ಕೆ, ಬೆಳವಣಿಗೆಗೆ ಕಾರಣವಾಗಿದೆ.  

ಹವ್ಯಕ ಭಾಷೆಯು ವಿದ್ವತ್ಪೂರ್ಣ ಶಬ್ದ ಸಮೂಹ, ನೀತಿವಾಕ್ಯ ಗಳು, ತನ್ನದೇ ಆದ ವಿಶಿಷ್ಟ ಗಾದೆಮಾತುಗಳು, ವ್ಯಾಕರಣ ಮತ್ತು ಪ್ರಾಸಪದಗಳನ್ನೊಳಗೊಂಡಿವೆ. ಸಂಸ್ಕೃತ ಮತ್ತಿತರ ಭಾಷೆಗಳ ಅರ್ಥಪೂರ್ಣ ನುಡಿಗಟ್ಟುಗಳನ್ನು ಹೊಂದಿದೆ. ಭಾಷಾ ವೈವಿಧ್ಯ ಮತ್ತು ಭಾಷಾ ಸಿರಿವಂತಿಕೆಯ ಕಾರಣಗಳಿಂದಾಗಿ ಭಾಷಾಲೋಕದಲ್ಲಿ ತನ್ನದೇ ವಿಶಿಷ್ಟ ಸ್ಥಾನಮಾನ ವನ್ನು ಪಡೆದಿದೆ.

ಶಿಷ್ಟ ಕನ್ನಡದಿಂದ ಭಿನ್ನವಾಗಿ ಹಳೆಗನ್ನಡ ರೂಪಕಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಹರಿತವಾದ ಸಂವಹನದ ಮೂಲಕ ಎಲ್ಲ ರಸಪ್ರಕಾರಗಳು ಪರಿಣಾಮಕಾರಿಯಾಗಿ ಪ್ರಕಟಗೊಳ್ಳುತ್ತವೆ. ಕನ್ನಡ ಭಾಷೆಯ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕನ್ನಡದ ಉಪಭಾಷೆಯಾದ ಹವಿಗನ್ನಡದ ಅಧ್ಯಯನ ಬಹಳ ಮುಖ್ಯ. ಅತ್ಯಂತ ಹಳೆಯ ಕನ್ನಡ ಗ್ರಂಥಗಳು ಮತ್ತು ಶಾಸನಗಳಲ್ಲಿ ಗೋಚರಿಸುವ ಆದಿದ್ರಾವಿಡ ಲಕ್ಷಣಗಳನ್ನು ಹವ್ಯಕ ಭಾಷೆಯಲ್ಲಿ ಕಾಣಬಹುದಾಗಿದೆ.

ಪ್ರಾಂತ್ಯವಾರು ಭಾಷಾ ವೈವಿಧ್ಯದಿಂದ ಹವಿಗನ್ನಡವು ಇನ್ನೂ ಶ್ರೀಮಂತ ಸಾಂಸ್ಕೃತಿಕತೆ ಯನ್ನು ಪ್ರಕಟಿಸುತ್ತಿದೆ. ಹವಿಗನ್ನಡದ ಭಾಷಾ ಅಧ್ಯಯನ ಮತ್ತು ಸಂರಕ್ಷಣೆಯು ನಮ್ಮ ಕನ್ನಡದ ಒಟ್ಟಾರೆ ಪರಂಪರೆ ಮತ್ತು ಸಂಸ್ಕೃತಿಯನ್ನು ಅರಿಯುವ ನಿಟ್ಟಿನಲ್ಲಿ ಮಹತ್ವ ದ್ದಾಗಿದೆ.

ಹವ್ಯಕ ಸಮಾಜವು ಶೀಘ್ರಗತಿಯಲ್ಲಿ ಕ್ಷೀಣಿಸುತ್ತಿರುವುದರಿಂದ ಮತ್ತು ಜಗತ್ತಿನ ವಿವಿಧ ಭಾಷಿಕರ ನಡುವೆ ಬದುಕುವ ಅನಿರ್ವಾಯತೆಯಲ್ಲಿ ಶಿಥಿಲವಾಗುತ್ತಿರುವಾಗ ಭಾಷಾ ಅಧ್ಯಯನ ಅಕಾಡೆಮಿಯು ಕಾರ್ಯನಿರತವಾಗಿ ಹವ್ಯಕ ಭಾಷೆ ಮತ್ತು ಪೂರಕ ಸಂಸ್ಕೃತಿ ಯ ಆಳವಾದ ಅಧ್ಯಯನ ನಡೆಸಿ, ಆಮೂಲಾಗ್ರ ಅಂಶಗಳನ್ನು ದಾಖಲಿಸುವ ಅಗತ್ಯವಿದೆ.

ಜಗತ್ತಿನಾದ್ಯಂತ ಸುಮಾರು 2000 ಉಪಭಾಷೆಗಳು ಕಳೆದ ನೂರು ವರ್ಷಗಳಲ್ಲಿ ನಶಿಸಿ ಹೋಗಿದ್ದು ಇನ್ನೊಂದು ಶತಮಾನದಲ್ಲಿ 4-5 ಸಾವಿರ ಉಪಭಾಷೆಗಳು ನಶಿಸಿಹೋಗುವ ಸಾಧ್ಯತೆಯನ್ನು ಗುರುತಿಸಲಾಗಿದೆ.

ಅಕಾ-ಬೊ’ಎಂಬ ವಿಶಿಷ್ಟ ಅಂಡಮಾನ್ ಭಾಷೆಯು, ಅದರ ಕಟ್ಟಕಡೆಯ ಮಾತುಗಾರ ‘ಬೊ’ ಮೃತನಾದ ನಂತರ 2010ಲ್ಲಿ ಪೂರ್ತಿಯಾಗಿ ನಶಿಸಿತು. ಜಗತ್ತಿನಾದ್ಯಂತ ಉಪಭಾಷೆ ಗಳು ಕಣ್ಮರೆಯಾಗುತ್ತಿರುವಾಗ ಹವ್ಯಕ ಭಾಷೆಯಂಥ ಸಿರಿವಂತ ಮತ್ತು ವೈವಿಧ್ಯಮಯ ಭಾಷೆಯ ಅಧ್ಯಯನದ ನಿಟ್ಟಿನಲ್ಲಿ ಅಕಾಡೆಮಿಯ ಘೋಷಣೆಯಾಗಿರುವುದು ಮಹತ್ವದ ಹೆಜ್ಜೆ.

ಅಕಾಡೆಮಿಯು ತನ್ನ ಗುರಿಯಿಂದ ವಿಚಲಿತವಾಗದೆ, ನಿರ್ದಿಷ್ಟವಾದ ರಸ್ತೆನಕ್ಷೆಯೊಂದಿಗೆ ಹವ್ಯಕ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮಹತ್ತರ ಕಾರ್ಯದಲ್ಲಿ ತೊಡಗಿರಲಿ ಎಂಬುದೇ ಎಲ್ಲರ ಆಶಯ.

(ಲೇಖಕರು ಪ್ರತಿಷ್ಠಿತ ಫಾರ್ಮಾ ಸಂಸ್ಥೆಯ ನಿರ್ದೇಶಕರು)