S G Hegde Column: ಹವ್ಯಕ ಸಮಾಜದ ಮುಂದಿರುವ ಸವಾಲುಗಳು
ಇದು ಸಾಧಕರಿಂದ ತುಂಬಿರುವ ಒಂದು ಸಮಾಜವೆನ್ನಬಹುದು. ಅದಕ್ಕೇ, ನಾಲ್ಕೈದು ಲಕ್ಷವಷ್ಟೇ ಜನಸಂಖ್ಯೆಯಿದ್ದೂ, ಬಹುಸಂಖ್ಯೆಯ ಜಾತ್ಯಸ್ಥರು ಪ್ರಧಾನವಾಗಿರುವ ಸಮಾಜದಲ್ಲಿ ಬೆಳ್ಳಿ ಚುಕ್ಕಿಯಂತೆ ಪ್ರಕಾಶ ಬೀರುತ್ತಿರುವ, ತನ್ನದೇ ಆದ ‘ಕ್ಷೀರಪಥ’ ನಿರ್ಮಿಸಿಕೊಂಡಿರುವ ಮತ್ತು
Vishwavani News
January 6, 2025
ಹವ್ಯಕುಟುಂಬಿ
ಎಸ್.ಜಿ.ಹೆಗಡೆ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಲ ದಿನಗಳ ಹಿಂದೆ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನವು ಹವ್ಯಕ ಸಮಾಜಕ್ಕೆ ಹೊಸ ಹುರುಪು ನೀಡುವಲ್ಲಿ ಸಾಕಷ್ಟು ಯಶಸ್ವಿಯಾಯಿತೆನ್ನಬೇಕು. ಇದೊಂದು ‘ಜಾತಿ-ಸಮಾವೇಶ’ವಾಗಿ ಉಳಿಯದೆ ಇಡೀ ಸಮಾಜದ ಸಾಂಸ್ಕೃತಿಕ ಔನ್ನತ್ಯಕ್ಕೆ ಸಾಕ್ಷಿಯಾಗಿದ್ದು ಗಮನಾರ್ಹ.
ಶ್ರೀ ರಾಮಚಂದ್ರಾಪುರ ಮಠ, ಶ್ರೀ ಸ್ವರ್ಣವಲ್ಲಿ ಮತ್ತು ಮುನ್ನೆಲೆ ಮಾವು ಮಠಗಳ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಹವ್ಯಕ ಗಣ್ಯರನೇಕರು ಭಾಗವಹಿಸಿ ಸೂಕ್ತ ಸಂದೇಶ ನೀಡಿದ್ದು ಸಾರ್ಥಕವಾದ ಅಂಶ. ಹವ್ಯಕ ಮಹಾಸಭೆಗೆ 81 ವರ್ಷ ತುಂಬಿರುವ ಸಂದರ್ಭ ದಲ್ಲಿ ‘ಸಹಸ್ರಚಂದ್ರ ದರ್ಶನ’ ಪರಿಕಲ್ಪನೆಯಲ್ಲಿ ಸಮ್ಮೇಳನವನ್ನು ಏರ್ಪಡಿಸಿ, ವಿವಿಧ ಕ್ಷೇತ್ರಗಳ ಲ್ಲಿನ ತಲಾ 81 ಮಂದಿ ಸಾಧಕರು ಸೇರಿದಂತೆ ಒಟ್ಟಾರೆ ಸಮಾಜದ 567 ಶ್ರೇಷ್ಠ ಸಾಧಕರನ್ನು ಸನ್ಮಾನಿಸಿದ್ದು ಹೆಮ್ಮೆಯ ಸಂಗತಿ. ಹಾಗೆ ನೋಡಿದರೆ, ಹವ್ಯಕರಿರುವ ಪ್ರತಿ ಊರಿನ ಪ್ರತಿ ಮನೆಯಲ್ಲೂ ಅಪ್ರತಿಮ ಸಾಧಕರಿದ್ದಾರೆ, ಎಲ್ಲರಿಂದ ಗುರುತಿಸಲ್ಪಡಲು ಯೋಗ್ಯರಿದ್ದಾರೆ.
ಇದು ಸಾಧಕರಿಂದ ತುಂಬಿರುವ ಒಂದು ಸಮಾಜವೆನ್ನಬಹುದು. ಅದಕ್ಕೇ, ನಾಲ್ಕೈದು ಲಕ್ಷವಷ್ಟೇ ಜನಸಂಖ್ಯೆಯಿದ್ದೂ, ಬಹುಸಂಖ್ಯೆಯ ಜಾತ್ಯಸ್ಥರು ಪ್ರಧಾನವಾಗಿರುವ ಸಮಾಜದಲ್ಲಿ ಬೆಳ್ಳಿ ಚುಕ್ಕಿಯಂತೆ ಪ್ರಕಾಶ ಬೀರುತ್ತಿರುವ, ತನ್ನದೇ ಆದ ‘ಕ್ಷೀರಪಥ’ ನಿರ್ಮಿಸಿಕೊಂಡಿರುವ ಮತ್ತು ಸರ್ವಸಮಾಜದ ಪ್ರಶಂಸೆಗೆ ಪಾತ್ರವಾಗಿರುವ ಬಳಗವಿದು. ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರು ತಮ್ಮ ಭಾಷಣದಲ್ಲಿ ಹೇಳಿದಂತೆ,ಸಮ್ಮೇಳನದಲ್ಲಿ ಮಾತನಾಡಿದ ವಿವಿಧ ಸಮಾಜಗಳ ಗಣ್ಯರಿಂದ ಹೊಮ್ಮಿದ ಪ್ರಶಂಸೆಯ ನುಡಿಗಳನ್ನು ಸೇರಿಸಿಕೊಂಡು ನಮ್ಮನ್ನು ತೂಗಿ ನೋಡಿದರೆ, ನಮ್ಮ ಒಟ್ಟಾರೆ ಮೌಲ್ಯದಲ್ಲಿ ಅದೆಷ್ಟೋ ಪಾಲು ಏರಿಕೆಯಾಗಿರುವುದು ಅರಿವಾಗುತ್ತದೆ.
ಹವ್ಯಕ ಸಮಾಜದ ಮೌಲ್ಯವೇ ಅಷ್ಟು ವಿಶೇಷವಾದದ್ದು ಅಂದುಕೊಳ್ಳುವುದರಲ್ಲಿ ಸಂಕೋಚವೇಕೆ? ಒಂದಷ್ಟು ಸಾಮಾಜಿಕ ಜಾಲತಾಣಗಳಲ್ಲಿ, ಹವ್ಯಕರ ಸಂಖ್ಯೆಯು 12-15 ಲಕ್ಷವೆಂದು ಹೇಳಲಾಗಿದ್ದರೂ, ಬಹುಶಃ ಇದು ಹಳೆಯ ಕಾಲದಲ್ಲಿ ದಾಖಲಾದ, ಅಂದರೆ ಸ್ವಾತಂತ್ರ್ಯ ಸಿಕ್ಕ ಕಾಲದ ಆಸುಪಾಸಿನ ಸಂಖ್ಯೆಯಿರಬಹುದು. ಇತ್ತೀಚೆಗಿನ ನಿಖರ ಸಂಖ್ಯೆಯು ಲಭ್ಯವಿದ್ದಂತಿಲ್ಲ, ಇತ್ತೀಚೆಗಿನ ಗಣತಿಯಾದಂತಿಲ್ಲ. 1960-80ರ ಕಾಲ ಘಟ್ಟದಲ್ಲಿ ನಾನೇ ನೋಡಿದಂತೆ ಹವ್ಯಕ ಮನೆಗಳು ಜನನಿಬಿಡವಾಗಿದ್ದವು, ಪ್ರತಿ ಮನೆಯಲ್ಲಿ ಸರಾಸರಿ 6-8 ಮಕ್ಕಳಿದ್ದರು. 10-15 ಮಕ್ಕಳಿದ್ದ ಕುಟುಂಬ ಗಳೂ ಸಾಕಷ್ಟಿದ್ದವು. ಒಂದೂವರೆ ವರ್ಷಗಳ ಅಂತರದಲ್ಲಿದ್ದ ಹೋಗುವವರಲ್ಲಿ ಕಾಣಬಹುದಿತ್ತು. ಕುಟುಂಬ ನಿಯಂತ್ರಣ ಕುರಿತಾದ ಅಜ್ಞಾನ ಇದಕ್ಕೆ ಕಾರಣವೆನ್ನಬೇಕು. 1970ರ ಸುಮಾರಿಗೆ ಕುಟುಂಬ ಯೋಜನೆಯ ಕುರಿತು ತಿಳಿವಳಿಕೆ ಶುರುವಾಗಿ, ‘ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು’ ಎಂಬ ಘೋಷವಾಕ್ಯ ಜನಪ್ರಿಯವಾಗಿತ್ತು.
ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಪೋಷಕರು ಅಂದು ಸೋತಿದ್ದೂ ನಿಜವೇ. ಬುದ್ಧಿವಂತ, ಸುಶಿಕ್ಷಿತ ಹವ್ಯಕಸಮಾಜವು ಕುಟುಂಬ ನಿಯಂತ್ರಣದ ವಿಧಾನವನ್ನು ಬೇಗನೆ ಕಾರ್ಯಗತವಾಗಿಸಿಕೊಂಡು ಕೌಟುಂಬಿಕ ಅಭ್ಯುದಯದ ಹಾದಿ ಹಿಡಿಯಿತು. ಸುಮಾರು 2000ನೇ ಇಸವಿಯಲ್ಲಿ ಇಬ್ಬರು ಮಕ್ಕಳನ್ನು ಪಡೆಯುವ ಚಿತ್ರಣ ಕಾಣಿಸಿದ್ದು, ಇನ್ನೂ 10 ವರ್ಷಗಳ ನಂತರ ಒಂದು ಮಗುವಿನತ್ತ ಸಮಾಜ ಸಾಗಿದ್ದನ್ನು ಗುರುತಿಸಬಹುದು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ, ಪಾಶ್ಚಾತ್ಯರ ಪ್ರಭಾವದಿಂದಲೋ ಅಥವಾ ವಿಕೃತ ಮನೋಭಾವದಿಂದಲೋ ‘ಮಕ್ಕಳೇ ಬೇಡ, ಮದುವೆಯೂ ಬೇಡ, ಹಾಗೆಯೇ ಹಾಯಾಗಿರೋಣ’ ಎಂಬ ಮನಸ್ಥಿತಿ ಅಲ್ಲಲ್ಲಿ ಕಾಣುತ್ತಿದೆ. ಸಾಕಷ್ಟು ಆದಾಯ ವಿರುವವರಲ್ಲೂ ಇಂಥ ಮನಸ್ಥಿತಿ ರೂಪುಗೊಂಡಿದೆ. ಡಬಲ್ ಇನ್‌ಕಮ್ ಇರುವವರೂ ‘ನೋ ಕಿಡ್ಸ್’ ಅನ್ನುವುದಿದೆ. ಇದನ್ನೇ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ‘ಡಿಂಕ್’ ಮನಸ್ಥಿತಿ ಎಂದು ಹೇಳಿರುವುದು!
ನಾಲ್ಕೈದು ಲಕ್ಷ ಸಂಖ್ಯೆಗೆ ಕುಸಿದಿರುವ ಸಮಾಜವು ಕೌಟುಂಬಿಕ ಜವಾಬ್ದಾರಿ ನಿಟ್ಟಿನಲ್ಲಿ ಮತ್ತು ಆರ್ಥಿಕ ಮಟ್ಟದಲ್ಲಿ ಗೆಲುವು ಸಾಧಿಸಿದ್ದೇನೋ ನಿಜ. ಜತೆಯಲ್ಲಿ ಸಾಕಷ್ಟು ಸಮಸ್ಯೆಗಳು ಗೋಚರಿಸಿರುವುದನ್ನೂ ತಳ್ಳಿಹಾಕುವಂತಿಲ್ಲ. ಅವುಗಳಲ್ಲಿ ಪ್ರಮುಖವಾಗಿರುವುದು ವೃದ್ಧರ ಸಂಖ್ಯೆಯಲ್ಲಿನ ಏರಿಕೆ ಮತ್ತು ಅವರ ಪಾಲನೆಯ ಸವಾಲುಗಳು. ಇದು ಹವ್ಯಕ ಸಮಾಜಕ್ಕಷ್ಟೇ ಸೀಮಿತವಲ್ಲ, ಇದೊಂದು ಜಾಗತಿಕ ಸಮಸ್ಯೆ. ಅಭಿವೃದ್ಧಿಯತ್ತ ದಾಪುಗಾಲಿಟ್ಟ ದೇಶಗಳನ್ನು ಈ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ಯುರೋಪಿನ ಅನೇಕ ದೇಶಗಳು ಸುಮಾರು 25 ಪ್ರತಿಶತ ವೃದ್ಧರನ್ನು ಹೊಂದಿದ್ದರೆ, ಜಪಾನ್ ನಲ್ಲಿ ಅತಿಹೆಚ್ಚು ಅಂದರೆ ಸುಮಾರು 30 ಪ್ರತಿಶತ ವೃದ್ಧರಿದ್ದಾರೆ.
ಆದರೆ ಅಲ್ಲಿ ವೃದ್ಧರನ್ನು ಪಾಲಿಸಬಲ್ಲ ಯೋಗ್ಯವ್ಯವಸ್ಥೆ ಅದಾಗಲೇ ರೂಪುಗೊಂಡಿದೆ. ನಮ್ಮ ದೇಶವು ಸದ್ಯ 10 ಪ್ರತಿಶತ ವೃದ್ಧರನ್ನು ಹೊಂದಿದ್ದು, ಈ ಸಂಖ್ಯೆಯು ಇನ್ನು 25 ವರ್ಷಗಳಲ್ಲಿ ದ್ವಿಗುಣವಾಗಲಿದೆ ಎನ್ನುತ್ತದೆ ಸಮೀಕ್ಷೆ. ಆದರೆ ಇಲ್ಲಿನ ಹೇಳಿಕೆ ಹವ್ಯಕ ಸಮಾಜಕ್ಕೆ ಅನ್ವಯಿಸದು. ಈಗಾಗಲೇ ಜನಸಂಖ್ಯೆಯನ್ನು ವಿಪರೀತ ಕಡಿತಗೊಳಿಸಿಕೊಂಡಿರುವ ಈ ಸಮಾಜದಲ್ಲಿ ವೃದ್ಧರ ಅನುಪಾತವನ್ನು ಜಪಾನಿನ ಮಟ್ಟಕ್ಕಾದರೂ ಹೋಲಿಸಬಹುದು ಅಥವಾ ಇನ್ನೂ ಹೆಚ್ಚೇ ಇರಲಿಕ್ಕೂ ಸಾಕು. ಕುಮಟಾದ ನಮ್ಮೂರಿನ ಪಕ್ಕದ ಹಳ್ಳಿಯವರೊಬ್ಬರು ಇತ್ತೀಚೆಗೆ ಹೇಳಿದಂತೆ, ಅವರ ಹಳ್ಳಿಯವರ ಸರಾಸರಿ ವಯಸ್ಸು 65!
ಇಂಥ ಗಂಭೀರ ಸಾಮಾಜಿಕ ಪರಿಸ್ಥಿತಿಯಲ್ಲಿ ವೃದ್ಧರ ಕಾಳಜಿಯು ಅತ್ಯಂತ ಸವಾಲಿನ ವಿಷಯವಾಗಿದೆ. ವೃದ್ಧರ ಕಾಳಜಿ ವಹಿಸಿಕೊಳ್ಳಬಲ್ಲ ಸುಸಜ್ಜಿತ ವೃದ್ಧಾಶ್ರಮಗಳನ್ನು ಅಲ್ಲಲ್ಲಿ ನಿರ್ಮಿಸುವ ಕುರಿತು ತ್ವರಿತವಾಗಿ ಮುಂದಾಗಬೇಕಿದೆ. ಸಮಾಜಕ್ಕೆಂದು ಅಲ್ಲಲ್ಲಿ ನಿರ್ಮಿತವಾಗಿರುವ ಕಲ್ಯಾಣ ಮಂಟಪಗಳಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವೃದ್ಧಾಶ್ರಮವೂ ಅನಿವಾರ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಮಠಾಽಶರುಗಳು ಮತ್ತು ಸಂಘ-ಸಂಸ್ಥೆಗಳು ಕ್ರಮ ಕೈಗೊಳ್ಳಬೇಕಿದೆ. ಇನ್ನು 15-20 ವರ್ಷಗಳಲ್ಲಿ ಮಿತಿಮೀರಿ ಹೋಗಬಲ್ಲ, ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲ ಗಂಭೀರ ಸಮಸ್ಯೆಯಿದು.
ತನ್ನತನವನ್ನು ಗುರುತಿಸಿಕೊಂಡಿರುವ ಹವ್ಯಕ ಸಮಾಜಕ್ಕೆ ತಲಾಂತರಗಳಿಂದ ಆದಾಯ ಮೂಲವಾಗಿದ್ದುದು ಕೃಷಿ ಕಾರ್ಯ ಮತ್ತು ಅರ್ಚಕರಾಗಿ ನಡೆಸುವ ಪೂಜೆ-ಪುನಸ್ಕಾರದ ಕಾರ್ಯ. ಕರಾವಳಿ ಮತ್ತು ಮಲೆನಾಡು ಪ್ರದೇಶದ ಹಳ್ಳಿಗಳಲ್ಲಿ ಅಡಕೆ ತೋಟವಿರುವಲ್ಲಿ ಹವ್ಯಕ ಸಮಾಜದ ಹೆಚ್ಚಿನ ವಾಸ್ತವ್ಯ ವಿದೆ. ಅಡಕೆ, ವೀಳ್ಯದೆಲೆ, ತೆಂಗು, ಬಾಳೆ, ಕಾಳುಮೆಣಸು ಇತ್ಯಾದಿ ತೋಟಮೂಲದ ಬೆಳೆಗಳು, ಹವ್ಯಕರು ಪ್ರಾವೀಣ್ಯಪಡೆದ ಕೃಷಿಯ ಭಾಗ. ಸಾಂಪ್ರದಾಯಿಕವಾಗಿ ಅಡಕೆ- ವೀಳ್ಯದೆಲೆಯ ತಾಂಬೂಲ ಸವಿಯುವ ಸಮಾಜವಿದು.
ಅಂದರೆ ಅಡಕೆ ತೋಟವು ಹವ್ಯಕತನದ ಅವಿಭಾಜ್ಯ ಅಂಗ, ಹವ್ಯಕರಿಗೂ ಅದರೆಡೆಗೆ ಪ್ರೀತಿ-ಆಪ್ಯಾಯತೆ. ಕೆಲ ವರ್ಷಗಳಿಂದ ಕ್ರಾಂತಿಕಾರಿ ಬದಲಾವಣೆಯನ್ನು ಕಾಣುತ್ತಿರುವ ನಮ್ಮ ಹಳ್ಳಿಗಳಲ್ಲಿ ಅಡಕೆ ತೋಟದ ಒಡೆತನಕ್ಕೆ ಸವಾಲು ಎದುರಾಗುತ್ತಿದೆ. ಇದಕ್ಕೆ ಕಾರಣ ವೃದ್ಧರಿರುವ ಮನೆಗಳು, ಕೆಲಸಗಾರರ ಕೊರತೆ ಮತ್ತು ಅಪೇಕ್ಷಿತ ಉತ್ಪನ್ನವಿಲ್ಲದಿರುವುದು. ಹೀಗಾಗಿ, ಹವ್ಯಕತನದ ಸ್ಪರ್ಶವಿರುವ ಕೃಷಿಕಾರ್ಯವನ್ನು ಇನ್ನೆಷ್ಟು ಕಾಲ ಉಳಿಸಿಕೊಳ್ಳಲು ಸಾಧ್ಯವೋ ಎಂಬ ಚಿಂತೆಯಿದೆ. ಕೃಷಿಭೂಮಿಯನ್ನು ಹವ್ಯಕ ಸಮಾಜವು ಉಳಿಸಿಕೊಂಡು ಒಟ್ಟಾಗಿ ನಿಭಾಯಿಸುವ ಬಗ್ಗೆ ಗಂಭೀರವಾಗಿ ವಿಚಾರ ಮಾಡಿದರೆ ಅದು ಅರ್ಥಗರ್ಭಿತವೆನಿಸುತ್ತದೆ.
ಕದಂಬರ ಶ್ರೇಷ್ಠ ರಾಜನಾದ ಮಯೂರವರ್ಮನು, ಉತ್ತರ ಭಾರತದ ಭಾಗದಲ್ಲಿ ನೆಲೆಸಿದ್ದ ಸುಸಂಸ್ಕೃತ ಬ್ರಾಹ್ಮಣರನ್ನು ಕರೆತಂದು ಲೋಕಕಲ್ಯಾಣದ ಕಾರ್ಯದಲ್ಲಿ ತೊಡಗಿಸಿಕೊಂಡ ನಂತರ, ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಪಸರಿಸಿ ಪೂಜೆ-ಪುನಸ್ಕಾರಗಳಲ್ಲಿ ವ್ಯಸ್ತವಾಯಿತು ಹವ್ಯಕ ಸಮಾಜ; ಈ ಬಳಗವು ಇಂದಿಗೂ ಅತಿಹೆಚ್ಚು ಅರ್ಚಕರಿರುವ ಬ್ರಾಹ್ಮಣ ಸಮಾಜವೆನಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಆದರೆ ಇತ್ತೀಚೆಗೆ, ಅರ್ಚಕ ವೃತ್ತಿಯಲ್ಲಿ ತೊಡಗಿರುವ ಯುವಕರನ್ನು ವಿವಾಹವಾಗಲು ಸಮಾಜದ ಯುವತಿಯರು ಹಿಂಜರಿಯು ತ್ತಿರುವುದು ‘ಹವ್ಯಕ ಮೂಲತತ್ವ’ವನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಸವಾಲಾಗಿ ಪರಿಣಮಿಸುತ್ತಿದೆ. ಒಳ್ಳೆಯ ಆದಾಯವಿರುವ, ನಿವೃತ್ತಿ ಯಿಲ್ಲದಿರುವ, ದೇವತಾಕಾರ್ಯ ದಂಥ ಲೋಕಕಲ್ಯಾಣದ ವೃತ್ತಿಯೂ ಉನ್ನತವಾದುದು ಎಂಬುದನ್ನು ನಮ್ಮ ಸಮಾಜದ ಸೀಯರು ಅರಿಯಬೇಕು.
ಅಮೆರಿಕ ಮುಂತಾದ ಮುಂದುವರಿದ ದೇಶಗಳಲ್ಲಿ, ಆದಾಯ ವಿರುವ ಯಾವುದೇ ಜೀವನೋಪಾಯಕ್ಕೆ ‘ವೃತ್ತಿಜೀವನ’ದ ಸಮಾನ ಸ್ಥಾನವಿದ್ದು, ಯಾವುದೇ ವೃತ್ತಿಯವರನ್ನು ಮದುವೆ ಯಾಗಲು ಅಲ್ಲಿನವರು ಹಿಂಜರಿಯುವುದಿಲ್ಲ; ಉದಾಹರಣೆಗೆ, ವಾಹನ ಚಾಲಕನನ್ನು ಮದುವೆಯಾಗಲು ವೈದ್ಯೆಯಾದವಳು ಹಿಂದು-ಮುಂದು ನೋಡುವುದಿಲ್ಲ. ಇಂಥ ಮೇಲ್ಪಂಕ್ತಿಗಳನ್ನು ನಮ್ಮ ಸಮಾಜವೂ ಅನುಸರಿಸುವುದು ಒಳ್ಳೆಯದು. ಸಕಾಲದಲ್ಲಿ ಮದುವೆಯಾಗುವ ಮತ್ತು ಮಕ್ಕಳನ್ನು ಮಾಡಿಕೊಳ್ಳುವ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸುವುದು ಸಮಾಜದ ಆದ್ಯತೆಯಾಗಬೇಕು. ಇನ್ನು, ಶ್ರೀಗಳು ಸೂಚಿಸಿದಂತೆ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂಥದ್ದು, ಅವರವರ ಆಯ್ಕೆಗೆ ಬಿಟ್ಟ ವಿಚಾರವಾಗಿ ಉಳಿಯಬಹುದು!
ಅತಿಥಿ ಸತ್ಕಾರ, ಸೌಜನ್ಯ, ಶಿಷ್ಟಾಚಾರ ಮುಂತಾದವು ಹವ್ಯಕ ಸಮಾಜದ ವಿಶೇಷ ಗುಣಗಳು. ಅತಿಥಿಗಳನ್ನು ದೇವ ಸಮಾನವಾಗಿ ಕಾಣುವ ಸಮಾಜ ನಮ್ಮದು. ಬದಲಾದ ಕಾಲಘಟ್ಟದಲ್ಲಿ ಹವ್ಯಕರ ಮನೆಗೂ ಮುಂಚಿತವಾಗಿ ತಿಳಿಸಿ ಹೋಗುವ ಸ್ಥಿತಿಯಿದೆ ಅಥವಾ ಪರಸ್ಪರ ಭೇಟಿ, ಒಡನಾಟಗಳು ಹೆಚ್ಚು ಮುಂಚಲನ ಕಂಡಿದ್ದು ನಿಜ. ಇದನ್ನು ಅವಗುಣವೆನ್ನಲಾಗದು; ಸಮಾಜವು ಅಭಿವೃದ್ಧಿಯತ್ತ ಸಾಗಿದಾಗ ಇವೆಲ್ಲಸಹಜವೇ. ಮೂಲತನ ಉಳಿಸಿಕೊಳ್ಳುವ ತತ್ವದಲ್ಲಿ ಇಂಥ ಅನೇಕ ಸನ್ನಿವೇಶಗಳನ್ನು ಪರಿಗಣಿಸದಿರುವುದು ಒಳ್ಳೆಯದು.
ಹವ್ಯಕತನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎದ್ದು ಕಾಣುವ ಅಂಶಗಳೆಂದರೆ- ‘ಹವ್ಯಕ ಮಾತು ಮತ್ತು ಅಡುಗೆ’. ಏಕೆಂದರೆ ವಿವಿಧ ಪಟ್ಟಣಗಳಲ್ಲಿ ನೆಲೆಸಬೇಕಾಗಿ ಬಂದಿರುವ ಅನೇಕ ಹವ್ಯಕ ಕುಟುಂಬಗಳು, ‘ಹವ್ಯಕ ಸೊಗಡಿನ’ ಭಾಷೆಯನ್ನು ಮರೆತಂತಿದೆ; ಈ ಕೊರತೆಯನ್ನು ನೀಗಿಕೊಂಡರೆ ಹೆಚ್ಚು ಪಾಲಿನ ‘ಹವ್ಯಕತನ’ವನ್ನು ಕಾಪಾಡಿಕೊಂಡಂತೆ. ಇನ್ನು, ಕಜ್ಜಾಯ ಸೇರಿದಂತೆ ಹವ್ಯಕ ಶೈಲಿಯ ತಿಂಡಿ-ತಿನಿಸುಗಳನ್ನು ಪ್ರತಿಯೊಂದು ಹವ್ಯಕರ ಮನೆಯಲ್ಲೂ ಮಾಡುವುದು, ತನ್ಮೂಲಕ ಮುಂದಿನ ಪೀಳಿಗೆಯೂ ನಮ್ಮ ಸಾಂಪ್ರದಾಯಿಕ ಖಾದ್ಯಗಳಲ್ಲಿ ಪ್ರೀತಿ ಉಳಿಸಿಕೊಳ್ಳುವಂತೆ ನೋಡಿಕೊಳ್ಳುವುದು ಅಸಾಧ್ಯವೇನಲ್ಲ. ನನ್ನ ಮಕ್ಕಳು ಮುಂಬೈನಲ್ಲಿ ಹುಟ್ಟಿ ಬೆಳೆದು, ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿಯರನ್ನು ಮದುವೆಯಾದರು. ಈ ಪೈಕಿ ಒಬ್ಬ ಮಗನ ಕುಟುಂಬ ಅಮೆರಿಕಕ್ಕೆ ಶಿಫ್ಟ್ ಆಯಿತು.
ಆದರೆ, ಎಲ್ಲರೂ ನಮ್ಮ ಅಡುಗೆಯನ್ನು ಪ್ರೀತಿಸುತ್ತಾರೆ, ಮನೆಯಲ್ಲಿ ‘ಹವ್ಯಕ ಮಾತನ್ನೇ’ ತಪ್ಪದೇ ಆಡುತ್ತಾರೆ. ಮೊಮ್ಮಕ್ಕಳ ಬಾಯಲ್ಲೂ ‘ಹವ್ಯಕವಾಣಿ’ ನಿರರ್ಗಳ! ನಮ್ಮ ಸಾಂಪ್ರದಾಯಿಕ ಊಟ-ತಿಂಡಿಗಳನ್ನು ಪ್ರೀತಿಯಿಂದ ಸವಿಯುತ್ತಾರೆ, ನಿತ್ಯವೂ ದೇವರ ಪೂಜೆ, ಸ್ತೋತ್ರ ಪಠನ ತಪ್ಪದು. ಜನರೊಂದಿಗಿನ ಪ್ರೀತಿ-ಸೌಹಾರ್ದದ ಒಡನಾಟಕ್ಕೂ ಬಾಧಕವಿಲ್ಲ. ‘ಹವ್ಯಕತನ’ ಎಂದರೆ ಇದೇ ಅಲ್ಲವೇ? ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿದ ಡಾ.ಗಿರಿಧರ ಕಜೆ ಮತ್ತು ಅವರ ಒಡನಾಡಿಗಳ ಸಮರ್ಪಣಾ ಭಾವವನ್ನು ಎಷ್ಟು ಕೊಂಡಾಡಿದರೂಕಡಿಮೆಯೇ. ಈ ಸಮ್ಮೇಳನದಿಂದಾಗಿ ನಮ್ಮ ಸ್ಪೂರ್ತಿ ಖಂಡಿತ ಇಮ್ಮಡಿಯಾಗಿದೆ.
ವಿವಿಧ ವಯೋಮಾನದ ಹವ್ಯಕರು, ಅವರಿರುವ ಪ್ರದೇಶ, ಅವರ ವೃತ್ತಿ ಮತ್ತು ಸ್ಥಿತಿಗತಿ ಇತ್ಯಾದಿ ಅಂಶಗಳನ್ನು ಒಳಗೊಂಡ ಹವ್ಯಕ ಜನಗಣತಿಯನ್ನು ಹವ್ಯಕ ಮಹಾಸಭೆಯ ವತಿಯಿಂದ ತ್ವರಿತವಾಗಿ ಕೈಗೊಳ್ಳಬೇಕಾದ್ದು ಆದ್ಯತೆಯಾಗಬೇಕು. ಈ ವೇಳೆ ದಕ್ಕುವ ನಿಖರಮಾಹಿತಿಯ ನೆರವಿನಿಂದ ಸಮಾಜಕ್ಕೆ ಸೂಕ್ತವಾದ ಕಾರ್ಯ ಕ್ರಮಗಳನ್ನು ಸೂಚಿಸುವುದು ಮತ್ತು ರೂಪಿಸುವುದು ಸುಲಭ ವಾದೀತು.
(ಲೇಖಕರು ಮುಂಬೈನ ಲಾಸಾ ಸೂಪರ್ ಜನೆರಿಕ್ಸ್‌ನ ಸಂಸ್ಥಾಪಕ ನಿರ್ದೇಶಕರು)
ಇದನ್ನೂ ಓದಿ: #ravihegde