ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಬುರುಡೆ ಪ್ರಕರಣದಲ್ಲಿ ಕೊನೆಗೆ ಸಿಕ್ಕಿದ್ದೇನು ?

ಕಳೆದೊಂದು ತಿಂಗಳಿನಿಂದ ರಾಜ್ಯದ ಅರಳಿಕಟ್ಟೆಗಳಿಂದ ಹಿಡಿದು ಸಾಮಾಜಿಕ ಜಾಲತಾಣ, ಮಾಧ್ಯಮ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸದ್ದಾಗುತ್ತಿರುವ ಏಕೈಕ ವಿಷಯ ಧರ್ಮಸ್ಥಳದ ಅನಾಮಧೇಯ ವ್ಯಕ್ತಿಯ ಬುರುಡೆ ಪ್ರಕರಣ. ವ್ಯಕ್ತಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬುರುಡೆ ಸಮೇತ ಬಂದಿದ್ದು, ಬಳಿಕ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದು, ನಂತರ ಎಸ್‌ಐಟಿ ರಚನೆಯಾಗಿದ್ದು ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯ.

ಅಶ್ವತ್ಥಕಟ್ಟೆ

ranjith.hoskere@gmail.com

ರಾಜಕೀಯದಲ್ಲಿ ಯಾವಾಗ ಏನು ಮಾತನಾಡಬೇಕು ಎನ್ನುವುದು ಬಹುಮುಖ್ಯವಾದ ಅಂಶ ಎನ್ನುವುದನ್ನು ಈ ಹಿಂದೆ ಹಲವು ಸಮಯದಲ್ಲಿ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ಮತ್ತೊಮ್ಮೆ ಅದೇ ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಈ ಸಮಯಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ ಎಂದರೆ ತಪ್ಪಾಗುವುದಿಲ್ಲ.

ಕಳೆದೊಂದು ತಿಂಗಳಿನಿಂದ ರಾಜ್ಯದ ಅರಳಿಕಟ್ಟೆಗಳಿಂದ ಹಿಡಿದು ಸಾಮಾಜಿಕ ಜಾಲತಾಣ, ಮಾಧ್ಯಮ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸದ್ದಾಗುತ್ತಿರುವ ಏಕೈಕ ವಿಷಯ ಧರ್ಮಸ್ಥಳದ ಅನಾಮಧೇಯ ವ್ಯಕ್ತಿಯ ಬುರುಡೆ ಪ್ರಕರಣ. ವ್ಯಕ್ತಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬುರುಡೆ ಸಮೇತ ಬಂದಿದ್ದು, ಬಳಿಕ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದು, ನಂತರ ಎಸ್‌ಐಟಿ ರಚನೆಯಾಗಿದ್ದು ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯ.

ಆದರೆ ಇಡೀ ಪ್ರಹಸನದ ಸಮಯದಲ್ಲಿ ‘ಮೌನ’ವಾಗಿದ್ದ ಬಿಜೆಪಿ ಈಗ ಏಕಾಏಕಿ ಧರ್ಮಸ್ಥಳದ ಪರವಾಗಿ ಬಹುದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದೆ. ಈಗ ಧರ್ಮಸ್ಥಳ ರ‍್ಯಾಲಿ ಮಾಡುತ್ತಿರುವ ಬಿಜೆಪಿ ಈ ಹಿಂದೆ ಎಸ್‌ಐಟಿ ರಚನೆಯ ಸಮಯದಲ್ಲಿ ಮೌನವಾಗಿದ್ದು ಏಕೆ? ಎನ್ನುವ ಪ್ರಶ್ನೆಗೆ ಬಿಜೆಪಿಯ ಬಳಿ ಉತ್ತರವಿಲ್ಲ. ಅದರ ಬಗ್ಗೆ ಪ್ರಸ್ತಾಪಿಸುವ ಮೊದಲು ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಹತ್ತು-ಹಲವು ವಿದ್ಯಮಾನ ನಡೆದರೂ, ಇಡೀ ರಾಜ್ಯದ ಗಮನ ಸೆಳೆದದ್ದು ಮಾತ್ರ ‘ಮಾಸ್ಕ್’ ಮ್ಯಾನ್‌ನ ಆರೋಪ ಹಾಗೂ ಅದರ ಸುತ್ತಮುತ್ತಲಿನ ಬೆಳವಣಿಗೆ.

ಮಳೆಗಾಲದ ಅಧಿವೇಶನ, ಒಳ ಮೀಸಲು, ದರ್ಶನ್ ಮರಳಿ ಜೈಲಿಗೆ ಸೇರಿದಂತೆ ಹಲವಾರು ಸುದ್ದಿ ಗಳು ಬಂದರೂ, ಧರ್ಮಸ್ಥಳದ ಬುರುಡೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ:Ranjith H Ashwath Column: 'ರಾಜಕೀಯʼ ಸಂಘರ್ಷಕ್ಕೆ ಶಿಕ್ಷಣ ನಲುಗದಿರಲಿ

ಹಾಗೇ ನೋಡಿದರೆ, ಧರ್ಮಸ್ಥಳದಲ್ಲಿ ದೇವಾಲಯ ಆಡಳಿತ ಮಂಡಳಿ ಸೂಚನೆ ಮೇರೆಗೆ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿಕೊಂಡು ಬಂದ ‘ಭೀಮ’ ಪೊಲೀಸರಿಗೆ ದೂರು ಸಲ್ಲಿಸಿ, ಬಳಿಕ ನ್ಯಾಯಾಧೀಶರ ಮುಂದೆ ‘ಬುರುಡೆ’ಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿದ್ದ. ಈ ಅನಾಮಿಕ ಭೀಮನ ಆರೋಪವನ್ನು ಆರಂಭದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಏಕೆಂದರೆ, ಸೌಜನ್ಯ ಪ್ರಕರಣದ ಬಳಿಕ ಈ ರೀತಿಯ ಆರೋಪ ಮಾಡಿಕೊಂಡು ಬರುವ ಜನರ ಸಂಖ್ಯೆಗೇನು ಧರ್ಮಸ್ಥಳದಲ್ಲಿ ಕಡಿಮೆಯಿಲ್ಲ. ವರ್ಷಕ್ಕೊಮ್ಮೆ, ಎರಡು ವರ್ಷಕ್ಕೊಮ್ಮೆ ನಾನು ನೋಡಿದ್ದೆ, ನಾನು ಮಾಡಿದ್ದೆ ಎಂದು ಹೇಳಿಕೊಂಡು ಬರುವವರನ್ನು ನೋಡಿರುವುದರಿಂದ ಆರಂಭದಲ್ಲಿ ಈ ಆರೋಪಕ್ಕೆ ಏಕೆ ಹೆಚ್ಚು ಪ್ರಾಶಸ್ತ್ಯ ಸಿಗಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

mass burial dharmasthala

ಆದರೆ ಈ ಬಾರಿ ಸಾಮಾಜಿಕ ಜಾಲತಾಣ ಹಾಗೂ ಯುಟ್ಯೂಬ್‌ನಲ್ಲಿ ಆರಂಭವಾಗಿರುವ ಕೆಲ ಚಾನೆಲ್‌ಗಳನ್ನು ಬಳಸಿಕೊಂಡು ಒಂದು ಗುಂಪು ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯ ಹರಡಿವಂತೆ ನೋಡಿಕೊಂಡಿತ್ತು. ಈ ಸುದ್ದಿಯನ್ನು ಹರಡಿಸುವವರ ಸಂಖ್ಯೆ ಕಡಿಮೆಯಿದ್ದರೂ, ‘ವ್ಯವಸ್ಥಿತ’ವಾಗಿ ಎಲ್ಲರಿಗೂ ರೀಚ್ ಆಗುವಂತೆ ನೋಡಿಕೊಂಡಿತ್ತು. ಈ ತಂಡ ಕೇವಲ ಮಂಗಳೂರು ಅಥವಾ ಕರ್ನಾಟಕಕ್ಕೆ ಸೀಮಿತವಾಗದೇ, ನೆರೆಯ ಕೇರಳದ ಮೂಲಕವೂ ತನ್ನ ಬೇಳೆ ಬೇಯಿಸಿ ಕೊಳ್ಳುವ ಪ್ರಯತ್ನ ನಡೆಸಿತ್ತು.

ಮೊದಲೇ ಕಮ್ಯುನಿಸ್ಟರ ಪ್ರಭಾವದಲ್ಲಿರುವ ಕೇರಳದಲ್ಲಿ, ಧರ್ಮಸ್ಥಳದ ಬಗ್ಗೆ ಏನೇ ಮಾತಾಡಿ ದರೂ, ಅದು ‘ಮತಗಳಿಕೆ’ಗೆ ಹೊಡೆತ ಬೀಳುವುದಿಲ್ಲ ಎನ್ನುವುದು ಅಲ್ಲಿನ ರಾಜಕಾರಣಿಗಳಿಗೆ ಗೊತ್ತಿರುವುದರಿಂದ, ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದರು.

ಹೀಗೆ ಅನಾಮಧೇಯ ವ್ಯಕ್ತಿಯ ಬುರುಡೆ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರೂ, ಕರ್ನಾಟಕದ ಕಾಂಗ್ರೆಸ್ ನಾಯಕರು ಹೆಚ್ಚೇನು ತಲೆಕೆಡಿಸಿಕೊಂಡಿರಲಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣಕ್ಕೆ ಎಸ್‌ಐಟಿಯ ಅಗತ್ಯವಿಲ್ಲ ಎಂದಿದ್ದರು. ಆದರೆ ಕೇರಳದ ಲಾಭಿ ಹಾಗೂ ಕರ್ನಾಟಕದಲ್ಲಿಯೇ ಇರುವ ಕೆಲ ಬುದ್ಧಿಜೀವಿಗಳು ಕಾಂಗ್ರೆಸ್‌ನ ದಿಲ್ಲಿ ನಾಯಕರ ಮೂಲಕ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ್ದರು.

ಇದರ ಫಲವೇ ಹಿಂದಿನ ದಿನವಿನ್ನೂ ಎಸ್‌ಐಟಿ ರಚನೆಯ ಅಗತ್ಯವಿಲ್ಲ ಎಂದಿದ್ದ ಸರಕಾರ, ಮರು ದಿನ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿ ದರು. ಆದೇಶ ಹೊರಡಿಸುವಂತೆ ಒತ್ತಡ ಹೇರಿದವರಿಗೆ ಆತ ಹೇಳಿದ ಜಾಗದಲ್ಲಿ ನೂರಾರು ಹೋಗಲಿ, ಬೆರಳೆಣಿಕೆಯಷ್ಟು ಶವಗಳ ಕುರುಹು ಸಿಕ್ಕಿದ್ದರೂ, ಇಂದು ಇಡೀ ಧರ್ಮಸ್ಥಳವನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದರು ಎನ್ನುವುದರಲ್ಲಿ ಅನುಮಾನವಿರಲಿಲ್ಲ.

ಆದರೆ ಈ ರೀತಿಯ ಆದೇಶ ಹೊರಡಿಸಿದ ಬಹುತೇಕರಿಗೆ ಅನಾಮಧೇಯ ವ್ಯಕ್ತಿ ಹೇಳುತ್ತಿರುವ ನೂರಾರು ಶವಗಳ ಆರೋಪ ‘ಅತಿಶಯೋಕ್ತಿ’ಯಿಂದ ಕೂಡಿದೆ ಎನ್ನುವುದು ತಿಳಿದಿತ್ತು. ವ್ಯವಸ್ಥಿತ ಪಿತೂರಿಯ ಭಾಗವಾಗಿಯೇ ವಿಶೇಷ ತನಿಖಾ ತಂಡ ರಚನೆಯಾಗುವಂತೆ ನೋಡಿಕೊಂಡಿದ್ದ ತಂಡಕ್ಕೆ ಸೌಜನ್ಯ ಸಾವಿಗೆ ನ್ಯಾಯ ಎನ್ನುವುದಕ್ಕಿಂತ ಹೆಚ್ಚಾಗಿ ಧರ್ಮಸ್ಥಳದ ವಿರುದ್ಧ ಮಾತನಾಡ ಲು ಒಂದು ಅಸ್ತ್ರ ಬೇಕಿತ್ತಷ್ಟೆ.

ಈ ವಿಷಯ ರಾಜ್ಯ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈಗ ಧರ್ಮಸ್ಥಳದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿರುವ ಯಾವೊಬ್ಬ ನಾಯಕರೂ ಅಂದು ಧರ್ಮಸ್ಥಳದ ಪರವಾಗಿ ಒಂದೇ ಒಂದು ಹೇಳಿಕೆಯನ್ನು ನೀಡಲಿಲ್ಲ. ಇಂದು ಬಿಜೆಪಿ ಯವರು ಎಸ್‌ಐಟಿ ರಚನೆಯ ಸಮಯದಲ್ಲಿ ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಸ್‌ಐಟಿ ರಚನೆಯ ಸಮಯದಲ್ಲಿ ಈ ಪ್ರಶ್ನೆಯನ್ನು ಸರಕಾರ ದಲ್ಲಿಯೇ ಕೇಳಿರಲಿಲ್ಲ, ಧರ್ಮಸ್ಥಳದ ವಿರುದ್ಧ ಕೇಳಿ ಬಂದಿರುವ ದೂರಿನ ಬಗ್ಗೆ ಎಲ್ಲರಿಗೂ ಅನುಮಾನವಿದ್ದರೂ, ‘ನಮಗೇಕೆ ರಿಸ್ಕ್’ ಎನ್ನುವ ಮನಸ್ಥಿತಿಯಲ್ಲಿ ಮೌನಕ್ಕೆ ಶರಣಾಗಿದ್ದರು.

ಗುಂಡಿ ಅಗೆಯಲು ಆರಂಭವಾದಾಗಲೂ, ಎಲ್ಲರೂ ಕುತೂಹಲದಿಂದ ಗುಂಡಿಗಳತ್ತಲೇ ಗಮನ ಹರಿಸಿದ್ದರು. ಕೇವಲ ರಾಜಕಾರಣಿಗಳು ಮಾತ್ರವಲ್ಲದೇ, ಧರ್ಮಸ್ಥಳವನ್ನು ನಂಬುವ ಭಕ್ತರೂ ಇದೇ ಮನಸ್ಥಿತಿಗೆ ಬಂದಿದ್ದರು. ಆದರೆ ಆರಂಭ ಏಳೆಂಟು ಗುಂಡಿಗಳನ್ನು ಅಗೆದಾಗ ‘ಮಣ್ಣು’ ಬಿಟ್ಟು ಬೇರೇನು ಸಿಗಲಿಲ್ಲವೆಂದು ಸ್ಪಷ್ಟವಾಯಿತೋ ಆಗ, ತಮ್ಮ ನಿಲುವುಗಳು ಏನಿರಬೇಕೆಂಬ ಲೆಕ್ಕಾಚಾರ ವನ್ನು ಆರಂಭಿಸಿದರು.

ಈ ಎಲ್ಲ ಘಟನಾವಳಿಗಳ ನಡುವೆಯೇ, ಬುರುಡೆ ಪ್ರಕರಣದಲ್ಲಿ ಹುರುಳಿಲ್ಲ ಎನ್ನುವುದು ಅರಿವಾಗು ತ್ತಿದ್ದಂತೆ ಧರ್ಮಸ್ಥಳದ ಪರ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಇದನ್ನು ಗಮನಿಸಿದ ಬಿಜೆಪಿ ನಾಯಕರು, ಈ ಹಂತದಲ್ಲಿಯೂ ನಾವು ಧರ್ಮಸ್ಥಳದ ಪರವಾಗಿ ನಿಲ್ಲದಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ಅರಿವಾಗಿ, ಒಬ್ಬೊಬ್ಬರೇ ವಿಶೇಷ ತನಿಖಾ ತಂಡವನ್ನು ಪ್ರಶ್ನಿಸಲು ಶುರು ಮಾಡಿದರು. ಆದರೆ ಆ ವೇಳೆಗಾಗಲೇ ಗುಂಡಿ ಅಗೆಯುವ ಕಾರ್ಯ ಬಾಹುಬಲಿ ಬೆಟ್ಟದ ಬುಡಕ್ಕೆ ಬಂದಿತ್ತು ಎನ್ನುವುದು ವಾಸ್ತವ!

ಬಿಜೆಪಿ ನಾಯಕರು ಈ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ಸಿದ್ಧತೆ ನಡೆಸಿ ಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿರುವ ಧರ್ಮಸ್ಥಳದ ಭಕ್ತರು ನೆನಪಾಗಿ ದ್ದಾರೆ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ನಮಗೆ ಬಹುದೊಡ್ಡ ‘ನಷ್ಟ’ ಎನ್ನುವುದು ಅರಿವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಹಿರಿಯ ಸಚಿವರು ಸೇರಿದಂತೆ, ಅನೇಕ ಶಾಸಕರು ಗುಂಡಿ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎನ್ನುವ ಒತ್ತಡವನ್ನು ಹೇರಿದ್ದಾರೆ.

ಏಕೆಂದರೆ, ರಾಜ್ಯದಲ್ಲಿರು 224 ಕ್ಷೇತ್ರಗಳ ಪೈಕಿ ನೂರಕ್ಕೂ ಹೆಚ್ಚು ಕ್ಷೇತ್ರದಲ್ಲಿ ಧರ್ಮಸ್ಥಳದ ಭಕ್ತಗಣ ದೊಡ್ಡ ಪ್ರಮಾಣದಲ್ಲಿದೆ. ಈ ಒಂದು ವಿಷಯದಲ್ಲಿ ಸರಾಸರಿ 15 ರಿಂದ 20 ಸಾವಿರ ಮತಗಳು ಆಚೀಚೆಯಾಗುವ ಸಾಧ್ಯತೆಯಿತ್ತು. ವಿಧಾನಸಭಾ ಕ್ಷೇತ್ರವೊಂದರಲ್ಲಿ ಈ ‘ಅಂತರ’ ಗೆಲುವು ಸೋಲನ್ನು ತೀರ್ಮಾನಿಸುತ್ತದೆ!

ಈ ವಾಸ್ತವಾಂಶ ತಿಳಿಯುತ್ತಿದ್ದಂತೆ ಆರಂಭವಾಗಿದ್ದು, ಸ್ಪಷ್ಟ ‘ರಾಜಕೀಯ’. ವಿಧಾನಸಭೆಯಲ್ಲಿ ಸುನೀಲ್ ಕುಮಾರ್ ಧರ್ಮಸ್ಥಳ ವಿಚಾರದಲ್ಲಿ ಆಗುತ್ತಿರುವ ‘ಟೂಲ್‌ಕಿಟ್’ ಬಗ್ಗೆ ಮಾತನಾಡಲು ಆರಂಭಿಸಿದ ಕೆಲವೇ ಕ್ಷಣದಲ್ಲಿ ಕಾಂಗ್ರೆಸ್ ನಾಯಕರಿಗೆ ಇದರಿಂದ ಆಗಬಹುದಾದ ಡ್ಯಾಮೇಜ್ ಅರಿವಾಯಿತು. ಈ ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕಾಗಿಯೇ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಮಧ್ಯಪ್ರವೇಶಿಸಿ ‘ವೀರೇಂದ್ರ ಹೆಗಡೆಯವರ ಮೇಲೆ ಹಾಗೂ ಧರ್ಮಸ್ಥಳದ ಮಂಜು ನಾಥೇಶ್ವರನ ಮೇಲೆ ನಮಗೆ ವಿಶ್ವಾಸವಿದೆ’ ಎನ್ನುವ ಮೂಲಕ ಇಡೀ ಪ್ರಕರಣದ ಷರಾ ಬರೆದರು. ಈಗ ಏನೇ ನಡೆದರೂ, ಅದು ಕೇವಲ ಕಾನೂನಾತ್ಮಕ ಪ್ರಕ್ರಿಯೆ ಅಷ್ಟೆ.

ಈಗ ವಿಶೇಷ ತನಿಖಾ ತಂಡವನ್ನು ವಿಸರ್ಜನೆ ಮಾಡಲಾಗುವುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಅನಾಮಿಕ ವ್ಯಕ್ತಿಯ ಮಾತು ಕೇಳಿಕೊಂಡು ರಚಿಸಿದ್ದ ವಿಶೇಷ ತನಿಖಾ ತಂಡ ವನ್ನು ವಿಸರ್ಜನೆ ಮಾಡುವುದು ಸುಲಭವಲ್ಲ. ಈಗಾಗಲೇ ಅನಾಮಿಕ ವ್ಯಕ್ತಿ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ನ್ಯಾಯಾಲಯ ಹೇಳಿದೆ.

ಇದೀಗ ಎಸ್‌ಐಟಿ ರದ್ದುಪಡಿಸಿದರೂ, ಇಡೀ ಪ್ರಕರಣವನ್ನು ಸ್ಥಳೀಯ ಪೊಲೀಸರು ನಡೆಸಲೇಬೇಕು. ಇದರೊಂದಿಗೆ ಅನಾಮಧೇಯ ವ್ಯಕ್ತಿಯ ಹಿನ್ನೆಲೆ, ಆತ ಆರೋಪ ಮಾಡಿದ ಸಮಯದಲ್ಲಿ ತಂದಿದ್ದ ಬುರುಡೆಯ ಹಿನ್ನೆಲೆ ಹಾಗೂ ಆತನಿಗೆ ಬೆಂಬಲವಾಗಿರುವವರು ಯಾರು ಎನ್ನುವ ಬಗ್ಗೆ ತನಿಖೆ ನಡೆಸಬೇಕಿದೆ. ಆದ್ದರಿಂದ ಗುಂಡಿ ಅಗೆಯುವುದನ್ನು ಬಿಟ್ಟರೂ, ಇನ್ನೊಂದು ಆಯಾಮದ ತನಿಖೆ ಯನ್ನು ನಡೆಸಬೇಕಾದ ಅನಿವಾರ್ಯತೆಯಿದೆ.

ಆರೋಪಗಳನ್ನು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಮೀರಿ, ರಾಜಕೀಯ ತಿರುವು ಪಡೆದಿದ್ದ ಧರ್ಮಸ್ಥಳ ‘ಅನಾಮಧೇಯ’ ವ್ಯಕ್ತಿಯ ಆರೋಪದ ಸತ್ಯಾಸತ್ಯತೆ ಇನ್ನು ಬಹಿರಂಗವಾಗಬೇಕಿದೆ. ಆತ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಗೆ ಪೂರಕವಾಗಿ ಕಳೆದ ಮೂರು ವಾರದ ಕಾರ್ಯಾ ಚರಣೆಯಲ್ಲಿ ಗಟ್ಟಿ ಸಾಕ್ಷಿ ಸಿಕ್ಕಿಲ್ಲ.

ನೂರಾರು ಶವ ಹೂತಿಟ್ಟಿದ್ದಾಗಿ ಹೇಳಿದ್ದ ಅನಾಮಿಕ ತೋರಿಸಿದ್ದ ಜಾಗದಲ್ಲಿ 10 ಬುರುಡೆ ಸಿಕ್ಕಿದ್ದರೂ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಆದರೆ ಹುಡುಕಾಟದಲ್ಲಿ ಯಾವುದೇ ಬುರುಡೆ ಸಿಗದಿದ್ದರೂ, ಅದಕ್ಕೊಂದು ಹೊಸ ‘ಥಿಯರಿ’ಯೊಂದಿಗೆ ಇನ್ನಷ್ಟು ತಿಂಗಳ ಬಳಿಕ ಮತ್ತೆ ಸೋಕಾಲ್ಡ್ ಹೋರಾಟ ಗಾರರು ಯುಟ್ಯೂಬ್ ಅಥವಾ ಫೇಸ್‌ಬುಕ್ ಲೈವ್ ಬರುವುದು ನಿಶ್ಚಿತ. ಆದ್ದರಿಂದ ಬುರುಡೆ ಪ್ರಕರಣದಿಂದ ಪಾಠ ಕಲಿತಿರುವ ರಾಜ್ಯ ಸರಕಾರ, ಈ ವಿಷಯಕ್ಕೆ ತಾರ್ಕಿಕ ಅಂತ್ಯವನ್ನು ತೋರಿಸಬೇಕಿದೆ.

ರಾಜಕೀಯ ಲಾಭ-ನಷ್ಟಗಳನ್ನು ಮೀರಿ, ಕೋಟ್ಯಂತರ ಭಕ್ತರ ಭಾವನೆಗಳನ್ನು ಗಮನದಲ್ಲಿರಿಸಿ ಕೊಂಡು ಸರಕಾರ ತೀರ್ಮಾನಿಸಬೇಕಿದೆ. ಇಲ್ಲವಾದರೆ, ಕೆಲವೊಂದಷ್ಟು ದಿನದ ಅಂತರದ ಬಳಿಕ ಮತ್ತೊಂದು ಗುಂಪು ಇನ್ನೊಂದು ಥಿಯರಿಯೊಂದಿಗೆ ಜನರ ಮುಂದೆ ಬರುತ್ತದೆ. ಧರ್ಮಸ್ಥಳ ಧರ್ಮಾಽಕಾರಿ ಹಾಗೂ ಕುಟುಂಬದವರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಹೊಸ ಹೊಸ ಕಥೆ ಹೇಳುವ ಬಹುತೇಕರಿಗೆ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು ಎನ್ನುವುದಕ್ಕಿಂತ, ಸಾರ್ವಜನಿಕ ವಲಯದಲ್ಲಿ ‘ಸುದ್ದಿ’ಯಲ್ಲಿರಬೇಕು ಎನ್ನುವುದಷ್ಟೇ ಮುಖ್ಯವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಒಂದು ವೇಳೆ ಅನ್ಯಾಯಕ್ಕೆ ಒಳದಾವರಿಗೆ ನ್ಯಾಯ ಸಿಗಬೇಕೆಂದು ಹೋರಾಡುವುದೇ ಆಗಿದ್ದರೆ, ಅವರು ನ್ಯಾಯಾಲಯದ ಕದ ತಟ್ಟುತ್ತಿದ್ದರೇ ಹೊರತು, ಯೂಟ್ಯೂಬ್ ಚಾನೆಲ್‌ಗಳ ಕದವನ್ನಲ್ಲ!

ರಂಜಿತ್​ ಎಚ್​ ಅಶ್ವತ್ಥ್

View all posts by this author