Vishweshwar Bhat Column: ಬದುಕಿನಲ್ಲಿ ಏನೂ ಸರಿ ಹೋಗದಿದ್ದಾಗ ಜಪಾನ್‌ಗೆ ಹೋಗಿ !
ನಾನೆಂದೇ ಅಲ್ಲ, ಸಾಮಾನ್ಯವಾಗಿ ಯಾರೂ ಮಾತಾಡುವುದಿಲ್ಲ. ಆದರೆ ಅಂದು ಇಡೀ ಬೋಗಿ ಖಾಲಿ ಯಿದ್ದುದರಿಂದ ಯಾರಿಗೂ ತೊಂದರೆಯಾಗುವ ಪ್ರಶ್ನೆಯೇ ಇಲ್ಲವೆಂದು ನಾನು ಮಾತಾಡಲಾರಂಭಿಸಿದೆ. ಎರಡು ನಿಮಿಷಗಳ ನಂತರ, ಟಿಸಿ ನನ್ನ ಕಡೆಗೆ ನಡೆದು ಬಂದು, ’ಬೋಗಿಯಲ್ಲಿ ಬೇರೆ ಪ್ರಯಾಣಿಕರು ಇರಲಿ, ಬಿಡಲಿ, ಮೌನವನ್ನು ಮುರಿಯುವುದು ಒಳ್ಳೆಯ ಸೂಚನೆ ಅಲ್ಲ’ ಎಂದು ಹೇಳಿ ಹೊರಟುಬಿಟ್ಟ
![ಬದುಕಿನಲ್ಲಿ ಏನೂ ಸರಿ ಹೋಗದಿದ್ದಾಗ ಜಪಾನ್‌ಗೆ ಹೋಗಿ !](https://cdn-vishwavani-prod.hindverse.com/media/original_images/Bhat_Column_J.jpg)
![ವಿಶ್ವೇಶ್ವರ ಭಟ್](https://cdn-vishwavani-prod.hindverse.com/media/images/Vishweshwar-Bhat.2e16d0ba.fill-100x100.jpg)
ನೂರೆಂಟು ವಿಶ್ವ
vbhat@me.com
ಜಪಾನ್ ಬಗ್ಗೆ ಬರೆದಿದ್ದು ಸಾಕು ಅಂತ ಯೋಚಿಸುತ್ತಿರುವಾಗ, ಮೊನ್ನೆ ನಗೋಯಾದಿಂದ ಕನ್ನಡಿಗ ರಾದ ಪಿ.ವಿ.ಕುಮಾರ ಎಂಬುವವರು ಇಮೇಲ್ ಮಾಡಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿಮ್ಮ ಮೊಬೈಲ್ ನಂಬರ್ ನೀಡಿದರೆ ಫೋನಿನಲ್ಲಿ ಮಾತಾಡೋಣ’ ಎಂದು ಬರೆದಿದ್ದರು. ನಾನು ತಕ್ಷಣ ನನ್ನ ಸಂತಸವನ್ನು ವ್ಯಕ್ತಪಡಿಸಿ, ಮೊಬೈಲ್ ನಂಬರ್ ತಿಳಿಸಿದೆ. ಮೊನ್ನೆ ಭಾನುವಾರ ಕುಮಾರ್ ಅವರು ಸುಮಾರು ಒಂದು ಗಂಟೆ ಐದು ನಿಮಿಷ ಮಾತಿಗೆ ಸಿಕ್ಕಿದ್ದರು. ಜಪಾನಿನ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು. ಅವರೊಂದಿಗಿನ ಈ ಎಲ್ಲ ಪ್ರಸಂಗಗಳನ್ನು ನಿಮ್ಮ ಜತೆಗೂ ಹಂಚಿಕೊಳ್ಳದಿದ್ದರೆ ಹೇಗೆ? ಅವರ ಮಾತಿನಲ್ಲಿಯೇ ಇರಲಿ.
ಒಮ್ಮೆ ನಾನು ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂತಿರುಗಲು ರೈಲನ್ನು ಹತ್ತಿದೆ. ಇಡೀ ಕಂಪಾರ್ಟ್ ಮೆಂಟ್ ಖಾಲಿಯಾಗಿತ್ತು ಮತ್ತು ನಾನು ನನ್ನ ಗೆಳೆಯನೊಂದಿಗೆ ಲೋಕಾಭಿರಾಮ ಮಾತಾಡಲು ಆತನಿಗೆ ಕರೆ ಮಾಡಿದೆ. ಸಾಮಾನ್ಯವಾಗಿ ನಾನು ಜಪಾನಿನಲ್ಲಿ ಟ್ರೇನಿನಲ್ಲಿ ಹೋಗುವಾಗ ಮೊಬೈಲ್ ನಲ್ಲಿ ಮಾತಾಡುವುದಿಲ್ಲ.
ನಾನೆಂದೇ ಅಲ್ಲ, ಸಾಮಾನ್ಯವಾಗಿ ಯಾರೂ ಮಾತಾಡುವುದಿಲ್ಲ. ಆದರೆ ಅಂದು ಇಡೀ ಬೋಗಿ ಖಾಲಿಯಿದ್ದುದರಿಂದ ಯಾರಿಗೂ ತೊಂದರೆಯಾಗುವ ಪ್ರಶ್ನೆಯೇ ಇಲ್ಲವೆಂದು ನಾನು ಮಾತಾಡ ಲಾರಂಭಿಸಿದೆ. ಎರಡು ನಿಮಿಷಗಳ ನಂತರ, ಟಿಸಿ ನನ್ನ ಕಡೆಗೆ ನಡೆದು ಬಂದು, ’ಬೋಗಿಯಲ್ಲಿ ಬೇರೆ ಪ್ರಯಾಣಿಕರು ಇರಲಿ, ಬಿಡಲಿ, ಮೌನವನ್ನು ಮುರಿಯುವುದು ಒಳ್ಳೆಯ ಸೂಚನೆ ಅಲ್ಲ’ ಎಂದು ಹೇಳಿ ಹೊರಟುಬಿಟ್ಟ.
ಇದನ್ನೂ ಓದಿ: Viral Video Cricket: ಕ್ರಿಕೆಟ್‌ನಲ್ಲಿ ಇದೇ ಮೊದಲು, ಹೆಲ್ಮೆಟ್‌ಗೆ ಚೆಂಡು ಬಡಿದು ರನೌಟ್
ಅದೇ ಕೊನೆ, ನಾನು ಇಲ್ಲಿ ತನಕ, ಅಂದರೆ ಕಳೆದ ಏಳು ವರ್ಷಗಳಿಂದ ರೈಲಿನಲ್ಲಿ ಮಾತಾಡಿಲ್ಲ ಮತ್ತು ಬೇರೆಯವರು ಮಾತಾಡಿದ್ದನ್ನೂ ನೋಡಿಲ್ಲ. ನಾನು ಜಪಾನಿಗೆ ಬಂದು ಆರೇಳು ತಿಂಗಳು ಗಳಾಗಿದ್ದವು. ಒಮ್ಮೆ ನಾನು ಆ ತಿಂಗಳು ಪಾವತಿಸಿದ ವಿಮಾ ಹಣದ ರಶೀದಿಯನ್ನು ಎ ಬೀಳಿಸಿ ಬಿಟ್ಟಿದ್ದೆ, ಅದನ್ನು ಹುಡುಕುವ ಯೋಚನೆಯನ್ನೂ ಮಾಡಲಿಲ್ಲ. ನಾನು ಈಗಾಗಲೇ ಹಣ ಪಾವತಿಸಿ ದ್ದರಿಂದ, ಒಂದು ವೇಳೆ ರಸೀದಿ ಕಳೆದು ಹೋದರೂ ಅದರಿಂದ ಸಮಸ್ಯೆ ಆಗಲಿಕ್ಕಿಲ್ಲವೆಂದು ನನ್ನ ಪಾಡಿಗೆ ಸುಮ್ಮನಿದ್ದೆ.
ಮೂರು ತಿಂಗಳ ನಂತರ ನನಗೆ ಪೋಸ್ಟಲ್ ಡಿಪಾರ್ಟಮೆಂಟಿನಿಂದ ಒಂದು ಪತ್ರ ಬಂದಿತು. ತೆರೆದು ನೋಡಿದರೆ, ನಾನು ಕಳೆದುಕೊಂಡ ರಸೀದಿ! ಪ್ರಾಯಶಃ ಹೀಗಾಗಿರಬಹುದು...ನಾನು ಕಳೆದುಕೊಂಡ ರಸೀದಿ ಯಾರಿಗೋ ಸಿಕ್ಕಿರಬಹುದು. ಅದನ್ನು ಅವರು ಪೊಲೀಸರಿಗೆ ಒಪ್ಪಿಸಿರಬಹುದು. ಪೊಲೀಸರು ಬಹಳ ಪ್ರಯಾಸಪಟ್ಟು, ನನ್ನ ಹೆಸರಿನ ಜಾಡು ಹಿಡಿದು ತಪಾಸಣೆ ಮಾಡಿ, ಕೊನೆಗೆ ಆ ರಸೀದಿ ನನ್ನದೇ ಎಂದು ತೀರ್ಮಾನಿಸಿ, ಪೋ ಮೂಲಕ ನನಗೆ ಕಳಿಸಿಕೊಟ್ಟಿರಬಹುದು.
ಅದು ರಸೀದಿ ಎಂದು ಯಾರೂ ಉದಾಸೀನ ಮಾಡಲಿಲ್ಲ. ಒಂದು ವೇಳೆ ಅದು ಕಳೆದುಹೋಗಿದ್ದರೂ ಯಾವ ಗಂಡಾಂತರವೂ ಆಗುತ್ತಿರಲಿಲ್ಲ. ಆದರೂ ಅಲ್ಲಿನ ಜನ ಇಂಥ ಸೂಕ್ಷ್ಮ ಸಂಗತಿಗಳ ಬಗ್ಗೆ ಯೂ ಗಮನಹರಿಸುತ್ತಾರೆ. ಒಮ್ಮೆ ನಾನು ನಗೋಯಾದ ಉದ್ಯಾನವನದಲ್ಲಿ ವಾಕ್ ಮಾಡುತ್ತಿದ್ದೆ. ಅಬ್ಬ ಕೆಮರಾ ಹಿಡಿದು ಸುಮಾರು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತಿದ್ದ. ಆತ ಪಕ್ಷಿಗಳ ಚಿತ್ರವನ್ನು ಸೆರೆ ಹಿಡಿಯುತ್ತಿದ್ದ. ಥಟ್ಟನೆ ನೋಡಿದರೆ, ಅಮೆರಿಕನ್ ಅಥವಾ ಯುರೋಪಿಯನ್ ಥರ ಕಾಣುತ್ತಿದ್ದ.
ಇದನ್ನೂ ಓದಿ: Vishweshwar Bhat Column: ಅಲ್ಲಿ ಚೆರ‍್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !
ಭಾಷೆ ಸಮಸ್ಯೆ ಆಗಲಿಕ್ಕಿಲ್ಲ ಎಂದು ಅವನನ್ನು ಮಾತಾಡಿಸೋಣ ಎನಿಸಿತು. ಆದರೆ ಆತ ಪ್ಯಾಕ್ ಅಪ್ ಮಾಡುವುದಕ್ಕೆ ಕಾಯುತ್ತಿದ್ದೆ. ಅರ್ಧ ಗಂಟೆಯ ಬಳಿಕ, ಆತ ಹೊರಡಲು ಅನುವಾದ. ನಾನು ಅವನ ಹತ್ತಿರ ಹೋಗಿ, ಇಂಗ್ಲಿಷಿನಲ್ಲಿ ಮಾತು ಆರಂಭಿಸಿದೆ. ’ಹಕ್ಕಿಗಳ ದೃಶ್ಯಗಳನ್ನು ಚೆನ್ನಾಗಿ ಸೆರೆ ಹಿಡಿದಿರಾ?’ ಎಂದು ಕೇಳಿದೆ. ಆತ ಜಪಾನೀಸ್ ಭಾಷೆಯಲ್ಲಿ ಉತ್ತರಿಸಿದ.
ನನಗೆ ತುಸು ಆಶ್ಚರ್ಯವಾಯಿತು. ನಾನು ತಕ್ಷಣ ಜಪಾನೀಸ್ ಗೆ ಹೊರಳಿದೆ. ಆದರೆ ನನಗೆ ಆತ ಅಮೆರಿಕದವನೆಂಬುದು ಗೊತ್ತಾಯಿತು. ’ನೀವು ಅಮೆರಿಕನ್ ಅಲ್ಲವೇ? ನಿಮಗೆ ಇಂಗ್ಲಿಷ್ ಬರುವು ದಿಲ್ಲವಾ?’ ಎಂದು ಕೇಳಿದೆ. ಅದಕ್ಕೆ ಆತ, ’ನಾನು ಕಳೆದ ಹದಿನಾಲ್ಕು ವರ್ಷಗಳಿಂದ ಜಪಾನಿನಲ್ಲಿ ದ್ದೇನೆ. ಇಲ್ಲಿಗೆ ಬಂದ ಒಂದು ವರ್ಷದಲ್ಲಿ ಜಪಾನೀಸ್ ಕಲಿತೆ. ಅಲ್ಲಿಂದ ಇಲ್ಲಿ ತನಕ ನಾನು ಇಂಗ್ಲಿಷ್ ಮಾತಾಡಿಲ್ಲ.
ಜಪಾನಿಯರಿಗೆ ನಾನು ಅಮೆರಿಕನ್ ಅಥವಾ ಇಂಗ್ಲಿಷಿನವ ಎಂಬುದು ಗೊತ್ತಾದರೂ, ಅವರು ನನ್ನ ಬಳಿ ಜಪಾನೀಸ್ ಭಾಷೆಯಲ್ಲಿಯೇ ಮಾತಾಡುತ್ತಾರೆ. ತನಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಪಶ್ಚಾತ್ತಾಪಪಟ್ಟ ಒಬ್ಬೇ ಒಬ್ಬ ಜಪಾನಿಯನನ್ನು ನಾನು ನೋಡಿಲ್ಲ. ’ಸಾರಿ, ಜಪಾನೀಸ’ ಅಥವಾ ’ಸಾರಿ, ನೋ ಇಂಗ್ಲಿಷ’ ಅಂತ ಹೆಮ್ಮೆಯಿಂದ ಹೇಳುತ್ತಾರೆ. ಜಪಾನಿಯರ ಭಾಷಾ ಪ್ರೇಮ ನನ್ನಲ್ಲಿ ಅತೀವ ಅಭಿಮಾನವನ್ನು ಹುಟ್ಟು ಹಾಕಿದೆ.
ಅದರಿಂದ ಸ್ಪೂರ್ತಿ ಪಡೆದು ನಾನು ಜಪಾನೀಸ್ ಕಲಿತೆ. ಇದು ನಾಲ್ಕು ವರ್ಷಗಳ ಹಿಂದೆ ನಡೆದ ಪ್ರಸಂಗ. ತುಮಕೂರಿನಿಂದ ನನ್ನ ಹೆಂಡತಿಯ ಸೋದರತ್ತೆಯ ಮಗಳು ಕೆಲಸದ ನಿಮಿತ್ತ ಟೋಕಿ ಯೋಕ್ಕೆ ಬಂದಿದ್ದಳು. ನಾನು ಮತ್ತು ನನ್ನ ಪತ್ನಿ ಅವಳನ್ನು ರಿಸೀವ್ ಮಾಡಿಕೊಂಡು ನಗರ ದರ್ಶನ ಕ್ಕೆಂದು ಹೊರಟಿzವು. ನಾವು ಒಂದು ಮಾಲ್ ಗೆ ಹೋಗಿದ್ದೆವು.
ಇದನ್ನೂ ಓದಿ: Vishweshwar Bhat Column: ನಿಮ್ಮ ಮಕ್ಕಳಿಗೆ ನೀವೇನು ಕೊಡಬೇಕು ಎಂಬುದನ್ನು ಬಲ್ಲಿರಾ ?
ಹೆಂಡತಿಯ ಸೋದರತ್ತೆಯ ಮಗಳು ರೆಸ್ಟ್ ರೂಮ್ ಗೆ ಹೋಗಿ ಬರುತ್ತೇನೆ ಎಂದು ಹೋದವಳು ತನ್ನ ಬ್ಯಾಗನ್ನು ಅಲ್ಲಿಯೇ ಮರೆತು ಬಂದುಬಿಟ್ಟಳು. ಅದನ್ನು ನಾವು ಅವಸರದಲ್ಲಿ ಗಮನಿಸಲಿಲ್ಲ. ಆ ಬ್ಯಾಗಿನಲ್ಲಿ ಪಾಸ್ ಪೋರ್ಟ್, ಮೊಬೈಲ್, ನೂರಾರು ಡಾಲರ್ ಹಣ ಇತ್ತು. ನಾವು ಟ್ರೇನ್ ಹತ್ತಿದ ಕೆಲ ಕ್ಷಣಗಳಲ್ಲಿ ಬ್ಯಾಗ್ ಮಿಸ್ಸಾಗಿರುವುದು ಆಕೆಯ ಗಮನಕ್ಕೆ ಬಂದಿತು.
ಆಕೆ ಥಟ್ಟನೆ ಶಾಕ್ ಹೊಡೆದವಳಂತೆ ಜೋರಾಗಿ ಕಿರುಚಿಕೊಂಡಳು. ’ಗಾಬರಿ ಪಡಬೇಡ, ಏನೂ ಆಗುವುದಿಲ್ಲ, ನಿನ್ನ ಬ್ಯಾಗ್ ಸಿಕ್ಕೇ ಸಿಗುತ್ತದೆ’ ಎಂದು ನಾನು ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಆದರೆ ಅವಳು ಜೋರಾಗಿ ಅಳಲಾರಂಭಿಸಿದಳು. ಅದರಲ್ಲಿ ಪಾಸ್ ಪೋರ್ಟಿದೆ, ಹಣವಿದೆ, ನಾನು ನಾಡಿದ್ದು ಊರಿಗೆ ಹೋಗಬೇಕು’ ಎಂದು ಇನ್ನೂ ಜೋರಾಗಿ ಅಳಲಾರಂಭಿಸಿ ದಳು. ನಾನು ಅವಳನ್ನು ಸಮಾಧಾನಪಡಿಸಿದೆ.
ಮುಂದಿನ ನಿಲ್ದಾಣದಲ್ಲಿ ಇಳಿದು, ವಾಪಸ್ ಆ ಮಾಲ್ ಗೆ ಹೋಗಿ ಅಲ್ಲಿನ ವಿಚಾರಣಾ ಕೌಂಟರಿ ನಲ್ಲಿ ಹೋಗಿ ಸಂಪರ್ಕಿಸಿದೆವು. ನಾವು ಹೋಗುವ ಮುನ್ನವೇ ಆ ಬ್ಯಾಗ್ ಅಲ್ಲಿ ಸುರಕ್ಷಿತವಾಗಿ, ಭದ್ರವಾಗಿತ್ತು. ’ಬ್ಯಾಗಿನಲ್ಲಿರುವ ನಿಮ್ಮ ವಸ್ತುಗಳೆಲ್ಲ ಸರಿಯಾಗಿವೆಯಾ? ಏನಾದರೂ ಮಿಸ್ ಆಗಿದೆಯಾ? ಸರಿಯಾಗಿ ನೋಡಿ’ ಎಂದು ಅಲ್ಲಿನ ಸ್ವಾಗತಕಾರಿಣಿ ಹೇಳಿದಳು.
ನನ್ನ ಹೆಂಡತಿಯ ಸೋದರತ್ತೆಯ ಮಗಳು ಬ್ಯಾಗನ್ನು ಸರಿಯಾಗಿ ತಪಾಸಣೆ ನಡೆಸಿದಳು. ತಾಯಿಯ ಗರ್ಭದಲ್ಲಿರುವ ಮಗುವಿನಂತೆ ಎಲ್ಲವೂ ಹೇಗಿತ್ತೋ ಹಾಗೇ ಇತ್ತು! ಶೌಚಾಲಯ ಶುಚಿಗೊಳಿಸುವ ಮಹಿಳೆ ಆ ಬ್ಯಾಗನ್ನು ಎತ್ತಿ ವಾಪಸ್ ಮಾಡಿದ್ದಳು. ಜಪಾನಿಯರಲ್ಲಿ ಒಂದು ಅಪರೂಪದ ಗುಣ ವಿದೆ. ತಮ್ಮದಲ್ಲದ ವಸ್ತುವನ್ನು ಅವರು ಮುಟ್ಟುವುದಿಲ್ಲ. ಬೇರೆಯವರ ವಸ್ತು ತಮ್ಮದೆಂದು ಅವರು ಎಂದೆಂದೂ ಭಾವಿಸುವುದಿಲ್ಲ.
ಅದರಲ್ಲೂ ಯಾರಾದರೂ ಕಾಗದಪತ್ರ, ಹಣ, ಒಡವೆಗಳನ್ನು ಕಳೆದುಕೊಂಡರೆ, ತಮ್ಮದೇ ವಸ್ತು ಕಳೆದುಕೊಂಡರೆ ಏನಾಗಬಹುದು ಎಂಬುದನ್ನು ಯೋಚಿಸುತ್ತಾರೆ. ಹೀಗಾಗಿ ಅವರು ಯಾರು ಏನೇ ಕಳೆದುಕೊಂಡರೂ, ಅದನ್ನು ವಾರಸುದಾರರಿಗೆ ತಪ್ಪದೇ ತಲುಪಿಸುತ್ತಾರೆ. ಅದರಲ್ಲೂ ಜಪಾನಿ ಯರಿಗೆ, ಇತರರಿಗೆ ಸಹಾಯ ಮಾಡುವುದು ಅವರ ಸಂಸ್ಕೃತಿಯ ಸಹಜ ಭಾಗವಾಗಿದೆ.
ಮತ್ತೊಂದು ಪ್ರಸಂಗ. ಒಮ್ಮೆ ನಾನು ಮತ್ತು ನನ್ನ ಪತ್ನಿ ಜಪಾನಿ ರೆಸ್ಟೋರೆಂಟ್ ಗೆ ಹೋಗಿದ್ದೆವು. ಅಂದು ನಾವು ತುಸು ಹೆಚ್ಚಾಗಿಯೇ ಆರ್ಡರ್ ಮಾಡಿದೆವು. ನಾವು ಆರ್ಡರ್ ಮಾಡಿದ ಪೈಕಿ ಮೂರು ಐಟಮ್ಮುಗಳನ್ನು ವೇಟರ್ ತಂದಿಟ್ಟ. ಮುಂದೆ ಬರಲಿರುವ ಇನ್ನೂ ಎರಡು ಐಟಮ್ಮುಗಳನ್ನು ತಿನ್ನುವುದು ಕಷ್ಟ ಎಂಬುದು ನಮಗೆ ಮನವರಿಕೆಯಾಯಿತು.
ನಮ್ಮ ಪಕ್ಕದಲ್ಲಿ ಇಪ್ಪತ್ತು-ಇಪ್ಪತ್ತೈದು ವರ್ಷದ ಮೂವರು ಯುವಕರು ಕುಳಿತಿದ್ದರು. ಅವರ ಪಕ್ಕ ದಲ್ಲಿ ಸೂಟಕೇಸುಗಳಿದ್ದವು. ಪ್ರವಾಸಿಗರಿರಬಹುದು ಎಂದು ನಮಗನಿಸಿತು. ವೇಟರ್ ನನ್ನ ಕರೆದು, ’ಮುಂದಿನ ಐಟಮ್ಮುಗಳನ್ನು ನಾವು ಸೇವಿಸುವುದು ಕಷ್ಟ, ನಮ್ಮ ಹೊಟ್ಟೆ ಭರ್ತಿಯಾಗಿವೆ. ಅವನ್ನು ಆ ಯುವಕರಿಗೆ ಕೊಟ್ಟುಬಿಡಿ. ಆದರೆ ಆ ಐಟಮ್ಮುಗಳ ಹಣವನ್ನು ನಾವೇ ಪಾವತಿಸು ತ್ತೇವೆ’ ಎಂದು ಹೇಳಿದೆ. ಆ ಯುವಕರ ಬಳಿ ಹೋದ ವೇಟರ್ ನಮ್ಮ ಕೋರಿಕೆಯನ್ನು ತಿಳಿಸಿದಾಗ, ಅವರು ಸಂತೋ ಷದಿಂದ ಆ ಐಟಮ್ಮುಗಳನ್ನು ಸ್ವೀಕರಿಸುವುದಾಗಿ ತಿಳಿಸಿದರು ಮತ್ತು ಅವನ್ನು ಹೊಟ್ಟೆ ತುಂಬಾ ಸವಿದರು. ಆ ಮೂವರೂ ನಮ್ಮ ಟೇಬಲ್ ಬಳಿ ಬಂದು ನಮಗೆ ಕೃತಜ್ಞತೆ ಸೂಚಿ ಸಿಯೂ ಹೋದರು.
ನಂತರ ನಮ್ಮ ಊಟ ಮುಗಿದು, ಹಣ ಪಾವತಿ ಮಾಡಲು ಕ್ಯಾಶ್ ಕೌಂಟರ್ ಬಳಿ ಹೋದಾಗ, ನಮಗೆ ಸಣ್ಣ ಅಚ್ಚರಿ ಕಾದಿತ್ತು. ನಾವು ಆ ಯುವಕರಿಗೆ ನೀಡಿದ ಐಟಮ್ಮುಗಳ ಹಣವನ್ನು ನಮ್ಮ ಬಿಲ್ ನಲ್ಲಿ ಸೇರಿಸಿರಲಿಲ್ಲ. ತಕ್ಷಣ ಸಣ್ಣ ಆಘಾತವೂ ಆಯಿತು. ಕಾರಣ, ಆ ಐಟಮ್ಮುಗಳ ಹಣವನ್ನು ಆ ಯುವಕರ ಬಿಲ್ ಗೆ ಸೇರಿಸಿಬಿಟ್ಟಿzರಾ ಎಂದು.
ಅಲ್ಲಿಗೆ ಬಂದ ಮ್ಯಾನೇರ್ಜ, ’ನೀವು ಸೇವಿಸದ ಆಹಾರಕ್ಕೆ ನಿಮ್ಮಿಂದ ಹಣ ಪಡೆಯುವುದು ಸರಿ ಯಲ್ಲ. ಹೀಗಾಗಿ ನಿಮ್ಮ ಬಿಲ್ ನಲ್ಲಿ ಆ ಎರಡು ಐಟಮ್ಮುಗಳ ಹಣವನ್ನು ಸೇರಿಸಿಲ್ಲ. ಆದರೆ ಆ ಮೂವರು ಯುವಕರ ಬಿಲ್ ನಲ್ಲಿಯೂ ಅದನ್ನು ಸೇರಿಸುವುದಿಲ್ಲ. ಕಾರಣ ಅವನ್ನು ಅವರು ಆರ್ಡರ್ ಮಾಡಿಲ್ಲ. ಹೋಟೆಲ್ ಕಡೆಯಿಂದ ಅವರಿಗೆ ಬೀಳ್ಕೊಡುಗೆ ಉಡುಗೊರೆ ಎಂದು ಪರಿಗಣಿ ಸಿದ್ದೇವೆ’ ಎಂದ ನಸುನಗುತ್ತಾ. ನಮಗೆ ಮತ್ತು ಆ ಯುವಕರಿಗೆ ಅತೀವ ಸಂತಸವಾಯಿತು.
ಯುವಕರಿಗೆ ನೀಡಿದ ಐಟಮ್ಮುಗಳ ಹಣವನ್ನು ನಮ್ಮ ಬಿಲ್ ನಲ್ಲಿ ಸೇರಿಸಿ ಎಂದು ನಾನೇ ಹೇಳಿ ದ್ದರೂ ಅವರು ಸೇರಿಸಿರಲಿಲ್ಲ. ಬೇರೆ ಯಾರೇ ಆಗಿದ್ದರೂ ಬಿಡುತ್ತಿರಲಿಲ್ಲ. ಜಪಾನಿಗೆ ಬಂದ ಆರಂಭ ದಲ್ಲಿ ನಡೆದ ಒಂದು ಘಟನೆಯನ್ನು ಹೇಳಲೇಬೇಕು. ನಾನು ತಂಗಿದ್ದ ಅಪಾರ್ಟಮೆಂಟಿ ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಡಿಪಾರ್ಟಮೆಂಟ್ ಸ್ಟೋರಿನಿಂದ ಶೇವಿಂಗ್ ಕ್ರೀಮ್, ಪೇಸ್ಟ್, ಬ್ರಷ್ ಗಳನ್ನು ತರಲು ಹೊರಟೆ. ಅರ್ಧ ಕಿಮೀ ನಡೆದರೂ ಆ ಸ್ಟೋರ್ ಕಾಣಿಸಲಿಲ್ಲ. ಅಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಯನ್ನು ಕೇಳಿದಾಗ ಆತ, ’ನೀವು ಇನ್ನೂ ಒಂದೂವರೆ ಕಿಮೀ ನಡೆಯಬೇಕು’ ಎಂದು ಹೇಳಿದ.
ಅಯ್ಯೋ, ಇನ್ನೂ ಅಷ್ಟು ದೂರ ನಡೆಯಬೇಕಲ್ಲ ಮತ್ತು ವಾಪಸ್ ಬರಬೇಕಲ್ಲ ಎಂದು ಚಿಂತೆ ಮಾಡುತ್ತಿದ್ದಾಗ ಅಂದು ಸೈಕಲ್ ನಿಲ್ಲಿಸಿದ್ದು ಕಾಣಿಸಿತು. ’ಇದರ ಯಾಕೆ ಹೋಗಬಾರದು, ಹತ್ತು ನಿಮಿಷಗಳಲ್ಲಿ ವಾಪಸ್ ಬಂದುಬಿಡಬಹುದಲ್ಲ? ಅದರ ಮಾಲೀಕ ಬರುವುದರೊಳಗೆ ಆ ಸೈಕಲ್ ನ್ನು ಎಲ್ಲಿತ್ತೋ ಅಲ್ಲಿಯೇ ತಂದಿಡಬಹುದು’ ಎಂದು ಅನಿಸಿತು.
ಪುಣ್ಯವಶಾತ್ ಆ ಸೈಕಲ್ ಲಾಕ್ ಆಗಿರಲಿಲ್ಲ. ನಾನು ಆ ಸೈಕಲನ್ನು ತೆಗೆದುಕೊಂಡು ಹೋದೆ. ನನಗೆ ಬೇಕಾದ ವಸ್ತುಗಳನ್ನು ಬೇಗ ಬೇಗ ಆರಿಸಿಕೊಂಡೆ. ಆದರೆ ಆ ಸ್ಟೋರಿನ ಕ್ಯಾಶ್ ಕೌಂಟರ್ ಮುಂದೆ ಉದ್ದದ ಕ್ಯೂ ಇತ್ತು. ಕನಿಷ್ಠ ಹತ್ತು ನಿಮಿಷವಾದರೂ ಕಾಯುವುದು ಅನಿವಾರ್ಯ ಎಂದೆನಿಸಿತು.
ಬೇರೆ ದಾರಿ ಇರಲಿಲ್ಲ. ನಾನು ಹಣ ಪಾವತಿಸಿ, ಸೈಕಲ್ ಏರಿ ಮರಳಿ, ಅದು ಎಲ್ಲಿತ್ತೋ ಅಲ್ಲಿಯೇ ಪಾರ್ಕ್ ಮಾಡಿದೆ. ಅಲ್ಲಿಯೇ ಸುಮಾರು ಅರವತ್ತರ ಪ್ರಾಯದ ಆ ಸೈಕಲ್ ಮಾಲೀಕ ನಿಂತಿದ್ದ. ನಾನು ಅವನಿಗೆ ನನ್ನ ಪರಿಸ್ಥಿತಿಯನ್ನು ವಿನೀತನಾಗಿ ವಿವರಿಸಿದೆ, ಅಷ್ಟೇ ಅಲ್ಲ, ಅನುಮತಿಯಿಲ್ಲದೇ ಸೈಕಲನ್ನು ತೆಗೆದುಕೊಂಡು ಹೋಗಿದ್ದಕ್ಕೆ ಎರಡು-ಮೂರು ಸಲ ಕ್ಷಮೆಯಾಚಿಸಿದೆ.
ಆತ ಗದರುತ್ತಾನಾ ಅಥವಾ ವ್ಯಂಗ್ಯವಾಗಿ ಏನಾದರೂ ಹೇಳುತ್ತಾನಾ ಎಂದು ನನಗೆ ಸಣ್ಣ ದಿಗಿಲು ಹತ್ತಿಕೊಂಡಿತ್ತು. ಆದರೆ ಆತ ಏನೂ ಹೇಳಲಿಲ್ಲ. ಹತ್ತು ಹೆಜ್ಜೆ ಹಾಕಿದ ಬಳಿಕ, ಹಿಂತಿರುಗಿ ನೋಡಿದೆ. ಆತ ನನ್ನನ್ನೇ ದಿಟ್ಟಿಸುತ್ತಿದ್ದ. ಅಲ್ಲಿಂದಲೇ ಮತ್ತೊಮ್ಮೆ ನಡು ಬಗ್ಗಿಸಿ ’ಸಾರಿ’ ಎಂದೆ. ಆತ ನನ್ನತ್ತ ಹೆಜ್ಜೆ ಹಾಕುತ್ತ ಬರಲಾರಂಭಿಸಿದ.
ನಾನು ಸುಮ್ಮನೆ ನಿಂತಿದ್ದೆ. ’ನಾಳೆಯೂ ನಿಮಗೆ ಸೈಕಲ್ ಬೇಕಾದರೆ ಅವಶ್ಯವಾಗಿ ಒಯ್ಯಬಹುದು. ನಾನು ಲಾಕ್ ಮಾಡಿರುವುದಿಲ್ಲ. ಅದನ್ನು ಬಳಸಿಕೊಳ್ಳಿ’ ಎಂದ. ನಾನು ನಿರುತ್ತರನಾಗಿ ನಿಂತಿದ್ದೆ. ಕುಮಾರ್ ಅವರು ತಮಗಾದ ರೋಚಕ ಅನುಭವಗಳ ಪ್ರಸಂಗಗಳನ್ನು ಹೇಳುತ್ತಾ ಹೋದರು. ಕೊನೆಯಲ್ಲಿ ಅವರು ಒಂದು ಮಾತು ಹೇಳಿದರು - ’ಜಪಾನಿನಲ್ಲಿದ್ದು ಇಷ್ಟು ವರ್ಷಗಳಾದರೂ ನನಗೆ ಕೆಟ್ಟ ಅನುಭವವಾಗಿಲ್ಲ.
ತಮ್ಮ ಕೆಟ್ಟ ನಡತೆಗಳಿಂದ ದೇಶದ ಘನತೆ ಹಾಳು ಮಾಡಲು ಜಪಾನಿಯರ ಮನಸ್ಸು ಒಪ್ಪುವುದಿಲ್ಲ. ಈ ಗುಣ ವಿಶೇಷವಾದುದು. ನಾನು ಕೆಟ್ಟದಾಗಿ ನಡೆದುಕೊಂಡರೆ, ಅದರಿಂದ ಮಣ್ಣು ಪಾಲಾಗು ವುದು ನನ್ನ ದೇಶದ ಗೌರವ ಎಂಬ ಭಾವನೆ ಅವರಲ್ಲಿ ಯಾವತ್ತೂ ಜಾಗೃತವಾಗಿರುತ್ತದೆ. ಇದೊಂ ದೇ ಗುಣ ಜಪಾನಿನಲ್ಲಿ ಹೊಸ ಹೊಸ ಅಚ್ಚರಿಗಳಿಗೆ ಕಾರಣವಾಗುತ್ತದೆ.
Their aim is not to be number one. Their aim is to be the only one . ಅದಕ್ಕಾಗಿ ಇಡೀ ಜಗತ್ತಿನಲ್ಲಿ ಜಪಾನಿನಂಥ ಇನ್ನೊಂದು ದೇಶವನ್ನು ನೋಡಲು ಸಾಧ್ಯ ವಿಲ್ಲ.’ ಕುಮಾರ್ ಹೇಳಿದ್ದ ರಲ್ಲಿ ಯಾವ ಅತಿಶಯೋಕ್ತಿಯೂ ಇರಲಿಲ್ಲ. ಕಾರಣ ಅವರ ಮಾತು ಗಳಲ್ಲಿ ಧ್ವನಿಸಿದ ಅನೇಕ ಅಂಶಗಳು ನನ್ನ ಅನುಭವಕ್ಕೂ ಬಂದಿದ್ದವು. When nothing goes right go to Japan! ಈ ಮಾತು ನೂರಕ್ಕೆ ನೂರು ನಿಜ!