Vishweshwar Bhat Column: ಅಲ್ಲಿ ಚೆರ್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !
ಜಪಾನ್ ಎಂದಾಗ ಈ ಎಲ್ಲ ಚಿತ್ರಣಗಳ ಜಾಥಾ ಮೆರವಣಿಗೆ ನಮ್ಮ ಮುಂದೆ ಸಾಗುವುದು ಸಾಮಾನ್ಯ. ಆದರೆ ಜಪಾನ್ ಅಂದ ತಕ್ಷಣ ಇನ್ನೊಂದು ದೃಶ್ಯ ನೆನಪಾಗುತ್ತದೆ. ಅದು ಚೆರ್ರಿ ಮರ ಗಳು ಅಥವಾ ಚೆರ್ರಿ ಹೂವುಗಳು! ಹೌದು, ಜಪಾನಿನಲ್ಲಿ ಚೆರ‍್ರಿ ಹೂವುಗಳು ಅರಳಿದರೆ, ಅದು ಇಡೀ ವಿಶ್ವದ ಗಮನ ವನ್ನು ಸೆಳೆಯುತ್ತವೆ. ಹಾಗಂತ ಚೆರ‍್ರಿ ಹೂವುಗಳು ಜಪಾನಿನಂದೇ ಅರಳುವುದಿಲ್ಲ
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಜಪಾನ್ ಯಾವುದಕ್ಕೆ ಪ್ರಸಿದ್ಧ ? ಈ ಪ್ರಶ್ನೆಯನ್ನು ಹತ್ತು ಮಂದಿಗೆ ಕೇಳಿದರೆ, ಇಪ್ಪತ್ತು ಬೇರೆ ಬೇರೆ ಉತ್ತರಗಳು ಹೊರ ಹೊಮ್ಮಬಹುದು. ತಮಾಷೆಯೆಂದರೆ, ಇವೆಲ್ಲವೂ ಸರಿಯೇ. ಕೆಲವರು ಎಲೆಕ್ಟ್ರಾ ನಿಕ್ ವಸ್ತುಗಳಿಗೆ, ಕಂಪ್ಯೂಟ ರುಗಳಿಗೆ ಪ್ರಸಿದ್ಧ ಎಂದು ಹೇಳಬಹುದು. ಇನ್ನು ಕೆಲವರು ಕಾರುಗಳಿಗೆ (ಅಟೋಮೊಬೈಲ) ಪ್ರಸಿದ್ಧ ಎನ್ನಬಹುದು. ಮತ್ತೆ ಕೆಲವರು ಹೊಸ ಹೊಸ ಆವಿಷ್ಕಾರಗಳಿಗೆ ಎಂದು ಹೇಳಬಹುದು. ಭೂಕಂಪ ಸೇರಿದಂತೆ ನೈಸರ್ಗಿಕ ಪ್ರಕೋಪಗಳಿಗೂ ಜಪಾನ್ ಹೆಸರುವಾಸಿ ಎನ್ನು ವವರೂ ಇದ್ದಾರೆ. ಜಪಾನ್ ಅಂದ್ರೆ ಬುಲೆಟ್ ಟ್ರೇನ್ ಎಂದು ಹೇಳುವವರು ಸಹ ಇದ್ದಾರೆ.
ಜಪಾನ್ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಸ್ವಚ್ಛತೆ, ಶಿಸ್ತು, ಪ್ರಾಮಾಣಿಕತೆ, ಸ್ವಾವ ಲಂಬನೆ ಎಂದೂ ಹೇಳಬಹುದು. ಜಪಾನ್ ಅಂದ್ರೆ ಪ್ರಾಚೀನ ಮತ್ತು ಆಧುನಿಕಗಳ ಕೂಡು ತಾಣ ಎಂದರೂ ಸರಿಯೇ. ಜಪಾನ್ ಅಂದ್ರೆ ವೆಂಡಿಂಗ್ ಮಷೀನುಗಳ ಮೆಕ್ಕಾ ಅಂತ ಹೇಳುವವರೂ ಇದ್ದಾರೆ.
ಇದನ್ನೂ ಓದಿ:Vishweshwar Bhat Column: ಬೆನ್ನೆಟ್-ಕೋಲಮನ್ ಯಾರು ?
ನಿಜ, ಜಪಾನ್ ಎಂದಾಗ ಈ ಎಲ್ಲ ಚಿತ್ರಣಗಳ ಜಾಥಾ ಮೆರವಣಿಗೆ ನಮ್ಮ ಮುಂದೆ ಸಾಗುವುದು ಸಾಮಾನ್ಯ. ಆದರೆ ಜಪಾನ್ ಅಂದ ತಕ್ಷಣ ಇನ್ನೊಂದು ದೃಶ್ಯ ನೆನಪಾಗುತ್ತದೆ. ಅದು ಚೆರ್ರಿ ಮರ ಗಳು ಅಥವಾ ಚೆರ್ರಿ ಹೂವುಗಳು! ಹೌದು, ಜಪಾನಿನಲ್ಲಿ ಚೆರ‍್ರಿ ಹೂವುಗಳು ಅರಳಿದರೆ, ಅದು ಇಡೀ ವಿಶ್ವದ ಗಮನವನ್ನು ಸೆಳೆಯುತ್ತವೆ. ಹಾಗಂತ ಚೆರ‍್ರಿ ಹೂವುಗಳು ಜಪಾನಿನಂದೇ ಅರಳುವು ದಿಲ್ಲ.
ಸಾಮಾನ್ಯವಾಗಿ ಜಗತ್ತಿನ ಎಲ್ಲ ದೇಶಗಳಲ್ಲೂ ಚೆರ‍್ರಿ ಹೂವುಗಳು ಬಿಡುತ್ತವೆ. ಭಾರತ ಸೇರಿದಂತೆ ದಕ್ಷಿಣ ಕೊರಿಯಾ, ಚೀನಾ, ಸ್ಪೇನ, ಜಾರ್ಜಿಯಾ, ಕೆನಡಾ, ಸ್ವೀಡನ್, ಅಮೆರಿಕ, ಫ್ರಾನ್ಸ್ , ತೈವಾನ್,, ಥೈಲ್ಯಾಂಡ್, ಆಸ್ಟ್ರೇಲಿಯಾ, ಬ್ರೆಜಿಲ್, ಸಿಂಗಾಪುರ, ಜರ್ಮನಿ ಮುಂತಾದ ದೇಶಗಳಲ್ಲೂ ಚೆರ‍್ರಿ ಹೂವುಗಳನ್ನು ಕಾಣಬಹುದು. ನಮ್ಮ ದೇಶದ ಜಮ್ಮು-ಕಾಶ್ಮೀರ, ಮೇಘಾಲಯದ ಶಿಂಗ್, ನಾಗಾ ಲ್ಯಾಂಡಿನ ಕೊಹಿಮಾ, ಹಿಮಾಚಲ ಪ್ರದೇಶದ ನಾರಕಂಡ್, ಸಿಕ್ಕಿಂನ ಗ್ಯಾಂಗ್ಟಕ್‌ಗಳಲ್ಲೂ ಚೆರ್ರಿ ಹೂವುಗಳು ಬಿಡುತ್ತವೆ.
ಆದರೂ ಇವ್ಯಾವುವೂ ಜಾಗತಿಕ ಪ್ರಸಿದ್ಧಿಯನ್ನು ಪಡೆದಿಲ್ಲ. ಚೆರ‍್ರಿ ಹೂವುಗಳನ್ನು ನೋಡಲು ಈ ಊರುಗಳಿಗೆ ಯಾರೂ ಹೋಗುವುದಿಲ್ಲ. ಆದರೆ ಈ ಹೂವುಗಳು ನಿಜಕ್ಕೂ ಕಮಾನು ಕಟ್ಟುವುದು, ಆಗಸಕ್ಕೆ ಚಪ್ಪರ ಹಾಸುವುದು ಜಪಾನಿನಲ್ಲಿ ಮಾತ್ರ. ಹೀಗಾಗಿ ಅಲ್ಲಿ ಚೆರ್ರಿ ಹೂವು ಅರಳಿದರೆ ಅದು ಇಡೀ ಜಗತ್ತಿಗೇ ವಸಂತಕಾಲ. ಅಲ್ಲಿ ಆ ಹೂವು ಅರಳುವುದನ್ನು ನೋಡಲು ಜನ ವರ್ಷದ ಮೊದ ಲೇ ಸಿದ್ಧತೆ ಮಾಡತೊಡಗುತ್ತಾರೆ.
ಒಂದು ದೇಶ ಒಂದು ಹೂವಿನ ಮೂಲಕವೂ ಸಮಸ್ತ ಜಗತ್ತಿನ ಗಮನವನ್ನು ಸೆಳೆಯಬಹುದು ಎಂಬುದನ್ನು ಜಪಾನ್ ಚೆರ‍್ರಿ ಹೂವಿನ ಮೂಲಕ ಸಾಬೀತುಪಡಿಸಿದೆ. ಅಲ್ಪಕಾಲಿಕ ಚೆರ‍್ರಿ ಹೂವು ಮಾಡಿದ ಪವಾಡದ ರೀತಿಯಲ್ಲಿ ಬೇರೆ ಯಾವುದೇ ಹೂವು ಕೂಡ ಇಡೀ ವಿಶ್ವದ ಮನಸ್ಸಿನ ಮೇಲೆ ಪ್ರಭಾವ ಬೀರಿಲ್ಲ ಎಂಬುದು ಸಹ ಸತ್ಯ. ಚೆರ‍್ರಿ ಹೂವುಗಳು ಅಥವಾ ಸಕುರಾ ಪ್ರಪಂಚದ ಉಳಿದ ಭಾಗಗಳಿಗೆ ಜಪಾನಿನ ಸೌಂದರ್ಯ ಮತ್ತು ಸೌಂದರ್ಯದ ಅನಧಿಕೃತ ಸಂಕೇತವಾಗಿರುವುದೂ ಸಹ ಅಷ್ಟೇ ನಿಜ.
ಇದು ಆ ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರೀತಿಯ ಪ್ರಾಕೃತಿಕ ಚಿಮ್ಮಿಕೆಯೂ ಹೌದು. ಸಕುರಾ ಕೇವಲ ಒಂದು ಹೂವಿನ ಸೌಂದರ್ಯವನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಆದರೆ ಅದು ಜಪಾನ್ನಿ ಸಂಸ್ಕೃತಿ, ಪರಂಪರೆ ಮತ್ತು ಜೀವನದ ತಾತ್ತ್ವಿಕ ಅರ್ಥಗಳನ್ನು ಸಹ ಒಳಗೊಂಡಿದೆ. ಚೆರ‍್ರಿ ಹೂವು ಗಳು ಅರಳುವ ಕಾಲವಿದೆಯಲ್ಲ, ಅದನ್ನು ‘ಚೆರ್ರಿ ಬ್ಲಾಸಮ’ ಎಂದು ಕರೆಯುತ್ತಾರೆ. ಇದು ಜಪಾನಿನ ಶತಶತಮಾನಗಳಿಂದ ಸಂಸ್ಕೃತಿಯ ಒಂದು ಭಾಗವಾಗಿವೆ.
ಚೆರ‍್ರಿ ಬ್ಲಾಸಮ್ ‘ಸೌಂದರ್ಯ ಮತ್ತು ಸಾಂದರ್ಭಿಕ ಸಾವಿನ’ ಒಂದು ಪ್ರತೀಕ ಎಂದು ಜಪಾನಿ ಯರು ನಂಬಿದ್ದಾರೆ. ಅಷ್ಟೇ ಅಲ್ಲ, ಈ ಹೂವುಗಳು ಸಮಯವು ಶಾಶ್ವತವಲ್ಲ, ಹೀಗಾಗಿ ಪ್ರತಿ ಕ್ಷಣವನ್ನು ನೆನಪಿ ನಲ್ಲಿಡಿ ಎಂಬ ಸಂದೇಶವನ್ನು ನೀಡುತ್ತವೆ. ಈ ಹೂವುಗಳು ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸುವುದರ ಜತೆಗೆ, ಸಾಮಾಜಿಕ ಸಮುದಾಯಗಳ ಒಗ್ಗಟ್ಟಿನ ಸಂಕೇತವೂ ಆಗಿವೆ.
ಚೆರ್ರಿ ಹೂವುಗಳು ಅಲ್ಲಿನ ಕಲೆ, ಕಾವ್ಯ, ಚಿತ್ರಕಲೆ ಮತ್ತು ಸಂಗೀತದ ಮೇಲೂ ಗಾಢ ಪ್ರಭಾವವನ್ನು ಬೀರಿದೆ. ಬಹಳಷ್ಟು ಹೈಕು ಮತ್ತು ವಾಕಾ ಕಾವ್ಯಗಳಲ್ಲಿ ಈ ಹೂವುಗಳನ್ನು ಪ್ರಸ್ತಾಪಿಸಲಾಗಿದೆ. ವುಕಿ ಯೋ-ಎ ( Ukiyo-e) ಎಂಬ ಜಪಾನೀಸ್ ಬ್ಲಾಕ್ ಪ್ರಿಂಟ್ ಚಿತ್ರಕಲೆಯ ಮುಖ್ಯ ವಿಷಯವೇ ಚೆರ‍್ರಿ ಮರಗಳ ಸೌಂದರ್ಯ. ’ಸಕುರಾ ಸಕುರಾ’ ಎಂಬ ಪರಂಪರಾತ್ಮಕ ಜನಪದ ಗೀತೆ ಚೆರ‍್ರಿ ಹೂವುಗಳ ಸ್ಮರಣಾರ್ಥವಾಗಿ ರಚಿಸಲಾಗಿದೆ.
ಜಪಾನ್ನಿಲ್ಲಿ ಚೆರ‍್ರಿ ಬ್ಲಾಸಮ್ ನ್ನು ಒಂದು ಹಬ್ಬವಾಗಿ ಆಚರಿಸಲಾಗುತ್ತದೆ. ಅದನ್ನು ಅವರು ’ಹಾನಾ ಮಿ’ ಎಂದು ಕರೆಯುತ್ತಾರೆ. ’ಹಾನಾಮಿ’ ಅಂದ್ರೆ ’ಹೂವಿನ ವೀಕ್ಷಣೆ’ ಎಂದರ್ಥ. ಪ್ರಾಚೀನ ಕಾಲ ದಿಂದಲೂ ಈ ಹಬ್ಬ ಆಚರಿಸಲಾಗುತ್ತಿದ್ದು, ಜನರು ಹಸಿರು ಪಾರ್ಕ್‌ಗಳಲ್ಲಿ, ನದಿಗಳ ದಡ ಗಳಲ್ಲಿ ಮತ್ತು ಜಪಾನನ್ನು ಅಲಂಕರಿಸುವ ಚೆರ‍್ರಿ ಮರಗಳ ಕೆಳಗೆ ಕುಳಿತು, ಈ ಅಸಾಮಾನ್ಯ ಹೂವಿನ ಸೌಂದರ್ಯವನ್ನು ವೀಕ್ಷಿಸುವುದು ಸಂಪ್ರದಾಯ.
ರಾಜಧಾನಿ ಟೋಕಿಯೋ ಸೇರಿದಂತೆ, ಕ್ಯೋಟೋ, ಒಸಾಕಾ, ನಾರಾ, ಹೊಕ್ಕೈಡೊ, ಹಿರೋಸಾಕಿ, ಮೌಂಟ್ ಫುಜಿ ಮುಂತಾದ ಕಡೆಗಳಲ್ಲೂ ಸಹ ಚೆರ‍್ರಿ ಹೂವುಗಳು ಬಿಳಿ ಬಣ್ಣದಿಂದ ಗುಲಾಬಿ ಬಣ್ಣ ದವರೆಗೆ ತೋರಣಗಟ್ಟುವುದನ್ನು ನೋಡುವುದೇ ನಯನಾನಂದ. ಟೋಕಿಯೋದಲ್ಲಿರುವ ಉಎ ನೋ ಉದ್ಯಾನದಲ್ಲಿ ಸುಮಾರು 1200 ಸಕುರಾ ಮರಗಳಿವೆ. ಅವುಗಳಲ್ಲಿ ಬಿಟ್ಟ ಹೂವುಗಳನ್ನು ನೋಡಲು ಹಿಂದಿನ ವರ್ಷ ಮೂವತ್ತೈದು ಲಕ್ಷ ಜನ ಆಗಮಿಸಿದ್ದರು.
ಹಾಗೆ ಕ್ಯೋಟೋದಲ್ಲಿರುವ ಮರುಯಾಮ ಉದ್ಯಾನದಲ್ಲಿರುವ ಸಕುರಾ ಹೂವುಗಳನ್ನು ಹದಿನೈದು ಲಕ್ಷಕ್ಕೂ ಅಧಿಕ ಪ್ರವಾಸಿಗರು ವೀಕ್ಷಿಸಿದ್ದರು. ಹಿರೋಸಾಕಿ ಕ್ಯಾಸಲ್ ಸಕುರಾ ಹೂವುಗಳು ಪ್ರತಿ ವರ್ಷ ಇಪ್ಪತ್ತು ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮೌಂಟ್ ಫುಜಿ ಪರ್ವತದ ತಪ್ಪಲಿನಲ್ಲಿರುವ ಚೆರ‍್ರಿ ಹೂವುಗಳ ನೋಟ ಜಗತ್ತಿನ ಅತ್ಯಂತ ಕಣ್ಮನ ಸೆಳೆಯುವ ದೃಶ್ಯಗಳಲ್ಲಿ ಒಂದಾಗಿದೆ.
ಪ್ರತಿ ವರ್ಷ ಜಪಾನಿನಲ್ಲಿ ಮಾರ್ಚ್ ಎರಡನೇ ವಾರದಿಂದ ಚೆರ‍್ರಿ ಹೂವುಗಳು ಅರಳಲಾರಂಭಿಸಿ, ಮೇ ಮೊದಲ ವಾರದ ಹೊತ್ತಿಗೆ ಸುಮ್ಮನೆ ಉದುರಿ ಹೋಗಿದ್ದರೆ ನಾನು ಆ ಹೂವಿನ ಬಗ್ಗೆ ಬರೆಯು ತ್ತಿರಲಿಲ್ಲ. ಆದರೆ ಜಪಾನ್ ಈ ಹೂವನ್ನು ಇಟ್ಟುಕೊಂಡು ಆ ಐವತ್ತು ದಿನಗಳ ಅವಧಿಯಲ್ಲಿ ತನ್ನ ನ್ನು ಇಡೀ ವಿಶ್ವದ ಜನರನ್ನು ಆಕರ್ಷಿಸುತ್ತಾ, ಅದನ್ನೇ ಒಂದು ಅದ್ಭುತ ಪ್ರವಾಸೋದ್ಯಮ ಅವ ಕಾಶವನ್ನಾಗಿ ಪರಿವರ್ತಿಸಿರುವುದು ಅಚ್ಚರಿಯ ಸಂಗತಿಯೇ.
ಒಂದು ಹೂವು ಸಹ ಒಂದು ದೇಶದ ಆರ್ಥಿಕತೆಗೆ ಹೇಗೆ ಪೂರಕವಾಗಬಹುದು ಎಂಬುದಕ್ಕೆ ಚೆರ್ರಿ ಬ್ಲಾಸಮ್ ಒಂದು ಅನನ್ಯ ನಿದರ್ಶನ. ಚೆರ್ರಿ ಹೂವು ಅರಳಿದರೆ ಇಡೀ ಟೋಕಿಯೋ ನಗರ ಗುಲಾಬಿ ಬಣ್ಣಕ್ಕೆ ತಿರುಗುವ ಹಾಗೆ, ಹಣದ ಬಣ್ಣವೂ ಗುಲಾಬಿಯಾಗುತ್ತದೆ. ಆ ಸಮಯದಲ್ಲಿ ಟೋಕಿಯೋ ದಲ್ಲಿ ಉಳಿದುಕೊಳ್ಳಲು ಹೊಟೇಲುಗಳಲ್ಲಿ ರೂಮುಗಳು ಸಿಗುವುದಿಲ್ಲ. ಅವೆಲ್ಲ ಆರು ತಿಂಗಳ ಮುಂಚೆಯೇ ಬುಕ್ ಆಗಿರುತ್ತವೆ.
ಒಂದು ವೇಳೆ ಸಿಕ್ಕರೂ ಒಂದಕ್ಕೆ ಏಳೆಂಟು ಪಟ್ಟು ಜಾಸ್ತಿ ಹಣವನ್ನು ಪೀಕಬೇಕು. ಜಪಾನಿಗೆ ಮೊದ ಲ ಸಲ ಭೇಟಿ ನೀಡುವವರಂತೂ ಈ ಹೂವುಗಳು ಅರಳುವುದನ್ನು ನೋಡಲೆಂದೇ ಸಮಯವನ್ನು ನಿಗದಿಪಡಿಸಿಯೇ ಆಗಮಿಸುತ್ತಾರೆ. ಕೋವಿಡ್ ಗಿಂತ ಮುನ್ನ, ಅಂದರೆ 2019 ರಲ್ಲಿ, ಸುಮಾರು 63 ದಶಲಕ್ಷ (ಅಂದರೆ ಜಪಾನಿನ ಜನಸಂಖ್ಯೆಯ ಅರ್ಧದಷ್ಟು ಮಂದಿ) ದೇಸಿ ಮತ್ತು ವಿದೇಶಿ ಪ್ರವಾಸಿ ಗರು ಚೆರ‍್ರಿ ಹೂವುಗಳನ್ನು ನೋಡಲೆಂದು ಆ ಐವತ್ತು ದಿನಗಳ ಅವಧಿಯಲ್ಲಿ ಆಗಮಿಸಿದ್ದರೆಂದರೆ, ಅದರ ಜನಪ್ರಿಯತೆಯನ್ನು ಊಹಿಸಬಹುದು.
ಕಳೆದ ವರ್ಷ ಚೆರ‍್ರಿ ಬ್ಲಾಸಮ್ ಸೀಸನ್ ಸುಮಾರು ಮೂವತ್ತೇಳು ಲಕ್ಷ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿತ್ತು. ಇದರಿಂದ ದೇಶದ ಆರ್ಥಿಕತೆಗೆ 2.7 ಶತಕೋಟಿ ಡಾಲರ್ (300 ಶತಕೋಟಿ ಯೆನ್) ಹಣ ಹರಿದು ಬರುವಂತಾಗಿತ್ತು. ಚೆರ‍್ರಿ ಬ್ಲಾಸಮ್ ಸೀಸನ್ ಮಾರ್ಚ್ ಎರಡನೇ ವಾರದಲ್ಲಿ ಆರಂಭ ವಾದರೂ, ಜಪಾನ್ ಅದಕ್ಕಿಂತ ಮೂರು ತಿಂಗಳ ಮುನ್ನವೇ ವಿದೇಶಿ ಪ್ರವಾಸಿಗರನ್ನು ಆಹ್ವಾನಿಸಲು ಸನ್ನದ್ಧವಾಗುತ್ತದೆ.
ಇನ್ನೂರು ದಿನಗಳಲ್ಲಿ ಮಾಡುವಷ್ಟು ವ್ಯಾಪಾರ-ವ್ಯವಹಾರ- ವಹಿವಾಟನ್ನು ಕೇವಲ ಐವತ್ತು ದಿನಗಳಲ್ಲಿ ಮಾಡಲು ಸಿದ್ಧವಾಗುತ್ತದೆ. ಯುರೋಪ್ ಮತ್ತು ಅಮೆರಿಕ ಕ್ರಿಸ್ಮಸ್ ಮತ್ತು ಹೊಸ ವರ್ಷ ಕ್ಕೆ ಹೇಗೆ ಸಿದ್ಧವಾಗುತ್ತದೋ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಜಪಾನ್ ಚೆರ‍್ರಿ ಬ್ಲಾಸಮ್ ಗೆ ಸಜ್ಜಾಗುತ್ತದೆ.
ಸೋಷಿಯಲ್ ಮೀಡಿಯಾ ಹುಚ್ಚು ಚೆರ‍್ರಿ ಬ್ಲಾಸಮ್ ನ್ನು ಇನ್ನಷ್ಟು ಜನಪ್ರಿಯ ಗೊಳಿಸಿರುವು ದಂತೂ ಸತ್ಯ. ಕಳೆದ ವರ್ಷ ಇನ್ಸ್ಟಾಗ್ರಾಮ್ ನಂದೇ ಮೂರು ಕೋಟಿ ಫೋಟೋ ಮತ್ತು ವಿಡಿಯೋ ಗಳನ್ನು ಜನ ಅಪ್ರೋಡ್ ಮಾಡಿದ್ದರು. ಆ ಅಲ್ಪ ಅವಧಿಯಲ್ಲಿ ಚೆರ‍್ರಿ ಹೂವುಗಳ ಸುತ್ತ ಜಪಾನ್ ಗಿರಕಿ ಹೊಡೆಯುತ್ತದೆ. ಇಡೀ ದೇಶ ಚೆರ್ರಿ ಹೂವುಗಳಿಂದ ಹೊಸ ಸೌಂದರ್ಯ, ಹೊಸ ರೂಪ ಪಡೆಯುವುದು ಒಂದೆಡೆಯಾದರೆ, ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹಣದ ಹೊಳೆ ಹರಿದು ಬರುತ್ತದೆ.
ಸಕುರಾ ಸೀಸನ್‌ಗಾಗಿ, ಹೋಟೆಲ್ ರೂಮುಗಳನ್ನು ಮೂರು ತಿಂಗಳ ಮುನ್ನವೇ ಕಾದಿರಿಸಲಾಗುತ್ತವೆ. ಎಲ್ಲ ಏರ್ ಲೈನ್ಸ್ ಫಲ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಸಕುರಾ ಥೀಮ್ ಹೊಂದಿರುವ ವಸ್ತುಗಳೇ ತುಂಬಿ ಹೋಗಿರುತ್ತವೆ. ಸಕುರಾ ಆಧರಿತ ಆಹಾರ ಮತ್ತು ಪಾನೀಯಗಳನ್ನು ಅತ್ಯಂತ ಆಕರ್ಷಕವಾಗಿ ಮಾರಾಟ ಮಾಡಲಾಗುತ್ತದೆ. ಸಕುರಾ ವಿನ್ಯಾಸದ ಉಡುಪುಗಳು, ಸಕುರಾ ಗಂಧ ವಿಶಿಷ್ಟ ಚಾಕೋಲೇಟ್‌ಗಳು ಮತ್ತು ಅತ್ತರುಗಳು ಸೇರಿದಂತೆ ಸರ್ವವೂ ಸಕುರಾಮಯ!
ಅಷ್ಟೇ ಅಲ್ಲ, ಚೆರ‍್ರಿ ಬ್ಲಾಸಮ್ ಸೀಸನ್ ಪ್ರವಾಸಿಗರಿಗೆ ಜಪಾನಿನ ಸಂಸ್ಕೃತಿಯ ದ್ವಾರವನ್ನು ತೆರೆಯು ತ್ತದೆ. ಪ್ರವಾಸಿಗರು ಸಾಂಪ್ರದಾಯಿಕ ಉಡುಗೆ ’ಕಿಮೋನೋ’ ಧರಿಸಿ, ಸಕುರಾ ಮರಗಳ ಸೌಂದರ್ಯ ವನ್ನು ಆನಂದಿಸುತ್ತಾರೆ.
ಜಪಾನ್ ಯಾವ ರೀತಿಯಲ್ಲಿ ಈ ಹೂ ಬಿಡುವ ಕಾಲವನ್ನು ಮಾರ್ಕೆಟ್ ಮಾಡುತ್ತದೆಂದರೆ, ಸಕುರಾ ಮರಗಳ ಸೌಂದರ್ಯದ ನಡುವೆ ಪ್ರವಾಸಿಗರಿಗೆ ವಿಶಿಷ್ಟ ಪೋಟೋ ಶೂಟ್ ಗಾಗಿ ಪ್ಯಾಕೇಜ್ ಟೂರ್ ಗಳನ್ನೂ ಏರ್ಪಡಿಸಲಾಗುತ್ತದೆ. ’ಜಾತ್ರೆಪೇಟೆಯಲ್ಲಿನ ಎಲ್ಲ ಅಂಗಡಿಗಳಿಗೂ ಭರ್ಜರಿ ವ್ಯಾಪಾರ’ ಎಂಬಂತೆ, ಚೆರ‍್ರಿ ಹೂವುಗಳು ಬಿಟ್ಟಾಗ ಹಣ ಮಾಡದವನೇ ಪಾಪಿ! ಪ್ರವಾಸಿಗರು ವಿವಿಧ ಪ್ರಾಂತ್ಯ ಗಳಿಗೆ ಭೇಟಿ ನೀಡುವುದರಿಂದ ಸ್ಥಳೀಯ ವ್ಯಾಪಾರ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಆದಾಯ ಹೆಚ್ಚುತ್ತದೆ, ಇದರಿಂದ ಸ್ಥಳೀಯ ಆರ್ಥಿಕತೆಗೂ ಬೆಂಬಲ ದೊರೆಯುತ್ತದೆ.
ಅಂದರೆ ಒಂದು ಹೂವಿನ ಸುತ್ತ ಒಂದು ದೇಶ, ತನ್ನ ಸಂಸ್ಕೃತಿಯನ್ನು ಶೋಕೇಸ್ ಮಾಡಿ, ಪ್ರವಾ ಸೋದ್ಯಮವನ್ನು ಒಂದು ಅದ್ಭುತ ಕಲೆಯಾಗಿ, ವಾಣಿಜ್ಯವಾಗಿ ಪರಿವರ್ತಿಸುವುದು ಆಧುನಿಕ ಜಗತ್ತಿನ ವಿಸ್ಮಯವೇ ಸರಿ. ಮಾರುಕಟ್ಟೆ ಆಧರಿತ ಆರ್ಥಿಕತೆಗೂ ಇದು ದೊಡ್ಡ ಪಾಠವೇ.
ಜಪಾನಿನಲ್ಲಿ ಚೆರ‍್ರಿ ಹೂವು ಅರಳುತ್ತಿದಂತೆ, ಜಗತ್ತಿನಲ್ಲಿರುವ ಎಲ್ಲ ದೊಡ್ಡ ದೊಡ್ಡ ಬ್ರಾಂಡ್ ಗಳು ತಮ್ಮ ಉತ್ಪನ್ನಗಳನ್ನು ಅರಳಿಸುವುದು ಹೇಗೆ ಎಂದು ಅಕಲು ಹಾಕತೊಡಗುತ್ತವೆ. ಉದಾಹರಣೆಗೆ, ಚೆರ‍್ರಿ ಬ್ಲಾಸಮ್ ಋತುವಿನಲ್ಲಿ, ಜಾಗತಿಕ ಬ್ರ್ಯಾಂಡ್ ಆದ ಕೋಕಾ-ಕೋಲಾ ಇತರ ಯಾವುದೇ ಸ್ಥಳೀಯ ಬ್ರ್ಯಾಂಡ್‌ಗಿಂತ ಹೆಚ್ಚು ಜಪಾನೀಸ್ ಆಗುತ್ತದೆ. ಚಳಿಗಾಲವು ವಸಂತಕಾಲಕ್ಕೆ ತಿರುಗು ತ್ತಿದ್ದಂತೆ, ದೇಶಾದ್ಯಂತ ಕೋಕಾ-ಕೋಲಾ ಬಾಟಲಿಗಳುಳ್ಳ ಕೇಸ್‌ಗಳು ಗುಲಾಬಿ ಬಣ್ಣದ ಸಕುರಾ ಹೂವುಗಳಿಂದ ಅಲಂಕೃತವಾಗುತ್ತವೆ.
ಚೆರ‍್ರಿ ಋತುವಿನ ಉತ್ಸಾಹವನ್ನು ಸಂಪೂರ್ಣವಾಗಿ ಸೆರೆ ಹಿಡಿಯಲು ಹೊಸ ಹೊಸ ಆಕರ್ಷಕ ಮಾರ್ಕೆಟಿಂಗ್ ಘೋಷಣೆಗಳನ್ನು ಬಿಡುಗಡೆ ಮಾಡುತ್ತದೆ. ಚೆರ‍್ರಿ ಬ್ಲಾಸಮ್ ವೀಕ್ಷಣೆ ಪಿಕ್ನಿಕ್ ಗಾಗಿ ನೀಳವಾದ ಬಾಟಲಿಗಳನ್ನು ವಿಶೇಷವಾಗಿ ತಯಾರಿಸುತ್ತದೆ, ಏಕೆಂದರೆ ಚಿತ್ರಗಳನ್ನು ತೆಗೆದುಕೊಳ್ಳು ವಾಗ ಅವುಗಳನ್ನು ಹಿಡಿದುಕೊಳ್ಳಲು ನೀಲ ಬಾಟಲಿ ಸಹಕಾರಿ. ಆ ಸಮಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲಿ ನೋಡಿದರೂ ಕೋಕಾ ಕೋಲಾ ವೈಭವ!
ಕೆಲ ವರ್ಷಗಳ ಹಿಂದೆ, ಜಾಕ್ ಡೇನಿಯಲ್ಸ ವಿಶೇಷ ಆವೃತ್ತಿಯ ‘ಬ್ಲಾಕ್ ಬ್ಲಾಸಮ್’ ಮದ್ಯವನ್ನು ಬಿಡುಗಡೆ ಮಾಡಿ ಭಾರಿ ಮಾರಾಟ ಯಶಸ್ಸನ್ನು ಕಂಡಿತು. ‘ಬ್ಲಾಕ್ ಬ್ಲಾಸಮ್’ ಸೀಮಿತ ಆವೃತ್ತಿಯ ಸಕುರಾ ವಿಷಯದ ಬಾಕ್ಸ್ ಜಪಾನಿನೆಡೆ ಗ್ರಾಹಕರನ್ನು ಬೆರಗುಗೊಳಿಸಿತು. ಇದು ದೇಶೀಯ ಮಾರು ಕಟ್ಟೆಯ ಅಗತ್ಯಗಳನ್ನು ಪೂರೈಸಲು ಜಾಕ್ ಡೇನಿಯಲ್ಸ್ ತನ್ನ ಪ್ಯಾಕೇಜಿಂಗ್ ಅನ್ನು ಮೊದಲ ಬಾರಿಗೆ ಬದಲಾಯಿಸಿತು.
ಅಂದರೆ ಚೆರ‍್ರಿ ಹೂವು ಬಹುರಾಷ್ಟ್ರೀಯ ಕಂಪನಿಗಳ ಬೋರ್ಡ್ ರೂಮುಗಳಲ್ಲೂ ಉತ್ಸಾಹವನ್ನು ಅರಳುವಂತೆ ಮಾಡುತ್ತದೆ. ’ಬ್ಲಾಕ್ ಬ್ಲಾಸಮ’ ವಿಸ್ಕಿ ಚೆರ‍್ರಿ ಋತುವಿಗೆ ಸೂಕ್ತವಲ್ಲ ಎಂಬ ಅಭಿ ಪ್ರಾಯಗಳನ್ನು ಬದಲಾಯಿಸಿತಲ್ಲದೇ, ಜಪಾನಿನಲ್ಲಿ ಬಲವಾಗಿ ಬೇರು ಬಿಡಲು ಸಹಾಯಕ ವಾಯಿತು. ಅಂದರೆ ಯಾವುದೇ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮತ್ತು ಹೊಸ ಹೊಸ ಮಾರಾಟ ತಂತ್ರವನ್ನು ಮಾಡಲು ಚೆರ್ರಿ ಋತು ಒಳ್ಳೆಯ ಕಾಲ. ಅಂದರೆ ಚೆರ‍್ರಿ ಹೂವು ಬಹುರಾಷ್ಟ್ರೀಯ ಕಂಪನಿಗಳ ಬೋರ್ಡ್ ರೂಮುಗಳಲ್ಲೂ ಉತ್ಸಾಹವನ್ನು ಅರಳುವಂತೆ ಮಾಡುತ್ತದೆ.
ಜಪಾನಿನಲ್ಲಿ ಸುಮಾರು ನೂರಕ್ಕೂ ಅಧಿಕ ಬಗೆಯ ಹತ್ತು ಲಕ್ಷ ಚೆರ‍್ರಿ ಮರಗಳಿರಬಹುದು. ಇಂದು ಆ ಮರ ದೇಶದ ಪ್ರಗತಿಯ ಸಂಕೇತವಾಗಿದೆ. ಒಂದು ದೇಶ ಮನಸ್ಸು ಮಾಡಿದರೆ, ತನ್ನ ಸಹಜ ಸೌಂದ ರ್ಯವನ್ನು ಹೇಗೆ ಮಾರ್ಕೆಟ್ ಮಾಡಬಹುದು, ಶೋಕೇಸ್ ಮಾಡಬಹುದು, ಆ ಮೂಲಕ ಅದನ್ನೇ ತನ್ನ ಅರ್ಥ ವ್ಯವಸ್ಥೆ ಬಲವರ್ಧನೆಗೆ ವಾಹಕವಾಗಿ ಪರಿವರ್ತಿಸಬಹುದು ಎಂಬುದಕ್ಕೆ ಚೆರ್ರಿ ಬ್ಲಾಸಮ್ ಒಂದು ಒಳ್ಳೆಯ ನಿದರ್ಶನ. ಮರದಲ್ಲಿ ಚೆರ‍್ರಿ ಹೂವು ತುಂಬಿದರೆ, ಜೇಬೂ ತುಂಬುತ್ತದೆ!