ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಇಸ್ರೇಲನ್ನು ಕೆಣಕಿ ಬಚಾವ್‌ ಆದವರು ಯಾರಿದ್ದಾರೆ ?!

ಸುಮಾರು ನಲವತ್ತು ಕಿಮೀ ಗಡಿಯುದ್ದಕ್ಕೂ ಭಾರಿ ಭದ್ರತೆ. ಮುಳ್ಳುತಂತಿಯ ಬೇಲಿ. ಅಲ್ಲಲ್ಲಿ ಎತ್ತರದ ತಡೆಗೋಡೆ. ಪ್ರತಿ ನೂರು ಮೀಟರಿಗೆ ಕೆಮರಾ ಕಣ್ಗಾವಲು. ಇಸ್ರೇಲ್ ಗಡಿ ಗುಂಟ ಹಾದು ಹೋಗುವ ಹೆzರಿ ಬೇರೆ. ಯಾರೇ ಗಡಿಯೊಳಗೆ ನುಸುಳುವ ಸಣ್ಣ ಪ್ರಯತ್ನ ಮಾಡಿದರೂ ಇಸ್ರೇಲಿ ಸೈನಿಕರು ಅವರನ್ನು ಸಾಯಿಸದೇ ಬಿಡುವುದಿಲ್ಲ.

ನೂರೆಂಟು ವಿಶ್ವ

vbhat@me.com

2023 ರ ಅಕ್ಟೋಬರ್ 7!

ಅಂದು ಇಸ್ರೇಲ್-ಗಾಜಾ ಗಡಿಯಿಂದ ಸುಮಾರು ಮೂರು ಕಿಮೀ ಸನಿಹದಲ್ಲಿರುವ ರೀಮ್ ಕಿಬುಟ್ಸ್ ಪ್ರದೇಶದ ಒಂದು ತೋಪಿನಲ್ಲಿ ಅಹೋರಾತ್ರಿ ‘ನೋವಾ ಮ್ಯೂಸಿಕ್ ಫೆಸ್ಟಿವಲ್’ ಅನ್ನು ಏರ್ಪಡಿಸ ಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಸುಮಾರು ಎರಡು ತಿಂಗಳಿನಿಂದ ಭಾರೀ ಪ್ರಚಾರ ಮಾಡಲಾಗಿತ್ತು. ಅದರಲ್ಲಿ ಪಾಲ್ಗೊಳ್ಳಲೆಂದು ಅನೇಕರು ಮುಂಗಡವಾಗಿ ಹೆಚ್ಚಿನ ಹಣ ತೆತ್ತು ತಮ್ಮ ಹಾಜರಾತಿ ಯನ್ನು ಖಾತ್ರಿಪಡಿಸಿಕೊಂಡಿದ್ದರು. ಹೀಗಾಗಿ ಆ ದಿನ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.

ಅಂದು ಶನಿವಾರ, ಶಬ್ಬತ್ ಬೇರೆ. ಸಾಮಾನ್ಯವಾಗಿ ವಾರದ ಪುಣ್ಯದಿನವಾದ ಶಬ್ಬತ್‌ನಂದು ಇಡೀ ಇಸ್ರೇಲ್ ಶಾಂತವಾಗಿ ಮಲಗಿರುತ್ತದೆ. ದೇಶದಡೆ ಯಾವ ವಿಶೇಷ ಚಟುವಟಿಕೆಯೂ ಇರುವುದಿಲ್ಲ. ಹೀಗಾಗಿ ಪೊಲೀಸರು ಮತ್ತು ಸೈನಿಕರು ರಜಾ ಮೂಡಿನಲ್ಲಿದ್ದರು. ಇಸ್ರೇಲ್ ಕಡೆಯಿಂದ ಗಾಜಾ ಗಡಿಯುದ್ದಕ್ಕೂ ಇರುವ ಸೈನಿಕ ಕೇಂದ್ರಗಳಲ್ಲಿ ಅಂದು ಸೈನಿಕರು ಕಡಿಮೆ ಸಂಖ್ಯೆಯಲ್ಲಿ ಕರ್ತವ್ಯ ದಲ್ಲಿದ್ದರು.

ಹೆಚ್ಚಿನವರು ರಜೆಯ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ರಾತ್ರಿಯಿಂದ ಬೆಳಗಿನ ತನಕ ನಡೆದ ಆ ಮ್ಯೂಸಿಕ್ ಫೆಸ್ಟಿವಲ್ ನ ಕಿವಿಗಡಚಿಕ್ಕುವ ಸದ್ದಿನಲ್ಲಿ ಎಲ್ಲರೂ ಲೀನರಾಗಿದ್ದರು. ಬೆಳಗಿನ ಜಾವ ಆರೂವರೆ ಹೊತ್ತಿಗೆ ರಾಕೆಟ್ ದಾಳಿಯ ಸೈರನ್‌ಗಳು ಮೊಳಗಿತು. ಆದರೆ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದವರಿಗೆ ಆ ಸದ್ದು ಕೇಳಲಿಲ್ಲ. ಅವರೆಲ್ಲ ಡಿಜೆ ಸೌಂಡಿನಲ್ಲಿ ಕಳೆದುಹೋಗಿದ್ದರು. ಗಾಜಾ ಗಡಿಯಿಂದ ಇಸ್ರೇಲ್ ಒಳಗೆ ನುಸುಳುವುದು ಅಷ್ಟು ಸುಲಭವಲ್ಲ.

ಮೊದಲನೆಯದಾಗಿ ಸುಮಾರು ನಲವತ್ತು ಕಿಮೀ ಗಡಿಯುದ್ದಕ್ಕೂ ಭಾರಿ ಭದ್ರತೆ. ಮುಳ್ಳುತಂತಿಯ ಬೇಲಿ. ಅಲ್ಲಲ್ಲಿ ಎತ್ತರದ ತಡೆಗೋಡೆ. ಪ್ರತಿ ನೂರು ಮೀಟರಿಗೆ ಕೆಮರಾ ಕಣ್ಗಾವಲು. ಇಸ್ರೇಲ್ ಗಡಿ ಗುಂಟ ಹಾದು ಹೋಗುವ ಹೆzರಿ ಬೇರೆ. ಯಾರೇ ಗಡಿಯೊಳಗೆ ನುಸುಳುವ ಸಣ್ಣ ಪ್ರಯತ್ನ ಮಾಡಿದರೂ ಇಸ್ರೇಲಿ ಸೈನಿಕರು ಅವರನ್ನು ಸಾಯಿಸದೇ ಬಿಡುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಟೇಕಾಫ್‌ ಪ್ರಕ್ರಿಯೆಗಳು

ಇಂಥ ಅಭೇದ್ಯ ಗೋಡೆಯನ್ನು ದಾಟುವುದು ಸುಲಭ ಸಾಧ್ಯವಲ್ಲ. ಈ ಗಡಿಯಲ್ಲಿ ನಡೆಯುವ ಸಣ್ಣ ಚಟುವಟಿಕೆ ಅಥವಾ ದುಸ್ಸಾಹಸವನ್ನು ಇಸ್ರೇಲ್ ಸಹಿಸಿಕೊಳ್ಳುವುದಿಲ್ಲ. ಹಮಾಸ್ ಉಗ್ರರು ಬಾಲ ಬಿಚ್ಚಿದರೆ ಅವರು ಜೀವದ ಮೇಲಿನ ಆಸೆ ಬಿಟ್ಟು ಆ ಪ್ರಯತ್ನಕ್ಕಿಳಿಯಬೇಕಷ್ಟೆ. ಕಾರಣ ತನ್ನ ವೈರಿಗಳ ಸಣ್ಣ ಕಿತಾಪತಿಯನ್ನೂ ಇಸ್ರೇಲ್ ಇಲ್ಲಿ ತನಕ ಸಹಿಸಿಕೊಂಡಿದ್ದೇ ಇಲ್ಲ. ಅವರಾಗಿ ಒಂದು ಗುಂಡು ಹೊಡೆದರೆ, ಇಸ್ರೇಲ್ ಹತ್ತು ಗುಂಡು ಹಾರಿಸಿದ್ದೇ ಖರೆ.

ಇದು ಇಂದು-ನಿನ್ನೆಯದಲ್ಲ. ಇಸ್ರೇಲ್ ಇರುವುದೇ ಹಾಗೆ. ತನ್ನನ್ನು ಕೆಣಕಿದ ಯಾರನ್ನೂ ಅದು ಇಲ್ಲಿ ತನಕ ಸುಮ್ಮನೆ ಬಿಟ್ಟಿಲ್ಲ. ಅದು ಪಕ್ಕದ ದೇಶವಾಗಿರಬಹುದು ಅಥವಾ ಸಾವಿರಾರು ಕಿಮೀ ದೂರದ ದೇಶವಾಗಿರಬಹುದು. ತನ್ನನ್ನು ಕೆಣಕಿದ ವೈರಿ ದೇಶದೊಳಕ್ಕೆ ನುಗ್ಗಿ ಹೆಡೆಮುರಿ ಕಟ್ಟಿ ಬಡಿಯದ ತನಕ ಇಸ್ರೇಲ್ ವಿರಮಿಸಿದ್ದೇ ಇಲ್ಲ.

ಹೀಗಾಗಿ ಇಸ್ರೇಲ್ ಮೇಲೆ ದಾಳಿ ಮಾಡುವ ಮುನ್ನ ವೈರಿಗಳು ನೂರು ಸಲ ಯೋಚಿಸುತ್ತಾರೆ. ಇದು ಗೊತ್ತಿದ್ದೂ ದಾಳಿ ಮಾಡಿದರೆ ಅದಕ್ಕೆ ತಕ್ಕ ಶಾಸ್ತಿ ಅನುಭವಿಸಲು ಸಿದ್ಧರಿರಬೇಕಷ್ಟೇ. ಅಂದು ಹಮಾಸ್ ಉಗ್ರಗಾಮಿಗಳು ಗಾಜಾದಿಂದ ಪ್ಯಾರಾಗ್ಲೈಡರ್ಗಳಲ್ಲಿ ಹಾರಿ ಇಸ್ರೇಲ್ ಒಳಗೆ ಬಂದಿಳಿ ದಿದ್ದರು.

Screenshot_2 ಋ

ಬರುತ್ತಿದ್ದಂತೆ ಅವರಿಗೆ ಮೊದಲೇ ಇಸ್ರೇಲಿನೊಳಗಿದ್ದ ಅವರ ಕಡೆಯವರು ಟ್ರಕ್‌ಗಳು, ಮೋಟಾರ್‌ ಸೈಕಲ್ ಗಳೊಂದಿಗೆ ಸಜ್ಜಾಗಿದ್ದರು. ಸುಮಾರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಉಗ್ರರು ಮಷಿನ್ ಗನ್‌ಗಳನ್ನು ಝಳಪಿಸುತ್ತಾ, ಅಬ್ಬರಿಸುತ್ತಾ, ಕೇಕೆ ಹಾಕುತ್ತಾ ಫೆಸ್ಟಿವಲ್ ಸ್ಥಳಕ್ಕೆ ನುಗ್ಗಿದರು. ಅಲ್ಲಿ ಸಂಗೀತ ಮೊಳಗುತ್ತಿತ್ತು. ಜನ ಖುಷಿಯಿಂದ ಡಾನ್ಸ್ ಮಾಡುತ್ತಿದ್ದರು. ಬಂದವರೇ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ತಮ್ಮ ಪಾಡಿಗೆ ತಾವು ಭಾಗವಹಿಸಿದ್ದ ಅಮಾಯಕರ ಮೇಲೆ ಹಠಾತ್ ಗುಂಡಿನ ಮಳೆಗರೆಯಲಾರಂಭಿಸಿದರು.

ಏನು ಆಗುತ್ತಿದೆ ಎಂದು ಸಾವರಿಸಿಕೊಳ್ಳುವ ಹೊತ್ತಿಗೆ, ನೂರಾರು ಹೆಣಗಳು ಬಿದ್ದಿದ್ದವು. ತಮ್ಮ ಮೇಲೆ ಯಾಕೆ ಹೀಗೆ ಗುಂಡಿನ ದಾಳಿಯಾಗುತ್ತಿದೆ ಎಂಬುದನ್ನು ಯೋಚಿಸುವ ಮುನ್ನವೇ ಅವರೆಲ್ಲ ಶವವಾಗಿ ಬಿದ್ದಿದ್ದರು. ಸಾವಿರಾರು ಮಂದಿ ಜೀವವನ್ನು ಬಚಾವ್ ಮಾಡಿಕೊಳ್ಳಲು ಓಡುತ್ತಿದ್ದರು. ಪೊದೆಗಳಲ್ಲಿ ಅಡಗಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಬಂದೂಕುಧಾರಿ ಉಗ್ರರು ಅವರನ್ನು ಬೆನ್ನಟ್ಟಿ ಗುಂಡು ಹಾರಿಸುತ್ತಿದ್ದರು.

ಕಾರು, ಬಂಕರ್ ಮತ್ತು ಶೌಚಾಲಯಗಳಲ್ಲಿ ಅಡಗಿರುವವರನ್ನು ಒಳಹೊಕ್ಕು ಗುಂಡು ಹಾರಿಸಿದರು, ಬೆನ್ನಟ್ಟಿ ಕೊಂದು ಹಾಕಿದರು. ಈ ದಾಳಿಯಲ್ಲಿ ಹಮಾಸ್ ಉಗ್ರರು ಸುಮಾರು 378 ಜನರನ್ನು ನಿರ್ದಯವಾಗಿ, ಬರ್ಬರವಾಗಿ ಕೊಂದು ಹಾಕಿದ್ದರು. ಆ ಪೈಕಿ 344 ನಾಗರಿಕರು ಮತ್ತು 34 ಭದ್ರತಾ ಸಿಬ್ಬಂದಿ ಸೇರಿದ್ದರು. ಮನಬಂದಂತೆ ಅಮಾಯಕರನ್ನು ಸಾಯಿಸಿದ್ದ ಹಮಾಸ್ ಉಗ್ರರು 44 ಮಂದಿಯನ್ನು ಒತ್ತೆಯಾಳುಗಳಾಗಿ ಗಾಜಾಕ್ಕೆ ಎತ್ತಾಕಿಕೊಂಡು ಹೋದರು. ಈ ಘಟನೆಯು ಇಸ್ರೇಲ್‌ ನ ಇತಿಹಾಸದಲ್ಲಿ ಕಂಡುಕೇಳರಿಯದ, ಯಹೂದಿ ನಾಗರಿಕರ ಮೇಲೆ ನಡೆದ ಅತಿ ದೊಡ್ಡ ಹತ್ಯಾ ಕಾಂಡಗಳಲ್ಲಿ ಒಂದಾಗಿತ್ತು. ಇಸ್ರೇಲ್ ಇಂಥ ಅವಮಾನವನ್ನು ಹಿಂದೆಂದೂ ಅನುಭವಿಸಿರ ಲಿಲ್ಲ.

ಅಷ್ಟಕ್ಕೆ ಸುಮ್ಮನಾಗದ ಹಮಾಸ್ ಉಗ್ರರು ಹತ್ತಿರದಲ್ಲಿಯೇ ಇದ್ದ ’ಬೀರಿ ಕಿಬುಟ್ಸ್’ (ಕಿಬುಟ್ಸ್ ಅಂದ್ರೆ ಇಸ್ರೇಲ್‌ನಲ್ಲಿರುವ ಒಂದು ವಿಶೇಷ ರೀತಿಯ ಗ್ರಾಮ/ಸಮುದಾಯ. ಇದು ಒಂದು ಸಾಮೂಹಿಕ ವಾಸಸ್ಥಳ. ‘ಒಟ್ಟಿಗೆ ಕೆಲಸ ಮಾಡಿ, ಒಟ್ಟಿಗೆ ಬದುಕುವ’ ಗ್ರಾಮ ಮಾದರಿ) ಎಂಬ ಗೇಟೆಡ್ ಕಮ್ಯು ನಿಟಿಗೆ ನುಗ್ಗಿದರು. ಅವರೆಲ್ಲ ಆಗ ತಾನೇ ಬೆಳಗಿನ ಸೂರ್ಯನ ಎಳೆ ಬಿಸಿಲಿಗೆ ತೆರೆದುಕೊಳ್ಳುತ್ತಿದ್ದರೆ, ಏಕಾಏಕಿ ಗುಂಡಿನ ಮೊರೆತ. ಕಂಡಕಂಡ ಮನೆಗಳಿಗೆ ನುಗ್ಗಿದ ಉಗ್ರರು ಅಲ್ಲಿದ್ದವರ ಮೇಲೆ ಗುಂಡು ಹಾರಿಸಲಾರಂಭಿಸಿದರು. ಕೆಲವೆಡೆ ಅಡುಗೆ ಅನಿಲ ಸ್ಫೋಟಿಸಿ ಇಡೀ ಮನೆಯನ್ನು ಸುಟ್ಟು ಹಾಕಿ ಅಲ್ಲಿರುವವರನ್ನು ಜೀವಂತ ದಹಿಸಿ ಹಾಕಿ ಬಿಟ್ಟರು.

ಗುಂಡಿ ಸದ್ದು ಕೇಳಿ ಹೊರಬಂದವರನ್ನು ಸಾಯಿಸುತ್ತಾ ಹೋದ ಉಗ್ರರು, ಮನೆಯೊಳಗೆ ಅಡಗಿ ಕುಳಿತವರನ್ನೂ ಸಾಯಿಸದೇ ಬಿಡಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಇಡೀ ಕಿಬುಟ್ಸ್‌ನಲ್ಲಿ ಹೆಣಗಳು ಚೆಪಿಲ್ಲಿಯಾಗಿ ಬಿದ್ದಿದ್ದವು. ಆ ಘಟನೆಯಲ್ಲಿ ಹಮಾಸ್ ಉಗ್ರರ ಅಟ್ಟಹಾಸಕ್ಕೆ ಸುಮಾರು 132 ಜನ ಹತರಾದರು.

ಅಂದಿನಿಂದ ಶುರುವಾಯ್ತು ಇಸ್ರೇಲ್- ಗಾಜಾ ಭೀಕರ ಯುದ್ಧ. ಈ ಘಟನೆ ನಡೆದು ಹತ್ತಿರ ಹತ್ತಿರ ಎರಡು ವರ್ಷವಾಗುತ್ತಾ ಬಂತು. ಆದರೆ ಕದನ ಮಾತ್ರ ನಿಂತಿಲ್ಲ. ಮೇಲ್ನೋಟಕ್ಕೆ ಕದನ ವಿರಾಮ ಘೋಷಣೆಯಾದರೂ. ಇಂದಿಗೂ ಎರಡೂ ಕಡೆಗಳಿಂದ ಗುಂಡಿನ ಸದ್ದು ಕೇಳಿಸದ ದಿನಗಳೇ ಇಲ್ಲ. ನಲವತ್ತು ನಾಲ್ಕು ಒತ್ತೆಯಾಳುಗಳ ಪೈಕಿ ಒಂದಿಬ್ಬರನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.

ಕೆಲವರನ್ನು ಸಾಯಿಸಿದ್ದಾರೆ. ಅಲ್ಲಿಂದ ಬಿಡುಗಡೆಯಾಗಿ ಬಂದಿರುವವರ ಪ್ರಕಾರ, ಈಗ ಹಮಾಸ್ ಉಗ್ರರ ಸೆರೆಯಲ್ಲಿರುವವರು ಕೇವಲ ಇಪ್ಪತ್ತು ಮಂದಿ ಇಸ್ರೇಲಿಗಳು. ಇವರನ್ನು ಹಮಾಸ್ ಉಗ್ರರು ‘ಮಾನವ ಕವಚ’ಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಇಸ್ರೇಲ್ ಮೇಲೆ ಒತ್ತಡ ಹೇರಲು ಒಬ್ಬೊಬ್ಬರನ್ನೇ ಸಾಯಿಸುತ್ತಿದ್ದಾರೆ. ಹಮಾಸ್ ಬಂಧನದಲ್ಲಿರುವ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಕರೆ ತರುವ ಹೊಣೆಗಾರಿಕೆ ಇಸ್ರೇಲ್ ಮೇಲಿದೆ. ಅದಕ್ಕೆ ಕಂಕಣಬದ್ಧವಾಗಿರುವ ಅಲ್ಲಿನ ಸರಕಾರದ ಮೇಲೆ ಅತೀವ ಒತ್ತಡವಿದೆ.

’ಇಂದೇ ಒತ್ತೆಯಾಳುಗಳನ್ನು ಕರೆತನ್ನಿ’ ಹೆಸರಿನಲ್ಲಿ ಎರಡು ವರ್ಷಗಳಿಂದ ಅಭಿಯಾನ ನಡೆಯು ತ್ತಿದೆ. ಈ ಭೀಕರ ಯುದ್ಧದಲ್ಲಿ ಇಸ್ರೇಲ್ ಸುಮಾರು ಐದು ಸಾವಿರ ಮಂದಿಯನ್ನು ಕಳೆದುಕೊಂಡರೆ, ಇಸ್ರೇಲ್ ದಾಳಿಯಿಂದ ಗಾಜಾದಲ್ಲಿರುವ ಸುಮಾರು ಲಕ್ಷಕ್ಕೂ ಅಧಿಕ (ಇಸ್ರೇಲ್ ಸರಕಾರ, ಅರವತ್ತೈ ದು ಸಾವಿರ ಮಂದಿ ಸತ್ತಿದ್ದಾರೆ ಎಂದು ಲೆಕ್ಕ ಕೊಡುತ್ತಿದೆ) ಪ್ಯಾಲಸ್ತೀನಿಯರು ಸತ್ತಿರಬಹುದು ಎಂದು ಅಂದಾಜು ಮಾಡಲಾಗಿದೆ.

ಈ ವಿಷಯದಲ್ಲಿ ಇಸ್ರೇಲ್ ಅತ್ಯಂತ ನಿರ್ದಯವಾಗಿ, ಆದರೆ ಅತ್ಯಂತ ಕಠಿಣವಾಗಿ ವರ್ತಿಸುತ್ತಿರು ವುದು ನಿಜ. ಈಗಾಗಲೇ ಗಾಜಾವನ್ನು ಇಸ್ರೇಲ್ ಎರಡು ಭಾಗಗಳಾಗಿ ಚೂರು ಮಾಡಿದೆ. ವೈರಿಗಳಿಂದ ಸುರಂಗ ಮಾರ್ಗದ ಮೂಲಕ ಸರಬರಾಜಾಗುತ್ತಿದ್ದ ಶಸ್ತ್ರಾಸ್ತ್ರ, ಗುಂಡುಗಳು, ರಾಕೆಟ್‌ ಗಳು, ವಿಸ್ಫೋಟಕಗಳು, ಆಹಾರ, ಇಂಧನ ಮತ್ತು ಇತರ ಸಾಮಗ್ರಿಗಳ ಪೂರೈಕೆಯನ್ನು ಸಂಪೂರ್ಣ ಬಂದ್ ಮಾಡಿ ಬಿಟ್ಟಿದೆ.

ಇಸ್ರೇಲಿ ಸೈನಿಕರು ಸುರಂಗದ ಬಾಯಿಗೆ ಗೋಡೆ ಕಟ್ಟಿ ಬಿಟ್ಟಿದ್ದಾರೆ. ಈ ಸುರಂಗಗಳು ಸುಮಾರು ನೂರಾರು ಕಿಮೀ ಇಳಿಜಾರು ಸುರಂಗಗಳ ಜಾಲವಾಗಿದ್ದು, ಹಮಾಸ್‌ಗೆ ದಾಳಿ ನಡೆಸಲು, ಇಸ್ರೇಲ ನ್ನು ದುರ್ಬಲಗೊಳಿಸಲು ಮತ್ತು ಗುಪ್ತವಾಗಿ ಸರಬರಾಜು ಮಾಡಲು ಸಹಾಯ ಮಾಡುತ್ತಿತ್ತು. 2023ರ ಅಕ್ಟೋಬರ್ 7ರ ದಾಳಿಯ ನಂತರ, ಇಸ್ರೇಲ್ ಈ ಸುರಂಗಗಳನ್ನು ನಾಶಪಡಿಸುವ ಉದ್ದೇಶ ದಿಂದ ಭಾರೀ ಕಾರ್ಯಾಚರಣೆಗಳನ್ನು ಆರಂಭಿಸಿತು.

ಇಸ್ರೇಲಿ ಸೇನೆ ಅಲ್ಲಿ 20ಕ್ಕೂ ಹೆಚ್ಚು ಸುರಂಗಗಳನ್ನು ಕಂಡುಹಿಡಿದು ನಾಶಪಡಿಸಿತು. ಇದರಿಂದ ಹಮಾಸ್‌ಗೆ ಶಸಾಸ ಮತ್ತು ಆಹಾರದ ಪೂರೈಕೆ ಹೆಚ್ಚು ಕಡಿಮೆ ಸ್ಥಗಿತವಾಗಿದೆ. ಇದು ಹಮಾಸ್‌ನ ಸೈನ್ಯ ಸಾಮರ್ಥ್ಯವನ್ನು ದುರ್ಬಲಗೊಳಿಸಿದೆ ಮತ್ತು ನಾಗರಿಕರ ಮೇಲೂ ಪರಿಣಾಮ ಬೀರಿದೆ.

2017 ರಿಂದ ಇಸ್ರೇಲ್, ಗಾಜಾ ಗಡಿಯಲ್ಲಿ 65 ಕಿಮೀ ಉದ್ದದ ಭೂಗತ ಗೋಡೆ ಕಟ್ಟಿದೆ. ಇದು ಹತ್ತು ಮೀಟರ್ ಆಳಕ್ಕೆ ಸುರಂಗಗಳನ್ನು ತಡೆಯಲು ಕಾಂಕ್ರೀಟ್ ಗೋಡೆಗಳು, ಸೆನ್ಸಾರ್‌ಗಳು ಮತ್ತು ಅಲಾರಂಗಳೊಂದಿಗೆ ನಿರ್ಮಿತವಾಗಿದೆ. ಇದು ಹಮಾಸ್ ಸುರಂಗಗಳನ್ನು ತಡೆಯಲು ಸಹಾಯ ಮಾಡಿದೆ.

2025ರಲ್ಲಿ, ಗಾಜಾ ನಗರದ ಉತ್ತರ ಭಾಗದಲ್ಲಿ ಆರು ಕಿಮೀ ಉದ್ದದ ಹಮಾಸ್ ಸುರಂಗ ಜಾಲವನ್ನು ಇಪ್ಪತ್ತು ಸಾವಿರ ಕ್ಯೂಬಿಕ್ ಮೀಟರ್ ಸೀಲಿಂಗ್ ಮೆಟೀರಿಯಲ್ (concrete slurry) ಪಂಪ್ ಮಾಡಿ ಸೀಲ್ ಮಾಡಿದೆ. ಇದರಿಂದ ಇಸ್ರೇಲ್ ಗಾಜಾವನ್ನು ಎಡೆಯಿಂದ ಸುತ್ತುವರಿದು ಹಮಾಸ್ ಉಗ್ರರನ್ನು ಅಕ್ಷರಶಃ ಕೈಕಟ್ಟಿ ಹಾಕಿದೆ. ಹಮಾಸ್ ಉಗ್ರರ ಸಹಾಯಕ್ಕೆ ಯೆಮನ್ ಮತ್ತು ಕತಾರ್ ಸಹಾಯವನ್ನು ಇರಾನ್ ಕ್ರೋಢೀಕರಿಸುತ್ತಿದ್ದರೂ, ಇಸ್ರೇಲ್ ಜಗ್ಗಿಲ್ಲ. ಇಷ್ಟೂ ಸಾಲದೆಂಬಂತೆ, ಇಷ್ಟು ಕಾಲ ವೈಮಾನಿಕ ದಾಳಿ ನಡೆಸುತ್ತಿದ್ದ ಇಸ್ರೇಲ್ ಈ ತಿಂಗಳಿನಿಂದ ಗಾಜಾ ನಗರದಲ್ಲಿ ಭೂ ಕಾರ್ಯಾಚರಣೆ ಆರಂಭಿಸಿದೆ.

ಇಸ್ರೇಲನ್ನು ಸರ್ವನಾಶ ಮಾಡುವುದೇ ನಮ್ಮ ಗುರಿ ಎಂದು ಬೊಬ್ಬಿರಿಯುತ್ತಿದ್ದ ಹಮಾಸ್ ಉಗ್ರರನ್ನು ಸದೆ ಬಡಿಯಲು, ಇಸ್ರೇಲ್ ನಿರಂತರವಾಗಿ ಗಾಜಾದ ಮೇಲೆ ದಾಳಿ ಮಾಡುತ್ತಲೇ ಇದೆ. ಒತ್ತೆಯಾಳಾಗಿರಿಸಿಕೊಂಡಿರುವ ತನ್ನ ನಾಗರಿಕರನ್ನು ಹಮಾಸ್ ಉಗ್ರರು ಬಿಡುಗಡೆ ಮಾಡದಿದ್ದರೂ ಇಸ್ರೇಲ್, ಗಾಜಾ ಮೇಲಿನ ದಾಳಿಯನ್ನು ಮುಂದುವರಿಸುತ್ತದೆ.

ಒಂದು ವೇಳೆ ಅವರನ್ನೆಲ್ಲ ಸಾಯಿಸಿದರಂತೂ ಗಾಜಾವನ್ನು ಉಳಿಸುವ ಪ್ರಶ್ನೆಯೇ ಇಲ್ಲ. ಈ ಮೂಡಿನಲ್ಲಿರುವ ಇಸ್ರೇಲನ್ನು ಶಾಂತಗೊಳಿಸಲು ಇಡೀ ಅಂತಾರಾಷ್ಟ್ರೀಯ ಸಮುದಾಯ ಎಷ್ಟೇ ಪ್ರಯತ್ನಿಸಿದರೂ, ಆ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇಸ್ರೇಲ್ ಇಲ್ಲ. ’ಇಸ್ರೇಲ್ ಗಾಜಾದಲ್ಲಿ ಅಮಾಯಕರ ನರಮೇಧ (ಜಿನೋಸೈಡ್) ನಡೆಸುತ್ತಿದೆ, ಸಾಕು ನಿಲ್ಲಿಸಿ’ ಎಂದು ಖುದ್ದು ವಿಶ್ವಸಂಸ್ಥೆ ಯೇ ಹೇಳಿದರೂ ಇಸ್ರೇಲ್ ಆ ಮಾತುಗಳನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಇಸ್ರೇಲ್ ದಾಳಿಯಿಂದ ಗಾಜಾ ಅಕ್ಷರಶಃ ನುಜ್ಜುಗುಜ್ಜಾಗಿರುವುದು ದಿಟ. ಗಾಜಾದಲ್ಲಿ ಜನ ಹಸಿವು, ರೋಗರುಜಿನುಗಳಿಂದ ಸಾಯುತ್ತಿದ್ದಾರೆ. ಇಸ್ರೇಲ್ ದಾಳಿಯಿಂದ ಗಾಯಗೊಂಡವರ ಆರೈಕೆಗೆ ಆಸ್ಪತ್ರೆಗಳಿಲ್ಲದಂತಾಗಿದೆ. ಕಾರಣ ಗಾಜಾದಲ್ಲಿರುವ ಬಹುತೇಕ ಆಸ್ಪತ್ರೆಗಳು ಇಸ್ರೇಲ್ ದಾಳಿಯಿಂದ ನೆಲಸಮವಾಗಿವೆ. ತನ್ನ ಮೇಲೆ ಕಾಲು ಕೆರೆದು ಯುದ್ಧ ಮಾಡುವುದಕ್ಕಿಂತ ಮುನ್ನ ಹಮಾಸ್ ಉಗ್ರರು ಇವನ್ನೆಲ್ಲ ಯೋಚಿಸಬೇಕಿತ್ತು ಎಂಬುದು ಇಸ್ರೇಲ್ ವಾದ.

ಯಾರು ತಪ್ಪು, ಯಾರು ಸರಿ ಎಂಬ ಪ್ರಶ್ನೆಗಿಂತ ಇಸ್ರೇಲಿಗೆ ತನ್ನ ಅಸ್ತಿತ್ವದ ಪ್ರಶ್ನೆಯೇ ದೊಡ್ಡದಾಗಿ ಕಾಣುತ್ತಿದೆ. ಸತ್ತ ನಂತರ ಯಾರು ಸರಿ, ಯಾರು ತಪ್ಪು ಎಂದು ನಿರ್ಧರಿಸಿ ಏನು ಪ್ರಯೋಜನ ಎಂಬುದು ಇಸ್ರೇಲ್ ನಿಲುವು. ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ಹೊರಗಿನ ಯಾರೇ ಬುದ್ಧಿ ಹೇಳಿದರೂ ಇಸ್ರೇಲಿಗೆ ಕೇಳುವ ಅಭ್ಯಾಸ ಇಲ್ಲವೇ ಇಲ್ಲ. ಭಾರತ ಸೇರಿದಂತೆ ಯುರೋಪಿನ ಬಹುತೇಕ ದೇಶಗಳು ಕದನ ನಿಲ್ಲಿಸಿ ಎಂದು ವರಾತ ಮಾಡುತ್ತಿದ್ದರೂ, ಜಗತ್ತಿನಾದ್ಯಂತ ಪ್ಯಾಲಸ್ತೀನಿ ಯರ ಪರ ಘೋಷಣೆಗಳು ಮುಗಿಲು ಮುಟ್ಟಿದ್ದರೂ, ಒಂದು ಸಂದರ್ಭದಲ್ಲಿ ಅಮೆರಿಕ ಸಹ ಇಸ್ರೇಲಿಗೆ ಎಚ್ಚರಿಕೆ ನೀಡಿದರೂ, ಇಸ್ರೇಲ್ ಡೋಂಟ್ ಕೇರ್.

We Jews have a secret weapon in our struggle with the Arabs, because we have no place to go ಎಂದು ಐವತ್ತೈದು ವರ್ಷಗಳ ಹಿಂದೆ ಇಸ್ರೇಲಿನ ಪ್ರಧಾನಿ ಗೋಲ್ಡಾ ಮೀರ್ ಹೇಳಿದ ಮಾತು ಇಂದಿಗೂ ಇಡೀ ದೇಶದಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಹೀಗಾಗಿ ಸರಿ-ತಪ್ಪು, ಪಾಪ-ಪುಣ್ಯದ ಪ್ರವಚನ ಗಳನ್ನು ಇಸ್ರೇಲ್ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ.

ಈ ಎಲ್ಲ ವಿಷಯಗಳನ್ನು ನನ್ನ ಜತೆಗಿದ್ದ ಇಸ್ರೇಲಿ ಗೈಡ್ ನೊಂದಿಗೆ ಚರ್ಚಿಸುವಾಗ, ಅಂತಿಮವಾಗಿ ಆತ ಒಂದು ಮಾತು ಹೇಳಿದ. ಅದು ಇಡೀ ಎರಡು ವರ್ಷಗಳ ಘಟನಾವಳಿ ಮತ್ತು ಇಸ್ರೇಲ್ ನೀಡಿದ ಉತ್ತರಕ್ಕೆ ಒಟ್ಟಾರೆ ಭಾಷ್ಯ ಬರೆದಂತಿತ್ತು - We are like teabags and somebody or the others are always pouring hot water on us and sipping tea. We are no longer to be teabags . ಇಸ್ರೇಲನ್ನು ಕೆಣಕಿ ಬಚಾವ್ ಆದವರು ಯಾರಿದ್ದಾರೆ?!

ವಿಶ್ವೇಶ್ವರ ಭಟ್‌

View all posts by this author