Lokesh Kaayarga Column: ನಮ್ಮ ನದಿಗಳ ಪಾವಿತ್ರ್ಯವನ್ನು ಉಳಿಸುವವರಾರು ?
ಗಂಗೆಯಲ್ಲಿ ಮಿಂದರೆ ಸಮಸ್ತ ಪಾಪಗಳೂ ಪರಿಹಾರವಾಗುತ್ತವೆ. ಮೋಕ್ಷ ಸಿಗುತ್ತದೆ ಎನ್ನುವುದು ಭಾರತೀ ಯರ ನಂಬಿಕೆ. ಈ ನಂಬಿಕೆಯಿಂದಲೇ ಉತ್ತರಪ್ರದೇಶದ ಪ್ರಯಾಗದ ಕುಂಭಮೇಳದಲ್ಲಿ ಕೋಟ್ಯಂತರ ಜನರು ಭಾಗವಹಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. 144 ವರ್ಷಗಳ ಬಳಿಕ ಬಂದಿರುವ ಮಹಾಕುಂಭ ಮೇಳ ಎನ್ನುವ ಕಾರಣಕ್ಕಾಗಿಯೂ ಬಂದವರಿದ್ದಾರೆ
ಲೋಕಮತ
ಲೋಕೇಶ್ ಕಾಯರ್ಗ
kaayarga@gmail.com
ನಮ್ಮ ನಗರಗಳ ಬಹುತೇಕ ಯುಜಿಡಿ ಪೈಪ್‌ಗಳು ಅಂತಿಮವಾಗಿ ಸೇರುವುದು ನದಿ ಮೂಲ ಗಳನ್ನೇ. ನಮ್ಮ ಕೈಗಾರಿಕೆಗಳ ತ್ಯಾಜ್ಯಗಳು, ರೈತರ ಕಾಫಿ ಪಲ್ಪಿಂಗ್ ಕೊಳಚೆ ನೀರು, ಶುಂಠಿ ತೊಳೆದ ರಾಸಾಯನಿಕ ಮಿಶ್ರಿತ ನೀರು, ನೂರಾರು ಮಾಂಸದಂಗಡಿಗಳ ತ್ಯಾಜ್ಯಗಳು ನದಿ ಯೊಡಲಿನಲ್ಲೇ ಮೋಕ್ಷ ಕಾಣುತ್ತವೆ.
ಗಂಗೆಯಲ್ಲಿ ಮಿಂದರೆ ಸಮಸ್ತ ಪಾಪಗಳೂ ಪರಿಹಾರವಾಗುತ್ತವೆ. ಮೋಕ್ಷ ಸಿಗುತ್ತದೆ ಎನ್ನುವುದು ಭಾರತೀಯರ ನಂಬಿಕೆ. ಈ ನಂಬಿಕೆಯಿಂದಲೇ ಉತ್ತರಪ್ರದೇಶದ ಪ್ರಯಾಗದ ಕುಂಭಮೇಳದಲ್ಲಿ ಕೋಟ್ಯಂತರ ಜನರು ಭಾಗವಹಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. 144 ವರ್ಷಗಳ ಬಳಿಕ ಬಂದಿರುವ ಮಹಾಕುಂಭ ಮೇಳ ಎನ್ನುವ ಕಾರಣಕ್ಕಾಗಿಯೂ ಬಂದವರಿದ್ದಾರೆ.
ಇದನ್ನೂ ಓದಿ: Lokesh Kayarga Column: ನರ ಕೊಲ್ಲಲ್, ಪರ ಕಾಯ್ವನೇ ?
ಹತ್ತಾರು ಕೋಟಿ ಜನ ಸೇರುವ ಪ್ರಯಾಗದ ಸಂಗಮ ಹೇಗಿರಬಹುದೆಂಬ ಕುತೂಹಲದಿಂದ ಬಂದ ವರೂ ಸಾಕಷ್ಟು ಸಂಖ್ಯೆಯಲ್ಲಿರಬಹುದು. ಕಾಲ್ತುಳಿತ ಘಟನೆಯಲ್ಲಿ ಹಲವರು ಮೃತಪಟ್ಟ ಘಟ ನೆಯ ಬಳಿಕವೂ ಪ್ರಯಾಗಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ 30 ಕೋಟಿಗಿಂತಲೂ ಹೆಚ್ಚು ಮಂದಿ ಜಳಕ ಮಾಡಿದ ಗಂಗೆಯ ಒಡಲು ಅದೆಷ್ಟು ಮಲಿನಗೊಂಡಿರಬಹುದು ?ಇಂತಹ ಪ್ರಶ್ನೆ ಭಕ್ತರ ಮನಸ್ಸನ್ನು ಘಾಸಿಗೊಳಿಸಬಹುದು.
ಏಕೆಂದರೆ ಇದು ನಂಬಿಕೆಯ ಪ್ರಶ್ನೆ. ಕಾಶಿಯಲ್ಲಿ ಪವಿತ್ರ ಸ್ನಾನ ಮಾಡುವಾಗ ಪಕ್ಕದಲ್ಲೇ ಹೆಣಗಳು ತೇಲಿ, ಅರೆಬೆಂದ ಶವಗಳ ಮೂಳೆಗಳು ತೇಲಿ ಹೋದರೂ ಭಕ್ತರು ಇದನ್ನು ಲೆಕ್ಕಿಸುವುದಿಲ್ಲ. ನಂಬಿಕೆ ಯ ಮುಂದೆ ಉಳಿದುದೆಲ್ಲವೂ ಗೌಣ. ಭಕ್ತರ ಪಾಲಿಗೆ ಗಂಗೆ, ತುಂಗೆ, ಯಮುನೆ, ಕಾವೇರಿ ಯರೆಲ್ಲರೂ ಪವಿತ್ರೆ ಪಾವನೆಯರು, ಮೋಕ್ಷದಾಯಿಯರು. ಆದರೆ ನಮ್ಮ ದೇಶದ ನಾನಾ ನದಿಗಳ ನೀರಿನ ಗುಣಮಟ್ಟವನ್ನು ಅಧ್ಯಯನ ನಡೆಸಿದ ವಿಜ್ಞಾನಿಗಳ ಪ್ರಕಾರ ಕರ್ನಾಟಕದ 17 ನದಿಗಳೂ ಸೇರಿ ದಂತೆ ದೇಶದ 311 ನದಿಗಳ ನೀರು ಕುಡಿಯಲು ಬಿಡಿ, ಸ್ನಾನಕ್ಕೂ ಯೋಗ್ಯವಾಗಿಲ್ಲ.
ಗಂಗಾ ಸ್ನಾನದ ಬಗ್ಗೆ ಅಪಾರ ನಂಬಿಕೆ, ಭಕ್ತಿ ಇಟ್ಟುಕೊಂಡು ಬಂದಿದ್ದ ಆಪಲ್ ಕಂಪನಿ ಸಂಸ್ಥಾಪಕ ದಿವಂಗತ ಸ್ಟೀವ್ಸ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಒಂದು ಬಾರಿ ಮುಳುಗು ಹಾಕಿ ಮರು ದಿನವೇ ಮುಖ, ಮೂತಿ ಊದಿಸಿಕೊಂಡು ಭೂತಾನ್‌ಗೆ ಹಾರಿದ್ದು ಸುದ್ದಿಯಾಗಿತ್ತು. ಇದೇ ರೀತಿ ಗಂಗೆಯಲ್ಲಿ ಮಿಂದ ಬಳಿಕ ಮೈಯಲ್ಲಿ ತುರಿಕೆ ಎದ್ದು ವೈದ್ಯರನ್ನು ಕಂಡವರ ಸಂಖ್ಯೆ ಕಡಿಮೆ ಏನಿಲ್ಲ.
ಇದರಲ್ಲಿ ಗಂಗೆಯದ್ದೇನೂ ತಪ್ಪಿಲ್ಲ. ನಾವು ನಿತ್ಯವೂ ಸ್ಮರಿಸುವ ಸಪ್ತ ನದಿಗಳೂ ಸೇರಿದಂತೆ ಎಲ್ಲ ಪವಿತ್ರ ನದಿಗಳನ್ನೂ ಅಪವಿತ್ರಗೊಳಿಸಿ, ಮಲಿನಗೊಳಿಸಿದವರು ನಾವೇ. ನೆಲ, ಗಾಳಿ, ಆಕಾಶ ಸೇರಿ ದಂತೆ ಪಂಚಭೂತಗಳನ್ನೂ ಕಲುಷಿತಗೊಳಿಸಿದ ಅಪಕೀರ್ತಿ ನಮಗೇ ಸಲ್ಲುತ್ತದೆ.
ಎಲ್ಲವೂ ನದಿಯಲ್ಲೇ ವಿಸರ್ಜನೆ
ಪವಿತ್ರ ಸ್ನಾನದಲ್ಲೂ ಶಾಂಪೂ, ಸೋಪುಗಳಿಲ್ಲದಿದ್ದರೆ ನಮ್ಮ ಸ್ನಾನ ಪೂರ್ಣಗೊಳ್ಳುವುದಿಲ್ಲ. ಸ್ನಾನದ ಬಳಿಕ ಒದ್ದೆ ಬಟ್ಟೆಯನ್ನು ನದಿಯಲ್ಲಿ ತೇಲಿ ಬಿಡದಿದ್ದರೆ ಮಾಡಿದ ಪಾಪಗಳು ತೊಲಗುವು ದಿಲ್ಲ. ಮನೆಯಲ್ಲಿ ಪ್ರೇಮ್ ಕಳಚಿದ, ಗ್ಲಾಸ್ ಒಡೆದ ದೇವರ ಫೋಟೋಗಳಿದ್ದರೆ, ರಕ್ಷೆಯ ಹೆಸರಿನಲ್ಲಿ ತಂದ ತೆಂಗಿನ ಕಾಯಿಗಳಿದ್ದರೆ, ಅರಿಶಿನ- ಕುಂಕುಮ ಗಳಿದ್ದರೆ ಇವೆಲ್ಲವನ್ನೂ ನದಿ ಒಡಲಿಗೆ ಸೇರಿಸಿ ದಾಗಲೇ ನಮಗೆ ಸಮಾಧಾನ.
ಇವು ಭಕ್ತಿಯ ಹೆಸರಿನಲ್ಲಿ ನಡೆಯುವ ಅಧ್ವಾನಗಳಾದರೆ ನಮ್ಮ ನಗರಗಳ ಬಹುತೇಕ ಯುಜಿಡಿ ಪೈಪ್‌ಗಳು ಅಂತಿಮವಾಗಿ ಸೇರುವುದು ನದಿ ಮೂಲಗಳನ್ನೇ. ನಮ್ಮ ಕೈಗಾರಿಕೆಗಳ ತ್ಯಾಜ್ಯಗಳು, ರೈತರ ಕಾಫಿ ಪಲ್ಪಿಂಗ್ ಕೊಳಚೆ ನೀರು, ಶುಂಠಿ ತೊಳೆದ ರಾಸಾಯನಿಕ ಮಿಶ್ರಿತ ನೀರು, ನೂರಾರು ಮಾಂಸದಂಗಡಿಗಳ ತ್ಯಾಜ್ಯಗಳು ನದಿಯೊಡಲಿ ನಲ್ಲೇ ಮೋಕ್ಷ ಕಾಣುತ್ತವೆ.
ನಮ್ಮ ಹಿರಿಯರ ಪಾಲಿಗೆ ಪ್ರತಿಯೊಂದು ಜಲಮೂಲವೂ ಪವಿತ್ರವೇ ಆಗಿತ್ತು. ಪವಿತ್ರ ಸ್ನಾನಕ್ಕೆಂದು ಅವರು ದೂರದ ಪ್ರಯಾಗಕ್ಕೆ, ಕಾಶಿಗೆ ಹೋಗುವ ಅವಶ್ಯಕತೆ ಇರಲಿಲ್ಲ. ಜಲಮೂಲದ ನಂಟಿಲ್ಲದೆ ಅವರು ಯಾವ ದೇಗುಲಗಳನ್ನೂ ನಿರ್ಮಿಸಿದವರಲ್ಲ. ಎರಡು ಶತಮಾನಗಳಿಗಿಂತ ಹಳೆಯದಾದ ಯಾವುದೇ ದೇಗುಲವನ್ನು ತೆಗೆದುಕೊಂಡರೂ ಇವುಗಳು ನದಿ, ಹೊಳೆ, ಕೆರೆ, ಸರೋವರಗಳ ಸಮೀ ಪವೇ ನಿರ್ಮಾಣವಾಗಿದೆ.
ಇದಾವುದೂ ಇಲ್ಲದೇ ಹೋದರೆ ದೇಗುಲದೊಳಗೊಂದು ಬಾವಿಯಾದರೂ ಇರಲೇಬೇಕು. ಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ ಎಲ್ಲ ದೇಗುಲಗಳಿಗೆ, ಜೈನರ ಬಸದಿಗಳಿಗೆ ಈ ನಿಯಮ ಅನ್ವಯ ವಾಗುತ್ತಿತ್ತು. ಪವಿತ್ರ ಸ್ನಾನ ಮಾಡಬೇಕೆನ್ನುವವರು ದೇಗುಲಗಳ ಬಳಿ ಇರುವ ಈ ನದಿಗಳಲ್ಲಿ, ಕೆರೆಗ ಳಲ್ಲಿ ಮುಳುಗು ಹಾಕಿ ಮೈಯ ಕೊಳೆಯ ಜತೆ ಮನಸ್ಸಿನ ಕೊಳೆಯನ್ನೂ ಕಳೆದು ಕೊಂಡು ನಿರಾಳ ರಾಗುತ್ತಿದ್ದರು. ಇದೂ ಇಲ್ಲದೇ ಹೋದರೆ ದೇಗುಲದ ಬಾವಿಯಿಂದ ಎತ್ತಿದ ನೀರನ್ನು ಪಡೆದು ಕಲಶ ಸ್ನಾನದ ಹೆಸರಿನಲ್ಲಿ ಮಿಂದು ಪುನೀತರಾಗುತ್ತಿದ್ದರು.
ಹಾಗೆಯೇ ಇಂದಿನ ಪರಿಸ್ಥಿತಿಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಗಂಗೆಯಲ್ಲಿ ಮಿಂದಂತೆ ದೇಗುಲಗಳನ್ನು ಬಳಸಿ ಸಾಗುವ ನಮ್ಮ ಎಷ್ಟು ನದಿಗಳಲ್ಲಿ ಮುಳುಗು ಹಾಕಲು ಸಾಧ್ಯವಿದೆ ನೀವೇ ಯೋಚಿಸಿ. ದೇಗುಲದ ಮುಂದಿನ ಕೆರೆಗಳ ಚಿತ್ರಣವನ್ನು ಕಣ್ಮುಂದೆ ತಂದುಕೊಳ್ಳಿ. ದೇಗುಲದೊಳಗಿನ ಬಾವಿಗಳು ಬತ್ತಿ ಹೋಗಿ ಬೋರ್‌ವೆಲ್ ನೀರಿನಲ್ಲಿ ಪ್ರತಿದಿನ ಅಭಿಷೇಕಗೊಳ್ಳುತ್ತಿರುವ ಊರ ದೇವರುಗಳನ್ನು ನೆನಪಿಸಿಕೊಳ್ಳಿ.
ಇಲ್ಲಿರುವ ನದಿಗಳಲ್ಲಿ, ಕೆರೆಗಳಲ್ಲಿ ನೀರಿದ್ದರೂ ಮುಳುಗುಹಾಕಲು ನಾವೇ ಹಿಂದೇಟು ಹಾಕುತ್ತೇವೆ. ನಾವು ಅತ್ಯಂತ ಪವಿತ್ರ ಎಂದು ಪರಿಗಣಿಸಿದ ತ್ರಿವೇಣಿ ಸಂಗಮದ ಸ್ಥಳಗಳಲ್ಲಿ ಜಳಕ ಬಿಡಿ, ತಲೆ ಮೇಲೆ ನೀರನ್ನೂ ಪ್ರೋಕ್ಷಣೆ ಮಾಡಿಕೊಳ್ಳಲೂ ಮನಸ್ಸಾಗುವುದಿಲ್ಲ. ಈ ನದಿಗಳ ಸ್ನಾನಘಟ್ಟದ ಬಳಿ ಸಾಗಿದಾಗ ಭಕ್ತಿಯ ಹೆಸರಿನಲ್ಲಿ ಎಸಗುತ್ತಿರುವ ಅನರ್ಥಗಳನ್ನು ಕಣ್ಣಾರೆ ಕಾಣಬಹುದು.
ಕಾವೇರಿ, ತುಂಗೆಯರೂ ಕಲುಷಿತ ಗಂಗೆಯ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶ ಸರಕಾರ ಕಳೆದ ಎರಡು ದಶಕಗಳಲ್ಲಿ ನೂರಾರು ಕೋಟಿ ರು. ವ್ಯಯಿಸಿವೆ. ಗಂಗಾ ತಟದ ನೂರಾರು ಕೈಗಾರಿಕೆಗಳಿಗೆ ಬೀಗ ಜಡಿಯಲಾಗಿದೆ. ಆದರೆ ಗಂಗಾಶುದ್ಧಿ ಯೋಜನೆಯ ಸಂಕಲ್ಪ ಇನ್ನೂ ಪೂರ್ತಿಯಾಗಿ ಈಡೇರಿಲ್ಲ. ನಮ್ಮ ರಾಜ್ಯದ ಪವಿತ್ರ ನದಿಗಳೂ ಈಗ ಗಂಗೆಗಿಂತಲೂ ಹೆಚ್ಚಿನ ಮಾಲಿನ್ಯ ಸಮಸ್ಯೆ ಎದುರಿಸುತ್ತಿವೆ.
ಮುಂದಿನ ದಿನಗಳಲ್ಲಿ ಇದು ಅಂತಾರಾಜ್ಯ ಸಮಸ್ಯೆಯಾಗಿಯೂ ಕಾಡಬಹುದು. ಕರ್ನಾಟಕದಲ್ಲಿ ಕಾವೇರಿ ನೀರು ಕಲುಷಿತವಾಗುತ್ತಿದೆ. ಇದರಿಂದ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯ ವಾಗುತ್ತಿಲ್ಲ ಎಂದು ದೂರಿ ತಮಿಳುನಾಡು ಸರಕಾರ ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿ ದೆ. ನೀರಿನ ತಕರಾರಿನ ಜತೆ ಈ ವ್ಯಾಜ್ಯದ ಹೆಸರಿನಲ್ಲೂ ಕರ್ನಾಟಕ ದುಡ್ಡು ಪೋಲು ಮಾಡಬೇಕಿದೆ.
ತಮಿಳುನಾಡಿನ ಆಕ್ಷೇಪ ಏನೇ ಇರಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮೂರು ವರ್ಷಗಳ ಹಿಂದೆ ನೀಡಿರುವ ವರದಿ ಪ್ರಕಾರ ಕಾವೇರಿ, ಕಪಿಲೆ ಸೇರಿದಂತೆ ರಾಜ್ಯದ 17 ಪ್ರಮುಖ ನದಿಗಳ ನೀರು ಕಲುಷಿತಗೊಂಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಾಂತ್ರಿಕ ತಜ್ಞರ ಸಮಿತಿ ಈ ಸಂಬಂಧ ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿಸಿದೆ. ಕೆಲ ತಿಂಗಳ ಹಿಂದಷ್ಟೇ ರಾಜ್ಯ ಸರಕಾರ ನದಿ ಮಾಲಿನ್ಯದ ಕಾರಣಗಳನ್ನು ತಿಳಿಯಲು ಮತ್ತೊಂದು ಸಮಿತಿಯನ್ನು ನೇಮಿಸಿದೆ.
ಆದರೆ ಪರಿಹಾರದ ಕ್ರಮಗಳು ಇನ್ನೂ ಜಾರಿಯಾಗಿಲ್ಲ. ಕಲುಷಿತ ನದಿಗಳು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಪ್ರತಿ ಲೀಟರ್ ಶುದ್ಧ ನೀರಿನಲ್ಲಿ 1 ಎಂಜಿ ಬಯೋ ಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಇರಬೇಕು. ಆದರೆ ಕಾವೇರಿ ನದಿ ನೀರಿನಲ್ಲಿ 6 ಬಿಒಡಿ ಪ್ರಮಾಣವಿದ್ದರೆ, ಕಪಿಲಾ ನೀರಿನಲ್ಲಿ ಇದು 3.8 ಇದೆ. ಕಾಫಿ ಪಲ್ ನೀರಿನಿಂದ ಕಲುಷಿತಗೊಳ್ಳುತ್ತಿ ರುವ ಕಾವೇರಿ ಉಪನದಿ ಲಕ್ಷ್ಮಣ ತೀರ್ಥದಲ್ಲಿ 5.6ರಷ್ಟು ಬಿಒಡಿ ಪ್ರಮಾಣವಿದೆ.
ಬೆಂಗಳೂರಿನ ನಂದಿ ಬೆಟ್ಟದಲ್ಲಿ ಹುಟ್ಟುವ ಪಿನಾಕಿನಿ ನದಿ ನೀರಿನಲ್ಲಿ 111, ಅಘನಾಶಿನಿಯಲ್ಲಿ 3.3, ಅರ್ಕಾವತಿಯಲ್ಲಿ 39, ಭದ್ರಾದಲ್ಲಿ 7, ಭೀಮಾದಲ್ಲಿ 4, ಗಂಗಾವಳಿಯಲ್ಲಿ 3.8, ಕಾಗಿಣದಲ್ಲಿ 3.1, ಕೃಷ್ಣಾದಲ್ಲಿ 4.7, ನೇತ್ರಾವತಿಯಲ್ಲಿ 6, ಶರಾವತಿಯಲ್ಲಿ 3.3, ಶಿಂಶಾದಲ್ಲಿ 9.5, ತುಂಗಾದಲ್ಲಿ 6.2 ರಷ್ಟು ಬಿಒಡಿಗಳಷ್ಟಿದೆ.
ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಮೈಸೂರು, ಶ್ರೀರಂಗಪಟ್ಟಣ, ತಿ.ನರಸೀಪುರ, ಕೊಳ್ಳೆಗಾಲ ಮಾರ್ಗದಲ್ಲಿ ಹರಿಯುವಾಗ ಕಲುಷಿತಗೊಳ್ಳುತ್ತಿದೆ. ಅದರಲ್ಲೂ ಮೈಸೂರು ನಗರದ ಒಳ ಚರಂಡಿ ನೀರು ನೇರವಾಗಿ ಕಾವೇರಿ ನದಿ ಸೇರುತ್ತಿದೆ ಎಂಬ ದೂರುಗಳಿವೆ. ನಂಜನಗೂಡಿನಲ್ಲಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಹಾಗೂ ಪಟ್ಟಣದ ಒಳ ಚರಂಡಿ ನೀರು ಕೂಡ ಕಪಿಲೆಯ ಒಡಲು ಸೇರುತ್ತಿದೆ.
ಹಿಂದೆ ತಲಕಾಡಿಗೆ ಪ್ರವಾಸ ಬಂದವರು ಇಲ್ಲಿನ ಸಹಜ ಈಜು ಕೊಳದಂತಿರುವ ನದಿಯಲ್ಲಿ ಮಿಂದು ಖುಷಿ ಪಡುತ್ತಿದ್ದರು. ಈಗ ನದಿಗಿಳಿದರೆ ತುರಿಕೆ ಗ್ಯಾರಂಟಿ ಎನ್ನುವಂತಾಗಿದೆ. ಕುಂಭಮೇಳ ಸ್ವಚ್ಛತೆಗೆ ದಾರಿ ತೋರಲಿ ಪ್ರಯಾಗದ ಪವಿತ್ರ ಸ್ನಾನದ ನಡುವೆಯೇ ನಮ್ಮ ತಿ.ನರಸೀಪುರದ ಸಂಗಮ ಸ್ಥಳದಲ್ಲಿ ಮತ್ತೊಮ್ಮೆ ಕುಂಭ ಮೇಳ ನಡೆಸಲು ಸರಕಾರ ಸಜ್ಜಾಗಿದೆ.
ಕಾವೇರಿ, ಕಬಿನಿ ಮತ್ತು ಸ್ಪಟಿಕ ಸರೋವರದ ಸಂಗಮ ಸ್ಥಾನವಾದ ಮೈಸೂರು ಜಿಲ್ಲೆಯ ತಿರುಮ ಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಆರು ವರ್ಷಗಳ ಬಳಿಕ ಮೂರು ದಿನಗಳ ಕುಂಭ ಮೇಳ ಆಯೋಜಿಸಲಾಗಿದೆ. 2025ರ ಫೆಬ್ರವರಿ 10, 11 ಮತ್ತು 12ರಂದು ಒಟ್ಟು ಮೂರು ದಿನಗಳ ಕಾಲ ಕುಂಭಮೇಳ ಆಯೋಜನೆಗೊಂಡಿದೆ.
ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಕಳೆದ ವರ್ಷ ಸಭೆ ಸೇರಿ ಈ ಕುಂಭ ಮೇಳದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು. 1989ರಲ್ಲಿ ಇಲ್ಲಿ ಮೊದಲ ಬಾರಿಗೆ ನಡೆದ ಕುಂಭ ಮೇಳದ ನಂತರ 12ನೇ ಕುಂಭಮೇಳಕ್ಕೆ ತ್ರಿವೇಣಿ ಸಂಗಮ ಸಜ್ಜಾಗಿದೆ.
ಉತ್ತರದ ರಾಜ್ಯಗಳಲ್ಲಿ ನಡೆಯವ ಕುಂಭ ಮೇಳದಲ್ಲಿ ಭಾಗವಹಿಸಲಾಗದ ಭಕ್ತರಿಗೆ ಇಲ್ಲಿನ ತ್ರಿವೇಣಿ ಸಂಗಮ ಸ್ನಾನ ಸಮಾಧಾನ ತರಬಹುದು. ಪವಿತ್ರ ಕ್ಷೇತ್ರಗಳಿಗೆ ನಂಟು ಬೆಸೆದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸರಕಾರದ ಯೋಜನೆಗೂ ಈ ಕುಂಭಮೇಳ ಪೂರಕವಾಗಬಹುದು. ಆದರೆ ಇಲ್ಲಿನ ಗುಂಜಾಂ ನರಸಿಂಹ ಸ್ವಾಮಿ ದೇಗುಲ ಎದುರು ಹಸಿರು ಬಣ್ಣಕ್ಕೆ ತಿರುಗಿದ ಕಪಿಲೆಯನ್ನು ಕಂಡವರು, ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇಗುಲ ಎದುರಿನ ಸ್ನಾನ ಘಟ್ಟವನ್ನು ಕಂಡವರು,
ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ‘ಭಕ್ತಿ ಪರವಶ’ರಾಗಿರಲೇ ಬೇಕು. ಶ್ರೀ ರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಬೇಕಾದರೂ ಭಕ್ತಿಯಿಂದ ‘ಕಣ್ಮುಚ್ಚಿಕೊಂಡೇ’ ನೀರಿ ಗಿಳಿಯಬೇಕು. ಕುಂಭಮೇಳ, ಕಾವೇರಿ ಆರತಿ, ತುಂಗಾರತಿ, ಬಾಗಿನ ಅರ್ಪಣೆಗೆ ಆಸಕ್ತಿ ತೋರಿಸುವ ಸರಕಾರ ಮತ್ತು ಜನಪ್ರತಿನಿಧಿಗಳು ಮೊದಲು ಈ ನದಿ ಮತ್ತು ಕೆರೆಗಳ ಸಂರಕ್ಷಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ನದಿ ಮೂಲಗಳನ್ನು ಕಲುಷಿತಗೊಳಿಸುವವರು ಯಾರೇ ಆಗಲಿ ಕಠಿಣ ಕ್ರಮ ಕೈಗೊಳ್ಳಬೇಕು. ನದಿ ಸ್ನಾನದಿಂದ ಪಾಪ ಕಳೆಯುವ ಮೊದಲು ನಮ್ಮ ಪಾಪ ಕೃತ್ಯಗಳನ್ನು ಕಳೆದು ಕೊಳ್ಳಬೇಕು.