ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ನೊಬೆಲ್‌ ಪ್ರಶಸ್ತಿ ಪುರಸ್ಕೃತರಲ್ಲಿ ಯಹೂದಿಯರದೇ ಸಿಂಹಪಾಲು, ಏಕೆ ?

ಕ್ರಿ.ಶ.1ನೇ ಶತಮಾನದಲ್ಲಿ, ಯಹೂದಿ ಧರ್ಮಗುರು ರಬ್ಬಿ ಯೆಹೋಶುವಾ ಬೆನ್ ಗಮ್ಲಾ ಪ್ರತಿ ಪಟ್ಟಣ ದಲ್ಲಿ ಶಾಲೆಗಳನ್ನು ಸ್ಥಾಪಿಸಿ, 6 ಅಥವಾ 7 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದ. ಈ ಸಂಪ್ರದಾಯವು ಸಾವಿರಾರು ವರ್ಷಗಳಿಂದ ಮುಂದುವರಿದು ಕೊಂಡು ಬಂದಿದೆ. ಇದು ಯಹೂದಿಗಳನ್ನು ಅಕ್ಷರ ಜೀವಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯಾಯಿತು.

ಇದೇ ಅಂತರಂಗ ಸುದ್ದಿ

ಬುದ್ಧಿವಂತರೆಲ್ಲ ಇಸ್ರೇಲಿನಲ್ಲಿ ಸೇರಿಕೊಂಡಿದ್ದಾರಾ? ಈ ಪ್ರಶ್ನೆ ಯಾಕೆಂದರೆ, ಜನಸಂಖ್ಯೆ ಪ್ರಮಾಣಕ್ಕೆ ಹೋಲಿಸಿದರೆ, ನೊಬೆಲ್ ಪ್ರಶಸ್ತಿಗಳನ್ನು ಗೆಲ್ಲುವ ಸ್ಪರ್ಧೆ ಇಟ್ಟರೆ ಅದನ್ನು ಇಸ್ರೇಲ್‌ಗೇ ಕೊಡಬೇಕಾಗುತ್ತದೆ. ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಕೇವಲ 0.2 ಪ್ರತಿಶತದಷ್ಟಿರುವ ಯಹೂದಿ ಸಮುದಾಯವು, ಇತಿಹಾಸದಲ್ಲಿ ನೀಡಲಾದ ಒಟ್ಟು ನೊಬೆಲ್ ಪ್ರಶಸ್ತಿಗಳಲ್ಲಿ ಶೇ. 20ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು (ಸುಮಾರು ಐದನೇ ಒಂದು ಭಾಗಕ್ಕಿಂತ ಹೆಚ್ಚು) ಪಡೆದಿದೆ ಅಂದ್ರೆ ಆಶ್ಚರ್ಯವಾಗ ಬಹುದು.

ನಿಸ್ಸಂದೇಹವಾಗಿ, ಇದು ಅಸಾಮಾನ್ಯ ಸಾಧನೆಯೇ. ಯಹೂದಿಗಳ ಈ ಅಸಾಧಾರಣ ಕೊಡುಗೆ ಕೇವಲ ಆಕಸ್ಮಿಕವಾಗಿ ಬಂದದ್ದಲ್ಲ. ಇದರ ಹಿಂದೆ ಆಳವಾದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಬೌದ್ಧಿಕ ಸಂಪ್ರದಾಯಗಳ ಹಿನ್ನೆಲೆ ಇರುವುದು ನಿರ್ವಿವಾದ.

ನೊಬೆಲ್ ಪ್ರಶಸ್ತಿಗಳು ಜಾಗತಿಕವಾಗಿ ವೈಜ್ಞಾನಿಕ, ಸಾಹಿತ್ಯಿಕ ಮತ್ತು ಆರ್ಥಿಕ ಶ್ರೇಷ್ಠತೆಯ ಪರಮೋಚ್ಚ ಮಾನದಂಡವಾಗಿದೆ. ಈ ಪ್ರಶಸ್ತಿಗಳನ್ನು ಗೆದ್ದಿರುವ ಯಹೂದಿ ವಿಜ್ಞಾನಿಗಳು ಮತ್ತು ಚಿಂತಕರ ಪಟ್ಟಿ ದೊಡ್ಡದು. ಅರ್ಥಶಾಸ್ತ್ರದಲ್ಲಿ ಶೇ.40ಕ್ಕಿಂತ ಹೆಚ್ಚು ಮಂದಿ ಯಹೂದಿಯರು. ಆ ಪೈಕಿ ಪಾಲ್ ಕ್ರುಗ್ಮನ್, ಮಿಲ್ಟನ್ ಫ್ರೀಡ್ಮನ್, ಬೆನ್ ಬರ್ನಾಂಕೆ ಪ್ರಮುಖರು. ವೈದ್ಯಕೀಯ/ಶರೀರ ವಿಜ್ಞಾನದಲ್ಲಿ ಸುಮಾರು ಶೇ.26ಕ್ಕಿಂತ ಹೆಚ್ಚು ಮಂದಿ ಪುರಸ್ಕೃತರು ಯಹೂದಿಗಳು.

ಇದನ್ನೂ ಓದಿ: Vishweshwar Bhat Column: ಪೈಲಟ್‌ ನಿಧನರಾದರೆ....

ಭೌತಶಾಸ್ತ್ರದಲ್ಲಿ ಸುಮಾರು ಶೇ.24ಕ್ಕಿಂತ ಹೆಚ್ಚು ಯಹೂದಿಯರದೇ ಮೇಲುಗೈ. ರಸಾಯನಶಾಸ್ತ್ರ ಹಾಗೂ ಸಾಹಿತ್ಯದಲ್ಲೂ ಯಹೂದಿಯರದೇ ಪ್ರಾಬಲ್ಯ. ಯಹೂದಿಗಳು ವೈಜ್ಞಾನಿಕ ಸಂಶೋಧನೆ ಯ ಕ್ಷೇತ್ರಗಳಲ್ಲಿ ಮತ್ತು ಮಾನವಿಕ ವಿಷಯಗಳಲ್ಲಿ ಜಾಗತಿಕ ಜನಸಂಖ್ಯೆಗೆ ಹೋಲಿಸಿದರೆ ಅಸಾಧ್ಯ ವಾದ ಯಶಸ್ಸನ್ನು ಸಾಧಿಸಿದ್ದಾರೆ. ‌

ಇದನ್ನು ಗರ್ವದ ಮಾತು ಅಂತ ಭಾವಿಸಿದರೂ ತಪ್ಪಿಲ್ಲ. ಯಹೂದಿಗಳು ತಮ್ಮನ್ನು ತಾವು ‘ಅಹ್ಲ್ ಅಲ್-ಕಿತಾಬ್’ ಅಥವಾ ‘ಪುಸ್ತಕದ ಮಂದಿ’ (ದಿ ಪೀಪಲ್ ಆಫ್ ದಿ ಬುಕ್) ಎಂದು ಪರಿಗಣಿಸುತ್ತಾರೆ. ಇದು ಯಾವುದೇ ಕಟ್ಟುಪಾಡು‌ಗಳಿಗಿಂತ ಅಧ್ಯಯನ ಮತ್ತು ಬೌದ್ಧಿಕ ಪ್ರತಿಭೆಗೆ ನೀಡಿರುವ ಸರ್ವೋಚ್ಚ ಆದ್ಯತೆಯನ್ನು ಸೂಚಿಸುತ್ತದೆ. ತೋರಾ ಯಹೂದಿ ಧರ್ಮದ ಕೇಂದ್ರ ಗ್ರಂಥವಾದರೂ, ಈ ಅಧ್ಯಯನದ ಸಂಪ್ರದಾಯವು ಆಧುನಿಕ ವೈಜ್ಞಾನಿಕ ಚಿಂತನೆಗೆ ಬಲವಾದ ಅಡಿಪಾಯವನ್ನು ಹಾಕಿದೆ.

ಕ್ರಿ.ಶ.1ನೇ ಶತಮಾನದಲ್ಲಿ, ಯಹೂದಿ ಧರ್ಮಗುರು ರಬ್ಬಿ ಯೆಹೋಶುವಾ ಬೆನ್ ಗಮ್ಲಾ ಪ್ರತಿ ಪಟ್ಟಣದಲ್ಲಿ ಶಾಲೆಗಳನ್ನು ಸ್ಥಾಪಿಸಿ, 6 ಅಥವಾ 7 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದ. ಈ ಸಂಪ್ರದಾಯವು ಸಾವಿರಾರು ವರ್ಷಗಳಿಂದ ಮುಂದುವರಿದು ಕೊಂಡು ಬಂದಿದೆ. ಇದು ಯಹೂದಿಗಳನ್ನು ಅಕ್ಷರ ಜೀವಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯಾಯಿತು.

Vbhat 1

ಧಾರ್ಮಿಕ ಪಠ್ಯಗಳನ್ನು, ವಿಶೇಷವಾಗಿ ತಾಲ್ಮಡ್ ಅನ್ನು ಅಧ್ಯಯನ ಮಾಡಲು, ಪುರುಷರಿಗೆ ಕಡ್ಡಾಯವಾಗಿ ಸಾಕ್ಷರತೆ ಬೇಕಾಗಿತ್ತು. ಮಧ್ಯಯುಗದಲ್ಲಿ, ಹೆಚ್ಚಿನ ಜನ ಅನಕ್ಷರಸ್ಥರಾಗಿದ್ದಾಗಲೂ, ಯಹೂದಿ ಸಮುದಾಯದಲ್ಲಿ ಹೆಚ್ಚಿನ ಪ್ರಮಾಣದ ಸಾಕ್ಷರತೆ ಇತ್ತು. ಬೌದ್ಧಿಕ ಚಟುವಟಿಕೆ ಮತ್ತು ಸಾಕ್ಷರತೆ ಅವರ ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಸಹಾಯಕವಾಯಿತು.

ಯಹೂದಿ ಸಂಸ್ಕೃತಿಯಲ್ಲಿ ಪದಗಳ ನಿರರ್ಥಕ ಪುನರಾವರ್ತನೆಗಿಂತ ವಿಶ್ಲೇಷಣಾತ್ಮಕ ಚರ್ಚೆಗೆ ಹೆಚ್ಚು ಪ್ರಾಮುಖ್ಯ. ತಾಲ್ಮಡ್ ಅಧ್ಯಯನವು ಶಿಕ್ಷಕ ಮತ್ತು ವಿದ್ಯಾರ್ಥಿ, ಅಥವಾ ಇಬ್ಬರು ಸ್ನೇಹಿತರ ನಡುವೆ ಸಂಭಾಷಣೆ ಮತ್ತು ಟೀಕೆಗಳ ಮೂಲಕ ನಡೆಯುತ್ತದೆ.

ಜೂಡಾಯಿಸಂನಲ್ಲಿ, ‘ಸತ್ಯ’ ಎಂದು ಪರಿಗಣಿಸಿದ ವಿಷಯಗಳನ್ನೂ ಪ್ರಶ್ನಿಸುವುದು ಮತ್ತು ಅವುಗಳ ಹಿಂದಿನ ‘ಏಕೆ’ ಮತ್ತು ‘ಹೇಗೆ’ ಎಂಬುದನ್ನು ವಿಮರ್ಶಾತ್ಮಕವಾಗಿ ತಿಳಿದುಕೊಳ್ಳಲು ನಿರಂತರ ಒತ್ತು ನೀಡಿರುವುದು ಗಮನಾರ್ಹ. ಈ ಪ್ರಶ್ನಿಸುವ ಮನೋಭಾವವು ಹೊಸ ಆವಿಷ್ಕಾರ, ಸಿದ್ಧಾಂತಗಳ ರಚನೆ ಮತ್ತು ವೈಜ್ಞಾನಿಕ ಪ್ರಗತಿಗೆ ಮೂಲಾಧಾರವಾಗಿದೆ.

ಯಹೂದಿ ಸಂಸ್ಕೃತಿಯಲ್ಲಿ ವಿದ್ವಾಂಸರು ಮತ್ತು ಸಾಧಕರಿಗೆ ಅತ್ಯಂತ ಉನ್ನತ ಗೌರವವಿದೆ. ಬೌದ್ಧಿಕ ಸಾಧನೆಗಳನ್ನು ಕೇವಲ ವೈಯಕ್ತಿಕ ಯಶಸ್ಸು ಎಂದು ನೋಡದೇ, ಸಮುದಾಯದ ಮತ್ತು ಧಾರ್ಮಿಕ ಯಶಸ್ಸು ಎಂದು ನೋಡಲಾಗುತ್ತದೆ. ಈ ಕಾರಣದಿಂದಾಗಿ, ಪೋಷಕರು ತಮ್ಮ ಮಕ್ಕಳು ವೈದ್ಯಕೀಯ, ಕಾನೂನು ಮತ್ತು ವಿeನ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಲು ಅಪಾರವಾಗಿ ಪ್ರೋತ್ಸಾಹಿಸುತ್ತಾರೆ.

vbhat 2

ಯಹೂದಿಗಳ ಯಶಸ್ಸಿಗೆ ಅಂತರ್ಗತ ಸಂಸ್ಕೃತಿಯಲ್ಲದೇ, ಅವರ ಐತಿಹಾಸಿಕ ವಲಸೆ (Migration ) ಕೂಡ ಕಾರಣವಾಗಿದೆ. ಎರಡನೇ ಮಹಾಯುದ್ಧದ ಮೊದಲು ಮತ್ತು ನಂತರ, ಅನೇಕ ಪ್ರತಿಭಾವಂತ ಯಹೂದಿ ವಿದ್ವಾಂಸರು (ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಸೇರಿದಂತೆ) ಪೂರ್ವ ಯುರೋಪ್‌ನ ಪ್ರದೇಶಗಳಿಂದ ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್‌ನಂಥ ದೇಶಗಳಿಗೆ ವಲಸೆ ಹೋದರು. ಅವರು ಹೊಸದಾಗಿ ವಲಸೆ ಹೋದ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಂಪನ್ಮೂಲಗಳನ್ನು ಪಡೆದರು.

ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಹೆಚ್ಚಿನವರು ಈ ಪಾಶ್ಚಿಮಾತ್ಯ ದೇಶಗಳ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದವರು. ಜನಸಂಖ್ಯೆಯ ಗಾತ್ರಕ್ಕೆ ಹೋಲಿಸಿದರೆ ನೊಬೆಲ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಇಸ್ರೇಲ್ ವಿಶ್ವದ ಅತ್ಯಧಿಕ ಸಾಧನೆ ಮಾಡಿದ ದೇಶಗಳಲ್ಲಿ ಒಂದಾಗಿದೆ. ಇಸ್ರೇಲ್ ಪ್ರಮುಖ ವೈeನಿಕ ಮತ್ತು ಆರ್ಥಿಕ ನೊಬೆಲ್ ಪ್ರಶಸ್ತಿಗಳನ್ನು ಗೆದ್ದಿದೆ.

ಇಸ್ರೇಲ್ ಒಂದು ‘ಸ್ಟಾರ್ಟ್ ಅಪ್ ನೇಷನ್’ ಎಂದು ಪ್ರಸಿದ್ಧವಾಗಿದೆ. ದೇಶದ ಆರ್ಥಿಕತೆಯು ಉನ್ನತ ತಂತ್ರeನ, ಸಂಶೋಧನೆ ಮತ್ತು ನಾವೀನ್ಯದಲ್ಲಿ ಭಾರಿ ಹೂಡಿಕೆ ಮಾಡುತ್ತದೆ. ಟೆಕ್ನಿಯಾನ್, ಹೀಬ್ರೂ ವಿಶ್ವವಿದ್ಯಾಲಯ ಮತ್ತು ವೈಜ್‌ಮನ್ ಇನ್ಸ್ಟಿಟ್ಯೂಟ್ ಆಫ್ ಸೈನಂಥ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಗಳು ನಿರಂತ‌ರವಾಗಿ ಜಾಗತಿಕ ವೈeನಿಕ ಸಮುದಾಯಕ್ಕೆ ಕೊಡುಗೆ ನೀಡುತ್ತಿವೆ.

ಯಹೂದಿ ಸಮುದಾಯವು ನೊಬೆಲ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಸಾಧಿಸಿರುವ ಅಸಾಮಾನ್ಯ ಯಶಸ್ಸು ಬುದ್ಧಿಮತ್ತೆಯಿಂದ ಮಾತ್ರ ಬಂದದ್ದಲ್ಲ. ಬದಲಾಗಿ, ಇದು ಸಾವಿರಾರು ವರ್ಷಗಳ ಇತಿಹಾಸದಲ್ಲಿ ಬೇರೂರಿರುವ ಕಲಿಕೆ, ಪ್ರಶ್ನಿಸುವ ಸ್ವಭಾವ, ವಿಶ್ಲೇಷಣೆ ಮತ್ತು ಬೌದ್ಧಿಕ ಉತ್ಕೃಷ್ಟತೆಗೆ ಗೌರವ ನೀಡುವ ಒಂದು ಅನನ್ಯ ಸಾಂಸ್ಕೃತಿಕ ಬದ್ಧತೆಯ ಫಲಿತಾಂಶ ಎಂಬುದನ್ನು ಗಮನಿಸ ಬೇಕು.

‘ದಿ ಪೀಪಲ್ ಆಫ್ ದಿ ಬುಕ್’ ಎಂಬ ಗುರುತು ಕೇವಲ ಧಾರ್ಮಿಕ ಪಠ್ಯಗಳಿಗೆ‌ ಸೀಮಿತವಾಗಿಲ್ಲ. ಇದು ಜಗತ್ತಿನ ವಿಜ್ಞಾನ, ಕಲೆ, ಆರ್ಥಿಕತೆ ಮತ್ತು ಜ್ಞಾನದ ಪ್ರತಿಯೊಂದು ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಕೊಡುಗೆ ನೀಡಲು ಯಹೂದಿಗಳನ್ನು ಪ್ರೇರೇಪಿಸಿದ ಒಂದು ಬೌದ್ಧಿಕ ಜೀವನಶೈಲಿಯಾಗಿದೆ.

ಇವೆಲ್ಲವುಗಳ ಪರಿಣಾಮ ಸರ್ವವಿಧಿತ. 1901ರಿಂದ 2025ರ ತನಕ 633 ನೊಬೆಲ್ ಪ್ರಶಸ್ತಿಗಳನ್ನು 1026 ಮಂದಿಗೆ ನೀಡಲಾಗಿದ್ದು ಆ ಪೈಕಿ 220 ಮಂದಿ ಯಹೂದಿಯರು! ಇದು ಎಲ್ಲ ಪ್ರಶಸ್ತಿ ಪುರಸ್ಕೃತರ ಸುಮಾರು ಶೇ.22ರಷ್ಟು. ಯಹೂದಿಗಳು ವಿಶ್ವದ ಜನಸಂಖ್ಯೆಯ ಕೇವಲ ಶೇ.0.2ರಷ್ಟಿ ದ್ದಾರೆ.

ಈ ಅಸಮಾನ ಪ್ರಾತಿನಿಧ್ಯವು ತುಲನಾತ್ಮಕವಾಗಿ ಸಣ್ಣ ಜನಸಂಖ್ಯೆಯ ಗುಂಪಿನಲ್ಲಿ ಹೆಚ್ಚಿನ ಸಾಧನೆಯ ಪ್ರಮಾಣವನ್ನು ಎತ್ತಿ ತೋರಿಸುತ್ತದೆ. ಯಹೂದಿ ನೊಬೆಲ್ ಪ್ರಶಸ್ತಿ ವಿಜೇತರ ಸಂಖ್ಯೆ ಯು ಸಾಮಾನ್ಯ ಜನಸಂಖ್ಯೆಯಲ್ಲಿ ಅವರ ಪ್ರಾತಿನಿಧ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ, ಇದು ಅವರ ಜನಸಂಖ್ಯಾ ಅನುಪಾತಕ್ಕಿಂತ 11 ಪಟ್ಟು ಹೆಚ್ಚಾಗಿದೆ.

ಹಚ್ಚೆ ಕಲೆ ಪ್ರವೀಣರು

ನಾನು ಇಸ್ರೇಲಿಗೆ ಹೋದಾಗಲೆಲ್ಲ ಜೆರುಸಲೆಮ್‌ನ ಓಲ್ಡ್‌ ಸಿಟಿಯಲ್ಲಿರುವ ಜಾಫಾ ಗೇಟ್ ಸನಿಹ ದಲ್ಲಿರುವ ‘ರಝೂಕ್ ಇಂಕ್’ಗೆ ಹೋಗಿ ಬರುತ್ತೇನೆ. ಈ ಸಲವೂ ಅಲ್ಲಿಗೆ ಹೋಗಿದ್ದೆ. ಆದರೆ ನಾನು ಹೋಗುವ ಹೊತ್ತಿಗೆ ಕತ್ತಲಾಗಿತ್ತು. ಹೀಗಾಗಿ ಅಂಗಡಿ ಬಾಗಿಲು ಹಾಕಿದ್ದು ಕಂಡು ತುಸು ನಿರಾಸೆ ಆಯಿತು. ಜಗತ್ತಿನ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲದಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಕಲಾ ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಜೆರುಸಲೆಮ್‌ನ ರಝೂಕ್ ಇಂಕ್ ಹಚ್ಚೆ (Tattoo) ಕಲೆಯೂ ಒಂದು.

ಇದು 700 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿದೆ. ಈ ಹಚ್ಚೆ ಕಲೆಯನ್ನು ರಝೂಕ್ ಕುಟುಂಬವು ಅಷ್ಟು ವರ್ಷಗಳಿಂದ ನಿರಂತರವಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಕ್ರಿಶ್ಚಿಯನ್ ಯಾತ್ರಾರ್ಥಿಗಳಿಗೆ ಹಚ್ಚೆ ಹಾಕುವುದೇ ಈ ಕುಟುಂಬದ ಕುಲಕಸುಬು. ರಝೂಕ್ ಕುಟುಂಬದ ಹಚ್ಚೆ ಕಲೆಯ ಇತಿಹಾಸವು 14ನೇ ಶತಮಾನದಲ್ಲಿ, ಅವರು ಮೂಲತಃ ಇದ್ದ ಈಜಿಪ್ಟ್‌ನಲ್ಲಿ ಆರಂಭ ವಾಯಿತು.

ಈ ಕುಟುಂಬದವರು ಮೂಲತಃ ಕಾಪ್ಟಿಕ್ ಕ್ರಿಶ್ಚಿಯನ್ನರು (Coptic Christians). ಆ ದಿನಗಳಲ್ಲಿ, ಕಾಪ್ಟಿಕ್ ಕ್ರಿಶ್ಚಿಯನ್ನರಿಗೆ ಚರ್ಚುಗಳಿಗೆ ಪ್ರವೇಶ ಪಡೆಯಲು ಸಹಾಯ ಮಾಡಲು, ಅವರ ಮಣಿ ಕಟ್ಟಿನ ಮೇಲೆ ಸಣ್ಣ ಶಿಲುಬೆಯ (Cross) ಹಚ್ಚೆ ಹಾಕಲಾಗುತ್ತಿತ್ತು. ಇದು ಧಾರ್ಮಿಕ ನಂಬಿಕೆ ಮತ್ತು ಗುರುತಿನ ಸಂಕೇತವಾಗಿತ್ತು.

ಕೆಲವೊಮ್ಮೆ ಮಕ್ಕಳಿಗೂ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಶಿಲುಬೆಯ ಹಚ್ಚೆ ಹಾಕಲಾಗುತ್ತಿತ್ತು. 18ನೇ ಶತಮಾನದಲ್ಲಿ, ಈ ಕುಟುಂಬದ ಪೂರ್ವಜರಾದ ಜೆರ್ಸಿಯುಸ್ ಎಂಬ ಕಾಪ್ಟಿಕ್ ಪಾದ್ರಿ, ತೀರ್ಥ ಯಾತ್ರೆಗಾಗಿ ಜೆರುಸಲೆಮ್‌ಗೆ ಬಂದು, ಇಲ್ಲೇ ಉಳಿದು ತನ್ನ ಕಲಾವೃತ್ತಿಯನ್ನು ಮುಂದು ವರಿಸಿದ.

ಅಂದಿನಿಂದ, ಈ ಕುಟುಂಬವು ಜೆರುಸಲೆಮ್‌ನ ಹಳೆಯ ನಗರದ (Old City) ಕ್ರಿಶ್ಚಿಯನ್ ಪ್ರದೇಶ ದಲ್ಲಿಯೇ (Christian Quarter) ನೆಲೆಸಿ, ವಿಶ್ವದಾದ್ಯಂತ ಬರುವ ಯಾತ್ರಾರ್ಥಿಗಳಿಗೆ ಹಚ್ಚೆ ಹಾಕುವ ವೃತ್ತಿಯನ್ನು ಮುಖ್ಯವಾಗಿ ನಿರ್ವಹಿಸುತ್ತಿದೆ.

ರಝೂಕ್ ಹಚ್ಚೆ ಸ್ಟುಡಿಯೋದ ಅತ್ಯಂತ ಅನನ್ಯ ಮತ್ತು ಆಸಕ್ತಿದಾಯಕ ಅಂಶವೆಂದರೆ ಅವರು ಶತಮಾನಗಳಿಂದ ಬಳಸುತ್ತಿರುವ ಮರದ ಅಚ್ಚುಗಳು (Hand-carved Wooden Blocks/Stencils ). ಈ ಮರದ ಅಚ್ಚುಗಳನ್ನು ಕ್ರಿಶ್ಚಿಯನ್ ಧರ್ಮದ ವಿವಿಧ ಸಂಕೇತಗಳಿಂದ ಕೆತ್ತಲಾಗಿದೆ.

ಇವುಗಳಲ್ಲಿ ಕ್ರೂಸಿಫಿಕ್ಷನ್ (Crucifixion), ಮ್ಯಾಡೋನಾ (Madonna ), ಅಸೆನ್ಶನ್ (Ascension ) ಮತ್ತು ಅತ್ಯಂತ ಜನಪ್ರಿಯವಾದ ಜೆರುಸಲೆಮ್ ಶಿಲುಬೆ ವಿನ್ಯಾಸಗಳಿವೆ. ಹಚ್ಚೆ ಹಾಕುವ ಮೊದಲು, ಈ ಮರದ ಅಚ್ಚುಗಳಿಗೆ ಶಾಯಿಯನ್ನು ಹಚ್ಚಿ, ಅದನ್ನು ಯಾತ್ರಾರ್ಥಿಗಳ ಚರ್ಮದ ಮೇಲೆ ಒತ್ತಲಾಗುತ್ತದೆ.

ನಂತರ ಕಲಾವಿದರು ಆ ಗುರುತಿನ ಮೇಲೆ ಹಚ್ಚೆಯನ್ನು ಅಳವಡಿಸುತ್ತಾರೆ. ಈ ಅಚ್ಚುಗಳಲ್ಲಿ ಕೆಲವು 400 ವರ್ಷಗಳಷ್ಟು ಹಳೆಯದಾಗಿವೆ ಎಂದು ಅಂದಾಜಿಸಲಾಗಿದೆ. ಹಿಂದೆ ಈ ಹಚ್ಚೆಗಳನ್ನು ‘ಪವಿತ್ರ ಭೂಮಿಗೆ ಭೇಟಿ ನೀಡಿದ ಬಗ್ಗೆ ಒಂದು ಶಾಶ್ವತ ಪ್ರಮಾಣಪತ್ರ’ ಎಂದು ಯಾತ್ರಾರ್ಥಿಗಳಿಗೆ ಹಾಕುತ್ತಿದ್ದರು.

ಯಾತ್ರಾರ್ಥಿಗಳೂ ಅದನ್ನು ಅಭಿಮಾನದಿಂದ ಹಾಕಿಸಿಕೊಳ್ಳುತ್ತಿದ್ದರು. ಅನೇಕ ಯಾತ್ರಾರ್ಥಿಗಳು ತಮ್ಮ ಹಚ್ಚೆಯ ಕೆಳಗೆ ಭೇಟಿಯ ದಿನಾಂಕವನ್ನೂ ಹಾಕಿಸಿಕೊಳ್ಳುತ್ತಿದ್ದರು. ಮತ್ತೆ ಬಂದಾಗ ಹೊಸ ದಿನಾಂಕವನ್ನೂ ಬರೆಸಿಕೊಳ್ಳುತ್ತಿದ್ದರು. ರಝೂಕ್ ಕುಟುಂಬವು ಸುಮಾರು 27-28 ತಲೆಮಾರು ಗಳಿಂದ ಈ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದೆ.

ಪ್ರಸ್ತುತ, ವಸ್ಸಿಮ್ ರಝೂಕ್ ಅವರು ತಮ್ಮ ಮಕ್ಕಳಾದ ಆಂಟನ್ ಮತ್ತು ನಿಜಾರ್ ಅವರೊಂದಿಗೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವಸ್ಸಿಮ್ ಅವರ ಅಜ್ಜ, ಜಾಕೋಬ್ ರಝೂಕ್ 1930ರ ದಶಕದಲ್ಲಿ ಇಲೆಕ್ಟ್ರಿಕ್ ಹಚ್ಚೆ ಯಂತ್ರವನ್ನು ಬಳಸಿದ ಮೊದಲಿಗರು.

ಈ ಮೂಲಕ ಅವರು ಆಧುನಿಕ ತಂತ್ರಜ್ಞಾನವನ್ನು ಸಂಪ್ರದಾಯಕ್ಕೆ ಅಳವಡಿಸಿಕೊಂಡರು. ಇಥಿಯೋಪಿಯಾದ ಕೊನೆಯ ಚಕ್ರವರ್ತಿಯಾದ ಹೈಲ್ ಸೆಲಾಸ್ಸಿ ಅವರಂಥ ಪ್ರಮುಖ ವ್ಯಕ್ತಿಗಳಿಗೂ ಈ ಕುಟುಂಬದವರು ಹಚ್ಚೆ ಹಾಕಿದ್ದಾರೆ.

ರಝೂಕ್ ಹಚ್ಚೆ ಸ್ಟುಡಿಯೋ ಕೇವಲ ಹಚ್ಚೆ ಅಂಗಡಿಯಲ್ಲ, ಅದು ಧಾರ್ಮಿಕ ಭಕ್ತಿ, ಕಲಾತ್ಮಕ ಪರಂಪರೆ ಮತ್ತು 700 ವರ್ಷಗಳ ಮಾನವ ಇತಿಹಾಸದ ಅನನ್ಯ ಸಂಗಮ ಎನ್ನಬಹುದು. ಐತಿಹಾ ಸಿಕ ಛಾಯಾಚಿತ್ರಗಳು ಮತ್ತು ವೃತ್ತಪತ್ರಿಕೆಗಳ ಕತ್ತರಿಸಿದ ಭಾಗಗಳಿಂದ ಅಲಂಕರಿಸಿದ ಸಣ್ಣ, ತಾಂತ್ರಿಕವಾಗಿ ಆಧುನಿಕ ಹಚ್ಚೆ ಸಲೂನ್‌ನಲ್ಲಿ, ಅನೇಕ ಮಧ್ಯಕಾಲೀನ ಉಪಕರಣಗಳನ್ನು ಇರಿಸಲಾಗಿದೆ, ಉದಾಹರಣೆಗೆ, ಕೈಯಿಂದ ಕೆತ್ತಿದ ಆಲಿವ್ -ಮರದ ಅಂಚೆಚೀಟಿಗಳು ಮತ್ತು ಸೂಜಿಗಳು.

ಹಿಂದಿನ ಕಾಲದಲ್ಲಿ, ಒಂದೇ ಸೂಜಿಯನ್ನು ಬಳಸಿ 600 ಯಾತ್ರಿಕರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತಾಂತ್ರಿಕ ವಿಧಾನಗಳಿಗೆ ವ್ಯತಿರಿಕ್ತವಾಗಿ, ಕಾಲಾನಂತರದಲ್ಲಿ ಲಕ್ಷಣಗಳು ಸ್ವಲ್ಪ ಬದಲಾಗಿವೆ. ಶಿಲುಬೆಗಳು, ಯೇಸುವಿನ ಮತ್ತು ಸಂತರ ಚಿತ್ರಗಳು ಅಥವಾ ಬೈಬಲ್‌ನ ದೃಶ್ಯಗಳು ಕ್ರುಸೇಡರ್ ದಿನಗಳಂತೆಯೇ ಜನಪ್ರಿಯವಾಗಿವೆ.

ವಾಜಿಮ್ ರಝೌಕ್ ಆರಂಭದಲ್ಲಿ ತನ್ನ ಕುಲಕಸುಬು ಬಿಟ್ಟು ರೆಸ್ಟೋರೆಂಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಒಂದು ದಿನ ಆತನಿಗೆ ಪತ್ರಿಕೆಯಲ್ಲಿ ಪ್ರಕಟವಾದ ತನ್ನ ತಂದೆ ಆಂಟನ್‌ನ ಹಳೆಯ ಸಂದರ್ಶನ ಸಿಕ್ಕಿತು. ಅದರಲ್ಲಿ ಆತ ತನ್ನ ಕುಟುಂಬ ತಲತಲಾಂತರಗಳಿಂದ ನಡೆಸಿ ಕೊಂಡು ಬರುತ್ತಿರುವ ಹಚ್ಚೆ ಕಲೆ ಅಂತ್ಯ ಕಾಣಬಹುದೆಂದು ದುಃಖಿತನಾಗಿ ಮಾತಾಡಿದ್ದ.

ಇದನ್ನು ಓದಿ ವಾಜಿಮ್ ಆಘಾತಕ್ಕೊಳಗಾದ. ತನ್ನ ತಂದೆ ಎಂದೂ ತನ್ನನ್ನು ಟೀಕಿಸಿದ್ದಿಲ್ಲ, ಬೈದಿದ್ದಿಲ್ಲ. ಇದೇ ಉದ್ಯೋಗ ಮಾಡು ಎಂದು ಒತ್ತಾಯಿಸಿದ್ದಿಲ್ಲ. ಹೀಗಿರುವಾಗ ಆತ ಮತ್ತು ಆತನ ಪೂರ್ವಿಕರು ಮುನ್ನಡೆಸಿಕೊಂಡು ಬಂದ ಹಚ್ಚೆ ಹಾಕುವ ಉದ್ಯೋಗವನ್ನು ಬಿಟ್ಟು ತಾನು ಬೇರೆ ಯಾವುದೋ ಉದ್ಯೋಗ ಮಾಡುತ್ತಿದ್ದೇನಲ್ಲ ಎಂದು ಅವನಿಗೆ ಬೇಸರವಾಯಿತು.

ತನ್ನಿಂದಾಗಿ ತನ್ನ ಕುಟುಂಬದ ಸಂಪ್ರದಾಯ ನಿಲ್ಲುವುದು ಬೇಡ ಎಂದು ಆತ ಅಲ್ಲಿಯೇ ತೀರ್ಮಾ ನಿಸಿದ. ಅಷ್ಟೇ ಅಲ್ಲ, ತನ್ನ ಪೂರ್ವಜರ ಹೆಜ್ಜೆಗಳನ್ನು ಅನುಸರಿಸಲು ನಿರ್ಧರಿಸಿದ. ಇದು ಅವನ ಜೀವನದ ಅತ್ಯುತ್ತಮ ನಿರ್ಧಾರವಾಗಿತ್ತು. ಹಿಂದಿನ ಸಲ ಆತನ ಅಂಗಡಿಗೆ ಹೋದಾಗ ಆತ ತನ್ನ ಕಥೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದ. ಈ ಉತ್ಸಾಹಭರಿತ ಹಚ್ಚೆ ಕಲಾವಿದನ ನಿಖರ ಕೆಲಸವನ್ನು ನೋಡಿದ ಯಾರೂ ಅವನ ಮಾತುಗಳಲ್ಲಿ ಅಡಗಿರುವ ನಿಜಾಂಶವನ್ನು ಅನುಮಾನಿ ಸುವುದಿಲ್ಲ. ಮುಂದಿನ ದಿನಗಳಲ್ಲಿ ತನ್ನ ಮಗ ಕೂಡ ಪ್ರವರ್ಧಮಾನಕ್ಕೆ ಬಂದು ತನ್ನ ಹಚ್ಚೆ ಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಾನೆ ಎಂಬುದು ವಾಜಿಮ್ ರಝೌಕ್ ಕನಸು.

ತ್ಮೊಲ್ ಶಿಲ್ಶೋಮ್

‘ನೀವು ಜೆರುಸಲೆಮ್‌ಗೆ ಅವೆಷ್ಟೋ ಬಾರಿ ಹೋಗಿದ್ದೀರಿ. ಆದರೂ ತ್ಮೊಲ್ ಶಿಲ್ಶೋಮ್‌ಗೆ ಹೋಗಿಲ್ಲ ಅಂದ್ರೆ ನನಗೆ ನಂಬಲು ಆಗುತ್ತಿಲ್ಲ. ಮುಂದಿನ ಸಲ ಹೋದಾಗ ಅಲ್ಲಿಗೆ ತಪ್ಪದೇ ಹೋಗಿ ಬನ್ನಿ’ ಎಂದು ಇಸ್ರೇಲಿನಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದ್ದ, ಈಗ ದಿಲ್ಲಿಯಲ್ಲಿರುವ ಭಾರತೀಯ ಉದ್ಯಮಿ ಹರೀಶ್ ಗುಪ್ತಾ ಹೇಳಿದ್ದರು. ‘ಮಿಸ್ಟರ್ ಭಟ್, ನಿಮ್ಮಂಥವರು ತ್ಮೊಲ್ ಶಿಲ್ಶೋಮ್ ಗೆ ಭೇಟಿ ನೀಡಲೇಬೇಕು. ಅದು ಕೇವಲ ಒಂದು ರೆಸ್ಟೋರೆಂಟ್ ಅಥವಾ ಕೆಫೆ ಅಲ್ಲ, ಇದು ಇಸ್ರೇಲ್‌ನ ರಾಜಧಾನಿಯ ಬೌದ್ಧಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೇಂದ್ರಬಿಂದು’ ಎಂದು ಬಣ್ಣಿಸಿದ್ದರು.

‘ತ್ಮೊಲ್ ಶಿಲ್ಶೋಮ್’ ಎಂಬುದು ಹೀಬ್ರೂ ಪದವಾಗಿದ್ದು, ಇದರ ಅರ್ಥ ‘ನಿನ್ನೆ-ಮೊನ್ನೆ’ ಅಥವಾ ‘ಕೇವಲ ನಿನ್ನೆ’ ಎಂದಾಗುತ್ತದೆ. ಈ ಹೆಸರನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ಇಸ್ರೇಲಿ ಲೇಖಕ ಎಸ್.ವೈ.ಅಗ್ನೋನ್ ಅವರ ಪ್ರಸಿದ್ಧ ಕಾದಂಬರಿಯ ಶೀರ್ಷಿಕೆಯಿಂದ ತೆಗೆದುಕೊಳ್ಳಲಾಗಿದೆ. ಈ ಸಾಹಿತ್ಯಿಕ ಸಂಪರ್ಕವೇ ಕೆಫೆಗೆ ಅಪಾರ ಗೌರವ ಮತ್ತು ಬೌದ್ಧಿಕ ವಾತಾವರಣವನ್ನು ತಂದು ಕೊಟ್ಟಿದೆ. ಈ ಸಂಸ್ಥೆಯನ್ನು 1994ರಲ್ಲಿ ಡೇವಿಡ್ ಎರ್ಲಿಚ್ ಎಂಬ ಲೇಖಕ ಮತ್ತು ಪತ್ರಕರ್ತ ಸ್ಥಾಪಿಸಿದ.

ತ್ಮೊಲ್ ಶಿಲ್ಶೋಮ, ಜೆರುಸಲೆಮ್‌ನ ಹಳೆಯ ನಗರದ ಗೋಡೆಗಳ ಹೊರಗೆ ನಿರ್ಮಿಸಲಾದ, ನಹಲಾತ್ ಶಿವದ ಹೃದಯಭಾಗದಲ್ಲಿರುವ 19ನೇ ಶತಮಾನದ ಕಲ್ಲಿನ ಕಟ್ಟಡದ 2ನೇ ಮಹಡಿ ಯಲ್ಲಿದೆ. ರೆಸ್ಟೋರೆಂಟ್‌ನ ವಿನ್ಯಾಸವು ಪುಸ್ತಕದಂಗಡಿ, ಕಾಫಿ ಹೌಸ್ ಮತ್ತು ರೆಸ್ಟೋರೆಂಟ್‌ನ ವಿಶಿಷ್ಟ ಮಿಶ್ರಣವಾಗಿದೆ. ಕೋಣೆಗಳು ಹಳೆಯ ಪುಸ್ತಕದ ಕಪಾಟುಗಳು, ವಿಂಟೇಜ್ ಪೀಠೋಪಕರಣ ಗಳು ಮತ್ತು ಕಮಾನುಗಳಿಂದ ತುಂಬಿವೆ.

ಇದು ಓದಲು, ಬರೆಯಲು ಅಥವಾ ದೀರ್ಘ ಸಂಭಾಷಣೆಗಳಲ್ಲಿ ತೊಡಗಲು ಆರಾಮದಾಯಕವಾದ, ನಾಸ್ಟಾಲ್ಜಿಕ್ ವಾತಾವರಣವನ್ನು ಸೃಷ್ಟಿಸುವ ಒಂದು ಅಪರೂಪದ ಪ್ರದೇಶ. ಈ ಕೆಫೆ ಆರಂಭ ವಾದಾಗ ಪ್ರಸಿದ್ಧ ಇಸ್ರೇಲಿ ಕವಿ ಯೆಹುದಾ ಅಮಿಚೈ ಇಲ್ಲಿ ಕುಳಿತು ಕವನಗಳನ್ನು ಬರೆಯುತ್ತಿದ್ದ ಮತ್ತು ಓದುತ್ತಿದ್ದ. ಇಂದಿಗೂ ಆ ಕೆಫೆಯ ಒಂದು ಮೂಲೆಯಲ್ಲಿರುವ ಆತನ ನೆಚ್ಚಿನ ಕುರ್ಚಿಯನ್ನು ‘ಅಮಿಚೈ ಕುರ್ಚಿ’ ಎಂದೇ ಗೌರವಿಸಲಾಗುತ್ತದೆ.

ಈಗ ಅದು ಅತ್ಯಂತ ಜನಪ್ರಿಯ ಇನ್ಸ್ಟಾ ಸ್ಪಾಟ್! ತ್ಮೊಲ್ ಶಿಲ್ಶೋಮ್ ಕೇವಲ ಕಾಫಿ-ತಿಂಡಿಗೆ ಅಲ್ಲ, ಸಾಹಿತ್ಯಿಕ ಕಾರ್ಯಕ್ರಮಗಳಿಗಾಗಿಯೂ ಪ್ರಸಿದ್ಧ. ಆರಂಭವಾದಾಗಿನಿಂದ, ಇದು ಇಸ್ರೇಲ್‌ನ ಅನೇಕ ಪ್ರಮುಖ ಮತ್ತು ಪ್ರಖ್ಯಾತ ಸಮಕಾಲೀನ ಲೇಖಕರು, ಕವಿಗಳು ಮತ್ತು ಚಿಂತಕರಿಗೆ ಆತಿಥ್ಯ ನೀಡಿದೆ.

ಅವರಲ್ಲಿ ಅಮೋಸ್ ಓಜ್, ಇವಾ ಇಜ್, ಎ.ಬಿ. ಯೆಹೋಶುವಾ, ಎಟ್ಗರ್ ಕೆರೆಟ್, ಡೇವಿಡ್ ಗ್ರಾಸ್‌ ಮನ್ ಮತ್ತು ಮೇಯಿರ್ ಶಲೆವ್ ಅವರಂಥ ಅಂತಾರಾಷ್ಟ್ರೀಯ ಮಟ್ಟದ ಲೇಖಕರು ಸೇರಿದ್ದಾರೆ. ಇಲ್ಲಿ ನಿಯತವಾಗಿ ಸಾಹಿತ್ಯ ಗೋಷ್ಠಿಗಳು, ಪುಸ್ತಕ ಬಿಡುಗಡೆ ಸಮಾರಂಭಗಳು ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಇದು ಯುವ ಬರಹಗಾರರಿಗೆ ಬಹುದೊಡ್ಡ ವೇದಿಕೆ.

ತ್ಮೊಲ್ ಶಿಲ್ಶೋಮ್ ಒಂದು ಡೇರಿ ಕೋಶರ್ ರೆಸ್ಟೋರೆಂಟ್ ಆಗಿದೆ. ಅಂದರೆ, ಅಲ್ಲಿ ಮಾಂಸಾಹಾರ ವನ್ನು ಒದಗಿಸುವುದಿಲ್ಲ ಮತ್ತು ಕಟ್ಟುನಿಟ್ಟಾದ ಕೋಶರ್ ನಿಯಮಗಳನ್ನು ಅನುಸರಿಸಲಾಗುತ್ತದೆ. ಇಲ್ಲಿನ ಮುಖ್ಯ ಖಾದ್ಯಗಳಲ್ಲಿ ಶಕ್ಶುಕಾ (ಟೊಮೆಟೊ ಸಾಸ್ ಮತ್ತು ಮೊಟ್ಟೆಯ ಭಕ್ಷ್ಯ), ರುಚಿಕರ ವಾದ ಚೀಸ್ ಕೇಕ್, ಲೆಸಾಂಜಾ ಮತ್ತು ವಿವಿಧ ಸಲಾಡ್‌ಗಳು ಸೇರಿವೆ. ಈ ಕೆಫೆಯು ಯಹೂದಿ, ಜಾತ್ಯತೀತ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಜನರನ್ನು ಒಟ್ಟುಗೂಡಿಸುವ ಸ್ಥಳವಾಗಿದೆ.

ಅನೇಕ ದಂಪತಿಗಳು ಮೊದಲ ಬಾರಿಗೆ ಇಲ್ಲಿಯೇ ಭೇಟಿಯಾಗಿ, ನಂತರ ಮದುವೆಯಾಗಿದ್ದಾರೆ. ಈ ಕುರಿತು ಕೆಫೆಯ ಸಂಸ್ಥಾಪಕ ಡೇವಿಡ್ ಎರ್ಲಿಚ್ ಒಂದು ಪುಸ್ತಕವನ್ನು ಬರೆದಿದ್ದಾರೆ. ತ್ಮೊಲ್ ಶಿಲ್ಶೋಮ್ ಜೆರುಸಲೆಮ್‌ನ ಸಾಂಸ್ಕೃತಿಕ ಇತಿಹಾಸದ ಒಂದು ಜೀವಂತ ಭಾಗವಾಗಿದ್ದು, ಉತ್ತಮ ಆಹಾರ ಮತ್ತು ಆಳವಾದ ಬೌದ್ಧಿಕ ವಾತಾವರಣದ ಅಪರೂಪದ ಸಂಗಮವಾಗಿದೆ. ಒಂದು ಕೆಫೆ ಕೂಡ ಒಂದು ದೇಶದ ಪ್ರೇಕ್ಷಣೀಯ ತಾಣವಾಗಬಹುದು ಎಂಬುದಕ್ಕೆ ತ್ಮೊಲ್ ಶಿಲ್ಶೋಮ್ ಒಂದು ಉತ್ತಮ ನಿದರ್ಶನ.

ವಿಶ್ವೇಶ್ವರ ಭಟ್‌

View all posts by this author