ಮನಿ ಮೈಂಡೆಡ್
ಭಾರತದಲ್ಲಿ ಇಂದು ಷೇರುಪೇಟೆಯ ಬಗ್ಗೆ ಚರ್ಚೆ ಶುರುವಾದರೆ ಸಾಕು, ಎಲ್ಲರ ಬಾಯಲ್ಲೂ ‘ಟ್ರೇಡಿಂಗ್’ ಎನ್ನುವ ಪದ ನಲಿದಾಡುತ್ತದೆ. ಆದರೆ ಆಶ್ಚರ್ಯವೆಂದರೆ, ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿರುವ ಶೇಕಡಾ 90ರಷ್ಟು ಜನರಿಗೆ ‘ಈಕ್ವಿಟಿ ಹೂಡಿಕೆ’ (Equity Investment) ಎಂದರೇನು ಮತ್ತು ‘-ಚರ್ಸ್ ಆಪ್ಷನ್ಸ್’ (FO) ಎಂದರೇನು ಎನ್ನುವ ಮೂಲಭೂತ ವ್ಯತ್ಯಾಸವೇ ತಿಳಿದಿಲ್ಲ. ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಭಾವಿಸಿ, ಬಹಳಷ್ಟು ಜನರು ಅರಿವಿಲ್ಲದೆ ತಮ್ಮ ಕಷ್ಟದ ದುಡ್ಡನ್ನು ಜೂಜಿನಂತಹ ಅಪಾಯಕಾರಿ ಸುಳಿಗೆ ಸಿಲುಕಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಆಕರ್ಷಕ ವಿಡಿಯೋಗಳು ಮತ್ತು ಕೆಲವೇ ನಿಮಿಷ ಗಳಲ್ಲಿ ಹಣ ಸಂಪಾದಿಸುವ ಹುಸಿ ಭರವಸೆಗಳು ಈ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿವೆ. ಈಕ್ವಿಟಿ ಹೂಡಿಕೆ ಎಂದರೆ ನೀವು ಯಾವುದೇ ಪ್ರತಿಷ್ಠಿತ ಕಂಪನಿಯ ನಿರ್ದಿಷ್ಟ ಷೇರುಗಳನ್ನು ಖರೀದಿಸಿ ಅದರ ಮಾಲೀಕತ್ವದ ಸಣ್ಣ ಭಾಗವನ್ನು ಪಡೆಯುವುದು. ಇಲ್ಲಿ ಯಾವುದೇ ಕಾಲಮಿತಿಯಿರುವು ದಿಲ್ಲ, ಕಂಪನಿ ಬೆಳೆದಂತೆ ನಿಮ್ಮ ಸಂಪತ್ತು ಬೆಳೆಯುತ್ತದೆ.
ಆದರೆ ಎಫ್ ಆಂಡ್ ಒ ಹಾಗಿಲ್ಲ. ಅದೊಂದು ನಿರ್ದಿಷ್ಟ ಅವಧಿಯ ಒಪ್ಪಂದ ಅಥವಾ ಬೆಟ್ಟಿಂಗ್ ಇದ್ದಂತೆ. ಅಲ್ಲಿ ನಿಗದಿತ ಅವಧಿಯೊಳಗೆ ಮಾರುಕಟ್ಟೆ ನಿಮ್ಮ ಪರವಾಗಿಲ್ಲದಿದ್ದರೆ, ನಿಮ್ಮ ಕೈಯಲ್ಲಿ ರುವ ಹಣ ಮಂಜಿನಂತೆ ಕರಗಬಹುದು. ಫ್ಯೂಚರ್ ಆಂಡ್ ಆಪ್ಶನ್ಸ್ ಟ್ರೇಡಿಂಗ್‌ನಲ್ಲಿ ಆಸಕ್ತರಾಗಿದ್ದ ಯೂಟ್ಯೂಬರ್ ಒಬ್ಬರು ಒಂದು ದಿನ ಖುಷಿಯಿಂದ ಒಂದೇ ದಿನದಲ್ಲಿ ಲಕ್ಷಗಟ್ಟಲೆ ದುಡ್ಡು ಗಳಿಸಿದ್ದನ್ನು ಸಂತಸದಿಂದ ಪೋಸ್ಟ್ ಮಾಡಿದ್ದರು. ಮತ್ತೆ ಕೆಲ ದಿನಗಳಲ್ಲಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದರು. ಅದರಲ್ಲಿ ಒಂದೇ ದಿನ ಲಕ್ಷಗಟ್ಟಲೆ ದುಡ್ಡು ಕಳೆದುಕೊಂ ಡಿದ್ದನ್ನೂ ಹೇಳಿಕೊಂಡಿದ್ದರು!
ಇದನ್ನೂ ಓದಿ: Keshava Prasad B Column: ವ್ಯವಹಾರಗಳು ಕಂಪನಿಗಳೊಂದಿಗಲ್ಲ, ಮನುಷ್ಯರೊಂದಿಗೆ!
ಸ್ಮಾರ್ಟ್ʼಫೋನ್ ನಮ್ಮ ಕೈಸೇರಿರುವುದು ಬದುಕನ್ನು ಸುಲಭಗೊಳಿಸಿದೆ ನಿಜ. ಆದರೆ ಅದೇ ಸ್ಮಾರ್ಟ್ʼಫೋನ್ ಲಭ್ಯವಿರುವ ಕೆಲವು ಟ್ರೇಡಿಂಗ್ ಆಪ್‌ಗಳು ಅನೇಕ ಮಂದಿಗೆ ಸಮಸ್ಯಾತ್ಮಕವಾಗಿ ಪರಿಣಮಿಸಿದೆ. ಅದರಲ್ಲಿಯೂ ಷೇರುಪೇಟೆಯ ‘ಫ್ಯೂಚರ್ಸ್ ಆಂಡ್ ಆಪ್ಷನ್ಸ್’ (Futures Options & FO) ವಿಭಾಗದ ಹುಚ್ಚು ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದ್ದು, ಮಧ್ಯಮ ವರ್ಗದವರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ.
ಹಿಂದೆ ಷೇರುಪೇಟೆ ಎಂದರೆ ದೀರ್ಘಕಾಲಿಕ ಹೂಡಿಕೆ ಅಥವಾ ಕಂಪನಿಗಳ ಬೆಳವಣಿಗೆಯಲ್ಲಿ ಪಾಲುದಾರರಾಗುವ ಪ್ರಕ್ರಿಯೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಫ್ಯೂಚರ್ಸ್ ಆಂಡ್ ಆಪ್ಷನ್ಸ್ ಟ್ರೇಡಿಂಗ್ ಒಂದು ವ್ಯಸನವಾಗಿ ಬದಲಾಗಿದೆ. ಕೇವಲ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ರುಪಾಯಿ ಸಂಪಾದಿಸಬಹುದು ಎಂಬ ಸಾಮಾಜಿಕ ಜಾಲತಾಣಗಳ ಸುಳ್ಳು ಪ್ರಚಾರ ಅನೇಕರನ್ನು ದಿಕ್ಕು ತಪ್ಪಿಸುತ್ತಿದೆ. ನಿಮ್ಹಾನ್ಸ್‌ನಲ್ಲಿರುವ *SHUT' (Service for Healthy Use of Technology) ಕ್ಲಿನಿಕ್ ಮತ್ತು ಬಿಹೇವಿಯರಲ್ ಮೆಡಿಸಿನ್ ವಿಭಾಗಗಳಿಗೆ ತಂತ್ರಜ್ಞಾನ ಹಾಗೂ ಆನ್‌ಲೈನ್ ಟ್ರೇಡಿಂಗ್‌ನಿಂದ ಉಂಟಾಗುವ ಇಂತಹ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಇಲ್ಲಿ ಅವರಿಗೆ ಕೌನ್ಸಿಲಿಂಗ್, ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಮೊಬೈಲ್ ಆಪ್‌ಗಳ ಮೂಲಕ ಕ್ಷಣಾರ್ಧದಲ್ಲಿ ಟ್ರೇಡಿಂಗ್ ಮಾಡುವ ಸುಲಭ ವ್ಯವಸ್ಥೆ ಬಂದ ನಂತರ, ಸ್ಟಾಕ್ ಮಾರ್ಕೆಟ್ ಕೇವಲ ಹೂಡಿಕೆಯಾಗಿ ಉಳಿಯದೆ ಜೂಜಿನಂತೆ ವ್ಯಸನವಾಗಿ ಬದಲಾ ಗುತ್ತಿದೆ. ಕಳೆದುಕೊಂಡ ಹಣವನ್ನು ಮತ್ತೆ ಸಂಪಾದಿಸುವ ಭರದಲ್ಲಿ (Chasing Losses) ವ್ಯಕ್ತಿಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸೆಬಿ (SEBI) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, FO (Futures Options) ವಿಭಾಗದಲ್ಲಿ ಟ್ರೇಡಿಂಗ್ ಮಾಡುವ ಶೇ.90ಕ್ಕಿಂತ ಹೆಚ್ಚು ಚಿಲ್ಲರೆ ಹೂಡಿಕೆದಾರರು ನಿರಂತರವಾಗಿ ಹಣ ಕಳೆದುಕೊಳ್ಳುತ್ತಾರೆ.
ಕೆಲವರು ತಮ್ಮ ಜೀವನದ ಸಂಪೂರ್ಣ ಉಳಿತಾಯವನ್ನು ಒಂದೇ ದಿನದಲ್ಲಿ ಕಳೆದುಕೊಂಡ ಉದಾ ಹರಣೆಗಳಿವೆ. ಸ್ವಂತ ಹಣವಷ್ಟೇ ಅಲ್ಲದೆ, ಕೆಲವರು ಸಾಲ ಮಾಡಿ, ಕೈ ಸಾಲ ಪಡೆದು ಅಥವಾ ಟ್ರೇಡಿಂಗ್ ಆಪ್‌ಗಳ ಮೂಲಕ ಸಾಲ ಪಡೆದು ಟ್ರೇಡ್ ಮಾಡಿ ದೊಡ್ಡ ಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾರೆ. ಇದು ಕುಟುಂಬಗಳೇ ಬೀಳಲು ಕಾರಣವಾಗುತ್ತದೆ. ಜಾಗತಿಕ ವಿದ್ಯಮಾನಗಳು, ರಾಜಕೀಯ ಬದಲಾವಣೆಗಳು ಅಥವಾ ಕಂಪನಿಗಳ ಅನಿರೀಕ್ಷಿತ ಸುದ್ದಿಗಳು ಮಾರುಕಟ್ಟೆಯನ್ನು ಕ್ಷಣಾರ್ಧದಲ್ಲಿ ಕುಸಿಯುವಂತೆ ಮಾಡಬಹುದು.
ಇಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಹಣ ಕರಗಿಹೋಗುವ ಅಪಾಯವಿರುತ್ತದೆ. ಅಲ್ಪಾವಧಿ ಟ್ರೇಡಿಂಗ್ ಬದಲು ದೀರ್ಘಕಾಲಿಕ ಹೂಡಿಕೆ (Long&term Investing / Wealth Creation) ಅಥವಾ ಮ್ಯೂಚುವಲ್ -ಫಂಡ್‌ಗಳಂತಹ ಶಿಸ್ತುಬದ್ಧ ವಿಧಾನಗಳು ತುಸು ಸುರಕ್ಷಿತವೆಂದು ತಜ್ಞರು ಸಲಹೆ ನೀಡುತ್ತಾರೆ. ಟ್ರೇಡಿಂಗ್ ಮಾಡಲೇಬೇಕಾದರೆ ಅದಕ್ಕೆ ತಕ್ಕ ತರಬೇತಿ, ಮಾರುಕಟ್ಟೆಯ ಆಳವಾದ ಜ್ಞಾನ ಮತ್ತು ಕಳೆದುಕೊಳ್ಳಲು ಸಿದ್ಧವಿರುವ ಹೆಚ್ಚುವರಿ ಹಣವಿರುವುದು ಅನಿವಾರ್ಯ.
ಹೀಗಿದ್ದರೂ, ಮಧ್ಯಮ ವರ್ಗದವರ ಮತ್ತು ಸಾಮಾನ್ಯ ಜನರ ಅಚ್ಚುಮೆಚ್ಚಿನ ಆಯ್ಕೆ ಯಾವುದು ಎಂದರೆ ಅದು ಇಂದಿಗೂ ‘ಸಣ್ಣ ಉಳಿತಾಯ ಯೋಜನೆಗಳು’ (Small Savings Schemes). ಮಾರು ಕಟ್ಟೆಯ ಆಕರ್ಷಣೆ ಎಷ್ಟೇ ಇದ್ದರೂ, ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿರುವ ಈ ಯೋಜನೆ ಗಳ ಜನಪ್ರಿಯತೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ, ಅದಕ್ಕೊಂದು ಬಲವಾದ ಕಾರಣವಿದೆ. ಇವತ್ತಿಗೂ ಈ ಯೋಜನೆಗಳು ಗ್ರಾಹಕರನ್ನು ಸೆಳೆಯುತ್ತಿರುವುದಕ್ಕೆ ಪ್ರಮುಖ ಕಾರಣ ಭದ್ರತೆ.
ಷೇರುಪೇಟೆಯಲ್ಲಿ ಇಂದು ಲಾಭದಲ್ಲಿದ್ದ ಕಂಪನಿ ನಾಳೆ ದಿವಾಳಿಯಾಗಬಹುದು, ಆದರೆ ಸರ್ಕಾರಿ ಬೆಂಬಲವಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಪ್ರತಿಯೊಂದು ರೂಪಾಯಿಗೂ ಸಂಪೂರ್ಣ ಗ್ಯಾರಂಟಿ ಇರುತ್ತದೆ. ಇಲ್ಲಿ ಮಾರುಕಟ್ಟೆಯ ಏರಿಳಿತದ ಆತಂಕವಿಲ್ಲ, ನೆಮ್ಮದಿಯ ನಿದ್ರೆಗೆ ಭಂಗವಿಲ್ಲ. ಮಧ್ಯಮ ವರ್ಗದ ಹಾಗೂ ದುಡಿಯುವ ವರ್ಗದ ಪಾಲಿಗೆ ಇದು ಅಪ್ಪಟ ಸುರಕ್ಷಿತ ಹೂಡಿಕೆ. ಪೋಸ್ಟ್ ಆಫೀಸ್‌ನಲ್ಲಿ (ಅಂಚೆ ಕಚೇರಿ) ಹೂಡಿಕೆ ಮಾಡಲು ಹಲವು ಉತ್ತಮ ಉಳಿತಾಯ ಯೋಜನೆಗಳಿವೆ. ನಿಮ್ಮ ಅಗತ್ಯತೆ, ಹೂಡಿಕೆಯ ಅವಧಿ ಮತ್ತು ಆದಾಯದ ಆಧಾರದ ಮೇಲೆ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಬಹುದು.
ಅವುಗಳನ್ನು ಒಂದೊಂದಾಗಿ ನೋಡೋಣ. ಮೊದಲನೆಯದಾಗಿ ಪಬ್ಲಿಕ್ ಪ್ರಾವಿಡೆಂಟ್ -ಫಂಡ್ (PPF). ಇದು ದೀರ್ಘಕಾಲೀನ ಉಳಿತಾಯಕ್ಕೆ ಉತ್ತಮ. ಇದರಲ್ಲಿ ಹೂಡಿಕೆಯ ಅವಧಿ 15 ವರ್ಷಗಳು. ನಂತರ ಕೂಡ ಮುಂದುವರಿಸಬಹುದು. ಇದು ಸಂಪೂರ್ಣವಾಗಿ ಸುರಕ್ಷಿತವಾದ ಸರ್ಕಾರಿ ಯೋಜನೆ ಯಾಗಿದ್ದು, ಅತ್ಯುತ್ತಮ ಬಡ್ಡಿ ಹಾಗೂ ತೆರಿಗೆ ವಿನಾಯಿತಿಯನ್ನು (EEE-Exempt, Exempt, Exempt) ಹೊಂದಿದೆ. ದೀರ್ಘಕಾಲದಲ್ಲಿ ದೊಡ್ಡ ಮೊತ್ತದ ನಿಧಿಯನ್ನು ಸೃಷ್ಟಿಸಲು ಇದು ಅತ್ಯಂತ ಜನಪ್ರಿಯ ಮಾರ್ಗವಾಗಿದೆ.
ಎರಡನೆಯದಾಗಿ ಸುಕನ್ಯಾ ಸಮೃದ್ಧಿ ಯೋಚನೆ (SSY). ಇದು ಹೆಣ್ಣುಮಕ್ಕಳ ಭವಿಷ್ಯಕ್ಕೆ ಸೂಕ್ತ ವಾಗಿದೆ. ಇದರಲ್ಲಿ ಹೆಣ್ಣುಮಗುವಿಗೆ 21 ವರ್ಷ ತುಂಬುವವರೆಗೆ ಅಥವಾ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.
ಇದು ಅತ್ಯಂತ ಹೆಚ್ಚಿನ ಬಡ್ಡಿ ನೀಡುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು, ತೆರಿಗೆ ವಿನಾಯಿತಿಯ ಲಾಭವೂ ಸಿಗುತ್ತದೆ. ಮೂರನೆಯದಾಗಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ. ಇದರ ಅವಧಿ 5 ವರ್ಷಗಳು. ಖಚಿತವಾದ ಆದಾಯವನ್ನು ಬಯಸುವವರಿಗೆ ಮತ್ತು ತೆರಿಗೆ ಉಳಿಸಲು (Section 80C ಅಡಿಯಲ್ಲಿ) ಬಯಸುವವರಿಗೆ ಇದು ಒಳ್ಳೆಯದು.
ಬಡ್ಡಿಯು ಪ್ರತಿ ವರ್ಷ ಮರುಹೂಡಿಕೆಯಾಗುತ್ತದೆ ಮತ್ತು ಮುಕ್ತಾಯದ ನಂತರ ಒಟ್ಟಿಗೆ ಸಿಗುತ್ತದೆ. ನಾಲ್ಕನೆಯದಾಗಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ. ಇದರ ಅವಧಿ 5 ವರ್ಷಗಳು. ನೀವು ಒಮ್ಮೆಲೇ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ನಿರ್ದಿಷ್ಟ ಆದಾಯ (ಬಡ್ಡಿ ರೂಪದಲ್ಲಿ) ಪಡೆಯಲು ಬಯಸಿದರೆ ಇದು ಸೂಕ್ತ. ಇದು ಹಿರಿಯ ನಾಗರಿಕರಿಗೆ ಮತ್ತು ನಿವೃತ್ತರಿಗೆ ನಿಯಮಿತ ಆದಾಯ ಪಡೆಯಲು ತುಂಬಾ ಸಹಕಾರಿಯಾಗುತ್ತದೆ.
ಐದನೆಯದಾಗಿ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆ. ಇದರ ಅವಧಿ 1,2,3 ಅಥವಾ 5 ವರ್ಷಗಳು. ಬ್ಯಾಂಕ್‌ಗಳ ಫಿಕ್ಸೆಡ್ ಡೆಪಾಸಿಟ್ (FD) ನಂತೆಯೇ ಇದು ಕಾರ್ಯನಿರ್ವಹಿಸುತ್ತದೆ. 5 ವರ್ಷಗಳ ಅವಧಿಯ ಟೈಮ್ ಡೆಪಾಸಿಟ್ ಮೇಲೆ ಆದಾಯ ತೆರಿಗೆ ವಿನಾಯಿತಿ ಲಭ್ಯವಿದೆ. ಅಂಚೆ ಕಚೇರಿಯಲ್ಲಿ ಸಿಗುವ ಈ ಸಣ್ಣ ಉಳಿತಾಯ ಯೋಜನೆಗಳ ಪೈಕಿ ನಿಮಗೆ ಯಾವುದು ಉತ್ತಮ? ದೀರ್ಘಕಾಲೀನ ನಿಧಿ ಮತ್ತು ತೆರಿಗೆ ಉಳಿತಾಯಕ್ಕಾಗಿ ಪಿಪಿಎಫ್ ಅಥವಾ ಎನ್‌ಎಸ್‌ಸಿಯನ್ನು ಆಯ್ಕೆ ಮಾಡಬಹುದು.
ಹೆಣ್ಣುಮಗುವಿನ ಶಿಕ್ಷಣ/ಮದುವೆಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಆಯ್ಕೆ ಮಾಡಬಹುದು. ಪ್ರತಿ ತಿಂಗಳು ಖಚಿತ ಆದಾಯಕ್ಕಾಗಿ ಪೋಸ್ಟ್ ಆಫೀಸ್ ಎಂಐಎಸ್ ಉತ್ತಮ. ಪೋಸ್ಟ್ ಆಫೀಸ್ ಯೋಜನೆ ಗಳಲ್ಲಿ ಹೂಡಿಕೆ ಮಾಡಲು ಮತ್ತು ಗರಿಷ್ಠ ಆದಾಯ (ಬಡ್ಡಿ ಅಥವಾ ಹೂಡಿಕೆ ಮಿತಿ) ಪಡೆಯಲು ವಿವಿಧ ಯೋಜನೆಗಳಿಗೆ ಅನುಗುಣವಾಗಿ ಸರ್ಕಾರದ ನಿಯಮಗಳಿವೆ. ಪ್ರಮುಖ ಯೋಜನೆಗಳ ಗರಿಷ್ಠ ಹೂಡಿಕೆ ಮತ್ತು ಆದಾಯದ ಮಿತಿ ವಿವರಗಳನ್ನು ನೋಡೋಣ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಬ್ಬರಾದರೆ 9 ಲಕ್ಷ ರುಪಾಯಿ ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ರುಪಾಯಿ ಆದಾಯ ಗಳಿಸಬಹುದು. ಪ್ರಸ್ತುತ ಇದರ ಬಡ್ಡಿ ದರ ಶೇ.7.40ರಷ್ಟಿದೆ. ಇದರ ಪ್ರಕಾರ, ಜಂಟಿ ಖಾತೆಯಲ್ಲಿ 15 ಲಕ್ಷ ರುಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಸುಮಾರು 9250 ರುಪಾಯಿ ಖಚಿತವಾದ ಮಾಸಿಕ ಆದಾಯ ಪಡೆಯಬಹುದು.
ಪಬ್ಲಿಕ್ ಪ್ರಾವಿಡೆಂಟ್ -ಫಂಡ್‌ನಲ್ಲಿ ಗರಿಷ್ಠ ಹೂಡಿಕೆ ಮಿತಿ ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರುಪಾಯಿ. ಇದು ದೀರ್ಘಕಾಲೀನ (15 ವರ್ಷಗಳು) ಹೂಡಿಕೆಯಾಗಿದ್ದು, ಚಕ್ರಬಡ್ಡಿ (Compound Interest) ಆಧಾರದ ಮೇಲೆ ಬೆಳೆಯುತ್ತದೆ. ಪ್ರತಿವರ್ಷ 1.5 ಲಕ್ಷದಂತೆ ಹೂಡಿಕೆ ಮಾಡುತ್ತಾ ಬಂದರೆ, 15 ವರ್ಷಗಳ ಅವಽಯಲ್ಲಿ ಒಟ್ಟು ಹೂಡಿಕೆ ಮತ್ತು ಬಡ್ಡಿ ಸೇರಿ ಸುಮಾರು 40 ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಪೂರ್ಣ ತೆರಿಗೆ ಮುಕ್ತವಾಗಿ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ. ಹೆಣ್ಣುಮಗುವಿನ ಭವಿಷ್ಯಕ್ಕಾಗಿ ಬಡ್ಡಿ (ಪ್ರಸ್ತುತ ಶೇ.8.2) ನೀಡುವ ಯೋಜನೆ ಇದಾಗಿದೆ. ನಿಯಮಿತವಾಗಿ ಗರಿಷ್ಠ ಮೊತ್ತವನ್ನು ಹೂಡಿಕೆ ಮಾಡುವುದರಿಂದ ಮಗುವಿಗೆ 21 ವರ್ಷ ತುಂಬು ವಾಗ ಬಡ್ಡಿಯ ರೂಪದ ಲಕ್ಷಾಂತರ ರೂಪಾಯಿಗಳ ನಿಧಿ ಆದಾಯವಾಗಿ ಸಿಗುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮತ್ತು ಅವಧಿ ನಿಧಿ ಯೋಜನೆಗಳಿಗೆ ಸರ್ಕಾರದ ವತಿಯಿಂದ ಯಾವುದೇ ಗರಿಷ್ಠ ಹೂಡಿಕೆಯ ಮಿತಿ ಇರುವುದಿಲ್ಲ. ನೀವು ಎಷ್ಟು ಬೇಕಾದರೂ ಹಣವನ್ನು ಹೂಡಿಕೆ ಮಾಡಬಹುದು. ಆದರೆ 5 ವರ್ಷಗಳ ಎನ್‌ಎಸ್‌ಸಿ (NSC) ಅಥವಾ 5 ವರ್ಷಗಳ ಟೈಮ್ ಡಿಪಾಸಿಟ್ ಮೇಲೆ ಸೆಕ್ಷನ್ 80ಇ ಅಡಿಯಲ್ಲಿ 1.5 ಲಕ್ಷದವರೆಗೆ ಮಾತ್ರ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿರುತ್ತದೆ.
ಹೀಗಾಗಿ, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಾತ್ರಿಜೋರಾಗಿ ದ್ವಿಗುಣಗೊಳಿಸುವ ಶಾರ್ಟ್ ಕಟ್‌ಗಳ ಹಿಂದೆ ಓಡುವ ಬದಲು, ಶಿಸ್ತುಬದ್ಧ ಹೂಡಿಕೆಯ ಹಾದಿಯನ್ನು ಹಿಡಿಯುವುದು ಇಂದಿನ ತುರ್ತು ಅಗತ್ಯವಾಗಿದೆ. ಹಣ ಸಂಪಾದನೆಗೆ ಶ್ರಮವಿದೆಯೇ ವಿನಃ ಮ್ಯಾಜಿಕ್ ಇಲ್ಲ ಎನ್ನುವುದನ್ನು ಅರಿಯದಿದ್ದರೆ, FO ನ ಈ ಸುಳಿ ಮುಂದಿನ ದಿನಗಳಲ್ಲಿ ಇನ್ನೂ ಎಷ್ಟು ಕುಟುಂಬಗಳನ್ನು ಬೀದಿಪಾಲು ಮಾಡಲಿದೆಯೋ ಬಲ್ಲವರಾರು? ಸರ್ಕಾರ ಮತ್ತು ಸೆಬಿ ಈ ಹಾವಳಿಯನ್ನು ನಿಯಂತ್ರಿಸಲು ಕನಿಷ್ಠ ಲಾಟ್ ಗಾತ್ರವನ್ನು ಹೆಚ್ಚಿಸುವುದು ಮತ್ತು ವಾರದ ಕಾಂಟ್ರಾಕ್ಟ್‌ಗಳಿಗೆ ಕಡಿವಾಣ ಹಾಕುವಂತಹ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ, ಜನರ ಮನಸ್ಥಿತಿಯಲ್ಲಿ ಬದಲಾವಣೆ ಬಾರದೆ ಕೇವಲ ಕಾನೂನಿನಿಂದ ಮಾತ್ರ ಇದನ್ನು ತಡೆಯುವುದು ಕಷ್ಟ.