Keshava Prasad B Column: ವ್ಯವಹಾರಗಳು ಕಂಪನಿಗಳೊಂದಿಗಲ್ಲ, ಮನುಷ್ಯರೊಂದಿಗೆ!
‘ಬಯೋ ಏಷ್ಯಾ’ ಮತ್ತು ‘ಸೈಬರಾಬಾದ್’ ಖ್ಯಾತಿಯ ಹೈದರಾಬಾದ್‌ನಲ್ಲಿ ಜೈವಿಕ ತಂತ್ರಜ್ಞಾನ, ಔಷಧ ಕ್ಷೇತ್ರ ಮತ್ತು ಐಟಿ ಸ್ಟಾರ್ಟಪ್‌ಗಳ ಗಮನಾರ್ಹ ಪ್ರಗತಿಯನ್ನು ಕಾಣಬಹುದು. ಚೆನ್ನೆ ಮತ್ತು ಅಹಮದಾ ಬಾದ್‌ನಲ್ಲಿ ಸಾಂಪ್ರದಾಯಿಕ ಉತ್ಪಾದನೆ, ಸಾಫ್ಟ್ʼವೇರ್ ಸೇವೆಗಳು ಹಾಗೂ ಜವಳಿ ಉದ್ಯಮಗಳಲ್ಲಿ ಈ ನಗರಗಳಲ್ಲಿ ಸ್ವಂತ ಉದ್ಯೋಗ ಮತ್ತು ಸ್ಟಾರ್ಟಪ್‌ಗಳು ಹೆಚ್ಚುತ್ತಿವೆ.
-
ಮನಿ ಮೈಂಡೆಡ್
ಬೆಂಗಳೂರು ದೇಶದ ಸ್ಟಾರ್ಟಪ್ ರಾಜಧಾನಿ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ), ಫಿನ್‌ಟೆಕ್ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಅತಿ ಹೆಚ್ಚು ನವೋದ್ಯಮಗಳು ಇಲ್ಲಿ ಹುಟ್ಟಿಕೊಳ್ಳುತ್ತಿವೆ. ದಿಲ್ಲಿ, ಗುರುಗ್ರಾಮ ಮತ್ತು ನೋಯಿಡಾವನ್ನು ಒಳಗೊಂಡಿರುವ ಎನ್‌ಸಿಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್) ಪ್ರದೇಶವು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಇಲ್ಲಿ ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ಆಹಾರ ತಂತ್ರಜ್ಞಾನ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದೇಶದ ಆರ್ಥಿಕ ರಾಜಧಾನಿಯಾಗಿ ರುವ ಮುಂಬಯಿ, ಫಿನ್‌ಟೆಕ್, ಮಾಧ್ಯಮ, ಮನರಂಜನೆ ಮತ್ತು ಫ್ಯಾಷನ್ ಸ್ಟಾರ್ಟಪ್‌ಗಳ ಪ್ರಮುಖ ಕೇಂದ್ರವಾಗಿದೆ.
‘ಬಯೋ ಏಷ್ಯಾ’ ಮತ್ತು ‘ಸೈಬರಾಬಾದ್’ ಖ್ಯಾತಿಯ ಹೈದರಾಬಾದ್‌ನಲ್ಲಿ ಜೈವಿಕ ತಂತ್ರಜ್ಞಾನ, ಔಷಧ ಕ್ಷೇತ್ರ ಮತ್ತು ಐಟಿ ಸ್ಟಾರ್ಟಪ್‌ಗಳ ಗಮನಾರ್ಹ ಪ್ರಗತಿಯನ್ನು ಕಾಣಬಹುದು. ಚೆನ್ನೆ ಮತ್ತು ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ಉತ್ಪಾದನೆ, ಸಾಫ್ಟ್ʼವೇರ್ ಸೇವೆಗಳು ಹಾಗೂ ಜವಳಿ ಉದ್ಯಮಗಳಲ್ಲಿ ಈ ನಗರಗಳಲ್ಲಿ ಸ್ವಂತ ಉದ್ಯೋಗ ಮತ್ತು ಸ್ಟಾರ್ಟಪ್‌ಗಳು ಹೆಚ್ಚುತ್ತಿವೆ. ಆದರೆ ಯಾವುದೇ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಕೇವಲ ತಾಂತ್ರಿಕ ಪರಿಣತಿಯೊಂದೇ ಸಾಕಾಗುವು ದಿಲ್ಲ.
ಅದರಾಚೆಗೂ ಆಳವಾದ ಅರಿವು ಮತ್ತು ಕೌಶಲ್ಯದ ಅಗತ್ಯವಿದೆ. ಬಿಸಿನೆಸ್ ಜಗತ್ತಿನಲ್ಲಿ ವ್ಯಕ್ತಿಯೊಬ್ಬ ನನ್ನು ಪರಿಪೂರ್ಣ ಉದ್ಯಮಿಯನ್ನಾಗಿಸುವ ಪ್ರಮುಖ ಕೌಶಲಗಳು ಯಾವುವು ಎಂಬುದನ್ನು ನೋಡೋಣ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಸಾಂಪ್ರದಾಯಿಕ ಉದ್ಯೋಗಗಳಿಗೆ ಸೀಮಿತಗೊಳ್ಳದೆ, ಸ್ವಂತ ಬಿಸಿನೆಸ್ ಅಥವಾ ಸ್ಟಾರ್ಟಪ್ ಆರಂಭಿಸಲು ಅಪಾರ ಆಸಕ್ತಿ ವಹಿಸು ತ್ತಿದ್ದಾರೆ. ಇದಕ್ಕೆ ಹಲವು ಪ್ರಮುಖ ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ಕಾರಣಗಳಿವೆ.
ಇದನ್ನೂ ಓದಿ; Keshava Prasad B Column: ಬಿಲಿಯೇರ್ ಎಂದರೆ ಯಾರು? ಅವರೆಲ್ಲರೂ ಹುಟ್ಟುವಾಗಲೇ ಶ್ರೀಮಂತರೇ?
ಭಾರತ ಸರಕಾರದ ‘ಸ್ಟಾರ್ಟಪ್ ಇಂಡಿಯಾ’ನಂತಹ ಉಪಕ್ರಮಗಳು, ಸುಲಭವಾಗಿ ಸಿಗುವ ಬಂಡವಾಳ ಮತ್ತು ಇನ್ಕ್ಯುಬೇಷನ್ ಸೆಂಟರ್‌ಗಳು ಯುವಕರಿಗೆ ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿವೆ. ಇಂಟರ್ನೆಟ್, ಸ್ಮಾರ್ಟ್ʼಫೋನ್‌ಗಳು ಮತ್ತು ಎಐ ತಂತ್ರಜ್ಞಾನಗಳು ಎಲ್ಲರಿಗೂ ಕೈಗೆಟುಕುವಂತಾಗಿವೆ. ಇದರಿಂದಾಗಿ ಕಡಿಮೆ ಬಂಡವಾಳ ದೊಂದಿಗೆ ಮನೆಯಿಂದಲೇ ಇ-ಕಾಮರ್ಸ್, ಡಿಜಿಟಲ್ ಮಾರ್ಕೆಟಿಂಗ್ ಅಥವಾ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಆರಂಭಿಸುವುದು ಸುಲಭವಾಗಿದೆ.
ಒಂಬತ್ತರಿಂದ ಐದರ ವರೆಗಿನ ಕಚೇರಿ ಕೆಲಸದ ಬದಲು ತಮ್ಮದೇ ಆದ ಕನಸುಗಳನ್ನು ನೆನೆಸಿ ಕೊಳ್ಳಲು, ಸ್ವಾವಲಂಬಿಗಳಾಗಲು ಮತ್ತು ಸಮಾಜಕ್ಕೆ ಹೊಸ ಪರಿಹಾರಗಳನ್ನು ನೀಡಲು ಇಂದಿನ ಯುವಕರು ಬಯಸುತ್ತಿದ್ದಾರೆ. ಫ್ರೀಲ್ಯಾನ್ಸಿಂಗ್, ಕಂಟೆಂಟ್ ಕ್ರಿಯೇಷನ್, ಡೆಲಿವರಿ ಹಾಗೂ ವಿವಿಧ ಸೇವಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಗಳಿಕೆ ಮಾಡುವ ಅವಕಾಶಗಳು ಹೆಚ್ಚಾಗಿರುವುದರಿಂದ ಯುವ ಜನತೆ ಉದ್ಯೋಗ ಹುಡುಕುವವರಾಗುವುದಕ್ಕಿಂತ ಉದ್ಯೋಗ ಸೃಷ್ಟಿಸುವವರಾಗಲು ಮುಂದಾ ಗುತ್ತಿದ್ದಾರೆ.
ಹಾಗಾದರೆ ಉದ್ಯಮಿಯ ವ್ಯಕ್ತಿತ್ವ ಹೇಗಿರಬೇಕು? ಯಾವುದೇ ವ್ಯವಹಾರದ ಮೊದಲ ಮತ್ತು ಅನಿವಾರ್ಯ ಮೆಟ್ಟಿಲು ತಾರ್ಕಿಕ ಚಿಂತನೆ. ಪ್ರತಿದಿನ ಒಬ್ಬ ಉದ್ಯಮಿಯು ನೂರಾರು ಸವಾಲು ಗಳನ್ನು, ಗೊಂದಲಗಳನ್ನು ಮತ್ತು ಅಪರಿಚಿತ ಪರಿಸ್ಥಿತಿ ಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಭಾವುಕರಾಗದೆ, ಪರಿಸ್ಥಿತಿಯ ಆಳಕ್ಕಿಳಿದು ವಸ್ತುನಿಷ್ಠವಾಗಿ ಯೋಚಿಸುವುದೇ ತಾರ್ಕಿಕ ಚಿಂತನೆ. ದೊಡ್ಡದಾದ ಸಮಸ್ಯೆಯನ್ನು ಸಣ್ಣ ಸಣ್ಣ ತುಂಡುಗಳಾಗಿ ವಿಂಗಡಿಸಿ, ಪ್ರತಿಯೊಂದಕ್ಕೂ ಪ್ರತ್ಯೇಕ ಪರಿಹಾರ ಹುಡುಕುವ ಕಲೆಗೆ ಇದು ಅವಶ್ಯಕ.
ಡೇಟಾ ಆಧಾರಿತ ನಿರ್ಧಾರಗಳು ಕೂಡ ಮುಖ್ಯವಾಗುತ್ತದೆ. ಬಿಸಿನೆಸ್‌ನಲ್ಲಿ ವಿಶ್ವಾಸ ಮುಖ್ಯ ವಾದರೂ, ಅಂಕಿ-ಅಂಶಗಳು, ಮಾರುಕಟ್ಟೆ ಸಮೀಕ್ಷೆ ಮತ್ತು ವಾಸ್ತವಿಕ ಮಾಹಿತಿಯ ಆಧಾರದ ಮೇಲೆ ನಿರ್ಧಾರ ಗಳನ್ನು ಕೈಗೊಳ್ಳಬೇಕು. ಒಂದು ನಿರ್ಧಾರ ತೆಗೆದುಕೊಂಡರೆ ಭವಿಷ್ಯದಲ್ಲಿ ಅದರಿಂದ ಉಂಟಾಗುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಮುಂಚಿತವಾಗಿ ಊಹಿಸುವ ಸಾಮರ್ಥ್ಯ ಇರಬೇಕು. ಯಾವಾಗಲೂ ವ್ಯವಹಾರಗಳು ಕಂಪನಿಗಳೊಂದಿಗೆ ಅಲ್ಲ, ಬದಲಿಗೆ ಮನುಷ್ಯರೊಂದಿಗೆ ನಡೆಯುತ್ತವೆ. ಜನರನ್ನು ಅರ್ಥ ಮಾಡಿಕೊಳ್ಳದೆಯೇ ಯಶಸ್ವಿ ಬಿಸಿನೆಸ್ ಸ್ಥಾಪಿಸಲು ಸಾಧ್ಯವೇ ಇಲ್ಲ. ಸಮಾಜದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವವನೇ ಬಿಸಿನೆಸ್ ಮ್ಯಾನ್.
ಗ್ರಾಹಕರು, ಉದ್ಯೋಗಿಗಳು, ಪಾಲುದಾರರು ಮತ್ತು ಪೂರೈಕೆದಾರರು- ಎಲ್ಲರೂ ಭಾವನೆಗಳು, ಆಸೆಗಳು ಮತ್ತು ಭಯಗಳನ್ನು ಹೊಂದಿರುವ ಜೀವಗಳು. ಇತರರನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಅವರ ಮಾನಸಿಕತೆ ಮತ್ತು ಅಗತ್ಯಗಳನ್ನು ಗ್ರಹಿಸುವುದು. ಗ್ರಾಹಕನು ತಾನು ಖರೀದಿಸು ತ್ತಿರುವ ವಸ್ತುವಿನ ಜೊತೆಗೆ ಯಾವುದೋ ಒಂದು ಭಾವನಾತ್ಮಕ ತೃಪ್ತಿಯನ್ನು ಖರೀದಿಸುತ್ತಿರುತ್ತಾನೆ. ಅವರ ಆಳವಾದ ನೋವುಗಳು ಮತ್ತು ಆಸೆಗಳನ್ನು ಅರಿಯುವುದು ಮುಖ್ಯ. ಇನ್ನೊಬ್ಬರ ಜಾಗದಲ್ಲಿ ನಿಂತು ಜಗತ್ತನ್ನು ನೋಡುವುದು ಕೂಡ ಉದ್ಯಮಿಯ ಲಕ್ಷಣ.
ಉದ್ಯೋಗಿಯೊಬ್ಬನ ವೈಯಕ್ತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನಾಯಕ ಮಾತ್ರ ಅವನಿಂದ ಅತ್ಯುತ್ತಮ ಕೆಲಸವನ್ನು ಹೊರ ತೆಗೆಯಬಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ಅವರ ಹಿನ್ನೆಲೆ, ಸಂಸ್ಕೃತಿ ಮತ್ತು ಆಲೋಚನಾ ಲಹರಿಗೆ ತಕ್ಕಂತೆ ಅವರೊಂದಿಗೆ ವ್ಯವಹರಿಸುವುದು ವ್ಯವಹಾರದ ಯಶಸ್ಸಿಗೆ ಬುನಾದಿ. ಒಂದು ವ್ಯವಹಾರವನ್ನು ಒಮ್ಮೆ ಮಾರಾಟ ಮಾಡುವುದು ಸುಲಭ. ಆದರೆ ಆ ಗ್ರಾಹಕನನ್ನು ದೀರ್ಘಾವಧಿಗೆ ಉಳಿಸಿಕೊಳ್ಳುವುದು ಸಂಬಂಧಗಳ ಮೇಲೆ ನಿಂತಿದೆ.
ಸಂಬಂಧಗಳು ಎಂದರೆ ಕೇವಲ ವ್ಯಾಪಾರೀ ಒಪ್ಪಂದಗಳಲ್ಲ, ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ಬೆಸುಗೆ. ನಂಬಿಕೆ ಎಂಬುದು ಒಂದೇ ರಾತ್ರಿಯಲ್ಲಿ ಹುಟ್ಟುವುದಿಲ್ಲ. ಸಣ್ಣಪುಟ್ಟ ಮಾತುಗಳನ್ನು ಉಳಿಸಿಕೊಳ್ಳುವು ದರಿಂದ, ಪಾರದರ್ಶಕವಾಗಿ ಇರುವುದರಿಂದ ಮತ್ತು ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವುದರಿಂದ ಉಳಿದು ಬೆಳೆಯುತ್ತದೆ.
ನೆಟ್‌ವರ್ಕಿಂಗ್ ಪದವನ್ನು ನೀವು ಕೇಳಿರಬಹುದು. ಇವತ್ತು ಉದ್ಯಮದಲ್ಲಿ ಸರಿಯಾದ ವ್ಯಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಅವಕಾಶ ಬಾಗಿಲುಗಳನ್ನು ತೆರೆಯುತ್ತದೆ. ಇದು ಕೇವಲ ಹೊಸ ಗ್ರಾಹಕರನ್ನು ತರಲು ಮಾತ್ರವಲ್ಲ, ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಹಸ್ತ ಚಾಚಲು ಮುಖ್ಯ. ನೆಟ್‌ವರ್ಕ್ ಯಾವುದೇ ಉದ್ಯಮಿಗೆ ಇರಬೇಕಾದ ದೊಡ್ಡ ಆಸ್ತಿ. ಯಾವುದೇ ಸಂಬಂಧ ದೀರ್ಘಕಾಲ ಉಳಿಯಬೇಕಾದರೆ ಅಲ್ಲಿ ಉಭಯ ಪಕ್ಷಗಳಿಗೂ ಪ್ರಯೋಜನವಿರಬೇಕು.
ಏಕಪಕ್ಷೀಯವಾದ ಲಾಭದ ಆಸೆ ದೀರ್ಘಕಾಲದಲ್ಲಿ ಸಂಬಂಧವನ್ನು ಮುರಿಯುತ್ತದೆ. ನೀವು ಎಷ್ಟೇ ಅದ್ಭುತವಾದ ಉತ್ಪನ್ನವನ್ನು ಹೊಂದಿರಬಹುದು ಅಥವಾ ಕ್ರಾಂತಿಕಾರಿ ಕಲ್ಪನೆಯನ್ನು ಹೊಂದಿರ ಬಹುದು, ಆದರೆ ಅದನ್ನು ಇತರರಿಗೆ ಸಮರ್ಥವಾಗಿ ತಲುಪಿಸಲು ಬಾರದಿದ್ದರೆ ಅದು ವ್ಯರ್ಥ. ಸಂವಹನ ಕೇವಲ ಮಾತನಾಡುವುದಲ್ಲ, ಅದಕ್ಕಿಂತ ಹೆಚ್ಚಾಗಿ ಕೇಳಿಸಿಕೊಳ್ಳುವುದು ಮತ್ತು ಭಾವನೆ ಗಳನ್ನು ಸರಿಯಾಗಿ ವರ್ಗಾಯಿಸುವುದು.
ನೀವು ಯಾವುದೋ ಬಿಸಿನೆಸ್ ಮಾಡುತ್ತೀರಾ. ಅದರ ಕ್ಲಿಷ್ಟಕರವಾದ ವಿಷಯಗಳನ್ನು ಸಹ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸುವ ಸಾಮರ್ಥ್ಯ ನಿಮ್ಮಲ್ಲಿದ್ದರೆ ಮಾತ್ರ ನಡೆಯು ತ್ತದೆ. ಆದರೆ ಉತ್ತಮ ಸಂವಹನಕಾರನಾಗಲು ಮೊದಲು ಒಳ್ಳೆಯ ಶ್ರೋತೃ ಆಗಿರಬೇಕು. ಎದುರಿ ನವರು ಏನು ಹೇಳುತ್ತಿzರೆ ಎಂಬುದನ್ನು ಪೂರ್ತಿಯಾಗಿ ಗ್ರಹಿಸಬೇಕು. ಸರಿಯಾದ ಸಂವಹನವು ಕಂಪನಿಯ ಒಳಗಿನ ತಪ್ಪು ತಿಳುವಳಿಕೆಗಳನ್ನು ನಿವಾರಿಸುತ್ತದೆ ಮತ್ತು ಹೊರಗೆ ಬ್ರಾಂಡ್ ಮೌಲ್ಯ ವನ್ನು ಹೆಚ್ಚಿಸುತ್ತದೆ.
ಮಾರಾಟ ಎಂದರೆ ಕೇವಲ ವಸ್ತುವನ್ನು ಒತ್ತಾಯಪೂರ್ವಕವಾಗಿ ಒಪ್ಪಿಸುವುದಲ್ಲ; ಬದಲಿಗೆ ಮೌಲ್ಯವನ್ನು ವರ್ಗಾಯಿಸುವುದು. ಗ್ರಾಹಕನಿಗೆ ತಾನು ನೀಡುವ ಹಣಕ್ಕಿಂತ ತಾನು ಪಡೆಯುವ ವಸ್ತು ಹೆಚ್ಚಿನ ಮೌಲ್ಯದ್ದಾಗಿದೆ ಎಂದು ಮನವರಿಕೆ ಮಾಡಿಕೊಡುವುದೇ ಬಿಸಿನೆಸ್. ನಿಮ್ಮ ಉತ್ಪನ್ನವು ಗ್ರಾಹಕನ ಯಾವ ಸಮಸ್ಯೆಯನ್ನು ನಿವಾರಿಸುತ್ತದೆ ಎಂಬುದನ್ನು ತೋರಿಸಿಕೊಡುವು ದಕ್ಕೆ ಸಂವಹನ ಕೌಶಲ ಮುಖ್ಯ. ಗ್ರಾಹಕರು ನಿಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಬೇಡ ಎಂದಾಗ ಅಲ್ಲಿಂದ ಹಿಂದೆ ಸರಿಯದೆ, ಅವರ ಸಂದೇಹಗಳನ್ನು ತಾಳ್ಮೆಯಿಂದ ನಿವಾರಿಸುವುದು ನಿಜವಾದ ಮಾರಾಟಗಾರನ ಲಕ್ಷಣ. ಉತ್ಪನ್ನದ ಮೇಲೆ ನಿಮಗಿರುವ ಅಚಲ ನಂಬಿಕೆ ಮತ್ತು ಪ್ರಾಮಾಣಿಕತೆ ಗ್ರಾಹಕರನ್ನು ಸೆಳೆಯುತ್ತದೆ.
ನಿಮ್ಮ ಕಂಪನಿ ಎಲ್ಲಿಗೆ ತಲುಪಬೇಕು ಎಂಬ ಸ್ಪಷ್ಟ ಚಿತ್ರಣವನ್ನು ಹೊಂದಿರುವುದು ಮತ್ತು ಅದನ್ನು ತನ್ನ ತಂಡಕ್ಕೆ ಮನವರಿಕೆ ಮಾಡಿಕೊಡುವುದು ಅಷ್ಟೇ ಮುಖ್ಯ. ಯಶಸ್ಸು ಬಂದಾಗ ಅದರ ಕ್ರೆಡಿಟ್ ಅನ್ನು ತಂಡಕ್ಕೆ ನೀಡುವುದು ಮತ್ತು ಸೋಲು ಬಂದಾಗ ಮುಂಚೂಣಿಯಲ್ಲಿ ನಿಂತು ಜವಾಬ್ದಾರಿ ಹೊತ್ತುಕೊಳ್ಳು ವುದು. ಕಷ್ಟದ ಕಾಲದಲ್ಲಿ ತಂಡದ ನೈತಿಕ ಸ್ಥೈರ್ಯವನ್ನು ಕುಗ್ಗದಂತೆ ಕಾಪಾಡುವುದು ಮತ್ತು ನಿರಂತರವಾಗಿ ಅವರನ್ನು ಹುರಿದುಂಬಿಸುವುದು ಅಗತ್ಯ. ನಿಜವಾದ ನಾಯಕನು ಇತರರನ್ನು ಅನುಯಾಯಿಗಳನ್ನಾಗಿ ಮಾಡುವುದಿಲ್ಲ, ಬದಲಿಗೆ ಮತ್ತಷ್ಟು ನಾಯಕ ರನ್ನು ಸೃಷ್ಟಿಸುತ್ತಾನೆ.
ಇಟಲಿಯ ಪ್ರಸಿದ್ಧ ಉದ್ಯಮಿ, ಬಿಲಿಯನೇರ್ ಹೂಡಿಕೆದಾರ ಲಿರಿಯೊ ಪ್ಯಾರಿಸೊಟ್ಟೊ ಅವರ ಬಿಸಿನೆಸ್ ಸಿದ್ಧಾಂತವು ಅತ್ಯಂತ ಸರಳ, ವಾಸ್ತವಿಕ ಮತ್ತು ಮನುಷ್ಯ-ಕೇಂದ್ರಿತ ತತ್ವಗಳ ಮೇಲೆ ಆಧಾರಿತವಾಗಿದೆ. ‘ಬಿಸಿನೆಸ್ ಈಸ್ ಆಲ್ ಅಬೌಟ್ ಪೀಪಲ್’ ಎಂಬುದು ಅವರ ಜನಪ್ರಿಯ ಸಿದ್ಧಾಂತ. ಯಾವುದೇ ಕಂಪನಿ, ಕಾರ್ಖಾನೆ, ತಂತ್ರಜ್ಞಾನ ಅಥವಾ ಹಣಕಾಸು ಬಂಡವಾಳಕ್ಕಿಂತ ಆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮನುಷ್ಯರು (ಜನರು) ಅತ್ಯಂತ ಮುಖ್ಯ.
ಗ್ರಾಹಕರು, ಉದ್ಯೋಗಿಗಳು, ಪಾಲುದಾರರು ಮತ್ತು ಪೂರೈಕೆದಾರರೊಂದಿಗೆ ಪ್ರಾಮಾಣಿಕವಾದ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದೇ ಉದ್ಯಮದ ಅತಿ ದೊಡ್ಡ ಆಸ್ತಿ ಎಂದು ಅವರು ನಂಬುತ್ತಾರೆ. ಐಷಾರಾಮಿ ಕಚೇರಿಗಳಲ್ಲಿ ಕುಳಿತುಕೊಂಡು ಕೇವಲ ಕಾಗದದ ಮೇಲೆ ಪ್ಲಾನ್ ಮಾಡುವು ದಕ್ಕಿಂತ, ಮೈಬೆವರು ಸುರಿಸಿ ಮಾರುಕಟ್ಟೆಯ ವಾಸ್ತವತೆಯನ್ನು ಅರಿತುಕೊಳ್ಳುವುದು ಮುಖ್ಯ. ಕೆಲಸದ ಬಗ್ಗೆ ಸಂಪೂರ್ಣ ಸಮರ್ಪಣಾ ಭಾವವಿರಬೇಕು. ಯಾವುದೇ ವ್ಯವಹಾರದಲ್ಲಿ ರಾತ್ರೋರಾತ್ರಿಯೇ ಕೋಟ್ಯಧಿಪತಿಯಾಗಲು ಸಾಧ್ಯವಿಲ್ಲ. ತ್ವರಿತ ಲಾಭಕ್ಕಿಂತ ದೀರ್ಘಕಾಲೀನ ಮೌಲ್ಯ ಸೃಷ್ಟಿಗೆ ಹೆಚ್ಚು ಪ್ರಾಮುಖ್ಯ ನೀಡಬೇಕು. ತಾಳ್ಮೆ, ದೃಢತೆ ಮತ್ತು ದೂರದೃಷ್ಟಿ ಇದ್ದರೆ ಮಾತ್ರ ಮಾರುಕಟ್ಟೆಯಲ್ಲಿ ಶಾಶ್ವತವಾಗಿ ನಿಲ್ಲಲು ಸಾಧ್ಯ ಎಂಬುದು ಅವರ ನಂಬಿಕೆ.
ಬಿಸಿನೆಸ್ ಮಾಡುವುದು ಎಂದರೆ ಜನರ ಜತೆಗೆ ಸಂಬಂಧಗಳನ್ನು ನಿರ್ಮಿಸುವುದು. ಬಿಲಿಯನೇರ್ ಗಳು ಮಾಡೋದು ಇದನ್ನೇ. ಬಿಲಿಯನೇರ್ ಉದ್ಯಮಿ ನವೀನ್ ಜೈನ್ ಹೀಗೆನ್ನುತ್ತಾರೆ- ನನ್ನ ಪ್ರಕಾರ ಪ್ರತಿಯೊಂದೂ ಜನರಿಂದಲೇ ನಡೆಯುತ್ತದೆ. ಐಬಿಎಂ ಜತೆಗೆ ಒಂದು ವ್ಯವಹಾರವನ್ನು ಕುದುರಿಸ ಬೇಕೆಂದು ಬಯಸಿದೆ ಎಂದಿಟ್ಟುಕೊಳ್ಳಿ. ನಾನು ಆಗ ಐಬಿಎಂ ಅನ್ನು ಕೇವಲ ಒಂದು ಕಂಪನಿಯಾಗಿ ನೋಡುವುದಿಲ್ಲ. ಏಕೆಂದರೆ ಐಬಿಎಂನಲ್ಲಿ ವ್ಯವಹರಿಸುವ ವ್ಯಕ್ತಿಗಳು ಇದ್ದಾರೆ. ನಾನು ಅವರೊಂದಿ ಗೆ ಮಾತನಾಡಬೇಕಾಗುತ್ತದೆ. ಆ ವ್ಯಕ್ತಿಗಳ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗುತ್ತದೆ.
ಯಶಸ್ವಿ ಉದ್ಯಮಿಗೆ ಇರಬೇಕಾದ ಅನೇಕ ಗುಣಗಳು ರತನ್ ಟಾಟಾ ಅವರಲ್ಲಿ ಇತ್ತು. ಅವರ ವರ್ಚಸ್ಸಿನಿಂದ, ಪ್ರಬುದ್ಧ ನಾಯಕತ್ವದಿಂದ ಸಣ್ಣಪುಟ್ಟ ಮನಸ್ತಾಪಗಳು ಬಹಿರಂಗವಾಗು ತ್ತಿರಲಿಲ್ಲ. ಆದರೆ ರತನ್ ಟಾಟಾ ನಿರ್ಗಮನದ ಬಳಿಕ ಟಾಟಾ ಸಮೂಹದಲ್ಲಿ ಹಿಂದೆ ಇರದಿದ್ದ ಭಿನ್ನಾಭಿಪ್ರಾಯಗಳು ತಾರಕಕ್ಕೇರಿರುವುದನ್ನು ಕಾಣಬಹುದು.
ರತನ್ ಟಾಟಾ ಅವರು ನಾಯಕತ್ವಕ್ಕೆ ಹೊಸ ಅರ್ಥ ನೀಡಿದರು. ಟಾಟಾ ಸಮೂಹವನ್ನು ಅವರು ಭಾರತೀಯ ಸಂಸ್ಥೆಯಿಂದ ಜಾಗತಿಕ ಸಂಸ್ಥೆಯಾಗಿ ಪರಿವರ್ತಿಸಿದರು. ಜಾಗ್ವಾರ್- ಲ್ಯಾಂಡ್ ರೋವರ್ ಸ್ವಾಧೀನದಿಂದ ಹಿಡಿದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟಾಟಾ ಬ್ರ್ಯಾಂಡ್ ಅನ್ನು ಸ್ಥಾಪಿಸಿದ ಅವರ ನಿರ್ಧಾರಗಳು, ಅವರ ಧೈರ್ಯ ಮತ್ತು ದೂರದೃಷ್ಟಿಯನ್ನು ಪ್ರತಿಬಿಂಬಿ ಸುತ್ತವೆ. ಅತ್ಯಂತ ಮುಖ್ಯವಾಗಿ, ಅವರು ನಾಯಕ ಅಂದರೆ ಅಧಿಕಾರ ನಡೆಸುವವನಲ್ಲ, ಬದಲಿಗೆ ಇತರರನ್ನು ಎತ್ತಿ ಹಿಡಿಯುವವನು ಎಂಬುದನ್ನು ಸಾಬೀತುಪಡಿಸಿದರು. ಟಿಸಿಎಸ್‌ನ ಸಿಇಒ ಆಗಿದ್ದ ಎನ್.ಚಂದ್ರಶೇಖರನ್ ಅವರ ಅಗಾಧ ಪ್ರತಿಭೆಯನ್ನು ಮನಗಂಡು ಅವರಿಗೇ ಟಾಟಾ ಸಮೂಹದ ಚುಕ್ಕಾಣಿಯನ್ನು ವಹಿಸಿದ್ದರು!
ಟಾಟಾ ಸನ್ಸ್ ಅಧ್ಯಕ್ಷರಾದ ಎನ್.ಚಂದ್ರಶೇಖರನ್ ಮತ್ತು ಟಾಟಾ ಟ್ರಸ್ಟ್ ಅಧ್ಯಕ್ಷರಾದ ನೋಯೆಲ್ ಟಾಟಾ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳು ಮತ್ತು ಮಂಡಳಿಯ ಆಂತರಿಕ ಒಡಕು ಗಳು ಕಾರ್ಪೊರೇಟ್ ವಲಯದಲ್ಲಿ ಚರ್ಚೆಗೀಡಾಗಿದೆ. 2027ರ ಫೆಬ್ರವರಿಯಲ್ಲಿ ತಮ್ಮ ಅಧಿಕಾರಾ ವಧಿ ಪೂರ್ಣ ಗೊಂಡ ಬಳಿಕ ಹುzಯಿಂದ ನಿರ್ಗಮಿಸುವುದಾಗಿ ಚಂದ್ರಶೇಖರನ್ ಘೋಷಿಸಿದ್ದಾರೆ. ಈ ಬೆಳವಣಿಗೆಗೆ ಭಿನ್ನಾಭಿಪ್ರಾಯಗಳೇ ಪ್ರಮುಖ ಕಾರಣ ಎಂಬ ಮಾತಿದೆ. ಸೂಕ್ಷ್ಮವಾಗಿ ಗಮನಿಸಿ. ಸಾವಿರಾರು ಕೋಟಿ ರುಪಾಯಿಗಳ ಉದ್ದಿಮೆ ಸಾಮ್ರಾಜ್ಯವನ್ನೇ ಕಟ್ಟಿರಬಹುದು. ಸಂಬಂಧಗಳೇ ಅದರ ಸ್ಥಿರವಾದ ಬೆಳವಣಿಗೆಗೆ ಬುನಾದಿಯಾಗಿರುತ್ತದೆ, ಅಲ್ಲವೇ?