ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ನಮ್ಮ ವೈದ್ಯರು ಈ ಲಾಂಛನವನ್ನೇಕೆ ಆಯ್ದುಕೊಂಡರು ?

ಮಾನವ ಜನಾಂಗದಲ್ಲಿ ಲಾಂಛನಗಳು ಅನಾದಿ ಕಾಲದಿಂದಲೂ ಪ್ರಧಾನ ಪಾತ್ರವನ್ನು ವಹಿಸುತ್ತಾ ಬಂದಿವೆ. ನಮ್ಮ ಪೂರ್ವಜರು ತಮ್ಮ ತಮ್ಮ ಗುಂಪುಗಳನ್ನು ನಿಖರವಾಗಿ ಪತ್ತೆ ಹಚ್ಚಲು ಹಾಗೂ ಜಗತ್ತಿಗೆ ತಿಳಿಸಲು ತಮ್ಮದೇ ಆದ ಚಿಹ್ನೆಗಳನ್ನು ಬಳಸುತ್ತಿದ್ದರು. ಕ್ರಿ.ಶ.3-4ನೆಯ ಶತಮಾನದಲ್ಲಿ ರಚನೆಯಾದ ವಿಮಲಸೂರಿಯ ‘ಪೌಮಚರಿತೆ’ ಅಥವಾ ‘ಪದ್ಮಚರಿತ್ರೆ’ಯು ಒಂದು ಜೈನ ರಾಮಾಯಣದ ಕೃತಿ. ಇದರಲ್ಲಿ ಕವಿಯು ವಾನರರನ್ನು ಮನುಷ್ಯರೆಂದೇ ಚಿತ್ರಿಸುತ್ತಾ, ಅವರ ಕುಲಲಾಂಛನವು (ಟೋಟೆಮ್) ‘ವಾನರ’ ವಾಗಿತ್ತು ಎಂದು ದಾಖಲಿಸಿದ್ದಾನೆ.

ಹಿಂದಿರುಗಿ ನೋಡಿದಾಗ

naasomeswara@gmail.com

ಅಮೆರಿಕದಲ್ಲಿ ನಡೆಯುವ ವೈದ್ಯಕೀಯ ಸಂಶೋಧನೆಗಳು, ಅಮೆರಿಕನ್ನರು ಬರೆದ ಪಠ್ಯ ಪುಸ್ತಕಗಳು ನಮ್ಮ ಮೇಲೆ ಹೆಚ್ಚು ಪ್ರಭಾವ ಬೀರುತ್ತಿವೆ. ಹಾಗಾಗಿ ಭಾರತದಲ್ಲಿ ವೈದ್ಯಕೀಯ ಲಾಂಛನಗಳ ಬಳಕೆ ಕಲಸುಮೇಲೋಗರವಾಗಿದೆ. ಇಲ್ಲಿ ಎರಡೂ ಲಾಂಛನ ಗಳ ಬಳಕೆಯಿದೆ. ಹಾಗೆಯೇ ಜಗತ್ತಿನ ವಿವಿಧ ದೇಶಗಳ ವೈದ್ಯರು ಎರಡೂ ಲಾಂಛನಗಳನ್ನು ಸರಿಸಮನಾಗಿ ಬಳಸುತ್ತಾ ಬಂದಿರುವುದರ ಜತೆಗೆ ತಮ್ಮ ಲಾಂಛನವನ್ನು ಸಮರ್ಥಿಸುವಂಥ ಹೊಸ ಹೊಸ ಅರ್ಥಗಳನ್ನು ಹೊರ ಹೊಮ್ಮಿಸುತ್ತಿದ್ದಾರೆ. ಅವು ಬಹಳ ಕುತೂಹಲಕರ ವಾಗಿವೆ:

ಮಾನವ ಜನಾಂಗದಲ್ಲಿ ಲಾಂಛನಗಳು ಅನಾದಿ ಕಾಲದಿಂದಲೂ ಪ್ರಧಾನ ಪಾತ್ರವನ್ನು ವಹಿಸುತ್ತಾ ಬಂದಿವೆ. ನಮ್ಮ ಪೂರ್ವಜರು ತಮ್ಮ ತಮ್ಮ ಗುಂಪುಗಳನ್ನು ನಿಖರವಾಗಿ ಪತ್ತೆ ಹಚ್ಚಲು ಹಾಗೂ ಜಗತ್ತಿಗೆ ತಿಳಿಸಲು ತಮ್ಮದೇ ಆದ ಚಿಹ್ನೆಗಳನ್ನು ಬಳಸುತ್ತಿದ್ದರು. ಕ್ರಿ.ಶ.3-4ನೆಯ ಶತಮಾನದಲ್ಲಿ ರಚನೆಯಾದ ವಿಮಲಸೂರಿಯ ‘ಪೌಮಚರಿತೆ’ ಅಥವಾ ‘ಪದ್ಮಚರಿತ್ರೆ’ಯು ಒಂದು ಜೈನ ರಾಮಾಯಣದ ಕೃತಿ. ಇದರಲ್ಲಿ ಕವಿಯು ವಾನರರನ್ನು ಮನುಷ್ಯರೆಂದೇ ಚಿತ್ರಿಸುತ್ತಾ, ಅವರ ಕುಲಲಾಂಛನವು (ಟೋಟೆಮ್) ‘ವಾನರ’ ವಾಗಿತ್ತು ಎಂದು ದಾಖಲಿಸಿದ್ದಾನೆ.

ಈ ರೀತಿಯ ಕುಲ ಲಾಂಛನವನ್ನು ಎಲ್ಲ ಕಾಲದ, ಎಲ್ಲ ದೇಶದ ಜನರೂ ಬಳಸುತ್ತಾ ಬಂದಿರುವು ದನ್ನು ನಾವು ನೋಡುತ್ತಿದ್ದೇವೆ. ಭಾರತವು ಸ್ವಾತಂತ್ರ್ಯವನ್ನು ಪಡೆದ ಮೇಲೆ ಅಶೊಕ ಚಕ್ರವರ್ತಿಯ ನಾಲ್ಕು ಸಿಂಹಗಳ ಶಿಲ್ಪವನ್ನೇ ನಮ್ಮ ದೇಶದ ಲಾಂಛನವನ್ನಾಗಿ ಸ್ವೀಕರಿಸಿದ್ದೇವೆ. ಲಾಂಛನವನ್ನು ಬಳಸುವ ಪದ್ಧತಿಯು ಕೇವಲ ದೇಶಗಳಿಗೆ ಇಲ್ಲವೇ ಬುಡಕಟ್ಟುಗಳಿಗಷ್ಟೇ ಸೀಮಿತವಾಗಿಲ್ಲ, ಹಲವು ವೃತ್ತಿಪರರೂ ತಮ್ಮದೇ ಆದ ಲಾಂಛನಗಳನ್ನು ರೂಪಿಸಿಕೊಂಡಿದ್ದಾರೆ.

ಅಂಥ ವೃತ್ತಿಗಳಲ್ಲಿ ವೈದ್ಯಕೀಯ ವೃತ್ತಿಯೂ ಮುಖ್ಯವಾದದ್ದು. ನಾವು ಜಗತ್ತಿನ ಯಾವುದೇ ದೇಶದ, ಯಾವುದೇ ಆಧುನಿಕ ವೈದ್ಯಕೀಯ ಆಸ್ಪತ್ರೆಯ ಮುಂದೆ ನಡೆದುಕೊಂಡು ಹೋಗುವಾಗಲೂ, ಥಟ್ಟನೆ ನಮ್ಮ ಗಮನವನ್ನು ಒಂದು ‘ಉರಗದಂಡ’ದ ಲಾಂಛನವು ಸೆಳೆಯುತ್ತದೆ.

ಇದನ್ನೂ ಓದಿ: Dr N Someshwara Column: ಅಪಸ್ಮಾರಿಗಳ ಬದುಕನ್ನು ಸಹನೀಯವಾಗಿಸಿದೆ ನಮ್ಮ ಸಂವಿಧಾನ

ಉರಗದಂಡ, ಹೆಸರೇ ಸೂಚಿಸುವ ಹಾಗೆ, ಒಂದು ದಂಡ. ಅದರಲ್ಲಿ, ಹಾರಲು ಸಿದ್ಧವಾಗಿರುವ ಎರಡು ರೆಕ್ಕೆಗಳು ಹಾಗೂ ಆ ದಂಡವನ್ನು ಹೆಣೆದುಕೊಂಡಿರುವ ಒಂದು ಜೋಡಿ ಹಾವು. ಅತ್ಯಾ ಕರ್ಷಕವಾಗಿರುವ ಈ ಚಿಹ್ನೆಯು ಆಧುನಿಕ ವೈದ್ಯಕೀಯ ಹಾಗೂ ವೈದ್ಯರ ಲಾಂಛನವಾಗಿ ಬಳಕೆ ಯಲ್ಲಿದೆ. ಇದನ್ನು ಇಂಗ್ಲಿಷಿನಲ್ಲಿ ‘ಕಾಡೂಸಿಯಸ್’ ಎನ್ನುವರು. ಈ ವೈದ್ಯಕೀಯ ಲಾಂಛನವು ಬೆಳೆದುಬಂದ ದಾರಿಯು ಕುತೂಹಲಕಾರಿಯಾಗಿದೆ. ಇದು ಪುರಾಣ, ಇತಿಹಾಸ ಹಾಗೂ ಮನುಷ್ಯನ ತಪ್ಪು-ಒಪ್ಪುಗಳನ್ನು ಒಳಗೊಂಡ ಕಥೆಯಾಗಿದೆ. ಆ ತಪ್ಪು-ಒಪ್ಪುಗಳ ಚರ್ಚೆಯು ಇಂದಿಗೂ ಚಾಲ್ತಿಯಲ್ಲಿರುವುದು ಒಂದು ವಿಶೇಷವಾಗಿದೆ.

ಹರ್ಮೆಸ್: ಗ್ರೀಸ್ ಸಂಸ್ಕೃತಿಯ ಅನ್ವಯ ರಾಯಭಾರಿ ಅಥವಾ ಸಂದೇಶ ವಾಹಕ ದೇವತೆ ಹರ್ಮೆಸ್. ಈತನು ಅತ್ಯಂತ ಚುರುಕಾದ ಹಾಗೂ ತುಂಟ ದೇವತೆ. ಇವನು ವ್ಯಾಪಾರಿಗಳ ಹಾಗೂ ಕಳ್ಳರ ಅಭಿಮಾನಿ ದೇವತೆಯೂ ಹೌದು. ಹರ್ಮೆಸ್ ದೇವತೆಯ ಕೈಯಲ್ಲಿ ‘ಕೆರಿಕಿಯಾನ್’ ಎಂಬ ಚಿನ್ನದ ದಂಡವಿರುತ್ತದೆ. ಈ ದಂಡದ ನೆರವಿನಿಂದ ಹರ್ಮೆಸ್ ವ್ಯಾಪಾರಿಗಳಿಗೂ ಹಾಗೂ ಕಳ್ಳರಿಗೂ ಸುರಕ್ಷಿತ ಹಾದಿಯನ್ನು ತೋರುತ್ತಾ, ಹಾದಿಯುದ್ದಕ್ಕೂ ರಕ್ಷಣೆಯನ್ನು ಕೊಡುತ್ತಾನೆ.

Screenshot_2 R

ಇವನ ಚಿನ್ನದ ದಂಡದ ಸುತ್ತಲೂ ಜೋಡಿ ಹಾವುಗಳು ಹೇಗೆ ಸುತ್ತಿಕೊಂಡವು ಎಂಬುದರ ಬಗ್ಗೆ ಯೂ ಒಂದು ಕಥೆಯಿದೆ. ಒಂದು ಸಲ ಎರಡು ಹಾವುಗಳು ಪರಸ್ಪರ ಹೋರಾಟದಲ್ಲಿ ಬೆಸೆದು ಕೊಂಡಿದ್ದವು. ಆಗ ಹರ್ಮೆಸ್, ಪರಸ್ಪರ ಬೆಸೆದುಕೊಂಡಿದ್ದ ಹಾವುಗಳ ನಡುವೆ ತನ್ನ ಚಿನ್ನದ ದಂಡವನ್ನುತೂರಿಸಿದ. ತಕ್ಷಣವೇ ಹಾವುಗಳು ತಮ್ಮ ವೈರಭಾವವನ್ನು ಬಿಟ್ಟವು. ಆ ದಂಡದ ಸುತ್ತಲೂ ಹೆಣೆದುಕೊಂಡವು ಹಾಗೂ ಪ್ರಶಾಂತವಾಗಿ ಉಳಿದವು.

ಅಂದಿನಿಂದ ಈ ಜೋಡಿ ಹಾವುಗಳು ಪರಸ್ಪರ ಸಹಕಾರ, ಸೌಹಾರ್ದ ಹಾಗೂ ಶಾಂತಿಯ ಬಾಳ್ವೆಗೆ ಹೆಸರಾದವು. ಬದುಕಿನಲ್ಲಿ ಸಮತೋಲನವನ್ನು ಸೂಚಿಸುವ ಚಿಹ್ನೆಯಾದವು. ಗ್ರೀಕರ ನಂತರ ರೋಮನ್ನರು ಬಂದರು. ರೋಮನ್ನರು ಗ್ರೀಕರ ಪುರಾಣವನ್ನೇ ಅಲ್ಪಸ್ವಲ್ಪ ಬದಲಾಯಿಸಿಕೊಂಡು ತಮ್ಮ ಪುರಾಣವನ್ನು ರೂಪಿಸಿಕೊಂಡರು.

ಹಾಗಾಗಿ ಗ್ರೀಕರ ‘ಹರ್ಮೆಸ್, ರೋಮನ್ನರ ‘ಮರ್ಕ್ಯುರಿ’ ಆದ. ಜೋಡಿ ಹಾವು ಸುತ್ತಿಕೊಂಡಿದ್ದ ಚಿನ್ನದ ದಂಡವು ಮರ್ಕ್ಯುರಿ ದೇವತೆಯ ಕೈಯಲ್ಲಿಯೂ ಮುಂದುವರಿಯಿತು. ಈ ದಂಡವು ಪರಸ್ಪರ ಸಮಾಲೋಚನೆ, ಮಾತುಕತೆ ಹಾಗೂ ವ್ಯಾಪಾರದ ಸೂಕ್ಷ್ಮ ಮಧ್ಯಸ್ಥಿಕೆ ಗುಣವನ್ನು ಪ್ರತಿನಿಧಿಸಿದವು.

ಹಾರಲು ಸಿದ್ಧವಾಗಿರುವ ರೆಕ್ಕೆಗಳು ವೇಗದ ಸೂಚಕವಾದವು. ಎರಡು ಹಾವುಗಳು ಜ್ಞಾನ ಹಾಗೂ ದ್ವಂದ್ವದ ಸಂಕೇತಗಳಾದವು. ಹೀಗೆ ಗ್ರೀಕ್ ಮತ್ತು ರೋಮನ್ನರ ಇತಿಹಾಸದಲ್ಲಿ ಈ ಉರಗದಂಡ ಲಾಂಛನವು ಸಂಪೂರ್ಣವಾಗಿ ವ್ಯಾಪಾರ, ವಾಣಿಜ್ಯ ಹಾಗೂ ಕಳ್ಳಕಾಕರಿಗೆ ಸೀಮಿತವಾಗಿತ್ತು. ಎಂದಿಗೂ ವೈದ್ಯಕೀಯಕ್ಕೆ ಸಂಬಂಧಪಟ್ಟಿರಲಿಲ್ಲ.

ಆಸ್ಕ್ಲೆಪಿಯಸ್: ಪ್ರಾಚೀನ ಗ್ರೀಕರ ನಂಬಿಕೆಯ ಅನ್ವಯ ವೈದ್ಯಕೀಯ ಹಾಗೂ ಗುಣಪಡಿಸುವಿಕೆಯ ಅಧಿದೈವ ಆಸ್ಕ್ಲೆಪಿಯಸ್. ಇವನು ಅಪೋಲೋ ದೇವತೆ ಹಾಗೂ ಕೊರೋನಿಸ್ ಎಂಬ ಮರ್ತ್ಯಳ ಮಗ. ಇವನು ಷಿರಾನ್ ಎಂಬ ಸೆಂಟಾರನ ಬಳಿ (ಅರ್ಧ ಕುದುರೆ-ಅರ್ಧ ಮನುಷ್ಯ) ವೈದ್ಯಕೀಯ ವನ್ನು ಕಲಿತ. ಆಸ್ಕ್ಲೆಪಿಯಸ್ ತನ್ನ ವೈದ್ಯಕೀಯ ಜ್ಞಾನದಿಂದ ಸತ್ತವರನ್ನು ಬದುಕಿಸಬಲ್ಲವ ನಾಗಿದ್ದ. ಹಾಗಾಗಿ ದೇವತೆಗಳ ಅರಸನಾಗಿದ್ದ ಸ್ಯೂಸನಿಗೆ ಕೋಪಬಂದಿತು.

ಕೂಡಲೇ ತನ್ನ ವಜ್ರಾಯುಧದಿಂದ ಆಸ್ಕ್ಲೆಪಿಯಸ್‌ನನ್ನು ಕೊಂದ. ಆದರೆ ದೇವಾನುದೇವತೆಗಳ ಆಶಯದಂತೆ ಇವನು ಬಾನಿನಲ್ಲಿ ‘ಓಫಿಯಾಕಸ್’ ಎಂಬ ತಾರಾಪುಂಜವಾಗಿ ಬೆಳಗಿದ. ಗ್ರೀಕರ ಕಾಲದಲ್ಲಿ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳನ್ನು ‘ಆಸ್ಕ್ಲೆಪಿಯಾನ್’ ಎಂದು ಕರೆಯುತ್ತಿದ್ದರು. ಜನಸಾಮಾನ್ಯರು ಆಸ್ಕ್ಲೆಪಿಯಾನಿಗೆ ಬಂದು ಅಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಗುಣಮುಖ ರಾಗುತ್ತಿದ್ದರು. ಆ ಚಿಕಿತ್ಸಾಲಯಗಳಲ್ಲಿ ಆಸ್ಕ್ಲೆಪಿಯಾನ್‌ನ ಲಾಂಛನವಾಗಿ ‘ಏಕೋರಗ ದಂಡ’ವು ಬಳಕೆಯಲ್ಲಿತ್ತು. ಅದು ಒಂದು ಮರದಿಂದ ಆದ ದಂಡ. ಆ ದಂಡವನ್ನು ಸುತ್ತಿಕೊಂಡಿರುವ ಒಂದೇ ಒಂದು ಹಾವು. ಅಂದಿನ ವೈದ್ಯರು ಸಾಮಾನ್ಯವಾಗಿ ಒಂದು ಊರುಗೋಲನ್ನು ತಮ್ಮೊಡನೆ ತೆಗೆದುಕೊಂಡು ಹೋಗುತ್ತಿದ್ದರು.

ಹಾಗಾಗಿ ಲಾಂಛನದಲ್ಲಿದ್ದ ದಂಡವು ವೈದ್ಯರ ಊರುಗೋಲನ್ನು ಸೂಚಿಸುತ್ತಿತ್ತು. ಹಾವು ಗುಣ ಮುಖವಾಗುವಿಕೆ ಹಾಗೂ ಪುನರ್ಜನ್ಮವನ್ನು ಪ್ರತಿನಿಧಿಸುತ್ತಿತ್ತು. ಹಾವು ನಿಯತವಾಗಿ ಪೊರೆ ಬಿಡುವುದನ್ನು ನೋಡಿದ್ದ ಗ್ರೀಕರು, ಪೊರೆಬಿಟ್ಟ ಹಾವು ಪುನರ್ಜನ್ಮವನ್ನು ಪಡೆಯುತ್ತದೆ ಎಂದೇ ನಂಬಿದ್ದರು. ಇದು ‘ಆಸ್ಕ್ಲೆಪಿಯಸನ ದಂಡ’ ಅಥವಾ ‘ರಾಡ್ ಆಫ್ ಆಸ್ಕ್ಲೆಪಿಯಸ್’ ಎಂದು ಪ್ರಸಿದ್ಧ ವಾಯಿತು. ಆಸ್ಕ್ಲೆಪಿಯಾನುಗಳಲ್ಲಿ ರೋಗಿಗಳನ್ನು, ಆಸ್ಕ್ಲೆಪಿಯಾನ್ ದಂಡದ ಕೆಳಗೆ‌ ಮಲಗಲು ಸೂಚಿಸುತ್ತಿದ್ದರು. ಹಾಗೆ ಮಲಗಿದರೆ ಕನಸಿನಲ್ಲಿ ಆಸ್ಕ್ಲೆಪಿಯಸ್ ಬಂದು ಚಿಕಿತ್ಸೆಯನ್ನು ಸೂಚಿಸು ತ್ತಾನೆ ಎಂದು ನಂಬಿದ್ದರು.

ಹಾಗೆಯೇ ಮಲಗಿರುವ ರೋಗಿಗಳ ಮೇಲೆ ಹಾವುಗಳನ್ನು ಹರಿಯಬಿಡುತ್ತಿದ್ದರು. ಮೈಮೇಲೆ ಹರಿಯುವ ಹಾವುಗಳು ರೋಗಗಳನ್ನು ಗುಣಪಡಿಸುತ್ತವೆ ಎಂದು ನಂಬಿದ್ದರು. ಅಂದಿನಿಂದ ಶತ ಶತಮಾನಗಳ ಕಾಲ ಯುರೋಪಿನಲ್ಲಿ ಆಧುನಿಕ ವೈದ್ಯಕೀಯದ ಲಾಂಛನವಾಗಿ ಆಸ್ಕ್ಲೆಪಿಯಾನ್‌ನ ಏಕೋರಗದಂಡವು ಪ್ರಚಲಿತದಲ್ಲಿದೆ.

ಗೊಂದಲ: ಗ್ರೀಕ್ ಮತ್ತು ರೋಮನ್ನರ ಪುರಾಣ ಹಾಗೂ ಇತಿಹಾಸದಲ್ಲಿ ಈ ಎರಡೂ ಲಾಂಛನ ಗಳು ಭಿನ್ನ ಭಿನ್ನ ವೃತ್ತಿಗಳ ಲಾಂಛನವಾಗಿ ಬಳಕೆಯಲ್ಲಿವೆ. ಈ ಬಗ್ಗೆ ಯಾವುದೇ ರೀತಿಯ ಗೊಂದಲ ವಿರಲಿಲ್ಲ. ಹಾಗಿರುವಾಗ ಯಾವಾಗ, ಯಾರಿಂದ ಹಾಗೂ ಹೇಗೆ ಮರ್ಕ್ಯುರಿಯ ಉರಗದಂಡವು ವೈದ್ಯಕೀಯದ ಲಾಂಛನವಾಗಿ ಪರಿವರ್ತಿತವಾಯಿತು ಎಂಬ ಪ್ರಶ್ನೆಯೇಳುತ್ತದೆ.

ಇದಕ್ಕೆ ಉತ್ತರವನ್ನು ಅಮೆರಿಕದ ಅಧಿಕಾರಿಷಾಹಿಯ ತಪ್ಪು ತಿಳಿವಳಿಕೆ ಹಾಗೂ ಬೇಜವಾಬ್ದಾರಿತನ ದಲ್ಲಿ ಹುಡುಕಬೇಕಾಗುತ್ತದೆ. ಅಮೆರಿಕ ದೇಶದ ಸೈನ್ಯದಲ್ಲಿದ್ದ ವೈದ್ಯಕೀಯ ವಿಭಾಗವು ತನ್ನ ಆರಂಭದ ದಿನಗಳಿಂದಲೂ ಆಸ್ಕ್ಲೆಪಿಯಸ್‌ನ ಏಕೋರಗ ದಂಡವನ್ನೇ ತಮ್ಮ ಲಾಂಛನವನ್ನಾಗಿ ಬಳಸುತ್ತಿದ್ದರು.

1902ರಲ್ಲಿ ಕ್ಯಾಪ್ಟನ್ ಫ್ರೆಡ್ರಿಕ್ ಪಿ.ರೆನಾಲ್ಡ್ಸ್ ಎಂಬ ಯುವ ಅಧಿಕಾರಿಯು ಉರಗದಂಡವನ್ನೇ ಸೈನ್ಯದ ವೈದ್ಯಕೀಯ ವಿಭಾಗದ ಹೊಸ ಲಾಂಛನವನ್ನಾಗಿ ಆಯ್ಕೆ ಮಾಡಿಕೊಂಡ. ಅವನಿಗೆ ಈ ಎರಡೂ ಲಾಂಛನಗಳ ಇತಿಹಾಸ ಗೊತ್ತಿತ್ತಾ ಅಥವಾ ಇಲ್ಲವಾ ಎನ್ನುವುದು ನಮಗೆ ತಿಳಿಯದು. ಬಹುಶಃ ಗೊತ್ತಿರಲಾರದು. ಅವನ ತರ್ಕ ಸರಳವಾಗಿತ್ತು. ‘ಆಸ್ಕ್ಲೆಪಿಯಾನ್ ಏಕೋರಗದಂಡವು ನೋಡಲು ಚೆನ್ನಾಗಿಲ್ಲ.

ಕಲಾಭಿರುಚಿಯಿಲ್ಲ. ಸಮಾಂಗತೆಯಿಲ್ಲ. ಅದೇ ಮರ್ಕ್ಯುರಿಯ ಉರಗದಂಡವು ಎಷ್ಟು ಚೆನ್ನಾಗಿದೆ. ಚಿನ್ನದ ದಂಡ. ಅದನ್ನು ಕಲಾತ್ಮಕವಾಗಿ ಸುತ್ತಿಕೊಂಡಿರುವ ಎರಡು ಸರ್ಪಗಳು. ಎಲ್ಲಕ್ಕೂ ಕಿರೀಟ ವಿಟ್ಟಂತೆ ಕಾಣುವ ಎರಡು ತೆರೆದ ರೆಕ್ಕೆಗಳು! ಸಮಾಂಗತೆಯಿದೆ. ಆಸ್ಕ್ಲೆಪಿಯಸ್‌ನ ಕಟ್ಟಿಗೆಯು ಒಣಗಿದೆ. ಅದಕ್ಕೆ ಸುತ್ತಿಕೊಂಡಿರುವ ಹಾವು ಎಷ್ಟು ಅನಾಕರ್ಷಕವಾಗಿದೆ.

ಇಂಥದ್ದನ್ನು ಲಾಂಛನವನ್ನಾಗಿ ಆರಿಸುವುದೇ!? ಮನುಷ್ಯನಿಗೆ ಸೌಂದರ್ಯಾಭಿರುಚಿಯಿರಬೇಕು’ ಎಂದು 20 ಜೂನ್, 1902ರಂದು ಮರ್ಕ್ಯುರಿಯ ಉರಗದಂಡವನ್ನೇ ಅಮೆರಿಕದ ಸೇನಾ ವೈದ್ಯಕೀಯ ವಿಭಾಗದ ಲಾಂಛನವೆಂದು ಘೋಷಿಸಿಬಿಟ್ಟ.

ಒಂದು ಸಲ ಅಮೆರಿಕನ್ ಸೇನಾ ವೈದ್ಯಕೀಯ ವಿಭಾಗವು ಮರ್ಕ್ಯುರಿಯ ಉರಗದಂಡವನ್ನು ಮಾನ್ಯ ಮಾಡಿದ ಕೂಡಲೇ ಇಡೀ ಅಮೆರಿಕದಲ್ಲಿದ್ದ ಆಸ್ಪತ್ರೆಗಳು, ವೈದ್ಯಕೀಯ ವಿದ್ಯಾಲಯಗಳು, ಔಷಧ ಮಾರಾಟಗಾರರು ತಾವೂ ಅದೇ ಲಾಂಛನವನ್ನು ಬಳಸಲಾರಂಭಿಸಿದರು. ಈ ಪದ್ಧತಿಯನ್ನು ಅಮೆರಿಕನ್ನರು ಇಂದಿನವರೆಗೂ ಮುಂದುವರಿಸಿಕೊಂಡು ಬಂದಿರುವರು. ಆದರೆ ಯುರೋಪಿಯನ್ ವೈದ್ಯರು ಅಮೆರಿಕನ್ನರ ಈ ‘ಸೌಂದರ್ಯಾಭಿರುಚಿ’ಗೆ ಮಾರುಹೋಗಲಿಲ್ಲ.

ಅವರು ಸಾಂಪ್ರದಾಯಿಕವಾಗಿ ಗ್ರೀಕ್-ರೋಮನ್ನರು ಬಳಸುತ್ತಾ ಬಂದಿರುವ ಆಸ್ಕ್ಲೆಪಿಯಸ್‌ನ ಏಕೋರಗದಂಡವನ್ನೇ ತಮ್ಮ ಲಾಂಛನವನ್ನಾಗಿ ಮುಂದುವರಿಸಿದರು. 7 ಏಪ್ರಿಲ್, 1948ರಂದು ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅವರು ಸಹ ಆಸ್ಕ್ಲೆಪಿಯಸ್‌ನ ಏಕೋರಗದಂಡ ವನ್ನೇ ತಮ್ಮ ಲಾಂಛನವನ್ನಾಗಿ ಅಳವಡಿಸಿಕೊಂಡರು.

ಅದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಅಮೆರಿಕನ್ನರ ಮತ್ತು ಯುರೋಪಿ ಯನ್ನರ ಈ ಲಾಂಛನ ಸಮರದಲ್ಲಿ ಭಾರತದಂಥ ಮೂರನೆಯ ಜಗತ್ತಿನ ರಾಷ್ಟ್ರಗಳ ವೈದ್ಯರು ಏನು ಮಾಡಬೇಕು? ಭಾರತದಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಆರಂಭಿಸಿದ್ದು ಬ್ರಿಟಿಷರೆ!

ಹಾಗಾಗಿ ಅವರ ಪ್ರಭಾವವು ನಮ್ಮ ಮೇಲಿದೆ. ನಾವು ಬಳಸುವ ಇಂಗ್ಲಿಷ್ ಭಾಷೆಯ ಜಾಯಮಾನವು (ಸ್ಪೆಲ್ಲಿಂಗ್, ವ್ಯಾಕರಣ, ನುಡಿಗಟ್ಟು, ಉಚ್ಚಾರಣೆ ಇತ್ಯಾದಿ) ಬ್ರಿಟಿಷರ ಇಂಗ್ಲಿಷನ್ನೇ ಹೆಚ್ಚು ಹೋಲು ತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ನಡೆಯುವ ವೈದ್ಯಕೀಯ ಸಂಶೋಧನೆಗಳು, ಅಮೆರಿಕನ್ನರು ಬರೆದ ಪಠ್ಯಪುಸ್ತಕಗಳು ನಮ್ಮ ಮೇಲೆ ಹೆಚ್ಚು ಹೆಚ್ಚು ಪ್ರಭಾವವನ್ನು ಬೀರುತ್ತಿವೆ. ಹಾಗಾಗಿ ನಮ್ಮ ದೇಶದಲ್ಲಿ ಈ ಲಾಂಛನಗಳ ಬಳಕೆ ಕಲಸುಮೇಲೋಗರವಾಗಿದೆ.

ಎರಡೂ ಲಾಂಛನಗಳನ್ನು ಬಳಸುತ್ತಾ ಬಂದಿದ್ದೇವೆ. ಹಾಗೆಯೇ ಜಗತ್ತಿನ ದೇಶಗಳಲ್ಲಿರುವ ವೈದ್ಯರು ಎರಡೂ ಲಾಂಛನಗಳನ್ನು ಸರಿಸಮನಾಗಿ ಬಳಸುತ್ತಾ ಬಂದಿದ್ದಾರೆ. ಜತೆಗೆ ತಮ್ಮ ಲಾಂಛನವನ್ನು ಸಮರ್ಥಿಸುವಂಥ ಹೊಸ ಹೊಸ ಅರ್ಥಗಳನ್ನು ಹೊರಹೊಮ್ಮಿಸುತ್ತಿದ್ದಾರೆ. ಅವು ಬಹಳ ಕುತೂಹಲಕರವಾಗಿವೆ:

ಉರಗದಂಡದಲ್ಲಿರುವ ಎರಡು ಸರ್ಪಗಳು, ಡಿಎನ್ಎ ದಲ್ಲಿರುವ ಉಭಯ ಸುರುಳಿಗಳನ್ನು ನೆನಪಿಗೆ ತರುತ್ತವೆ. ಡಿಎನ್‌ಎ ಎಂದರೆ ಅದು ಜೀವೋತ್ಪತ್ತಿಯ ಸಂಕೇತ. ಅನಾದಿ ಕಾಲದಿಂದಲೂ ಹಾವುಗಳು ಜೀವೋತ್ಪತ್ತಿ/ ಪುನರ್ಜನ್ಮದ ಸಂಕೇತವಾಗಿ ಬಳಕೆಯಲ್ಲಿವೆ. ಡಿಎನ್‌ಎ ಆಧುನಿಕ ವೈದ್ಯಕೀಯದ ಅವಿಭಾಜ್ಯ ಅಂಗವಾಗಿದೆ. ಅದನ್ನೇ ಉಳಿಸಿಕೊಳ್ಳೋಣ ಎಂದು ಕೆಲವರ ವಾದ. ಉರಗದಂಡ ದಲ್ಲಿರುವ ಚಿನ್ನದ ದಂಡವು ನಮ್ಮ ಬೆನ್ನುಮೂಳೆಯ ಹಾಗೆ. ಅದನ್ನು ಸುತ್ತಿಕೊಂಡಿರುವ ಎರಡು ಹಾವುಗಳು ನಮ್ಮ ಬೆನ್ನುಮೂಳೆಯ ಇಕ್ಕೆಲಗಳಲ್ಲಿರುವ ಅನುವೇದನ ಹಾಗೂ ಪರಾನುವೇದನಾ ನರಗಳನ್ನು (ಸಿಂಪ್ಯಾಥೆಟಿಕ್ ಮತ್ತು ಪ್ಯಾರಾ ಸಿಂಪ್ಯಾಥೆಟಿಕ್) ಪ್ರತಿನಿಧಿಸುತ್ತದೆ.

ಹಾಗಾಗಿ ಈ ಲಾಂಛನವು ಆಧುನಿಕ ಅಂಗರಚನಾ ವಿಜ್ಞಾನವನ್ನು ಅನ್ವರ್ಥವಾಗಿ ಪ್ರತಿನಿಧಿಸುತ್ತದೆ. ನಮ್ಮ ಬೆನ್ನುಮೂಳೆಯ ಇಕ್ಕೆಲಗಳಲ್ಲಿರುವ ಇಡಾ ಮತ್ತು ಪಿಂಗಳ ನಾಡಿಗಳಂತೆ ಈ ಹಾವುಗಳು ಕಾಣುತ್ತವೆ ಎಂಬ ಅರ್ಥೈಸುವಿಕೆಯೂ ನಡೆದಿದೆ.

ಆರಂಭದ ದಿನಗಳಲ್ಲಿ ಸಮ್ಮೋಹಚಿಕಿತ್ಸಕರು (ಹಿಪ್ನಾಟಿಸ್ಟ್‌ಗಳು) ಸಮ್ಮೋಹ ಬರಿಸಲು ಜೋಡಿ ಹಾವುಗಳ ಚಿಹ್ನೆಯನ್ನೇ ಬಳಸುತ್ತಿದ್ದರು. ಸಾಮಾನ್ಯವಾಗಿ ಅಪಸ್ಮಾರಿಗಳಿಗೆ ಸೆಳವು ಮುನ್ಸೂಚನೆ ಯು (ಔರ) ದೊರೆಯುತ್ತದೆ. ಅಂಥ ಮುನ್ಸೂಚನೆಯಲ್ಲಿ ಕೆಲವರು ಪರಸ್ಪರ ನುಲುಚುತ್ತಿರುವ ಹಾವುಗಳ ಹಾಗೆ ಬೆಳಕು ತಮಗೆ ಕಾಣಿಸುತ್ತವೆ ಎಂದಿರುವರು. ಇವು ಅವರವರ ವೈಯಕ್ತಿಕ ಅನುಭವ ಗಳು ಹಾಗೂ ವಿಶ್ಲೇಷಣೆಗಳಷ್ಟೇ ಎನ್ನಬಹುದು.

ಭಾರತದಲ್ಲಿ ಆಯುರ್ವೇದವನ್ನಾಗಲಿ ಅಥವಾ ಆಯುರ್ವೇದೀಯ ವೈದ್ಯರನ್ನಾಗಲಿ ಸೂಚಿಸುವ ಯಾವುದೇ ಲಾಂಛನವಿಲ್ಲ. ಕೆಲವರು ಬಹುಶಃ ಅಮೃತ ಕಲಶವನ್ನು ಹಿಡಿದ ಧನ್ವಂತರಿಯನ್ನೇ ಲಾಂಛನವನ್ನಾಗಿ ಬಳಸುವುದುಂಟು. ಆದರೆ ನಮ್ಮ ನಾಗರಕಲ್ಲುಗಳನ್ನು ನೋಡಿದಾಗ, ಉರಗ ದಂಡದಲ್ಲಿರುವ ಜೋಡಿ ಹಾವುಗಳ ನೆನಪು ಸಹಜವಾಗಿ ಬರುತ್ತದೆ.

ವ್ಯಂಗ್ಯ ವಿವರಣೆ: 20ನೆಯ ವೈದ್ಯಕೀಯ ಇತಿಹಾಸಕಾರರು ಒಂದು ವ್ಯಂಗ್ಯ ವಿವರಣೆಯನ್ನು ನೀಡಿರುವುದನ್ನು ನೋಡಿದರೆ, ಅದು ವಾಸ್ತವತೆಗೆ ಹಿಡಿದ ಕನ್ನಡಿ ಎಂಬ ಸತ್ಯವು ನಮಗೆ ಮನವರಿಕೆ ಯಾಗುತ್ತದೆ. “ವೈದ್ಯಕೀಯಕ್ಕೂ ಹರ್ಮೆಸನಿಗೂ (ಮರ್ಕ್ಯುರಿ) ಯಾವುದೇ ಸಂಬಂಧವಿಲ್ಲ.

ಹರ್ಮೆಸ್ ವ್ಯಾಪಾರಿಗಳ ಹಾಗೂ ಕಳ್ಳ ಕಾಕರ ಅಭಿಮಾನಿ ದೇವತೆ. ಇಂದಿನ ವೈದ್ಯಕೀಯವನ್ನು ಹಾಗೂ ವೈದ್ಯರನ್ನು ನೋಡುತ್ತಿದ್ದರೆ, ಅವರು ವೈದ್ಯಕೀಯವನ್ನು ಒಂದು ಉದ್ಯಮವನ್ನಾಗಿ ಮಾಡಿ ಕೊಂಡಿದ್ದಾರೆ ಹಾಗೂ ಅವರಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ವಸೂಲಿ ಮಾಡುವತ್ತ ಗಮನ ಹರಿಸುತ್ತಾರೆ. ಹಾಗಾಗಿ ಅವರು ಹರ್ಮೆಸನ ಉರಗದಂಡವನ್ನು ತಮ್ಮ ಲಾಂಛನ ವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಅನ್ವರ್ಥವಾಗಿದೆ ಹಾಗೂ ವಾಸ್ತವತೆಯನ್ನು ಪ್ರತಿನಿಧಿಸು ತ್ತದೆ" ಎಂದಿರುವುದರ ಬಗ್ಗೆ ನಾವು ಯೋಚಿಸಬೇಕಿದೆ.

ಡಾ.ನಾ. ಸೋಮೇಶ್ವರ

View all posts by this author