ತಿಳಿರು ತೋರಣ
srivathsajoshi@yahoo.com
ಅಶೋಕವನಿಕಾ ನ್ಯಾಯ ಅಂತೊಂದಿದೆ. ರಾಮ-ಸೀತೆ-ಲಕ್ಷ್ಮಣರು ವನವಾಸದಲ್ಲಿದ್ದಾಗ, ರಾವಣನು ಮಾರೀಚನ ಸಹಾಯದಿಂದ ರಾಮ-ಲಕ್ಷ್ಮಣರ ಗಮನವನ್ನು ಬೇರೆಡೆ ಸೆಳೆದು, ಸೀತೆ ಒಬ್ಬಳೇ ಇದ್ದ ಸಂದರ್ಭ ನೋಡಿಕೊಂಡು ಬ್ರಾಹ್ಮಣವೇಷದಲ್ಲಿ ಭಿಕ್ಷಾರ್ಥಿಯಾಗಿ ಬಂದು ಮೋಸದಿಂದ ವಂಚಿಸಿ ಸೀತೆಯನ್ನು ಕದ್ದೊಯ್ದನಷ್ಟೆ? ಪುಷ್ಪಕ ವಿಮಾನವನ್ನೇರಿ ಮರುಕ್ಷಣದಲ್ಲೇ ಎಂಬಂತೆ ಲಂಕೆಯನ್ನು ತಲುಪಿದನು.
ಆದರೆ ಅಲ್ಲಿ ರಾವಣನು ಸೀತೆಯನ್ನೇನೂ ವೈಭವೋಪೇತ ಅಂತಃಪುರದಲ್ಲಿ ಇರಿಸಲಿಲ್ಲ. ಬದಲಿಗೆ, ಊರ ಹೊರಗಿನ ಅಶೋಕವನದಲ್ಲಿ ಕೂರಿಸಿದನು. ಅಲ್ಲಿ ಸೀತೆ ಬಹುಮಟ್ಟಿಗೆ ಒಂದು ಶಿಂಶುಪ ವೃಕ್ಷದ ಕೆಳಗೆ ಮ್ಲಾನವದನಳಾಗಿ ಕುಳಿತುಕೊಂಡೇ ಇರುತ್ತಿದ್ದಳು, ಶೋಕದಿಂದ ಕಾಲಕ್ಷೇಪ ಮಾಡುತ್ತಿದ್ದಳು... ಅಂತ ಕಥೆ. ರಾವಣನ ಸಾಮ್ರಾಜ್ಯದಲ್ಲಿ ಅನೇಕ ಸೆರೆಮನೆಗಳೂ ಉದ್ಯಾನಗಳೂ ಖಂಡಿತ ಇದ್ದವು.
ಅಂಥವುಗಳ ಪೈಕಿ ಯಾವುದರಲ್ಲೇ ಆದರೂ ಸೀತೆಯನ್ನು ಬಂದಿಯಾಗಿ ಇಡಬಹುದಿತ್ತು. ಆದರೆ ಅಶೋಕವನವನ್ನೇ ಆಯ್ದುಕೊಂಡಿದ್ದೇಕೆ? ಹಾಗೆ ಏನಾದರೂ ಶಾಪ ಅಥವಾ ವರ ಇದ್ದಬಗ್ಗೆ ರಾಮಾಯಣದಲ್ಲಿ ವಾಲ್ಮೀಕಿ ಏನೂ ತಿಳಿಸಿಲ್ಲ. ಸುಂದರಕಾಂಡದಲ್ಲಿ ‘ಅಶೋಕವನಿಕಾ ಚೇಯಂ ದೃಢಂ ರಮ್ಯಾ ದುರಾತ್ಮನಃ| ಚಂಪಕೈಶ್ಚಂದನೈಶ್ಚಾಪಿ ವಕುಲೈಶ್ಚ ವಿಭೂಷಿತಾ||’ (ಸಂಪಿಗೆ, ಶ್ರೀಗಂಧ, ರೆಂಜೆ ಮುಂತಾದ ಮರಗಳಿಂದ ಶೋಭಿಸುತ್ತಿರುವ ಈ ರಮ್ಯವಾದ ಅಶೋಕವನವು ದುರುಳ ರಾವಣನಿಗೆ ಸೇರಿದ್ದೇ ಇರಬೇಕು) ಎಂದು ಹನುಮಂತನ ಬಾಯಿಯಿಂದ ಅಶೋಕವನದ ವರ್ಣನೆ ಇದೆಯೇ ಹೊರತು ಅಲ್ಲೇ ಸೀತೆಯನ್ನಿರಿಸುವುದಕ್ಕೆ ಕಾರಣವೇನೆಂದು ಹೇಳಿಲ್ಲ.
ಹಾಗಾಗಿ ಆ ಪ್ರಶ್ನೆಗೆ, ‘ಲಂಕೆಗೆ ತಂದಮೇಲೆ ಎಲ್ಲಾದರೂ ಒಂದುಕಡೆ ಸೀತೆಯನ್ನು ನಿರ್ಬಂಧದಲ್ಲಿ ಇಡಬೇಕಾಗಿತ್ತು, ಅಶೋಕವನದಲ್ಲಿ ಇಡೋಣವೆಂದು ರಾವಣನಿಗೆ ಆ ಕ್ಷಣಕ್ಕೆ ಅನಿಸಿರಬಹುದು, ಅಲ್ಲೇ ಇಟ್ಟನು’ ಎಂಬುದಷ್ಟೇ ಉತ್ತರ. ಇದು ರಾವಣನಿಗಷ್ಟೇ ಅಲ್ಲ, ನಮಗೆಲ್ಲರಿಗೂ ಅನ್ವಯ ವಾಗುವಂಥ ಮನೋಧರ್ಮವೇ.
ಇದನ್ನೂ ಓದಿ: Srivathsa Joshi Column: ಕಪ್ಪೆಯಂತೆ ಕುಪ್ಪಳಿಸುವ ಚಪ್ಪಟೆಕಲ್ಲನ್ನು ಅಪ್ಪಿಕೊಂಡು...
ನಮ್ಮ ದೈನಂದಿನ ಕೆಲಸಗಳಲ್ಲಿ, ವಸ್ತು-ಸೇವೆ-ಸೌಲಭ್ಯಗಳ ಆಯ್ಕೆಯಲ್ಲಿ ಕೆಲವೊಮ್ಮೆ ನಿರ್ದಿಷ್ಟ ಕಾರಣಗಳೇನೂ ಇರುವುದಿಲ್ಲ. ಇರಬೇಕಂತನೂ ಇಲ್ಲ. ಪ್ರತಿಯೊಂದರಲ್ಲೂ ತೀರಾ ಚೂಸಿ ಆಗಿರುವುದು ಒಳ್ಳೆಯದೂ ಅಲ್ಲ. ಯಾವ ನಿರ್ಧಾರಕ್ಕೆ ಕಾರಣದ ಅಪೇಕ್ಷೆಯಿಲ್ಲವೋ, ಫಲ ಅಥವಾ ಪರಿಣಾಮದಲ್ಲಿ ಭೇದವೇನೂ ಇಲ್ಲವೋ ಆಗ ಯಾದೃಚ್ಛಿಕವಾಗಿ ನಿರ್ಧರಿಸುತ್ತೇವೆ.
ಅಂಥ ಸಂದರ್ಭಗಳಲ್ಲಿ ‘ಇದನ್ನೇ ಏಕೆ ಆಯ್ದುಕೊಂಡಿರಿ?’ ಎಂದು ಯಾರಾದರೂ ಕೇಳಿದರೆ ಅಶೋಕವನಿಕಾ ನ್ಯಾಯವೇ ಅದಕ್ಕೆ ಉತ್ತರ. ದಿನಾ ವಾಕಿಂಗ್ ಹೋಗುವ ಅಭ್ಯಾಸವಿರುವವರು ಕೆಲವರು ನಿರ್ದಿಷ್ಟವಾದ ಒಂದೇ ಪಥವನ್ನು ಆಯ್ದುಕೊಳ್ಳಬಹುದು; ಕೆಲವರು ಯಾದೃಚ್ಛಿಕವಾಗಿ ಬೇರೆಬೇರೆ ಪಥಗಳನ್ನು ಎಕ್ಸ್‌ಪ್ಲೋರ್ ಮಾಡುವವರೂ ಇರುತ್ತಾರೆ.
ಈ ಎರಡನೆಯ ಗುಂಪಿನವರದು ಅಶೋಕವನಿಕಾ ನ್ಯಾಯ. ವಿಮಾನದಲ್ಲಿ ಪ್ರಯಾಣಿಸುವಾಗ ವಿಂಡೋ ಸೀಟೇ ಬೇಕು ಅಥವಾ ಐಲ್ ಸೀಟೇ ಬೇಕು ಎಂಬ ಪ್ರಾಶಸ್ತ್ಯವಿರುವವರು ಕೆಲವರು; ಯಾವ್ದೋ ಒಂದು ಸೀಟು ಅಂತೂ ಕೂತುಕೊಂಡು ಪ್ರಯಾಣಿಸಲಿಕ್ಕಾದರೆ ಆಯ್ತು ಎಂಬ ಧೋರಣೆ ಯವರು ಇನ್ನು ಕೆಲವರು. ಅವರದು ಅಶೋಕವನಿಕಾ ನ್ಯಾಯ.
ಇದೇ ಸೀಟನ್ನು ಏಕೆ ಆಯ್ದುಕೊಂಡಿರಿ ಎಂದು ಪ್ರಶ್ನಿಸಿದರೆ ಏನು ತಾನೆ ಉತ್ತರಿಸಿಯಾರು? ಸುದ್ದಿ ವಾಹಿನಿಗಳ ಸಂದರ್ಶಕಿ/ನಿರೂಪಕಿಯರ ಕೆಲವು ತಲೆಹರಟೆ ಪ್ರಶ್ನೆಗಳಿಗೂ ಅಷ್ಟೇ. ಅಶೋಕವನಿಕಾ ನ್ಯಾಯವೇ ಒಳ್ಳೆಯ ಉತ್ತರ.

‘ಈ ವಾರದ ಅಂಕಣಕ್ಕೆ ಈ ವಿಷಯವನ್ನು ಎತ್ತಿಕೊಳ್ಳುವಾ ಎಂದು ನಿಮಗೇಕೆ ಅನಿಸಿತು?’ ಅಂತ ಓದುಗಮಿತ್ರರು ನನ್ನನ್ನು ಆಗಾಗ ಕೇಳುವುದಿದೆ. ಬಹುತೇಕ ಸಂದರ್ಭಗಳಲ್ಲಿ ಅಶೋಕ ವನಿಕಾ ನ್ಯಾಯವೇ ನನ್ನ ಉತ್ತರ. ಆದರೆ ಈ ವಾರ ಅಲ್ಲ! ಅಶೋಕ ವನಿಕಾ ನ್ಯಾಯ ರೀತಿಯದೇ ಬೇರೆ ಕೆಲವು ಲೌಕಿಕ ನ್ಯಾಯಗಳ ಬಗೆಗೊಂದು ಲೈಟಾದ ಲಹರಿ ಹರಿಸೋಣ ಎಂದು ನಿರ್ಣಯಿಸುವುದಕ್ಕೆ ಕಾರಣವಿದೆ.
ಕೆಲ ದಿನಗಳ ಹಿಂದೆ ನಿಧನರಾದ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಬರಹವೊಂದನ್ನು ವಿಶ್ವೇಶ್ವರ ಭಟ್ ಬರೆದಿದ್ದರು. ನಾನದನ್ನು ಮೊದಲಿಗೆ ಫೇಸ್‌ಬುಕ್ ನಲ್ಲಿ ಓದಿದ್ದು, ಬಹಳವೇ ಹೃದಯಸ್ಪರ್ಶಿ ಆಗಿತ್ತಾದ್ದರಿಂದ ಮರುದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದಾಗ ಮತ್ತೊಮ್ಮೆ ಓದಿದೆ. ಅದರಲ್ಲಿನ ಒಂದು ಪ್ಯಾರಗ್ರಾಫನ್ನು ಇಲ್ಲಿ ಯಥಾವತ್ತಾಗಿ ಎತ್ತಿಕೊಂಡಿದ್ದೇನೆ.
ಮೂಲ ಲೇಖನವನ್ನು ಓದಿದ್ದರೂ ಓದಿರದಿದ್ದರೂ ನೀವೊಮ್ಮೆ ಓದಿ: “ನಾವೆಲ್ಲ ಒಂದು ಧಾಟಿ ಯಲ್ಲಿ ಯೋಚಿಸುತ್ತಿದ್ದರೆ, ಟಿಜೆಎಸ್ ನಮಗೆ ಗೊತ್ತಿಲ್ಲದ ಹೊರಳುಹಾದಿಗೆ ತಿರುಗಿಸಿ, ಸಂದಿಗೊಂದಿ ಗಳಲ್ಲಿ ಸುತ್ತಾಡಿಸಿ, ನಾವು ನೋಡಿರದ ಮಗ್ಗಲನ್ನು ತೋರಿಸುತ್ತಿದ್ದರು.
ಹಾಗಂತ ಜಾರ್ಜ್ ಹೇಳುವುದೆಲ್ಲವನ್ನೂ ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ಅವರ ವಿಚಾರ ಅಷ್ಟೊಂದು ಪ್ರಖರ, ತೀಕ್ಷ್ಣವಾಗಿರುತ್ತಿತ್ತು. ಅವರೂ ಸರಿ, ಇವರೂ ಸರಿ, ಮುಂದೆ ನೋಡೋಣ, ಎಲ್ಲರೂ ಸರಿದೂಗಿಸಿಕೊಂಡು ಹೋಗೋಣ ಧಾಟಿಯ ಮಾತುಗಳು ಅವರಿಂದ ಬರುತ್ತಿರಲಿಲ್ಲ. ಅವರು ಹೇಳಬೇಕಾದುದನ್ನು ಸಣ್ಣ ಮೆಣಸಿನಕಾಯಿಯಲ್ಲಿ ನುರಿದು, ಜಜ್ಜಿ ಕೊಡುತ್ತಿದ್ದರು.
ಒಂಥರದ ‘ಬುಲ್ಡೋಜರ್ ನ್ಯಾಯ’ ಅವರ ವಾದದಲ್ಲಿರುತ್ತಿತ್ತು. ಅದಕ್ಕೇ ಜಾರ್ಜ್ ಇಷ್ಟವಾಗು ತ್ತಿದ್ದರು. ಎಲ್ಲರನ್ನೂ ಸಂಪ್ರೀತಗೊಳಿಸುವ ‘ಪೂರ್ಣಚೂರ್ಣ ಮಂಜರಿ’ ವಾದ ಅವರಿಗೆ ಗೊತ್ತಿರ ಲಿಲ್ಲ. ಬೇರೆಯವರನ್ನು ಬೇಸರಗೊಳಿಸಲು ಇಷ್ಟವಿಲ್ಲದಿದ್ದರೆ, ಅನಿಸಿದ್ದನ್ನು ನೇರವಾಗಿ ಹೇಳುವ ತಾಕತ್ತಿಲ್ಲದಿದ್ದರೆ,
ತಪ್ಪನ್ನು ನೇರಾನೇರ ಖಂಡಿಸುವ ಛಾತಿಯಿಲ್ಲದಿದ್ದರೆ, ಅಂಕಣಕಾರರಾಗಿ ಪತ್ರಿಕೆಯ ಅಮೂಲ್ಯ, ಪವಿತ್ರ ಜಾಗವನ್ನು ನಿರರ್ಥಕಗೊಳಿಸಬಾರದು ಎಂದು ನಂಬಿದ್ದರು. ಅದನ್ನು ಅವರ ಅಂಕಣದಲ್ಲಿ ಢಾಳಾಗಿ ಕಾಣಬಹುದಿತ್ತು". ನನಗಿದರಲ್ಲಿ ಅತ್ಯಾಕರ್ಷಕವಾಗಿ ಕಂಡಿದ್ದು, ಎರಡೆರಡು ಸರ್ತಿ ಓದಿ ಆನಂದಿಸುವಂತೆ ಮಾಡಿದ್ದು ‘ಬುಲ್ಡೋಜರ್ ನ್ಯಾಯ’ ಮತ್ತು ‘ಪೂರ್ಣಚೂರ್ಣ ಮಂಜರಿ ವಾದ’ ಪದಪುಂಜಗಳು.
ಇವುಗಳ ಅರ್ಥವನ್ನೇನೂ ನಾನಿಲ್ಲಿ ವ್ಯಾಖ್ಯಾನಿಸಬೇಕಿಲ್ಲ. ಭಟ್ಟರು ಬರೆದ ಆ ಪ್ಯಾರಗ್ರಾಫ್ ನ ಸಾರಾಂಶಕ್ಕೆ ತಕ್ಕುದಾಗಿ ಅವು ನೀರಕ್ಷೀರ ನ್ಯಾಯದಂತೆ ಚೆನ್ನಾಗಿ ಹೊಂದಿಕೊಂಡಿವೆ. ಪ್ಯಾರಗ್ರಾಫ್ ನ ಪರಿಣಾಮಕಾರಿತನವನ್ನು ಹೆಚ್ಚಿಸಿವೆ. ನಾನು ಇಂದಿನ ವಿಷಯವಾಗಿ ಆಯ್ದುಕೊಂಡಿರುವ ಲೌಕಿಕ ನ್ಯಾಯಗಳೆಂಬ ನುಡಿಗಟ್ಟುಗಳು ಇರುವುದೂ ಅದೇ ಉದ್ದೇಶಕ್ಕೆ. ಮಾತಿನ, ಬರವಣಿಗೆಯ ಮೆರುಗು ಮತ್ತು ತೂಕವನ್ನು ಹೆಚ್ಚಿಸಲಿಕ್ಕೆ.
ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ತಿಳಿಸುವುದಕ್ಕೆ. ಅಂದಹಾಗೆ ‘ಬುಲ್ಡೋಜರ್ ನ್ಯಾಯ’ದ ಕೀರ್ತಿ ಉತ್ತರಪ್ರದೇಶದ ನೋ-ನಾನ್ಸೆನ್ಸ್ ಖಡಕ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೇ ಸಲ್ಲಬೇಕಾದ್ದು. ಅವರ ವಿರೋಽಗಳಿಗೆ ಮತ್ತು ಸುಪ್ರೀಂ ಕೋರ್ಟಿಗೂ ಅದು ಅಮಾನ್ಯವೇ ಇರಬಹುದಾದರೂ ಉತ್ತರಪ್ರದೇಶದಲ್ಲಷ್ಟೇ ಅಲ್ಲ ದೇಶಾದ್ಯಂತ ಶ್ರೀಸಾಮಾನ್ಯ ಪ್ರಜೆಗಳು ಆದಿತ್ಯನಾಥರಿಗೆ ಫಿದಾ ಆಗಿರುವುದೇ ಬುಲ್ಡೋಜರ್ ನ್ಯಾಯದಿಂದಾಗಿ. ಅಂತೆಯೇ, ಕನ್ನಡ ಪತ್ರಿಕಾರಂಗದಲ್ಲಿ ಟಿಜೆಎಸ್ ಜಾರ್ಜರನ್ನು ಬಲ್ಲವರು ಅವರದು ಬುಲ್ಡೋಜರ್ ನ್ಯಾಯ ಎಂಬ ಭಟ್ಟರ ಅನಿಸಿಕೆಯನ್ನು ಖಂಡಿತ ಅನುಮೋದಿಸುವರು.
ಬುಲ್ಡೋಜರ್ ಸಂಸ್ಕೃತ ಪದ ಅಲ್ಲವಾದರೂ ಸಂಸ್ಕೃತ ವ್ಮಾಯದಲ್ಲಿ ಹೇರಳವಾಗಿರುವ ನ್ಯಾಯ ಗಳ ಸಾಲಿಗೇ ಸೇರಬೇಕಾದ್ದು ಎಂದು ನನಗನಿಸುತ್ತದೆ. ಇನ್ನು, ‘ಪೂರ್ಣಚೂರ್ಣ ಮಂಜರಿ’ ಹೆಸರೇನೋ ಸಂಪೂರ್ಣ ಸಂಸ್ಕೃತಮಯವೇ ಆಗಿದ್ದರೂ ಸಂಸ್ಕೃತ ಸಾಹಿತ್ಯದಲ್ಲಿ ಇದುವರೆಗೆ ಉಲ್ಲೇಖವಾಗಿಲ್ಲ ಎಂದುಕೊಂಡಿದ್ದೇನೆ.
ಇದು ಭಟ್ಟರದೇ ಸೃಷ್ಟಿಯಿರಬಹುದು ಎಂಬ ಗುಮಾನಿಯೂ ನನಗಿದೆ. ಏನಿದ್ದರೂ ಬಹಳವೇ ಚೆನ್ನಾಗಿದೆ ಮತ್ತು ಇದನ್ನು ನಾವೆಲ್ಲ ಹೆಚ್ಚುಹೆಚ್ಚು ಬಳಸುವುದರ ಮೂಲಕ ಪ್ರಚುರಪಡಿಸಬೇಕಿದೆ. ‘ಅಂದರಿಕಿ ಮಂಚಿವಾಡು’ ಎಂದು ಸಜ್ಜನ-ದುರ್ಜನರೆನ್ನದೆ ಎಲ್ಲರಿಗೂ ಒಳ್ಳೆಯವನಾಗಿರಬೇಕು ಎಂದು ಹೆಣಗುವವರನ್ನು, ತನ್ಮೂಲಕ ಗಟ್ಟಿತನ ಕಳೆದುಕೊಳ್ಳುವವರನ್ನು, ಅಥವಾ ‘ರಾಮಾಯ ಸ್ವಸ್ತಿ ರಾವಣಾಯ ಸ್ವಸ್ತಿ’ ಎಂದು ರಾಮನನ್ನೂ ರಾವಣನನ್ನೂ ಕೊಂಡಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು, ‘ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ’ ರೀತಿಯ ವರನ್ನು ಬಣ್ಣಿಸಲಿಕ್ಕೆ ಪೂರ್ಣಚೂರ್ಣ ಮಂಜರಿ ನ್ಯಾಯ ಸುಸಂಸ್ಕೃತವಾಗಿ, ಸಮಂಜಸವಾಗಿ ಇದೆ!
ಈ ನೆಪದಲ್ಲಿ ಸಂಸ್ಕೃತದ ಕೆಲವು ಒಳ್ಳೊಳ್ಳೆಯ ‘ನ್ಯಾಯ’ಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು ಅಥವಾ ಹೊಸದಾಗಿ ಪರಿಚಯಿಸಿಕೊಳ್ಳಬಹುದು. ‘ಹಂಸಕ್ಷೀರ ನ್ಯಾಯ’ (ಒಳ್ಳೆಯದನ್ನಷ್ಟೇ ಆರಿಸಿಕೊಂಡು ಕೆಟ್ಟದ್ದನ್ನು ಅಲ್ಲೇ ಬಿಡುವುದು), ‘ಅಂಧಗಜ ನ್ಯಾಯ’ (ಕುರುಡರು ಆನೆಯನ್ನು ಮುಟ್ಟಿ ಒಬ್ಬೊಬ್ಬರೂ ಒಂದೊಂದು ರೀತಿಯಾಗಿ ಬಣ್ಣಿಸುವುದು), ‘ಕೂಪಮಂಡೂಕ ನ್ಯಾಯ’ (ಬಾವಿಯೊಳಗಿನ ಕಪ್ಪೆಯಂತೆ ಸೀಮಿತ ವ್ಯಾಪ್ತಿಯೊಳಗೆ ಸಂಕುಚಿತ ಚಿಂತನೆ ಹೊಂದುವುದು), ‘ಸ್ಥಾಲೀಪುಲಾಕ ನ್ಯಾಯ’ (ಅನ್ನ ಆಗಿದೆಯೇ ನೋಡಲು ಒಂದೇ ಅಗಳನ್ನು ಹಿಚುಕಿ ನೋಡಿದರೆ ಸಾಕಾಗುವುದು), ‘ಕಾಕತಾಲೀಯ ನ್ಯಾಯ’ (ಕಾಗೆ ಹಾರಿಬಂದು ಕುಳಿತುಕೊಂಡ ಕ್ಷಣದಲ್ಲೇ ತಾಳೆ ಮರದ ಸೋಗೆ ಮುರಿದು ಬೀಳುವುದು), ‘ಬೀಜವೃಕ್ಷ ನ್ಯಾಯ’ (ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂಬಂತಾಗುವುದು), ‘ತುಷಕಂಡನ ನ್ಯಾಯ’ (ತೌಡು ಕುಟ್ಟುವ ವ್ಯರ್ಥ ಕೆಲಸ ಮಾಡುವುದು), ‘ಮಂಡೂಕತೋಲನ ನ್ಯಾಯ’ (ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗುವ ಅಸಾಧ್ಯ ಕೆಲಸಕ್ಕೆ ತೊಡಗುವುದು), ‘ಶ್ವಪುಚ್ಛೋನ್ನಾಮನ ನ್ಯಾಯ (ನಾಯಿಯ ಬಾಲವನ್ನು ನಳಿಗೆಯಲ್ಲಿಟ್ಟು ತೆಗೆದರೂ ಮತ್ತೆ ಡೊಂಕಾಗಿಯೇ ಇರುವುದು), ‘ಆಕಾಶ ಮುಷ್ಟಿಹನನ ನ್ಯಾಯ’ (ಗಾಳಿಯಲ್ಲಿ ಗುದ್ದಿ ಮೈ-ಕೈ ನೋಯಿಸಿಕೊಳ್ಳುವುದು) ಮುಂತಾದುವೆಲ್ಲ ಒಂದೋ ಸಂಸ್ಕೃತ ಮೂಲರೂಪದಲ್ಲೇ, ಇಲ್ಲವಾದರೂ ತತ್ಸಮಾನ ಕನ್ನಡ ನುಡಿಗಟ್ಟುಗಳ ರೂಪದಲ್ಲಿ ನಮಗೆ ಗೊತ್ತಿರುವಂಥವೇ. ಮನುಷ್ಯ ಸ್ವಭಾವವನ್ನು ಸಂದರ್ಭೋಚಿತವಾಗಿ ಮಾತಿನಲ್ಲಿ, ಬರವಣಿಗೆಯಲ್ಲಿ ಪರಿಣಾಮಕಾರಿ ಯಾಗಿ ಬಣ್ಣಿಸಲಿಕ್ಕೆ ಇವು ಬಳಕೆಯಾಗುವಂಥವೇ.
ಸಂಸ್ಕೃತಸಾಹಿತ್ಯ ಗಣಿಯಲ್ಲಿ ಇಂಥವು ಅನೇಕ ಇವೆ. ‘ಅಸಿಧಾರಾ ಮಧುಲೇಪನ ನ್ಯಾಯ’- ಅಸಿಧಾರಾ ಎಂದರೆ ಖಡ್ಗದ ಅಲಗು. ಅದಕ್ಕೆ ಲೇಪಿಸಿರುವ ಜೇನುತುಪ್ಪವನ್ನು ನೆಕ್ಕಬೇಕು! ಯಾವ ಕಾರ್ಯದಲ್ಲಿ ಪ್ರಯೋಜನವು ಅತ್ಯಲ್ಪವೋ, ಭಯಂಕರವಾದ ಅಪಾಯವು ನಿಶ್ಚಿತವೋ, ಅಂಥ ಕಾರ್ಯವನ್ನು ವಿವರಿಸುವಾಗ ಈ ನ್ಯಾಯದ ಉಪಯೋಗವಾಗುತ್ತದೆ.
‘ಕಾನನ ಚಂದ್ರಿಕಾ ನ್ಯಾಯ’- ಕಾಡಿನಲ್ಲಿ ಬೀಳುವ ಬೆಳದಿಂಗಳು ವ್ಯರ್ಥವೆಂಬ ಭಾವನೆ. ಊರೊಳಗೆ ಬೀಳುವ ಬೆಳದಿಂಗಳು ಜನೋಪಯೋಗಿ ಆಗುತ್ತದೆ; ಸಮುದ್ರದ ಮೇಲೆ ಬಿದ್ದ ಬೆಳದಿಂಗಳಿಂದ ಉಬ್ಬರ-ಇಳಿತಗಳ ಪ್ರಕೃತಿಯಾಟ ನಡೆಯುತ್ತದೆ; ಸರೋವರದ ಮೇಲೆ ಬಿದ್ದ ಬೆಳದಿಂಗಳಿಂದ ಸುಂದರವಾದ ಕನ್ನೈದಿಲೆಗಳು ಅರಳುತ್ತವೆ; ಆದರೆ ದಟ್ಟಡವಿಯ ಮೇಲೆ ಬಿದ್ದ ಚಂದ್ರಪ್ರಕಾಶವು ಅಡವಿಯೊಳಗಿನ ಕತ್ತಲೆಯನ್ನೂ ನಾಶ ಮಾಡದು, ಪ್ರಾಣಿಗಳಿಗೂ ಪ್ರಯೋಜನವಾಗದು.
ಸಂಪನ್ಮೂಲವು ಪೋಲಾಗುವುದನ್ನು ಬಣ್ಣಿಸುವಾಗ, ಅಪಾತ್ರರಿಗೆ ಕೊಟ್ಟ ದಾನವನ್ನು ಬಣ್ಣಿಸು ವಾಗ ಈ ನ್ಯಾಯದ ಬಳಕೆ. ‘ಗಡ್ಡರಿಕಾ ಪ್ರವಾಹ ನ್ಯಾಯ’- ಗಡ್ಡರಿಕಾ ಅಂದರೆ ಕುರಿಮಂದೆ. ಕುರಿಗಳು ಸಾಲುಗಟ್ಟಿ ಪ್ರವಾಹದಂತೆ ಸಾಗುತ್ತವೆ. ಮುಂದಿನ ಕುರಿಯು ಹಳ್ಳಕ್ಕೆ ಬಿದ್ದರೆ ಹಿಂದಿನದೂ ಬೀಳು ತ್ತದೆ. ಸ್ವಂತಬುದ್ಧಿಯಿಂದ ವಿಚಾರ ಮಾಡದೆ, ಮೂಢತನದಿಂದ ಇನ್ನೊಬ್ಬರನ್ನು ಅನುಕರಿಸುವು ದನ್ನು ವರ್ಣಿಸಲು ಈ ನ್ಯಾಯವನ್ನು ಉಪಯೋಗಿಸುತ್ತಾರೆ.
‘ಘಟಪ್ರದೀಪ ನ್ಯಾಯ’- ಗಡಿಗೆಯೊಳಗೆ ದೀಪವನ್ನಿಟ್ಟರೆ ಅದರ ಪ್ರಕಾಶ ಮಿತವಾಗಿರುತ್ತದೆ. ಗಾಜಿನ ಬುರುಡೆಯೊಳಗಿಟ್ಟರೆ ಒಳಗೂ ಹೊರಗೂ ಪ್ರಕಾಶ ಬೀರುವುದು. ಲೋಭಿಯ ಹಣ ಗಡಿಗೆ ಯೊಳಗಿಟ್ಟ ದೀಪದಂತೆ. ಅವನ ಮಟ್ಟಿಗಷ್ಟೇ ಉಪಯುಕ್ತ. ಅಲ್ಲಿ ಪರೋಪಕಾರವೆಂಬುದು ಇಲ್ಲವೇ ಇಲ್ಲ.
ಉದಾರಿಯ ಬಳಿ ಇರುವ (ಇದ್ದರೆ!) ಹಣ ಗಾಜಿನ ಬುರುಡೆಯೊಳಗಿನ ದೀಪದಂತೆ. ಉಜ್ಜ್ವಲವಾಗಿ ಪ್ರಕಾಶಿಸಿ ನಾಲ್ಕು ಜನರಿಗೆ ಉಪಯುಕ್ತವಾಗುತ್ತದೆ. ಧನವೊಂದೇ ಅಲ್ಲ ಜ್ಞಾನದ ವಿಷಯದಲ್ಲೂ ಈ ನ್ಯಾಯವನ್ನು ಬಳಸಬಹುದು. ‘ಜ್ವರಹರ ತಕ್ಷಕರತ್ನ ನ್ಯಾಯ’ ಅಂತ ಇನ್ನೊಂದು. ತಮ್ಮ ಚಿಕಿತ್ಸೆಯಿಂದ ರೋಗ ಗುಣಪಡಿಸುವುದು ಅಸಾಧ್ಯವಾದಾಗ ಕೆಲ ವೈದ್ಯರು ಅಲಭ್ಯವಾದ ಒಂದು ಔಷಧವನ್ನು ತರಿಸಲು ಹೇಳುತ್ತಾರೆ.
ಉದಾ: ಪಾತಾಳ ಲೋಕದಲ್ಲಿರುವ ತಕ್ಷಕನೆಂಬ ಸರ್ಪದ ಹೆಡೆಮೇಲಿರುವ ರತ್ನವನ್ನು ತರಿಸಿದರೆ ಈ ರೋಗವನ್ನು ಖಂಡಿತ ಗುಣಪಡಿಸುತ್ತೇನೆ! ಅಸಾಧ್ಯವಾದ ಕೆಲಸವನ್ನು ಹೇಳಿ ತಾನು ತಪ್ಪಿಸಿ ಕೊಳ್ಳುವ ಜಾಣತನವನ್ನು ವರ್ಣಿಸುವ ನ್ಯಾಯವಿದು. ವೈದ್ಯರದು ಒಂದು ಉದಾಹರಣೆ ಅಷ್ಟೇ, ಎಲ್ಲ ಕ್ಷೇತ್ರಗಳಲ್ಲೂ ಇಂಥವರಿರುತ್ತಾರೆ. ‘ತುಲೋನ್ನಮನ ನ್ಯಾಯ’- ತಕ್ಕಡಿಯ ಒಂದು ಪರಡಿ ಮೇಲೆ ಬಂದರೆ ಇನ್ನೊಂದು ಕೆಳಗೆ ಹೋಗಲೇಬೇಕು.
ಹಾಗೆ ಒಬ್ಬರಿಗೆ ಉಪಕಾರ ಮಾಡಲಿಕ್ಕೆಂದು ಇನ್ನೊಬ್ಬರಿಗೆ ಅಪಕಾರವೆಸಗುವುದಕ್ಕೆ ಈ ನ್ಯಾಯ ಅನ್ವಯ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ರೀತಿಯ ಆಶಯ ಅಲ್ಲಿರುವುದಿಲ್ಲ. ಅಧಿಕಾರಕ್ಕಾಗಿ ಬಿಟ್ಟಿಭಾಗ್ಯಗಳನ್ನು ಘೋಷಿಸಿ ಜನಸಾಮಾನ್ಯರಿಗೆ ಕಷ್ಟ-ನಷ್ಟ ಉಂಟುಮಾಡುವ, ರಸ್ತೆಗುಂಡಿ ಗಳನ್ನೂ ಸರಿಪಡಿಸಲಿಕ್ಕಾಗದ ಸರಕಾರಗಳು ಮಾಡುವುದು ಇದನ್ನೇ ಅಲ್ಲವೇ? ‘ದರಿದ್ರ ದಂಪತೀ ಕಂಬಲ ನ್ಯಾಯ’ ಸಹ ಹೆಚ್ಚೂಕಡಿಮೆ ಇಂಥದ್ದೇ.
ಬಡ ದಂಪತಿಗೆ ಚಳಿಗಾಲದಲ್ಲಿ ಒಂದೇ ಚಿಕ್ಕ ಕಂಬಳಿ ಇಬ್ಬರಿಗೂ ಹೊದಿಕೆಯಾಗಬೇಕಾದರೆ ಅದು ಯಾರೊಬ್ಬರ ಚಳಿಯನ್ನೂ ಸರಿಯಾಗಿ ಹೋಗಲಾಡಿಸದು. ಆದರೆ, ‘ದೇಹಲೀದೀಪ ನ್ಯಾಯ’ ನೋಡಿ: ದೇಹಲಿಯೆಂದರೆ ಹೊಸ್ತಿಲು. ಅದರ ಮೇಲೆ ದೀಪವನ್ನಿಟ್ಟರೆ ಪ್ರಕಾಶವು ಒಳ ಜಗಲಿಗೂ ಹೊರ ಅಂಗಳಕ್ಕೂ ಹರಡುವುದು. ಒಂದೇ ಕೆಲಸದಿಂದ ಎರಡು ಉದ್ದೇಶಗಳು ಈಡೇರಿದರೆ, ಒಂದೇ ಶಬ್ದಕ್ಕೆ ಎರಡು ಕಡೆ ಅನ್ವಯವಿದ್ದರೆ, ಈ ನ್ಯಾಯ ಬಳಕೆಯಾಗುತ್ತದೆ.
ಹೀಗೆಯೇ ‘ತಕ್ರಕೌಂಡಿನ್ಯ ನ್ಯಾಯ’, ‘ತಿಲತಂಡುಲ ನ್ಯಾಯ’, ‘ನಟಭಾರ್ಯಾ ನ್ಯಾಯ’, ‘ಪಿಪೀಲಿಕಾಗತಿ ನ್ಯಾಯ’, ‘ಬಕಬಂಧನ ನ್ಯಾಯ’, ‘ಬಧಿರಕರ್ಣಜಪ ನ್ಯಾಯ’, ‘ರಜ್ಜುಸರ್ಪ ನ್ಯಾಯ’, ‘ರಾಸಭರಟಿತ ನ್ಯಾಯ’... ಅಂತೆಲ್ಲ ಬಹಳಷ್ಟು ಇವೆಯಾದರೂ, ಸ್ಥಳಮಿತಿಯ ದೃಷ್ಟಿಯಿಂದ ‘ಟಿಟ್ಟಿಭ ನ್ಯಾಯ’ ಎಂಬೊಂದು ಚಂದದ ನೀತಿಕಥೆಯೊಂದಿಗೆ ಇದನ್ನು ಮುಗಿಸುತ್ತೇನೆ.
ಟಿಟ್ಟಿಭ ಎಂಬುದು ಒಂದು ಬಗೆಯ ಪುಟ್ಟ ಹಕ್ಕಿ. ಲಾವಕ್ಕಿ ಎನ್ನುತ್ತಾರೆ. ಸಮುದ್ರತೀರದಲ್ಲಿ ಒಂದು ಗಿಡದ ಮೇಲೆ ಗೂಡು ಕಟ್ಟಿಕೊಂಡು ಗಂಡುಹೆಣ್ಣು ಟಿಟ್ಟಿಭಗಳು ವಾಸವಾಗಿದ್ದವು. ಹೆಣ್ಣುಹಕ್ಕಿ ಮೊಟ್ಟೆ ಇಟ್ಟಾಗಲೆಲ್ಲ ಸಮುದ್ರವು ಉಕ್ಕಿಬಂದು ಅಲೆಗಳ ಹೊಡೆತದಿಂದ ಮೊಟ್ಟೆಗಳು ತೇಲಿ ಹೋಗುತ್ತಿದ್ದವು.
ಗಂಡುಹಕ್ಕಿ ಕೋಪಗೊಂಡು ಸಮುದ್ರವನ್ನು ಒಣಗಿಸಿ ಬಿಡುತ್ತೇನೆಂದು ತನ್ನ ಕೊಕ್ಕಿನಿಂದ ಸಮುದ್ರದ ನೀರಿನ ಹನಿಯನ್ನು ತಂದು ಮರಳದಿಣ್ಣೆಯ ಮೇಲೆ ಹಾಕುತ್ತಲಿತ್ತು. ಅಕಸ್ಮಾತ್ ಭೂಲೋಕಪ್ರಯಾಣದಲ್ಲಿದ್ದ ನಾರದ ಮಹರ್ಷಿಗಳು ಈ ಹಕ್ಕಿಯ ಗೋಳನ್ನು ಕಂಡು ಮರುಕ ಪಟ್ಟರು.
ವೈಕುಂಠಕ್ಕೆ ಹೋಗಿ ಗರುಡನಿಗೆ ಈ ಸಂಗತಿಯನ್ನು ಅರುಹಿದರು. ಗರುಡ ಪಕ್ಷಿರಾಜ. ತನ್ನ ಬಳಗಕ್ಕೆ ಸೇರಿದ ಟಿಟ್ಟಿಭಕ್ಕೆ ಒದಗಿದ ಆಪತ್ತನ್ನು ಪರಿಹರಿಸಬೇಕೆಂದು ನಿಶ್ಚಯಿಸಿ ಶ್ರೀಮನ್ನಾರಾಯಣನಲ್ಲಿ ಈ ಸಂಗತಿಯನ್ನು ನಿವೇದಿಸಿ ಸಹಾಯ ಮಾಡಬೇಕೆಂದು ಪ್ರಾರ್ಥಿಸಿದನು. ಗರುಡನ ದಾಕ್ಷಿಣ್ಯಕ್ಕೆ ಒಳಗಾಗಿ ನಾರಾಯಣನು ಸಮುದ್ರರಾಜನಿಗೆ ಬಹುದೂರ ಹಿಂದಕ್ಕೆ ಹೊರಟುಹೋಗಬೇಕೆಂದೂ ಇನ್ನೊಮ್ಮೆ ಟಿಟ್ಟಿಭದ ಗೋಜಿಗೆ ಹೋಗಬಾರದೆಂದೂ ಆಜ್ಞೆಯಿತ್ತನು.
ಟಿಟ್ಟಿಭ ಗೆದ್ದಿತು, ಸಮುದ್ರನಿಗೆ ಗರ್ವಭಂಗವಾಯಿತು. ಈ ಕಥೆ ಹಿತೋಪದೇಶದಲ್ಲಿದೆ. ಹಾಗೆ ನೋಡಿದರೆ ನ್ಯಾಯಗಳೆಲ್ಲ ಬಹುಮಟ್ಟಿಗೆ ಉಪದೇಶಕ್ಕೇ ಬಳಕೆಯಾಗುವವು. ಎದುರಾಳಿಯು ಅಲ್ಪನೆಂದು ಭಾವಿಸಿ ಹಿಂಸೆ ಕೊಡುವುದು ಸರಿಯಲ್ಲ. ಅವನಿಗೆ ಯಾವ ಬಗೆಯ ಸಹಾಯ ಸಂಪತ್ತು ಇದೆಯೋ ಯಾರು ಬಲ್ಲರು? ಅಲ್ಲದೇ, ನಿರುಪದ್ರವಿ ಟಿಟ್ಟಿಭಕ್ಕಾದರೆ ಸಹಾಯಕ್ಕೆ ಶ್ರೀಮನ್ನಾ ರಾಯಣನೂ ಮನಸ್ಸು ಮಾಡುತ್ತಾನೆ.
ಅದೇ, ಪುಟ್ಟ ಟಿಟ್ಟಿಭಕ್ಕೆ ಸಲ್ಲುವ ದೊಡ್ಡ ನ್ಯಾಯ! ಕೊನೆಯಲ್ಲೊಂದು ಗಂಭೀರ ತಮಾಷೆ. ನ್ಯಾಯಕ್ಕೆ ಸಂಬಂಧಿಸಿದ್ದೇ. ಕರಾರುವಾಕ್ಕಾಗಿ ಹೇಳುವುದಾದರೆ ನ್ಯಾಯಕ್ಕಲ್ಲ ನ್ಯಾಯಾಧೀಶರಿಗೆ ಸಂಬಂಧಿಸಿದ್ದು ಎನ್ನಿ. ತನ್ನ ಸ್ಥಾನಮಾನ ಪರಿಗಣಿಸದೆ ಹಿಂದೂ ಧರ್ಮವನ್ನು ಲೇವಡಿಯಾಡುವ ರೀತಿಯಲ್ಲಿ ಮಾತನಾಡಿದ ಮುಖ್ಯ ನ್ಯಾಯಾಧೀಶನಿಗೆ ಸಾತ್ತ್ವಿಕ ಸಜ್ಜನ ವಕೀಲರೊಬ್ಬರು ಸಹನೆ ಕಳೆದುಕೊಂಡು ಶೂ ಎಸೆಯಹೊರಟ ಘಟನೆಯನ್ನು ಪಾ‘ಶೂ’ಪತಾಸ ನ್ಯಾಯ ಎನ್ನೋಣವೇ?