ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಕಪ್ಪೆಯಂತೆ ಕುಪ್ಪಳಿಸುವ ಚಪ್ಪಟೆಕಲ್ಲನ್ನು ಅಪ್ಪಿಕೊಂಡು...

ಐದಾರು ಬಾರಿಯಾದರೂ ಛಂಗನೆ ಜಿಗಿದ ಮೇಲಷ್ಟೇ ಅದು ಮುಳುಗಬೇಕು. ಹೆಚ್ಚು ಸಲ ಪುಟಿದಷ್ಟೂ ಆಟದಲ್ಲಿ ಹೆಚ್ಚು ಮೋಜು. ಎಸೆದ ಕಲ್ಲುಗಳನ್ನೇನೂ ನೀರಲ್ಲಿ ಮುಳುಗಿ ಎತ್ತಿಕೊಂಡು ಬರಬೇಕೆಂದಿಲ್ಲ. ಅವು ಕರ್ಣನ ಬಾಣಗಳಂತೆ ಒಮ್ಮೆ ಪ್ರಯೋಗಿಸಿದ ಮೇಲೆ ಮುಗೀತು. ಅಲ್ಲದೇ ನದೀತೀರದಲ್ಲಾದರೆ ಅಂಥ ಕಲ್ಲುಗಳಿಗೇನು ಕೊರತೆಯೇ? ಹಾಂ, ಕಪ್ಪೆಕಲ್ಲು ಅಷ್ಟು ಸಲ ಪುಟಿದು ಅಷ್ಟು ದೂರ ಸಾಗಬೇಕಾದರೆ ಚಿಕ್ಕಪುಟ್ಟ ಕೆರೆ ಕೊಳ ಸಾಲದು.

ಕಪ್ಪೆಯಂತೆ ಕುಪ್ಪಳಿಸುವ ಚಪ್ಪಟೆಕಲ್ಲನ್ನು ಅಪ್ಪಿಕೊಂಡು...

-

ತಿಳಿರು ತೋರಣ

srivathsajoshi@yahoo.com

ಅಪ್ಪಿಕೊಳ್ಳುವುದೇನು ಬಂತು!? ಚಪ್ಪಟೆಕಲ್ಲು ಕೈಯಲ್ಲಿದ್ದರೆ ಮತ್ತು ಹತ್ತಿರದಲ್ಲೊಂದು ಕೆರೆಯೋ ನದಿಯೋ ಸರೋವರವೋ ಒಟ್ಟಿನಲ್ಲಿ ನೀರಿನ ಆಶ್ರಯ ಸಿಕ್ಕಿದರೆ ‘ಕಪ್ಪೆಕಲ್ಲು’ ಆಡೋದೇ! ಕಪ್ಪೆಕಲ್ಲು? ಹಾಗೆಂದರೇನು? ಆಡುವುದು ಹೇಗೆ? ಪಟ್ಟಣಪ್ರದೇಶದಲ್ಲಿ ಹುಟ್ಟಿ ಬೆಳೆದವರಿಗೆ ಕಪ್ಪೆಕಲ್ಲು ಆಡಿ-ನೋಡಿ ಬಿಡಿ ಏನೆಂದು ಕೇಳಿಯೂ ಗೊತ್ತಿರಲಿಕ್ಕಿಲ್ಲ. ಆದರೆ ಹಳ್ಳಿಗಾಡಿನಲ್ಲಿ ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಬೆಳೆದು ಹಾಯಾಗಿರುವವರನ್ನು ಒಮ್ಮೆ ಕೇಳಿ ನೋಡಿ. ಕಪ್ಪೆಕಲ್ಲು ಎಂದೊಡನೆ ಅವರ ಕಣ್ಣುಗಳು ಖುಷಿಯಿಂದ ಕೊಳದಷ್ಟು ಅಗಲವಾಗಬಹುದು.

ಚಿಕ್ಕಂದಿನಲ್ಲಿ ಕಪ್ಪೆಕಲ್ಲು ಆಡಿದ ಕೊಳ, ನದಿ, ಕೆರೆ, ಸರೋವರ ಅವರಿಗೆ ನೆನಪಾಗಿ ಅವರೇ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಆಟಕ್ಕೆ ಶುರು ಹಚ್ಚಬಹುದು. ನಿಮ್ಮ ಕೈಗೂ ಒಂದು ಕಲ್ಲು ಕೊಟ್ಟು ಆಟದ ಹುಚ್ಚು ಹತ್ತಿಸಬಹುದು.

ಸಿಂಪಲ್ಲಾಗಿ ಹೇಳುವುದಾದರೆ ನೀರಿಗೆ ಕಲ್ಲೆಸೆಯುವ ಒಂದು ಮೋಜಿನ ಆಟವೇ ಕಪ್ಪೆಕಲ್ಲು. ಮತ್ತೆ, ನೀರಿನಲ್ಲಿ ಕಲ್ಲೆಸೆದರೆ ಅದು ಮುಳುಗಿಹೋಗುತ್ತದಲ್ಲಾ ಅದೆಂಥ ಆಟ ಎನ್ನುವಿರಾ? ಹಾಗಲ್ಲ. ಎಸೆದ ಕಲ್ಲು ನೀರಿನಲ್ಲಿ ಒಮ್ಮೆಗೇ ಮುಳುಗಿ ಹೋಗದೆ ಅಲ್ಲಿಂದಲೇ ಪುಟಿಯುವಂತೆ, ಕಪ್ಪೆಯ ಹಾಗೆ ಕುಪ್ಪಳಿಸುವಂತೆ ಎಸೆಯಬೇಕು.

ಐದಾರು ಬಾರಿಯಾದರೂ ಛಂಗನೆ ಜಿಗಿದ ಮೇಲಷ್ಟೇ ಅದು ಮುಳುಗಬೇಕು. ಹೆಚ್ಚು ಸಲ ಪುಟಿದಷ್ಟೂ ಆಟದಲ್ಲಿ ಹೆಚ್ಚು ಮೋಜು. ಎಸೆದ ಕಲ್ಲುಗಳನ್ನೇನೂ ನೀರಲ್ಲಿ ಮುಳುಗಿ ಎತ್ತಿಕೊಂಡು ಬರಬೇಕೆಂದಿಲ್ಲ. ಅವು ಕರ್ಣನ ಬಾಣಗಳಂತೆ ಒಮ್ಮೆ ಪ್ರಯೋಗಿಸಿದ ಮೇಲೆ ಮುಗೀತು. ಅಲ್ಲದೇ ನದೀತೀರದಲ್ಲಾದರೆ ಅಂಥ ಕಲ್ಲುಗಳಿಗೇನು ಕೊರತೆಯೇ? ಹಾಂ, ಕಪ್ಪೆಕಲ್ಲು ಅಷ್ಟು ಸಲ ಪುಟಿದು ಅಷ್ಟು ದೂರ ಸಾಗಬೇಕಾದರೆ ಚಿಕ್ಕಪುಟ್ಟ ಕೆರೆ ಕೊಳ ಸಾಲದು.

ಇದನ್ನೂ ಓದಿ: Srivathsa Joshi Column: ಮದವೇರಿದ್ದಿರುವಂಥ ಹಸ್ತಿ ನಡೆಯೇ ಮತ್ತೇಭವಿಕ್ರೀಡಿತಂ...

ನದಿ ಅಥವಾ ಸರೋವರದಂತೆ ನೀರಿನ ಪಾತ್ರವೂ ವಿಶಾಲವಾಗಿಯೇ ಇರಬೇಕೆನ್ನಿ. ದಡದಲ್ಲಿ ನಿಂತುಕೊಂಡೇ ಆಡುವುದಾದರೂ ನೀರಿನ ಸನಿಹದಲ್ಲಿ ತುಸು ಹೆಚ್ಚಿನ ಎಚ್ಚರಿಕೆಯೂ ಬೇಕೆನ್ನಿ. ಒಟ್ಟಿನಲ್ಲಿ ಇದೇ ಕಪ್ಪೆಕಲ್ಲು ಆಟ. ಗಮ್ಮತ್ತೆಂದರೆ ಈ ಆಟಕ್ಕೆ ತಂಡ ಕಟ್ಟಿಕೊಳ್ಳಬೇಕಾದ್ದಿಲ್ಲ. ಎದುರಾಳಿ ಬೇಕಂತಿಲ್ಲ.

ತೀರ್ಪುಗಾರರ ಆವಶ್ಯಕತೆಯಿಲ್ಲ. ಕೊನೆಗೆ ಪ್ರೇಕ್ಷಕರೂ ಇರಬೇಕೆಂದೇನಿಲ್ಲ. ಬೊಗಸೆ ತುಂಬ ಚಪ್ಪಟೆ ಕಲ್ಲುಗಳು, ನದಿಯ ತುಂಬ ನೀರು ಇದ್ದರಾಯಿತು. ಒಬ್ಬನೇ/ಒಬ್ಬಳೇ ಕಲ್ಲೆಸೆಯುತ್ತ ಎಸೆಯುತ್ತ, ಅದೆಷ್ಟು ಸರ್ತಿ ಕುಪ್ಪಳಿಸಿತೆಂದು ಲೆಕ್ಕ ಹಾಕುತ್ತ, ಲೆಕ್ಕ ಹೆಚ್ಚಿಸಿಕೊಳ್ಳುತ್ತ ಹೋಗಬಹುದು. ಆಟದ ಖುಷಿಯಲ್ಲೇ ಮೈಮರೆಯಬಹುದು.

ಜೆರ್ರಿ ಕೋಲ್‌ಮನ್ ಮೆಕ್ ಎಂಬೊಬ್ಬ ಶ್ರೀಸಾಮಾನ್ಯ ಅಮೆರಿಕನ್ನನೂ ಕಪ್ಪೆಕಲ್ಲು ಆಡುತ್ತಿದ್ದದ್ದು ಖುಷಿಯಲ್ಲಿ ಮೈಮರೆಯುವುದಕ್ಕೆಂದೇ. ಮನಸ್ಸಿನ ದುಗುಡ ಮಾಯವಾಗಬೇಕೆಂದೇ. ಆತ ಟೆಕ್ಸಸ್ ರಾಜ್ಯದ ಆಯಿಲ್ ಕಂಪನಿಯೊಂದರಲ್ಲಿ ಫೀಲ್ಡ್ ಎಂಜಿನಿಯರ್ ಆಗಿದ್ದವನು. ಆಯಿಲ್ ಡ್ರಿಲ್ಲಿಂಗ್ ಕೆಲಸದ ಮೇಲೆ ಬೇರೆಬೇರೆ ದೇಶಗಳಿಗೆ, ಸಮುದ್ರ ತೀರಗಳಿಗೆ ಪ್ರವಾಸ ಹೋಗಬೇಕಾಗುತ್ತಿತ್ತು.

ಹಾಗೆ 1979ರಲ್ಲಿ ಒಮ್ಮೆ ಯುರೋಪ್‌ನಲ್ಲಿ ಸ್ಪೆ ನ್ ದೇಶಕ್ಕೆ ಹೋಗಿದ್ದನು. ಅಲ್ಲಿ ಉತ್ತರ ಸಮುದ್ರ ದಲ್ಲಿ ಆಯಿಲ್ ಡ್ರಿಲ್ಲಿಂಗ್ ಕೆಲಸ. ಅವನ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದ ದಿನಗಳವು. ಅದರಿಂದ ತುಂಬ ನೊಂದುಕೊಂಡಿದ್ದನು. ದಿನದ ಕೆಲಸ ಮುಗಿದ ಮೇಲೆ ಸಂಜೆ ಹೊತ್ತಿನಲ್ಲಿ ಬೇಸರ ಕಳೆಯಲಿಕ್ಕೆಂದು ಒಬ್ಬನೇ ಕಡಲತೀರಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದನು. ಕಾಲಕ್ಷೇಪ ಆಗಬೇಕೆಂದು ನೀರಿಗೆ ಕಲ್ಲೆಸೆಯುತ್ತಿದ್ದನು.

ಸಿಟ್ಟು, ಹತಾಶೆ ಮೈಗೂಡಿದ್ದರಿಂದಲೋ ಏನೋ ಜೋರಾಗಿಯೇ ಎಸೆಯುತ್ತಿದ್ದನು. ಅವು ಸಮುದ್ರತೀರದ ಬೆಣಚು ಕಲ್ಲುಗಳು. ಚಪ್ಪಟೆ ಆಕಾರದವು. ಕಪ್ಪೆಕಲ್ಲು ಆಟಕ್ಕೆ ಹೇಳಿ ಮಾಡಿಸಿ ದಂಥವು. ಕಲ್ಲುಗಳನ್ನು ಎಸೆಯುವ ನಿರ್ದಿಷ್ಟ ಕ್ರಮದಿಂದಾಗಿ ಅವು ಮುಳುಗದೆ ನೀರ ಮೇಲೆ ಜಿಗಿಯುತ್ತಿದ್ದವು.

ಕೆಲವೊಂದು ಹತ್ತಿಪ್ಪತ್ತು ಸರ್ತಿ ಪುಟಿಯುತ್ತಿದ್ದುದೂ ಉಂಟು! ಮೆಕ್‌ಯ ಕಪ್ಪೆಕಲ್ಲು ಆಟವನ್ನು ಪುಕ್ಕಟೆ ಮನೋರಂಜನೆ ಎಂಬಂತೆ ನೋಡುವುದಕ್ಕೆ ಅಲ್ಲಿ ಜನ ಸೇರುತ್ತಿದ್ದರು. ಹಿರಿಕಿರಿಯರೆನ್ನದೆ ಎಲ್ಲರಿಗೂ ಆ ವೀಕ್ಷಣೆಯಲ್ಲಿ ಆಸಕ್ತಿ ಹುಟ್ಟಿತ್ತು. ಆ ರೀತಿ ನೀರಮೇಲೆ ಜಿಗಿಯುವಂತೆ ಕಲ್ಲೆಸೆಯುವ ವಿದ್ಯೆಯನ್ನು ತಮಗೂ ಕಲಿಸಿಕೊಡುವಂತೆ ಅವನಲ್ಲಿ ದುಂಬಾಲು ಬೀಳುತ್ತಿದ್ದರು. ಅವರ ಪಾಲಿಗೆ ಮೆಕ್ ಒಬ್ಬ ಮಹಾನ್ ಕ್ರೀಡಾಪಟು, ಬೆರಗುಗಣ್ಣಿಂದ ನೋಡಬಹುದಾದ ಹೀರೋ ಆಗಿಬಿಟ್ಟಿದ್ದನು.

ಕಪ್ಪೆಕಲ್ಲು ಆಟ (ಇಂಗ್ಲಿಷ್‌ನಲ್ಲಿ stone skipping ಎನ್ನುತ್ತಾರೆ) ಮೆಕ್‌ಯ ಜೀವನವನ್ನೇ ಬದಲಾಯಿಸಿತು. ಆಟದ ಬಗ್ಗೆ ಅವನು The Secrets of Stone Skipping ಎಂಬ ಒಂದು ಪುಸ್ತಕವನ್ನು ಬರೆದು ಪ್ರಕಟಿಸಿದನು. ಕಲ್ಲೆಸೆಯುವ ತಂತ್ರಗಾರಿಕೆ, ಕಲ್ಲಿನ ಆಕಾರ, ಗಾತ್ರ, ತೂಕ, ಎಸೆತದ ಕೋನ ಮುಂತಾದವನ್ನೆಲ್ಲ ಅದರಲ್ಲಿ ವಿವರಿಸಿದನು. ಪುರಾತನ ಗ್ರೀಕರೂ ಸ್ವಚ್ಛಂದ ಸರೋವರಗಳಲ್ಲಿ ಕಪ್ಪೆಕಲ್ಲು ಆಡುತ್ತಿದ್ದರು; ಹದಿನೈದನೆಯ ಶತಮಾನದಲ್ಲಿ ಚಾಲ್ತಿಗೆ ಬಂದ ducks and drakes ಎಂಬ ಇಂಗ್ಲಿಷ್ ಪದಪುಂಜ (ಲಂಗುಲಗಾಮಿಲ್ಲದೆ ದುಡ್ಡು ಖರ್ಚು ಮಾಡುತ್ತ ಮಾಡುತ್ತ ಕೊನೆಗೆ ಮುಳುಗಿ ಹೋಗುವವರನ್ನು ಕುರಿತಂತೆ) ಸ್ಟೋನ್ ಸ್ಕಿಪ್ಪಿಂಗ್‌ನಿಂದಲೇ ಬಂದದ್ದು; ಶೇಕ್ಸ್‌ಪಿಯರ್ ಮತ್ತು ಹೋಮರ್‌ನ ಬರಹಗಳಲ್ಲೂ ಸ್ಟೋನ್ ಸ್ಕಿಪ್ಪಿಂಗ್‌ನ ಉಲ್ಲೇಖ ವಿದೆ; ಹಿಮಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೊಗಳು ಮಂಜಿನ ಮೇಲೂ, ಸಹಾರಾ ಮರುಭೂಮಿ ಯಲ್ಲಿ ವಾಸಿಸುವ ಬೆಡುಯ್ನ್ ಬುಡಕಟ್ಟು ಜನಾಂಗದವರು ನುಣುಪಾದ ಮರಳುಗುಡ್ಡಗಳ ಮೇಲೂ ಸ್ಟೋನ್ ಸ್ಕಿಪ್ಪಿಂಗ್ ಆಡುತ್ತಿದ್ದರು...

ಅಂತೆಲ್ಲ ಕಪ್ಪೆಕಲ್ಲು ಆಟದ ಚರಿತ್ರೆಯನ್ನೂ ಸ್ವಾರಸ್ಯಗಳನ್ನೂ ಮೆಕ್ ಆ ಪುಸ್ತಕದಲ್ಲಿ ಬಣ್ಣಿಸಿದನು. ಪುಸ್ತಕ ಪ್ರಕಟವಾಗಿ ಕಪ್ಪೆಕಲ್ಲು ಆಟ ಹೆಚ್ಚುಹೆಚ್ಚು ಜನರ ಆಸಕ್ತಿ ಕೆರಳಿಸಿತು. ಅಂಥವರನ್ನು ಸೇರಿಸಿಕೊಂಡು NASSA (North American Stone Skipping Association) ಎಂಬ ‘ಕಪ್ಪೆಕಲ್ಲು ಕ್ರೇಜಿ’ಗಳ ಸಂಘವನ್ನೂ ಮೆಕ್ ಸ್ಥಾಪಿಸಿದನು.

ಮನೋದೌರ್ಬಲ್ಯ ಉಳ್ಳವರಿಗೂ, ವ್ಹೀಲ್‌ಚೇರ್ ಬಳಸುವ ವಿಕಲಾಂಗರಿಗೂ ಕಪ್ಪೆಕಲ್ಲು ಆಟ ಕಲಿಸಿ ಕೊಟ್ಟು ಅವರ ಮುಖದಲ್ಲಿ ನಗು ಅರಳುವಂತೆ ಮಾಡಿದನು. ಕಪ್ಪೆಕಲ್ಲು ಆಟದ ಬಗ್ಗೆ ಅವನ ಅಬ್ಸೆಷನ್ ಎಲ್ಲಿಯವರೆಗಿತ್ತೆಂದರೆ ಸ್ಪೆಷಲ್ ಒಲಿಂಪಿಕ್ಸ್ ಪಂದ್ಯಾಟಗಳಲ್ಲಿ ಕಪ್ಪೆಕಲ್ಲು ಆಟವನ್ನೂ ಸೇರಿಸುವಂತೆ ಅಧಿಕಾರಿಗಳ ಮನವೊಲಿಸಿದ್ದನು!

ಒಮ್ಮೆ ಟೆಕ್ಸಸ್‌ನ ಬ್ಲಾಂಕೊ ನದೀತಟದಲ್ಲಿ, ವಿಡಿಯೊ ರೆಕಾರ್ಡಿಂಗ್ ಮಾಡುತ್ತಿದ್ದ ಸ್ನೇಹಿತನ ಸಮ್ಮುಖದಲ್ಲಿ, ಮೆಕ್ ಎಸೆದ ಒಂದು ಚಪ್ಪಟೆಕಲ್ಲು ನದಿನೀರಿನಲ್ಲಿ ಮೂವತ್ತೆಂಟು ಸರ್ತಿ ಜಿಗಿದು ಅಲ್ಲಿ ನೆರೆದಿದ್ದವರನ್ನು ದಂಗುಬಡಿಸಿತ್ತು. ಆ ಸಮಯಕ್ಕೆ ಅದು ಗಿನ್ನೆಸ್ ದಾಖಲೆಯಾಗಿಯೂ ಸೇರಿಕೊಂಡಿತ್ತು.

ಅಂತೂ ಮೆಕ್ ಮಾಡಿದ ಪ್ರಚಾರದಿಂದಾಗಿ ಅಮೆರಿಕದಲ್ಲಿ ಕಪ್ಪೆಕಲ್ಲು ಕ್ರೇಜ್ ಹರಡಿತು. ಬೇಸಗೆಯ ವಾರಾಂತ್ಯಗಳಲ್ಲಿ ಮನೋರಂಜನೆಯ ಸಾಧನವಾಯಿತು. ಗ್ರಾಮೀಣ ಪ್ರದೇಶಗಳಲ್ಲಿ, ಕೆರೆ-ಸರೋವರಗಳಿರುವ ಹಳ್ಳಿಗಳಲ್ಲಿ ಕಪ್ಪೆಕಲ್ಲು ಪಂದ್ಯಾಟಗಳೂ ಆರಂಭವಾದವು. ಸಾಮಾಜಿಕ ಕಾರ್ಯಗಳಿಗಾಗಿ ಧನಸಂಗ್ರಹಣೆ (ಫಂಡ್ ರೈಸಿಂಗ್) ಮಾಡುವವರೂ ಜನಾಕರ್ಷಣೆಗಾಗಿ ಕಪ್ಪೆಕಲ್ಲು ಆಟವನ್ನು ಆಯ್ದುಕೊಂಡರು.

ಹೊರಾಂಗಣ ಆಟವೆಂದಮೇಲೆ ಯಾರಿಗೆ ತಾನೆ ಇಷ್ಟವಾಗದು? ಒಂದು ಡಾಲರ್ ಪ್ರವೇಶಧನ ಕೊಟ್ಟರೆ ಐದು ಕಲ್ಲು ಎಸೆಯಬಹುದು. ಅತಿಹೆಚ್ಚು ಜಿಗಿತಗಳನ್ನು ಸಾಧಿಸಿದವರಿಗೆ ಟ್ರೋಫಿ. ಹಾಗೆ ಆರಂಭವಾದದ್ದೇ ಮಿಷಿಗನ್ ರಾಜ್ಯದ ಮೆಕಿನಾಕ್ ಐಲ್ಯಾಂಡ್ ಎಂಬ ಪ್ರವಾಸಿ ತಾಣದಲ್ಲಿ ಪ್ರತಿವರ್ಷ ಜುಲೈ 4ರಂದು (ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಂದು) ನಡೆಯುವ ಅಂತಾರಾ ಷ್ಟ್ರೀಯ ಕಪ್ಪೆಕಲ್ಲು ಚಾಂಪಿಯನ್‌ಶಿಪ್ ಪಂದ್ಯಾಟ.

ಹೌದು, ಅಂತಾರಾಷ್ಟ್ರೀಯ ಏಕೆಂದರೆ ದೇಶವಿದೇಶಗಳಿಂದ ಆಸಕ್ತರು ಬಂದು ಒಂದೋ ಆಟಗಾರ ರಾಗಿ, ಇಲ್ಲವೇ ನೋಟಗಾರರಾಗಿ ಭಾಗವಹಿಸುತ್ತಾರೆ. ಅದರ ಜನಪ್ರಿಯತೆಯನ್ನು ಕಂಡು ಪೆನ್ಸಿಲ್ವೇನಿಯಾ, ವರ್ಮಾಂಟ್, ಅರ್ಕನ್ಸಾಸ್ ಸಂಸ್ಥಾನಗಳಲ್ಲೂ ಕಪ್ಪೆಕಲ್ಲು ಚಾಂಪಿಯನ್‌ಶಿಪ್ ಪಂದ್ಯಗಳು ಪ್ರತಿವರ್ಷ ನಡೆಯುತ್ತಿವೆ. ಹೊಸಹೊಸ ದಾಖಲೆಗಳು ಬರೆಯಲ್ಪಡುತ್ತವೆ.

2002ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಕರ್ಟ್ ಸ್ಟೆ ನರ್ ಎಂಬವನು 40 ಜಿಗಿತಗಳಿಂದ ಈ ಹಿಂದೆ ಮೆಕ್‌ಯ ಹೆಸರಲ್ಲಿದ್ದ 38 ಜಿಗಿತಗಳ ದಾಖಲೆ ಮುರಿದನು. ಐದು ವರ್ಷಗಳ ಬಳಿಕ 2007ರಲ್ಲಿ ರಸೆಲ್ ಬಾಯರ‍್ಸ್ ಎಂಬಾತ 51 ಜಿಗಿತಗಳನ್ನು ಸಾಧಿಸಿದರೆ ಮರುವರ್ಷವೇ ಮಾಕ್ಸ್ ಸ್ಟೆ ನರ್ ಎಂಬುವವ ಜಿಗಿತಗಳ ಸಂಖ್ಯೆಯನ್ನು 61ಕ್ಕೇರಿಸಿದನು. ಈಗ ಗಿನ್ನೆಸ್ ದಾಖಲೆಯಲ್ಲಿರುವ ಹೆಸರು 88 ಜಿಗಿತ ಗಳೊಂದಿಗೆ ಕರ್ಟ್ ಸ್ಟೈನರ್‌ನದು. 2013ರ ಸೆಪ್ಟೆಂಬರ್ ೬ರಂದು ಪೆನ್ಸಿಲ್ವೇನಿಯಾದಲ್ಲಿ ಆ ಪರಾಕ್ರಮ ನಡೆದದ್ದು.

ಕಪ್ಪೆಕಲ್ಲು ಆಟವನ್ನು ಕುರಿತ ಈ ಎಲ್ಲ ರೋಚಕ ವಿವರಗಳು ನಿಮಗೆ www.stoneskipping.com ಎಂಬ ವೆಬ್‌ಸೈಟ್ ನಲ್ಲಿ ವಿಡಿಯೋಗಳ ಸಹಿತ ಸಿಗುತ್ತವೆ. ತುಂಬ ಹಿಂದೆ ಚಪ್ಪಟೆಕಲ್ಲಿನ ಬದಲಿಗೆ ಆಯಿಸ್ಟರ್ ಚಿಪ್ಪುಗಳನ್ನು ಇದೇ ರೀತಿ ನೀರಿಗೆಸೆದು ಅವು ಜಿಗಿಯುವುದನ್ನು ನೋಡಿ ಆನಂದಿಸು ತ್ತಿದ್ದರಂತೆ; ಅಮೆರಿಕದ ಮೊತ್ತಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್‌ನಿಗೂ ಕಪ್ಪೆಕಲ್ಲು ಆಡುವ ಅಭ್ಯಾಸವಿತ್ತಂತೆ; ಆತನಿಗೇನು ರಾಷ್ಟ್ರಾಧ್ಯಕ್ಷನೆಂದ ಮೇಲೆ ಚಪ್ಪಟೆ ಕಲ್ಲುಗಳನ್ನಲ್ಲ ಬೆಳ್ಳಿಯ ಡಾಲರ್ ನಾಣ್ಯಗಳನ್ನು ಬೇಕಿದ್ದರೂ ಮೋಜಿಗಾಗಿ ನೀರಿಗೆಸೆಯಬಹುದಿತ್ತು... ಅಂತೆಲ್ಲ ಸ್ವಾರಸ್ಯಕರ ಸಂಗತಿಗಳೂ ಅದರಲ್ಲಿವೆ.

ಕೋವಿಡ್‌ನಿಂದಾದ ಲಾಕ್‌ಡೌನ್ ಸಮಯದಲ್ಲಿ 2020ರ ಕಪ್ಪೆಕಲ್ಲು ಚಾಂಪಿಯನ್‌ಶಿಪ್ ನೋಡ ಲಿಕ್ಕೆ ಪ್ರೇಕ್ಷಕರು ಸೇರುವುದು ಕಷ್ಟವಿತ್ತಾದ್ದರಿಂದ ESPN ಕ್ರೀಡಾವಾಹಿನಿಯಲ್ಲಿ ಪಂದ್ಯದ ನೇರ ಪ್ರಸಾರ ಇದ್ದ ಬಗೆಗಿನ ವಿವರಗಳು ಕೂಡ ಆ ವೆಬ್‌ಸೈಟ್‌ನಲ್ಲಿವೆ. ಅಮೆರಿಕದಂತೆಯೇ ಯುರೋಪ್‌ನ ಸ್ಕಾಟ್ಲೆಂಡ್‌ನಲ್ಲಿಯೂ ಕಪ್ಪೆಕಲ್ಲು ಪಂದ್ಯಾವಳಿ ಪ್ರತಿವರ್ಷ ನಡೆಯುತ್ತದಂತೆ.

ಅಷ್ಟೇಅಲ್ಲ, ಮೊನ್ನೆ ಸೆಪ್ಟೆಂಬರ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೆಲವು ಸ್ಪರ್ಧಿಗಳು ಕಲ್ಲು ಗಳನ್ನು ತಮಗೆ ಬೇಕಾದಂತೆ ಕೆತ್ತಿಕೊಂಡು ತಂದಿದ್ದರು, ಅವುಗಳ ಜಿಗಿಯುವ ಸಾಮರ್ಥ್ಯ ಹೆಚ್ಚಿಸಿ ಕೊಂಡಿದ್ದರು, ತನ್ಮೂಲಕ ಮೋಸದ ಆಟಕ್ಕೆ ತೊಡಗಿದ್ದರು. ಕ್ರಿಕೆಟ್‌ನಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದರೆನ್ನುವ ಆರೋಪ ಆಗಾಗ ಕೇಳಿಬರುತ್ತದಲ್ಲವೇ ಹಾಗೆ.

ಇದನ್ನು Cheating scandal rocks world stone skimming championships ಎಂಬ ಆಕರ್ಷಕ ತಲೆಬರಹ ಕೊಟ್ಟು ಬಿಬಿಸಿಯೇ ವರದಿ ಮಾಡಿತ್ತು! ಅಂದಹಾಗೆ Stone skipping ಎನ್ನುವುದು ನೀರಿಗೆಸೆದ ಕಲ್ಲು ಎಷ್ಟು ಸರ್ತಿ ಜಿಗಿಯಿತು ಎಂಬ ಸಂಖ್ಯೆಗೆ ಮಹತ್ತ್ವವಿರುವ ಕ್ರೀಡೆಗೆ; Stone skimming ಎನ್ನುವುದು ನೀರಿಗೆಸೆದ ಕಲ್ಲು ಸಾಗಿದ ದೂರಕ್ಕೆ ಮಹತ್ತ್ವ ನೀಡುವ ಕ್ರೀಡೆಗೆ. ಆಟದ ಹೆಸರಿನಲ್ಲಿ ಸ್ಪೆಲ್ಲಿಂಗ್ ವ್ಯತ್ಯಾಸ ಮತ್ತು ಆಟದ ಮಾನದಂಡದಲ್ಲಿರುವ ವ್ಯತ್ಯಾಸವನ್ನು ಗಮನಿಸ ಬೇಕು. ಯುರೋಪ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಸ್ಟೋನ್ ಸ್ಕಿಮ್ಮಿಂಗ್.

ಸರಿ, ಇಂತಿರುವ ಕಪ್ಪೆಕಲ್ಲು ಆಟ ಬರೀ ಕ್ರೀಡೆ ಮತ್ತು ಮನೋಲ್ಲಾಸದ ಬಾಬತ್ತು ಮಾತ್ರವಲ್ಲ. ಇದರಲ್ಲೊಂದು ಅತ್ಯುಪಯುಕ್ತವಾದ ಭೌತಶಾಸ್ತ್ರ ತತ್ತ್ವವೂ ಅಡಗಿದೆ. ಅದೇನೆಂದು ಸರಳ ಭಾಷೆಯಲ್ಲೇ ಒಂಚೂರು ತಿಳಿದುಕೊಳ್ಳೋಣ. 1968ಲ್ಲಿ ಮೆಸ್ಸಾಚುಸೆಟ್ಸ್ ಕಾಲೇಜಿನ ವಿದ್ಯಾರ್ಥಿ ಯಾಗಿದ್ದ ಕಿರ್ಸ್ಟನ್ ಕೊತ್ಸ್ ಎಂಬಾತ ಮಂಡಿಸಿರುವ ಸಿದ್ಧಾಂತ ಹೀಗಿದೆ: ಚಪ್ಪಟೆಯಾದ ಕಲ್ಲು ಸುಮಾರು 20 ಅಥವಾ 30 ಡಿಗ್ರಿ ಕೋನದಲ್ಲಿ ನೀರನ್ನು ತಾಗುತ್ತದೆ.

ರನ್‌ವೇ ಮೇಲೆ ವಿಮಾನ ಹೇಗೆ ಮೊದಲು ಹಿಂದಿನ ಚಕ್ರಗಳ ಮೇಲೆ ಲ್ಯಾಂಡ್ ಆಗಿ ಆಮೇಲೆ ಮುಂದಿನ ಚಕ್ರಗಳು ಭೂಸ್ಪರ್ಶ ಮಾಡುತ್ತವೆಯೋ, ಹಾಗೆಯೇ ಕಪ್ಪೆಕಲ್ಲಿನ ಮೊದಲ ಜಲಸ್ಪರ್ಶ ಹಿಂಭಾಗದಿಂದ ಆಗುತ್ತದೆ. ಇದರಿಂದ ಕಲ್ಲಿನ ಬುಡಭಾಗದ ಸಮತಳವು ನೀರಿನ ಮೇಲ್ಮೆ ಗೆ 20 ಡಿಗ್ರಿ ಕೋನ ದಲ್ಲಿ ಇದ್ದಂತಾಗುತ್ತದೆ. ಕಲ್ಲಿನ ವೇಗ ಮತ್ತು ಭ್ರಮಣ(ಸ್ಪಿನ್) ನಿಂದಾಗಿ ಅಲ್ಲಿ ಒತ್ತಡ ಕಡಿಮೆಯಾಗಿ ನೀರು ಮೇಲಕ್ಕೆ ನುಗ್ಗಿ ಕಲ್ಲನ್ನು ಎತ್ತಿದಂತಾಗುತ್ತದೆ. ಒಂದು ಸೆಕೆಂಡಿನ ನೂರನೇ ಒಂದು ಭಾಗದಷ್ಟು ಸಮಯದೊಳಗೆ ನಡೆದುಹೋಗುವ ಈ ಪ್ರಕ್ರಿಯೆ ಕಲ್ಲನ್ನು ಮತ್ತೆ ಜಿಗಿಯು ವಂತೆ ಮಾಡುತ್ತದೆ. ಆರಂಭದಲ್ಲಿ ಕಲ್ಲಿನ ಚಲನಶಕ್ತಿ ಎಷ್ಟಿತ್ತು ಎಂಬುದನ್ನು ಅವಲಂಬಿಸಿ ಕಲ್ಲು ಎಷ್ಟು ಸಲ ಜಿಗಿಯುತ್ತದೆ ಎನ್ನುವುದು ನಿರ್ಧಾರಿತವಾಗುತ್ತದೆ.

2003ರಲ್ಲಿ ಫ್ರಾನ್ಸ್ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಲಿಡೆರಿಕ್ ಬೊಕ್ವೆಟ್ ಎಂಬಾತ ಇದಕ್ಕೊಂದು ಗಣಿತ ಸೂತ್ರವನ್ನೂ ಸ್ಥಾಪಿಸಿದನು. ಕಲ್ಲಿನ ತೂಕ, ಎಸೆತದ ಕೋನ, ವೇಗ ಮತ್ತು ಭ್ರಮಣಗಳನ್ನಾ ಧರಿಸಿ ಜಿಗಿತದ ಸಂಖ್ಯೆಯನ್ನು ಕರಾರುವಾಕ್ಕಾಗಿ ಕಂಡುಹಿಡಿದನು. ಅದರಂತೆ ಆಗ ಮೆಕ್‌ಯ ದಾಖಲೆಯೆನಿಸಿದ್ದ ೩೮ ಜಿಗಿತಗಳಾಗಬೇಕಾದರೆ ಕಲ್ಲನ್ನು ಗಂಟೆಗೆ 43 ಕಿ.ಮೀ ವೇಗದಲ್ಲಿ, ಸೆಕೆಂಡಿಗೆ

ಹದಿನಾಲ್ಕು ಸ್ಪಿನ್ ಇರುವಂತೆ ಎಸೆದಿರಬೇಕು ಎಂದು ಲಿಡೆರಿಕ್ ವಿವರಿಸಿದನು. ಆದರೆ ಇದಕ್ಕೂ ಹಿಂದೆ, ಎರಡನೇ ಪ್ರಪಂಚ ಯುದ್ಧ ನಡೆದ ಹೊತ್ತಿನಲ್ಲೇ, ಬಾರ್ನ್ಸ್ ವಾಲ್ಲಿಸ್ ಎಂಬ ಬ್ರಿಟಿಷ್ ತಂತ್ರಜ್ಞಾನಿಯು ಸ್ಟೋನ್ ಸ್ಕಿಪ್ಪಿಂಗ್ ತತ್ತ್ವವನ್ನೇ ಆಧರಿಸಿ Bouncing Bombs ಎಂದು ಹೆಸರು ವಾಸಿಯಾದ ಏರಿಯಲ್ ಬಾಂಬ್‌ಗಳನ್ನು ತಯಾರಿಸಿದ್ದನು. ಶತ್ರುಸೈನ್ಯವಾದ ಜರ್ಮನಿಯ ಯುದ್ಧನೌಕೆ ಟ್ರಿಪಿಟ್ಜ್ ಮತ್ತು ಜರ್ಮನಿ ದೇಶಕ್ಕೆಲ್ಲ ವಿದ್ಯುತ್ ಪೂರೈಕೆ ಮಾಡುತ್ತಿದ್ದ ರೂಹರ್ ಕಣಿವೆಯ ಅಣೆಕಟ್ಟುಗಳನ್ನು ಹೇಗಾದರೂ ಮಾಡಿ ಧ್ವಂಸಗೊಳಿಸುವುದು ಆಗ ಬ್ರಿಟಿಷ್ ಸೈನ್ಯದ ಆದ್ಯತೆಯಾಗಿತ್ತು. ಆದರೆ ಜರ್ಮನಿಯೂ ತನ್ನ ನೌಕೆಗಳಿಗೆ ಮತ್ತು ಅಣೆಕಟ್ಟುಗಳಂಥ ಸೂಕ್ಷ್ಮ ಸ್ಥಳಗಳಿಗೆ ಬಿಗಿ ಬಂದೋಬಸ್ತ್ ಮಾಡಿರುತ್ತಿತ್ತು.

ಅಣೆಕಟ್ಟುಗಳ ಮೇಲಿನಿಂದ ಬಾಂಬುಗಳನ್ನು ಎಸೆಯದಂತೆ ಎತ್ತರೆತ್ತರಕ್ಕೆ ಬಲೆಗಳನ್ನು ಹರಡ ಲಾಗುತ್ತಿತ್ತು. ಅಣೆಕಟ್ಟು ಒಡೆಯಬೇಕಾದರೆ ಅದರ ಗೋಡೆಗೇ ಗುರಿಯಿಟ್ಟ ಬಾಂಬ್ ಬೀಳಬೇಕು. ಬಲೆಗಳಿರುವಾಗ ಅದು ಸಾಧ್ಯವಿಲ್ಲ. ಅಂಥ ಸನ್ನಿವೇಶದಲ್ಲಿಯೇ ಬಾರ್ನ್ಸ್ ವಾಲ್ಲಿಸ್ ವಿನ್ಯಾಸ ಗೊಳಿಸಿದ ಬೌನ್ಸಿಂಗ್ ಬಾಂಬ್‌ಗಳನ್ನು ಬಳಸಲಾಯಿತು.

ಅಣೆಕಟ್ಟಿನಿಂದ ಸುಮಾರು ದೂರದಲ್ಲಿ ಬೀಳುವ ಬಾಂಬ್ ಕಪ್ಪೆಕಲ್ಲಿನಂತೆ ನೀರಿನಲ್ಲೇ ಜಿಗಿತಗಳನ್ನು ಮಾಡಿ ಕೊನೆಗೆ ಅಣೆಕಟ್ಟಿನ ಸಮೀಪ ಬಂದಾಗ ಮುಳುಗಿ ಸ್ಫೋಟಗೊಳ್ಳುವಂತೆ ಮಾಡಲಾಯ್ತು. ಅಣೆಕಟ್ಟಿನಿಂದ ಎಷ್ಟು ದೂರದಲ್ಲಿ, ಎಷ್ಟು ಎತ್ತರದಿಂದ, ಎಷ್ಟು ಸ್ಪಿನ್‌ನೊಂದಿಗೆ ಬಾಂಬುಗಳನ್ನು ಬೀಳಿಸಬೇಕೆಂದು ಬಾರ್ನ್ಸ್ ವ್ಯಾಲಿಸ್ ಹಾಕಿದ್ದ ಲೆಕ್ಕ ಒಂಚೂರೂ ತಪ್ಪಾಗಲಿಲ್ಲ.

ಮೊನ್ನೆ ಏಷ್ಯಾಕಪ್ ಫೈನಲ್ ಮ್ಯಾಚ್‌ನಲ್ಲಿ ಕುಲದೀಪ್ ಯಾದವ್ ಮತ್ತಿತರ ಸ್ಪಿನ್ ಮಾಂತ್ರಿಕರು ಪಾಕಿಸ್ತಾನದ ದಾಂಡಿಗರ ವಿಕೆಟ್‌ಗಳನ್ನು ದಬದಬನೆ ಉರುಳಿಸಿದಂತೆಯೇ, 1943ರ ಮೇ 16 ಮತ್ತು 14ರಂದು ಬ್ರಿಟನ್‌ನ ರಾಯಲ್ ಏರ್ ಫೋರ್ಸ್‌ನ ಯುದ್ಧವಿಮಾನಗಳು ಕರಾರುವಾಕ್ಕಾಗಿ ಬೌನ್ಸಿಂಗ್ ಬಾಂಬ್‌ಗಳನ್ನು ಎಸೆದು ಜರ್ಮನಿಯ ಅಣೆಕಟ್ಟುಗಳನ್ನು ಪುಡಿಪುಡಿ ಮಾಡಿಬಿಟ್ಟಿದ್ದವು. The Dam Busters ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿ ಇದೆಲ್ಲವನ್ನೂ ರೋಚಕವಾಗಿ ತೋರಿಸಿದ್ದಾರೆ.

ಯುದ್ಧದಲ್ಲಿ ಸರ್ವನಾಶಕ್ಕೆ ಉಪಯೋಗವಾಗುವುದಕ್ಕಿಂತ ಒಳ್ಳೆಯ ಉದ್ದೇಶಗಳಿಗೆ ಕಪ್ಪೆಕಲ್ಲು ತತ್ತ್ವವನ್ನು ಬಳಸುವುದರಲ್ಲೂ ವಿಜ್ಞಾನಿಗಳು ನಿರತರಾಗಿದ್ದಾರೆ. ಅಂತರಿಕ್ಷಯಾನ(ಸ್ಪೇಸ್ ಷಟಲ್) ಭೂಮಿಗೆ ಹಿಂದಿರುಗುವಾಗ ಸಾಂದ್ರವಾದ ಭೂವಾತಾವರಣವನ್ನು ಸ್ಪರ್ಶಿಸುತ್ತಿದ್ದಂತೆ ಒಂದಿಷ್ಟು ಕಪ್ಪೆಜಿಗಿತಗಳನ್ನು ಮಾಡಿಯೇ ಆಮೇಲೆ ಇಳಿಯುವಂತೆ ನೋಡಿಕೊಳ್ಳಲಾಗುತ್ತದೆ.

ಹಾಗೆಯೇ ಹೈಪರ್‌ಸೋರ್ ಪ್ಲೇನ್ ಎಂಬ ಹೊಸ ನಮೂನೆಯ ವಾಯುಯಾನದ ಕಲ್ಪನೆಯೂ ಕಪ್ಪೆಕಲ್ಲು ತತ್ತ್ವವನ್ನು ಆಧರಿಸಿದ್ದೇ ಆಗಿದೆ. ಅಂಥ ವಿಮಾನವು ಹೊರಡುವ ಸ್ಥಳದಲ್ಲಿ ರಾಕೆಟ್‌ ನಂತೆ ಉಡ್ಡಯನಗೊಂಡು ಸುಮಾರು ೪೦ ಕಿ.ಮೀ.ಗಳಷ್ಟು ಎತ್ತರಕ್ಕೆ ಆಕಾಶದತ್ತ ಹೋಗಿ ಅಲ್ಲಿಂದ ನ್ಯೂಟ್ರಲ್ ಗಿಯರ್‌ನಲ್ಲೆಂಬಂತೆ ಕೆಳಕ್ಕೆ ಭೂಮಿಯತ್ತ ಜಾರುತ್ತದೆ.

ದಟ್ಟವಾದ ಭೂವಾತಾವರಣವನ್ನು ಸ್ಪರ್ಶಿಸಿದಾಗ ಎಂಜಿನ್‌ಗಳು ಸ್ವಯಂಚಾಲಿತವಾಗಿ ವಿಮಾನ ಮತ್ತೊಮ್ಮೆ ಸ್ವಲ್ಪವೇ ಮೇಲಕ್ಕೆ ಜಿಗಿಯುತ್ತದೆ, ಮತ್ತೆ ಕೆಳಕ್ಕೆ ಜಾರುತ್ತದೆ. ಈ ರೀತಿ ಪೂರ್ವನಿರ್ಧಾರಿತ ಸಂಖ್ಯೆಯ ಜಿಗಿತಗಳನ್ನು ಪೂರೈಸಿ ಕೊನೆಗೆ ಗಮ್ಯಸ್ಥಳವನ್ನು ತಲುಪುತ್ತದೆ. ವಾಷಿಂಗ್ಟನ್‌ನಿಂದ ಬೆಂಗಳೂರಿಗೆ ಹೈಪರ್‌ಸೋರ್ ಪ್ಲೇನ್‌ನಲ್ಲಿ ಹೊರಟರೆ ಸುಮಾರು ಇಪ್ಪತ್ತು ಜಿಗಿತಗಳಿಂದ ಒಂದೂವರೆ-ಎರಡು ಗಂಟೆಗಳ ಅವಧಿಯಲ್ಲಿ ತಲುಪಬಹುದೇನೋ. ಯಾರಿಗೆ ಗೊತ್ತು, ಇನ್ನು ಕೆಲವು ದಶಕಗಳು ಕಳೆದಮೇಲೆ ಇದು ಕನಸಲ್ಲ ನಿಜವೇ ಆಗಬಹುದು!

ಇರಲಿ, ಹೈಪರ್‌ಸೋರ್ ಪ್ಲೇನ್‌ಗಳ ವಿಚಾರವನ್ನು ಆಮೇಲೆ ನೋಡಿಕೊಳ್ಳಬಹುದು. ಆದರೆ ಯಃಕಶ್ಚಿತ್ ಕಪ್ಪೆಕಲ್ಲು ರೀತಿಯ, ಹಳ್ಳಿಗುಗ್ಗುಗಳು ಆಡುವ ಆಟ ಎಂಬ ತಿರಸ್ಕಾರ ಮೂಡಬಹು ದಾದ, ಆಟವೊಂದು ಇಷ್ಟೊಂದು ಚಟುವಟಿಕೆಗಳಿಗೆ ಮತ್ತು ಜಾಗತಿಕ ಮಟ್ಟದ ಚಿಂತನೆಗಳಿಗೆ ಆಸ್ಪದ ನೀಡುತ್ತದೆಯೆನ್ನುವುದು ಸದ್ಯದ ಬೆರಗು.