R T Vittalmurthy Column: ಸಿದ್ದು ದಿಲ್ಲಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದೇಕೆ ?
1989ರಲ್ಲಿ ವೀರೇಂದ್ರ ಪಾಟೀಲ್ ಕರ್ನಾಟಕದ ಮುಖ್ಯಮಂತ್ರಿಯಾದರೆ, ಅದೇ ಕಾಲಕ್ಕೆ ಆಂಧ್ರಪ್ರದೇಶ ದಲ್ಲಿ ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿ ಸೆಟ್ಲಾಗಿದ್ದರು. ಆದರೆ ಅವರು ಮುಖ್ಯಮಂತ್ರಿಗಳಾದ ಕೆಲವೇ ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಭ್ರಮನಿರಸನವಾಗಿದೆ. ಕಾರಣ? ಕಟ್ಟುನಿಟ್ಟಿನ ರಾಜಕೀಯ ಬದುಕಿಗೆ ಅಂಟಿಕೊಂಡಿದ್ದ ವೀರೇಂದ್ರ ಪಾಟೀಲ್ ಮತ್ತು ಚೆನ್ನಾರೆಡ್ಡಿ ಹೈಕಮಾಂಡ್ ಬಯಸಿದಂತೆ ಪಾರ್ಟಿ ಫಂಡ್ ಕೊಡಲು ಒಪ್ಪಿಲ್ಲ


ಮೂರ್ತಿಪೂಜೆ
ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ಹೀಗೆ ಸಂಪರ್ಕಿಸಿದವರು, “ಸಿದ್ರಾಮಯ್ಯಾಜೀ, ಮುಂದಿನ ವಾರ ರಾಹುಲ್ ಗಾಂಧಿಯವರು ಪ್ರವಾಸದಿಂದ ವಾಪಸ್ಸಾಗು ತ್ತಿದ್ದಾರೆ. ಅವರು ಬಂದ ತಕ್ಷಣ ನಿಮ್ಮ ಜತೆ ಮೀಟಿಂಗು ಮಾಡಲು ಬಯಸಿದ್ದಾರೆ" ಎಂದಿದ್ದಾರೆ.
ಅಂದ ಹಾಗೆ, ವಿಧಾನಪರಿಷತ್ತಿಗೆ ಡಿ.ಜಿ.ಸಾಗರ್, ದಿನೇಶ್ ಅಮಿನ್ ಮಟ್ಟು, ರಮೇಶ್ ಬಾಬು ಮತ್ತು ಆರತಿ ಕೃಷ್ಣ ಅವರ ಹೆಸರುಗಳನ್ನು ಹೈಕಮಾಂಡಿಗೆ ಕಳಿಸಿ ಒಪ್ಪಿಗೆ ಪಡೆದಿದ್ದ ಸಿದ್ದರಾಮಯ್ಯ ಅವರಿಗೆ ಸುರ್ಜೇವಾಲ ಅವರೇ ಬ್ರೇಕ್ ಹಾಕಿದ್ದರಲ್ಲ? ಈ ವಿಷಯವನ್ನು ರಾಹುಲ್ ಗಾಂಧಿಯವರು ವಿದೇಶ ಪ್ರವಾಸದಿಂದ ಬಂದ ನಂತರ ಸೆಟ್ಲ್ ಮಾಡಿಕೊಳ್ಳಿ ಅಂತ ಬೇರೆ ಅವರು ಹೇಳಿದ್ದರಿಂದ ಸಿದ್ದರಾಮಯ್ಯ ಮುನಿಸಿನಿಂದಲೇ ಕಾಯುತ್ತಿದ್ದರು.
ಹೀಗಾಗಿ ಜೂನ್ ಅಂತ್ಯದ ವೇಳೆಗೆ ಪಕ್ಷದ ಶಾಸಕರ ಅಹವಾಲು ಕೇಳಲು ಕರ್ನಾಟಕಕ್ಕೆ ಬಂದ ಸುರ್ಜೇವಾಲ, “ಮುಂದಿನ ವಾರ ದಿಲ್ಲಿಗೆ ಬನ್ನಿ" ಎಂದಾಗ ಸಿದ್ದರಾಮಯ್ಯ ಹೂಂಗುಟ್ಟಿದ್ದಾರೆ. ಆದರೆ ಈ ಹಿಂದೆ ತಾವು ದಿಲ್ಲಿಗೆ ಹೋಗಿ ಬಂದ ನಂತರ ನಡೆದ ಘಟನಾವಳಿಗಳು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಕೆರಳಿಸಿವೆಯಲ್ಲದೆ, ರಾಹುಲ್ ಗಾಂಧಿಯವರ ಜತೆ ಮೀಟಿಂಗು ನಡೆಸಲು ಸುರ್ಜೇವಾಲ ತಮಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಏನೇನು ನಡೆದಿದೆ ಎಂಬುದರ ಚಿತ್ರಣ ಸಿಕ್ಕಿದೆ.
ಇದನ್ನೂ ಓದಿ: R T Vittalmurthy Column: ಅಷ್ಟಕ್ಕೂ, ದಿಲ್ಲಿಯಲ್ಲಿ ಸಿದ್ದು ಗುದ್ದಿದ್ದು ಯಾರಿಗೆ ?
ಅದರ ಪ್ರಕಾರ, ಶಾಸಕರ ಅಹವಾಲು ಕೇಳಲು ಅಂತ ಬೆಂಗಳೂರಿಗೆ ಬಂದ ಸುರ್ಜೇವಾಲ ಅವರು ಶಾಸಕರ ಜತೆ ‘ಒನ್-ಟು-ಒನ್’ ಏನು ಮಾತನಾಡಿದ್ದಾರೆ? ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತಮಗೆ ಅಗತ್ಯವಾದಷ್ಟು ಅನುದಾನ ಸಿಗುತ್ತಿಲ್ಲ ಅಂತ ಶಾಸಕರು ಹೇಳಿದ್ದೆಲ್ಲ ನಾಯಕತ್ವದ ಬಗೆಗಿನ ಅಸಮಾಧಾನ ಅಂತ ಬಿಂಬಿಸಲು ಹೇಗೆ ಹೆಣಗುತ್ತಿದ್ದಾರೆ ಎಂಬುದು ಕನ್ ಫರ್ಮ್ ಆಗಿದೆ.
ಅರ್ಥಾತ್, ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ವಾಪಸ್ಸಾಗುವ ಮುನ್ನ ರಾಜ್ಯ ಕಾಂಗ್ರೆಸ್‌ನ ಎಲ್ಲ ಶಾಸಕರ ಜತೆ ಮಾತನಾಡಿ ಸುರ್ಜೇವಾಲ ರಿಪೋರ್ಟು ರೆಡಿ ಮಾಡುತ್ತಾರೆ. ಈ ರಿಪೋರ್ಟು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಅಂತ ರಾಹುಲ್ ಗಾಂಧಿ ಯವರಿಗೆ ಕನ್ವಿನ್ಸು ಮಾಡುತ್ತದೆ. ಇವತ್ತು ಕರ್ನಾಟಕದ ಪ್ರತಿಯೊಂದು ವ್ಯವಹಾರಗಳಿಗೆ ಹೈಕಮಾಂಡ್ ಸುರ್ಜೇವಾಲ ಅವರ ಮಾತಿಗೇ ಆದ್ಯತೆ ನೀಡುವುದರಿಂದ ರಾಹುಲ್ ಗಾಂಧಿ ರಿಪೋರ್ಟು ನೋಡಿ ವಿವಶರಾಗುತ್ತಾರೆ.
“ಸಿದ್ರಾಮಯ್ಯಾಜೀ, ಅಧಿಕಾರ ಹಸ್ತಾಂತರಕ್ಕೆ ಸಹಕರಿಸಿ" ಎನ್ನುತ್ತಾರೆ. ಹೀಗೆ ಮೀಟಿಂಗಿನಲ್ಲಿ ರಾಹುಲ್ ಗಾಂಧಿ ಈ ವಿಷಯ ಪ್ರಸ್ತಾಪಿಸಿದಾಗ ತಾವು ಒಪ್ಪದೆ ಹೋಗಬಹುದು. ಆದರೆ ಮೀಟಿಂಗಿ ನಲ್ಲಿರುವ ಉಳಿದವರು ಸುಮ್ಮನಿರುತ್ತಾರಾ? ಅವರು ಹೊರಗೆ ಬಂದು, “ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹೈಕಮಾಂಡ್ ನಿರ್ಧರಿಸಿದೆ" ಅಂತ ಹೇಳಿಯೇ ಹೇಳುತ್ತಾರೆ.
ತಮ್ಮನ್ನಿಳಿಸಲು ಹೈಕಮಾಂಡ್ ನಿರ್ಧರಿಸಿದೆ ಮತ್ತು ಅದನ್ನು ನೇರವಾಗಿ ಹೇಳಿದೆ ಎಂಬ ಮೆಸೇಜು ಒಂದು ಸಲ ಸಿಕ್ಕರೆ ತಮ್ಮ ವಿರೋಧಿಗಳಿಗಿರಲಿ, ತಮ್ಮ ಬೆಂಬಲಿಗರ ಗೊಂದಲ ಶುರುವಾಗುತ್ತದೆ. ಹಾಗಾದಾಗ ಕುದುರೆ ವ್ಯಾಪಾರ ಆರಂಭವಾದರೂ ಅಚ್ಚರಿಯಿಲ್ಲ ಅಂತ ಸಿದ್ದರಾಮಯ್ಯ ಲೆಕ್ಕ ಹಾಕಿದ್ದಾರೆ.
ಹೀಗವರು ಲೆಕ್ಕ ಹಾಕುವ ಕಾಲಕ್ಕೆ ಹಲವು ಸಚಿವರು ಬಂದು ಸುರ್ಜೇವಾಲ ಅವರ ಬಗ್ಗೆ ಅಸಮಾ ಧಾನ ತೋಡಿಕೊಂಡಿದ್ದಾರೆ. “ಸರ್, ಈ ಸುರ್ಜೇವಾಲಾ ಶಾಸಕರ ಜತೆ ನಡೆಸುವ ಮೀಟಿಂಗುಗಳಲ್ಲಿ ನಮ್ಮ ಬಗ್ಗೆ ಉಲ್ಟಾ ರಿಪೋರ್ಟು ಸಂಗ್ರಹಿಸುತ್ತಾರೆ. ಆನಂತರ ಅಲ್ಲಿಂದಲೇ ನಮಗೆ ಫೋನು ಮಾಡಿ, ‘ನಿಮ್ಮ ಬಗ್ಗೆ ಸಿಕ್ಕಾಪಟ್ಟೆ ಕಂಪ್ಲೇಂಟುಗಳಿವೆ’ ಎನ್ನುತ್ತಾರೆ.
ಹೀಗೆ ಹೇಳುವ ಮೂಲಕ ನಮ್ಮನ್ನು ಹೆದರಿಸುವುದು, ತಾವು ಹೇಳಿದ್ದನ್ನು ಮಾಡಲೇಬೇಕು ಅಂತ ಒತ್ತಡ ಬಿಲ್ಡ್ ಮಾಡುವುದು ಅವರ ತಂತ್ರ. ಇದಕ್ಕೆ ತಕ್ಕ ಉತ್ತರ ನೀಡದಿದ್ದರೆ ಕಷ್ಟ. ಇವತ್ತು ನೆರೆಯ ತೆಲಂಗಾಣವನ್ನೇ ತೆಗೆದುಕೊಳ್ಳಿ. ಅಲ್ಲಿ ಮುಖ್ಯಮಂತ್ರಿಯಾಗಿರುವ ರೇವಂತ್ ರೆಡ್ಡಿ ಪಕ್ಷದ ವರಿಷ್ಠರ ಡಿಮಾಂಡುಗಳಿಗೆ ಕ್ಯಾರೇ ಎನ್ನುತ್ತಿಲ್ಲ. ನೀವು ಹೇಳಿದಂತೆ ಪಾರ್ಟಿ ಫಂಡು ಕೊಡಲು ಸಾಧ್ಯವಿಲ್ಲ ಅಂತ ನೇರವಾಗಿ ಹೇಳುತ್ತಿದ್ದಾರೆ.
ಹೀಗಾಗಿ ಅಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಮೀನಾಕ್ಷಿ ನಟರಾಜನ್ ಅವರನ್ನು ಕಳಿಸಿ ರೇವಂತ್ ರೆಡ್ಡಿ ಅವರ ಬಗ್ಗೆ ಪಕ್ಷದ ಶಾಸಕರಿಗೆ ಅಸಮಾಧಾನವಿದೆ ಎಂದು ಪ್ರತಿಬಿಂಬಿಸುವ ಯತ್ನ ನಡೆದಿದೆ. ಯಾವಾಗ ಇದು ಕನ್ ಫರ್ಮ್ ಅಯಿತೋ, ಮೀನಾಕ್ಷಿ ನಟರಾಜನ್ ಅವರ ವಿರುದ್ಧ ತಿರುಗಿ ಬಿದ್ದಿರುವ ರೇವಂತ್ ರೆಡ್ಡಿ, ‘ತೆಲಂಗಾಣದಲ್ಲಿ ಪಕ್ಷ ಗೆಲ್ಲಲು ನಿಮ್ಮ ಕಾಂಟ್ರಿಬ್ಯೂಷನ್ ಏನು?’ ಅಂತ ಗುಡುಗಿ ಶಾಸಕರ ಜತೆ ಸರಿಯಾಗಿ ಮೀಟಿಂಗು ಮಾಡದಂತೆ ನೋಡಿಕೊಂಡಿದ್ದಾರೆ. ಹೀಗೆ ತೆಲಂಗಾಣ ದಲ್ಲಿ ಮೀನಾಕ್ಷಿ ನಟರಾಜನ್ ಅವರಿಗೆ ಆದ ಗತಿಯೇ ಇಲ್ಲಿ ಸುರ್ಜೇವಾಲಾ ಅವರಿಗೂ ಆಗಬೇಕು" ಅಂತ ವಿವರಿಸಿದ್ದಾರೆ.
ಸಿದ್ದು ಗೂಢಚಾರರು ತಂದ ಸಂದೇಶ
ಹೀಗೆ ಸಿದ್ದರಾಮಯ್ಯ ಅವರಿಗೆ ಆಪ್ತ ಸಚಿವರು ದೂರು ನೀಡುವ ಕಾಲಕ್ಕೆ ಸರಿಯಾಗಿ ಸಿದ್ದು ಗೂಢಚಾರರ ಪಡೆ ಡಿಕೆಶಿ ಕ್ಯಾಂಪಿನ ಬೆಳವಣಿಗೆಗಳ ಬಗ್ಗೆ ಎಚ್ಚರಿಕೆಯ ಸಂದೇಶ ತಲುಪಿಸಿದೆ. ಅದರ ಪ್ರಕಾರ, ಸರಕಾರ ಅಸ್ತಿತ್ವಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರ ಸಂಖ್ಯೆ ಕಡಿಮೆ ಇತ್ತು.
ಆದರೆ ದಿನ ಕಳೆದಂತೆ ಈ ಸಂಖ್ಯೆ ಹೆಚ್ಚತೊಡಗಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಪವರ್ ಹೇಗೆ ಕಾರಣವೋ, ಹೈಕಮಾಂಡ್‌ನಲ್ಲಿ ಪ್ರಭಾವಿಯಾಗಿರುವ ನಾಯಕರೊಬ್ಬರು ಕೈ ಜೋಡಿಸಿರುವುದೂ ಕಾರಣ. ಇದರ ಪರಿಣಾಮವಾಗಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ನಿಮ್ಮ ಸಂಪುಟದ ಸಚಿವ ರೊಬ್ಬರು ಶಾಸಕರನ್ನು ಮೊಬಿಲೈಸ್ ಮಾಡುತ್ತಿದ್ದಾರೆ. ಗಂಭೀರವಾದ ವಿಷಯ ಎಂದರೆ ನಾಯಕತ್ವ ಬದಲಾವಣೆಯಾದರೆ ನಾವು ನಿಮ್ಮ ಜತೆ ನಿಲ್ಲಲು ಸಿದ್ದ. ಆದರೆ ನಾಯಕತ್ವ ಬದಲಿಸಲು ನಿರ್ಧರಿಸಿದ್ದೇವೆ ಅಂತ ವರಿಷ್ಠರಿಂದ ಅನೌನ್ಸು ಮಾಡಿಸಿ ಎಂಬುದು ಕೆಲ ಸೀನಿಯರ್ ಸಚಿವರು, ಶಾಸಕರು ಸೇರಿದಂತೆ ಹಲವರ ಸಿಗ್ನಲ್ಲು.
ಹೀಗಾಗಿ ರಾಹುಲ್ ಗಾಂಧಿ ಅವರ ಮೂಲಕ ನಿಮಗೆ ಹೇಳಿಸಲು, ಅಧಿಕಾರ ಹಸ್ತಾಂತರಕ್ಕೆ ಸಹಕರಿಸಿ ಎಂದು ಮನವಿ ಮಾಡಿಸಲು ತಂತ್ರಗಳು ರೂಪುಗೊಂಡಿವೆ. ಈ ಎಲ್ಲದರಷ್ಟೇ ಮುಖ್ಯವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಗಾಗಿ ನವೆಂಬರ್ ತನಕ ಕಾಯಬೇಡಿ. ಹಾಗೇನಾದರೂ ಕಾದರೆ ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರು ಡಿಸಿಎಂ ಸಚಿನ್ ಪೈಲಟ್ ಅವರಿಗೆ ಏನು ಮಾಡಿದರೋ, ಅದೇ ಕತೆ ಇಲ್ಲಿ ಪುನರಾವರ್ತನೆ ಆಗಬಹುದು ಅಂತ ಆಪ್ತರು ಡಿ.ಕೆ.ಶಿವಕುಮಾರ್ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ವರ್ತಮಾನ ತಲುಪಿಸಿದೆ.
ಯಾವಾಗ ಈ ವರ್ತಮಾನ ತಲುಪಿತೋ, ಆಗ ಸಹಜವಾಗಿಯೇ ಸಿದ್ದರಾಮಯ್ಯ ಕುದ್ದು ಹೋಗಿ ದ್ದಾರೆ. ಅಷ್ಟೇ ಅಲ್ಲ, ನಿರ್ಣಾಯಕ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದಾರೆ. ವೀರೇಂದ್ರ ಪಾಟೀಲ-ಚೆನ್ನಾ ರೆಡ್ಡಿ ಎಪಿಸೋಡು? ಹೀಗೆ ಸಿದ್ದರಾಮಯ್ಯ ಯುದ್ಧಕ್ಕೆ ಸಜ್ಜಾಗಿ ನಿಲ್ಲುವ ಕಾಲಕ್ಕೆ, ಅವರ ಬಣದಲ್ಲಿ ಮತ್ತೊಂದು ಅನುಮಾನ ಕಾಣಿಸಿಕೊಂಡಿದೆ. ಅದೆಂದರೆ ವೀರೇಂದ್ರ ಪಾಟೀಲ-ಚೆನ್ನಾರೆಡ್ಡಿ ಎಪಿಸೋಡನ್ನು ರಿಪೀಟ್ ಮಾಡಲು ಹೈಕಮಾಂಡ್ ಹೊರಟಿದೆಯೇ? ಎಂಬುದು.
ಅಂದ ಹಾಗೆ, 1989ರಲ್ಲಿ ವೀರೇಂದ್ರ ಪಾಟೀಲ್ ಕರ್ನಾಟಕದ ಮುಖ್ಯಮಂತ್ರಿಯಾದರೆ, ಅದೇ ಕಾಲಕ್ಕೆ ಆಂಧ್ರಪ್ರದೇಶದಲ್ಲಿ ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿ ಸೆಟ್ಲಾಗಿದ್ದರು. ಆದರೆ ಅವರು ಮುಖ್ಯಮಂತ್ರಿಗಳಾದ ಕೆಲವೇ ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಭ್ರಮನಿರಸನವಾಗಿದೆ. ಕಾರಣ? ಕಟ್ಟುನಿಟ್ಟಿನ ರಾಜಕೀಯ ಬದುಕಿಗೆ ಅಂಟಿಕೊಂಡಿದ್ದ ವೀರೇಂದ್ರ ಪಾಟೀಲ್ ಮತ್ತು ಚೆನ್ನಾರೆಡ್ಡಿ ಹೈಕಮಾಂಡ್ ಬಯಸಿದಂತೆ ಪಾರ್ಟಿ ಫಂಡ್ ಕೊಡಲು ಒಪ್ಪಿಲ್ಲ.
ಆದರೆ ಅಷ್ಟೊತ್ತಿಗಾಗಲೇ ದಿಲ್ಲಿ ಗದ್ದುಗೆಯಿಂದ ದೂರವಿದ್ದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಸಂಪನ್ಮೂಲದ ಅಗತ್ಯವಿತ್ತಲ್ಲ? ಹೀಗಾಗಿ ಅದು ಕರ್ನಾಟಕ, ಆಂಧ್ರಪ್ರದೇಶದಲ್ಲಿರುವ ಕಾಂಗ್ರೆಸ್ ಸರಕಾರಗಳಿಂದ ಹೆಚ್ಚಿನ ನೆರವು ಬಯಸುತ್ತಿತ್ತು. ತನ್ನ ಈ ಬಯಕೆಗೆ ವೀರೇಂದ್ರ ಪಾಟೀಲ, ಚೆನ್ನಾ ರೆಡ್ಡಿ ಯಾವಾಗ ಸ್ಪಂದಿಸಲಿಲ್ಲವೋ, ಆಗ ಇಬ್ಬರನ್ನೂ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಅದು ತೀರ್ಮಾನಿಸಿತು.
ಹೀಗೆ ಉಭಯ ನಾಯಕರ ಪದಚ್ಯುತಿಗೆ ಅದು ಮುಂದಾದ ಕಾಲಕ್ಕೆ, ಇಲ್ಲಿ ವೀರೇಂದ್ರ ಪಾಟೀಲರು ಅನಾರೋಗ್ಯಕ್ಕೊಳಗಾದರು. ಇದೇ ಕಾಲದಲ್ಲಿ ರಾಮನಗರ ಸೇರಿದಂತೆ ಕರ್ನಾಟಕದ ಕೆಲ ಭಾಗ ಗಳಲ್ಲಿ ಕೋಮುಗಲಭೆ ನಡೆದಾಗ ಕಾನೂನು-ಸುವ್ಯವಸ್ಥೆ ವಿಫಲವಾಗಿದೆ ಎಂಬ ಕಾರಣ ಮುಂದಿಟ್ಟು ಪಾಟೀಲರನ್ನು ಕೆಳಗಿಳಿಸಲಾಯಿತು.
ಇದೇ ರೀತಿ ಮುಂದಿನೆರಡು ತಿಂಗಳಲ್ಲಿ ಚೆನ್ನಾರೆಡ್ಡಿ ಕೆಳಗಿಳಿದರು. ಅರ್ಥಾತ್, ಇವತ್ತು ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಿರುವಾಗ ಕರ್ನಾಟಕ ದಿಂದ ಸಿದ್ದರಾಮಯ್ಯ, ತೆಲಂಗಾಣ ದಿಂದ ರೇವಂತರೆಡ್ಡಿ ಹೈಕಮಾಂಡ್ ನಿರೀಕ್ಷಿಸಿದ ಮಟ್ಟದಲ್ಲಿ ಪಾರ್ಟಿ ಫಂಡು ಕೊಡಬೇಕು ಅಂತ ಬಯಸುತ್ತಿದೆ. ಅದರೆ ಇದ್ದುದರಲ್ಲಿ ಸಿದ್ದರಾಮಯ್ಯ ಹೈಕಮಾಂಡ್‌ಗೆ ಬಲ ತುಂಬುತ್ತಾರಾದರೂ, ಅವರಿಗಿಂತ ದೊಡ್ಡ ಮಟ್ಟದಲ್ಲಿ ಶಕ್ತಿ ನೀಡುವವರು ಬೇಕು ಅಂತ ಹೈಕಮಾಂಡ್‌ನ ಕೆಲ ನಾಯಕರು ಯೋಚಿಸಿರಬಹುದು ಎಂಬುದು ಸಿದ್ದು ಆಪ್ತರ ಅನುಮಾನ.
ಆದರೆ ವೀರೇಂದ್ರ ಪಾಟೀಲ-ಚೆನ್ನಾರೆಡ್ಡಿ ಎಪಿಸೋಡಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ವ್ಯತ್ಯಾಸವೆಂದರೆ ಕಾಂಗ್ರೆಸ್ ಹೈಕಮಾಂಡ್‌ಗಿರುವ ಶಕ್ತಿ. ಅವತ್ತು ವೀರೇಂದ್ರ ಪಾಟೀಲ-ಚೆನ್ನಾರೆಡ್ಡಿ ಯವರ ಮೇಲೆ ರಾಜೀವ್ ಗಾಂಧಿ ಮುಗಿಬಿದ್ದ ಕಾಲದಲ್ಲಿ ಕಾಂಗ್ರೆಸ್‌ಗೆ ಹಲ ರಾಜ್ಯಗಳಲ್ಲಿ ಅಧಿಕಾರ ವಿತ್ತು. ಅರ್ಥಾತ್, ಇಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ರಿಸ್ಕ್ ತೆಗೆದುಕೊಂಡರೂ ಪರ್ಯಾಯ ಮೂಲಗಳಿದ್ದವು.
ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಹಿಮಾಚಲ ಪ್ರದೇಶ, ತೆಲಂಗಾಣದಂಥ ರಾಜ್ಯಗಳಲ್ಲಿ ಪಕ್ಷ ಅಧಿಕಾರ ದಲ್ಲಿದೆ ಯಾದರೂ ಹೈಕಮಾಂಡ್‌ಗೆ ಬಲ ನೀಡುವ ಶಕ್ತಿ ಇರುವುದು ಕರ್ನಾಟಕಕ್ಕೆ ಮಾತ್ರ. ಇಲ್ಲಿ ಸರಕಾರ ಉರುಳಿದರೆ ಕಾಂಗ್ರೆಸ್‌ನ ಶಕ್ತಿ ನೆಲ ಕಚ್ಚುತ್ತದೆ. ಹೀಗಾಗಿ ಸಿದ್ದರಾಮಯ್ಯ ತಮ್ಮನ್ನು ಇಳಿಸುವ ದಿಲ್ಲಿಯ ಕೆಲ ನಾಯಕರ ತಂತ್ರಕ್ಕೆ ಕೌಂಟರ್ ಕೊಡುವುದು ಸೇಫ್ ಎಂಬ ನಿರ್ಧಾರ ವಾಗಿದೆ.
ದಿಲ್ಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಯಿತು
ಯಾವಾಗ ಈ ನಿರ್ಧಾರವಾಯಿತೋ, ನಂತರ ದಿಲ್ಲಿಗೆ ಹೋದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಮೀಟಿಂಗು ನಡೆಸುವ ಮುನ್ನವೇ ಬಾಂಬ್ ಬ್ಲಾಸ್ಟ್ ಮಾಡಿದ್ದಾರೆ. “ಮುಂದಿನ ಐದು ವರ್ಷ ಗಳ ಕಾಲ ನಾನೇ ಸಿಎಂ ಆಗಿರುತ್ತೇನೆ. ಸಿಎಂ ಆಗಲು ಬಯಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶಾಸಕಾಂಗ ನಾಯಕನ ಆಯ್ಕೆಗೆ ನಡೆದ ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ" ಅಂತ ಅವರು ಬಾಂಬ್ ಬ್ಲಾಸ್ಟ್ ಮಾಡಿದ ರೀತಿಗೆ ಕಾಂಗ್ರೆಸ್ ಹೈಕಮಾಂಡ್ ತಣ್ಣಗಾಗಿ ಹೋಗಿದೆ.
ಅರ್ಥಾತ್, ಇದು ತಮಗೆ ಸಿದ್ದರಾಮಯ್ಯ ನೀಡಿದ ಪಂಥಾಹ್ವಾನ ಎಂಬುದು ವರಿಷ್ಠರಿಗೆ ಕನ್ ಫರ್ಮ್ ಆಗಿದೆ. ಹೀಗಾಗಿ ಎಮ್ಮೆಲ್ಸಿ ಪಟ್ಟಿ ಕ್ಲಿಯರ್ ಮಾಡಿಸುವ ನೆಪದಲ್ಲಿ ನಡೆಸಲುದ್ದೇಶಿಸಲಾಗಿದ್ದ ರಾಹುಲ್ ಮೀಟಿಂಗು ಇದ್ದಕ್ಕಿದ್ದಂತೆ ಕ್ಯಾನ್ಸಲ್ ಆಗಿದೆ. ಕಾರಣ? ಮೀಟಿಂಗು ನಡೆದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಏನು ಮೆಸೇಜು ಕೊಡಬೇಕೋ ಅದನ್ನು ಕೊಡಲು ಸಾಧ್ಯವಿಲ್ಲ ಎಂಬ ರಾಹುಲ್‌ರ ಅಸಹಾಯಕತೆ.
ಪರಿಣಾಮ? ಅಧಿಕಾರ ಹಂಚಿಕೆಯ ಮಾತಿಗೆ ದಿಲ್ಲಿ ಮಟ್ಟದಲ್ಲೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹಾಗಂತ ಈ ಮಾತು ನಿಂತೇ ಬಿಡುತ್ತದೆ ಅಂತೇನಲ್ಲ. ಯಾಕೆಂದರೆ ಡಿಕೆಶಿ ಹಿಡಿದ ಹಠ ಬಿಡುವ ನಾಯಕ ಅಲ್ಲವಲ್ಲ?
ಲಾಸ್ಟ್ ಸಿಪ್: ಅಂದ ಹಾಗೆ, ಸಿಎಂ ಹುzಗಾಗಿ ಡಿಕೆಶಿ ಮರಳಿ ಯತ್ನಿಸುವುದು ಖಚಿತವಾದ್ದರಿಂದ, ಈಗಿನಿಂದಲೇ ಅವರಿಗೆ ಕೌಂಟರ್ ಕೊಡುತ್ತಾ ಹೋಗಲು ಸಿದ್ದು ಬಯಸಿದ್ದಾರೆ. ಹೀಗಾಗಿಯೇ ಆಗ 1ರಂದು ದಿಲ್ಲಿಗೆ ದೌಡಾಯಿಸಲಿರುವ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಹಲವು ಡಿಮಾಂಡುಗಳನ್ನು ಮುಂದಿಡಲಿದ್ದಾರಂತೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ತರಬೇಕು, ತಾವು ಬಯಸಿದವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂಬುದು ಅವರ ಡಿಮಾಂಡು ಅಂತ ಸದ್ಯದ ಮಾಹಿತಿ.