ಮಾರುತ್ತರ (ಭಾಗ-2)
ಎಸ್.ಎಂ.ಜಾಮದಾರ
ಸುಟ್ಟ ಕೊಬ್ಬರಿಯ ಮಸಿಯನ್ನು ಭಸ್ಮದೊಂದಿಗೆ ವೀರಶೈವರು ತಮ್ಮ ಹಣೆಗೆ ಹಚ್ಚಿ ಕೊಳ್ಳುವುದು ವಾಡಿಕೆಯಾಗಿದ್ದರೆ ಅದು ಕಾಳಾಮುಖಿಗಳ/ ಕಾಪಾಲಿಕರ ಬಳುವಳಿಯಲ್ಲದೇ ಮತ್ತೇನು?
೩) ಅದೇ ರೀತಿಯಲ್ಲಿ, ವೀರಶೈವರ ಆರಾಧ್ಯ ದೇವತೆಯಾದ ವೀರಭದ್ರ ದೇವಾಲಯಗಳಲ್ಲಿ ಅ) ನಡೆಯುವ ‘ಗುಗ್ಗಳ ಪೂಜೆ’
ಆ) ‘ಶಸ್ತ್ರ ಪ್ರಯೋಗ’
ಇ) ಪುರವಂತಿಕೆ ಹಾಗೂ
ಈ) ಬೆಂಕಿಯ ಕೆಂಡದ ಮೇಲೆ ನಡೆಯುವುದನ್ನು ಯಾರು ಮಾಡುತ್ತಾರೆ? ಹಾಗೆಯೇ
ಉ) ಮರಣ ಸಂಸ್ಕಾರದಲ್ಲಿ ಹಂಜನ ಗುಂಪಿಗೆ ಸೇರಿದ ಅಯ್ಯನವರು ಹೆಣದ ತಲೆಯ ಮೇಲೆ ಮತ್ತು ತೊಡೆಯ ಮೇಲೆ ಏಕೆ ಕಾಲಿಡುತ್ತಾರೆ ?
ಊ) ನೂತನ ವಟುಗಳಿಗೆ ದೀಕ್ಷೆ ನೀಡುವಾಗ, ದೀಕ್ಷೆ ನೀಡುವ ಅಯ್ಯನವರು ಅವರ ತಲೆಯ ಮೇಲೆ ಏಕೆ ಕಾಲು ಇಡುತ್ತಾರೆ? ಹಾಗೂ ಎ) ಸ್ಥಾವರಲಿಂಗ ಪೂಜೆ ಮಾಡುವಾಗ, ಆ ಲಿಂಗದ ಮೇಲೆ ಅಯ್ಯನವರು ತಮ್ಮ ಕಾಲು ಏಕೆ ಇಡುತ್ತಾರೆ ಹಾಗೂ ಅವರ ಕಾಲು ತೊಳೆದ ನೀರಿನಿಂದ ಸ್ಥಾವರಲಿಂಗದ ಪೂಜೆಯನ್ನು ಏಕೆ ಮಾಡುತ್ತಾರೆ ಎಂಬ ಬಗ್ಗೆ ಹಂಜ ಉತ್ತರಿಸಲಿ.
ಐ) ಈ ಎಲ್ಲ ಕ್ರಿಯೆಗಳ ಪ್ರತಿಪಾದಕರು ಮತ್ತು ಅವುಗಳನ್ನು ಮಾಡುವವರು ‘ವೀರಶೈವ’ರೇ ಅಲ್ಲವೇ? ಹಾಗೂ ಅವರ ಗುರುಗಳೇ ಪಂಚಾಚಾರ್ಯರಲ್ಲವೇ? ಹಂಜ ಅವರೂ ಅದೇ ಗುಂಪಿನಲ್ಲಿ ಒಬ್ಬರಲ್ಲವೇ?
ಒ) ಈ ಎಲ್ಲ ಸಂಪ್ರದಾಯಗಳು ಯಾರಿಂದ ಮತ್ತು ಯಾವಾಗ ಬಂದವು ಎಂಬ ಬಗ್ಗೆ ಮಹಾನ್ ‘ಸಂಶೋಧಕ’ರಾದ ಹಂಜ ಹೆಚ್ಚಿನ ಬೆಳಕು ಚೆಲ್ಲುವರಾ?
ಔ) ಈ ಯಾವುದೇ ಅಂಶಗಳು ಬಸವಾದಿ ಶರಣರು ಬೋಧಿಸಿದ ಶರಣ ಧರ್ಮದಲ್ಲಿ ಇವೆಯೇ? ಅಂಥ ಅಚಾರಗಳನ್ನು ಶರಣರು ಮಾಡಲು ಹೇಳಿದರೆ?
೪) ಮುಂದುವರಿದು, ಕಾಳಾಮುಖಿಗಳು ರಾಜಗುರುಗಳಾಗುತ್ತಿದ್ದರು ಎಂದು ಹಂಜ ಹೇಳಿದ್ದು ಸತ್ಯ. ಅವರ ಒಂದು ಕಾಳಾಮುಖಿ ಮಠ ಕಾಶಿಯಲ್ಲಿತ್ತು. ಆ ಮಠದ ಕ್ರಿಯಾಸಕ್ತಿ ಗುರುಗಳು ವಿಜಯನಗರ ಸಾಮ್ರಾಜ್ಯ ಕಟ್ಟಲು ಹಕ್ಕಬುಕ್ಕರಿಗೆ ಮಾರ್ಗದರ್ಶನ ಮಾಡಿದ್ದೂ ಸತ್ಯ.
ಇದನ್ನೂ ಓದಿ: S M Jamdar Column: ಹಂಜ ಸತ್ಯವನ್ನು ತಿರುಚುತ್ತಿರುವುದೇಕೆ ? ಓದುಗರೇ ನಿರ್ಣಯಿಸಲಿ
ಆದರೆ, “ವಿಜಯ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದರು" ಎನ್ನುವ ಎಷ್ಟು ಜನ ಬ್ರಾಹ್ಮಣ ಇತಿಹಾಸಕಾರರು ಮತ್ತು ಬ್ರಾಹ್ಮಣ ವಿದ್ವಾಂಸರು ರವಿ ಹಂಜ ಅವರ ಮಾತನ್ನು ಒಪ್ಪುತ್ತಾರೆ? ಅವರೇ ಮುಂದಿನ ‘ಸಂಶೋಧನೆ’ ಮಾಡಲಿ.
(೫) ಕಾಳಾಮುಖಿಗಳಿಗೆ ರಾಜಮಹಾರಾಜರು ‘ರಾಜಗುರು’ ಗಳೆಂದು ಗೌರವಿಸಿ ಅಪಾರವಾದ ಧನಕನಕಾದಿಗಳನ್ನು ದಾನವಾಗಿ ಕೊಡುತ್ತಿದ್ದರು ಎಂದು ಹಂಜ ಹೇಳಿದ್ದೂ ಸತ್ಯ. ಆದರೇ ಅದು ಪೂರ್ಣಸತ್ಯವಲ್ಲ. ಧನ ಕನಕಾದಿಗಳ ಜತೆಗೆ ಶುದ್ಧ ಕನ್ಯೆಯರನ್ನೂ ದಾನವಾಗಿ ರಾಜರು ನೀಡುತ್ತಿದ್ದರು. ಈ ಕುರಿತು ಹಿರೇಮಲ್ಲೂರ ಈಶ್ವರನ್ ಅವರು 1997ರಲ್ಲಿ ಬರೆದ ‘ದಕ್ಷಿಣ ಭಾರತದ ಲಿಂಗಾಯತರ ಇತಿಹಾಸ ಮತ್ತು ದರ್ಶನ’ ಎಂಬ ಗ್ರಂಥದಲ್ಲಿ ಕಾಳಾ ಮುಖರಿಗೆ ಸಂಬಂಧಿಸಿದ ಕೆಲವು ಶಾಸನಗಳನ್ನು ನೀಡಿದ್ದಾರೆ.
ಹಂಜ ಅವರು ಓದಲಿ. ಈ ಕನ್ಯೆಯರನ್ನು ಕಾಳಾಮುಖಿ ಮಠಗಳಲ್ಲಿ ವಾಮಾಚಾರದಲ್ಲಿ ನಡೆಯುವ ಲೈಂಗಿಕ ಕ್ರಿಯೆಗಳಿಗೆ ಮತ್ತು ತಮ್ಮ ಸ್ವೇಚ್ಛಾಚಾರಕ್ಕಾಗಿ ಬಳಸುತಿದ್ದರು. ಇದೇ ಕಾರಣಗಳಿಂದಾಗಿ ಹದಿನಾಲ್ಕನೆಯ ಶತಮಾನದ ವೇಳೆಗೆ ಕಾಳಾಮುಖಿಗಳು ಮತ್ತು ಕಾಪಾಲಿಕರು ಹೇಳ ಹೆಸರಿಲ್ಲದಂತೆ ಮಾಯವಾಗಿ ಹೋದರು. ಅವರಲ್ಲಿ ಕೆಲವರು ಲಿಂಗಾಯತ ಮಠಗಳಾಗಿ ಪರಿವರ್ತನೆಗೊಂಡರು.
೬) ಹೀಗೆ ಪರಿವರ್ತನೆಗೊಂಡ ಕೆಲವು ಲಿಂಗಾಯತ ಮಠಗಳು ಈಗಲೂ ಕರ್ನಾಟಕದಲ್ಲಿ ಇವೆ. ಅವರಲ್ಲಿ ಕೆಲವು ಮಠಾಧೀಶರು ತಾವು ಕಾಳಾಮುಖಿ ಪರಂಪರೆಯವರು ಎಂದು ಈಗಲೂ ಹೇಳಿಕೊಳ್ಳುತ್ತಾರೆ. ಅದಕ್ಕೆ ಕಾರಣವೆಂದರೆ ತಮ್ಮ ಮಠವು ಬಸವಣ್ಣನವರ ಕಾಲಕ್ಕಿಂತಲೂ ಮೊದಲನೆಯದೆಂದು ಹೇಳಕೊಳ್ಳುವುದೇ ಆಗಿದೆ. ಅಂಥವರನ್ನು ಕುರಿತೇ ನಾನು ಹೇಳಿದ್ದೆಂದರೆ ಈಗಲೂ ಅದೇ ಮಾತು ಹೇಳುವ ಆ ಸ್ವಾಮಿಗಳು ತಮ್ಮ ಮುಖಕ್ಕೆ ಮಸಿ ಅಥವಾ ಬೂದಿ ಬಳಿದುಕೊಳ್ಳಲಿ ಎಂದು! ಹಂಜ ಈಗ ನನ್ನನ್ನು ಕೇಳಬಹುದು: ವಿಭೂತಿಯೂ ಬೂದಿಯೇ ಅಲ್ವೇ? ಎಂದು. ಆದರೆ ಲಿಂಗಾಯತರು ಮತ್ತು ವೀರಶೈವರು ಹಣೆಗೆ ಹಚ್ಚಿಕೊಳ್ಳುವ ಬೂದಿ ಸುಟ್ಟ ಹೆಣಗಳದ್ದಲ್ಲ!!
(೭) ‘ಅಯೋನಿಜ’ ಶಬ್ದದ ಬಗ್ಗೆ ಹೊಸ ಸಿದ್ಧಾಂತವನ್ನೇ ದಾವಣಗೆರೆ ಮೂಲದ ಈಗಿನ ಶಿಕಾಗೊ ವಾಸಿ ರವಿ ಹಂಜಗೀಮಠ ಸೃಷ್ಟಿಸಿದ್ದಾರೆ. ಅದಕ್ಕೆ ಅವರು ಶರಣರ ಕೆಲವು ವಚನ ಗಳನ್ನು ಉದ್ಧರಿಸಿ ಅಮಾಯಕ ಓದುಗರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.
ಅವರು ಉಲ್ಲೇಖಿಸಿದ ಬಸವಣ್ಣನವರ, ಚೆನ್ನಬಸವೇಶ್ವರರ ಮತ್ತು ಅಕ್ಕಮಹಾದೇವಿಯವರ ವಚನಗಳಲ್ಲಿ ’ಅಯೋನಿಜ’ ಎಂಬ ಶಬ್ದ ಬಂದಿದೆ ನಿಜ. ಆದರೆ ಆ ಶಬ್ದವನ್ನು ಅವರೆಲ್ಲ ರೂ ಕ್ರಮವಾಗಿ ಕೂಡಲ ಸಂಗಮದೇವರಿಗೆ, ಚೆನ್ನಕೂಡಲಸಂಗಮನಿಗೆ ಮತ್ತು ಚೆನ್ನಮಲ್ಲಿ ಕಾರ್ಜುನ ದೇವರನ್ನು ವರ್ಣಿಸಲು ಬಳಸಿದ್ದಾರೆಯೇ ವಿನಾ ಮಾನವರಿಗಲ್ಲ!! ಆ ಮೂರೂ ಹೆಸರುಗಳು ಶಿವನಿಗೆ ಸಂಬಂಧಿಸಿವೆ ಮನುಷ್ಯರಿಗಲ್ಲ!! ದೇವರು ಹುಟ್ಟುವುದಿಲ್ಲ ಮತ್ತು ಸಾಯುವುದಿಲ್ಲ, ಅದ್ದರಿಂದ ಯೋನಿಯ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ.
ಆದಾಗ್ಯೂ ಅಲ್ಲಿ ‘ಅಯೋನಿಜ’ ಎನ್ನುವುದನ್ನು ಪವಿತ್ರ ಎನ್ನುವ ಅರ್ಥದಿಂದ ದೇವರಿಗೆ ಬಳಸುವುದು ತುಸು ಮಟ್ಟಿಗೆ ಸರಿಯೆನಿಸಬಹುದು. ಬಸವಣ್ಣನವರು ತಮ್ಮ ವಚನ ಒಂದರಲ್ಲಿ (ಸ.ವ.ಸ 545ರಲ್ಲಿ) ಇಂದ್ರ, ಬ್ರಹ್ಮ, ವಿಷ್ಣು ಇವರ ತಂದೆ ತಾಯಿಯರ ಹೆಸರ ಗಳನ್ನು ನೀಡಿ, ಇವರೆಲ್ಲರನ್ನೂ ‘ಯೋನಿಜ’ರೆಂದು ಕರೆದಿದ್ದಾರೆ.
ಅದು ಹೀಗಿದೆ: “ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ. ಸತ್ಯಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ. ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು. ನಾಭಿರಾಜ ಮರುತಾದೇವಿಗೆ ಹುಟ್ಟಿದಾತನರುಹ. ಇವರೆಲ್ಲರೂ ಯೋನಿಜರೆಂಬುದ ತ್ರೈಜಗಬಲ್ಲುದು. ಉತ್ಪತ್ತಿ, ಸ್ಥಿತಿ, ಪ್ರಳಯಕ್ಕೆ ಹೊರಗಾದ ಕೂಡಲಸಂಗಮ ದೇವಂಗೆ ಮಾತಾಪಿತರುಗಳಿದ್ದರೆ ಹೇಳಿರೋ!"
ಏಸು ಕ್ರಿಸ್ತನ ತಾಯಿ ಮೇರಿಯು ಆಕೆಯ ಗಂಡನಿಂದಲ್ಲ ದೇವರ ಆಶೀರ್ವಾದದಿಂದ ಗರ್ಭವತಿಯಾಗಿ ಕ್ರಿಸ್ತನನ್ನು ಹೆತ್ತಳು. ಆದ್ದರಿಂದ ಅವಳದು ‘ಪವಿತ್ರ ಗರ್ಭ’ (‘ಇಮ್ಯಾಕ್ಯೂ ಲೇಟ್ ಕನ್ಸಪ್ಯನ್’) ಎಂದು ಕರೆದು ಕ್ರಿಸ್ತನು ಪವಿತ್ರನೆಂಬ ಅರ್ಥದಲ್ಲಿ ಹೇಳುವ ರೀತಿಯಲ್ಲಿ ‘ಅಯೋನಿಜ’ ಶಬ್ದ ಇಲ್ಲಿ ಬಳಕೆಯಾಗಿದೆ.
ಅದೇ ರೀತಿ ರೇಣುಕರು ಶಿವನಿಗೆ ತಾನು ಅಪವಿತ್ರ ಯೋನಿಯಿಂದ ‘ಯೋನಿಜ’ ನಾಗಿ ಹುಟ್ಟಬಯಸುವುದಿಲ್ಲವೆಂದು ಹೇಳಿದಾಗ ಶಿವನು ಆ ವರ ನೀಡಿದ್ದರಿಂದ ಅವರು ‘ಅಯೋ ನಿಜ’ರಾಗಿ ಕಲ್ಲಿನಿಂದ ಉದಯಿಸಿದರು ಎಂದು ವೀರಶೈವರ ಪುರಾಣಗಳೇ ಹೇಳುತ್ತವೆ.
‘ಅಯೋನಿಜ’ ಅರ್ಥವನ್ನು, ಮೂರು ತರಹದ ಮಲಗಳಿಂದ(ಅನವ, ಮಾಯಾ ಮತ್ತು ಕಾರ್ಮಿಕ) ಮುಕ್ತರಾಗುವ ಕ್ರಿಯೆಗಳಿಂದ ಶುದ್ಧರಾದವರಿಗೆ ವೀರಶೈವರು ‘ಅಯೋನಿಜ’ ಎನ್ನುವುದು ಒಂದು ವಿಚಿತ್ರ ವಿವರಣೆ. ಅದನ್ನು ತಾರ್ಕಿಕವಾಗಿ ಅರ್ಥೈಸುವುದು ಸರಿಯೆ ನಿಸುವುದಿಲ್ಲ.
ಆದಾಗ್ಯೂ, ಒಬ್ಬ ವ್ಯಕ್ತಿಹುಟ್ಟುವುದು ಯೋನಿಯ ಮೂಲಕವೇ! ಅವನಮನಸ್ಸು, ಆತ್ಮ ಮತ್ತು ದೇಹ ಎಲ್ಲ ಮೂರೂ ತರಹದ (ಮಾಯಾ, ಅನವ, ಕರ್ಮ) ‘ಮಲ’ಗಳನ್ನು ತೊರೆದು ಶುದ್ಧವಾದರೂ ತಾನು ಹುಟ್ಟಿದ್ದು ಯೋನಿಯಿಂದಲೇ ಎಂಬ ಶಾಶ್ವತ ಸತ್ಯ ಎಂದಾದರೂ ಸುಳ್ಳಾಗುತ್ತದೆಯೇ? ಆದ್ದರಿಂದಲೇ ಬಸವಣ್ಣನವರು ಹೇಳಿದ್ದು: “ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ವೇದವನೋದಿ ಹಾರುವನಾದ, ಕರ್ಣದೊಳು ಜನಿಸಿದವರುಂಟೆ ಜಗದೊಳು?" ಎಂದು.
ಹಂಜ ಹೇಳುವ ಪ್ರಕಾರ, ತ್ರಿವಿದ ಮಲಂಗಳನ್ನು ಕಳೆದುಕೊಂಡು ಶುದ್ಧನಾದವನಿಗೆ ‘ಅಯೋನಿಜ’ ಎಂದು ಕರೆಯುತ್ತಾರೆ ಎಂಬ ಬಗ್ಗೆ ಅಲ್ಲಮಪ್ರಭುಗಳ ಒಂದು ದೀರ್ಘ ವಚನದಲ್ಲಿ (ಸ.ವ.ಸ 871) ಹೀಗೆ ಪ್ರಶ್ನಿಸಲಾಗಿದೆ: “ಅನವಮಲ ಮಾಯಾಮಲ ಕಾರ್ಮಿಕ ಮಲವೆಂಬ ಮಲತ್ರಯಂಗಳಳಿದು ನಿರ್ಮಲವನಾದ ಶಿಷ್ಯ... ಭಾವ ಬಳಲುತ್ತದೇನೋ ಗುಹೇಶ್ವರಾ?" ಎಂದು ಕೇಳುತ್ತಾರೆ!!
ಅದರ ಅರ್ಥವೆಂದರೆ ವ್ಯಕ್ತಿ ಎಲ್ಲ ಮಲಗಳನ್ನು ತೊರೆದು ಎಷ್ಟೇ ಶುದ್ಧವಾದರೂ ‘ಅಯೋ ನಿಜ’ನಾಗಬಲ್ಲನೇ? ೮) ವೇದದ ರುದ್ರನನ್ನು ನಂತರದ ಬರಹಗಳಲ್ಲಿ ಶಿವನೆಂದು ಕಲ್ಪಿಸ ಲಾಯಿತು ಎನ್ನುವುದನ್ನು ಹಂಜಗೀ ಮಠರು ಒಪ್ಪುತ್ತಾರೆ. ಆದರೆ ಬಸವಣ್ಣ, ಚೆನ್ನ ಬಸವಣ್ಣ, ಸಿದ್ಧರಾಮೇಶ್ವರ ಇತ್ಯಾದಿಯವರು ಬ್ರಹ್ಮ, ವಿಷ್ಣು, ಶಿವ, ತ್ರಿಮೂರ್ತಿಗಳಲ್ಲಿ ಶಿವನೇ ಶೇಷ್ಠ ಎಂದು ಸಾಧಿಸಲು ವೈದಿಕರ ಪುರಾಣಗಳ ಮತ್ತು ಉಪನಿಷತ್ತುಗಳಲ್ಲಿ ಬರುವ ಬಹುತೇಕ ಕತೆಗಳನ್ನೆ ತಮ್ಮ ವಚನಗಳಲ್ಲಿಉಪಯೋಗಿಸಿದ್ದಾರೆ.
ಬಸವಣ್ಣನವರ ಇಪ್ಪತ್ತ ನಾಲ್ಕು (೨೪) ವಚನಗಳಲ್ಲಿ (ಬ.ವ.ಸ.ವ.ಸ.528ರಿಂದ 551ರ ವರೆಗೆ) ವೇದಶಾಸ್ತ್ರ ಪುರಾಣಗಳ ಕತೆಗಳನ್ನೇ ಬಸವಣ್ಣ ಬಳಸಿ ವೈದಿಕರ ವಾದವನ್ನು ತಿರಸ್ಕರಿಸಿದ್ದು ಸ್ಪಷ್ಟವಾಗಿದೆ. ಅವು ಒಂದು ತರಹದ ವಿಡಂಬನೆಯ ರೂಪದ ವಚನಗಳಾಗಿವೆ. ಅಂದರೆ ಅವರು ಆ ಕತೆಗಳನ್ನು ಒಪ್ಪಿದರು ಎಂದರ್ಥವಲ್ಲ. ಅವುಗಳನ್ನು ಕೇವಲ ಶೈವ ಮತ್ತು ವೈಷ್ಣವರ ನಡುವಿನ ತಿಕ್ಕಾಟದ ಉದಾಹರಣೆಗಳು ಎಂದು ಮಾತ್ರ ತಿಳಿಯಬಹುದು.
ಹಂಜ ಅವರು ನೀಡಿದ್ದ ಇನ್ನೂ ಅನೇಕ ಅದೇ ಶೈಲಿಯ ವಚನಗಳು ಚೆನ್ನಬಸವಣ್ಣನವರ, ಬಸವಣ್ಣ ಮತ್ತು ಸಿದ್ದರಾಮರ ವಚನಗಳಲ್ಲಿ ಇವೆ. ಅವುಗಳ ತೋರಿಕೆಯ ಅರ್ಥವನ್ನು ನಂಬಿ ಶರಣರು ವೇದಗಳನ್ನು ಒಪ್ಪಿದರೆಂದು ವಾದಿಸುವುದು ವಿಚಿತ್ರ. ಹಂಜ ಅವರು ನೀಡಿದ ವಚನವನ್ನೇ ತೆಗೆದುಕೊಳ್ಳೋಣ. ಶಿವನ ದೇಹದ ಅಂಗಾಂಗಕೊಬ್ಬರಂತೆ ಅನೇಕ ರುದ್ರರನ್ನು ಹೆಸರಿಸುವುದು ಏತಕ್ಕಾಗಿ? ವೇದಗಳಲ್ಲಿ ಅಷ್ಟೊಂದು ಜನ ರುದ್ರರಿದ್ದರೆ? ಅದೇ ಶೈಲಿಯಲ್ಲಿ ವೈದಿಕರು ಹೇಳುವ ಬೇರೆ ಬೇರೆ ಹೆಸರಿನ ‘ಪುರುಷ’ನನ್ನು ಹೆಸರಿಸಿ ಬಸವಣ್ಣ ನವರು ತಮ್ಮ ವಚನಗಳಲ್ಲಿ ವಿಡಂಬನೆ ಮಾಡಿದ್ದನ್ನು ಹಂಜ ಮರೆತು ಬಿಟ್ಟಿದ್ದಾರೆ.
ಅವುಗಳಲ್ಲಿಯ ವಿಡಂಬನೆಗಳನ್ನು ಬದಿಗಿಟ್ಟು ಅವೇ ಸಾಕ್ಷಿಗಳೆಂದು ಭಾವಿಸಿ ಶರಣರು ವೇದಗಳನ್ನು ಮತ್ತು ವೈದಿಕರ ಪುರಾಣ, ಶಾಸ್ತ್ರಗಳನ್ನು ನಂಬಿದರೆಂದು ಹಂಜರು ವಾದಿಸುವುದರ ಹಿಂದಿರುವ ದುರುದ್ದೇಶವು ಸರಳವಾಗಿ ಅರ್ಥವಾಗುತ್ತದೆ. ಅದು ಅವರ ಪಾಂಡಿತ್ಯದ ಆಳ ವಿಸ್ತಾರಗಳ ಹುಸಿಯನ್ನೇ ತೋರಿಸುತ್ತದೆ!
೯) ಹಿಂದೂ ಶೈವರ ಮತ್ತು ಶರಣರ ವಿಚಾರಗಳಲ್ಲಿ ಶಿವನ ಪರಿಕಟ್ಟೆಯಲ್ಲಿರುವ ಭೇದ ಗಳನ್ನು ನಾವು ಸುಲಭವಾಗಿ ಗುರುತಿಸಬಹುದು. ಅದೇ ಅಂಶವನ್ನು ಕುರಿತು ಕುವೆಂಪು ಅವರ ಶಿಕ್ಷಾ ಗುರುಗಳಾದ ತಳುಕಿನ ವೆಂಕಣ್ಣಯ್ಯನವರು 1921ರಲ್ಲಿಯೇ ಪ್ರಬುದ್ಧ ಕರ್ನಾಟಕ ಪತ್ರಿಯ ಲೇಖನದಲ್ಲಿ ಬರೆದಿದ್ದಾರೆ. 2003ರಲ್ಲಿ ಸುತ್ತೂರು ಮಠದಿಂದ ಪ್ರಕಟವಾದ ‘ವೀರಶೈವ ದರ್ಶನ’ದಲ್ಲಿ ಡಾ.ಅ.ಬಿ.ವಿ.ಮಪುರ ಅವರು ಎಂಟು ಬಗೆಯ ಭೇದಗಳನ್ನು ಮೂರು ಬಗೆಯ ಅರ್ಪಣಗಳಲ್ಲಿ, ಇಷ್ಟಲಿಂಗ, ಕಾಯಕ, ದಾಸೋಹ ಸಿದ್ಧಾಂತಗಳಲ್ಲಿ ಆಗಮಗಳಲ್ಲಿ ಬರುವ ಅಂಶಗಳಲ್ಲಿ ಈ ಭಿನ್ನತೆಗಳನ್ನು ನೋಡಬಹುದು.
1978ರಲ್ಲಿ ಎಂ.ಆರ್ ಸಾಖರೆಯವರು ಬರೆದ ಲಿಂಗಾಯತ ಇತಿಹಾಸ ಮತ್ತು ದರ್ಶನದಲ್ಲಿ ಓದಬಹುದು. ಆ ಅರ್ಥದಲ್ಲಿ ನಾನು ಸಂಸದರೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾಧ್ಯಮ ಗಳಿಗೆ ನೀಡಿದ ಹೇಳಿಕೆಯಲ್ಲಿ ಬರೆದಿದ್ದೆ. ಅದನ್ನು ತಿರುಚಿರುವ ಈ ಹಂಜ ಹೇಳಿದ್ದರ ಬಗ್ಗೆ ವಿವರವಾಗಿ ಉತ್ತರಿಸಲು ಬಸವಣ್ಣನವರು ಐದು ವಚನಗಳನ್ನು ಮತ್ತು ಅಲ್ಲಮ ಪ್ರಭುಗಳ ಹದಿನಾಲ್ಕು ವಚನಗಳನ್ನು ಉಖಿಸಿ ಬರೆಯಬೇಕಾದರೆ ಹತ್ತಾರು ಪುಟಗಳೇ ಬೇಕು.
ಆದ್ದರಿಂದ ಹಂಜ ಅವರು ಈ ಕೆಳಗೆ ನೀಡಿದ ಸಮಗ್ರ ವಚನ ಸಂಪುಟದಲ್ಲಿರುವ ಅಲ್ಲಮ ಪ್ರಭುಗಳ ೧೪ ವಚನಗಳನ್ನು ೭೭೧, ೭೭೪, ೭೭೫, ೭೮೦, ೭೮೫, ೭೮೭, ೭೮೯, ೮೦೦, ೮೦೨, ೮೦೩ ೮೦೪, ೮೪೨, ೮೪೫, ೮೪೬ (ಸ.ವ.ಸ., ಮತ್ತು ಬಸವಣ್ಣನವರ ೧೮೧, ೩೯೨. ೩೯೫, ೪೭೫ ಮತ್ತು ೭೪೪ (ಸ.ವ.ಸ.) ವಚನಗಳನ್ನು ಓದಿ ಶರಣರ ಅಂದರೆ ಲಿಂಗಾಯತರ ಶಿವನ ಹಾಗೂ ವೈದಿಕರ ಶಿವನ ಪರಿಕಲ್ಪನೆಗಳಲ್ಲಿನ ಅಂತರ, ವ್ಯತ್ಯಾಸ ಅಥವಾ ಭೇದಗಳನ್ನು ಅರ್ಥ ಮಾಡಿಕೊಳ್ಳಲಿ.
ಎರಡನೆಯದಾಗಿ, ಹರಪ್ಪಾ ಮೊಹೆಂಜೊದಾರೊಗಳ ಉತ್ಖನನದಲ್ಲಿ ದೊರೆತ ಲಿಂಗಗಳ ಮಾದರಿಗಳನ್ನು ನೋಡಿದ ಸರ್ ಜಾನ್ ಮಾರ್ಶಲ್ ಅವರು ಅವು ದಕ್ಷಿಣ ಭಾರತದಲ್ಲಿ ಪೂಜಿಸಲ್ಪಡುವ ಲಿಂಗಗಳನ್ನು ಹೋಲುತ್ತವೆ ಎಂದು ಅಭಿಪ್ರಾಯ ಪಟ್ಟಿzರೆ. ಆ ಕಾಲಕ್ಕೆ (ಸುಮಾರು 5000 ವರ್ಷಗಳ ಹಿಂದೆ) ಆರ್ಯರು ಇನ್ನೂ ಭಾರತಕ್ಕೆ ಬಂದಿರಲಿಲ್ಲ.
ಆದ್ದರಿಂದ ಲಿಂಗ ಅಥವಾ ಶಿವನ ಪರಿಕಲ್ಪನೆ ಆರ್ಯರದಲ್ಲ ಎಂದು ನಾನು ಹೇಳಿದ್ದು ಸತ್ಯ. ಅದೇ ರೀತಿ ಶರಣರ ಶಿವನ ಪರಿಕಲ್ಪನೆಯಲ್ಲಿ ಆಗಮಗಳ ಪಾತ್ರ ಬಹುಕಡಿಮೆ. ಆದ್ದರಿಂದ ಶಿವನು ಆಗಮಿಕನಲ್ಲ ಎಂದೂ ಹೇಳಿದ್ದೆ. ಅದರಲ್ಲಿ ಹುಳುಕು ಹುಡುಕುವ ಹಂಜನು ಮೊದಲು ತನ್ನ ಹುಳುಕಗಳನ್ನು ಹುಡುಕಿಕೊಳ್ಳಲಿ.
೧೦) ನಾನು ಸುವರ್ಣ ಟಿ.ವಿ.ಗೆ ನೀಡಿದ ಒಂದು ಗಂಟೆಯ ದೀರ್ಘ ಸಂದರ್ಶನದಲ್ಲಿ ಹೇಳಿದ ಕೆಲ ಸಂಗತಿಗಳನ್ನು ಹೇಗೆ ಹಂಜ ತಿರುಚಿದ್ದಾನೆಂಬುದನ್ನು ಆ ಸಂದರ್ಶನವನ್ನು ವೀಕ್ಷಿಸಿದ ನಾಲ್ಕು ಲಕ್ಷಕ್ಕೂ ಹೆಚ್ಚು ಜನರೇ ಹೇಳಬಲ್ಲರು. ಅದರಲ್ಲಿ ನಾನು ಭಾರತೀಯ ಸಂವಿಧಾ ನದ 25ನೆಯ ಪರೀಚ್ಛೇದದ ಅರ್ಥವನ್ನು ವಿರವರಿಸಿದ್ದೇನೆ. ಆ ಪ್ರಕಾರ ಪ್ರತಿಯೊಬ್ಬ ಭಾರತಿಯ ನಿವಾಸಿಗೆ ತನಗೆ ಸರಿಯೆನಿಸಿದ ಯಾವುದೇ ಧರ್ಮವನ್ನು ಆಚರಿಸುವ ಅಥವಾ ಯಾವುದೇ ಧರ್ಮವನ್ನು ಆಚರಿಸದಿರುವ ಹಾಗೂ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಧರ್ಮಾಂತರಗೊಳ್ಳುವ ಮೂಲಭೂತ ಹಕ್ಕನ್ನು ನೀಡಲಾಗಿದೆ. ಆ ಧರ್ಮವನ್ನು ಆಚರಿಸುವ, ಅದನ್ನು ಬೆಳೆಸುವ ಹಕ್ಕನ್ನೂ ನೀಡಲಾಗಿದೆ.
ಆದ್ದರಿಂದ ಎಲ್ಲರಿಗೂ ಯಾವುದೇ ಧರ್ಮವನ್ನು ನಂಬಿ ಆಚರಿಸಿ ಬೆಳೆಸುವ ಮೂಲಭೂತ ಹಕ್ಕು ಇದೆ. ಯಾವುದೇ ಧರ್ಮ ಸ್ವತಂತ್ರ ಅಥವಾ ಅತಂತ್ರ ಎಂಬ ಸರ್ಟಿಫಿಕೇಟ್ ನೀಡುವ ಆಧಿಕಾರ ಯಾವುದೇ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರಕ್ಕೆ ಇಲ್ಲವೇ ಇಲ್ಲ.
ನಮ್ಮ ಸಂವಿಧಾನವೇ ಆ ಮೂಲಭೂತ ಹಕ್ಕನ್ನು ನೀಡಿದ್ದರಿಂದ ಸ್ವತಂತ್ರ ಧರ್ಮದ ಮಾನ್ಯತೆ ಕೇಳುವ ಅಗತ್ಯವೇ ಇಲ್ಲ. ಅದನ್ನೇ ನಾನು ಬಹು ದೀರ್ಘವಾಗಿ ಆ ಸಂದರ್ಶನ ದಲ್ಲಿ ವಿವರಿಸಿದ್ದೇನೆ. ಅದನ್ನು ತನಗೆ ಬೇಕಾದಂತೆ ತಿರುಚಿ ಬರೆದು ಜನರನ್ನು ಎತ್ತಿಕಟ್ಟುವ ದುಷ್ಟ ಪ್ರಯತ್ನವು ಈ ಹಂಜ ಎಂಬ ಪೇಪರ ಟೈಗರ್‌ದು.
ಆದರೆ ‘ಅಲ್ಪಸಂಖ್ಯಾತ ಧರ್ಮ’ದ ಮಾನ್ಯತೆಯನ್ನು ರಾಜ್ಯ ಮತ್ತು ಕೇಂದ್ರ ಎರಡೂ ಸರಕಾರಗಳು ನೀಡಬೇಕಾಗುತ್ತದೆ. ಈಗ ಸಿಬ್ಬರು, ಬೌದ್ಧರು ಮತ್ತ ಜೈನರು ಹೊಂದಿರುವ ಮಾನ್ಯತೆ ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆಯೇ ಆಗಿದೆ. 1945ರಿಂದ ಈವರೆಗೆ 80 ವರ್ಷಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಲಿಂಗಾಯತರು ನಡೆಸುತ್ತಿರುವ ಹೋರಾಟಗಳು ಅಲ್ಪಸಂಖ್ಯಾತ ಧರ್ಮದ ಹೋರಾಟಗಳೇ ಆಗಿವೆ ಎಂದು ನಾನು ಆ ಸಂದರ್ಶನದಲ್ಲಿ ಹೇಳಿದ್ದನ್ನು ಈ ದುಷ್ಟ ಹೇಗೆ ತಿರುಚಿದ್ದಾನೆ ನೋಡಿ.
11) ಕೊನೆಯದಾಗಿ, ಮೂರು ಸಲ ಅತ್ಯಂತ ದುಃಖಮಯ ಕನಿಕರ ಪ್ರಸಂಗಗಳಲ್ಲಿ ನಾನು ಮೂರು ಜನ ಮಹಿಳಾ ತಹಸೀಲ್ದಾರರ ಮನೆಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದನ್ನು ತಿರುಚಿ ನನ್ನ ಚಾರಿತ್ಯಹರಣ ಮಾಡುವಂತೆ ಬರೆದಿದ್ದನ್ನು ಖಂಡಿಸುತ್ತೇನೆ.
ಅಂತಹದೇ ಅನೇಕ ಪ್ರಸಂಗಗಳಲ್ಲಿ ಹತ್ತಾರು ಪುರುಷ ತಹಸೀಲ್ದಾರರುಗಳ ಮತ್ತು ಇತರ ಕೆಳ ಮಟ್ಟದ ಅಧಿಕಾರಗಳ ಮನೆಗಳಿಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದನ್ನು ಏಕೆ ಈ ದುಷ್ಟ ಹೇಳಲಿಲ್ಲ? ಈ ರೀತಿಯ ಲೇಖನಗಳಿಗೆ ಅವಕಾಶವನ್ನು ಶ್ರೀ ವಿಶ್ವೇಶ್ವರ ಭಟ್ಟರು ಏಕೆ ನೀಡುತ್ತಿzರೆ ಎಂಬುದೇ ಸೋಜಿಗವಾಗಿದೆ.
(ಲೇಖಕರು ನಿವೃತ್ತ ಐಎಎಸ್ ಅಧಿಕಾರಿ)