S M Jamdar Column: ಹಂಜ ಸತ್ಯವನ್ನು ತಿರುಚುತ್ತಿರುವುದೇಕೆ ? ಓದುಗರೇ ನಿರ್ಣಯಿಸಲಿ
ನಮ್ಮ ಮನೆತನವು ಮೂಲತ ಇಂದು ಮಹಾರಾಷ್ಟ್ರದಲ್ಲಿ ಕನ್ನಡ ಪ್ರದೇಶಗಳಾದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ಮೂಲದ್ದು. ಅಲ್ಲಿಯ ನಮ್ಮ ಮನೆತನದ ಮೂಲ ಹೆಸರು ‘ದೇಸಾಯಿ’ ಎಂದಿತ್ತು. ಜಾಮ್ದಾರ ಹುದ್ದೆ ದೊರೆತ ನಂತರ ಹಳೆಯ ಹೆಸರನ್ನು ನಮ್ಮ ಅಂದಿನ ಹಿರಿಯರು ‘ಜಾಮ್ದಾರ’ ಎಂದು ಬದಲಿಸಿಕೊಂಡರು.
-
ಮಾರುತ್ತರ (ಭಾಗ-೧)
ಎಸ್.ಎಂ.ಜಾಮದಾರ
ರವಿ ಹಂಜ ಸೃಷ್ಟಿಸಿದ ಬೋಗಸ್ ಹಿನ್ನೆಲೆಯಲ್ಲಿ ನನಗೆ ಇಷ್ಟವಿಲ್ಲವಾದರೂ ನನ್ನ ಮನೆತನದ ಹೆಸರು ‘ಜಾಮದಾರ’ ಶಬ್ದದ ಬಗ್ಗೆ ಸತ್ಯ ಸಂಗತಿಗಳನ್ನು ಹೇಳಲೇ ಬೇಕಾಗಿದೆ. ಇಲ್ಲದಿದ್ದರೇ ಹಂಜ ಬರೆದಿದ್ದೇ ಸತ್ಯ ಎಂದು ಓದುಗರು ಭಾವಿಸ ಬಹುದು. ಅವರು ಬಳಸಿದ ‘ಜಮೇದಾರ’, ‘ಜಮಾದಾರ’ ಎಂಬ ಶಬ್ದಗಳಿಗೂ, ಅವುಗಳ ಇತಿಹಾಸಕ್ಕೂ ಮತ್ತು ನನ್ನ ಹೆಸರು ‘ಜಾಮದಾರ’ ಶಬ್ದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಶುದ್ಧ ಮರಾಠಿ ಶಬ್ದ! ಇದರ ಇತಿಹಾಸವನ್ನು ಮರಾಠಾ ಸಾಮ್ರಾಜ್ಯದ ಇತಿಹಾಸದ ನೂರಾರು ಗ್ರಂಥಗಳಲ್ಲಿದೆ.
ವಿಶ್ವವಾಣಿಯ ‘ಬಸವ ಮಂಟಪ’ ಅಂಕಣದಲ್ಲಿ ಸುಮಾರು ಒಂದು ವರ್ಷದಿಂದ ‘ರವಿ ಹಂಜ್’ ಹೆಸರಿನ ಓರ್ವರು ಇಪ್ಪತ್ತಕ್ಕೂ ಹೆಚ್ಚು ಲೇಖನಗಳನ್ನು ಈವರೆಗೆ ಬರೆದಿದ್ದಾರೆ. ಅವರ ಮೂಲ ಹೆಸರು ‘ರವಿ ಹಂಜಗೀಮಠ’. ದಾವಣಗೆರೆ ಮೂಲದವರು, ಈಗ ಶಿಕಾಗೊ ನಗರವಾಸಿ. ಅವರೇ ಹೇಳಿಕೊಂಡಂತೆ ದಾವಣಗೆರೆಯ ಒಂದು ಮಠದ ಅಯ್ಯನವರು. ಅಯ್ಯನವರು ಅಂದರೆ ಜಂಗಮರು. ಜಂಗಮರು ತಮ್ಮನ್ನು ವೀರಶೈವರು ಎಂದು ಭಾವಿಸು ವುದು ಎಷ್ಟು ಸರಿಯೆನ್ನುವುದೇ ಒಂದು ಜಿಜ್ಞಾಸೆಯ ಪ್ರಶ್ನೆ!
ಬಸವಣ್ಣನ ಶರಣ ಧರ್ಮವು ಬೆಳೆದಂತೆ ವೀರಶೈವವು ಕ್ಷೀಣಿಸುತ್ತದೆ ಎನ್ನುವುದು ಅವರ ಅಂಜಿಕೆ. ಶರಣ ಧರ್ಮವೇ ಲಿಂಗಾಯತವೆಂದು ಈಗ ಜನಜನಿತವಾಗಿದೆ. ಆದ್ದರಿಂದ ವೀರಶೈವರೆಂದೇ ಹೇಳಿಕೊಳ್ಳುವ ರವಿ ಹಂಜರು ಲಿಂಗಾಯತ ಹೋರಾಟವನ್ನು, ಅದರ ವಿದ್ವಾಂಸರನ್ನು ಮತ್ತು ನಾಯಕರನ್ನು ಅಲ್ಲದೆ ಬಸವಣ್ಣನವರ ಅನುಯಾಯಿಗಳನ್ನು ನಿರಂತರವಾಗಿ ತಮ್ಮ ‘ವಿಶ್ವವಾಣಿ’ ಲೇಖನಗಳಲ್ಲಿ ಮನಸಿಗೆ ಬಂದಂತೆ ಹಿಗ್ಗಾಮುಗ್ಗಾ ನಿಂದಿಸುತ್ತಲೇ ಬಂದಿದ್ದು ಸೋಜಿಗವಂತೂ ಅಲ್ಲ.
ಜತೆಗೆ ಪಂಚಾಚಾರ್ಯರ ‘ವೀರಶೈವ’ವನ್ನು ಹೊಗಳಿ, ಅವರಿಗೆ ಇಲ್ಲದ ಇತಿಹಾಸವನ್ನು ಸೃಷ್ಟಿಸಿ, ಅವರ ಪುರಾಣಗಳನ್ನು ವೈಭವೀಕರಿಸಿ ಅವರ ತತ್ವಗಳನ್ನು ಬೋಧಿಸುವುದು ಅವರ ಇನ್ನೊಂದು ಉದ್ದೇಶ. ಅದರಲ್ಲಿ ಶರಣರ ವಚನಗಳನ್ನೂ ಬಳಸಿ ಅಮಾಯಕ ಲಿಂಗಾಯತರನ್ನು ಗೊಂದಲಕ್ಕೆ ತಳ್ಳುತ್ತಿದ್ದಾರೆ.
ಇದನ್ನೂ ಓದಿ: K V Chandramauli Column: ಶಾಸಕರಿಗೆ ವಿನಾಯಿತಿ, ಅಧಿಕಾರಿಗಳಿಗೆ ನಿಯಮ: ಏಕೀ ತಾರತಮ್ಯ ?
ಈ ಹಿನ್ನೆಲೆಯ ಹಂಜಗೀಮಠ ಅವರು ಮೊನ್ನೆ ಅಕ್ಟೋಬರ್ ೫ರಂದು ಬೆಂಗಳೂರಲ್ಲಿ ನಡೆದ ಬೃಹತ್ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ‘ವಿಕೃತಿ ಅಭಿಯಾನ’ವೆಂದು ಟೀಕಿ ಸಿದ್ದು, ಅದರಲ್ಲಿ ಭಾಗವಹಿಸಿದ ನಾಲ್ಕುನೂರು ವಿರಕ್ತ ಮಠಗಳ ಸ್ವಾಮಿಗಳನ್ನು ಮನಸಿಗೆ ಬಂದಂತೆ ಬೈದದ್ದು ಅವರ ಮುಖವಾಡವನ್ನು ಕಳಚಿಸಿದೆ.
ಅವರ ದುರ್ದೈವದಿಂದ ಅದೇ ಕಾಲಕ್ಕೆ ಸೆಪ್ಟೆಂಬರ್ ೧೯ರಂದು ಹುಬ್ಬಳ್ಳಿಯಲ್ಲಿ ನಡೆದ ಪಂಚಪೀಠಗಳ ಏಕತಾ ಸಮಾವೇಶ ದಯನೀಯವಾಗಿ ಸೋತು ಹೋದದ್ದು ಮತ್ತು ಪಂಚ ಪೀಠದ ಹತ್ತು ದಿನಗಳ ‘ದಸರಾ ದರ್ಬಾರ’ವು ಬಸವಕಲ್ಯಾಣದಲ್ಲಿ ನೆಲಕಚ್ಚಿದ್ದು ಹಂಜರಿಗೆ ಮತ್ತು ಅವರ ಪಟಾಲಂದವರಿಗೆ ಹಾಗೂ ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಕ್ಕೆ ಮುಖಭಂಗವಾಗಿದೆ. ಆ ಸೋಲುಗಳು ಅವರೆಲ್ಲರಿಗೆ ನುಂಗಲಾರದ ತುತ್ತಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ಅದರ ಪ್ರತಿಬಿಂಬವೇ ಅವರು ನನ್ನ ವಿರುದ್ಧ ಬರೆದ ಮೊನ್ನೆಯ ಎರಡು ಲೇಖನಗಳು!
ಮೊನ್ನೆಯ ಲೇಖನದ ಭಾಗ-೧ರಲ್ಲಿ ನನ್ನ ಮನೆ ಹೆಸರು ‘ಜಾಮದಾರ’ ಪದದ ಬಗ್ಗೆ ಹಂಜ, ಅವರೇ ಸೃಷ್ಟಿಸಿದ ಬೋಗಸ್ ‘ಇತಿಹಾಸ’ನ್ನು ಬರೆದಿದ್ದಾರೆ. ಅದನ್ನೇ ಬಳಸಿ ಜೆನೆಟಿಕ್ಸ್ ವಿಜ್ಞಾನ ದಲ್ಲಿ ಒಂದು ದೊಡ್ಡ ಸಂಶೋಧನೆಯನ್ನೆ ಮಾಡಿದ್ದಾರೆ! ‘ಸಾಮಾಜಿಕ ಸ್ಥಾನ ಮಾನಗಳು ಜೈವಿಕವಾಗಿ ಆನುವಂಶೀಯ ಜೀನ್ಸ್‌ಗಳಾಗುತ್ತವೆ’ ಎಂಬುದೇ ಅವರ ಸಂಶೋಧನೆ!
ಅದೇ ‘ಸಂಶೋಧನೆ’ಯನ್ನು ಬಳಸಿ ನನ್ನ ಜೆನೆಟಿಕ್ ಮನೋಭೂಮಿಕೆಯನ್ನು ವಿವರಿಸಿzರೆ. ಆ ಸಂಶೋಧನೆಗೆ ಈ ವರ್ಷದ ನೊಬೆಲ್ ಪ್ರಶಸ್ತಿ ದೊರೆಯಬೇಕಿತ್ತು!! ಅವರು ಎತ್ತಿದ ಅಂಶಗಳಿಗೆ ಒಂದೊಂದಾಗಿ ಈ ಕೆಳಗಿನಂತೆ ಉತ್ತರಿಸುತ್ತಿದ್ದೇನೆ. ೧) ಹಂಜ ಅವರೇ ಸೃಷ್ಟಿಸಿದ ಬೋಗಸ್ ಹಿನ್ನೆಲೆಯಲ್ಲಿ ನನಗೆ ಇಷ್ಟವಿಲ್ಲವಾದರೂ ನನ್ನ ಮನೆತನದ ಹೆಸರು ‘ಜಾಮದಾರ’ ಶಬ್ದದ ಬಗ್ಗೆ ಸತ್ಯ ಸಂಗತಿಗಳನ್ನು ಹೇಳಲೇಬೇಕಾಗಿದೆ. ಇಲ್ಲದಿದ್ದರೇ ಹಂಜ ಬರೆದಿದ್ದೇ ಸತ್ಯ ಎಂದು ಓದುಗರು ಭಾವಿಸಬಹುದು.
ಅವರು ಬಳಸಿದ ‘ಜಮೇದಾರ’, ‘ಜಮಾದಾರ’ ಎಂಬ ಶಬ್ದಗಳಿಗೂ, ಅವುಗಳ ಇತಿಹಾಸಕ್ಕೂ ಮತ್ತು ನನ್ನ ಹೆಸರು ‘ಜಾಮದಾರ’ ಶಬ್ದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಪರ್ಷಿ ಯನ್ ಶಬ್ದವೂ ಅಲ್ಲ, ಶುದ್ಧ ಮರಾಠಿ ಶಬ್ದ! ಇದರ ಇತಿಹಾಸವನ್ನು ಶಿವಾಜಿಯ ಕಾಲ ದಿಂದ ಪ್ರಾರಂಭವಾದ ಮರಾಠಾ ಸಾಮ್ರಾಜ್ಯದ ಇತಿಹಾಸದ ನೂರಾರು ಗ್ರಂಥಗಳಲ್ಲಿ ಇಚ್ಛೆ ಇದ್ದವರು ಓದಬಹುದು.
ಶಿವಾಜಿಯು 1674ರ ಜೂನ್ ೬ರಂದು ರಾಯಗಢದಲ್ಲಿ ಮರಾಠಾ ಸಾಮ್ರಾಜ್ಯದ ಛತ್ರಪತಿ ಸಿಂಹಾಸನವನ್ನು ಏರುತ್ತಿದ್ದಂತೆ ಹೊಸದಾದ ಆಡಳಿತ ಪದ್ಧತಿಯೊಂದು ಜಾರಿಗೆ ಬಂದಿತು. ಅದು ‘ಅಷ್ಟ ಪ್ರಧಾನ ಪದ್ಧತಿ’ ಎಂದು ಮರಾಠಾ ಇತಿಹಾಸದಲ್ಲಿ ಪ್ರಸಿದ್ದವಾಗಿದೆ.
ಅದರಲ್ಲಿ- ೧) ಪ್ರಧಾನಿ ಹುದ್ದೆಯನ್ನು ‘ಪೇಶ್ವಾ’ ಎಂದು ಹೆಸರಿಸಿದೆ. ೨) ಹಣಕಾಸು ಮಂತ್ರಿ ಯನ್ನು ‘ಮುಜುಮ್ದಾರ’ ಎಂದು ಕರೆಯಲಾಗಿದೆ. ೩) ಗೃಹ ಸಚಿವನನ್ನು ‘ವಖಿಯ ನವೀಸ’ ಎನ್ನಲಾಗಿದೆ. ೪) ವಿದೇಶ ಸಚಿವನಿಗೆ ‘ದಾಬೀರ’ ಅಥವಾ ‘ಸುಮಂತ ಎನ್ನುತ್ತಾರೆ. ೫) ಮುಖ್ಯ ಕಾರ್ಯದರ್ಶಿಗೆ ‘ಸಚಿವ’ ಎಂಬ ಹೆಸರಿದೆ (ಇಂದಿನ ಮಹಾರಾಷ್ಟ್ರ ಸರಕಾರದ ಮುಂಬೈಯ ಸೆಕ್ರೆಟರಿಯೇಟನ್ನು ಅದೇ ಆರ್ಥದಲ್ಲಿ ‘ಸಚಿವಾಲಯ’ ಎಂದು ಹೆಸರಿಸಲಾಗಿದೆ). ೬) ಮಹಾ ದಂಡನಾಯಕನನ್ನು ‘ಸೇನಾಪತಿ’ ಎಂಬ ಹುದ್ದೆಯಿಂದ ಕರೆಯುತ್ತಾರೆ. ೭) ಮುಖ್ಯ ನ್ಯಾಯಾಧೀಶನನ್ನ ‘ನ್ಯಾಯಾಧೀಶ’ ಎನ್ನುತ್ತಾರೆ. ೮) ಅಡ್ವೊಕೇಟ್ ಜನರಲ್‌ನನ್ನು ‘ನ್ಯಾಯಶಾಸಿ’ ಅಥವಾ ‘ಪಂಡಿತ ರಾವ’ ಎನ್ನುತ್ತಾರೆ.
ಈ ಎಂಟು ಜನರಲ್ಲಿ ಮೊದಲ ಆರು ಮಂತ್ರಿಗಳು ಮರಾಠರು ಬಹುಬಾರಿ ನಡೆಸುತ್ತಿದ್ದ ರಾಜ್ಯ ವಿಸ್ತರಣಾ ಯುದ್ಧಗಳಲ್ಲಿ ನಿರತರಾಗಬೇಕಾಗಿತ್ತು. ಅದರಿಂದ ದಿನ ನಿತ್ಯದ ಆಡಳಿತಕ್ಕೆ ತೊಂದರೆಯಾಗಬಾರದೆಂದು ಮಂತ್ರಿ ಪರಿಷತ್ತಿನ ಕೆಳಗಡೆ ದ್ವಿತೀಯ ಮಟ್ಟದಲ್ಲಿ ಮತ್ತೆ ಎಂಟು ಜನರ ಶಾಶ್ವತವಾದ ಬ್ಯೂರೊಕ್ರಸಿ ಇರುತ್ತಿತ್ತು. ಅವರ ಹುದ್ದೆಗಳು ಕ್ರಮವಾಗಿ ಹೀಗಿದ್ದವು:
೧) ದಿವಾನ (ಇಲಾಖಾ ಕಾರ್ಯದರ್ಶಿ), ೨) ಮುಜುಮ್ದಾರ (ಮುಖ್ಯ ಅಕೌಂಟೆಂಟ್), ೩) ಫಡ್ನವೀಸ (ಮುಖ್ಯ ಆಡಿಟರ್), ೪) ಸಬ್ನವೀಸ (ಕಚೇರಿಯ ಮುಖ್ಯ ಸೂಪರಿಂಟೆಂಡೆಂಟ್), ೫) ಖಾರಕಾನೀಸ (ರಾಜ್ಯ ದಾಸ್ತಾನು ಮತ್ತು ಖರೀದಿಯ ಮುಖ್ಯಸ್ಥ), ೬) ಚಿಟ್ನೀಸ (ಜುಡಿಷಿ ಯಲ್ ವ್ಯವಹಾರದ ಪ್ರಭಾರಿ), ೭) ಪೋತ್ನೀಸ (ಕ್ಯಾಷಿಯರ್), ಮತ್ತು ಕೊನೆಯದಾಗಿ, ೮) ‘ಜಾಮ್ದಾರ’ನು ಖಜಾನೆಯ ಮುಖ್ಯಸ್ಥ (ಬೆಳ್ಳಿ-ಬಂಗಾರ, ಮುತ್ತು-ರತ್ನ, ವಜ್ರ-ವೈಡೂರ್ಯ ಇತ್ಯಾದಿ ರಾಜನ ಸಂಪತ್ತಿನ ಕಸ್ಟೋಡಿಯನ್ ಆಗಿದ್ದನು).
ಇದು ನನ್ನ ಮನೆತನ ‘ಜಾಮ್ದಾರ’ ಶಬ್ದದ ಇತಿಹಾಸ ಮತ್ತು ಹಿನ್ನೆಲೆ. ಅದೇ ಹೆಸರಿನ ಓರ್ವರು, ಗೌರವಾನ್ವಿತ ಎಸ್.ಎಂ.ಜಾಮದಾರ, ಈಗ ಮುಂಬೈ ಹೈಕೋರ್ಟಿನ ನ್ಯಾಯಾಧೀಶರಾಗಿದ್ದಾರೆ.
ಇನ್ನೊಬ್ಬರು ದಿಲೀಪ ಜಾಮದಾರ ಕೇಂದ್ರೀಯ ಸೆನ್ಸಾರ್ ಬೋರ್ಡಿನ ಕಾರ್ಯದರ್ಶಿ ಯಾಗಿದ್ದಾರೆ. ಮತ್ತೊಬ್ಬರು ಐ.ಎಂ.ಜಾಮದಾರ ಐಎಎಸ್ ಅಧಿಕಾರಿಯಾಗಿ ಪಂಜಾಬ ಸರಕಾರದಲ್ಲಿದ್ದಾರೆ.
ನಮ್ಮ ಮನೆತನವು ಮೂಲತ ಇಂದು ಮಹಾರಾಷ್ಟ್ರದಲ್ಲಿ ಕನ್ನಡ ಪ್ರದೇಶಗಳಾದ ಸೋಲಾ ಪುರ ಜಿಲ್ಲೆಯ ಅಕ್ಕಲಕೋಟ ಮೂಲದ್ದು. ಅಲ್ಲಿಯ ನಮ್ಮ ಮನೆತನದ ಮೂಲ ಹೆಸರು ‘ದೇಸಾಯಿ’ ಎಂದಿತ್ತು. ಜಾಮ್ದಾರ ಹುದ್ದೆ ದೊರೆತ ನಂತರ ಹಳೆಯ ಹೆಸರನ್ನು ನಮ್ಮ ಅಂದಿನ ಹಿರಿಯರು ‘ಜಾಮ್ದಾರ’ ಎಂದು ಬದಲಿಸಿಕೊಂಡರು.
1775ರ ಸುಮಾರಿಗೆ ಅಂದು ಪ್ರಸಿದ್ದ ಮರಾಠಾ ಪ್ರಧಾನಿಯಾಗಿದ್ದ ನಾನಾ ಫಡನವೀಸ ಅವರಿಂದ ನಮ್ಮ ಅಂದಿನ ಹಿರಿಯರಿಗೆ ಅಕ್ಕಲಕೋಟ ಸಂಸ್ಥಾನದ ‘ಜಾಮ್ದಾರ’ ಹುದ್ದೆ ಯನ್ನು ನೀಡಲಾಗಿತ್ತು. ಅದರ ಸನದ್ದು ಮತ್ತು ಸಿಕ್ಕೆಗಳು ನಮ್ಮ ಮೂಲ ಮನೆತನದಲ್ಲಿ ಇವೆ.
ಆದರೆ ಸುಮಾರು ಐದು ತಲೆಮಾರಿನ ಹಿಂದೆ ನಮ್ಮ ಹಿರಿಯರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿ ನಮ್ಮ ಅಣ್ಣ-ತಮ್ಮಂದಿರ ೪೦ರಷ್ಟು ಮನೆತನಗಳು ಇವೆ. ಅವೆಲ್ಲ ಮನೆಗಳು ಒಂದೇ ಕಡೆ ಇರುವುದರಿಂದ ಆ ಪ್ರದೇಶವನ್ನು ‘ಜಾಮದಾರ ಓಣಿ’ ಎನ್ನುತ್ತಾರೆ.
ತೊರಗಲ್ಲ ಗ್ರಾಮವು ನನ್ನಜ್ಜನ ತಾಯಿಯ ತವರುಮನೆಯ ಊರಾಗಿತ್ತು, ಅಲ್ಲದೇ ತೊರಗಲ್ಲದಲ್ಲಿ ಸಿಂಧೆ ಸಂಸ್ಥಾನದ ನ್ಯಾಯಾಲಯವೂ ಇತ್ತು. ಅದ್ದರಿಂದ ನನ್ನಜ್ಜ ವಕೀಲಕಿ ಮಾಡುತ್ತ ತೊರಗಲ್ಲಿನಲ್ಲಿ ವಾಸವಾಗಿದ್ದನು. ತೊರಗಲ್ಲ ಅಜ್ಜಿಗೆ ಗಂಡುಮಕ್ಕಳು ಇರಲಿಲ್ಲ. ನಷ್ಟಂಶವಾದ ಆ ಮನೆತನದ ಅಜ್ಜಿಯ ಎಲ್ಲ ಜಮೀನು, ಇತರ ಚರಾಸ್ತಿಗಳೂ ಕಾಲಾಂತರದಲ್ಲಿ ಓರ್ವನೇ ವಾರಸುದಾರನಾದ ನನ್ನ ಅಜ್ಜನಿಗೆ ದೊರೆತವು.
ಹಾಗಾಗಿ ತೊರಗಲ್ಲದಲ್ಲಿ ನಮಗೆ ‘ನರಗುಂದ’ ಎಂಬ ಅಡ್ಡಹೆಸರಿದೆ. ಅದು ಅಜ್ಜಿಯ ಮನೆತನದ ಹೆಸರು. ಆದರೆ ನನ್ನ ಅಜ್ಜ ದತ್ತಕ ಪುತ್ರನಲ್ಲವಾದ್ದರಿಂದ ಅವನ ಮೂಲ ಹೆಸರು ‘ಜಾಮ್ದಾರ’ ಎಂದೇ ಉಳಿದಿದೆ.ಮೇಲೆ ವಿವರಿಸಿದ ನನ್ನ ಮನೆತನದ ನಿಜವಾದ ಹಿನ್ನೆಲೆಯಲ್ಲಿ, ರವಿ ಹಂಜಗೀಮಠ ಎಂಬ ದುಷ್ಟನು ನನ್ನ ಬಗ್ಗೆ, ನನ್ನ ಮನೆತನದ ಹೆಸರಿನ ಬಗ್ಗೆ ಅವನೇ ಸೃಷ್ಟಿಸಿದ ಬೋಗಸ್ ಇತಿಹಾಸದ ಬಗ್ಗೆ, ಆ ಹೆಸರಿಗೆ ಅಂಟಿಕೊಂಡಿದೆ ಎಂಬ ನನ್ನ ಮನೋಭೂಮಿಕೆ ಇತ್ಯಾದಿಗಳ ಬಗ್ಗೆ ಬರೆದದ್ದು ಎಷ್ಟು ಸತ್ಯ, ಎಷ್ಟು ಸಮಂಜಸ ಎಂಬುದನ್ನು ಓದುಗರೇ ನಿರ್ಣಯಿಸಲಿ.
ಅಂಥ ಸುಳ್ಳುಗಳನ್ನು ಈಗ ಹಂಜ ಏಕೆ ಸೃಷ್ಟಿಸಿ ಸತ್ಯವನ್ನು ತಿರುಚುತ್ತಿದ್ದಾನೆ ಎಂಬುದನ್ನು ಓದುಗರೇ ನಿರ್ಣಯಿಸಲಿ. ಅಂತಹ ಕೀಳುದರ್ಜೆಯ ಲೇಖನಗಳನ್ನು ಪ್ರಕಟಿಸುತ್ತಿರುವ ದಿನ ಪತ್ರಿಕೆಯ ಉದ್ದೇಶವಾದರೂ ಏನು? ೨) ಕಾಳಾಮುಖಿಗಳನ್ನು ಕುರಿತು ಹಂಜ ಒಪ್ಪಿಕೊಂಡ ಮೂರು ಅಂಶಗಳೆಂದರೆ: ಅ) ರಾಮಾನುಜಾಚಾರ್ಯರು ಕಾಳಾಮುಖಿಗಳನ್ನು ಕುರಿತು ಕಾಳಾಮುಖಿಗಳು ಸ್ಮಶಾನದಲ್ಲಿ ಸುಟ್ಟ ಹೆಣಗಳ ಬೂದಿಯನ್ನು ತಮ್ಮ ಮುಖಕ್ಕೆ ಬಳಿದು ಕೊಳ್ಳುತ್ತಿದ್ದರು" ಎಂದು ಹಂಜ ಅವರೇ ಬರೆದಿದ್ದಾರೆ. ಆದರೆ ಅದು ತಪ್ಪು ಎಂದು ಡೆವಿಡ್ ಲಾರೆಂಜನ್ ಬರೆದಿದ್ದಾರೆಂದು ಹಂಜ ಹೇಳಿದ್ದಾರೆ; ಬ) ಕೊಬ್ಬರಿ ಬಟ್ಟಲನ್ನು ಸುಟ್ಟಾಗ ಉಂಟಾಗುವ ಕಪ್ಪನ್ನು ಈಗಲೂ ಭಸ್ಮದೊಂದಿಗೆ ಹಣೆಗೆ ಹಚ್ಚಿಕೊಳ್ಳುವುದು ವಾಡಿಕೆ ಯಾಗಿದೆ ಎಂದು ಹಂಜ ಬರೆದಿದ್ದಾರೆ.
ಮುಂದುವರಿದು, ಲಾರೆಂಜನ್ ಹೇಳಿದ್ದು ಸತ್ಯ ಮತ್ತು ರಾಮಾನುಚಾರ್ಯರು ಹೇಳಿದ್ದು ಸತ್ಯವಲ್ಲ ಎಂದಿದ್ದಾನೆ. ಆ ಬಗ್ಗೆ ನಾನು ಹೇಳುವುದಿಷ್ಟೇ: ರಾಮಾನುಜರು ಹೇಳಿದ್ದು ಹನ್ನೊಂದು- ಹನ್ನೆರಡನೆಯ ಶತಮಾನದಲ್ಲಿ. ಆಗಿನ್ನೂ ಬಹಳಷ್ಟು ಕಾಳಾಮುಖಿ ಮಠಗಳು ಅಸ್ತಿತ್ವದಲ್ಲಿ ಇದ್ದವು. ಅವರನ್ನು ನೋಡಿ ಬರೆದ ರಾಮಾನುಜಾಚಾರ್ಯರ ಮಾತು ಸತ್ಯವೋ ಅಥವಾ ಇತ್ತೀಚೆಗೆ ವಿದೇಶಿ ವಿದ್ವಾಂಸನೊಬ್ಬ ಪುಸ್ತಕಗಳನ್ನು ಓದಿ ಹೇಳಿದ ಮಾತು ಸತ್ಯವೋ ಓದುಗರೇ ನಿರ್ಧರಿಸಲಿ. ನಾನು ಹೇಳಿದ ಮಾತಿಗೆ ರಾಮಾನು ಚಾರ್ಯರ ಅಭಿಪ್ರಾಯವೇ ಆಧಾರವಾಗಿದೆ.
(2ನೇ ಭಾಗವು ಸೋಮವಾರದ ಸಂಚಿಕೆಯಲ್ಲಿ ಮುಂದುವರಿಯುವುದು)
(ಲೇಖಕರು ನಿವೃತ್ತ ಐಎಎಸ್ ಅಧಿಕಾರಿ)