ಸಂಬಂಧ
ಎಂ.ವಿ.ನೆಗಳೂರ
ವೈವಾಹಿಕ ಸಂಬಂಧಗಳು ಗಂಡು ಹೆಣ್ಣಿನ ಮತ್ತು ಉಭಯ ಕುಟುಂಬಗಳ ಬಾಂಧವ್ಯದ ಬೆಸುಗೆ ಗಳಾಗದೇ ಸೋಲುತ್ತವೆ ಏಕೆ? ಶಾಸಕ್ಕೆ ಹಚ್ಚಿದ ಅರಿಶಿಣಮಾಸುವ ಮುಂಚೆಯೇ ಸೋತು ಕೈ ಚೆಲ್ಲು ತ್ತವೆ. ಮದುವೆಗಳು ಗಂಡು ಹೆಣ್ಣಿಗೆ ಮಾತ್ರವಲ್ಲ ಎರಡು ಕುಟುಂಬಗಳ ಸಂಗಮವಾಗದೆ ಬದ್ಧವೈರಿ ಗಳ ರಣರಂಗಗಳಾಗುತ್ತಿವೆ, ಮಕ್ಕಳ ಮದುವೆ ಎಂದರೆ ಪಾಲಕರಿಗೆ ಭಯ, ಸಂಕಟ!
ಸಂತಸ, ಸಂಭ್ರಮದ ಉಮೇದುಗಳಿಲ್ಲದ ಅರ್ಥವಿಲ್ಲದ ವ್ಯರ್ಥ ಆಚರಣೆಗಳಾಗುತ್ತಿವೆ. ಕೆಲವು ಹಸೆಮಣೆ ಏರುವ ಪೂರ್ವದಲ್ಲಿಯೇ ಕುಸಿದು ಬೀಳುತ್ತಿವೆ. ಈ ಹಂತ ದಾಟಿದವು ವೈರುಧ್ಯಗಳ ಮಧ್ಯದಲ್ಲಿ ಕುಂಟುತ್ತಾ, ತೆವಳುತ್ತಾ ಕಾಲ ತಳ್ಳಿ ಮುಂದೊಂದುದಿನ ಕುಸಿಯುತ್ತಿವೆ.
ಗಂಡ ಹೆಂಡತಿಯ ಸಂಬಂಧ ಗಂಧ ತೀಡಿದ್ಹಂಗ! ಲಿಂಗಕ್ಕ ನೀರು ಎರದ್ಹಂಗ!! ಎನ್ನುವ ಕವಿವಾಣಿ “ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ" ಎಂಬ ಗಾದೆ ಮಾತು ಹುಸಿಯಾಗಿ ಮಲಗುವ ಕೋಣೆಯಿಂದಲೇ ಮಧುರ ಘರ್ಷಣೆಗಳಿಲ್ಲದೆ ವಿರಸ ದ್ವೇಷಗಳಿಗೆ ನಾಂದಿ ಹಾಡುತ್ತಿವೆ ಏಕೆ? ಎನ್ನು ವುದು ಯಕ್ಷಪ ಶ್ನೆಯಾಗಬಾರದು ನಾವೇ ಉತ್ತರ ಕಂಡುಕೊಳ್ಳಬೇಕು.
ಆಧುನಿಕ ಜೀವನ ಶೈಲಿ ವ್ಯವಸ್ಥೆಗೆ ಕೊಡಲಿಪೆಟ್ಟನ್ನು ನೀಡುತ್ತಲಿದೆ. ಪರಸ್ಪರ ನಂಬಿಕೆಯ ಗ್ಯಾರೆಂಟಿ ಗಳಿಲ್ಲ, ಎಕ್ಸ್‌ಪೈರಿ ರಿನ್ಯೂವಲ್ ಡೇಟ್ಗಳಿಲ್ಲ, ಮರುಮದುವೆ, ಮಹಿಳೆಯರ ರಕ್ಷಣೆಗಾಗಿ ರಚಿತವಾದ ವರದಕ್ಷಿಣೆ, ಕಿರುಕುಳದ ಕಾನೂನಿನಲ್ಲಿ ಹಲವು ವಿಷಯಗಳಿದ್ದು ಅವುಗಳು ದುರುಪಯೋಗವಾಗು ತ್ತಿವೆ.
ಇದನ್ನೂ ಓದಿ: Fake Marriage: 4 ವರ್ಷ 4 ಮದುವೆ- ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಖತರ್ನಾಕ್ ಮಹಿಳೆ ಇದೀಗ ಪೊಲೀಸರ ಬಲೆಗೆ!
ವಾಸ್ತವಕ್ಕಿಂತ ಸುತ್ತಲಿನವರ ದಾಳಗಳಾಗಿ ಸುಳ್ಳುಗಳು ಸೃಷ್ಟಿಯಾಗುತ್ತಿವೆ. ಗಂಡ ಹೆಂಡತಿಯ ಹೃದಯ ಬಯಕೆಗಳಿಗಿಂತ ಪ್ರತಿಷೆ ಯ ಕಣಗಳಾಗುತ್ತಿವೆ. ಇಚ್ಛೆಯನ್ನರಿತ ಮಧುರ ಕ್ಷಣಗಳ ಆಸ್ವಾದ ನೆಯಿಂದ “ಸ್ವರ್ಗಕ್ಕೆ ಕಿಚ್ಚು ಹಚ್ಚುವ ಬದಲು", ತಾವೇ ಕೊಳ್ಳಿಯಿಟ್ಟುಕೊಳ್ಳುತ್ತಿವೆ.
ಸಮಾಜದ ಕೇಂದ್ರಬಿಂದುವಾದ ಕುಟುಂಬ ವ್ಯವಸ್ಥೆ ಭಗ್ನವಾಗಲು ಆಧುನಿಕತೆಯ ಜೀವನಶೈಲಿ ಬಹುಮಟ್ಟಿಗೆ ಪ್ರೇರಕವಾಗಿದೆ. ಒಂದೇ ಮಗುವಿನ ಸಿದ್ದಾಂತ, ಮುಂದುವರಿದು DINK(Double income no kids ) ಸತಿಪತಿಗಳ ಆರ್ಥಿಕ ಸ್ವಾವಲಂಬನೆ, ವೈದ್ಯಕೀಯ ಆವಿಷ್ಕಾರಗಳು, ಜೀವನ ಸುಗಮಗೊಳಿಸುವ ನೈತಿಕ ಪಥದ ಬದಲು ಅಧಪತನಕ್ಕೆ ಕಾರಣವಾಗಿದೆ.
ಸಂವಿಧಾನದತ್ತವಾದ ಮಹಿಳಾ ಶೋಷಣೆ ಕಾನೂನು, ಜೀವನಾಂಶ, ವಕೀಲರ ಭರವಸೆ, ಬುದ್ಧಿ ಕಲಿಸುವ ಹಠ, ಪರಸ್ಪರ ಈರ್ಷ್ಯೆ, ದಾಂಪತ್ಯ ಜೀವನವನ್ನು ಮೂರಾಬಟ್ಟೆ ಮಾಡಿವೆ. ಸಂತೃಪ್ತಿ ಬದುಕು, ಐಕ್ಯಮತ, ಪರಸ್ಪರ ಅರಿವಿನ ಕೊರತೆ, ಕೂಡು ಕುಟುಂಬದ ಕಲ್ಪನೆಗಳಿಲ್ಲದ ಪಾಶ್ಚಾತ್ಯರ ಅನುಕರಣೆ, ಆಹಾರ ಪದ್ಧತಿ, ರೀಲ್ಸ್‌ಗಳ ವೀಕ್ಷಣೆ, ಮೊಬೈಲ್, ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ದೈಹಿಕ ಚಟುವಟಿಕೆಗಳಿಲ್ಲದ ತಾಳ್ಮೆಯ ಕೊರತೆ, ಸಣ್ಣಪುಟ್ಟ ಸಂಗತಿಗಳನ್ನು ಸಹನಾಶೀಲತೆ ಯಿಂದ ಸಂಭಾಳಿಸದೆ ಕೋಪದಲ್ಲಿ ಮೂಗು ಕೊಯ್ದುಕೊಳ್ಳುವ ಧಾವಂತಗಳು ಹೆಚ್ಚುತ್ತಿವೆ.
ಹಣ, ಅಹಂಕಾರ, ಸ್ವಾಭಿಮಾನಗಳು ಬದುಕಿನ ಮಧುರತೆಯನ್ನು ಹೆಚ್ಚಿಸುವ ಬದಲು ಸದ್ಗುಣ ಗಳನ್ನು ಗೌಣವಾಗಿಸುತ್ತಿವೆ. ಸತಿಪತಿಗಳು ವಂಶೋದ್ಧಾರಕ್ಕಾಗಿ, ಜೀವನ ಮುಕ್ತಿಗಾಗಿ, ಭವಿಷ್ಯಕ್ಕಾಗಿ ಎಂದು ಸಾವದಾನ ಚಿತ್ತರಾಗಿ ವಿವೇಚಿಸಿ, ಪರಸ್ಪರ ತಪ್ಪುಗಳನ್ನು ನುಂಗಿಕೊಳ್ಳುತ್ತಾ ಸುದೀರ್ಘ ಬಾಳ್ವೆಯತ್ತ ಸಾಗಬೇಕು.
ಕ್ಷಮೆ ಸಹನೆ ಅರಿತ ಸಂಸಾರವು ಅನನ್ಯ ಗೆಳೆತನದ ಯಾನ. ಅಹಂ ತುಂಬಿದ ದಾಂಪತ್ಯ ಯಾತನಾ ಮಯ, ಸಮಾನಾಭಿರುಚಿ, ಆಸಕ್ತಿ, ಆಲೋಚನೆ ಹೊಂದಿರುವ ಜೋಡಿಗಳು ಅಪರೂಪ ಸಣ್ಣಪುಟ್ಟ ಹೊಂದಾಣಿಕೆಗಳು ಅಗತ್ಯ. ಜೀವನವನ್ನು ಮತ್ತು ಚೇತನವನ್ನು ಗೌರವಿಸಿದಾಗ ಮದುವೆಗಳು ಮಧುರವಾಗುತ್ತವೆ.
ಸತಿ-ಪತಿಗಳಲ್ಲಿ ಪರಸ್ಪರ ಹೊಂದಾಣಿಕೆಯೇ ಮುಖ್ಯವಾಗಬೇಕು. ದೈಹಿಕವಾಗಿ, ಮಾನಸಿಕವಾಗಿ, ಏಕೋಭಾವವಾಗಿ, ಉಭಯ ದೃಷ್ಟಿ, ಏಕದೃಷ್ಟಿಯಲ್ಲಿ ಕಾಂಬಂತೆ ದಂಪತಿಗಳು ಮುಕ್ತಿಯೆಡೆಗೆ ಸಾಗಬೇಕು, ಎನ್ನುವ ಅಲ್ಲಮನ ನುಡಿಗೆ ಪಕ್ವವಾಗಿ ಉಭಯ ಕುಟುಂಬಗಳ ಬಾಂಧವ್ಯ ಬೆಸೆಯುವ ಬದಲು ಪರಸ್ಪರ ಅರಿವಿನ ಕೊರತೆಯಿಂದ ಸಂಕಟದ ಕಂಟಕಗಳಾಗುತ್ತಿವೆ.
ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುವ ದಾಂಪತ್ಯವೇ ಬೇಡ, ಸಂಕಟಗಳ ಸರಮಾಲೆಗೆ ಕೊರಳೊಡ್ಡ ಬೇಕಾದ ಸಂದರ್ಭಗಳನ್ನೇಕೆ ಮದುವೆಯಿಂದ ತಂದುಕೊಳ್ಳಬೇಕು, ಮದುವೆಯೇ ಬೇಡ ಎಂದು ನಿರ್ಧರಿಸುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ನೆಗಡಿ ಬರುತ್ತದೆಂದು ಮೂಗೆ ಬೇಡ ಎನ್ನಲಾಗುತ್ತದೆಯೇ?, ಅಪಘಾತಗಳು ಆಗುತ್ತಿವೆಂದು ರಸ್ತೆಗಿಳಿಯದಿರಲಾಗುತ್ತದೆಯೇ? ಇಲ್ಲಿ ಯಾರೂ ಪರಿಪೂರ್ಣರಲ್ಲ, ಎಲ್ಲರಲ್ಲಿಯೂ ದೌರ್ಬಲ್ಯಗಳಿವೆ.
ಎಲ್ಲರೂ ಮನುಷ್ಯರೇ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಆಲಿಸುವ ಆತುಕೊಳ್ಳುವ ಕೂಡು ಪಯಣವಿದು. ಪರಸ್ಪರ ಪ್ರೀತಿ, ಸಾಮಾಜಿಕ ಬೆಳವಣಿಗೆ, ಸೌಹಾರ್ದತೆ ಮದುವೆಯ ಸಂದೇಶ. ಹೊಂದಾಣಿಕೆಯೇ ಜೀವನ, ಒಬ್ಬರನ್ನೊಬ್ಬರು ಅರಿತುಕೊಳ್ಳುವ, ದೌರ್ಬಲ್ಯಗಳನ್ನು ಒಪ್ಪಿಕೊಳ್ಳು ವ, ಅವುಗಳನ್ನು ಹಾಗೆಯೇ ಸ್ವೀಕರಿಸುವ, ನಿರ್ಮಲವಾಗಿ ಪ್ರೀತಿಸುವ, ನಿರ್ವಂಚನೆಯಿಂದ ಅಪ್ಪಿ ಕೊಳ್ಳುವ ಅಂತಃಕರಣ ಸತಿಪತಿಗಳದ್ದಾದಾಗ ಆ ಭಕ್ತಿಯು ಭಗವಂತನಿಗೆ ಪ್ರಿಯ ಎನ್ನುತ್ತಾರೆ ಶರಣರು.
ಅಂತಹ ಪ್ರೀತಿಯಿಂದ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದಲ್ಲವೇ? ವಿಭಿನ್ನ ಕೌಟುಂಬಿಕ ಹಿನ್ನಲೆಯಿಂದ ಬಂದ ಗಂಡು-ಹೆಣ್ಣುಗಳಲ್ಲಿ ಒಂದೇ ಅಭಿರುಚಿ ಆಲೋಚನೆಗಳರುವುದಿಲ್ಲ. ಅದಕ್ಕೆ ಪೂರಕವಾಗಿ ಬದಲಾದ ಆರ್ಥಿಕ ಸಾಮಾಜಿಕ ನಿಯಮಗಳು, ತಂತ್ರಜ್ಞಾನದ ಅತಿಯಾದ ಅವಲಂಬನೆ, ಎಲ್ಲವೂ ನಮ್ಮ ಬೆರಳ ತುದಿಯಲ್ಲಿಯೇ!
ಬಯಸಿದಾಗ ಕೈಗೆಟುಕಬೇಕು ಎನ್ನುವ ಅಪಾರ ಅಪೇಕ್ಷೆಗಳು ಅಸ್ತವ್ಯಸ್ತವಾದ ದಿನಚರಿಗಳು ಸಾಂಪ್ರ ದಾಯಿಕ ಚೌಕಟ್ಟನ್ನು ಮೀರಿದ ವಿವಾಹೇತರ ಸಂಬಂಧಗಳು ವಿದ್ಯಾರ್ಥಿ ದಿಶೆಯಲ್ಲಿಯೇ living together, ಪಾಶ್ಚಾತ್ಯರ ಅನುಕರಣೆ, ಲೈಂಗಿಕ ಸ್ವಾತಂತ್ರ್ಯ, ಸ್ವೇಚ್ಛಾಚಾರಕ್ಕೆ ನಾಂದಿ ಹಾಡಿದ್ದರಿಂದ ದಾಂಪತ್ಯದ ಜೀವನದ ಸಮತೋಲನ ತಪ್ಪಿವೆ. ಜೀವನ ಸಪ್ತಸ್ವರಗಳ ಮೇಳವಾದಾಗ ಮಧುರ ಸಂಗೀತ ಹೊರಹೊಮ್ಮುತ್ತದೆ.
ಸಂಗೀತ ಕಚೇರಿ ಪ್ರಾರಂಭಕ್ಕೆಲ್ಲ ವಾದ್ಯಗಳ ಶ್ರುತಿ ಸರಿಮಾಡಿಕೊಂಡಂತೆ ನಾವು ಶ್ರುತಿಯಾಗಬೇಕು. ಸರ್ವರಲ್ಲಿಯೂ ಸಮತೂಕ ಸಾಧಿಸುವ ಜಾಣತನ ಎಲ್ಲವೂ ಸಮತೆಯಲ್ಲಿರಬೇಕು, ಎಲ್ಲದ್ದಕ್ಕೂ ಎರಡು ತಟಗಳು ಅವುಗಳ ಮಧ್ಯ ಸಮತೂಕದ ಜಾಣ್ಮೆಗಳಿರಬೇಕು, ಕೊನೆಯಪಕ್ಷ ಹಿರಿಯರ ಮಾತುಗಳನ್ನು ಕೇಳಿ ಹೊಂದಿಕೊಳ್ಳುವ ಸಹನಾಶೀಲ ಮನೋಭಾವಗಳಿರಬೇಕು. ಮದುವೆಯ ದಿವ್ಯತೆಗಾಗಿ ಭವ್ಯ ಭವಿಷ್ಯತ್ತಿಗಾಗಿ ಹೆಣ್ಣಾಗಲಿ ಗಂಡಾಗಲಿ “ತಾನು" ಇಲ್ಲವಾಗಬೇಕು.
ಮದುವೆ ದೈಹಿಕ ಆಕರ್ಷಣೆ ಮಾತ್ರವಲ್ಲ, ಭಾವನಾತ್ಮಕ ಸಂಬಂಧ ಪರಸ್ಪರ ಅವಲಂಬನೆ ಸಾಮಾ ಜಿಕ ಬೆಳವಣಿಗೆಗೆ ದಂಪತಿಗಳಾಗುವುದು, ನಾನು ಇಲ್ಲವಾದಲ್ಲಿ ‘ದಂ ಇಲ್ಲದ ಪತಿ’, ಪತಿ ಇಲ್ಲದ ಸತಿಯಿಂದ ದಾಂಪತ್ಯವಾಗದು. ಪರಸ್ಪರ ಒಲವಿನಿಂದ ವರಕವಿ ಬೇಂದ್ರೆಯವರ ನುಡಿಯಂತೆ ಒಲವೇ ನಮ್ಮ ಬದುಕು, ಬಳಸಿಕೊಂಡೆವು ಅದನ್ನು ಅದಕ್ಕೂ ಇದಕ್ಕೂ ಎಲ್ಲದಕ್ಕೂ. ಒಲವಿನ ಅವಲಂಬನೆ ತಪ್ಪುಗಳನ್ನು ನುಂಗಿಕೊಂಡ ಸುದೀರ್ಘ ಬಾಳು ಎಲ್ಲವನ್ನೂ ಮೀರಿದ ಒಲವಿನಿಂದ ದಾಂಪತ್ಯ ದೃಢವಾಗುತ್ತದೆ.
ಆ ಅರಿವು ನಮ್ಮದಾದಾಗ ಮದುವೆಯ ಪಾವಿತ್ರ್ಯತೆ ಸಾಧ್ಯವಾಗುತ್ತದೆ. ಆಗ ಮದುವೆಗಳು ಸೋಲು ವುದಿಲ್ಲ ನಮ್ಮ ಹಿರಿಯರಂತೆ ನಾವು ದಾಂಪತ್ಯದ ಬೆಳ್ಳಿಹಬ್ಬ, ಚಿನ್ನದಹಬ್ಬ, ವಜ್ರ ಮಹೋತ್ಸವ ಗಳನ್ನು ಆಚರಿಸಬಹುದು. ಬ್ರಹ್ಮಗಂಟಿನ ನಂಟಿನ ಆತ್ಮವಿಶ್ವಾಸಗಳು marriages are made in heaven ಎಂಬ ಮಾತು ಸತ್ಯವಾಗುತ್ತದೆ.
ಜೀವನ ಹೆದ್ದಾರಿಯಲ್ಲ, ಅನೇಕ ಅಡ್ಡರಸ್ತೆಗಳು ತಗ್ಗುದಿಣ್ಣೆಗಳಿಂದ ಕೂಡಿದ್ದು ಅದು ಹೇಗಿದೆಯೋ ಹಾಗೆ ಒಪ್ಪಿಕೊಂಡು ಬಾಳಪಥ ಮುನ್ನಡೆಸುತ್ತಾ ಸಮತೋಲನ ಸಾಧಿಸಿದಾಗ ಮದುವೆಗಳು ಮಧುರವಾಗುತ್ತವೆ. ಉದ್ದೇಶಿತ ಪಥ ಸಫಲತೆಗೆ ಬೇಕು “ಸಮತೋಲನ".