ಸಂಪಾದಕರ ಸದ್ಯಶೋಧನೆ
ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಪೈಲಟ್, “ಪ್ರಯಾಣಿಕರೇ, ನಾವೀಗ ಸಮುದ್ರ ಮಟ್ಟದಿಂದ ಮೂವತ್ತೈದು ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದೇವೆ" ಎಂದು ಹೇಳುವುದನ್ನು ಕೇಳಿರಬಹುದು. ಬಹುತೇಕ ವಾಣಿಜ್ಯ ವಿಮಾನಗಳು ಇದೇ ಎತ್ತರದಲ್ಲಿ ಹಾರುವುದನ್ನು ನೀವು ಗಮನಿಸಿರಬಹುದು.
ಇದು ಕೇವಲ ಕಾಕತಾಳೀಯ ಅಥವಾ ಪೈಲಟ್‌ಗಳಿಗಿಷ್ಟ ಬಂದ ಸಂಖ್ಯೆಯಲ್ಲ. ಈ ಎತ್ತರವನ್ನು ಆಯ್ಕೆ ಮಾಡಿಕೊಳ್ಳುವ ಹಿಂದೆ ದೊಡ್ಡ ಮಟ್ಟದ ಎಂಜಿನಿಯರಿಂಗ್ ತರ್ಕ, ಭೌತಶಾಸ್ತ್ರ, ಆರ್ಥಿಕ ಲಾಭ ಮತ್ತು ಪ್ರಯಾಣಿಕರ ಸುರಕ್ಷತೆಯ ಲೆಕ್ಕಾಚಾರಗಳಿವೆ. ವಿಮಾನಯಾನ ಪರಿಭಾಷೆಯಲ್ಲಿ ಈ ಎತ್ತರವನ್ನು ‘ಕ್ರೂಸಿಂಗ್ ಆಲ್ಟಿಟ್ಯೂಡ್’ ಎಂದು ಕರೆಯುತ್ತಾರೆ.
ವಿಮಾನವೊಂದು ನೆಲದ ಮೇಲೆ ಅಥವಾ ಕಡಿಮೆ ಎತ್ತರದಲ್ಲಿ ಹಾರುವುದಕ್ಕೂ, 35000 ಅಡಿ ಎತ್ತರದಲ್ಲಿ ಹಾರುವುದಕ್ಕೂ ಬಹಳ ವ್ಯತ್ಯಾಸವಿದೆ. ಭೂಮಿಯ ಮೇಲ್ಮೈಗೆ ಹತ್ತಿರವಿದ್ದಷ್ಟೂ ಗಾಳಿಯ ಸಾಂದ್ರತೆ ಹೆಚ್ಚಿರುತ್ತದೆ. ಸರಳವಾಗಿ ಹೇಳಬೇಕೆಂದರೆ, ಕೆಳಗಿನ ಗಾಳಿ ದಪ್ಪವಾಗಿರುತ್ತದೆ. ಇಂಥ ದಪ್ಪ ಗಾಳಿಯಲ್ಲಿ ವಿಮಾನ ಮುನ್ನುಗ್ಗಬೇಕಾದರೆ, ಅದು ಹೆಚ್ಚಿನ ‘ಡ್ರ್ಯಾಗ್’ ಅಥವಾ ವಾಯು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Vishweshwar Bhat Column: ನೊಬೆಲ್ ಸಾಹಿತಿ-ವಿಮರ್ಶಕ ನೆಲಕ್ಕುರುಳಿ ಹೊಡೆದಾಡಿಕೊಂಡರು !
ನೀರಿನಲ್ಲಿ ನಡೆಯುವುದು ಕಷ್ಟ, ಆದರೆ ಗಾಳಿಯಲ್ಲಿ ನಡೆಯುವುದು ಸುಲಭವಲ್ಲವೇ? ಅದೇ ತರ್ಕ ಇಲ್ಲೂ ಅನ್ವಯಿಸುತ್ತದೆ. ಆದರೆ, ಮೂವತ್ತೈದು ಸಾವಿರ ಅಡಿ ಎತ್ತರದಲ್ಲಿ ಗಾಳಿ ತುಂಬಾ ತೆಳು ವಾಗಿರುತ್ತದೆ. ಗಾಳಿ ತೆಳುವಾಗಿದ್ದಾಗ, ವಿಮಾನದ ಬಾಡಿಯ ಮೇಲೆ ಉಂಟಾಗುವ ಘರ್ಷಣೆ ಕಡಿಮೆ ಯಾಗುತ್ತದೆ.
ಇದರಿಂದ ವಿಮಾನವು ಕಡಿಮೆ ಶ್ರಮದಲ್ಲಿ ಸುಲಭವಾಗಿ ಮುನ್ನುಗ್ಗಬಲ್ಲದು. ವಿಮಾನಯಾನ ಸಂಸ್ಥೆಗಳಿಗೆ ಅತಿ ದೊಡ್ಡ ಖರ್ಚೆಂದರೆ ಅದು ಇಂಧನ. ವಿಮಾನವು ಕಡಿಮೆ ಎತ್ತರದಲ್ಲಿ ಹಾರಿದರೆ, ದಪ್ಪ ಗಾಳಿಯನ್ನು ಸೀಳಿಕೊಂಡು ಹೋಗಲು ಎಂಜಿನ್ ಹೆಚ್ಚು ಕೆಲಸ ಮಾಡಬೇಕು, ಆಗ ಹೆಚ್ಚು ಇಂಧನ ಖರ್ಚಾಗುತ್ತದೆ.
ಅದೇ ಎತ್ತರದಲ್ಲಿ ಹಾರಿದಾಗ, ಕಡಿಮೆ ಇಂಧನದಲ್ಲಿ ಹೆಚ್ಚು ವೇಗವಾಗಿ ಮತ್ತು ದೂರ ಕ್ರಮಿಸ ಬಹುದು. ಹಾಗೆಂದು ವಿಮಾನಗಳು ಬಾಹ್ಯಾಕಾಶಕ್ಕೆ ಹೋಗುವಷ್ಟು ಎತ್ತರಕ್ಕೆ ಹಾರಲಾಗುವುದಿಲ್ಲ! ಏಕೆಂದರೆ, ವಿಮಾನದ ರೆಕ್ಕೆಗಳು (Wings) ವಿಮಾನವನ್ನು ಮೇಲೆತ್ತಿ ಹಿಡಿಯಲು (Lift) ಸ್ವಲ್ಪ ಮಟ್ಟಿಗಿನ ಗಾಳಿಯ ಅಗತ್ಯವಿರುತ್ತದೆ. ಜತೆಗೆ ಎಂಜಿನ್‌ಗಳಲ್ಲಿ ಬೆಂಕಿ ಉರಿಯಲು ಆಮ್ಲಜನಕ ಬೇಕು. ಮೂವತ್ತೈದು ಸಾವಿರ ಅಡಿ ಎತ್ತರವು ಈ ಎರಡರ ನಡುವಿನ ‘ಸ್ವೀಟ್ ಸ್ಪಾಟ್’ ಆಗಿದೆ. ಇಲ್ಲಿ ಗಾಳಿ ತೀರಾ ದಪ್ಪವೂ ಅಲ್ಲ, ತೀರಾ ವಿರಳವೂ ಅಲ್ಲ.
ಭೂಮಿಯ ವಾತಾವರಣವನ್ನು ಹಲವು ಪದರಗಳಾಗಿ ವಿಂಗಡಿಸಲಾಗಿದೆ. ನಾವು ವಾಸಿಸುವ ಮತ್ತು ಮಳೆ, ಗಾಳಿ, ಮೋಡಗಳು ಉಂಟಾಗುವ ಪದರವನ್ನು ‘ಟ್ರೋಪೋಸ್ಪಿಯರ್’ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಭೂಮಿಯಿಂದ ಸುಮಾರು ಮೂವತ್ತಾರು ಸಾವಿರ ಅಡಿಗಳವರೆಗೆ ಇರುತ್ತದೆ (ಧ್ರುವ ಪ್ರದೇಶಗಳಲ್ಲಿ ಮತ್ತು ಸಮಭಾಜಕ ವೃತ್ತದಲ್ಲಿ ಇದು ಬದಲಾಗುತ್ತದೆ). ವಿಮಾನಗಳು ಮೂವತ್ತೈದು ಸಾವಿರ ಅಡಿ ಅಥವಾ ಅದಕ್ಕಿಂತ ಎತ್ತರಕ್ಕೆ ಏರಿದಾಗ, ಅವು ‘ಟ್ರೋಪೋಸ್ಪಿಯರ್‌ನ ಮೇಲ್ಭಾಗದಲ್ಲಿ ಅಥವಾ ‘ಸ್ಟ್ರಾಟೋಸ್ಪಿಯರ್’ನ ಆರಂಭಿಕ ಹಂತದಲ್ಲಿ ಹಾರುತ್ತವೆ.
ಇಲ್ಲಿ ಮೋಡಗಳಿರುವುದಿಲ್ಲ. ನೀವು ವಿಮಾನದ ಕಿಟಕಿ ಇಣುಕಿದಾಗ ಮೋಡಗಳು ನಿಮ್ಮ ಕೆಳಗೆ ಹಾಸಿಗೆಯಂತೆ ಕಾಣಲು ಇದೇ ಕಾರಣ. ಮಳೆ, ಬಿರುಗಾಳಿ ಮತ್ತು ಗಾಳಿಯ ಸುಳಿಗಳು ಕೆಳಮಟ್ಟದಲ್ಲಿ ಹೆಚ್ಚು. ಎತ್ತರದಲ್ಲಿ ಹಾರುವುದರಿಂದ ವಿಮಾನಗಳು ಈ ‘ಡ್ರಾಮಾ ಜೋನ್ ’ನಿಂದ ತಪ್ಪಿಸಿ ಕೊಳ್ಳುತ್ತವೆ.
ಇದರಿಂದ ಪ್ರಯಾಣಿಕರಿಗೆ ಯಾವುದೇ ಕುಲುಕಾಟವಿಲ್ಲದ ಹಾರಾಟದ ಅನುಭವ ಸಿಗುತ್ತದೆ. ಆಶ್ಚರ್ಯವೆನಿಸಬಹುದು, ಆದರೆ ಆಧುನಿಕ ಜೆಟ್ ಎಂಜಿನ್‌ಗಳು ವಿಪರೀತ ಚಳಿಯನ್ನು ಇಷ್ಟ ಪಡುತ್ತವೆ! ಮೂವತ್ತೈದು ಸಾವಿರ ಅಡಿ ಎತ್ತರದಲ್ಲಿ ಹೊರಗಿನ ತಾಪಮಾನ ಮೈನಸ್ ೪೦ರಿಂದ ಮೈನಸ್ ೫೫ ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.
ಜೆಟ್ ಎಂಜಿನ್‌ಗಳು ಕೆಲಸ ಮಾಡುವುದು ಉಷ್ಣತೆಯ ವ್ಯತ್ಯಾಸದ ಮೇಲೆ. ಹೊರಗಿನ ಗಾಳಿ ತಂಪಾಗಿದ್ದಷ್ಟು ಮತ್ತು ಎಂಜಿನ್ ಒಳಗಿನ ದಹನಕ್ರಿಯೆ ಬಿಸಿಯಾಗಿದ್ದಷ್ಟು, ಎಂಜಿನ್‌ನ ಕಾರ್ಯ ಕ್ಷಮತೆ ಹೆಚ್ಚುತ್ತದೆ. ಈ ಎತ್ತರದಲ್ಲಿ ಸಿಗುವ ತಂಪಾದ ಗಾಳಿಯು ಎಂಜಿನ್‌ಗಳು ಬಿಸಿಯಾಗದಂತೆ ನೋಡಿಕೊಳ್ಳಲು ಮತ್ತು ಇಂಧನವನ್ನು ಹೆಚ್ಚು ಪರಿಣಾಮಕಾರಿಯಾಗಿ ದಹಿಸಲು ಸಹಾಯ ಮಾಡುತ್ತದೆ.