ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ನೊಬೆಲ್‌ ಸಾಹಿತಿ-ವಿಮರ್ಶಕ ನೆಲಕ್ಕುರುಳಿ ಹೊಡೆದಾಡಿಕೊಂಡರು !

ನೊಬೆಲ್ ಪುರಸ್ಕೃತರು ಸಹ ಮನುಷ್ಯರೇ ಅಲ್ಲವಾ, ಹೊಡೆದಾಟ ಮನುಷ್ಯ ಸಹಜ ಗುಣ ಅಲ್ಲವಾ ಎಂದು ಭಾವಿಸಿ, ಆ ಘಟನೆಯನ್ನು ಅರಗಿಸಿಕೊಳ್ಳಬಹುದಷ್ಟೇ. ಸಾಹಿತ್ಯ ಲೋಕದಲ್ಲಿ ಲೇಖಕರು ಸಾಮಾನ್ಯವಾಗಿ ತಮ್ಮ ಲೇಖನಿಗಳ ಮೂಲಕ ಕಾದಾಡುವುದನ್ನು ನೋಡಿದ್ದೇವೆ. ಪದಗಳೇ ಅವರ ಅಸ್ತ್ರ ಮತ್ತು ವಿಮರ್ಶೆಯೇ ಅವರ ರಕ್ಷಾಕವಚ.

ನೊಬೆಲ್‌ ಸಾಹಿತಿ-ವಿಮರ್ಶಕ ನೆಲಕ್ಕುರುಳಿ ಹೊಡೆದಾಡಿಕೊಂಡರು !

-

ನೂರೆಂಟು ವಿಶ್ವ

ಕಳೆದ ವಾರ ಇಬ್ಬರು ನೊಬೆಲ್ ಪ್ರಶಸ್ತಿ ಸಾಹಿತಿಗಳಾದ, ಲ್ಯಾಟಿನ್ ಅಮೆರಿಕದ ಖ್ಯಾತ ಲೇಖಕ, ಕಾದಂಬರಿಕಾರ, ನೊಬೆಲ್ ಪ್ರಶಸ್ತಿ ಪುರಸ್ಕೃತ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಮತ್ತು ಪೆರು ದೇಶದ ಖ್ಯಾತ ಕಾದಂಬರಿಕಾರ, ಚಿಂತಕ, ಸಾಹಿತಿ, ಪತ್ರಕರ್ತ ಮತ್ತು ರಾಜಕಾರಣಿ ಮಾರಿಯೋ ವರ್ಗಸ್ ಸ ಹೊಡೆದಾಡಿಕೊಂಡ ಪ್ರಸಂಗದ ಬಗ್ಗೆ ಬರೆದಿದ್ದೆ.

ಜಗತ್ತಿನ ಅತ್ಯುತ್ಕೃಷ್ಟ ಪ್ರಶಸ್ತಿ ಎಂದೇ ಮನೆಮಾತಾದ ನೊಬೆಲ್ ಪುರಸ್ಕೃತ ಸಾಹಿತಿಗಳು ಸಾಮಾನ್ಯ ಜನರಂತೆ ಹೊಡೆದಾಡಿಕೊಳ್ಳುತ್ತಾರಾ ಎಂದು ಆಶ್ಚರ್ಯ ವ್ಯಕ್ತಪಡಿಸಿ ಅನೇಕರು ಪ್ರತಿಕ್ರಿಯಿಸಿದ್ದರು. ತಮಾಷೆ ಅಂದ್ರೆ ಅವರು ಹೊಡೆದಾಡಿಕೊಳ್ಳುವಾಗ ಅವರಿಬ್ಬರಿಗೂ ನೊಬೆಲ್ ಪ್ರಶಸ್ತಿ ಬಂದಿರಲಿಲ್ಲ. ಆ ಪ್ರಸಂಗದ ನಂತರವೇ ಅವರಿಗೆ ಅದು ಬಂದಿದ್ದು. ಆದರೂ ಅಷ್ಟು ಉನ್ನತ ವ್ಯಕ್ತಿಗಳು ಆ ರೀತಿ ವರ್ತಿಸುತ್ತಾರಾ ಎಂಬುದನ್ನು ಊಹಿಸಿಕೊಳ್ಳಲು ಅಸಾಧ್ಯ.

ನೊಬೆಲ್ ಪುರಸ್ಕೃತರು ಸಹ ಮನುಷ್ಯರೇ ಅಲ್ಲವಾ, ಹೊಡೆದಾಟ ಮನುಷ್ಯ ಸಹಜ ಗುಣ ಅಲ್ಲವಾ ಎಂದು ಭಾವಿಸಿ, ಆ ಘಟನೆಯನ್ನು ಅರಗಿಸಿಕೊಳ್ಳಬಹುದಷ್ಟೇ. ಸಾಹಿತ್ಯ ಲೋಕದಲ್ಲಿ ಲೇಖಕರು ಸಾಮಾನ್ಯವಾಗಿ ತಮ್ಮ ಲೇಖನಿಗಳ ಮೂಲಕ ಕಾದಾಡುವುದನ್ನು ನೋಡಿದ್ದೇವೆ. ಪದಗಳೇ ಅವರ ಅಸ್ತ್ರ ಮತ್ತು ವಿಮರ್ಶೆಯೇ ಅವರ ರಕ್ಷಾಕವಚ.

ಸಾಹಿತಿಗಳು ಪದಗಳಲ್ಲಿ ಸಮರಕ್ಕಿಳಿದರೆ, ಓದಲು ಬಹಳ ಸ್ವಾರಸ್ಯವಾಗಿರುತ್ತದೆ. ಅದು ಸಹಜವಾಗಿ ಓದುಗರಲ್ಲಿ ಕುತೂಹಲವನ್ನು ಕೆರಳಿಸುತ್ತದೆ. ಆದರೆ ಸಾಹಿತಿ, ಅಂಗಿ ತೋಳುಗಳನ್ನು ಮಡಚಿ ಹೊಡೆದಾಟಕ್ಕೆ ಇಳಿದರೆ, ಅದು ಅವರ ಅಭಿಮಾನಿಗಳಲ್ಲೂ ಅಸಹ್ಯ ಹುಟ್ಟಿಸುತ್ತದೆ.

ಇದನ್ನೂ ಓದಿ: Vishweshwar Bhat Column: ನೊಬೆಲ್‌ ಪುರಸ್ಕೃತ ಸಾಹಿತಿಗಳಿಬ್ಬರು ಹೊಡೆದಾಡಿಕೊಂಡ ಪ್ರಸಂಗ !

ಅಮೆರಿಕದ ಖ್ಯಾತ ಕಾದಂಬರಿಕಾರ, ಸಣ್ಣ ಕಥೆಗಾರ ಮತ್ತು ಪತ್ರಕರ್ತ ಅರ್ನೆಸ್ಟ್ ಹೆಮಿಂಗ್ವೇ ಹೆಸರನ್ನು ಕೇಳದವರು ಅಪರೂಪ. ಅವರು ಬರೆದಿದ್ದು ಏಳು ಕಾದಂಬರಿಗಳು, ಆರು ಸಣ್ಣ-ಕಥಾ ಸಂಕಲನಗಳು ಮತ್ತು ಎರಡು ನಾನ್-ಫಿಕ್ಷನ್ ಕೃತಿಗಳು. ಇವೆಲ್ಲವೂ ‘ಅಮೆರಿಕನ್ ಸಾಹಿತ್ಯದ ಶ್ರೇಷ್ಠ ಕೃತಿಗಳು’ ಎಂದು ಕರೆಯಿಸಿಕೊಂಡಿವೆ. ಹೆಮಿಂಗ್ವೇ ಅವರಿಗೆ 1954ರಲ್ಲಿ ಸಾಹಿತ್ಯ ಪ್ರಕಾರಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಯಿತು. ಅವರು ತಮ್ಮ ಬರವಣಿಗೆ ಧಾಟಿಯಿಂದಲೇ ( Hemingway writing way ) ಪ್ರಸಿದ್ಧರಾದವರು.

ಅವರು ಸಾಹಿತಿಯಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಬದಲಿಗೆ ಅವರು ತಾನೊಬ್ಬ ಮಹಾನ್ ಸಾಹಸಿ, ಗಟ್ಟಿಗ ಮತ್ತು ಪುರುಷತ್ವ ಪ್ರದರ್ಶಕ ( Macho man ) ಎಂದು ತೋರಿಸಿಕೊಳ್ಳಲು ಬಯಸುತ್ತಿದ್ದ ವ್ಯಕ್ತಿಯಾಗಿದ್ದರು. ತಮ್ಮ ಬರಹವನ್ನು ಟೀಕಿಸುವರಿಗೆ ಅವರು ತಪರಾಕಿಗೆ ಹೊಡೆಯದೇ ಬಿಡುತ್ತಿರಲಿಲ್ಲ.

1933ರಲ್ಲಿ ಹೆಮಿಂಗ್ವೇ ಅವರು ‘ಡೆತ್ ಇನ್ ದಿ ಆಫರ್ ನೂನ್’ ಎಂಬ ಪುಸ್ತಕವನ್ನು ಬರೆದಿದ್ದರು. ಇದು ಒಂದು ಶ್ರೇಷ್ಠ ಕಲ್ಪನೇತರ ( non-fiction ) ಪುಸ್ತಕ. ಇದು ಬುಲ್ ಫೈಟಿಂಗ್ (ಗೂಳಿ ಕಾಳಗ) ಕುರಿತಾದ ಕೃತಿ. ಈ ಕೃತಿಯು ಮುಖ್ಯವಾಗಿ ಸ್ಪೇನ್ ದೇಶದ ಸಾಂಪ್ರದಾಯಿಕ ಗೂಳಿ ಕಾಳಗದ ಕುರಿತಾಗಿದ್ದು. ಹೆಮಿಂಗ್ವೇ ಇದನ್ನು ಕೇವಲ ಒಂದು ಕ್ರೀಡೆಯಾಗಿ ನೋಡದೇ, ಅದೊಂದು ಕಲೆ ಮತ್ತು ಆಚರಣೆಯಾಗಿ ಪರಿಗಣಿಸಿದ್ಧರು.

Scientists

ಗೂಳಿ ಕಾಳಗದ ಇತಿಹಾಸ, ನಿಯಮಗಳು ಮತ್ತು ತಾಂತ್ರಿಕತೆಗಳನ್ನು ಅವರು ಇದರಲ್ಲಿ ಆಳವಾಗಿ ವಿವರಿಸಿದ್ದರು. ಹೆಸರೇ ಸೂಚಿಸುವಂತೆ, ಈ ಪುಸ್ತಕವು ‘ಸಾವು’ ಮತ್ತು ಮನುಷ್ಯನ ‘ಧೈರ್ಯ’ದ ಕುರಿತು ಚರ್ಚಿಸುತ್ತದೆ. ಗೂಳಿ ಕಾಳಗದಲ್ಲಿ ಕಣ್ಣ ಎದುರೇ ಕಾಣುವ ಸಾವಿನ ಭಯವನ್ನು ಮೆಟ್ಟಿ ನಿಲ್ಲುವ ಪರಿಯನ್ನು ಹೆಮಿಂಗ್ವೇ ವಿಶ್ಲೇಷಿಸಿದ್ದಾರೆ.

ಬದುಕಿನ ಅನಿವಾರ್ಯ ಸತ್ಯವಾದ ಸಾವನ್ನು ಧೈರ್ಯದಿಂದ ಎದುರಿಸುವುದೇ ನಿಜವಾದ ಪೌರುಷ ಎಂಬ ತತ್ವವನ್ನು ಇದು ಪ್ರತಿಪಾದಿಸುತ್ತದೆ. ಹೆಮಿಂಗ್ವೇ ಅವರ ಪ್ರಕಾರ, ಗೂಳಿ ಕಾಳಗ ಒಂದು ಸ್ಪರ್ಧೆಯಲ್ಲ, ಬದಲಾಗಿ ಅದೊಂದು ದುರಂತ ನಾಟಕ (ಟ್ರಾಜಿಡಿ). ಇದರಲ್ಲಿ ಗೂಳಿಯ ಸಾವು ಖಚಿತವಾಗಿರುತ್ತದೆ, ಆದರೆ ಆ ಸಾವನ್ನು ಎಷ್ಟು ಕಲಾತ್ಮಕವಾಗಿ ಮತ್ತು ಗೌರವಯುತವಾಗಿ ನಿರ್ವಹಿಸಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದು ಅವರು ವಾದಿಸಿದ್ದಾರೆ.

ಈ ಪುಸ್ತಕವು ಕೇವಲ ಗೂಳಿ ಕಾಳಗದ ಬಗ್ಗೆ ಮಾತ್ರವಲ್ಲದೇ, ಸ್ಪೇನ್ ಸಂಸ್ಕೃತಿ, ಅಲ್ಲಿನ ಜನರ ಮನಸ್ಥಿತಿ ಮತ್ತು ಜೀವನಶೈಲಿಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ‘ಡೆತ್ ಇನ್ ದಿ ಆಫ್ಟರ್‌ನೂನ್’ ಸಾವಿನ ಅಂಚಿನಲ್ಲಿ ನಿಂತು ಬದುಕನ್ನು ನೋಡುವ, ಭಯ ಮತ್ತು ಧೈರ್ಯದ ನಡುವಿನ ಸಂಘರ್ಷ ವನ್ನು ವಿವರಿಸುವ ಒಂದು ಕಲಾತ್ಮಕ ಕೃತಿಯಾಗಿದೆ.

ಇದನ್ನು ವಿಮರ್ಶಿಸುತ್ತಾ ಅಮೆರಿಕದ ಖ್ಯಾತ ವಿಮರ್ಶಕ ಮ್ಯಾಕ್ಸ್ ಈಸ್ಟ್‌ಮ್ಯಾನ್, ‘ಬುಲ್ ಇನ್ ದಿ ಆಫ್ಟರ್‌ನೂನ್’ ಎಂಬ ಶೀರ್ಷಿಕೆಯಡಿ ಪ್ರಬಂಧವೊಂದನ್ನು ಬರೆದರು. ಅದರಲ್ಲಿ ಅವರು ಹೆಮಿಂಗ್ವೇ ಬರವಣಿಗೆಯ ಶೈಲಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದರು. ಹೆಮಿಂಗ್ವೇ ಬರವಣಿಗೆಯಲ್ಲಿನ ಪೌರುಷ ಮತ್ತು ಗಡಸುತನ ನೈಜವಾದುದಲ್ಲ, ಬದಲಾಗಿ ಅದು ಕೃತಕವಾದದ್ದು ಎಂದು ಲೇವಡಿ ಮಾಡಿದ್ದರು.

ಹೆಮಿಂಗ್ವೇ ತಮ್ಮ ಸಾಹಿತ್ಯಕ ಶೈಲಿಯಲ್ಲಿ ಅತಿಯಾದ ಮತ್ತು ನಾಟಕೀಯ ಪೌರುಷವನ್ನು (literary style of wearing false hair on the chest) ಪ್ರದರ್ಶಿಸುತ್ತಾರೆ ಎಂದು ಅವರು ಟೀಕಿಸಿದ್ದರು. ಹೆಮಿಂಗ್ವೇ ಅವರಿಗೆ ತಮ್ಮ ಪೌರುಷದ ಬಗ್ಗೆ ಆಳವಾದ ಅಭದ್ರತೆ ಇದೆ, ಹೀಗಾಗಿಯೇ ಅವರು ಪದೇ ಪದೆ ರಕ್ತಸಿಕ್ತ ಕ್ರೀಡೆಗಳು ಮತ್ತು ಹಿಂಸೆಯನ್ನು ವೈಭವೀಕರಿಸುವ ಮೂಲಕ ತಮ್ಮನ್ನು ತಾವು ಗಟ್ಟಿ ಮನುಷ್ಯ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ ಎಂದು ಈಸ್ಟ್‌ಮ್ಯಾನ್ ಟೀಕಿಸಿದ್ದರು. ಹೆಮಿಂಗ್ವೇ ಗೂಳಿ ಕಾಳಗವನ್ನು ಒಂದು ‘ದುರಂತ ಕಲೆ’ ಎಂದು ಕರೆದರೆ, ಈಸ್ಟ್ ಮ್ಯಾನ್ ಅದನ್ನು ಕೇವಲ ಪ್ರಾಣಿ ಹಿಂಸೆ ಮತ್ತು ಕ್ರೂರ ಹತ್ಯೆ ಎಂದು ಕರೆದಿದ್ದರು. ಹೆಮಿಂಗ್ವೇ ಈ ಕ್ರೂರತೆಯನ್ನು ರೋಮ್ಯಾಂಟಿಕ್ ಆಗಿ ವೈಭವೀಕರಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದರು.

ಈಸ್ಟ್‌ಮ್ಯಾನ್ ಆ ಪ್ರಬಂಧದಲ್ಲಿ ಒಂದು ಸಾಲು ಬರೆದಿದ್ದರು - "Come out from behind that false hair on your chest, Ernest. We all know you.' (ಅರ್ನೆಸ್ಟ್ , ನಿನ್ನ ಎದೆಯ ಮೇಲಿರುವ ಆ ‘ನಕಲಿ ಕೂದಲಿನ’ ಮಬ್ಬಿನಿಂದ ಹೊರಗೆ ಬಾ. ನೀನ್ಯಾರೆಂದು ನಮಗೆಲ್ಲರಿಗೂ ತಿಳಿದಿದೆ.) ಇದು ಹೆಮಿಂಗ್ವೇ ಅವರನ್ನು ಅತೀವವಾಗಿ ಕೆರಳಿಸಿಬಿಟ್ಟಿತ್ತು. ಇಲ್ಲಿ ‘ಎದೆಯ ಮೇಲಿನ ಕೂದಲು’ ಎಂಬುದು ಪೌರುಷದ ಸಂಕೇತವಾಗಿತ್ತು.

ಈಸ್ಟ್ ಮ್ಯಾನ್ ಪ್ರಕಾರ, ಹೆಮಿಂಗ್ವೇ ಅವರ ಪೌರುಷವು ನಕಲಿಯಾಗಿತ್ತು ಮತ್ತು ಅವರ ಬರವಣಿಗೆ ಯಲ್ಲಿನ ಗಟ್ಟಿತನವು ಕೇವಲ ತೋರಿಕೆಯzಗಿತ್ತು. ತನ್ನ ಪೌರುಷದ ಬಗ್ಗೆ ಅತ್ಯಂತ ಸೂಕ್ಷ್ಮ ವಾಗಿದ್ದ ಹೆಮಿಂಗ್ವೇಗೆ ಈ ಮಾತನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವರು ಇದನ್ನು ಸಾಹಿತ್ಯಿಕ ಟೀಕೆಯಾಗಿ ನೋಡದೇ, ವೈಯಕ್ತಿಕ ಅವಮಾನವಾಗಿ ಸ್ವೀಕರಿಸಿದ್ದರು.

ಇದಾಗಿ ನಾಲ್ಕು ವರ್ಷಗಳ ನಂತರ, ಅಂದರೆ 1937ರ ಆಗಸ್ಟ್ ತಿಂಗಳಿನ ಒಂದು ದಿನ, ನ್ಯೂಯಾರ್ಕ್‌ ನ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾದ ‘ಸ್ಕ್ರಿಬ್ನರ್ಸ್’ ಕಚೇರಿಯಲ್ಲಿ ಹೆಮಿಂಗ್ವೇ - ಈಸ್ಟ್‌ಮ್ಯಾನ್ ಅನಿರೀಕ್ಷಿತವಾಗಿ ಮುಖಾಮುಖಿಯಾದರು. ಅಲ್ಲಿ ಪ್ರಸಿದ್ಧ ಸಂಪಾದಕ ಮ್ಯಾಕ್ಸ್‌ವೆಲ್ ಪರ್ಕಿನ್ಸ್ ಅವರ ಆಫೀಸಿನಲ್ಲಿ ಈಸ್ಟ್‌ಮ್ಯಾನ್ ಕುಳಿತಿದ್ದರು. ಆಗ ಒಳಬಂದ ಹೆಮಿಂಗ್ವೇ, ಈಸ್ಟ್‌ಮ್ಯಾನ್ ಅವರನ್ನು ನೋಡಿದ ಕೂಡಲೇ ಏಕಾಏಕಿ ಕೋಪಗೊಂಡರು.

ಹೆಮಿಂಗ್ವೇ ನೇರವಾಗಿ ಈಸ್ಟ್‌ಮ್ಯಾನ್ ಬಳಿ ಹೋಗಿ, ‘ನೀನು ಬರೆದ ಆ ಪ್ರಬಂಧದಲ್ಲಿ ನನ್ನ ಎದೆಗೂದಲು ನಕಲಿ ಎಂದು ಹೇಳಿದ್ದೀಯಾ?’ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ಅದಕ್ಕೆ ಈಸ್ಟ್‌ಮ್ಯಾನ್ ನಗುತ್ತಾ, ‘ಅದು ಕೇವಲ ರೂಪಕವಾಗಿ (Metaphor) ಬಳಸಿದ ಪದಗಳು, ಅಕ್ಷರಶಃ ಸ್ವೀಕರಿಸಬೇಕಿಲ್ಲ’ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದರೆ ಹೆಮಿಂಗ್ವೇ ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

ತನ್ನ ಪೌರುಷವನ್ನು ಸಾಬೀತುಪಡಿಸಲು ಹೆಮಿಂಗ್ವೇ, ಸಂಪಾದಕ ಪರ್ಕಿನ್ಸ್ ಎದುರೇ ತಮ್ಮ ಶರ್ಟ್ ಬಟನ್‌ಗಳನ್ನು ಪರಪರಾ ಎಂದು ಕಿತ್ತುಹಾಕಿ ಎದೆಯನ್ನು ತೆರೆದು ತೋರಿಸಿದರು! ಅವರ ಎದೆ ತುಂಬ ಕೂದಲಿತ್ತು. ‘ನೋಡು! ಇದೇನು ನಕಲಿಯೇ?’ ಎಂದು ಹೆಮಿಂಗ್ವೇ ಘರ್ಜಿಸಿದರು. ಅಷ್ಟಕ್ಕೆ ಸುಮ್ಮನಾಗದ ಹೆಮಿಂಗ್ವೇ, ಈಸ್ಟ್‌ಮ್ಯಾನ್ ಕಡೆ ತಿರುಗಿ, ‘ಈಗ ನಿನ್ನ ಎದೆಯನ್ನು ತೋರಿಸು, ನಿನ್ನ ಬಳಿ ಏನಿದೆ ನೋಡೋಣ’ ಎಂದು ಸವಾಲು ಹಾಕಿದರು.

ಇದರಿಂದ ತೀವ್ರ ಅವಮಾನಿತರಾದ ಈಸ್ಟ್‌ಮ್ಯಾನ್ ಅನಿವಾರ್ಯವಾಗಿ ತಮ್ಮ ಶರ್ಟ್ ತೆರೆದು ತೋರಿಸಲೇಬೇಕಾಯಿತು. ಅವರ ಎದೆಯ ಮೇಲೆ ಕೂದಲು ಇರಲಿಲ್ಲ. ಅದು ನಯವಾಗಿತ್ತು. ಹೆಮಿಂಗ್ವೇ ವ್ಯಂಗ್ಯವಾಗಿ ನಗುತ್ತಾ, ‘ನೋಡಿದ್ಯಾ? ನಿನಗೆ ಎದೆಗೂದಲೇ ಇಲ್ಲ, ನೀನೂ ಒಬ್ಬ ಗಂಡಸಾ? ಅದಕ್ಕೆ ನಿನಗೆ ನನ್ನ ಬಗ್ಗೆ ಹೊಟ್ಟೆಕಿಚ್ಚು’ ಎಂದು ಗಹಗಹಿಸಿ ನಕ್ಕು ಲೇವಡಿ ಮಾಡಿದರು.

ಅವರಿಬ್ಬರ ಮಾತಿನ ಚಕಮಕಿ ಅಷ್ಟಕ್ಕೇ ನಿಲ್ಲಲಿಲ್ಲ. ಮೇಜಿನ ಮೇಲೆ ಈಸ್ಟ್‌ಮ್ಯಾನ್ ಬರೆದಿದ್ದ ‘ಆರ್ಟ್ ಆಫ್ ಎಂಜಾಯ್ಮೆಂಟ್ ಆಫ್ ಲಿವಿಂಗ್’ ಎಂಬ ಪುಸ್ತಕವಿತ್ತು. ಹೆಮಿಂಗ್ವೇ ಆ ಪುಸ್ತಕವನ್ನು ಕೈಗೆತ್ತಿಕೊಂಡು, ‘ನನ್ನ ಬಗ್ಗೆ ಏನೇನೋ ಬರೀತೀಯಾ? ನಿನಗೆ ನನ್ನ ಕೃತಿ ವಿಮರ್ಶೆ ಮಾಡುವ ಯೋಗ್ಯತೆ ಇದೆಯಾ?’ ಎಂದು ಹೇಳುತ್ತಾ ಆ ಪುಸ್ತಕದಿಂದಲೇ ಈಸ್ಟ್‌ಮ್ಯಾನ್ ಅವರ ಮುಖಕ್ಕೆ ಬಲವಾಗಿ ಹೊಡೆದರು! ಇದು ಈಸ್ಟ್‌ಮ್ಯಾನ್ ಅವರನ್ನು ಕೆರಳಿಸಿತು. ‌

ಅವರು ಹೆಮಿಂಗ್ವೇ ಮೇಲೆ ಕೈಯೆತ್ತಿದರು. ಆಗ ಇಬ್ಬರ ನಡುವೆ ದೈಹಿಕ ಕಾಳಗ ಪ್ರಾರಂಭವಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಹಿಡಿದುಕೊಂಡು ನೆಲಕ್ಕೆ ಉರುಳಿದರು. ಸಂಪಾದಕ ಪರ್ಕಿನ್ಸ್ ಗಾಬರಿ ಯಿಂದ ಇಬ್ಬರನ್ನೂ ಬಿಡಿಸಲು ಪ್ರಯತ್ನಿಸಿದರು. ಅಷ್ಟೊತ್ತಿಗೆ ಆಫೀಸಿನಲ್ಲಿದ್ದ ವಸ್ತುಗಳೆಲ್ಲ ಚೆಪಿಲ್ಲಿಯಾದವು.

ಒಟ್ಟಾರೆ ಈ ಹೊಡೆದಾಟ ಹೇಗಿತ್ತು ಅಂದ್ರೆ, ನಂತರ ಇಬ್ಬರೂ ಗೆದ್ದಿದ್ದು ತಾವೇ ಎಂದು ಬೀಗಿ ಹೇಳಿಕೊಂಡರು. ‘ನಾನು ಈಸ್ಟ್‌ಮ್ಯಾನ್‌ನನ್ನು ಚೆನ್ನಾಗಿ ಥಳಿಸಿದೆ ಮತ್ತು ಆತನನ್ನು ಎತ್ತಿ ನೆಲಕ್ಕೆ ಬಡಿದೆ’ ಎಂದು ಹೆಮಿಂಗ್ವೇ ಪತ್ರಿಕೆಗಳಿಗೆ ಹೇಳಿದರು. ‘ಹೆಮಿಂಗ್ವೇ ನನ್ನ ಮೇಲೆ ಪುಸ್ತಕದಿಂದ ಹಲ್ಲೆ ನಡೆಸಿದಾಗ, ನಾನು ಅವನ ಕತ್ತಿನ ಪಟ್ಟಿ ಹಿಡಿದು ಕುಸ್ತಿ ಪಟುವಿನಂತೆ ನೆಲಕ್ಕೆ ಕೆಡವಿ, ಅವನ ಬೆನ್ನನ್ನು ನೆಲಕ್ಕೆ ತಾಗಿಸಿದೆ’ ಎಂದು ಈಸ್ಟ್‌ಮ್ಯಾನ್ ಹೇಳಿದರು.

ವಾಸ್ತವದಲ್ಲಿ, ಈಸ್ಟ್ ಮ್ಯಾನ್ ನೋಡಲು ಶಾಂತ ಸ್ವಭಾವದವರಂತೆ ಕಂಡರೂ, ಅವರಿಗೆ ಕುಸ್ತಿಯ ಕಲೆ ಗೊತ್ತಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈಸ್ಟ್‌ಮ್ಯಾನ್ ನಿಜವಾಗಿಯೂ ಹೆಮಿಂಗ್ವೇ ಅವರನ್ನು ನೆಲಕ್ಕೆ ಕೆಡವಿದ್ದರು. ಆದರೆ ಹೆಮಿಂಗ್ವೇ, ತನ್ನ ಸೋಲನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಈ ಘಟನೆ ಸಾಹಿತ್ಯ ವಲಯದಲ್ಲಿ ದೊಡ್ಡ ಸುದ್ದಿಯಾಯಿತು. ‘ಪ್ರಪಂಚದ ಶ್ರೇಷ್ಠ ಬರಹಗಾರರು ಶಾಲಾ ಮಕ್ಕಳಂತೆ, ಪುಡಿ ರೌಡಿಗಳಂತೆ ಜಗಳವಾಡಿದರು’ ಎಂದು ಪತ್ರಿಕೆಗಳು ವರದಿ ಮಾಡಿದವು. ಲೇಖಕ ಮತ್ತು ವಿಮರ್ಶಕ ಹೇಗಿರಬಾರದು ಎಂಬುದಕ್ಕೆ ಅವರಿಬ್ಬರೂ ಉತ್ತಮ ಉದಾಹರಣೆ ಎಂದು ಪತ್ರಿಕೆಗಳು ಸಂಪಾದಕೀಯವನ್ನು ಬರೆದವು.

‘ಸಾಹಿತ್ಯದಲ್ಲಿ ಮಣ್ಣಿನ ಗುಣ ಇರಬೇಕು, ನಿಜ. ಆದರೆ ಲೇಖಕ-ವಿಮರ್ಶಕರು ಮಣ್ಣಿನಲ್ಲಿ ಬಿದ್ದು ಹೊರಳಾಡಬಾರದು’ ಎಂದೂ ಲೇವಡಿ ಮಾಡಿದವು. ‘ವಿಮರ್ಶೆಗೆ ಉತ್ತರ ಕೊಡಲು ಹೆಮಿಂಗ್ವೇ ತಮ್ಮ ‘ಪೆನ್’ ಬಳಸಲಿಲ್ಲ, ಬದಲಾಗಿ ತಮ್ಮ ಪುಸ್ತಕವನ್ನೇ ‘ಇಟ್ಟಿಗೆ’ಯಂತೆ ಬಳಸಿದರು’ ಎಂದು ಒಂದು ಪತ್ರಿಕೆ ಬರೆದಿತ್ತು.

‘ಇವರಿಬ್ಬರ ಜಗಳ ನೋಡಿದ್ರೆ, ಸಾಹಿತಿಗಳಿಗೆ ಇರಬೇಕಾದ್ದು ‘ಒಳ್ಳೆಯ ಅಕ್ಷರ’ ಅಲ್ಲ, ‘ಒರಟಾದ ಎದೆಗೂದಲು’ ಅನಿಸುತ್ತದೆ’ ಎಂದು ಪತ್ರಕರ್ತರು ಕಿಚಾಯಿಸಿದ್ದರು. ಈ ಪ್ರಸಂಗವು ಹೆಮಿಂಗ್ವೇ ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದೆ. ಅವರ ಬರಹಗಳಲ್ಲಿ ಕಂಡುಬರುವ ಧೈರ್ಯ ಮತ್ತು ಸಾಹಸದ ಹಿಂದೆ, ತನ್ನ ವ್ಯಕ್ತಿತ್ವದ ಬಗ್ಗೆ ಅಪಾರವಾದ ಅಭದ್ರತೆ ಅಡಗಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

‘ನಕಲಿ ಕೂದಲು’ ಎಂಬ ಒಂದೇ ಒಂದು ಪದದ ಟೀಕೆಯು ಅವರ ಅಹಂಕಾರಕ್ಕೆ ಎಷ್ಟು ದೊಡ್ಡ ಪೆಟ್ಟು ನೀಡಿತ್ತೆಂದರೆ, ಅವರು ತಮ್ಮ ಘನತೆಯನ್ನು ಮರೆತು ಬೀದಿ ಕಾಳಗಕ್ಕೆ ಇಳಿದಿದ್ದರು. ಈ ಘಟನೆಯ ನಂತರ, ‘ಹೆಮಿಂಗ್ವೇ ಅವರ ಎದೆಯ ಮೇಲಿನ ಕೂದಲು ಅಸಲಿಯಾಗಿದ್ದಿರಬಹುದು, ಆದರೆ ಅವರ ಅತಿಯಾದ ಪೌರುಷ ಪ್ರದರ್ಶನವು ಒಂದು ಮುಖವಾಡದಂತಿತ್ತು’ ಎಂದು ಈಸ್ಟ್‌ ಮ್ಯಾನ್ ಹೇಳಿದ್ದು ಸಹ ಹೆಮಿಂಗ್ವೇ ಅವರನ್ನು ಕೆರಳಿಸಿತ್ತು.

ಈ ಅಸಹ್ಯಕರ ಘಟನೆ ನಡೆದ ಹದಿನೇಳು ವರ್ಷಗಳ ಬಳಿಕ ಹೆಮಿಂಗ್ವೇ ಅವರಿಗೆ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಬಂದಿತು. ಆದರೆ ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ. ಪ್ರಶಸ್ತಿ ಘೋಷಣೆಯಾಗುವ ಕೆಲವೇ ತಿಂಗಳುಗಳ ಮೊದಲು, ಹೆಮಿಂಗ್ವೇ ಆಫ್ರಿಕಾದ ಉಗಾಂಡದಲ್ಲಿ ಸಫಾರಿಗೆ ಹೋಗಿದ್ದಾಗ ಸತತ ಎರಡು ದಿನಗಳಲ್ಲಿ ಎರಡು ಭೀಕರ ವಿಮಾನ ಅಪಘಾತ ಗಳಿಗೆ ಒಳಗಾಗಿ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದರು. ಈ ಅಪಘಾತಗಳಲ್ಲಿ ಹೆಮಿಂಗ್ವೇ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.

ಭುಜದ ಮೂಳೆ ಮುರಿದಿತ್ತು. ದೇಹದೆಡೆ ಅವರು ತೀವ್ರವಾದ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ‘ಹೆಮಿಂಗ್ವೇ ನಿಧನ’ ಎಂದೇ ಪತ್ರಿಕೆಗಳು ಸುದ್ದಿಯನ್ನೂ ಪ್ರಕಟಿಸಿದ್ದವು. ‘ನಾನು ಪುರುಷತ್ವ ಪ್ರದ ರ್ಶಕ (Macho man) ಸಾಹಿತಿ ಎಂಬುದು ಆತನಿಗೆ (ಈಸ್ಟ್‌ಮ್ಯಾನ್) ಈಗಲಾದರೂ ಅರ್ಥವಾದರೆ ಸಾಕು’ ಎಂದು ಹೆಮಿಂಗ್ವೇ ತಮ್ಮ ಹಳೆ ವಿಷವನ್ನು ಮತ್ತೊಮ್ಮೆ ಕಾರಿಕೊಂಡರು!