ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

ಅಸಲಿಗೆ ‘ಹೆಸರು’ ಎಂದರೇನು? ಒಂದು ಅನನ್ಯ ಶಬ್ದ -ಧ್ವನಿ. ಬಾಯಿಂದ ಹೊರಡಿಸುವ ಒಂದು ಸದ್ದು sound. ಅದನ್ನು ಚಿಕ್ಕ ಮಗುವಿಗೆ ಕಿವಿಯಲ್ಲಿ ಹೇಳಿ ಕರೆಯುವುದು - ನಾಮ ಸಂಸ್ಕಾರ. ಅಲ್ಲಿಂದ ಮುಂದೆ ಆ ಮಗುವಿಗೆ ಅದನ್ನೇ ಕರೆದು ಕರೆದು ಕ್ರಮೇಣ ಆ ಸದ್ದೇ ನಾನು, ಅದು ನನ್ನ ಗಮನವನ್ನು ಸೆಳೆಯಲು, ಸಂಬೋಧಿಸಲು ಬಳಸುವ ಸದ್ದು ಎನ್ನುವುದು ಮಗುವಿಗೆ ಮನದ ಟ್ಟಾಗುತ್ತದೆ.

ಶಿಶಿರಕಾಲ

ಯಾವುದೋ ಅನ್ಯಗ್ರಹ ಜೀವಿಗಳು ಭೂಮಿಯಿಂದ ಸ್ವಲ್ಪ ಮೇಲೆ ನಿಂತು ನಮ್ಮನ್ನೆಲ್ಲ ಗ್ರಹಿಸುತ್ತಿವೆ ಎಂದುಕೊಳ್ಳಿ. ಮೊದಲನೆಯದಾಗಿ ಅವಕ್ಕೆ ನಮ್ಮ ವ್ಯವಹಾರ, ಗುಣ ಎಲ್ಲ ಅರ್ಥವಾಗಬೇಕೆಂದರೆ ಸುಲಭವಿಲ್ಲ. ಅವು ನಮಗಿಂತ ಹತ್ತು ಪಟ್ಟು ಹೆಚ್ಚಿನ ಬುದ್ಧಿವಂತಿಕೆ ಹೊಂದಿದ್ದರೂ ಪೂರ್ಣ ಅರ್ಥವಾಗಲಿಕ್ಕಿಲ್ಲ, ಗೊಂದಲವಂತೂ ಪಕ್ಕಾ.

ನಾವು ನೀವು ಜೇನಿನ ಡಬ್ಬಿ ತೆಗೆದು ಅದರೊಳಗಿನ ಜೇನಿನ ಹುಳುಗಳ ವ್ಯವಹಾರ ನೋಡಿದ ರೀತಿ ಆದೀತು. ಕಾಲ್ಪನಿಕ ಗೆರೆಯೆಳೆದು ಅದನ್ನು ದೇಶವೆನ್ನುವ ; ಜಾತಿ, ಧರ್ಮ, ಸಿದ್ಧಾಂತ, ಇಂತಹ ಪ್ರತ್ಯೇಕಿಸಿಕೊಳ್ಳುವ ವ್ಯವಹಾರ, ಯುದ್ಧ ಇವೆಲ್ಲ ಅವುಗಳ ಪಿಎಚ್‌ಡಿ ಪ್ರಬಂಧವಾಗಬಹುದು. ಅವುಗಳಿಗೆ ಕೆಲವೊಂದು ಚಿಕ್ಕಪುಟ್ಟ ವ್ಯವಹಾರ ಕೂಡ ಬಹಳ ವಿಚಿತ್ರವೆನಿಸಬಹುದು.

ಉದಾಹರಣೆಗೆ ಗಡಿಯಾರ, ಮೊಬೈಲ್ ಇತ್ಯಾದಿ. ಇಡೀ ಮನುಷ್ಯ ಕುಲ ಎದ್ದೇಳುವುದು, ಸ್ನಾನಕ್ಕೆ ಹೊರಡುವುದು, ಊಟ ಮಾಡುವುದು, ಮಲಗುವುದು ಸಂಪೂರ್ಣ ಈ ಚಿಕ್ಕ ಎರಡು ಮೂರು ಮುಳ್ಳಿರುವ, ಸುತ್ತು ಸುತ್ತುವ ಯಂತ್ರವೇ ನಿಯಂತ್ರಿಸುತ್ತದೆ!

ಇದನ್ನೂ ಓದಿ: Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

ಅಷ್ಟೇ ಅಲ್ಲ, ಯಾವಾಗ ಸಂತೋಷದಿಂದಿರುವುದು (ವಾರಾಂತ್ಯ) ಮತ್ತು ಯಾವಾಗ ಬೇಸರದಲ್ಲಿರಬೇಕು ಎಂದು ನಿರ್ಧರಿಸುವುದೂ ಇದೇ. ಇದರ ಜೊತೆಯಲ್ಲಿ ಎಲ್ಲರ ಕೈಯಲ್ಲೂ ಹೊಳೆಯುವ ಆಯತಾಕಾರದ ವಸ್ತು. ಯಾವುದೇ ಸಮಯದಲ್ಲಿ ನೂರಾರು ಕೋಟಿ ಮನುಷ್ಯರು ತಲೆಬಾಗಿ ಇದನ್ನೇ ದಿಟ್ಟಿಸುತ್ತ, ತೀಡುತ್ತಿರುತ್ತಾರೆ. ಯಾವಾಗಲೆಲ್ಲ ಈ ಪ್ರಕ್ರಿಯೆ ನಡೆಯುತ್ತದೆಯೋ ಆಗೆಲ್ಲ ಆ ಮನುಷ್ಯ ಸಿಟ್ಟು, ಖುಷಿ, ದುಃಖ, ಅಸೂಯೆ, ಯಾವುದೋ ಒಂದು ಭಾವವನ್ನು ಕೂತಲ್ಲಿಯೇ, ಅರೆಕ್ಷಣದಲ್ಲಿ ಹೊಂದಿಬಿಡಬಹುದು.

ಮನುಷ್ಯ ತನ್ನದೇ ಆವಿಷ್ಕಾರಗಳ ಸಂಪೂರ್ಣ ಅಡಿಯಾಳಾಗಿ ಬಿಟ್ಟಿದ್ದಾನೆ ಎಂದು ತೀರ್ಪು ನೀಡಲು ಏಲಿಯನ್ ಗಳಿಗೆ ಇವೆರಡೇ ವಿಷಯ ವಸ್ತು ಸಾಕು. ದಯೆ, ಕ್ರೌರ್ಯ, ಆವಿಷ್ಕಾರ, ವಿನಾಶ, ಬುದ್ಧಿವಂತಿಕೆ, ದಡ್ಡತನ ಇಂತಹ ವಿರೋಧಾಭಾಸಗಳನ್ನೆಲ್ಲ ಕಂಡು ಅವಕ್ಕೆ ಮನುಷ್ಯ ನಿಜವಾಗಿಯೂ ಮುಂದುವರಿದ ಪ್ರಬೇಧವೇ ಎಂಬುದರ ಬಗ್ಗೆಯೆ ಅನುಮಾನ ಬರುವುದು, ಅವುಗಳಲ್ಲಿಯೇ ಚರ್ಚೆ ವಾಗ್ವಾದಗಳಾಗುವುದಂತೂ ಊಹಾತೀತವಲ್ಲ.

ಅದೆಲ್ಲ ಬಿಡಿ - ಅವುಗಳಿಗೆ ನಮ್ಮ ಕೆಲವು ತೀರಾ ಸಹಜವೆನ್ನುವ ವ್ಯವಹಾರ ಕೂಡ ಅತ್ಯಂತ ವಿಚಿತ್ರವೇ ಅನ್ನಿಸಬಹುದು ಅಲ್ಲವೇ? ಅಂಥದ್ದೇ ಒಂದು ವಿಷಯ- ಮನುಷ್ಯನ ಹೆಸರಿಡುವ ಗೀಳಿನ ಬಗ್ಗೆ. ಅದೆಷ್ಟೋ ಶತಮಾನಗಳಿಂದ ಇದೊಂದು ಗಮನಾರ್ಹ ಕೆಲಸವನ್ನು ನಾವು ಮನುಷ್ಯರು ಮಾಡಿಕೊಂಡು ಬಂದಿದ್ದೇವೆ. ಕಂಡಕಂಡದ್ದಕ್ಕೆಲ್ಲ ಹೆಸರಿಡುವ ಕೆಲಸ. ಏಲಿಯನ್ನರಂತೆ ಸ್ವಲ್ಪ ಹೊತ್ತು ಮನುಷ್ಯ ಪರಿಧಿಯಾಚೆ ನಿಂತು ಈ ನಮ್ಮ ವ್ಯವಹಾರವನ್ನು ಇವತ್ತು ಸ್ವಲ್ಪ ಗಮನಿಸೋಣ.

Screenshot_9 ಋ

ಚರ- ಅಚರ ಯಾವುದೇ ಇರಲಿ - ಮೊದಲು ಅದಕ್ಕೊಂದು ಹೆಸರಿಟ್ಟೇ ನಮ್ಮ ವ್ಯವಹಾರ ಆರಂಭ. ಯಾವುದನ್ನೇ ನಮ್ಮ ಮನುಷ್ಯ ಸಮಾಜದ ವರ್ತುಲದೊಳಕ್ಕೆ ತರಬೇಕೆಂದರೆ ಅದಕ್ಕೆ ಆಗಬೇಕಾದ ಮೊದಲ ಕೆಲಸ ನಾಮಕರಣ. ಅಪ್ಪ ಅಮ್ಮ ಮಗುವಿಗೆ ಇಡುವ ಹೆಸರು, ಪ್ರಿಯತಮೆಗೆ ಪ್ರಿಯತಮ ಇಡುವ ಮುದ್ದು ಹೆಸರು, ಅಜ್ಜಿ (ತನ್ನ ಗಂಡನ ಹೆಸರಿಟ್ಟುಕೊಂಡ ಮೊಮ್ಮಗನಿಗೆ) ಕರೆಯುವ ಬದಲಿ ಹೆಸರು ಹೀಗೆ ಬಹುತೇಕರಿಗೆ ಒಂದಕ್ಕಿಂತ ಜಾಸ್ತಿ ಹೆಸರು ಬಳಕೆಯಲ್ಲಿರುತ್ತದೆ.

ಅಸಲಿಗೆ ‘ಹೆಸರು’ ಎಂದರೇನು? ಒಂದು ಅನನ್ಯ ಶಬ್ದ -ಧ್ವನಿ. ಬಾಯಿಂದ ಹೊರಡಿಸುವ ಒಂದು ಸದ್ದು sound. ಅದನ್ನು ಚಿಕ್ಕ ಮಗುವಿಗೆ ಕಿವಿಯಲ್ಲಿ ಹೇಳಿ ಕರೆಯುವುದು - ನಾಮ ಸಂಸ್ಕಾರ. ಅಲ್ಲಿಂದ ಮುಂದೆ ಆ ಮಗುವಿಗೆ ಅದನ್ನೇ ಕರೆದು ಕರೆದು ಕ್ರಮೇಣ ಆ ಸದ್ದೇ ನಾನು, ಅದು ನನ್ನ ಗಮನವನ್ನು ಸೆಳೆಯಲು, ಸಂಬೋಧಿಸಲು ಬಳಸುವ ಸದ್ದು ಎನ್ನು ವುದು ಮಗುವಿಗೆ ಮನದಟ್ಟಾಗುತ್ತದೆ.

ಆಮೇಲೆ ಆ ಹೆಸರಿಟ್ಟು ಕರೆದಾಗಲೆಲ್ಲ ಮಗು ತಿರುಗಿ ನೋಡಲು ಆರಂಭಿಸುತ್ತದೆ. ಮಗು ಮೊದಲ ಬಾರಿ ಹೆಸರಿಗೆ ಸ್ಪಂದಿಸಿದಾಗ ಅಪ್ಪ ಅಮ್ಮನಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಮಗು ಈ ಗಂಟಲಿನ ಸದ್ದನ್ನು ಗುರುತಿಸುತ್ತಿದೆ ಎಂಬುದು ಸಣ್ಣ ವಿಷಯವಲ್ಲ!

ಆದರೆ ಆಮೇಲೆ, ಬೆಳೆದಂತೆಲ್ಲ ಆ ಒಂದು ಗಂಟಲಿನ ಸದ್ದಿಗೆ ನಾವು ಕೊಡುವ ಮಹತ್ವ ವಿದೆಯಲ್ಲ! ಪರಮಾತ್ಮಾ. ನಾವು ನಾಯಿ, ಆಕಳು - ಸಾಕು ಪ್ರಾಣಿಗಳಿಗೆ ಕೂಡ ಹೆಸರಿಟ್ಟು ಕೊಂಡಿರುತ್ತೇವಲ್ಲ. ಕೊಡಗು, ಮಡಿಕೇರಿ, ವಿರಾಜಪೇಟೆ ಕಡೆ ಬಹುತೇಕ ನಾಯಿಗೆ ಟಿಪ್ಪು ಎಂದೇ ಹೆಸರಿಡುವುದು. ಟಿಪ್ಪು ಸುಲ್ತಾನ್ ಆ ನೆಲದಲ್ಲಿ ನಡೆಸಿದ ನರಮೇಧ, ಅದರ ಪರಿಣಾಮ ಇತ್ಯಾದಿ ಇಷ್ಟು ತಲೆಮಾರು ಕಳೆದರೂ ಹಸಿಯಾಗಿಯೇ ಅಲ್ಲಿನ ಜನಮಾನಸ ದಲ್ಲಿದೆ.

ಯೋಚಿಸಿದರೆ ಮೈನಡುಗುವಷ್ಟು ವಿಕೃತಿ ಟಿಪ್ಪುವಿನದು. ಆದರೆ ಅದೆಲ್ಲದರ ನಡುವೆ ಅಲ್ಲಿನ ಬಹುತೇಕ ನಾಯಿಗೆ ಟಿಪ್ಪು’ ಎಂಬ ಹೆಸರು. ಕೊಡಗಿನಲ್ಲಷ್ಟೇ ಅಲ್ಲ ಕರ್ನಾಟಕದ ಬಹಳಷ್ಟು ಕಡೆ, ಕರಾವಳಿ ಭಾಗದ ದಕ್ಷಿಣ ಕನ್ನಡ , ಉಡುಪಿ, ಉತ್ತರಕನ್ನಡ ಅಲ್ಲ ಪ್ರತೀ ನಾಲ್ಕನೇ ನಾಯಿಯ ಹೆಸರು ‘ಟಿಪ್ಪು’. ನಮ್ಮ ಮನೆಯಲ್ಲೂ ‘ಟಿಪ್ಪು’ ಇತ್ತು.

ನಾಯಿಯ ಹೆಸರಿಗೂ ಇತಿಹಾಸ. ನೀವು ನಾಯಿಯನ್ನು ಟಿಪ್ಪು ಅನ್ನಿ, ಟಾಮಿ ಅನ್ನಿ. ನಾಯಿಗೆ ಅದು ತನ್ನ ಹೆಸರು ಎಂಬ ಅರಿವಾಗಿದೆಯಲ್ಲ. ಆಕಳಿಗೆ ಬೆಳ್ಳಿ, ಶುಕ್ರಿ, ಕುಳ್ಳಿ - ಒಂದೊಂದು ಸಂಸ್ಕೃತಿಯಲ್ಲಿ ಒಂದೊಂದು ರೀತಿ ಹೆಸರಿಡುತ್ತಾರೆ. ಅವೆಲ್ಲವೂ ಮನುಷ್ಯ ರಂತೆ ತಮ್ಮ ಹೆಸರನ್ನು ಗುರುತಿಸಿಕೊಂಡಿವೆಯಲ್ಲ.

ಅವೇನಾದರೂ ಬೇಲಿ ಹಾರುವಾಗ ‘ಕಮೋನ್’ ಎಂದು ನಮ್ಮಂತೆ ಹೆಸರಿಟ್ಟು ಧೈರ್ಯ ತುಂಬಿಕೊಳ್ಳುತ್ತವೆಯೇ? ಗೊತ್ತಿಲ್ಲ. ಆಕಳಿಗಂತೂ ಅದೇ ಶಬ್ದ ತನ್ನ ಹೆಸರೆಂಬುದು ಗೊತ್ತು. ಅಂತೆಯೇ ಆಕಳು ಕೂಡ ಅದರದೇ ಒಂದು ಅನನ್ಯ ಶಬ್ದದಿಂದ ತನ್ನ ವಾರಸು ದಾರರನ್ನು ಕರೆಯುತ್ತದೆ. ಅದು ಆ ಸಾಕಿದವರಿಗೆ ಸ್ಪಷ್ಟ ಗೊತ್ತಿರುತ್ತದೆ. ಅದೇ ಅತ್ತ ಅಮೆರಿಕಾದ ಡೈರಿ ಫಾರ್ಮ್ ಗಳಲ್ಲಿ - ಹೆಸರಿನ ಬದಲಿಗೆ ಒಂದು ಸಂಖ್ಯೆ - ರೋಲ್ ನಂಬರ್ ಒಂದು ಪ್ಲಾಸ್ಟಿಕ್ ಹಳೆಯಮೇಲೆ ಅಚ್ಚು ಮಾಡಿ ಅದನ್ನು ಕಿವಿಗೆ ಸುರಿಯ ಲಾಗುತ್ತದೆ. ಅಲ್ಲಿ ಆ ಆಕಳಿಗೆ ಹೆಸರಿಲ್ಲ. ಮನುಷ್ಯ ಸಂಬಂಧದ ಪರಿಧಿಯಾಚೆ ಹೆಸರು ಮರೆಯಾಗುತ್ತದೆ.

ನದಿಗೆ, ಕೆರೆಗೆ, ಹಳ್ಳಕ್ಕೆ, ಕಾಡಿಗೆ, ಗುಡ್ಡಕ್ಕೆ ಎಲ್ಲದಕ್ಕೂ ಹೆಸರಿಡುತ್ತೇವೆ. ಹರಿಯುವ, ಶೇಖರಣೆ ಯಾದ ನೀರು, ಭೂ ಮೇಲ್ಮೈನ ಉಬ್ಬು ತಗ್ಗುಗಳು, ಸಮುದ್ರ, ಸಾಗರಗಳು. ಅವಕ್ಕೆಲ್ಲ ಒಂದು ಪ್ರಾಶಸ್ತ್ಯವಿದೆ. ಉದಾಹರಣೆಗೆ ಗಂಗಾ’, ಕಾವೇರಿ’ ನದಿಯ ಹೆಸರೇ ಮನುಷ್ಯನ ಹೆಸರಾಗಿಸಿಕೊಳ್ಳುತ್ತೇವೆ.

ಅದೆಲ್ಲ ಬಿಡಿ - ಒಂದು ದಿವಸದ ಹಿಂದೆ ಇಲ್ಲದ ಸೈಕ್ಲೋನ್, ಬಿರುಗಾಳಿ, ಸುಂಟರಗಳಿಗೆಲ್ಲ ಅದು ಹುಟ್ಟುವುದಕ್ಕಿಂತ ಮೊದಲೇ ಹೆಸರಿಡಲಾಗುತ್ತದೆ. ಅಮೆರಿಕಾದಲ್ಲಿ ಮಗು ಗಂಡೋ ಹೆಣ್ಣೋ ಮೊದಲೇ ತಿಳಿಯಲು ಅನುಮತಿಯಿದೆ. ಹಾಗಾಗಿ ಇಲ್ಲಿ ಹುಟ್ಟುವುದಕ್ಕಿಂತ ಮೊದಲೇ ಹೆಸರು ನಿರ್ಧಾರವಾಗಿರುತ್ತದೆ. ಚಂಡಮಾರುತಗಳಂತೆ.

ಅಮೆರಿಕಾದಲ್ಲಿ ಚಂಡಮಾರುತಗಳು ಜಾಸ್ತಿ - ವರ್ಷಕ್ಕೆ ಹತ್ತಿಪ್ಪತ್ತು. ಅದೆಲ್ಲದಕ್ಕೂ ಒಂದೊಂದು ಹೆಸರಿಡಲಾಗುತ್ತದೆ. ಅದರಲ್ಲಿಯೇ ಮಹಾ ಹೊಡೆತ ಕೊಟ್ಟ ಹರಿಕೇನ್ ಸ್ಯಾಂಡಿ ಇತ್ಯಾದಿ ಇತಿಹಾಸ ಸೇರಿದ ಕುಖ್ಯಾತ ಹೆಸರುಗಳು. ಈಗೀಗ ನಮ್ಮಲ್ಲಿ, ಕರಾವಳಿಯ ಮಾನ್ಸೂನ್ ಮಾರುತಗಳಿಗೂ ಹೆಸರಿಡಲಾಗುತ್ತಿದೆ.

ದೇಶ, ರಾಜ್ಯ, ಊರು, ಕೇರಿ, ಮನೆ, ರಸ್ತೆಗಳು, ಕಟ್ಟಡಗಳು, ಕಂಪನಿ, ಉತ್ಪನ್ನಗಳು, ಸೇತುವೆ, ಸ್ಮಾರಕಗಳು, ಮೈದಾನ, ಪುಸ್ತಕ, ಅಂಕಣ, ಹಾಡು, ಚಲನಚಿತ್ರ, ನಮ್ಮ ಭಾವನೆಗಳಿಗೆ, ಅನುಭವಕ್ಕೆ, ಹೆದರಿಕೆಗೆ, ಫೋಬಿಯಾ, ಮಾನಸಿಕ ಸ್ಥಿತಿ, ಧರ್ಮ, ಅವ್ಯಕ್ತ ಶಕ್ತಿ - ದೇವರು, ರಾಜಕೀಯ ಸಿದ್ಧಾಂತ, ಪಂಗಡ, ಕ್ರಾಂತಿ, ದಂಗೆ, ಯುದ್ಧ, ಒಪ್ಪಂದಗಳು, ರೋಗ, ಸಾಂಕ್ರಾ ಮಿಕ, ಆವಿಷ್ಕಾರಗಳು.

ಥೋ, ಎಲ್ಲೂ ಹೆಸರೇ ಹೆಸರು, ಎಲ್ಲದಕ್ಕೂ ಒಂದೊಂದು ಹೆಸರು. ಭಾಷೆ - ಕರ್ತೃ, ಕರ್ಮ, ಕ್ರಿಯಾಪದಗಳೂ ಮೂಲದಲ್ಲಿ ಹೆಸರುಗಳೇ. ಅದೆಲ್ಲ ಬಿಡಿ - ಭೂಮಿಯಿಂದಾಚೆ ಇರುವ ಚಂದ್ರ, ಸೂರ್ಯ, ನಕ್ಷತ್ರಗಳಿಗೂ ಹೆಸರಿಟ್ಟಿದ್ದೇವೆ. ನವಗ್ರಹಗಳಿಗೆ, ಅಶ್ವಿನಿ, ಭರಣಿ ಎಂದು ಸುಮಾರು ೨೭ ಮಹತ್ವದ ನಕ್ಷತ್ರಗಳಿಗೆ ವೇದಕಾಲಕ್ಕಿಂತ ಮುಂಚೆಯೇ ಹೆಸರಿಡಲಾಗಿತ್ತು.

ಸೌರಮಂಡಲದ 891 ಸಹಜ ಉಪಗ್ರಹಗಳು, ೨೦ ಸಾವಿರ ಕ್ಷುದ್ರಗ್ರಹಗಳಿಗೆ, ೩ ಸಾವಿರ ಧೂಮಕೇತುಗಳಿಗೆ, ಸುಮಾರು ೧೦ ಸಾವಿರ ನಕ್ಷತ್ರಗಳಿಗೆ ಸಂಖ್ಯೆ ಅಲ್ಲ- ಹೆಸರೇ ಇದೆ. ಇನ್ನು ನಕ್ಷತ್ರ ಪುಂಜ - ರಾಶಿಗೂ ಒಂದೊಂದು ಹೆಸರು. ಹೆಸರಷ್ಟೇ ಅಲ್ಲ - ಹೆಸರಿನ ಜೊತೆ ನಂಬಿಕೆ ಮತ್ತು ಕಥೆಗಳು.

ಭಾರತದಲ್ಲಿ ಮನುಷ್ಯರಿಗಿಟ್ಟುಕೊಳ್ಳುವ ಹೆಸರಿನ ವೈವಿಧ್ಯ ನಮಗೆಲ್ಲ ತಿಳಿದದ್ದೇ. ನಾಮ ಕರಣವೆಂಬುದು ಹದಿನಾರು ಸಂಸ್ಕಾರಗಳಲ್ಲಿ ಒಂದು. ನಮ್ಮಲ್ಲಿ ದೇವರ ಹೆಸರಷ್ಟೇ ಅಲ್ಲ, ಪ್ರಕೃತಿ, ವಾತಾವರಣದ್ದೆಲ್ಲ ಹೆಸರಿಟ್ಟುಕೊಳ್ಳುತ್ತೇವೆ. ಶಿಶಿರನಿಗೂ ಶಿಶಿರಕಾಲಕ್ಕೂ ಸಂಬಂಧ ವಿರಬೇಕೆಂದಿಲ್ಲ. ಹೇಮಂತ, ಶರತ್ ಇವೆಲ್ಲ ವಾರ್ಷಿಕ ಮರುಕಳಿಸುವ ವಾತಾವರಣ ಸ್ಥಿತಿ.

ಇನ್ನು ಸತ್ಯ, ದಯಾ, ವೀರ, ಸಹನಾ ಇವೆಲ್ಲ ಸದ್ಗುಣಗಳ ಹೆಸರುಗಳು. ಮನುಷ್ಯ ನಿರ್ದಿಷ್ಟ ರೀತಿಯಲ್ಲಿ ಸಮಾಜಕ್ಕೆ ಒಪ್ಪಿಗೆಯಾಗುವಂತೆ ನಡೆಯುವ ರೀತಿಯೇ ಹೆಸರಾದದ್ದು. ತಮಿಳಿನಲ್ಲಿ ಸೆಲ್ವನ್’ ಎಂದರೆ ಮಗ, ಸೆಲ್ವಿ’ ಎಂದರೆ ಮಗಳು. ಅರುಲ್ ಸೆಲ್ವನ್, ಅರ್ಜುನ ಸೆಲ್ವನ್, ಜ್ಞಾ ಸೆಲ್ವಿ, ತೇನಿಸೆಲ್ವಿ ಇತ್ಯಾದಿ. ಮಗ - ಮಗಳು ಎಂದು ಸೇರಿಸುವುದು ದಕ್ಷಿಣದದರೆ ಅತ್ತ ಪಂಜಾಬಿನಲ್ಲಿ ಗುರುಪ್ರೀತ್ ಸಿಂಗ್ ಎಂದರೆ ಗಂಡು, ಗುರುಪ್ರೀತ್ ಕೌರ್ ಎಂದರೆ ಹೆಣ್ಣು. ಅದೇ ಹೆಸರಿನ ಮುಂದೆ ಲಿಂಗದ ಆರೋಪ. ಪಶ್ಚಿಮ ಬಂಗಾಳ - ಕೋಲ್ಕತಾ ಕಡೆ ಏನೇನೋ ಮುದ್ದು ಹೆಸರಿಟ್ಟುಕೊಂಡಿರುತ್ತಾರೆ.

ಬುಬಾಯ, ತುಂಪಾ, ಬುಂಬಾ ಇತ್ಯಾದಿ ಬಿದ್ದ ಹೆಸರುಗಳೇ ಅಸಲಿ ಹೆಸರಿಗಿಂತ ಜಾಸ್ತಿ ನಿತ್ಯವ್ಯವಹಾರದಲ್ಲಿ ಬಳಕೆಯಾಗುತ್ತಿರುತ್ತದೆ. ನೇಟಿವ್ ಅಮೆರಿಕನ್ (ರೆಡ್ ಇಂಡಿಯನ್ಸ) ಜನರಲ್ಲಿ ಒಂದು ವಿಚಿತ್ರ ಪದ್ಧತಿಯಿದೆ. ಅಲ್ಲಿ ಮಗು ಹುಟ್ಟಿದಾಗ ಒಂದು ಹೆಸರಿಡಲಾಗು ತ್ತದೆ - ಉದಾಹರಣೆಗೆ Kangi Wichakca ಇದರರ್ಥ ‘ಮುದ್ದಾದ ಮರಿ ಕಾಗೆ’. ಆ ಮಗು ದೊಡ್ಡವನಾಗಿ ಏನೋ ಒಂದು ಸಾಹಸ ಮಾಡಿದನೆಂದುಕೊಳ್ಳಿ - ಉದಾಹರಣೆಗೆ ಯಾರನ್ನೋ ಗಂಡಾಂತರದಿಂದ ರಕ್ಷಿಸಿದ ಎಂದಾದಲ್ಲಿ ಆ ರೆಡ್ ಇಂಡಿಯನ್ ಕುಲದ ಮುಖ್ಯಸ್ಥ ಅವನಿಗೆ ಮರುನಾಮಕರಣ ಮಾಡುತ್ತಾನೆ.

ಅಲ್ಲಿಂದ ಮುಂದೆ ಅವನ ಹೆಸರು Thasina Luta - ಮಹಾನ್ ರಕ್ಷಕ. ಎಲ್ಲರೂ ಅವನನ್ನು ಅಲ್ಲಿಂದ ಹಾಗೆಯೇ ಕರೆಯುವುದು. ಹಾಗೆ ಮರುನಾಮಕರಣವಾದ ಮೇಲೆ ಹಳೆಯ ಹೆಸರನ್ನು ಕರೆಯುವುದು ಅಶುಭವೆಂಬ ನಂಬಿಕೆ. ಹಾಗಾಗಿ ಹಳೆಯ ಹೆಸರು ಸಂಪೂರ್ಣ ಬಿಟ್ಟಂತೆ.

ವ್ಯಕ್ತಿ ಮಧ್ಯವಯಸ್ಸಿನಲ್ಲಿ ಹೊಸ ಹೆಸರನ್ನು ರೂಢಿಸಿಕೊಳ್ಳಬೇಕು. ನಮ್ಮ ಕರಾವಳಿ ಕೊಂಕಣಿಗರಲ್ಲಿ ಹೆಣ್ಣು ಮದುವೆಯಾಗುವಾಗ ಗಂಡನಮನೆಯಲ್ಲಿ ಹೊಸ ಹೆಸರು ಪಡೆವಂತೆ. ಇಲ್ಲಿ ಹೆಸರು ಸ್ಥಿರವಲ್ಲ - ಒಂದು ಘಟನೆಯ ನಂತರ ಪಡೆದುಕೊಂಡದ್ದು. ಚೀನಿಯರ ಹೆಸರುಗಳನ್ನು ಕೇಳಿದಲ್ಲಿ ಅವರ ಹೆಸರಲ್ಲ ಚಿತ್ರವಿಚಿತ್ರ ಸದ್ದುಗಳಂತೆ ನಮಗನಿಸುತ್ತದೆ. ಆದರೆ ಅಲ್ಲಿ ಕೂಡ ನಮ್ಮಂತೆ ನಾಮ ವಿಶೇಷತೆಗಳಿವೆ, ನೂರಾರು ರೂಢಿ ಪದ್ಧತಿಗಳಿವೆ. ಅದರಲ್ಲಿ ಒಂದು ವಿಶೇಷ ಪದ್ಧತಿಯ ಬಗ್ಗೆ ನನಗೆ ಹೇಳಿದ್ದು ಚೀನಾದ ಸಹವರ್ತಿ - ಸ್ನೇಹಿತ. ಜೆಜಿಂಗ, ಗೌಂಗ್ಡಾಂಗ್ ಪ್ರಾಂತ್ಯದಲ್ಲಿ ಈ ಪದ್ಧತಿ ಹೆಚ್ಚಂತೆ.

ಕುಟುಂಬದವರೆಲ್ಲ ಸೇರಿ ಒಂದು ತಲೆಮಾರಿಗೆ ಒಂದು ಶಬ್ದವನ್ನು ಹೆಸರಿನ ಜೊತೆ ಸೇರಿಸಿ ಇಡುವಂತೆ ನಿರ್ಧರಿಸುವುದು. ಉದಾಹರಣೆಗೆ ಒಂದು ಕುಟುಂಬ ಒಂದು ತಲೆಮಾರಿನ ಮಕ್ಕಳಿಗೆ ‘ಮಿಂಗ್’ ಎಂಬ ಹೆಸರಿಡಲು ನಿರ್ಧರಿಸಿದಲ್ಲಿ ಹುಟ್ಟಿದವರ ಹೆಸರು ಮಿಂಗ್ ವೀ, ಮಿಂಗ್ ತಾವೋ, ಮಿಂಗ್ ಹುವಾ, ಮಿಂಗ್ ಚೀ ಹೀಗೆ. ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳ ಹೆಸರಿನಲ್ಲಿ ‘ಮಿಂಗ್’. ಹೆಸರು ಮನುಷ್ಯನನ್ನು ಜೋಡಿಸುತ್ತದೆ, ಪ್ರತ್ಯೇಕಿಸುತ್ತದೆ.

ಇಲ್ಲಿ ಮಿಂಗ್ ಎಂಬ ಶಬ್ದ ಅವರೆಲ್ಲಿ ಸಹೋದರ ಸಹೋದರಿಯ ಭಾವ ಹೆಸರಿನಿಂದಲೇ ಜಾಗೃತವಾಗಿಡುತ್ತದೆ. ತಂತ್ರಜ್ಞಾನದಿಂದಾಗಿ ಇತ್ತೀಚೆಗೆ ಇನ್ನೊಂದು ಹೆಸರು ಸೇರಿ ಕೊಂಡಿದೆ. ಅದು ಆರಂಭವಾಗುವುದು ಇಂದ. ನನ್ನ ಹೆಸರು ಟ್ವಿಟ್ಟರ್‌ನಲ್ಲಿ @iHegde. ಸಾಮಾಜಿಕ ಜಾಲತಾಣಗಳಲ್ಲಿ ನೀವೇ ನಿಮಗೆ ಏನು ಹೆಸರನ್ನು ಬೇಕಾದರೂ ಇಟ್ಟುಕೊಳ್ಳ ಬಹುದು.

ಅಲ್ಲಿ ರಾಮ ರಾವ್ @CoffeeZombie_99 ಆಗುತ್ತಾನೆ. ಅನಂತ ಶೆಟ್ಟಿ @infinity_Slayer ಆಗುತ್ತಾನೆ. ಇತ್ಯಾದಿ. ಈ ಹೆಸರಿಗೆ ಯಾವುದೇ ಅರ್ಥ ವಿರಬೇಕಾಗಿಲ್ಲ, ಆದರೆ ಯಾರೋ ಇಂಟರ್ನೆಟ್ಟಿನಲ್ಲಿ ಎಂದು ನಮ್ಮ ಹೆಸರು ಹಾಕಿಬಿಟ್ಟರೆ ಜಗತ್ತಿನ ಯಾವ ಮೂಲೆಯ ಇರಲಿ, ಅವನಿಗೆ ಕ್ಷಣಮಾತ್ರದಲ್ಲಿ ಸಂದೇಶ ತಲುಪಿಬಿಡುತ್ತದೆ. ಇಲ್ಲಿ ಹೆಸರಿನ ವ್ಯಾಪ್ತಿ ಅಪರಿಮಿತ.

ಹೆಸರು ಎಂದರೆ ಗುರುತು. ಯಾವುದೇ ಹೆಸರಿಗೆ ಕೆಲವು ಕನಿಷ್ಠ ಮಾಪಕಗಳಿವೆ. ಮೊದಲನೆ ಯದಾಗಿ ಅದಕ್ಕೆ ಏನೋ ಒಂದು ಒಳ್ಳೆಯ ಅರ್ಥವಿರಬೇಕು. ಎರಡನೆಯದು ಕರೆಯಲು ಸುಲಭ ವಾಗಬೇಕು. ಆದರೆ ಇತ್ತೀಚೆ ಅದರಲ್ಲೂ ಹೊಸ ತಲೆಮಾರಿನ ಭಾರತದಲ್ಲಿ ಇಡುವ ಹೆಸರುಗಳು ಚಿತ್ರವಿಚಿತ್ರ. ಹೆಚ್ಚಿನವು ಇಂಟರ್ನೆಟ್ ನಿಂದ ಇಳಿಸಿದವು.

ಇಂದು ಇಂಟರ್ನೆಟ್ಟಿನಲ್ಲಿ ಸಾಕಷ್ಟು ಸಂಸ್ಕೃತ ವೈವಿಧ್ಯದ ಹೆಸರುಗಳು ಸಿಗುತ್ತವೆ. ಆದರೆ ಕೆಲವೊಂದು ಶಬ್ದಕ್ಕೆ ಅಸಲಿಗೆ ಯಾವುದೇ ಅರ್ಥವೇ ಇರುವುದಿಲ್ಲ. ರಿಯಾನ್, ತಿವಾನ್, ಆರಿವ್, ಮೈಕಾ, ತಿವಿಕಾ, ನೈರಾ, ಕೈರಾ, ಅರಿನ್, ರೆಯಾ, ನಿವಾನ್ ಇತ್ಯಾದಿ ಇತ್ಯಾದಿ. ಭಾರತೀಯ ಜೆನ್ ತಂದೆತಾಯಂದಿರ ಅನನ್ಯ ಹೆಸರಿನ ಹುಡುಕಾಟದಲ್ಲಿ ಮಕ್ಕಳು ಅರ್ಥವೂ ಇಲ್ಲದ, ಕರೆಯಲಿಕ್ಕೂ ಆಗದ ಹೆಸರನ್ನು ಪಡೆಯುತ್ತಿವೆ.

ಅವುಗಳ ಅರ್ಥವನ್ನು ಇಂದು ಕೇಳಿದರೆ ಅದಕ್ಕೆ ಇಂಟರ್ನೆಟ್ ನಲ್ಲಿ ಎಲ್ಲೋ ಏನೋ ಯಾರೋ ಬರೆದದ್ದೇ ಬೇಲಿ ಗುಟ್ಟದ ಸಾಕ್ಷಿ . ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಅಂತಹ ಶಬ್ದೋತ್ಪತ್ತಿಯೇ ಸಾಧ್ಯವಿರುವುದಿಲ್ಲ. ನನಗೆ ಯಾವುದೇ ಹೆಸರು ಕೇಳಿದಾಗಲೂ ಅದರ ಅರ್ಥ ಕೇಳುವ ಕೆಟ್ಟ ಚಾಳಿಯಿತ್ತು. ಅದನ್ನು ಈಗೀಗ ಸಂಪೂರ್ಣ ನಿಲ್ಲಿಸಿದ್ದೇನೆ. ಒಮ್ಮೆ ಹೀಗಾಯಿತು, ಸ್ನೇಹಿತನ ಮಗನಿಗೆ ಇಂಥದ್ದೇ ಚಿತ್ರವಿಚಿತ್ರ ಹೆಸರಿತ್ತು.

ನನಗೆ ಅರ್ಥ ತಿಳಿಯದಾಗಿ ಹುಡುಗನಲ್ಲಿ ಕೇಳಿದೆ. ಅವನಿಗೂ ಆ ಪ್ರಶ್ನೆ ಹಿಂದೆ ಯಾವತ್ತೂ ಎದುರಾಗಿರಲಿಲ್ಲ, ಕೇಳಿಕೊಂಡಿರಲಿಲ್ಲವೇನಿಸುತ್ತದೆ. ಗಾಬರಿ ಬಿದ್ದು ತಂದೆಯತ್ತ ನೋಡಿದ. ನಂತರ ತಂದೆಯೂ ಹೀಗೇನೋ ಒಂದು ಅರ್ಥವಿದೆ ಇಂದು ಇಂಟರ್‌ನೆಟ್‌ನಲ್ಲಿ ಹುಡುಕಿ ಹೇಳಿದ. ಆದರೆ ಅಲ್ಲಿ ಜೊತೆಯಲ್ಲಿ ಸಂಸ್ಕೃತ ಮತ್ತು ಕನ್ನಡ ಎರಡರಲ್ಲೂ ಪ್ರವೀಣ ರಾದವರೊಬ್ಬರಿದ್ದರು. ಅವರು ಚರ್ಚೆಗಿಳಿದುಬಿಟ್ಟರು.

ಕೊನೆಯಲ್ಲಿ, ಚರ್ಚೆ ಮುಗಿಯುವಾಗ - ಪಾಪ ಆ ಹುಡುಗನ ಹೆಸರಿಗೆ ಯಾವುದೇ ಅರ್ಥ ವಿಲ್ಲ ಎಂದು ಜಾಹೀರವಾಯ್ತು. ಆತ ಆ ಹೆಸರನ್ನು ಜೀವಮಾನವಿಡೀ ಇಟ್ಟುಕೊಳ್ಳ ಬೇಕಲ್ಲ! ಕೊನೆಗೆ ಹೆಸರೆಂದರೆ ಗಂಟಲಿಂದ ಬರುವ ಒಂದು ವಿಶೇಷ, ಸಂಬೋಧನೆಗೆ ಬಳಸುವ ಸದ್ದು ಎಂದು ಹೇಳಿ ಸಮಾಧಾನ ಮಾಡಿದ್ದಾಯ್ತು!

ಅಷ್ಟಕ್ಕೂ ಹೆಸರಿನನಿದೆ ಮಣ್ಣು? ಹೆಸರು ಕೇವಲ ಒಂದು ಹಣೆಪಟ್ಟಿ, ಗುರುತು ಮಾತ್ರವಲ್ಲ. ಅದು ವ್ಯಕ್ತಿ ಮತ್ತು ಜಗತ್ತಿನ ನಡುವೆ ಇರುವ ಜೀವಂತ ಒಡಂಬಡಿಕೆ. ಹೆಸರು ನಾವೆಲ್ಲಿಂದ ಬಂದಿದ್ದೇವೆ, ನಮ್ಮ ಹಿನ್ನೆಲೆ, ಸಾಧ್ಯತೆ, ನಡವಳಿಕೆ, ಮೌಲ್ಯ ಹೀಗೆ ಏನೇನನ್ನೋ ನಮಗರಿ ವಿಲ್ಲದಂತೆ ಹೇಳಿ ಬಿಡುತ್ತದೆ.

ಅಂತೆಯೇ ಒಂದನ್ನು ಮುಖ್ಯ, ಇದರ ಅಸ್ತಿತ್ವ ಮಹತ್ವದ್ದು ಎಂದೆನಿಸಿದಾಕ್ಷಣ ಹೆಸರಿಡು ವುದು ಗೀಳಿನಾಚೆಯ ನಮ್ಮ ಅಗತ್ಯತೆ. ಗಿಡ ಮರಕ್ಕೆ, ವಸ್ತುಗಳಿಗೆ, ಗ್ರಹ-ನಕ್ಷತ್ರಗಳಿಗೆ, ಬ್ರಹ್ಮಾಂಡಕ್ಕೆ ಹೆಸರಿನ ಅವಶ್ಯಕತೆಯಿದೆಯೇ? ಹೆಸರು ಮನುಷ್ಯನ ಅವಶ್ಯಕತೆ ಮಾತ್ರ. ಹಾಗಾಗಿಯೇ ಹೆಸರು ಅವಿನಾಶಿಯಲ್ಲ. ಅದೊಂದು ವಿಚಾರ ನಿರಂತರ ನೆನಪಿದ್ದರೆ ಸಾಕು. ಬದುಕು ಸುಲಭ !

ಶಿಶಿರ್‌ ಹೆಗಡೆ

View all posts by this author